ಸರ್ವಭಕ್ಷಣ ರಾಜಕಾರಣ: ಪರಿಸರರಕ್ಷಣೆಗೆ ಯಾರು ಕಾರಣ?

ಈಗ ಆಗಬೇಕಾದ ಮುಖ್ಯ ಕೆಲಸ ಏನೆಂದರೆ, ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಬರುವ ಅಧಿಕಾರಿಗಳಿಗೆ ತರಬೇತಿ ಕೊಡುವಾಗ ಇಂದಿನ ಪರಿಸರ ಸ್ಥಿತಿಗತಿಗಳ ಬಗ್ಗೆ, ಸುಸ್ಥಿರ ಅಭಿವೃದ್ಧಿಯ ಬಗ್ಗೆ ಹಾಗೂ ಬರಲಿರುವ ಬಿಸಿಪ್ರಳಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಗ್ರ ಚಿತ್ರಣ ಕೊಡುವಂಥ ಪಠ್ಯಕ್ರಮಗಳನ್ನು, ಪ್ರಾತ್ಯಕ್ಷಿಕೆಗಳನ್ನು ಅಳವಡಿಸಬೇಕು.

‘ವಿಶ್ವ ಅರಣ್ಯ ದಿನ’ದಂದು ಈ ಲೇಖನವನ್ನು ಬರೆಯಲು ಕೂತಿದ್ದೇ ತಡ, ಇಂದಿನ ದಿನಪತ್ರಿಕೆಗಳಲ್ಲಿ ಈ ಹೆಡ್‌ಲೈನ್ ಬಂತು:

“ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ವನ್ಯಜೀವಿ ಮಂಡಳಿ ಒಪ್ಪಿಗೆ”.

ಮಂಡಳಿಯ ಈ ನಿರ್ಧಾರಕ್ಕೆ ಒತ್ತಾಯ ಹೇರಿದ್ದು ಯಾರ್ಯಾರೆಂದು ನೋಡಿದರೆ, ಯಾರೂ ವಿಷಯತಜ್ಞರಲ್ಲ. ಎಲ್ಲರೂ ರಾಜಕಾರಣಿಗಳೇ. ಮುಖ್ಯಮಂತ್ರಿ ಯಡ್ಯೂರಪ್ಪ, ಜಗದೀಶ್ ಶೆಟ್ಟರ್, ಶಿವರಾಮ ಹೆಬ್ಬಾರ್ ಮತ್ತು ಆರ್.ವಿ.ದೇಶಪಾಂಡೆ. ಜೊತೆಗೆ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್. ಒತ್ತಾಯ ಹೇರಲೆಂದೇ ಸಭೆಗೆ ಬಂದಿದ್ದ ಇಬ್ಬರು ರಾಜಕಾರಣಿಗಳು ಆ ಮಂಡಳಿಯ ಸದಸ್ಯರೇ ಅಲ್ಲ. ಅಲ್ಲಿಗೆ ಬಂದು, ಅರಣ್ಯ-ವನ್ಯಜೀವಿ ರಕ್ಷಣೆಯ ಮಹತ್ವದ ಕುರಿತು ವಾದಿಸಬೇಕಿದ್ದ ಅರಣ್ಯ ಸಚಿವರು ಮಟಾಮಾಯವಾಗಿದ್ದರು.

ಈ ರೈಲುಮಾರ್ಗ ಬೇಡವೆಂದು ವಾದಿಸಿದವರೆಲ್ಲ ಅರಣ್ಯದಲ್ಲಿ ಓಡಾಡಿದವರು, ಜೀವಜಗತ್ತಿನ ಮಹತ್ವವನ್ನು ಅರಿತವರು ಮತ್ತು ನೂರಿನ್ನೂರು ವರ್ಷಗಳ ನಂತರದ ಸ್ಥಿತಿಗತಿಗಳನ್ನೂ ಊಹಿಸಬಲ್ಲವರು.

ಯೋಜನೆಗೆ ಒಪ್ಪಿಗೆ ಕೊಟ್ಟ ಬಹುಮತಸ್ಥರು ಯಾರೆಂದು ನೋಡಿದರೆ, ಎಲ್ಲರೂ ಮುಂದಿನ ಚುನಾವಣೆಯವರೆಗೆ ಮಾತ್ರ ನೋಡಬಲ್ಲವರು.

ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗದಿಂದ ರೇಲ್ವೆ ಇಲಾಖೆಗಂತೂ ಲಾಭವಿಲ್ಲ. ಏಕೆಂದರೆ ಈ ರೈಲು ಮಾರ್ಗದ ಮೂಲಕ ಸರಕು ಸಾಗಣೆ ತೀರ ನಗಣ್ಯವಾಗಿದೆ; ಮುಂದೆಂದಾದರೂ ಸರಕು ಸಾಗಾಟ ಹೆಚ್ಚುತ್ತದೆಂದರೆ ಕೊಂಕಣ ರೇಲ್ವೆಗೆ ಸಂಪರ್ಕ ಕಲ್ಪಿಸಬಲ್ಲ ಲೋಂಡಾ ಮಾರ್ಗವನ್ನು ಮೇಲ್ದರ್ಜೆಗೆ ಏರಿಸುವ ಕ್ರಮ ಜಾರಿಗೆ ಬಂದಿದೆ. ಹೆಚ್ಚೆಂದರೆ 60 ಕಿಲೊಮೀಟರ್ ಸುತ್ತು ಬಳಸಿ ಬೇಲೇಕೇರಿಗೆ ಹೋಗಬೇಕಾದೀತಷ್ಟೆ. ಯೋಜಿತ ಹುಬ್ಬಳ್ಳಿ-ಅಂಕೋಲಾ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಯೂ ಅಷ್ಟಕ್ಕಷ್ಟೆ. ಆದರೆ ನಿಸರ್ಗಕ್ಕಂತೂ ಒಂದು ಶಾಶ್ವತ ಆಘಾತವಾಗುತ್ತದೆ. ಅದೆಷ್ಟೊ ಲಕ್ಷ ಮರಗಳು ಹೋಗುತ್ತವೆ. ಹತ್ತಾರು ವರ್ಷಗಳ ನಿರಂತರ ಧ್ವಂಸಕ್ರಿಯೆಯಿಂದ ಅರಣ್ಯ ಜೀವಲೋಕ ತತ್ತರಿಸುತ್ತದೆ. ದಟ್ಟ ಅರಣ್ಯ ಭಗ್ನವಾಗುತ್ತದೆ. ವನ್ಯಜೀವಿಗಳಿಗೆ ಸಂಚಾರಕ್ಕೆ ಶಾಶ್ವತ ಅಡೆತಡೆ ಉಂಟಾಗುತ್ತದೆ.

ರಾಜಕಾರಣಿಗಳಿಗೆ ಈ ಯಾವುದೂ ಮಹತ್ವದ್ದೆಂದು ಅನಿಸಲಿಲ್ಲ.

ಲಾಭ ಯಾರಿಗೆ ಅಂತ ನೋಡಿದರೆ, ಅದು ರೈಲುಮಾರ್ಗದ ಗುತ್ತಿಗೆದಾರರಿಗೆ, ಎರಡು ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಿಸುವವರಿಗೆ, ಡೈನಮೈಟ್ ಸಿಡಿಸಿ, ಗುಡ್ಡಗಳಲ್ಲಿ ಸುರಂಗ ಕೊರೆಯುವವರಿಗೆ, ಕಣಿವೆಗಳಲ್ಲಿ ಸೇತುವೆ ಕಟ್ಟುವವರಿಗೆ, ಸಿಮೆಂಟ್-ಮರಳು-ಕಬ್ಬಿಣ ಸರಬರಾಜು ಮಾಡುವವರಿಗೆ ಮತ್ತು ಅದಕ್ಕೆಂದು ಭಾರೀ ಗಾತ್ರದ ವಾಹನಗಳನ್ನು, ಕ್ರೇನ್‌ಗಳನ್ನು ದುಡಿಮೆಗೆ ಹಚ್ಚುವವರಿಗೆ ಲಾಭವೋ ಲಾಭ. ರೈಲುಮಾರ್ಗ ಪೂರ್ತಿಗೊಂಡ ನಂತರ ಅರಣ್ಯ ಉತ್ಪನ್ನಗಳನ್ನು ಕಳ್ಳಸಾಗಣೆ ಮೂಲಕವೋ ರಾಜಾರೋಷವಾಗಿಯೋ ಎತ್ತೊಯ್ಯುವವರಿಗೆ ಲಾಭವಾಗುತ್ತದೆ.

ನಮ್ಮ ಜನ ಪ್ರತಿನಿಧಿಗಳು ಯಾರ ಪರವಾಗಿದ್ದಾರೆ ಎಂಬುದು ಹೀಗೆ, ಮೇಲ್ನೋಟಕ್ಕೇ ಗೊತ್ತಾಗುತ್ತದೆ.

‘ಪರಿಸರ ಸಮತೋಲ ಸಾಧಿಸುವಲ್ಲಿ ಕರ್ನಾಟಕ ಸಫಲವಾಗಿದೆಯೇ?’ ಎಂಬ ಪ್ರಶ್ನೆಗೆ ಸರಳ ಉತ್ತರ ಇದರಲ್ಲೇ ಸಿಗುತ್ತದೆ.

ಪರಿಸರ ರಕ್ಷಣೆಯ ಸಾಫಲ್ಯವನ್ನು ನಿರ್ಧರಿಸುವಲ್ಲಿ ಎಲ್ಲೆಲ್ಲೂ ಸರಕಾರವೇ ಮುಖ್ಯ ಪಾತ್ರಧಾರಿಯಾಗಿರುತ್ತದೆ. ಇದರಲ್ಲಿ ನಾಲ್ಕು ಹಂತಗಳಿರುತ್ತವೆ.

  1. ಸರಕಾರ ತಾನಾಗಿ ಮುಂದಾಗಿ ಒಂದಿಷ್ಟು ಕೆಲಸಗಳನ್ನು ಮನಮುಟ್ಟಿ ಮಾಡಬೇಕು.
  2. ತಾನು ಮಾಡಲು ಸಾಧ್ಯವಿಲ್ಲದ ಸಂದರ್ಭದಲ್ಲೂ ಮಾಡುತ್ತಿದ್ದೇನೆಂದು ಜನರನ್ನು ನಂಬಿಸಬೇಕು. ಅಥವಾ
  3. ನೀವು ಮಾಡಿರೆಂದು ಜನರಿಗೆ ಪ್ರೇರಣೆ ಕೊಡಬೇಕು. ಕೊನೆಯದಾಗಿ,
  4. ಈ ಮೂರನ್ನೂ ಮಾಡಲು ಸಾಧ್ಯವಿಲ್ಲದಿದ್ದರೆ, ಪರಿಸರದ ಅವನತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವಾದರೂ ಕ್ರಮಗಳನ್ನು ಕೈಗೊಳ್ಳಬೇಕು.

ಕರ್ನಾಟಕದ ದುರಂತ ಏನೆಂದರೆ ಈ ನಾಲ್ಕೂ ಹಂತಗಳಲ್ಲಿ ಸರಕಾರ ವಿಫಲವಾಗಿದೆ. ಇದಕ್ಕೆ ಉದಾಹರಣೆಗಳು ಸರಕಾರದ ಬಹುತೇಕ ಎಲ್ಲ ಇಲಾಖೆಗಳಲ್ಲೂ ದಂಡಿಯಾಗಿ ಸಿಗುತ್ತವೆ. ಕೃಷಿ, ನೀರಾವರಿ, ಅರಣ್ಯ, ಗಣಿಗಾರಿಕೆ, ಮೀನುಗಾರಿಕೆ, ಸಾರಿಗೆ… ಯಾವ ಇಲಾಖೆಯನ್ನು ಹೆಸರಿಸಿದರೂ ಸರಿ. 70-80ರ ದಶಕಗಳಲ್ಲಿ ಜನಪರ ಚಳವಳಿಗಳು ಕ್ರಿಯಾಶೀಲವಾಗಿದ್ದ ಕಾಲದಲ್ಲಿ, ಜನರ ಆಶೋತ್ತರಗಳಿಗೆ ಅಷ್ಟಿಷ್ಟಾದರೂ ಸ್ಪಂದಿಸಬಲ್ಲ ಜನಪ್ರತಿನಿಧಿಗಳು ಇದ್ದಾಗ ಅಲ್ಲಿಷ್ಟು ಇಲ್ಲಿಷ್ಟು ಪರಿಸರ ರಕ್ಷಣಾ ಧೋರಣೆಗಳು, ಕ್ರಮಗಳು ಕಂಡುಬರುತ್ತಿದ್ದವು.

ಬೇಡ್ತಿ-ಅಘನಾಶಿನಿ ಅಣೆಕಟ್ಟುಗಳ ಯೋಜನೆಯ ವಿರುದ್ಧ ಚಳವಳಿ ನಡೆದಾಗ ಸರಕಾರ ಅವನ್ನು ಕೈಗೊಳ್ಳುವುದಿಲ್ಲ ಎಂದು ಘೋಷಿಸಿತು. ಮಂಗಳೂರಿನ ಬಳಿ ತಣ್ಣೀರಬಾವಿಯಲ್ಲಿ ಹಡಗು ಒಡೆಯುವ ಯೋಜನೆಗಳ ವಿರುದ್ಧ ಪ್ರತಿಭಟನೆ ನಡೆದಾಗ ಸರಕಾರ ಅದನ್ನು ಕೈಬಿಟ್ಟಿತು. ಪಶ್ಚಿಮಘಟ್ಟದ ಬಿಸಗೋಡು ಎಂಬಲ್ಲಿ ಮ್ಯಾಂಗನೀಸ್ ಗಣಿಗಾರಿಕೆಯನ್ನು ಸರಕಾರ ಸ್ಥಗಿತಗೊಳಿಸಿತು. ಮೈಸೂರಿನ ಬಳಿ ಚಾಮಲಾಪುರ ಎಂಬಲ್ಲಿ ಉಷ್ಣವಿದ್ಯುತ್ ಸ್ಥಾವರದ ಪ್ರಸ್ತಾಪ ಬಂದಾಗ ಡಾ.ಅನಂತಮೂರ್ತಿ ಅವರಂಥ ಸಾಹಿತಿಗಳೂ ಅದರ ವಿರುದ್ಧ ಧ್ವನಿ ಎತ್ತಿದಾಗ ಅದನ್ನೂ ಸರಕಾರ ಕೈಬಿಟ್ಟಿತು.

ಅನಿಯಂತ್ರಿತ ಮಂಡಳಿ

ಎಂಬತ್ತರ ದಶಕದ ಆರಂಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಜಾರಿಗೆ ಬಂದು, ಅರಣ್ಯ ಇಲಾಖೆಯನ್ನು ‘ಅರಣ್ಯ ಮತ್ತು ಪರಿಸರ ಇಲಾಖೆ’ ಎಂದು ಮರುನಾಮಕರಣ ಮಾಡಿದ ಆರಂಭದ ದಿನಗಳಲ್ಲಿ ಎಲ್ಲ ಚೆನ್ನಾಗಿಯೇ ಇತ್ತು. ರಾಜ್ಯದ ಅನೇಕ ಕಡೆ ಪವಿತ್ರ ವನ ನಿರ್ಮಾಣ, ದೇವಬನಗಳ ಸಂರಕ್ಷಣೆಯ ಕೆಲಸ ಆರಂಭವಾಗಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಯೇ ಪರಿಸರ ಇಲಾಖೆಯ ಕಾರ್ಯದರ್ಶಿ ಆಗಿದ್ದರು. ಮಾಲಿನ್ಯ ನಿಯಂತ್ರಣ ಮಂಡಲಿ ವರ್ಷವರ್ಷಕ್ಕೂ ‘ಕರ್ನಾಟಕ ಪರಿಸರ ಪರಿಸ್ಥಿತಿ ವರದಿ’ಯನ್ನು ಪ್ರಕಟಿಸುತ್ತಿತ್ತು. ಮಾಧವ ಗಾಡಗೀಳರಂಥ ಶ್ರೇಷ್ಠ ಪರಿಸರ ವಿಜ್ಞಾನಿಗಳು ರಾಜ್ಯ ಮಟ್ಟದ ಸಮೀಕ್ಷೆ ನಡೆಸಿ ಅದರಲ್ಲಿ ಲೇಖನವನ್ನು ಬರೆಯುತ್ತಿದ್ದರು. ಶಿವರಾಮ ಕಾರಂತರಂಥ ಪ್ರಾಜ್ಞರಿಂದ ಲೇಖನವನ್ನು ಬರೆಸಲಾಗುತ್ತಿತ್ತು. ಮಂಡಳಿಯ ಮೂಲಕ ‘ನಮ್ಮ ಪರಿಸರ’ ಎಂಬ ಮಾಸಪತ್ರಿಕೆಯೂ ಪ್ರಕಟವಾಗುತ್ತಿತ್ತು. ಶುದ್ಧ ನೀರು, ಶುದ್ಧಗಾಳಿ ಕುರಿತು ಜನಜಾಗೃತಿ ಚಳವಳಿಗಳಿಗೆ ಮಂಡಳಿಯೇ ಪ್ರೋತ್ಸಾಹ ನೀಡುತ್ತಿತ್ತು.

ಆದರೆ ಯಾವಾಗ ಜಾಗತೀಕರಣದ ಸುಂಟರಗಾಳಿ ಬಂದು ನಮ್ಮ ಯುವಕರನ್ನೆಲ್ಲ ವೃತ್ತಿಪರ ಕೋರ್ಸ್ಗಳತ್ತ ಸೆಳೆದು ವಿದೇಶಗಳತ್ತ ಹೊರಡಿಸಿತೊ ಇತ್ತ ಬೀದಿ ಚಳವಳಿಗಳೆಲ್ಲ ಠಪ್ಪೆಂದವು. ಅತ್ತ ವಿದೇಶೀ ಬಂಡವಾಳದ ಹರಿವಿನ ಅಬ್ಬರದಲ್ಲಿ ನಾನಾ ಧ್ವಂಸಕಾರಿ ಯೋಜನೆಗಳು ನುಗ್ಗಿ ಬಂದವು. ಯುರೋಪಿನಲ್ಲಿ ಪರಿಸರ ಪ್ರಜ್ಞೆ ಜಾಗೃತವಾಗಿ ಅಲ್ಲಿ ಔಷಧ ತಯಾರಿಸುತ್ತ ಅಂತರ್ಜಲಕ್ಕೆಲ್ಲ ವಿಷ ತುಂಬುತ್ತಿದ್ದ ಕಂಪನಿಗಳಿಗೆ ಬೀಗಮುದ್ರೆ ಹಾಕತೊಡಗಿದಾಗ ಅವೇ ಕಂಪನಿಗಳು ಭಾರತಕ್ಕೆ, ಅದರಲ್ಲೂ ಕರ್ನಾಟಕಕ್ಕೆ, ಅದರಲ್ಲೂ ತೀರ ಹಿಂದುಳಿದ ಜಿಲ್ಲೆಯೆನಿಸಿದ್ದ ಬೀದರ್‌ಗೆ ಅಭಿವೃದ್ಧಿಯ ಹರಿಕಾರರಾಗಿ ಬಂದು ಕಾಲೂರಿದವು. ಎರಡೇ ವರ್ಷಗಳಲ್ಲಿ ಅವುಗಳ ಮಾಲಿನ್ಯ ಅಂತರ್ಜಲಕ್ಕೂ ಇಳಿದುವೆಂದು ಜನರು ಪ್ರತಿಭಟಿಸಿದಾಗ ಸರಕಾರ ಆಗಲೂ ತುಸು ಸ್ಪಂದನಶೀಲವಾಗಿತ್ತು. ಎಲ್ಲ ಕಾರ್ಖಾನೆಗಳನ್ನು ಮುಚ್ಚಿಸಿತು. ಅದು ಸಾಧ್ಯವಾಗಿದ್ದು, ಯಲ್ಲಪ್ಪ ರೆಡ್ಡಿಯವರಂಥ ಪ್ರಾಮಾಣಿಕ ಅಧಿಕಾರಿಯೊಬ್ಬರು ನಮ್ಮ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧ್ಯಕ್ಷರಾಗಿದ್ದಾಗ ಅಷ್ಟೆ.

ಅಂಥ ಅಪರೂಪದ ಅಪವಾದಗಳನ್ನು ಬಿಟ್ಟರೆ, ಪರಿಸರ ಹಾಳಾಗದಂತೆ ಸರಕಾರ ತಾನೇ ಮುಂದಾಗಿ ಕ್ರಮ ಕೈಗೊಂಡಿದ್ದು ಇಲ್ಲವೇ ಇಲ್ಲವೆನ್ನಬಹುದು. ಮೈಸೂರು ಮಿನರಲ್ಸ್ನಂಥ ಸರಕಾರಿ ಗಣಿ ಕಂಪನಿಗಳೇ ಚಾಮರಾಜನಗರದಲ್ಲಿ ಗ್ರಾನೈಟ್ ಬಂಡೆಗಳನ್ನು ಸ್ಫೋಟಿಸಿ, ಅರಣ್ಯವನ್ನು ಎಗ್ಗಿಲ್ಲದೆ ಧ್ವಂಸ ಮಾಡುತ್ತ ವೀರಪ್ಪನ್‌ನಂಥವರನ್ನು ಪರೋಕ್ಷವಾಗಿ ಪೋಷಿಸುತ್ತಿದ್ದಾಗಲೇ ಅಣಬೆಗಳಂತೆ ಎಲ್ಲೆಲ್ಲೂ ಖಾಸಗಿ ಗಣಿಕಂಪನಿಗಳು ತಲೆ ಎತ್ತಿದವು. ಅದು ಎಲ್ಲಿಯವರೆಗೆ ಹೋಯಿತೆಂದರೆ ಗಣಿಧಣಿಗಳೇ ಚುನಾವಣೆಗೂ ನಿಂತು ಗೆದ್ದುಬಂದು ಮಂತ್ರಿಗಿರಿಯನ್ನೂ ಗಿಟ್ಟಿಸಿಕೊಂಡು ಬಳ್ಳಾರಿಯಂಥ ಜಿಲ್ಲೆಯನ್ನೇ ಬರಿದು ಮಾಡಿ ಮೆರೆಯುವವರೆಗೂ ಹೋಯಿತು.

ಅತ್ಯಂತ ಭ್ರಷ್ಟ ಇಲಾಖೆ’ ಎಂಬ ಅಪಕೀರ್ತಿ ಲೋಕೋಪಯೋಗಿ ಇಲಾಖೆಯ ಕೈತಪ್ಪಿ ಅದು ಗಣಿ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳ ತೆಕ್ಕೆಗೆ ಸೇರಿತು. ಪರಿಸರ ಧ್ವಂಸ ಕಾರ್ಯ ಹೆಚ್ಚುತ್ತ ಹೋದಷ್ಟೂ ಅರಣ್ಯ ಮತ್ತು ಪರಿಸರ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ ಅಧಿಕಾರಿಗಳ ನೇಮಕ ಹಾಗೂ ಹೊಸ ಹುದ್ದೆಗಳ ನಿರ್ಮಾಣ ಹೆಚ್ಚುತ್ತ ಹೋಯಿತು. 1990ರವರೆಗೆ ಒಬ್ಬನೇ ವ್ಯಕ್ತಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎಂಬ ಹುದ್ದೆಯಲ್ಲಿರುತ್ತಿದ್ದರು. ಆ ಹುದ್ದೆಗಳ ಸಂಖ್ಯೆ ಎರಡು ಮೂರು ನಾಲ್ಕು ದಾಟಿ ಈಗ ಎಂಟಕ್ಕೆ ಏರಿದೆ. ಪ್ರತಿ ಜಿಲ್ಲೆಯಲ್ಲೂ ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿದ್ದಾರೆ.

ಕಳೆ ಮತ್ತು ಕೊಳೆ ಎಲ್ಲೆಲ್ಲೂ

ಪ್ರತಿ ಜಿಲ್ಲೆಯಲ್ಲೂ ಅರಣ್ಯನಾಶದ ಪ್ರಮಾಣ ಹೆಚ್ಚುತ್ತಿದೆ. ಪ್ರತಿ ಅರಣ್ಯದಲ್ಲೂ ಲಂಟಾನಾ, ಯುಪಟೋರಿಯಂ ಕಳೆಗಿಡಗಳು ವ್ಯಾಪಿಸುತ್ತಿವೆ. ನೀರಾವರಿಯ ದೊಡ್ಡ ದೊಡ್ಡ ಯೋಜನೆಗಳು ಕಾರ್ಯಗತ ಆಗುತ್ತ ಹೋದಂತೆ ಅಂತರ್ಜಲ ಮಟ್ಟ ಕೆಳಗಿಳಿಯುತ್ತಿದೆ. ಬೋರ್‌ವೆಲ್ ಲಾರಿಗಳ ಮಹಾಪಡೆಯೇ ಕರ್ನಾಟಕಕ್ಕೆ ಲಗ್ಗೆ ಇಟ್ಟಿದೆ. ಪ್ರತಿ ಜಿಲ್ಲೆಯಲ್ಲೂ ಕೆರೆಗಳು ಹೂಳುತುಂಬಿ ಬತ್ತುತ್ತಿರುವ ಚಿತ್ರಣಗಳು ಸಿಗುತ್ತಿವೆ. ಪ್ರತಿ ಜಿಲ್ಲೆಯಲ್ಲೂ ವನ್ಯ ಪ್ರಾಣಿಪಕ್ಷಿಗಳ ಸಂಕುಲ ಕ್ಷೀಣಿಸುತ್ತಿರುವ ವರದಿಗಳು ಬರುತ್ತಿವೆ. ಪ್ರತಿ ಜಲಾಶಯದಲ್ಲೂ ಜಲಚರ ವೈವಿಧ್ಯ ಕಡಿಮೆಯಾಗುತ್ತ ಬಂದಿದೆ. ಪ್ರತಿ ಜಿಲ್ಲೆಯಲ್ಲೂ ಕೃಷಿಕ್ಷೇತ್ರದಲ್ಲಿ ನೀಲಗಿರಿ-ಅಕೇಶಿಯಾಗಳ ಹಸಿರು ಕ್ರಾಂತಿ ಆಗುತ್ತಿದೆ. ವನ್ಯಜೀವಿಗಳು ಅರಣ್ಯದಲ್ಲಿ ವಾಸಿಸಲಾಗದೆ ಕೃಷಿಭೂಮಿಗೆ ದಾಳಿ ಇಡುವುದರಿಂದ ವಿಶೇಷವಾಗಿ ಪಶ್ಚಿಮಘಟ್ಟಗಳ ರೈತರು ಹೈರಾಣಾಗಿದ್ದಾರೆ. ಇಡೀ ಉತ್ತರ ಕರ್ನಾಟಕವೇ ಭಾರತದ ಎರಡನೆಯ ಅತಿದೊಡ್ಡ ಮರುಭೂಮಿಯಾಗುವ ನಿಟ್ಟಿನಲ್ಲಿ ಭಣಗುಡುತ್ತಿದೆ.

ಸರಕಾರ ತಾನಾಗಿ ಪರಿಸರ ರಕ್ಷಣೆ ಮಾಡುವುದು ಹೋಗಲಿ, ಮಾಡುತ್ತಿದ್ದೇನೆಂಬ ಹುಸಿ ನಂಬಿಕೆಯನ್ನಾದರೂ ಬಿತ್ತಲು ಯತ್ನಿಸುತ್ತಿದೆಯೆ? ಅದೂ ಇಲ್ಲ. ಮಾಲಿನ್ಯ ನಿಯಂತ್ರಣ ಇಲಾಖೆ ಪ್ರಕಟಿಸುತ್ತಿದ್ದ ‘ಪರಿಸರ ಪರಿಸ್ಥಿತಿ ವರದಿ’ಗಳು ಸ್ಥಗಿತಗೊಂಡು ಇಪ್ಪತ್ತು ವರ್ಷಗಳೇ ಆದವು. ‘ನಮ್ಮ ಪರಿಸರ’ ಮಾಸಪತ್ರಿಕೆ ನಿಂತು ಇನ್ನೂ ಹೆಚ್ಚು ಕಾಲವೇ ಕಳೆಯಿತು. ಜೈವಿಕ ಇಂಧನ ಬೋರ್ಡ್ ತಾನು ಅಸ್ತಿತ್ವಕ್ಕೆ ಬಂದ ಹೊಸದರಲ್ಲಿ ಒಂದೆರಡು ಪುಸ್ತಕಗಳನ್ನೂ ವಿಡಿಯೊಗಳನ್ನೂ ಜನರಿಗೆ ಹಂಚಿತ್ತು. ಅವೆಲ್ಲ ನಿಂತಿವೆ.

ಸರಕಾರಿ ಜಾಹೀರಾತುಗಳ ಉತ್ಪಾದನೆಗೆಂದೇ ವಾರ್ತಾ ಇಲಾಖೆ ಇದೆ. ಪ್ರತಿ ಜಿಲ್ಲೆಯಲ್ಲೂ ಅದರ ಕಚೇರಿ ಇದೆ. ಸಚಿವರ ಸಾಧನೆಗಳನ್ನು, ಅಭಿವೃದ್ಧಿಯ ವೈಖರಿಯನ್ನು ವರ್ಣಿಸುವ ಕೋಟಿಗಟ್ಟಲೆ ರೂಪಾಯಿಗಳ ಜಾಹೀರಾತುಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಅಸಂಖ್ಯ ವಿಡಿಯೊಗಳು ತಯಾರಾಗುತ್ತಿವೆ. ಆದರೆ ಮಳೆನೀರನ್ನು ಹಿಡಿಯುವುದು ಹೇಗೆ ಎಂಬ ಬಗ್ಗೆ ಫ್ಲೂರೊಸಿಸ್ ಕಾಯಿಲೆಯಿಂದ ನಲುಗಿ ಹೋದ ಯಾವ ಹಳ್ಳಿಯಲ್ಲಾದರೂ ಒಂದು ಭಿತ್ತಿಚಿತ್ರ, ಒಂದು ಕರಪತ್ರ, ಒಂದು ಜಾಹೀರಾತು ಪ್ರಕಟವಾಗಿದೆಯೆ? ಕಾಣುವಂತಿದೆಯೆ? ಮಳೆನೀರನ್ನು ಹಿಡಿದು ಬಳಸುವ ಅಥವಾ ಸೋಲಾರ್ ಪವರ್‌ನಿಂದ ವಿದ್ಯುತ್ ಉತ್ಪಾದಿಸುವ ಪ್ರಾತ್ಯಕ್ಷಿಕೆಯನ್ನು ತೋರಿಸಬಲ್ಲ ಒಂದಾದರೂ ತಹಸೀಲ್ದಾರ ಕಚೇರಿ ಕರ್ನಾಟಕದಲ್ಲಿ ಇದೆಯೆ?

ಸಿಂಗಪುರದಲ್ಲಿ ಇಡೀ ನಗರದ ಕೊಳಚೆ ನೀರನ್ನು ಸಂಸ್ಕರಿಸಿ ಕುಡಿಯಲು ಯೋಗ್ಯ ನೀರನ್ನಾಗಿ ಪರಿವರ್ತಿಸುವ ಘಟಕಗಳಿವೆ. ಕೋಲಾರದಂಥ ಸಣ್ಣದೊಂದು ಪಟ್ಟಣದಲ್ಲೆಲ್ಲಾದರೂ ಅಂಥದ್ದೊಂದು ಚಿಕ್ಕ ಪ್ರಾತ್ಯಕ್ಷಿಕೆ ಇದೆಯೆ? ಕುಡಿಯುವ ನೀರಿಗೆ ಇಷ್ಟೊಂದು ಹಾಹಾಕಾರ ಏಳುತ್ತಿರುವಾಗ ಸಮುದ್ರದಂಚಿನಲ್ಲಿ ಒಂದಾದರೂ ಸೌರಶಕ್ತಿಯಿಂದ ಉಪ್ಪುನೀರನ್ನು ಸಿಹಿ ಮಾಡಬಲ್ಲ ಘಟಕ ಇದೆಯೆ?

ಬರಡು ನದಿಗಳು, ಬರಡು ದಿನಗಳು

ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲೆಂದು ವಿಶ್ವಸಂಸ್ಥೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 25ಕ್ಕೂ ಹೆಚ್ಚು ದಿನಗಳನ್ನು ನಿಗದಿಪಡಿಸಿದೆ. ನೂರಾರು ಚಿಕ್ಕದೊಡ್ಡ ದೇಶಗಳಲ್ಲಿ ಶಾಲಾ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಆಯಾ ದಿನಗಳನ್ನು ಸಂಭ್ರಮದಿಂದ ಆಚರಿಸಲು ಸರಕಾರ ಸಹಯೋಗ ನೀಡುತ್ತದೆ. ನಮ್ಮಲ್ಲಿ (‘ವಿಶ್ವ ಪರಿಸರ ದಿನ’ದಂದು ಬೆಂಗಳೂರೊಂದರಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸುವುದನ್ನು ಬಿಟ್ಟು) ವಿಶ್ವ ಜಲ ದಿನ, ಅರಣ್ಯ ದಿನ, ಶಕ್ತಿ ಉಳಿತಾಯದ ದಿನ, ಜೀವಿವೈವಿಧ್ಯ ದಿನ, ಮರುಭೂಮಿ ತಡೆದಿನ, ಮಣ್ಣು ದಿನ ಇಂಥ ವಿಶೇಷ ದಿನಗಳ ಬಗ್ಗೆ ಶಾಲೆಗಳಗೆ ಮಾಹಿತಿ ನೀಡಿದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?

ಜಗತ್ತಿನ ಐದು ಪ್ರಮುಖ ರಾಷ್ಟ್ರಗಳಲ್ಲಿ ಪ್ರಧಾನಿಯ ಹುದ್ದೆಯಲ್ಲಿದ್ದವರು ಸ್ವತಃ ಸೈಕಲ್ ಮೇಲೆ ಚಲಿಸುತ್ತಾರೆ (ಭಾರತ ಸಂಜಾತ ನೊಬೆಲ್ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್ ಬೆಂಗಳೂರಿಗೆ ಬಂದಾಗಲೆಲ್ಲ ಭಾರತೀಯ ವಿಜ್ಞಾನ ಸಂಸ್ಥೆಯ ಕ್ಯಾಂಪಸ್ಸಿನಲ್ಲಿ ಸೈಕಲ್ ಮೂಲಕವೇ ಸಂಚರಿಸುತ್ತಾರೆ). ನಮ್ಮಲ್ಲಿ ಎತ್ತರದ ಹುದ್ದೆಯವರು ಹಾಗಿರಲಿ, ಕ್ಲಸ್ಟರ್ ಮಟ್ಟದ ಶಿಕ್ಷಣಾಧಿಕಾರಿ ಎಂದಾದರೂ ಸೈಕಲ್ ಏರಿ ಸಮೀಪದ ಯಾವುದಾದರೂ ಶಾಲೆಗೆ ಹೋಗಿದ್ದನ್ನು ಕೇಳಿದ್ದೀರಾ?

ಪಶ್ಚಿಮಘಟ್ಟಗಳು ಜೀವಿವೈವಿಧ್ಯದ ದೃಷ್ಟಿಯಿಂದ ಜಗತ್ತಿನ ಅತ್ಯಂತ ಶ್ರೀಮಂತ ತಾಣಗಳಲ್ಲೊಂದೆಂದು ಖ್ಯಾತಿ ಪಡೆದಿವೆ. ಕರ್ನಾಟಕವೇ ಅದರಲ್ಲಿ ಸಿಂಹಪಾಲನ್ನು ಪಡೆದಿದೆ. ಆದರೆ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಒಂದಾದಮೇಲೊಂದರಂತೆ ಅದರ ಮೇಲೆ ಅಭಿವೃದ್ಧಿಯ ಯೋಜನೆಗಳನ್ನು ಹೇರಲಾಗುತ್ತಿದೆ. ಹೆದ್ದಾರಿಗಳು, ರೈಲು ಮಾರ್ಗಗಳು, ನೀರಾವರಿ ಪೈಪ್‌ಲೈನ್‌ಗಳು, ವಿದ್ಯುತ್ ಸಾಗಣೆ ಕಾರಿಡಾರ್‌ಗಳು… ಒಂದೆ, ಎರಡೆ?

ಮಾತೆತ್ತಿದರೆ, ಧ್ವಂಸವಾಗಲಿರುವ ಗಿಡಮರಗಳ ಬದಲಿಗೆ ನಾಳೆ ಬೇರೆಡೆ ಹಸಿರನ್ನು ಬೆಳೆಸುತ್ತೇವೆ ಎಂಬ ಆಶ್ವಾಸನೆಗಳು ಕೇಳಬರುತ್ತಿವೆ. ಹಾಗಿದ್ದರೆ ಮುಂದಿನ 25 ವರ್ಷಗಳಲ್ಲಿ ಬರಬಹುದಾದ ಯೋಜನೆಗಳ ಹೆಸರಿನಲ್ಲಿ ಈಗಾಗಲೇ ಎಲ್ಲಾದರೂ ನೂರಿನ್ನೂರು ಹೆಕ್ಟೇರ್ ಬಂಜರು ಭೂಮಿಯಲ್ಲಿ ಗಿಡಮರಗಳನ್ನು ಬೆಳೆಸಲು ಆರಂಭಿಸಬೇಕಿತ್ತಲ್ಲವೆ? ಅಂಥ ಹತ್ತು ಹೆಕ್ಟೇರ್‌ಗಳ ಉದಾಹರಣೆ ಎಲ್ಲೂ ನಮಗೆ ಸಿಗುವುದಿಲ್ಲ. ಪಶ್ಚಿಮಘಟ್ಟಗಳ ಸಂರಕ್ಷಣೆ ಕುರಿತಂತೆ ಮಾಧವ ಗಾಡ್ಗೀಳ್ ವರದಿ ಹಾಗೂ ಕಸ್ತೂರಿರಂಗನ್ ವರದಿ ಕುರಿತು ಶಾಸಕರು ಏನೆಲ್ಲ ವಿರೋಧ ವ್ಯಕ್ತಪಡಿಸಿದರು. ಇಂಗ್ಲಿಷ್‌ನಲ್ಲಿದ್ದ ಆ ವರದಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿ ಸಂಬಂಧಿತ ಜಿಲ್ಲೆಗಳ ಜನರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು (ಗಾಡ್ಗೀಳ್ ವರದಿಯಲ್ಲಿ ಆ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ) ಇದುವರೆಗೆ ಯಾವ ಜನಪ್ರತಿನಿಧಿಗಾಗಲೀ ಅಧಿಕಾರಿಗಳಿಗಾಗಲೀ ಅನ್ನಿಸಿದೆಯೆ?

ಹೋಗಲಿ, ಸರಕಾರ ತಾನೂ ಮಾಡುತ್ತಿಲ್ಲ, ಮಾಡುತ್ತಿದ್ದೇನೆಂಬ ಹುಸಿಚಿತ್ರಣವನ್ನೂ ಕೊಡುತ್ತಿಲ್ಲ. ಮಾಡುತ್ತೇನೆಂದು ಮುಂದೆ ಬಂದವರಿಗೆ ಪ್ರೋತ್ಸಾಹವನ್ನೂ ಕೊಡುವುದಿಲ್ಲ. ಹವಾಗುಣ ಬದಲಾವಣೆ ಮತ್ತು ಬಿಸಿಪ್ರಳಯದ ದಿನಗಳಲ್ಲಿ ಕರ್ನಾಟಕ ಯಾವ ರೀತಿ ಸಜ್ಜಾಗಬೇಕು ಎಂಬ ಬಗ್ಗೆ ಕೆಲವು ನಾಗರಿಕ ತಜ್ಞರೇ ಮುಂದಾಗಿ ನಿಂತು ದಶಕಗಳ ಹಿಂದೆ ವರದಿಯನ್ನು ಸಿದ್ಧಪಡಿಸಿದ್ದರು. ಅಂಥ ಒಂದು ವರದಿಗೆ ಮಾಲಿನ್ಯ ನಿಯಂತ್ರಣ ಮಂಡಲಿಯ ಸಹಾಯಧನ ಸಿಕ್ಕಿತ್ತು ಅನ್ನಿ. ಅವನ್ನು ಈಗ ಮರುವಿಮರ್ಶೆ ಮಾಡಿ ಈಚಿನ ಮಾಹಿತಿಗಳನ್ನು ಸೇರಿಸೋಣವೆಂದರೆ ಯಾವ ಇಲಾಖೆಯ ಅಧಿಕಾರಿಗಳಿಗೂ ಆಸಕ್ತಿ ಇದ್ದಂತಿಲ್ಲ.

ಹೋಗಲಿ, ಕೇಂದ್ರ ಸರಕಾರವೇ ಹವಾಗುಣ ಬದಲಾವಣೆಯನ್ನು ಎದುರಿಸಲೆಂದು ಎಂಟು ‘ಮಿಶನ್’ಗಳಿಗೆ ಚಾಲನೆ ಕೊಟ್ಟು ಹನ್ನೆರಡು ವರ್ಷಗಳೇ ಆದವು. ಯಾವ ಮಿಶನ್ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಪಂಚಾಯತ್ ಮಟ್ಟದ ಅಧಿಕಾರಿಗಳಿಗೂ ಗೊತ್ತಾಗುವಂತೆ ಸ್ಥಳೀಯ ಭಾಷೆಯಲ್ಲಿ ಮಾಹಿತಿಯನ್ನು ವಿತರಿಸುವ ಯತ್ನವನ್ನು ಮಾಡಬೇಕಿತ್ತು. ಪ್ರತಿ ಪಂಚಾಯತಿಯಲ್ಲೂ ಜೀವಿವೈವಿಧ್ಯ ಮಂಡಳಿ ಇರಬೇಕು ಎಂದು ಅಧಿನಿಯಮಗಳಲ್ಲೇ ಹೇಳಲಾಗಿದೆ. ಆ ಕುರಿತು ಸರಳ ಭಾಷೆಯಲ್ಲಿ ಮಾಹಿತಿ ನೀಡಬಲ್ಲ ಪುಸ್ತಕವೊಂದರ ಹಸ್ತಪ್ರತಿ ಆ ಮಂಡಳಿಯ ಕಚೇರಿಯಲ್ಲೇ ನಾಲ್ಕು ವರ್ಷಗಳಿಂದ ಬಿದ್ದಿದೆ (ಜೀವಿವೈವಿಧ್ಯ ಮಂಡಳಿಗೆ ಪುನಶ್ಚೇತನ ನೀಡಲೆಂದು ಇದೀಗ ಹೊಸ ಅಧ್ಯಕ್ಷರ ನೇಮಕವಾಗಿದೆ; ಮಂಡಳಿಯ ಕಾರ್ಯವೈಖರಿ ಹೇಗೆ ಬದಲಾಗುತ್ತದೊ ನೋಡಬೇಕು).

ಬೆರಳೆಣಿಕೆಯ ಪರಿಣತರು

ಸರಕಾರಿ ಇಲಾಖೆಗಳ ಹಾಗೂ ನಿಗಮ-ಮಂಡಳಿಗಳ ಸೀಮಾತೀತ ನಿರ್ಲಿಪ್ತ ಧೋರಣೆಯ ವಿಷಯ ಹೇಗೂ ಇರಲಿ, ಜನರು ತಾವಾಗಿ ಕೆರೆ ಹೂಳೆತ್ತಲು, ಗಿಡಮರಗಳನ್ನು ಬೆಳೆಸಲು ಟೊಂಕ ಕಟ್ಟಿದ ಅನೇಕ ಉದಾಹರಣೆಗಳು ನಮ್ಮಲ್ಲಿ ಸಿಗತೊಡಗಿವೆ. ಅಲ್ಲೊಬ್ಬ ಇಲ್ಲೊಬ್ಬ ಕ್ರಿಯಾಶೀಲ ಅಧಿಕಾರಿಗಳ ಮೂಲಕ ತುಸುವೇ ಬೆಂಬಲ ಸಿಕ್ಕರೂ ಜನರು ತಾವಾಗಿ ಪರಿಸರ ರಕ್ಷಣೆಯ ಕೆಲಸಕ್ಕೆ ಮುಂದಾಗುತ್ತಿದ್ದಾರೆ.

ಯಾವುದೇ ಇಲಾಖೆಯಲ್ಲಿದ್ದರೂ ಪರಿಸರ ರಕ್ಷಣೆಗೆ ಕೈಜೋಡಿಸಲು, ಜನರನ್ನು ಪ್ರೇರೇಪಿಸಲು ಸಾಧ್ಯವಿದೆ. ಆದರೆ ಅಂಥ ಅಧಿಕಾರಿಗಳು ಬೆರಳೆಣಿಕೆಯಷ್ಟೂ ಸಿಗುವುದಿಲ್ಲ. ಜನಪ್ರತಿನಿಧಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಸರಕಾರಿ ಅಧಿಕಾರಿಯೊಬ್ಬ ಶಾಶ್ವತವಾಗಿ ಪೀಠಸ್ಥನಾದನೆಂದರೆ ಮುಂದೆ ಸುಮಾರು 35 ವರ್ಷಗಳ ಕಾಲ ರಾಜ್ಯದ ಗತಿವಿಧಿಗಳ ಸೂತ್ರಧಾರನಾಗುತ್ತಾನೆ. ಅವರು ಕಾಲಕಾಲಕ್ಕೆ ಬಡ್ತಿ ಪಡೆಯುತ್ತ ಮೇಲಕ್ಕೆ ಮೇಲಕ್ಕೆ ಹೋಗುತ್ತಿದ್ದ ಹಾಗೆ ರಾಜಕಾರಣಿಗಳನ್ನೂ ತಮ್ಮ ಧೋರಣೆಗೆ ತಕ್ಕಂತೆ ತಿದ್ದುವ, ನಿಯಂತ್ರಿಸುವ ಸಾಮರ್ಥ್ಯ ಪಡೆಯುತ್ತಾರೆ.

ನಮ್ಮಲ್ಲಿ ಯಲ್ಲಪ್ಪ ರೆಡ್ಡಿ, ಸಂಜಯ ದಾಸಗುಪ್ತ, ಚಿರಂಜೀವಿ ಸಿಂಗ್ ಅವರಂಥವರು ರಾಜ್ಯದ ಸುಸ್ಥಿರ ಅಭಿವೃದ್ಧಿಗೆ, ಜನಪರ ಆಡಳಿತಕ್ಕೆ ಹಾಗೂ ಪರಿಸರ ಸಮತೋಲಕ್ಕೆ ನೀಡಿದ ಕೊಡುಗೆಯನ್ನು ಜನರು ಈಗಲೂ ನೆನೆಸಿಕೊಳ್ಳುತ್ತಾರೆ.

ಪರಿಸರ ರಕ್ಷಣೆ ಆಗಬೇಕೆಂದರೆ ಇಂದಿನ ಮಕ್ಕಳಿಗೆ ಕಡ್ಡಾಯ ಪರಿಸರ ಸಂಬಂಧಿ ವಿಷಯಗಳನ್ನು ಪಠ್ಯದ ಮೂಲಕ ಬೋಧಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳಾಗಿದ್ದಾಗ ನಮ್ಮ ಸಂತೋಷ್ ಹೆಗ್ಡೆಯವರು ಆಜ್ಞೆ ಹೊರಡಿಸಿದ್ದರು. ಅವರಿಂದಾಗಿಯೇ ಇಂದು ಇಡೀ ದೇಶದಲ್ಲಿ ಪರಿಸರ ಪಠ್ಯಕ್ರಮಗಳು ಪದವಿಮಟ್ಟದವರೆಗೂ ಜಾರಿಗೆ ಬಂದಿವೆ. ಆದರೆ ಆ ಪಠ್ಯಕ್ರಮಗಳೆಲ್ಲ ಕಾಟಾಚಾರಕ್ಕೆ ಎಂಬಂತಾಗಿದೆ. ಬೋಧಕರಿಲ್ಲ. ಪ್ರಾಕ್ಟಿಕಲ್ ಮಾಡಿಸಬಲ್ಲ ಪರಿಣತರಿಲ್ಲ. ಹಾಗಾಗಿ ಇಂದು ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಅಧಿಕಾರ ಸೂತ್ರ ಹಿಡಿಯಲು ಬರುವ ಕುಶಾಗ್ರಮತಿಗಳಿಗೂ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿಯಾಗಲೀ ಕಾಳಜಿಯಾಗಲೀ ಇರುವುದಿಲ್ಲ.

ಈಗ ಆಗಬೇಕಾದ ಮುಖ್ಯ ಕೆಲಸ ಏನೆಂದರೆ, ಈ ಅಧಿಕಾರಿಗಳಿಗೆ ತರಬೇತಿ ಕೊಡುವಾಗ ಇಂದಿನ ಪರಿಸರ ಸ್ಥಿತಿಗತಿಗಳ ಬಗ್ಗೆ, ಸುಸ್ಥಿರ ಅಭಿವೃದ್ಧಿಯ ಬಗ್ಗೆ ಹಾಗೂ ಬರಲಿರುವ ಬಿಸಿಪ್ರಳಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಗ್ರ ಚಿತ್ರಣ ಕೊಡುವಂಥ ಪಠ್ಯಕ್ರಮಗಳನ್ನು, ಪ್ರಾತ್ಯಕ್ಷಿಕೆಗಳನ್ನು ಅಳವಡಿಸಬೇಕು.

ಪರಿಸರದ ಬಗ್ಗೆ, ಜೀವಜಾಲದ ಬಗ್ಗೆ ಸಂವೇದನೆಗಳನ್ನು ಬೆಳೆಸಿಕೊಂಡ ಅಧಿಕಾರಿಗಳಿದ್ದರೆ ಹುಬ್ಬಳ್ಳಿ-ಅಂಕೋಲದ ರೈಲುಮಾರ್ಗದಂಥ ವಿಧ್ವಂಸಕ ಯೋಜನೆಗಳನ್ನು ಜಾರಿಗೆ ತರಬಯಸುವ ಸರ್ವಭಕ್ಷಕ ರಾಜಕಾರಣಿಗಳಿಗೆ ತುಸುವಾದರೂ ಲಗಾಮು ಹಾಕಲು ಸಾಧ್ಯವಾದೀತು.

Leave a Reply

Your email address will not be published.