ಸವಾಲಿಗೆ ತಾತ್ಕಾಲಿಕ ಜವಾಬು

ಸೋಂಕುರೋಗ ಪ್ರೇರೇಪಿಸಿದ ಆನ್ ಲೈನ್ ಕ್ರಾಂತಿ ಶಾಶ್ವತವೇ ಎಂಬ ಪ್ರಶ್ನೆಗೆ, ಅದಕ್ಕಿರುವ ತೊಡಕುಗಳನ್ನು ಪರಿಗಣಿಸಿ ಇಲ್ಲ ಎಂಬ ಒಂದು ಪದದ ಉತ್ತರ ಕೊಡಬಹುದು. ಆದರೆ ಬದಲಿ ಆಯ್ಕೆಯಾಗಿ ಆನ್ ಲೈನ್ ಕ್ರಾಂತಿ ಎನ್ನುವುದು ಸೋಂಕು ರೋಗ ಅನಿವಾರ್ಯವಾಗಿಸಿರುವ ಒಂದು ಬದಲಾವಣೆ. ಮನುಷ್ಯ ಮುಂದಿನ ಬದಲಾವಣೆಗೆ ಅಣಿಯಾಗುವವರೆಗೆ ಅದರ ಚಲಾವಣೆ.

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲಿಗೆ ಕೊರೊನಾ ಸೋಂಕು ಕಾಣಿಸಿಕೊಂಡು, ಇಡೀ ನಗರವನ್ನೇ ಅವರು ಸ್ಯಾನಿಟೈಸ್ ಮಾಡಿ, ಅಲ್ಲಿನ ಜನರೆಲ್ಲಾ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಮನೆಯ ಬಾಲ್ಕನಿಯಿಂದ ಇಣುಕುತ್ತಿರುವುದನ್ನು ಕಂಡಾಗ ಪ್ರಾಯಃ ಯಾರೊಬ್ಬರೂ ಈ ಸೋಂಕು ಇಷ್ಟೆಲ್ಲಾ ದೇಶಗಳಿಗೆ ಹಬ್ಬುತ್ತದೆ, ಮಾನವ ಸಂಕುಲವನ್ನು ತಬ್ಬಿಬ್ಬುಗೊಳಿಸುತ್ತದೆ ಎಂದು ಎಣಿಸಿರಲಿಲ್ಲ.

ಇದೀಗ ಕೊರೊನಾ ಸೋಂಕು ದೇಶ, ಭಾಷೆ, ಜನಾಂಗಗಳನ್ನು ನೋಡದೇ ಎಲ್ಲೆಡೆಯೂ ವ್ಯಾಪಿಸಿಕೊಂಡಿದೆ. ನಾವು ಭಾರತೀಯರು ಮೊದಲಿಗೆ `ಜನತಾ ಕರ್ಪ್ಯೂ’ ಆಚರಿಸಿ, ರಾಷ್ಟ್ರವ್ಯಾಪಿ ಲಾಕ್ ಡೌನ್ ಎಂದು ಮನೆಯಲ್ಲೇ ಕೂತು, ಕೊನೆಗೆ ಎಲ್ಲ ಪ್ರಯತ್ನಗಳೂ ಮುಗಿದ ಮೇಲೆ `ಕೊರೊನಾದೊಂದಿಗೆ ಎಚ್ಚರಿಕೆಯ ಸಹಬಾಳ್ವೆಯೊಂದೇ ನಮಗಿರುವ ಆಯ್ಕೆ’ ಎಂಬ ಸತ್ಯವನ್ನು ಕಂಡುಕೊAಡಿದ್ದೇವೆ. ಬದುಕಿನ ಏಕತಾನತೆ ಹಾಗೂ ಬವಣೆಗಳ ಜೊತೆಗೆ ದಿನದೂಡುತ್ತಿದ್ದ ಮನುಷ್ಯನನ್ನು ಒಮ್ಮೆ ನಿಲ್ಲಿಸಿ ಹೊಸದೇನಾದರೂ ನಿನ್ನಿಂದ ಸಾಧ್ಯವೇ ಎಂದು ಸವಾಲೊಡ್ಡುವಲ್ಲಿ ಕೋವಿಡ್-19 ಯಶಸ್ವಿಯಾಗಿದೆ.

ಆದರೆ ಮಾನವ ಕುಲಕ್ಕೆ ಇದು ಹೊಸತೇನು ಅಲ್ಲ. ಹಲವು ಜಾಗತಿಕ ಸೋಂಕುಗಳು, ಸಾಂಕ್ರಾಮಿಕಗಳು ಮಾನವನ ಬದುಕನ್ನು ಮುಟ್ಟಿ ಹೋಗಿವೆ. ಕಾಲಕಾಲಕ್ಕೆ ಎದುರಾಗಿ ಬದುಕನ್ನು ಶಿಸ್ತುಬದ್ಧಗೊಳಿಸಿಕೊಳ್ಳಲು ಪ್ರೇರೇಪಿಸಿವೆ, ಹೊಸದಿಕ್ಕಿನತ್ತ ನೋಡುವಂತೆ ಮಾಡಿವೆ. 14ನೇ ಶತಮಾನದಲ್ಲಿ `ಪ್ಲೇಗ್’ ಮಧ್ಯ ಏಷ್ಯಾ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಹರಡಿ ಮೂರನೇ ಒಂದರಷ್ಟು ಜನರನ್ನು ಬಲಿತೆಗೆದುಕೊಂಡಾಗ ಅದು ಬದುಕನ್ನು ಎರಡು ರೀತಿಯಲ್ಲಿ ನೋಡುವುದನ್ನು ಜನರಿಗೆ ಕಲಿಸಿತ್ತು.

ಒಂದು ವರ್ಗ `ಪ್ಲೇಗ್’ ಎಂಬುದು ‘ದೇವರ ಶಾಪ’ ಎಂದು ಭಾವಿಸಿತು. ಈ ವರ್ಗದ ಜನ ದೇವರನ್ನು ಒಲಿಸಿಕೊಳ್ಳುವ ಮಾರ್ಗಗಳಿಗಾಗಿ ಹುಡುಕಿದರು, ಹೆಚ್ಚು ಧರ್ಮಶ್ರದ್ಧೆಯುಳ್ಳವರಾಗಿ ನಡೆದುಕೊಂಡರು. ಅದೇ ಕಾಲದಲ್ಲಿ ಬದುಕುಳಿದಿದ್ದ ಇನ್ನೊಂದು ವರ್ಗ ದೇವರು ನಮ್ಮನ್ನು ಬದುಕಿಸಲಾರ, ಇದ್ದಷ್ಟು ದಿನ `ಜೀವನವನ್ನು ಖುಷಿಯಿಂದ ಅನುಭವಿಸಬೇಕು’ ಎಂಬ ದಾರಿ ಆಯ್ದುಕೊಂಡಿತು. ಈ ಎರಡು ಜೀವನ ದೃಷ್ಟಿ ಕ್ರಮೇಣ ವಿಕಸನಗೊಂಡು ಹಲವು ಕವಲಾಗಿ ಒಡೆದು ಪಂಥಗಳು, ಚಳವಳಿಗಳು ರೂಪುಗೊಂಡವು.

19ನೇ ಶತಮಾನದ ಆರಂಭದಲ್ಲಿ ದೊಡ್ಡಮಟ್ಟದಲ್ಲಿ ಕಾಣಿಸಿಕೊಂಡ `ಸ್ಪೇನ್ ಫ್ಲೂ’ ಜನರ ಬದುಕಲ್ಲಿ ಹಲವು ಬದಲಾವಣೆಗಳನ್ನು ತಂದಿತ್ತು. ಅಮೆರಿಕದ ಮಟ್ಟಿಗೆ ನಾಲ್ಕು ಜನರಲ್ಲಿ ಒಬ್ಬರಿಗೆ ಈ ಸೋಂಕು ತಗುಲಿತ್ತು. ಹೆಚ್ಚಿನ ಸಾವು ನೋವುಗಳು ಸಂಭವಿಸಿದ್ದವು. ಆಗಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಒಂದೆಡೆ ಸೇರುವುದನ್ನು ನಿಷೇಧಿಸಲಾಗಿತ್ತು. ಶಾಲೆಗಳನ್ನು ಮುಚ್ಚಲಾಗಿತ್ತು. ಚರ್ಚ್ ಬಾಗಿಲು ಹಾಕಲಾಗಿತ್ತು. ಲಸಿಕೆ ಲಭ್ಯವಾಗಿ ಸೋಂಕು ಸಂಪೂರ್ಣ ನಿವಾರಣೆಯಾಗುವವರೆಗೂ ಬದುಕು ಮಂದಗತಿಯಲ್ಲಿ ಸಾಗಿತು. ಆದರೆ ಹಲವು ಬದಲಾವಣೆಗಳು ಜನ ಜೀವನ ಮಟ್ಟದಲ್ಲಿ ಆದವು.

ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆ, ಕಚೇರಿಗಳಲ್ಲಿ ನೀರು ಕುಡಿಯಲು ಅದುವರೆಗೂ ನಳಿಕೆಗಳಿಗೆ ಕಟ್ಟಲಾಗಿದ್ದ ಒಂದೇ ಲೋಟ ಬಳಸುವ ಪದ್ಧತಿಯಿತ್ತು. ಅದು ಸಂಪೂರ್ಣ ಬದಲಾಯಿತು. ಎಲ್ಲೆಂದರಲ್ಲಿ ಉಗಿಯುವುದನ್ನು ಜನ ಬಿಟ್ಟರು. ಸಾರ್ವಜನಿಕ ಮತ್ತು ವ್ಯಕ್ತಿಗತ ನೈರ್ಮಲ್ಯದ ಬಗ್ಗೆ ಶಿಕ್ಷಣವನ್ನು ಜನರಿಗೆ ನೀಡಲಾಯಿತು. ಶಾಲಾ ಪಠ್ಯದಲ್ಲೂ ನೈರ್ಮಲ್ಯಕ್ಕೆ ಹೆಚ್ಚಿನ ಜಾಗ ದೊರಕಿತು. ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆ ರೂಪುಗೊಂಡಿತು. ಪರ್ಯಾಯ ಔಷಧಿ ವಿಧಾನಗಳು, ಚಿಕಿತ್ಸಾ ಪದ್ಧತಿಗಳು ಮುನ್ನಲೆಗೆ ಬಂದವು. ವಿಜ್ಞಾನಕ್ಕೆ ಹೆಚ್ಚಿನ ಮನ್ನಣೆ ದೊರಕಿತು. ನಂತರ ಹಾಂಕ್ ಕಾಂಗ್ ಫ್ಲೂ, ಏಷ್ಯನ್ ಫ್ಲೂ ಹೀಗೆ ಒಂದರ ಮೇಲೊಂದು ಸೋಂಕುಗಳು ಬಂದವು ಜನ ಅದಕ್ಕೆ ತೋಚಿದ ರೀತಿಯಲ್ಲಿ ಪ್ರತಿರೋಧ ತೋರಿದರು. ಜನ ಜೀವನ ಹೊಸದಾದ ಸಾಮಾನ್ಯ ಸ್ಥಿತಿಯನ್ನು ಕಂಡುಕೊಂಡಿತು. 

ಪ್ರಸ್ತುತ ಚೀನಾದಲ್ಲಿ ಆರಂಭವಾದ ಕೊರೊನಾ ಸೋಂಕು ಹಲವು ರಾಷ್ಟ್ರಗಳಿಗೆ ಹಬ್ಬಿ ಸಾವು ನೋವುಗಳ ಸಂಖ್ಯೆ ಅಧಿಕವಾದಾಗ ಹಾಗಾದರೆ ಕೋವಿಡ್-19ರ ನಂತರದ ಮಾನವನ ಬದುಕು ಹೇಗಿರಬೇಕು ಎಂಬ ಚರ್ಚೆ ಎಲ್ಲೆಡೆಯೂ ನಡೆಯಿತು. ಹಾಗೆ ನಡೆದ ಚರ್ಚೆಗಳ ಹುಟ್ಟುವಳಿಯಾಗಿ ಜನಜೀವನವನ್ನು ಮತ್ತೆ ಹಳಿಗೆ ತರಲು ಹಲವು ಮಾರ್ಗೋಪಾಯಗಳು ಬಂದವು. ಆ ಮಾರ್ಗೋಪಾಯಗಳಲ್ಲಿ ಬಹುಮುಖ್ಯದ್ದು ಎಲ್ಲೆಲ್ಲಿ ಮತ್ತು ಹೇಗೆ ಸಾಧ್ಯವೋ ಹಾಗೆ ಅಂತರ್ಜಾಲವನ್ನು ಬಳಕೆ ಮಾಡಿಕೊಂಡು ಆನ್ ಲೈನ್ ಮೂಲಕ ವ್ಯವಹರಿಸುವುದು ಮತ್ತು ಸಾಧ್ಯವಾದಷ್ಟರ ಮಟ್ಟಿಗೆ ಜನರ ಮುಖಾಮುಖಿ ಸಂವಹನವನ್ನು ತಪ್ಪಿಸುವುದು. 

ಸಾಮಾನ್ಯವಾಗಿ ಯಾವುದೇ ಬದಲಾವಣೆಗೆ ತೆರೆದುಕೊಳ್ಳುವಾಗ ಅದರ ಸಾಧಕ ಬಾಧಕಗಳ ಕುರಿತು ಪ್ರಶ್ನೆ ಮೂಡುತ್ತದೆ. ಪ್ರತೀ ಬದಲಾವಣೆಗೆ ಒಳಿತು-ಕೆಡುಕು, ಲಾಭ-ನಷ್ಟ ಎಂಬ ಎರಡು ಮುಖಗಳು ಇರುತ್ತವೆ. ಈ ಎರಡನ್ನೂ ಗ್ರಹಿಸಿಯೇ ಮನುಷ್ಯ ಬದಲಾವಣೆಯ ಜೊತೆ ಅಳುಕಿನಿಂದ ಹೆಜ್ಜೆ ಹಾಕುತ್ತಾನೆ. ಮೊದಲಿಗೆ ಮೋಟಾರು ವಾಹನಗಳು ಬಂದಾಗ, ಆ ಬಗ್ಗೆಯೂ ಪ್ರಶ್ನೆಗಳಿದ್ದವು. ಅವಘಡಗಳು ಸಂಭವಿಸಿದಾಗ ಹಿಂದಿನ ವ್ಯವಸ್ಥೆಯೇ ಚೆನ್ನಿತ್ತು ಎಂದದ್ದೂ ಉಂಟು.

ಕಂಪ್ಯೂಟರ್ ಬಂದ ಹೊಸದರಲ್ಲಿ ಅದರ ಸಾಮರ್ಥ್ಯಕ್ಕೆ ಬೆರಗಾಗುವ ಜೊತೆಗೆ ಇದು ಮನುಷ್ಯರ ಕೆಲಸ ಕಿತ್ತುಕೊಳ್ಳುತ್ತದೆ ಎಂದು ಶಪಿಸಿದ್ದೂ ಇದೆ. ಆದರೆ ಮುಮ್ಮುಖ ಚಲನೆಯ ಬದುಕು ಮುಂದಡಿ ಇಡುವುದನ್ನು ನಿಲ್ಲಿಸಲಿಲ್ಲ. ಇದೀಗ ಕೊರೊನೋತ್ತರ ಯುಗದ ಹೊಸ ಸಾಮಾನ್ಯ ಸ್ಥಿತಿ ಎನಿಸಿರುವ ಆನ್ ಲೈನ್ ಕಾರ್ಯನಿರ್ವಹಣೆಯ ಬಗ್ಗೆ ಒಂದಷ್ಟು ಸಂಶಯ, ಒಪ್ಪಿಗೆ, ನಿರಾಕರಣೆಗಳ ಚರ್ಚೆ ನಡೆಯುತ್ತಿದೆ. ಮುಂದುವರೆದ ದೇಶಗಳಲ್ಲಿ ಈ ವ್ಯವಸ್ಥೆ ಈಗಾಗಲೇ ವ್ಯಾಪಕವಾಗಿ ಬಳಕೆಯಲ್ಲಿದೆ.

ಹಾಗಾದರೆ ಭಾರತದಂತಹ ದೇಶದಲ್ಲಿ ಆನ್ ಲೈನ್ ಮೂಲಕ ಕಾರ್ಯನಿರ್ವಹಿಸುವುದು ಸುಲಭವೇ? ಉತ್ತರಕ್ಕೆ ಹಲವು ಸಂಗತಿಗಳನ್ನು ಪರಿಶೀಲಿಸಬೇಕು. ಯಾವೆಲ್ಲಾ ಕ್ಷೇತ್ರಗಳಲ್ಲಿ ಆನ್ ಲೈನ್ ಕಾರ್ಯನಿರ್ವಹಣೆಯ ವಿಧಾನ ಅಳವಡಿಸಿಕೊಳ್ಳಬಹುದೋ, ಅಂತಹ ಪ್ರತೀ ಕ್ಷೇತ್ರವೂ ತನ್ನದೇ ಆದ ಒಂದಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಿದ್ಧತೆ ಹಾಗೂ ಬಳಕೆಯ ಕೌಶಲ ಮುಖ್ಯ ತೊಡಕಾಗುತ್ತದೆ.

ಶಿಕ್ಷಣ ಕ್ಷೇತ್ರದ ಮಟ್ಟಿಗೆ ನೋಡಿದರೆ, ಶಾಲೆ ಕಾಲೇಜುಗಳನ್ನು ತೆರೆಯುವುದು ಇಂದಿನ ಪರಿಸ್ಥಿತಿಯಲ್ಲಿ ಕ್ಷೇಮಕರವಲ್ಲ ಎಂಬ ಅನಿಸಿಕೆ ಎಲ್ಲೆಡೆಯೂ ಇದೆ. ಹಾಗಾಗಿ ಆನ್ ಲೈನ್ ತರಗತಿಗಳನ್ನು ನಡೆಸುವ ಪ್ರಕ್ರಿಯೆ ಖಾಸಗೀ ಶಾಲೆಗಳಲ್ಲಿ ಆರಂಭವಾಗಿದೆ. ಶಿಕ್ಷಕರು ತಾವಿದ್ದಲಿಂದಲೇ ಪಾಠ ಮಾಡಬಹುದು, ವಿದ್ಯಾರ್ಥಿಗಳು ತಮ್ಮ ಮನೆಗಳಿಂದಲೇ ಕಲಿಯಬಹುದು ಎನ್ನುವುದು ಈ ಕ್ರಮಕ್ಕೆ ನೀಡಲಾಗಿರುವ ಸಮಜಾಯಿಷಿ. ಜೊತೆಗೆ ಪಾಠಗಳನ್ನು ರೆಕಾರ್ಡ್ ಮಾಡಿ ಹಂಚುವುದರಿಂದ ವಿದ್ಯಾರ್ಥಿಗಳು ಅದನ್ನು ಪುನರ್ಬಳಕೆ ಮಾಡಿಕೊಳ್ಳಬಹುದು, ಪ್ರಶ್ನೋತ್ತರಕ್ಕಾಗಿ ಒಂದು ತರಗತಿ ನಿಗದಿ ಮಾಡಿದರೆ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದು ಆನ್ ಲೈನ್ ಶಿಕ್ಷಣಕ್ಕೆ ಪೂರಕವಾಗಿರುವ ಸಂಗತಿಗಳು. ಆದರೆ ಇದಕ್ಕೆ ವ್ಯತಿರಿಕ್ತವಾದ ಅನಿಸಿಕೆಗಳೂ ಇವೆ.

ಆನ್ ಲೈನ್ ತರಗತಿಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ತಾಂತ್ರಿಕ ಸಮಸ್ಯೆ ಎದುರಾಗಬಹುದು. ಪೋಷಕರ ಮೇಲೆ ಒತ್ತಡ ಹೆಚ್ಚಬಹುದು, ವಿದ್ಯಾರ್ಥಿಗಳ ಏಕಾಗ್ರತೆಯನ್ನು ಅಂತರ್ಜಾಲ ಬಹುಬೇಗ ಕೆಡಿಸಬಲ್ಲದು, ಕೆಟ್ಟ ಹವ್ಯಾಸಗಳು ಬೆಳೆಯಲು ಕಾರಣವಾಗಬಹುದು, ಆನ್ ಲೈನ್ ಶಿಕ್ಷಣ ಸಾಂಪ್ರದಾಯಿಕ ತರಗತಿಯ ಮುಖಾಮುಖಿ ಅನುಭವವನ್ನು ಕೊಡಲಾರದು ಎಂಬ ಮಾತು ಕೇಳಿಬರುತ್ತಿದೆ. ಈ ಲಾಭ ನಷ್ಟದ ಲೆಕ್ಕಾಚಾರಗಳು ಖಾಸಗೀ ಶಾಲೆಗಳಿಗೆ ಹೆಚ್ಚು ಹೊಂದುವಂತಹವು.

ಇಲ್ಲಿ ಮುಖ್ಯವಾಗಿ ಕಾಣುವ ಸವಾಲು ಸರ್ಕಾರಿ ಶಾಲೆ ಮತ್ತು ಅಲ್ಲಿನ ಶಿಕ್ಷಕರಿಗೆ ಸಂಬಂಧಿಸಿದ್ದು. ಆನ್ ಲೈನ್ ಶಿಕ್ಷಣಕ್ಕೆ ಅಗತ್ಯವಾದ ಸಲಕರಣೆಗಳನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಒದಗಿಸಿಕೊಡುವಷ್ಟು ಆ ಪೋಷಕರು ಆರ್ಥಿಕವಾಗಿ ಸ್ಥಿತಿವಂತರೇ? ಒಂದೊಮ್ಮೆ ಸರ್ಕಾರವೇ ಸೌಲಭ್ಯ ಒದಗಿಸಿದರೂ ಈ ಶಿಕ್ಷಣ ವಿಧಾನವನ್ನು ಅಳವಡಿಸಿಕೊಳ್ಳಲು ಸರ್ಕಾರಿ ಶಾಲೆಯ ಶಿಕ್ಷಕರು ತರಬೇತಿ ಹೊಂದಿದ್ದಾರೆಯೇ? ಈ ಹಿಂದೆ ಕಂಪ್ಯೂಟರ್ ಶಿಕ್ಷಣ ನೀಡುವ ದೃಷ್ಟಿಯಿಂದ ಶಾಲೆಗಳಿಗೆ ಕಂಪ್ಯೂಟರ್, ಪ್ರಿಂಟರ್, ಪ್ರೊಜೆಕ್ಟರ್ ಇತ್ಯಾದಿ ಸಲಕರಣೆಗಳನ್ನು ನೀಡಲಾಗಿದ್ದರೂ ಅದನ್ನು ಬಳಸುವ ನೈಪುಣ್ಯ ಹಲವು ಶಾಲೆಗಳಲ್ಲಿ ಶಿಕ್ಷಕರಿಗೆ ಇಲ್ಲವಾದ್ದರಿಂದ ಇಂದಿಗೂ ಅವು ಮೂಲೆಯಲ್ಲಿ ದೂಳುತಿನ್ನುತ್ತಿವೆ. ಹಾಗಾಗಿ ಆನ್ ಲೈನ್ ಶಿಕ್ಷಣದ ಸಾರ್ವತ್ರೀಕರಣ ಖಾಸಗೀ ಮತ್ತು ಸರ್ಕಾರಿ ಶಾಲೆ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಬಹುದು.

ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ನಾವು ಒಂದು ದಶಕದ ಹಿಂದೆಯೇ ಇ-ಕಾಮರ್ಸ್ ಕ್ಷೇತ್ರದಲ್ಲಿ ದಾಪುಗಾಲು ಇಟ್ಟಾಗಿದೆ. ಮನೆಯಲ್ಲೇ ಕೂತು ಬೇಕಾದ್ದನ್ನು ಹುಡುಕಿ ಕೊಳ್ಳುವುದು ಸುಲಭದ ಪ್ರಕ್ರಿಯೆಯಾದರೂ, ಇದರ ಬಳಕೆ ಹೆಚ್ಚಾದಂತೆ ಕೊಳ್ಳುವಿಕೆಯ ಪ್ರಕ್ರಿಯೆಗೆ ತಂತ್ರಾಂಶ ಮಟ್ಟದ ರಕ್ಷಣೆ ಒದಗಿಸುವುದು, ವಂಚನೆಯಾಗದಂತೆ ತಡೆಯುವುದು, ನಕಲಿ ಪದಾರ್ಥಗಳ ಮಾರಾಟ ಹಾಗೂ ಕೊಳ್ಳುವವರ ಬ್ಯಾಂಕ್ ಸಂಬಂಧಿ ಮಾಹಿತಿ ಕಳ್ಳತನ ತಪ್ಪಿಸುವುದು ಹೆಚ್ಚು ತ್ರಾಸವಾಗುತ್ತದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ನೈಪುಣ್ಯವನ್ನು ಭಾರತ ಸಾಧಿಸಬೇಕಾಗುತ್ತದೆ.

ವೈದ್ಯಕೀಯ ಕ್ಷೇತ್ರದಲ್ಲಿ ಇದೀಗ `ಟೆಲಿ ಮೆಡಿಸಿನ್’ ಪದ ಹೆಚ್ಚು ಬಳಕೆಯಾಗುತ್ತಿದೆ. ಆದರೆ ಇದೂ ಹೊಸದಲ್ಲ. ದಶಕದ ಹಿಂದೆಯೇ ಈ ವ್ಯವಸ್ಥೆಗೆ ಹೊರಳುವ ಪ್ರಯತ್ನ ಅಲ್ಲಲ್ಲಿ ಪ್ರಾಯೋಗಿಕವಾಗಿ ನಡೆದಿತ್ತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ತಾಲ್ಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗಳು ತುರ್ತು ಸಂದರ್ಭಗಳಲ್ಲಿ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ, ನಾರಾಯಣ ಹೃದಯಾಲಯದ ಪರಿಣತ ವೈದ್ಯರನ್ನು ಸಂಪರ್ಕಿಸಲು ಸಹಾಯವಾಗುವಂತೆ ಟೆಲಿ ಕಾನ್ಫರೆನ್ಸ್ ಉಪಕರಣಗಳನ್ನು ಹಲವು ಆಸ್ಪತ್ರೆಗಳಿಗೆ ಒದಗಿಸಲಾಗಿತ್ತು. ಉಪಕರಣಗಳ ನಿರ್ವಹಣೆ ಮತ್ತು ದುರಸ್ತಿ ಕೆಲಸವನ್ನು ಕಂಪನಿಯೊAದಕ್ಕೆ ವಹಿಸಲಾಗಿತ್ತು. ಆ ಕಂಪನಿಯವರು ಆಗಾಗ ಬಂದು ಉಪಕರಣಗಳನ್ನು ಪರೀಕ್ಷಿಸಿ ಹೋಗುತ್ತಿದ್ದದ್ದು ಬಿಟ್ಟರೆ ಅದನ್ನು ವೈದ್ಯರು ಸಕಾಲಿಕವಾಗಿ ಬಳಸುವುದು ಸಾಧ್ಯವಾಗಲಿಲ್ಲ. ರೋಗಿಗಳು ನೂರಾರು ಕಿ.ಮೀ ಕ್ರಮಿಸಿ ಚಿಕಿತ್ಸೆಗೆ ಬೆಂಗಳೂರಿಗೆ ಬರುವುದು ತಪ್ಪಲಿಲ್ಲ. ಒಂದೊಮ್ಮೆ ನಾವು ಈ ಟೆಲಿ ಮೆಡಿಸಿನ್ ಸಾಧ್ಯತೆಗಳನ್ನು ದಶಕದ ಹಿಂದೆಯೇ ಗಂಭೀರವಾಗಿ ಪರಿಗಣಿಸಿದ್ದರೆ, ಇಷ್ಟು ಹೊತ್ತಿಗೆ ಆ ವಿಧಾನ ಪಕ್ವಗೊಂಡ ವ್ಯವಸ್ಥೆಯಾಗಿರುತ್ತಿತ್ತು. ಕೊರೊನಾ ಸೋಂಕು ಪ್ರಕರಣವನ್ನು ನಿರ್ವಹಿಸುವಲ್ಲಿ ಹೆಚ್ಚು ಉಪಯೋಗಕ್ಕೆ ಬರುತ್ತಿತ್ತು.

ಉಳಿದಂತೆ ಈ ಆನ್ ಲೈನ್ ಕಾರ್ಯವಿಧಾನ ಹೆಚ್ಚು ಬಳಕೆಯಲ್ಲಿರುವುದು ಮತ್ತು ಒಂದು ಹಂತದ ಯಶಸ್ಸು ಗಳಿಸಿರುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ. ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆಯೇ ಬಹುತೇಕ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಅವಕಾಶ ಒದಗಿಸಿದವು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರ ಮನೆಯ ಒಂದು ಮೂಲೆ ಕಚೇರಿಯಾಗಿ ಪರಿವರ್ತನೆಯಾಯಿತು.

ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಗೆ ಒಂದಷ್ಟು ಸಿದ್ಧತೆ ಈ ವಲಯದಲ್ಲಿ ಇತ್ತು. ವಿವಿಧ ದೇಶಗಳ ಸಹೋದ್ಯೋಗಿಗಳೊಂದಿಗೆ ಕೆಲಸದ ಕುರಿತಾಗಿ ಸಂವಹನ ನಡೆಸಲು ಬೇರೆ ಬೇರೆ ಕಾಲಮಾನಗಳಲ್ಲಿ ಕೆಲಸ ಮಾಡುವ ಅವಶ್ಯಕತೆ ಇರುವ ಕಾರಣ ಸಾಮಾನ್ಯವಾಗಿ ಉದ್ಯೋಗಿಗಳು ತಡರಾತ್ರಿಯ ವರೆಗೂ ಕಚೇರಿಯಲ್ಲಿ ಉಳಿಯುವ ಬದಲು ಮನೆಗೆ ಬಂದು ಮನೆಯಿಂದಲೇ ಉಳಿದ ಕೆಲಸ ಮುಗಿಸುವ ಕಾರ್ಯಶೈಲಿಯನ್ನು ಅಳವಡಿಸಿಕೊಂಡಿದ್ದರು. ಅದನ್ನು ಈಗ ಪ್ರತಿದಿನದ ಅಷ್ಟೂ ಸಮಯಕ್ಕೆ ವಿಸ್ತರಿಸಿಕೊಳ್ಳಲು ತ್ರಾಸವಾಗಲಿಲ್ಲ. ಆದರೆ ಈ ಕ್ಷೇತ್ರದಲ್ಲೂ ಈ ವಿಧಾನವನ್ನು ಎಷ್ಟು ದಿನಗಳವರೆಗೆ ವಿಸ್ತರಿಸಬಹುದು, ಲಾಭ ನಷ್ಟಗಳೇನು ಎಂಬ ಚರ್ಚೆ ನಡೆಯುತ್ತಿದೆ.

ಸಾಮಾನ್ಯವಾಗಿ ಐಟಿ ಕ್ಷೇತ್ರದಲ್ಲಿ ದುಡಿಯುವವರ ಮೊದಲ ದೂರು, ಸಂಚಾರ ದಟ್ಟಣೆಯಲ್ಲಿ ಮನೆಯಿಂದ ಕಚೇರಿಗೆ ಹೋಗಿ ಬರಲು ಅಧಿಕ ಸಮಯ ತೆಗೆದುಕೊಳ್ಳುತ್ತದೆ ಎಂಬುದೇ ಆಗಿರುತ್ತದೆ. ಈ ವಿಷಯದಲ್ಲಿ ಉದ್ಯೋಗಿಗಳು ಈಗ ಖುಷಿಯಾಗಿದ್ದಾರೆ. ಪ್ರತಿನಿತ್ಯ ಹೆಚ್ಚಿನ ವಾಹನಗಳು ಬೀದಿಗೆ ಇಳಿಯದಿದ್ದರೆ ಅಷ್ಟರ ಮಟ್ಟಿಗೆ ವಾಯುಮಾಲಿನ್ಯ ಕಡಿಮೆ ಆಗುತ್ತದೆ. ಮನೆಯ ಆಹಾರವನ್ನೇ ಸೇವಿಸುವ ಅವಕಾಶವಿರುತ್ತದೆ. ಪತ್ನಿ ಮಕ್ಕಳೊಂದಿಗೆ ವಿರಾಮದ ವೇಳೆಯನ್ನು ಕಳೆಯಬಹುದು ಎಂಬುದು `ವರ್ಕ್ ಫ್ರಂ ಹೋಮ್’ ಬೆಂಬಲಿಸಲು ಇರುವ ಪೂರಕ ಲೆಕ್ಕಾಚಾರ.

ಕೆಲವು ಆಕ್ಷೇಪಗಳೂ ಇವೆ. ಕಚೇರಿಯ ವಾತಾವರಣ ಮನೆಯಲ್ಲಿ ಇರುವುದಿಲ್ಲ, ಕೆಲಸ ಮಾಡಲು ಬೇಕಾದ ನಿರಂತರ ವಿದ್ಯುತ್, ಅಂತರ್ಜಾಲ ಪೂರೈಕೆಯಂತಹ ಮೂಲಸೌಕರ್ಯಗಳನ್ನು ಮನೆಯಲ್ಲಿ ಒದಗಿಸಿಕೊಳ್ಳುವುದು ಕಷ್ಟ ಎಂಬುದು ಮುಖ್ಯ ಆಕ್ಷೇಪ. ಜೊತೆಗೆ ಕಂಪ್ಯೂಟರ್ ಬಳಸಿ ಕೆಲಸ ಮಾಡುವವರಿಗೆ ಕುರ್ಚಿ ಮತ್ತು ಮೇಜು ಬಹುಮುಖ್ಯವಾಗುತ್ತದೆ. ಕಾರ್ಪೊರೇಟ್ ಕಚೇರಿಯ ವಿನ್ಯಾಸದಲ್ಲಿ ‘ಎರ್ಗೊನಾಮಿಕ್ಸ್’ಗೆ ವಿಶೇಷ ಸ್ಥಾನವಿದೆ. ಸರಿಯಲ್ಲದ ಭಂಗಿಯಲ್ಲಿ ಕೂತು ತಾಸುಗಟ್ಟಲೆ ಕೆಲಸ ಮಾಡಿದರೆ, ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ. ಬೆನ್ನು, ಕತ್ತು, ಮಣಿಕಂಠಿನ ನೋವು ದೀರ್ಘಾವಧಿ ಕಂಪ್ಯೂಟರ್ ಬಳಸುವವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಈ ಕಾರಣದಿಂದ. ಈ ಕುರಿತ ಗೊಣಗಾಟವೂ ಉದ್ಯೋಗಿಗಳಲ್ಲಿದೆ.   

ಆದರೆ ಉದ್ಯೋಗಿಗಳ ಕೆಲಸದ ಗುಣಮಟ್ಟದಲ್ಲಿ `ವರ್ಕ್ ಫ್ರಂ ಹೋಮ್’ ವ್ಯವಸ್ಥೆಯಿಂದ ವ್ಯತ್ಯಯವಾದಂತಿಲ್ಲ. ಹಾಗಾಗಿ ಗೂಗಲ್ ನಂತಹ ಕೆಲವು ಕಂಪನಿಗಳು ಮುಂದಿನ ಒಂದು ವರ್ಷದವರೆಗೆ ಈ ಸೌಲಭ್ಯ ವಿಸ್ತರಿಸಿದ್ದರೆ, ಟ್ವಿಟರ್ ನಂತಹ ಕಂಪನಿಗಳು `ಮನೆಯಿಂದ ಕೆಲಸ ಮಾಡುವುದಕ್ಕೂ ಕಚೇರಿಯಿಂದ ಕಾರ್ಯನಿರ್ವಹಿಸುವುದಕ್ಕೂ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲವಾದ್ದರಿಂದ ಉದ್ಯೋಗಿಗಳು ಇಚ್ಛಿಸಿದರೆ ಅವರು ಅನಿರ್ದಿಷ್ಟ ಅವಧಿಯವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗುವುದು’ ಎಂದಿವೆ.

ಇದರ ನಡುವೆ ಕೇಳಿಬಂದ ಒಂದು ಆಕ್ಷೇಪವೆಂದರೆ ಅದು ಮೈಕ್ರೋಸಾಫ್ಟ್ ಕಂಪನಿಯ ಮುಖ್ಯಸ್ಥ ಸತ್ಯ ನಡೆಲ್ಲಾ ಅವರದ್ದು. `ಕಾಯಂ ಆಗಿ ಮನೆಯಿಂದ ಕೆಲಸ ಮಾಡುವುದರಿಂದ ಉದ್ಯೋಗಿಗಳ ಮಾನಸಿಕ ಒತ್ತಡ ಹೆಚ್ಚುತ್ತದೆ, ಏಕತಾನತೆ ಕಾಡುತ್ತದೆ. ಮಾನಸಿಕ ಆರೋಗ್ಯದ ದೃಷ್ಟಿಯಿಂದ ಹೆಚ್ಚುದಿನಗಳ ಕಾಲ ಈ ವ್ಯವಸ್ಥೆಯನ್ನು ಮುಂದುವರೆಸಲು ಸಾಧ್ಯವಾಗದು.’ ಎಂದು ನಡೆಲ್ಲಾ ಹೇಳಿರುವುದು `ವರ್ಕ್ ಫ್ರಂ ಹೋಮ್’ ಚರ್ಚೆಗೆ ಮತ್ತೊಂದು ಆಯಾಮ ಒದಗಿಸಿದೆ. ಮನೆಯಿಂದ ಕೆಲಸ ಮಾಡುವ ವಿಧಾನವನ್ನು ಎಲ್ಲ ಬಗೆಯ ಉದ್ಯೋಗ ಕ್ಷೇತ್ರಕ್ಕೂ ವಿಸ್ತರಿಸಲು ಸಾಧ್ಯವಾಗದಿರುವುದು ಇದಕ್ಕಿರುವ ದೊಡ್ಡ ಮಿತಿ.

ಉಳಿದಂತೆ ಮನರಂಜನೆ ಕ್ಷೇತ್ರಕ್ಕೆ ಸಂಬAಧಿಸಿದ ಕೆಲಸಗಳು, ಸಾಮಾಜಿಕ ಚಟುವಟಿಕೆಗಳು ಇದೀಗ ಹೆಚ್ಚು ಆನ್ ಲೈನ್ ಕೇಂದ್ರಿತ ಆಗುತ್ತಿವೆ. ವರ್ಷಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳು ಲೈವ್ ಸಂಪರ್ಕ ಸಾಧ್ಯತೆಗಳನ್ನು ತೆರೆದಿಟ್ಟಿದ್ದವು. ಅಗತ್ಯವೋ ಅನಗತ್ಯವೋ ಅದರ ಗೋಜಿಗೆ ಹೋಗದೇ ಕ್ಯಾಮೆರಾ ಇರುವ ಫೋನ್ ಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳನ್ನು ಲೈವ್ ನಲ್ಲಿ ತೋರಿಸುವ, ವಿಚಾರಗಳನ್ನು ಹಂಚಿಕೊಳ್ಳುವ ಚಾಳಿಗೆ ನಾವು ಬಿದ್ದಿದ್ದೆವು. ಕೋವಿಡ್-19ರ ನಂತರ ಇದರ ಬಳಕೆ ಒಮ್ಮಿಂದೊಮ್ಮೆಲೇ ಹೆಚ್ಚಾಗಿದೆ ಮತ್ತು ವ್ಯವಸ್ಥಿತವಾಗಿ ಹಲವು ಸಂಘ, ಸಂಸ್ಥೆಗಳು ಸಾಹಿತ್ಯ ಪ್ರಚಾರ, ವಿಚಾರ ಸಂಕೀರ್ಣ ಇತ್ಯಾದಿ ಚಟುವಟಿಕೆಗಳಿಗೆ ಬಳಸುತ್ತಿವೆ. ಇ-ಪುಸ್ತಕಗಳನ್ನು ಹೊರತರುವ, ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಬಳಸಿಕೊಂಡು ಚಿತ್ರ ಬಿಡುಗಡೆಗೊಳಿಸುವ ಪ್ರಯತ್ನವೂ ನಡೆಯುತ್ತಿದೆ. ಇವುಗಳಿಗೆ ಹೆಚ್ಚಿನ ತೊಡಕು ಕಾಣುತ್ತಿಲ್ಲ. 

ಒಟ್ಟಿನಲ್ಲಿ ಭಾರತದಂತಹ ದೇಶದಲ್ಲಿ ಆನ್ ಲೈನ್ ಕಾರ್ಯನಿರ್ವಹಣೆ ಕಾರ್ಯಸಾಧುವಾಗಬೇಕಾದರೆ, ಸಾಂಪ್ರದಾಯಿಕ ಕಾರ್ಯವಿಧಾನವನ್ನು ಬದಿಗೊತ್ತಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವತ್ತ ಆಡಳಿತ ವ್ಯವಸ್ಥೆ ರಭಸದ ಹೆಜ್ಜೆ ಇಡಬೇಕು ಮತ್ತು ವ್ಯಕ್ತಿಗತ ನೆಲೆಯಲ್ಲಿ ತಂತ್ರಜ್ಞಾನವನ್ನು ಬದುಕಿಗೆ ಅಳವಡಿಸಿಕೊಳ್ಳುವುದರ ಕುರಿತು ಇರುವ ಹಿಂಜರಿಕೆ, ಆಲಸ್ಯ ದೂರವಾಗಬೇಕು.

ಒಂದಂತೂ ನಿಜ, ಮನುಷ್ಯ ಇದುವರೆಗೆ ಹಲವು ಸವಾಲುಗಳನ್ನು ಕಂಡಿದ್ದಾನೆ. ಸವಾಲಿನಿಂದ ಹೊಸ ಸಂಗತಿಗಳನ್ನು ಕಲಿತಿದ್ದಾನೆ, ಸಾವಲು ದಾಟಿ ಬದುಕು ನಡೆಸುವ ಉಪಾಯ ಕಂಡುಕೊಂಡಿದ್ದಾನೆ. ಹಾಗಾಗಿ ಸೋಂಕುರೋಗ ಪ್ರೇರೇಪಿಸಿದ ಆನ್ ಲೈನ್ ಕ್ರಾಂತಿ ಶಾಶ್ವತವೇ ಎಂಬ ಪ್ರಶ್ನೆಗೆ, ಅದಕ್ಕಿರುವ ತೊಡಕುಗಳನ್ನು ಪರಿಗಣಿಸಿ ಇಲ್ಲ ಎಂಬ ಒಂದು ಪದದ ಉತ್ತರ ಕೊಡಬಹುದು. ಆದರೆ ಬದಲಿ ಆಯ್ಕೆಯಾಗಿ ಆನ್ ಲೈನ್ ಕ್ರಾಂತಿ ಎನ್ನುವುದು ಸೋಂಕು ರೋಗ ಅನಿವಾರ್ಯವಾಗಿಸಿರುವ ಒಂದು ಬದಲಾವಣೆ. ಮನುಷ್ಯ ಮುಂದಿನ ಬದಲಾವಣೆಗೆ ಅಣಿಯಾಗುವವರೆಗೆ ಅದರ ಚಲಾವಣೆ. 

*ಲೇಖಕರು ಮೂಲತಃ ಮಂಡ್ಯ ಜಿಲ್ಲೆ ಮದ್ದೂರಿನವರು; ಅಮೆರಿಕ ಮೂಲದ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಅಂಕಣಕಾರ, ಸಮಕಾಲೀನ ವಿದ್ಯಮಾನಗಳ ವಿಶ್ಲೇಷಕ. ಪ್ರಸ್ತುತ ಅಮೆರಿಕೆಯಲ್ಲಿ ವಾಸ.

Leave a Reply

Your email address will not be published.