ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿ ಸಿಎಎ ನ್ಯಾಯಾಂಗದ ಸವಾಲುಗಳು

ಭಾರತದಂತಹ ಅತಿ ದೊಡ್ಡ ಗಣತಂತ್ರ ರಾಷ್ಟ್ರ ತನ್ನ ಪೌರತ್ವ ಕಾನೂನನ್ನು ಹೇಗೆ ರೂಪಿಸುತ್ತದೆ, ನಿರ್ವಹಿಸುತ್ತದೆ ಎಂಬುದನ್ನು ಇಡೀ ಜಗತ್ತು ಕುತೂಹಲದಿಂದ ನೋಡುತ್ತಿದೆ. ಇಂತಹ ವಿಷಯದಲ್ಲಿ ನ್ಯಾಯಾಂಗ ಯಾವ ರೀತಿಯಲ್ಲಿ ಮತ್ತು ಎಷ್ಟರ ಮಟ್ಟಿಗೆ ಸ್ಪಂದಿಸಬೇಕೆಂಬುದರ ಬಗೆಗೂ ವಿವೇಚನೆಯ ಅಗತ್ಯವಿದೆ.

ಡಾ.ವೆಂಕಟಾಚಲ ಹೆಗಡೆ

ದೇಶದ ಉದ್ದಗಲಕ್ಕೂ ಪ್ರತಿಭಟನೆಯ ಅಲೆಗಳನ್ನು ಹುಟ್ಟು ಹಾಕಿದ ಪೌರತ್ವ ತಿದ್ದುಪಡಿ ಕಾಯಿದೆ-2019ರ ಸಂವಿಧಾನಾತ್ಮಕ ಬದ್ಧತೆಯನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲದಲ್ಲಿ ಹಾಕಲ್ಪಟ್ಟ 143 ಅಹವಾಲುಗಳನ್ನು ಕಳೆದ ಜನವರಿ 22 ರಂದು ವಿಚಾರಣೆಗೆ ತೆಗೆದುಕೂಳ್ಳಲಾಯಿತು. ಅಂದು ನ್ಯಾಯಾಲದಲ್ಲಿ ನಡೆದ ವಿದ್ಯಮಾನಗಳು ಊಹಿಸಿದಂತೆ ನಡೆದವು. ಹಲವಾರು ಹಿರಿಯ ನ್ಯಾಯವಾದಿಗಳು ಈ ತಿದ್ದುಪಡಿಯ ವಿರೋಧದ ಪರವಾಗಿ ವಾದಿಸಲು ನಿಂತಿದ್ದರೆ, ಕೇಂದ್ರ ಸರಕಾರದ ಪರವಾಗಿ ಅಟೊರ್ನಿ ಜನರಲ್ ಸಾಹೇಬರು ಖುದ್ದಾಗಿ ಬಂದಿದ್ದು ಈ ಕಾಯಿದೆ ಬಗ್ಗೆ ಸರಕಾರದ ಬದ್ಧತೆಯನ್ನು ಖಚಿತಪಡಿಸುತ್ತದೆ.

ಅಂದು ಸರ್ವೋಚ್ಚ ನ್ಯಾಯಾಲಯ ಮಾತ್ರ ತನ್ನ ಎಂದಿನ ಕಾರ್ಯಕ್ರಮದಂತೆ ಈ ಕಾಯಿದೆಯ ವಿಚಾರಣೆಯನ್ನು ಆರಂಭಿಸಿ, ಯಾವ ಗಲಿಬಿಲಿಯನ್ನೂ ಎಬ್ಬಿಸದೆ, ಈ ವಿಚಾರದಲ್ಲಿ ಮುಂದುವರಿಯುವ ಮೊದಲು ಈ ಎಲ್ಲ 143 ಅಹವಾಲುಗಳ ಕುರಿತಾಗಿ ಕೇಂದ್ರ ಸರಕಾರದ ವಿವರಣೆ ಬೇಕೆಂದಿತು. ಇದಕ್ಕೆ ಅಟೊರ್ನಿ ಜನರಲ್ ಸಾಹೇಬರು ಈ ಎಲ್ಲ ಅಹವಾಲುಗಳನ್ನು ಪರಿಶೀಲಿಸಲು ನಾಲ್ಕಾರು ವಾರಗಳ ವೇಳೆ ಕೇಳಿದರು. ಅದನ್ನು ಒಪ್ಪಿ ಕೇಂದ್ರ ಸರಕಾರಕ್ಕೆ ನಾಲ್ಕು ವಾರಗಳ ಗಡುವು ನೀಡಿದ ನ್ಯಾಯಲಯ ಈ ನಾಲ್ಕು ವಾರಗಳ ಕಾಲದಲ್ಲಿ ಈ ಕಾಯಿದೆ ಅನ್ವಯವಾಗದಂತೆ ತಡೆ ಕೇಳಿದ ಹಲವಾರು ಹಿರಿಯ ನ್ಯಾಯವಾದಿಗಳ ಅರ್ಜಿಗಳನ್ನು ತಿರಸ್ಕರಿಸಿದ್ದು ಈಗಿನ ಸಂದರ್ಭದಲ್ಲಿ ಯಾರಿಗೂ ಆಶ್ಚರ್ಯವನ್ನು ಉಂಟು ಮಾಡಿದಂತೆ ತೋರಲಿಲ್ಲ. ಇವೆಲ್ಲ ನಾವೆಲ್ಲ ಅಂದುಕೊಂಡಂತೆ ನಡೆದ ವಿದ್ಯಮಾನಗಳು.

ನ್ಯಾಯಾಂಗದ ಪ್ರಕ್ರಿಯೆಗಳು ಬರಿ ಕಾನೂನಿನ ಚೌಕಟ್ಟಿಗೆ ಸೀಮಿತವಾಗಿರುತ್ತವೆಯೆಂಬ ಮಾತು ಸರ್ವೋಚ್ಚ ನ್ಯಾಯಾಲಕ್ಕೆ ಅನ್ವಯವಾಗಬೇಕು. ಆದರೆ ವಿಚಾರಣೆಯ ಸಂದರ್ಭದಲ್ಲಿ ಬಿತ್ತರಿಸಲ್ಪಡುವ ಹಲವಾರು ಪ್ರಕ್ರಿಯೆಗಳು ಮತ್ತು ಪ್ರತಿಕ್ರಿಯೆಗಳು ಈ ಚೌಕಟ್ಟನ್ನು ಮೀರಿದ ಗ್ರಹಿಕೆಗಳಾಗಿ ತೋರುವುದರಲ್ಲಿ ಯಾವ ಅಶ್ಚರ್ಯವೂ ಇಲ್ಲ.

ನ್ಯಾಯಾಲಯದ ಅಂಗಳಗಳಲ್ಲಿ ನಡೆಯುವ ಹೆಚ್ಚಿನ ವಿದ್ಯಮಾನಗಳೆಲ್ಲ ಗ್ರಹಿಕೆ ಮತ್ತು ತಂತ್ರಗಾರಿಗೆಯ ಮೇಲೆ ಅವಲಂಬಿತವಾಗಿರುತ್ತವೆ ಎಂಬುದರ ಬಗ್ಗೆ ಸಾಕಷ್ಟು ಲೇಖನಗಳು ಮತ್ತು ಚರ್ಚೆಗಳು ನಡೆದಿವೆ. ಇನ್ನು ಮುಂದೆಯೂ ಇಂತಹ ಪ್ರಮುಖ ಕಟ್ಟಳೆಗಳ ಕುರಿತಾಗಿ ಈ ಬಗೆಯ ಚರ್ಚೆಗಳು ನಡೆಯುತ್ತಲಿರುತ್ತವೆ ಎಂಬುದರ ಬಗ್ಗೆ ಅನುಮಾನ ಬೇಡ. ಹಾಗಾದರೆ ಈ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ 143 ಅಹವಾಲುಗಳನ್ನು ಸರ್ವೋಚ್ಚ ನ್ಯಾಯಾಲದಲ್ಲಿ ಇಷ್ತ್ತೊಂದು ರಾಜಕೀಯ ಮತ್ತು ಇತರ ಜನಸಂಘಟನೆಗಳು ಹಾಕಿದ್ದು ಸಹ ಒಂದು ಬಗೆಯತಂತ್ರಗಾರಿಕೆಯ ಪರಿಯೇ ಎಂಬುದರ ಬಗ್ಗೆ ವಿವೇಚಿಸಬೇಕಾದ ಅಗತ್ಯ ಈಗ ಕಾಣುತ್ತಿಲ್ಲ. ಆದರೆ, ಅದು ದೇಶದ ಹಲವಾರು ಜನಸಮುದಾಯಗಳ ಮಾನಸಿಕ ಆತಂಕವನ್ನು ಸ್ಪಷ್ಟಪಡಿಸುತ್ತದೆ. ಇದಕ್ಕೆ ನ್ಯಾಯಾಂಗ ಯಾವ ರೀತಿಯಲ್ಲಿ ಮತ್ತು ಎಷ್ಟರ ಮಟ್ಟಿಗೆ ಸ್ಪಂದಿಸಬೇಕೆಂಬುದರ ಬಗೆಗೂ ವಿವೇಚನೆಯ ಅಗತ್ಯವಿದೆ. ಯಾಕೆಂದರೆ ಎಲ್ಲವೂ ಮುಗಿದಾಗ ಸತ್ತೆಯ ಶಕ್ತಿಗೆ ಕಡಿವಾಣ ಹಾಕಬಲ್ಲದ್ದು ಸಕ್ರಿಯವಾದ ನ್ಯಾಯಾಂಗ ಎಂಬುದರ ಬಗ್ಗೆ ಎರಡು ಮಾತಿಲ್ಲ.

ದೆಹಲಿಯ ಭಗವಾನ ದಾಸ್ ರಸ್ತೆಯಲ್ಲಿರುವ ನ್ಯಾಯಾಂಗದ ಉನ್ನತ ಶಿಖರವಾದ ಸರ್ವೋಚ್ಚ ನ್ಯಾಯಾಲಯದ ಅಂಗಳವನ್ನು ಪ್ರವೇಶಿಸುವುದು ಸುಲಭವಾದ ಕೆಲಸವಲ್ಲ. ಎಲ್ಲ ಪ್ರಮುಖ ರಾಜಕೀಯ ಸಮಸ್ಯೆಗಳು ಒಂದಲ್ಲ ಒಂದು ಬಗೆಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಸಿಲುಕಿಕೊಂಡ ಸಮಸ್ಯೆಗಳೇ ಆಗಿರುತ್ತವೆ. ಹೀಗಾಗಿ ನಮ್ಮ ಸುಪ್ರಿಂ ಕೋರ್ಟು ದೇಶದ ಎಲ್ಲ ಜಟಿಲ ಸಮಸ್ಯೆಗಳನ್ನು ಬಗೆಹರಿಸುವ ಕೊನೆಯ ಅಸ್ತ್ರವಾಗಿ ಪರಿಣಮಿಸಿದೆ.

ಅನತಿ ದೂರದಲ್ಲೇ ದೇಶದ ಉನ್ನತ ಸಾಂಸ್ಕತಿಕ ಸಂಸ್ಥೆಗಳ ಸಮುಚ್ಚಯವಾದ ‘ಮಂಡಿ ಹೌಸ್’… ಇವೆಲ್ಲದರ ನಡುವೆ ನಿಂತ ಈ ‘ಸುಪ್ರಿಂ ಕೋರ್ಟು’ ಸಂವಿಧಾನ ಹಾಕಿಕೊಟ್ಟ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಾಮರಸ್ಯಗಳನ್ನು ಹಿಡಿದಿಡುವ ಜವಾಬ್ದಾರಿಯನ್ನು ಹೊಂದಿದೆ.

ಹೊಸ ದೆಹಲಿ ಮತ್ತು ಹಳೆ ದೆಹಲಿಯನ್ನು ಜೋಡಿಸುವ ಕೊಂಡಿಯಂತಿರುವ ಸರ್ವೋಚ್ಚ ನ್ಯಾಯಾಲಯ ಬಹದೂರ ಷಾ ಜಾಫರ್ (ಆತ ಚಾರಿತ್ರಿಕವಾಗಿ ಮೊಗಲರ ಆಳ್ವಿಕೆಯ ಕೊನೆಯ ಅರಸ ಮತ್ತು 1857ರ ನಮ್ಮ ದೇಶದ ಮೊದಲ ಸ್ವಾತಂತ್ರ್ಯ ಹೋರಾಟದ ನಂತರ ಆಗಿನ ವಸಹಾತುಶಾಹಿ ಬ್ರಿಟಿಶರಿಂದ ಬರ್ಮಾಕ್ಕೆ ಸೆರೆಯಾಳಾಗಿ ರವಾನಿಸಲ್ಪಟ್ಟವನು) ರಸ್ತೆಯನ್ನು ತನ್ನ ಹಿಂಬದಿಗೆ, ದೆಹಲಿಯ ಪ್ರಸಿದ್ಧ ಪ್ರಗತಿ ಮೈದಾನದ ಗಡಿಬಿಡಿಯನ್ನು ಪಕ್ಕದಲ್ಲಿ ಇರಿಸಿಕೊಂಡಿದೆ. ಅನತಿ ದೂರದಲ್ಲೇ ದೇಶದ ಉನ್ನತ ಸಾಂಸ್ಕತಿಕ ಸಂಸ್ಥೆಗಳ ಸಮುಚ್ಚಯವಾದ ‘ಮಂಡಿ ಹೌಸ್’… ಇವೆಲ್ಲದರ ನಡುವೆ ನಿಂತ ಈ ‘ಸುಪ್ರಿಂ ಕೋರ್ಟು’ ಸಂವಿಧಾನ ಹಾಕಿಕೊಟ್ಟ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಾಮರಸ್ಯಗಳನ್ನು ಹಿಡಿದಿಡುವ ಜವಾಬ್ದಾರಿಯನ್ನು ಹೊಂದಿದೆ. ಅದಕ್ಕಾಗಿಯೇ ಈ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಸಂವಿಧಾನದ ತಕ್ಕಡಿಯಲ್ಲಿಟ್ಟು ತೂಗುವ ಕೆಲಸವನ್ನು ಸರ್ವೋಚ್ಚ ನ್ಯಾಯಾಲಯ ಮಾಡಬೇಕಿದೆ.

ಅದರಲ್ಲೂ ಈ ಪೌರತ್ವ ತಿದ್ದುಪಡಿ ಕಾಯಿದೆ ಸಂಸತ್ತಿನಲ್ಲಿ ಸಲೀಸಾಗಿ ಸಾಗಿಬಂದು ರಾಷ್ಟ್ರೀಯ ಪೌರತ್ವ ನೋಂದಣಿಯ ಜೊತೆಜೊತೆಯಾಗಿ ಅದನ್ನು ಊರ್ಜಿತಗೊಳಿಸಲಾಗುವುದು ಎಂಬ ಗೃಹ ಮಂತ್ರಿಗಳ ಸಂಸತ್ತಿನಲ್ಲಿನ ಖಡಾಖಡಿ ಹೇಳಿಕೆ ದೇಶದ ತುಂಬ ಪರ ಮತ್ತು ವಿರೋಧದ ಪ್ರತಿಭಟನೆಯ ಬಿರುಗಾಳಿಯನ್ನು ಎಬ್ಬಿಸಿದೆ. ಈ ಬಿರುಗಾಳಿಯ ಬಿರುಸನ್ನು ಹಿಡಿದಿಡುವ ಕೆಲಸ ಸುಲಭವಾದ್ದಲ್ಲ. ನಮ್ಮ ದೇಶದ ಪೌರತ್ವದ ಹಿನ್ನಲೆಯನ್ನು ದಕ್ಷಿಣ ಏಷಿಯಾದ ಭೌಗೋಳಿಕ ಮತ್ತು ಚಾರಿತ್ರಿಕ ಹಿನ್ನಲೆಯಲ್ಲೇ ನೋಡಬೇಕು.

1947ರ ಭಾರತದ ವಿಭಜನೆಯು ಸೃಷ್ಟಿಸಿದ ಜನಸಮುದಾಯಗಳ ಸ್ಥಳಾಂತರದ ವಿಚಾರಗಳನ್ನು ಮತ್ತು ಅವರೆಲ್ಲರ ಪೌರತ್ವದ ಮೂಲಮಂತ್ರಗಳನ್ನು ನಮ್ಮ ಸಂವಿಧಾನದಲ್ಲಿನ ಎರಡನೆಯ ಭಾಗದಲ್ಲಿರುವ ಅನುಚ್ಚೇದ 5 ರಿಂದ 11 ರವರೆಗೆ ನಮೂದಿಸಲಾಗಿದೆ. ಸಂವಿಧಾನದ ಈ ಭಾಗದಲ್ಲಿ ಅತ್ತ ಪಾಕಿಸ್ತಾನದತ್ತ ನಿರ್ದಿಷ್ಟವಾದ ಕಾಲಕ್ರಮದಲ್ಲಿ ಹೋದವರಾರು, ಅತ್ತಲಿಂದ ಇತ್ತ ಬಂದವರಾರು, ಅವರು ಯಾವ ದಿನಾಂಕದೊಳಕ್ಕೆ ಇತ್ತ ಬಂದಿರಬೇಕು, ಒಮ್ಮೆ ಬರಲಾಗದಿದ್ದರೆ,ನಂತರ ಬಂದಿದ್ದರೆ, ಅವರ ಅಪ್ಪ ಅಮ್ಮ ಮತ್ತು ಕುಟುಂಬದವರು ನಮ್ಮ ದೇಶದಲ್ಲೇ ಇದ್ದರೆ, ಹುಟ್ಟಿದ್ದರೆ… ಈ ಎಲ್ಲ ಸನ್ನಿವೇಶಗಳಲ್ಲಿ ಅವರೆಲ್ಲರ ಪೌರತ್ವದ ಹಕ್ಕು ಏನಾಗುತ್ತದೆಯೆಂಬುದನ್ನು ನಮ್ಮ ಸಂವಿಧಾನವೇ ನಿರ್ಧರಿಸುತ್ತದೆ; ಅನುಚ್ಚೇದ 11ರಲ್ಲಿ ಈ ಎಲ್ಲವನ್ನು ಸುಲಲಿತವಾಗಿ ಊರ್ಜಿತಗೊಳಿಸಲು ಪೌರತ್ವ ಕಾಯಿದೆಯನ್ನು ಸಂಸತ್ತು ತರಬೇಕು ಎಂದು ತಾಕೀತುಗೊಳಿಸುತ್ತದೆ. ಅದರಂತೆ 1955ರಲ್ಲಿ ನಮ್ಮ ಸಂಸತ್ತು ಪೌರತ್ವ ಕಾಯಿದೆಯನ್ನು ತಂದಿತು. ಈ ಕಾಯಿದೆಯಲ್ಲಿ ಪೌರತ್ವದ ಕುರಿತಾಗಿ ಎಲ್ಲ ಅಂಶಗಳೂ ಇವೆ. ಅದು ವಿವರವಾಗಿ, ಯಾರು ನಮ್ಮ ದೇಶದ ಪೌರರು, ಹೇಗೆ ನಮ್ಮ ದೇಶದ ಪೌರತ್ವವನ್ನು ಪಡೆಯಬಹುದು ಮತ್ತು ಯಾವ ಯಾವ ಬಗೆಯಲ್ಲಿ ಪಡೆಯಬಹುದು, ಹೇಗೆ ನಮ್ಮ ದೇಶದ ಪೌರತ್ವವನ್ನು ಬಿಡಬಹುದು, ಪೌರತ್ವವನ್ನು ನೀಡಲು ಸರಕಾರಕ್ಕಿರುವ ಎಲ್ಲ ಸಾಧ್ಯತೆಗಳು ಮತ್ತು ಅದರ ನಿರ್ಧಾರವೇ ಅಂತಿಮವಾದದ್ದು… ಇತ್ಯಾದಿ ವಿವರಗಳು ಅದರಲ್ಲಿ ಮೂಡಿಬಂದಿವೆ.

ವಾಜಪೇಯಿ ಸರಕಾರದ ಕಾಲದಲ್ಲಿ ಬಂದ 2003ರ ಬದಲಾವಣೆ ‘ಅಕ್ರಮ ವಲಸೆಗಾರರು’ ಎಂಬ ಹೊಸ ಶಬ್ದಾವಳಿಯನ್ನು ಪೌರತ್ವ ಕಾಯಿದೆಯಲ್ಲಿ ಸೇರಿಸಿತು

ನಂತರದಲ್ಲಿ ಈ ಕಾಯಿದೆಯನ್ನು ಊರ್ಜಿತಗೊಳಿಸಲು ಕಾಲಕಾಲಕ್ಕೂ ಅದಕ್ಕೆ ತಿದ್ದುಪಡಿಗಳನ್ನು ಮತ್ತು ನಿಯಮಗಳನ್ನು ಕೇಂದ್ರ ಸರಕಾರವೇತಂದಿತು. ಅಸ್ಸಾಂನಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು 1985 ಮತ್ತು 1986ರಲ್ಲಿ ಪೌರತ್ವ ಕಾಯಿದೆಗೆ ಹೊಸ ಭಾಗಗಳನ್ನು ಸೇರಿಸಲಾಯಿತು. ಈಗ ಅಸ್ಸಾಂನಲ್ಲಿ ನಡೆಯುತ್ತಿರುವ ಪೌರತ್ವ ಗಣತಿ ಈ ತಿದ್ದುಪಡಿಗಳಿಂದಲೇ ಬಂದಿದ್ದು. ವಾಜಪೇಯಿ ಸರಕಾರದ ಕಾಲದಲ್ಲಿ ಬಂದ 2003ರ ಬದಲಾವಣೆ ‘ಅಕ್ರಮ ವಲಸೆಗಾರರು’ ಎಂಬ ಹೊಸ ಶಬ್ದಾವಳಿಯನ್ನು ಪೌರತ್ವ ಕಾಯಿದೆಯಲ್ಲಿ ಸೇರಿಸಿತು. ಯಾರು ನಮ್ಮ ದೇಶದ ಒಳಗೆ ಸರಿಯಾದ ಮತ್ತು ನಿರ್ದಿಷ್ಟವಾದ ಗುರುತು ಕಾಗದಪತ್ರಗಳನ್ನು ಹೊಂದಿಲ್ಲವೋ ಅವರನ್ನು ‘ಅಕ್ರಮ ವಲಸೆಗಾರರು’ ಎಂದು ಪರಿಗಣಿಸಲಾಗುವುದು ಮತ್ತು ಅವರನ್ನು ವಿದೇಶಿಗರು ಎಂದು ಪರಿಗಣಿಸಿಲಾಗುವುದು. ಈ ‘ವಿದೇಶಿ’ ಗಳನ್ನು ವಿದೇಶಿಗಳ ಕಾಯಿದೆ- 1946ರ ಅಡಿಯಲ್ಲಿ ಬಂಧನದಲ್ಲಿರಿಸಲಾಗುವುದು ಎಂಬ ಕಾನೂನಿನ ಚೌಕಟ್ಟನ್ನು ಕಟ್ಟಲಾಯಿತು.

ಇವೆಲ್ಲ ಪೌರತ್ವದ ಕಾನೂನುಗಳು, ತಿದ್ದುಪಡಿಗಳು ಹೆಚ್ಚಿನಂಶ ಅಸ್ಸಾಂ ಮತ್ತು ಅಲ್ಲಿನ ಅಕ್ಕಪಕ್ಕದ ರಾಜ್ಯಗಳ ಕುರಿತಾಗಿ ಇದ್ದವು. ಇನ್ನೂ ಮುಖ್ಯವಾಗಿ, ಯಾರು ‘ಅಕ್ರಮ ವಲಸೆಗಾರರು’ ಎಂಬ ತಲೆಪಟ್ಟಿಗೆ ಒಳಗಾಗುತ್ತಾರೊ ಅವರೆ ತಾನು ಈ ಪಟ್ಟಿಗೆ ಸೇರಿದವನಲ್ಲ ಎಂಬ ಪುರಾವೆಗಳನ್ನು ಒದಗಿಸಿಕೊಡಬೇಕು; ಸರಕಾರ ಯಾವುದೇ ಕಾರಣಕ್ಕೂ ಇದಕ್ಕೆ ಬಾಧ್ಯಸ್ಥವಲ್ಲ ಎಂಬುದು 1946ರ ವಿದೇಶಿಗರ ಕಾಯಿದೆಯ ಇನ್ನೊಂದು ಪ್ರಮುಖವಾದ ಅಂಶ. ಇದರಿಂದಾಗಿ ಈ ಎಲ್ಲ ಪುರಾವೆಗಳ ಬಗ್ಗೆ ಏನೂ ಅರಿವಿಲ್ಲದ ನಮ್ಮ ದೇಶದ ಬಡ ಮತ್ತು ಅಶಿಕ್ಷಿತ ನಾಗರಿಕರು ನಿರಂತರವಾಗಿ ಬಂಧನಕ್ಕೊಳಗಾಗುತ್ತಿರುವುದು ಈ ಕಟ್ಟಳೆಯ ಇನ್ನೊಂದು ವಿಪರ್ಯಾಸ.

ತಿದ್ದುಪಡಿಯ ಪ್ರಮುಖ ಉದ್ದೇಶವನ್ನು ಸಂಸತ್ತಿನಲ್ಲಿ ಮಂಡಿಸುತ್ತ ಗೃಹಮಂತ್ರಿಗಳು ಈ ಮೂರು ದೇಶಗಳಲ್ಲಿ ಧಾರ್ಮಿಕ ಅಸಹಿಷ್ಣುತೆಗೆ ಒಳಗಾದ ಮತ್ತು ಒಳಗಾಗುವ ಈ ಎಲ್ಲ ಧರ್ಮಗಳ ಜನಸಮುದಾಯದವರಿಗೆ ನಮ್ಮ ದೇಶದ ಪೌರತ್ವವನ್ನು ನೀಡುವ ನಿಟ್ಟಿನಲ್ಲಿ ಈ ಕಾಯಿದೆಯನ್ನು ತಂದಿದ್ದೆಂದು ಸಮರ್ಥಿಸಿಕೊಂಡರು.

ಇವೆಲ್ಲದರ ನಡುವೆ ಬಂದ ಬರೀ ಎರಡು ಪುಟಗಳ 2019ರ ಪೌರತ್ವ ತಿದ್ದುಪಡಿ ಕಾಯಿದೆ ಆಫಘಾನಿಸ್ತಾನ, ಪಾಕಿಸ್ತಾನ ಮತ್ತು ಬಂಗ್ಲಾದೇಶದಿಂದ ಭಾರತಕ್ಕೆ 31 ಡಿಸೆಂಬರ 2014 ರಂದು ಮತ್ತು ಅದಕ್ಕೂ ಮೊದಲು ಬಂದ ಹಿಂದು, ಸಿಕ್ಕ್, ಬೌದ್ಧ, ಜೈನರು, ಪಾರ್ಸಿಗಳು ಮತ್ತು ಕ್ರಿಸ್ತಿಯನ್ನರನ್ನು ‘ಅಕ್ರಮ ವಲಸೆಗಾರರು’ ಎಂದು ಪರಿಗಣಿಸಲಾಗುವುದಿಲ್ಲ ಎಂದಿತು. ಅಂದರೆ, ಅವರ ಬಳಿ (ಈ ನಿರ್ದಿಷ್ಟ ಧರ್ಮಕ್ಕೆ ಸೇರಿದವರಬಳಿ) ನಿಗದಿತ ಗುರುತು, ಕಾಗದ ಪತ್ರಗಳು ಮತ್ತು ಪಾಸ್‍ಪೋರ್ಟು ಇತ್ಯಾದಿ ಇಲ್ಲದಿದ್ದರೂ ಅವರನ್ನು ‘ಅಕ್ರಮ ವಲಸೆಗಾರರು’ ಎಂದು ಪರಿಗಣಿಸಲಾಗುವುದಿಲ್ಲ ಎಂಬ ತಿದ್ದುಪಡಿಯನ್ನು ಪೌರತ್ವ ಕಾನೂನಿಗೆ ಮಾಡಲಾಯಿತು. ಈ ಧರ್ಮಗಳ ಪಟ್ಟಿಯಲ್ಲಿ ಇಸ್ಲಾಂ ಅನ್ನು ಬಿಟ್ಟ ಬಗ್ಗೆ ಸಂಸತ್ತಿನಲ್ಲಿ ಗ್ರಹಮಂತ್ರಿಗಳು ನೀಡಿದ ಕಾರಣವೆಂದರೆ ಈ ಮೂರು ದೇಶಗಳಲ್ಲಿ ಇಸ್ಲಾಂ ಮತದವರು ಬಹುಮತದಲ್ಲಿರುವುದರಿಂದ ಈ ಧರ್ಮವನ್ನು ಹೆಸರಿಸಿಲ್ಲ ಎನ್ನಲಾಗಿದೆ. ಈ ತಿದ್ದುಪಡಿಯ ಪ್ರಮುಖ ಉದ್ದೇಶವನ್ನು ಸಂಸತ್ತಿನಲ್ಲಿ ಮಂಡಿಸುತ್ತ ಗೃಹಮಂತ್ರಿಗಳು ಈ ಮೂರು ದೇಶಗಳಲ್ಲಿ ಧಾರ್ಮಿಕ ಅಸಹಿಷ್ಣುತೆಗೆ ಒಳಗಾದ ಮತ್ತು ಒಳಗಾಗುವ ಈ ಎಲ್ಲ ಧರ್ಮಗಳ ಜನಸಮುದಾಯದವರಿಗೆ ನಮ್ಮ ದೇಶದ ಪೌರತ್ವವನ್ನು ನೀಡುವ ನಿಟ್ಟಿನಲ್ಲಿ ಈ ಕಾಯಿದೆಯನ್ನು ತಂದಿದ್ದೆಂದು ಸಮರ್ಥಿಸಿಕೊಂಡರು. ಇದನ್ನು ತಮ್ಮ ಸರಕಾರ ಮಾತ್ರವಲ್ಲ, ಹಿಂದಿನ ಎಲ್ಲ ಸರಕಾರಗಳೂ, ಮಹಾತ್ಮಾ ಗಾಂಧಿ, ನೆಹರೂ, ಮನಮೋಹನ ಸಿಂಗ್ ಆದಿಯಾಗಿ ಎಲ್ಲರೂ ಧಾರ್ಮಿಕ ಕಿರುಕುಳಕ್ಕೊಳಗಾದವರಿಗೆ ಭಾರತದ ಸಹಾನುಭೂತಿ ಮತ್ತು ಸಹಾಯಹಸ್ತ ನೀಡುವ ಬಗ್ಗೆ ಹೇಳಿದ್ದನ್ನು ಸಂಸತ್ತಿನಲ್ಲಿ ತಿಳಿಸಿದರು. ಇನ್ನೂ ಮುಂದುವರೆದು, ಗೃಹಮಂತ್ರಿಗಳು ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿಯ ಕಾರ್ಯಕ್ರಮವನ್ನು ಊರ್ಜಿತಗೊಳಿಸಲಾಗುವುದೆಂದರು.

ಒಟ್ಟಾರೆ ಗ್ರಹಮಂತ್ರಿಗಳ ಈ ಎಲ್ಲ ಹೇಳಿಕೆಗಳನ್ನು ಕ್ರೋಡೀಕರಿಸಿ ನೋಡಿದರೆ, ಈ 2019ರ ಈ ತಿದ್ದುಪಡಿ ಕಾಯಿದೆಯ ಪ್ರಕಾರ ಸರಿಯಾದ ಕಾಗದ ಪತ್ರಗಳಿಲ್ಲದ (ಮತ್ತು ನಂತರದ ರಾಷ್ಟ್ರೀಯ ಪೌರತ್ವ ನೋಂದಣಿಯ ಪ್ರಕಾರ) ನಮ್ಮ ದೇಶದ ಮುಸ್ಲಿಂ ಬಾಂಧವರು ಈ ತಿದ್ದುಪಡಿಯ ಧಾರ್ಮಿಕ ಪಟ್ಟಿಯಲ್ಲಿ ಅವರ ಹೆಸರಿಲ್ಲದ ಕಾರಣ ‘ಅಕ್ರಮ ವಲಸೆಗಾರರ’ ಪಟ್ಟಿಗೆ ಸೇರಿಬಿಡುತ್ತಾರೆ. ಗೃಹಮಂತ್ರಿಗಳ ಮತ್ತು ಕೇಂದ್ರ ಸರಕಾರದ ಹೇಳಿಕೆಯ ಪ್ರಕಾರ ಈ ತಿದ್ದುಪಡಿ ಪೌರತ್ವವನ್ನು ನೀಡುವ ಕಾನೂನು, ಪೌರತ್ವವನ್ನು ಸೆಳೆದುಕೊಳ್ಳುವ ಕಾನೂನಲ್ಲ ಮತ್ತು ಇದರಿಂದ ಯಾರ ನಾಗರಿಕತೆಯ ಹಕ್ಕಿನ ಬಗ್ಗೆ ಪ್ರಶ್ನೆಯೆ ಇಲ್ಲ.

ಈ ತಿದ್ದುಪಡಿ ಮೊಟ್ಟಮೊದಲ ಬಾರಿಗೆ ಪೌರತ್ವ ಕಾನೂನಿನಲ್ಲಿ ಧಾರ್ಮಿಕ ಅಂಶಗಳನ್ನು ಸೇರಿಸಿತು. ಇದು ಸಂವಿಧಾನದ ಮೂಲಭೂತ ಅಂಶಗಳನ್ನು ಕಡೆಗಣಿಸುವುದರ ಜೊತೆಗೆ ಅದರ ಅನುಚ್ಚೇದ 14 (ಎಲ್ಲರ ಸಮಾನತೆ), 21 (ಎಲ್ಲರ ಜೀವನ ಮತ್ತು ಆಸ್ತಿಯನ್ನು ಕಾನೂನುರೀತ್ಯಾ ರಕ್ಷಿಸುವುದು) ಮತ್ತು 25 (ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆ) ಗಳಿಗೆ ನೇರವಾದ ಸವಾಲನ್ನೊಡ್ಡಿದೆ. ಅಕ್ಕಪಕ್ಕದ ದೇಶಗಳಲ್ಲಿ ಹಲವಾರು ಕಾರಣಗಳಿಂದಾಗಿ, ಮುಖ್ಯವಾಗಿ ‘ಧಾರ್ಮಿಕ ಅಸಹಿಷ್ಣುತೆ’ಯಿಂದ ನೊಂದವರಿಗಾಗಿ ಮಾಡಿದ ಕಾಯಿದೆಯಿದು ಎಂಬ ಸಮಜಾಯಿಷಿಯನ್ನು ಸರಕಾರ ನೀಡಿದರೂ ಅದು ಹೆಚ್ಚಿನ ಪ್ರಶ್ನೆಗಳನ್ನು ಎಬ್ಬಿಸಿತೇ ಹೊರತು ಉತ್ತರವನ್ನು ನೀಡಲಿಲ್ಲ.

ಕೈಯಲ್ಲಿ ಕೆಲವು ದಾಖಲೆಗಳು ಇರದ ಕಾರಣ ಅವರನ್ನು ಇನ್ನಾವುದೊ ದೇಶದಿಂದ ಬಂದವರೆಂದು ಪರಿಗಣಿಸುವುದು ಎಷ್ಟು ಸೂಕ್ತ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.

ಈ ತಿದ್ದುಪಡಿ ಕಾಯಿದೆಯಲ್ಲಿ ಎಲ್ಲೂ ‘ಧಾರ್ಮಿಕ ಅಸಹಿಷ್ಣುತೆ’ ಎಂಬ ಶಬ್ದಾವಳಿಯ ಪ್ರಯೋಗವೇ ಇಲ್ಲ. ಅದಲ್ಲದೆ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ‘ವಲಸೆಗಾರ’ರನ್ನು ‘ನಿರಾಶ್ರಿತ’ರನ್ನು ಬೇರೆಬೇರೆ ಕಾನೂನಿನ ಚೌಕಟ್ಟಿನಲ್ಲಿ ನೋಡಲಾಗುತ್ತದೆ. ಯಾಕೆಂದರೆ ವಲಸೆಗಾರರು ನಿರಾಶ್ರಿತರಲ್ಲ. ವಲಸೆಗಾರರು ಕೆಲಸದ ಮತ್ತು ತಮ್ಮ ಶ್ರಮದ ಪರಿಯಿಂದಾಗಿ ಒಂದು ದೇಶದ ಆರ್ಥಿಕ ವ್ಯವಸ್ಥೆಗೆ ತಮ್ಮ ಅಮೂಲ್ಯವಾದ ಕಾಣಿಕೆಯನ್ನು ನೀಡುತ್ತಾರೆ. ಅವರ ಕೈಯಲ್ಲಿ ಕೆಲವು ದಾಖಲೆಗಳು ಇರದ ಕಾರಣ ಅವರನ್ನು ಇನ್ನಾವುದೊ ದೇಶದಿಂದ ಬಂದವರೆಂದು ಪರಿಗಣಿಸುವುದು ಎಷ್ಟು ಸೂಕ್ತ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಹೀಗಾಗಿ ನಮ್ಮ ಪೌರತ್ವದ ಕಾಯಿದೆಯಲ್ಲಿ ಈ ಬಗೆಯ ಚೌಕಟ್ಟುಗಳನ್ನು ಹಾಕಿಕೊಳ್ಳುವುದು ಹಲವಾರು ಕಾನೂನಿನ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.

ಇವೆಲ್ಲವನ್ನೂ ಸರ್ವೋಚ್ಚ ನ್ಯಾಯಾಲಯ ಗಮನಿಸಬೇಕಿದೆ. ಏತನ್ಮಧ್ಯೆ, ಈ ತಿದ್ದುಪಡಿ ಕಾಯಿದೆಯು ನೆಲದ ಮೇಲೆ ಹಬ್ಬಿಸಬಹುದಾದ ಕರಾಳ ರೂಪಗಳನ್ನು ಹಿಡಿದಿಡಬೇಕಾದ ಅಗತ್ಯವಿದೆ. ಈ ಕಾರಣಕ್ಕಾಗಿ ಕೆಲವು ಜನಸಮುದಾಯಗಳಲ್ಲಿ ಒಂದು ಬಗೆಯ ಅಭದ್ರತೆ ಮತ್ತು ಅಪನಂಬಿಕೆಯ ವಾತಾವರಣ ಸೃಷ್ಟಿಯಾಗುತ್ತಿರುವ ಹಿನ್ನೆಲೆಯನ್ನು ಮುಂದಿನ ವಿಚಾರಣಾ ಕಾಲದಲ್ಲಿ ನಮ್ಮ ಸರ್ವೋಚ್ಚ ನ್ಯಾಯಾಲಯ ಗಣನೆಗೆ ತೆಗೆದುಕೊಳ್ಳಬೇಕಾದದ್ದು ಅನಿವಾರ್ಯವಾಗಬಹುದು. ಈಗ ನ್ಯಾಯಾಲಯದ ಎದುರಿರುವ 143 ಅಹವಾಲುಗಳು ಸಂವಿಧಾನದ ಅನುಚ್ಚೇದ 32ರ ಮೂಲಕ ನೇರವಾಗಿ ಬಂದವಾದರೆ, ಕೇರಳ ಮತ್ತು ಛತ್ತಿಸಗಡ ರಾಜ್ಯಗಳು ಅನುಚ್ಚೇದ 131ರ ಅಡಿಯಲ್ಲಿ (ಕೇಂದ್ರ ಮತ್ತು ರಾಜ್ಯಗಳ ನಡುವೆ ಮತ್ತು ರಾಜ್ಯ-ರಾಜ್ಯಗಳ ನಡುವಿನ ಬಿಕ್ಕಟ್ಟುಗಳ ಕುರಿತಾಗಿದ್ದದ್ದು) ಈ ತಿದ್ದುಪಡಿಯನ್ನು ನ್ಯಾಯಾಲಯದ ಮುಂದೆ ಪ್ರಶ್ನಿಸಿವೆ. ಹೀಗಾಗಿ ಈ ತಿದ್ದುಪಡಿಯ ಸಂವಿಧಾನಾತ್ಮಕತೆ ಕುರಿತಾದ ವಿಚಾರಗಳನ್ನು ಸಂಪೂರ್ಣವಾಗಿ ಪರಿಶೀಲಿಸುವ ಅನಿವಾರ್ಯತೆ ಈಗ ನ್ಯಾಯಂಗದ ಮೇಲಿದೆ. ಹಲವಾರು ವಿರೋಧ ಪಕ್ಷಗಳಿರುವ ರಾಜ್ಯಗಳು ಈ ತಿದ್ದುಪಡಿಯ ಕುರಿತಾಗಿ ತಮ್ಮ ವಿಧಾನಸಭೆಗಳಲ್ಲಿ ಅಸಮ್ಮತಿಗಳನ್ನು ಸೂಚಿಸಿ ನಿರ್ಣಯಗಳನ್ನು ತೆಗೆದುಕೊಂಡಿವೆ.

ಜಗತ್ತಿನ ಅತಿ ದೊಡ್ಡ ಗಣತಂತ್ರ ಯಾವ ರೀತಿಯಲ್ಲಿ ತನ್ನ ಪೌರತ್ವದ ಕಾನೂನುಗಳನ್ನು ರೂಪಿಸುವುದು ಎಂಬುದರ ಬಗ್ಗೆ ಇಡೀ ಜಗತ್ತು ಕುತೂಹಲದಿಂದ ನೋಡುತ್ತಿದೆ.

ಮುಂಬರುವ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಯಾವ ದಿಕ್ಕಿನತ್ತ ಸಾಗಬಹುದೆಂಬುದರ ಬಗ್ಗೆ ಮುಖ್ಯ ನ್ಯಾಯಾಧೀಶರು ಜನವರಿ 22ರಂದು ಆಡಿದ ಮಾತುಗಳಿಂದ ಸೂಚನೆಗಳು ಗೋಚರವಾಗುತ್ತಿವೆ. ಈ ತಿದ್ದುಪಡಿ ಕುರಿತಾದ ವಿಚಾರಗಳಲ್ಲಿ ಹಲವಾರು ಗಮನೀಯವಾದ ಸಂವಿಧಾನಾತ್ಮಕ ಅಂಶಗಳಿರುವುದರಿಂದ ಮತ್ತು ಹಿಂದಿನ ಹಲವಾರು ತನ್ನದೇ ತೀರ್ಪುಗಳಲ್ಲಿ ವೈರುಧ್ಯ ಇರುವುದರಿಂದ ಐದು ನ್ಯಾಯಾಧೀಶರ ಸಂವಿಧಾನಾತ್ಮಕ ಪೀಠಕ್ಕೆ ಈ ವಿಚಾರಣೆಯನ್ನು ತೆಗೆದುಕೊಂಡು ಹೋಗುವುದರ ಬಗ್ಗೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅಂದರೆ 2019ರ ತಿದ್ದುಪಡಿಯ ಕಾನೂನಿನ ಯುದ್ಧ 2020ರಲ್ಲಿ ಮುಗಿಯುವ ಯಾವ ಲಕ್ಷಣಗಳು ಕಾಣಬರುತ್ತಿಲ್ಲ.

ಒಟ್ಟಾರೆ ಇದು ನಮ್ಮ ದೇಶದ ಚರಿತ್ರೆ, ಅದರಲ್ಲೂ ಪ್ರಮುಖವಾಗಿ ಎಪ್ಪತ್ತು ವಸಂತಗಳನ್ನು ಕಂಡ ನಮ್ಮ ಗಣತಂತ್ರ ಈಗ ತನ್ನ ನಿಜವಾದ ರೂಪವನ್ನು ಕಂಡುಕೊಳ್ಳಬೇಕಿದೆ. ಅಬ್ರಹಾಂ ಲಿಂಕನ್ ಕಾಲದಲ್ಲಿ ಅಮೆರಿಕೆಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಈ ಬಗೆಯ ಸವಾಲುಗಳನ್ನು ಆ ದೇಶ ಎದುರಿಸಬೇಕಾಗಿ ಬಂದದ್ದನ್ನು ನಾವು ನೆನಪಿಸಿಕೊಳ್ಳಬೇಕು. ಆದರೆ, ಒಂದು ವಿಚಾರವನ್ನು ನಮ್ಮ ಸರ್ವೋಚ್ಚ ನ್ಯಾಯಾಲಯ ಗಮನಿಸಬೇಕು: ಜಗತ್ತಿನ ಅತಿ ದೊಡ್ಡ ಗಣತಂತ್ರ ಯಾವ ರೀತಿಯಲ್ಲಿ ತನ್ನ ಪೌರತ್ವದ ಕಾನೂನುಗಳನ್ನು ರೂಪಿಸುವುದು ಎಂಬುದರ ಬಗ್ಗೆ ಇಡೀ ಜಗತ್ತು ಕುತೂಹಲದಿಂದ ನೋಡುತ್ತಿದೆ. ಇತ್ತೀಚೆಗಿನ ಡಾವೊಸ್ ವಲ್ರ್ಡ್ ಎಕನಾಮಿಕ್ ಫೋರಮ್ ಸಭೆಗಳಲ್ಲಿ ವ್ಯಕ್ತವಾಗುತ್ತಿರುವ ವಿಚಾರಗಳಿಂದ ನಮಗೆ ಇದರ ಅರಿವಾಗುತ್ತಿದೆ.

ಕಳೆದ ಎರಡು ದಶಕಗಳ ನಮ್ಮ ದೇಶದ ಆರ್ಥಿಕ ಬೆಳವಣಿಗೆಯ ಕಾರಣ ಮತ್ತು ನಮ್ಮ ಸಂವಿಧಾನದ ವಿಶಿಷ್ಟತೆಗಳಿಂದಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಜಗತ್ತಿನಾದ್ಯಂತ ಕಾನೂನು ಪಂಡಿತರು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂಬುದನ್ನು ನಾವು ಮರೆಯಬಾರದು.

* ಲೇಖಕರು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಕಾನೂನು ವಿಷಯದ ಪ್ರಾಧ್ಯಾಪಕರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು. 

Leave a Reply

Your email address will not be published.