ಸವಿಸವಿ ನೆನಪು ಖ್ಯಾತಿಯ ಆರ್‍ಜೆ ಪ್ರಸನ್ನ

ಸವಿಸವಿ ನೆನಪು ಎಂಬ ಒಂದೇ ಕಾರ್ಯಕ್ರಮವನ್ನು ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಏಕೈಕ ಆರ್‍ಜೆ ಎಂದರೆ ಮಂಗಳೂರಿನ ಪ್ರಸನ್ನ. 93.5 ರೆಡ್ ಎಫ್‍ಎಂ ನಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಹಳೆಯ ನೆನಪುಗಳ ಕಡೆಗೆ ಕೇಳುಗರನ್ನು ಕರೆದೊಯ್ಯುವ ಪ್ರಸನ್ನ, ತನ್ನ ಧ್ವನಿಯ ಮೂಲಕ ಎಂಥವರನ್ನೂ ಸೆಳೆದುಬಿಡುತ್ತಾರೆ.

‘ಸವಿಸವಿ ನೆನಪು’ ಪಯಣದಲ್ಲಿನ ನಿಮ್ಮ ಸವಿಸವಿ ನೆನಪುಗಳು…?

ತುಂಬಾ ಖುಷಿಯಾಗುತ್ತಿದೆ. ಹತ್ತು ವರ್ಷ ಆಗಿದೆ ಅಂತ ಅನಿಸುವುದಿಲ್ಲ. ಪ್ರತಿ ದಿನವೂ ನನಗೆ ಹೊಸ ದಿನವೇ. ವರ್ಷ ಎಷ್ಟಾಯ್ತು ಎನ್ನುವುದಕ್ಕಿಂತ, ಕೇಳುಗರಿಗೆ ಹೊಸದಾಗಿ ಏನನ್ನು ನೀಡಬಹುದು ಎಂಬ ಯೋಚನೆ ನನ್ನಲ್ಲಿರುತ್ತದೆ. ಅದರಿಂದಾಗಿಯೇ ನನ್ನ ಕಾರ್ಯಕ್ರಮ ಇಂದಿನತನಕ ಮುಂದುವರಿಯುತ್ತಿದೆ, ಜನರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗಿದೆ.

ಗ್ರಾಮೀಣ ಮತ್ತು ನಗರದ ಕೇಳುಗರನ್ನು ಏಕಕಾಲದಲ್ಲಿ ಹಿಡಿದಿಡುವ ಸವಾಲನ್ನು ಹೇಗೆ ನಿಭಾಯಿಸುತ್ತೀರಿ?

ನಾನು ಮೂಲತಃ ಉಡುಪಿಯವನು. ಬೆಂಗಳೂರು, ಹುಬ್ಬಳ್ಳಿ ಮತ್ತು ಕುಂದಾಪುರ ಕನ್ನಡವನ್ನೂ ಮಾತನಾಡಬಲ್ಲೆ. ಆದರೆ ಎಫ್.ಎಂ. ಕಾರ್ಯಕ್ರಮದಲ್ಲಿ ಶುದ್ಧ ಕನ್ನಡವನ್ನೇ ಮಾತನಾಡುತ್ತೇವೆ. ಯಾವುದೇ ಊರಿನಲ್ಲಾದರೂ ಅಲ್ಲಿನ ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಕನ್ನಡದಲ್ಲೇ ಪಾಠ ಮಾಡುತ್ತಾರೆ. ಶುದ್ಧ ಕನ್ನಡ ಎಲ್ಲ ಜನರಿಗೂ ಅರ್ಥವಾಗುತ್ತದೆ. ಹಾಗಾಗಿ ಅಂತಹ ಸಮಸ್ಯೆ ನನಗೆ ಎದುರಾಗಿಲ್ಲ. ಅಲ್ಲದೆ ನಮ್ಮ ಎಫ್.ಎಂ.ನಲ್ಲಿ ಎಲ್ಲಾ ಆರ್.ಜೆ.ಗಳು ಶೇ.90ರಷ್ಟು ಶುದ್ಧ ಕನ್ನಡದಲ್ಲೇ ಮಾತನಾಡುತ್ತಾರೆ. ಇಂಗ್ಲಿಷ್ ಬೆರೆಸುವುದು ಅತ್ಯಂತ ಕಡಿಮೆ.

ಹತ್ತು ವರ್ಷಗಳಲ್ಲಿ ಎಫ್‍ಎಂ ಕೇಳುಗರ ಪ್ರಮಾಣ ಬದಲಾಗಿದೆಯಾ?

ಹತ್ತು ವರ್ಷಗಳ ನನ್ನ ಅನುಭವದಲ್ಲಿ ಮೊದಲ ಐದು ವರ್ಷದಲ್ಲಿ ಕೇಳುಗರ ಪ್ರಮಾಣ ಇದ್ದಷ್ಟು ಈಗ ಇಲ್ಲ. ಹಿಂದೆ ರಾತ್ರಿ 8ರಿಂದ 12ರವರೆಗೂ ಎಫ್‍ಎಂ ಕೇಳುತ್ತಾ ಇದ್ದರು. ಈಗಲೂ ಕೇಳುವವರಿದ್ದಾರೆ. ಆದರೆ ನಿರಂತರವಾಗಿ ಕೇಳುತ್ತಿಲ್ಲ. ಈಗ ಅವರಿಗೆ ಬಹಳಷ್ಟು ಆಯ್ಕೆಗಳಿವೆ. ಕಾರ್ಯಕ್ರಮ ಕೇಳುತ್ತಾ ಕೂರುವಷ್ಟು ತಾಳ್ಮೆ, ಸಮಯ ಇಲ್ಲ. ಮೊಬೈಲ್‍ನಲ್ಲಿ ಪ್ರಪಂಚವೇ ಸಿಗುತ್ತಿದೆ ಜನರಿಗೆ. ಸ್ಮಾರ್ಟ್‍ಫೋನ್‍ಗಳು ಅತಿ ಹೆಚ್ಚು ಜನರನ್ನು ತಲುಪಲು ಶುರು ಆದ ಮೇಲೆ, ನಿರಂತರ ಕೇಳುಗರ ಸಂಖ್ಯೆ ಕಡಿಮೆ ಆಗಿದೆ. ಆದರೂ ಸಂಗೀತ, ಹಾಡುಗಳನ್ನು ಜನರು ಎಲ್ಲಿಯವರೆಗೆ ಇಷ್ಟ ಪಡುತ್ತಾರೋ ಅಲ್ಲಿಯವರೆಗೆ ಎಫ್‍ಎಂ ರೇಡಿಯೊ ಜೀವಂತವಾಗಿ ಇರುತ್ತದೆ.

ನಿಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರುವ ಕೇಳುಗರಿದ್ದಾರೆಯೇ?

ಖಂಡಿತವಾಗಿಯೂ ನೂರಾರು ಮಂದಿ ಇದ್ದಾರೆ. ಹತ್ತು ವರ್ಷಗಳಿಂದ ಆದ ಬದಲಾವಣೆಗಳಿಗೆ ತಕ್ಕಂತೆ ಅವರಲ್ಲಿ ಮಾತನಾಡುತ್ತೇನೆ. ಅಂತಹ ಕೇಳುಗರು ಕರೆ ಮಾಡಿದಾಗ, ಅವರ ಧ್ವನಿ ಕೇಳಿದಾಗ ನನಗೆ ತಕ್ಷಣ ತಿಳಿಯುತ್ತದೆ. ಹಾಗಾಗಿ ಅವರ ಕಷ್ಟ ಸುಖಗಳ ಬಗ್ಗೆ ಮಾತನಾಡುತ್ತೇನೆ. ಅವರ ಮಕ್ಕಳ ಬಗ್ಗೆ, ಕುಟುಂಬದ ಬಗ್ಗೆ ವಿಚಾರಿಸುತ್ತೇನೆ. ‘ಈಗೀಗ ಕಾರ್ಯಕ್ರಮ ಕೇಳಲು ಸಮಯ ಸಿಗುತ್ತಿಲ್ಲ. ಇವತ್ತು ಕೇಳಿದೆ. ಹಾಗಾಗಿ ಕರೆ ಮಾಡಿದೆ’ ಎಂದು ಹೇಳಿ ಮಾತನಾಡುವವರೂ ಇದ್ದಾರೆ.

‘ಸವಿ ಸವಿ ನೆನಪು’ ಕೇಳುಗರ ಅಭಿಪ್ರಾಯಗಳು ಹೇಗಿವೆ?

ಕನ್ನಡವನ್ನು ಎಲ್ಲರೂ ಮಾತನಾಡುತ್ತಾರೆ. ಅದು ಬೇರೆ ವಿಷಯ. ಏಕೆಂದರೆ ಆರ್‍ಜೆಗಳು ಬೇಕಾದಷ್ಟು ಇದ್ದಾರೆ. ನಾನು ರೇಡಿಯೊದಲ್ಲಿ ಬಳಸುವ ಕನ್ನಡ ಶಬ್ದಗಳು ಎಲ್ಲರಿಗೂ ತುಂಬಾ ಇಷ್ಟ. ನನ್ನ ನಿರೂಪಣೆಯ ಶೈಲಿ ಹಾಗೂ ಕನ್ನಡದ ಶಬ್ದಗಳನ್ನು ಬಳಸುವ ರೀತಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಹಾಗಾಗಿಯೇ ಕೆಲವೊಂದು ಕಡೆಗಳಲ್ಲಿ ಅದೇ ವೇದಿಕೆ, ಅದೇ ಕಾರ್ಯಕ್ರಮ, ಅದೇ ಜನರು ಇರುತ್ತಾರೆ. ಅಂತಹ ಕಾರ್ಯಕ್ರಮಗಳಲ್ಲಿ ಏಳೆಂಟು ವರ್ಷ ನಿರೂಪಣೆ ಮಾಡಿದ್ದೇನೆ. ನನಗಾಗಿಯೇ ಕೆಲವೊಂದು ಕಾರ್ಯಕ್ರಮಗಳನ್ನು ಮುಂದೂಡಿದ್ದು, ದಿನಾಂಕ ಬದಲಿಸಿದ್ದೂ ಇದೆ. ಸುರತ್ಕಲ್ ಎನ್‍ಐಟಿಕೆಯ ಪ್ರಾಧ್ಯಾಪಕರೊಬ್ಬರು ಕರೆ ಮಾಡಿ, ‘ನನಗೆ ಕನ್ನಡ ಅರ್ಥವಾಗುವುದಿಲ್ಲ. ಆದರೂ ನಿಮ್ಮ ಮಾತಿನ ಶೈಲಿ, ನಿರೂಪಣೆಯ ಕ್ರಮ, ಧ್ವನಿ ಹಾಗೂ ನೀವು ಬಳಸುವ ಶಬ್ದಗಳನ್ನು ಕೇಳಲು ಖುಷಿಯಾಗುತ್ತದೆ. ಅದಕ್ಕಾಗಿ ನಿಮ್ಮ ಕಾರ್ಯಕ್ರಮ ಕೇಳುತ್ತೇನೆ’ ಎಂದು ಹೇಳುವಾಗ ನಿಜಕ್ಕೂ ಖುಷಿಯಾಗುತ್ತದೆ.

‘ಕರುನಾಡ ಡಿಂಡಿಮ’ ಕಾರ್ಯಕ್ರಮ ನಿರೂಪಣೆಗಾಗಿ ಇತ್ತೀಚೆಗೆ ಕುವೈತ್‍ಗೆ ಹೋಗಿದ್ದೀರಿ…

ಇಲ್ಲಿನವರಿಗಿಂತ ಹೆಚ್ಚು ಕನ್ನಡದ ಮೇಲೆ ಪ್ರೀತಿ ತೋರಿಸುವವರು ಅವರು. ನಿರೂಪಣೆಯನ್ನು ತುಂಬಾ ಇಷ್ಟಪಟ್ಟರು. ಸಂಪೂರ್ಣ ಕಾರ್ಯಕ್ರಮ ಕನ್ನಡದಲ್ಲಿಯೇ ನಡೆದಿತ್ತು. ಕನ್ನಡದ ಹಾಡುಗಳನ್ನು ಹಾಡಿದಾಗ ಸಂಭ್ರಮಿಸಿದರು. ಊರಿನವರು ಯಾರಾದರೂ ಸಿಕ್ಕಾಗ ಮಾತ್ರ ಅವರಿಗೆ ಕನ್ನಡ ಮಾತನಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಕೆಲಸದ ಸ್ಥಳಗಳಲ್ಲಿ ಅವರು ಇಂಗ್ಲಿಷ್‍ನಲ್ಲಿಯೇ ಮಾತನಾಡಬೇಕಾಗುತ್ತದೆ. ಕೆಲಸದ ನಡುವೆ ವಾರದ ಒಂದು ದಿನದ ರಜೆಯಲ್ಲಿ ಕಾರ್ಯಕ್ರಮ ಆಯೋಜಿಸಿ, ಅಷ್ಟೊಂದು ಜನರನ್ನು ಒಟ್ಟುಗೂಡಿಸುವುದು ಸುಲಭದ ಕೆಲಸ ಅಲ್ಲ. ಸಾವಿರಾರು ಜನರು ಸೇರಿದ್ದರು. ಅಷ್ಟೆಲ್ಲ ಜನರು ಬರಬೇಕಾದರೆ, ಅದು ತಮ್ಮ ಭಾಷೆಯ ಮೇಲಿನ, ನೆಲದ ಬಗೆಗಿನ ಅಭಿಮಾನದಿಂದ ಮಾತ್ರ ಸಾಧ್ಯ.

ಇತರ ಕಾರ್ಯಕ್ರಮಗಳ ನಿರೂಪಣೆ ಬಗ್ಗೆ…?

ಒಂದು ಸಾವಿರದಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದೇನೆ. ಬೀದರ್ ಒಂದನ್ನು ಬಿಟ್ಟು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕಾರ್ಯಕ್ರಮ ನಿರೂಪಣೆಗೆ ಹೋಗಿದ್ದೇನೆ. ಅಲ್ಲದೆ ಆಂಧ್ರಪ್ರದೇಶ, ಮುಂಬೈಗೂ ಹೋಗಿದ್ದೆ. ಮೈಸೂರು ದಸರಾದಲ್ಲಿ ಆರೇಳು ವರ್ಷ ನಿರೂಪಣೆ ಮಾಡಿದ್ದೇನೆ. ಈಗಲೂ ರೇಡಿಯೊ ಕಾರ್ಯಕ್ರಮದ ನಡುವೆ ನಿರೂಪಣೆ ಮಾಡುತ್ತಿರುತ್ತೇನೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಟಿವಿ, ರೇಡಿಯೊ ಜಾಹೀರಾತುಗಳಿಗೆ ಧ್ವನಿ ನೀಡಿದ್ದೇನೆ. ಅಲ್ಲದೆ ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಮುಂತಾದ ಕಡೆ ಪೊಲೀಸ್ ಕಾಲರ್ ಟ್ಯೂನ್‍ನಲ್ಲಿ ನನ್ನದೇ ಧ್ವನಿ ಇದೆ.

ಹೊಸಕಾಲದಲ್ಲಿ ಕನ್ನಡದ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ?

ಭಾಷೆಯನ್ನು ಉಳಿಸಲು ಭಾಷೆಯ ಬಗೆಗಿನ ತೋರಿಕೆಯ ಅಭಿಮಾನದಿಂದ ಸಾಧ್ಯವಿಲ್ಲ. ನಾಲ್ಕು ಜನರ ಮುಂದೆ ನಾನು ಭಾಷೆಯನ್ನು ಉಳಿಸುತ್ತೇನೆ, ಬೆಳೆಸುತ್ತೇನೆ ಎಂದು ಆಡಿಕೊಂಡು ಕುಳಿತರೆ ಯಾವ ಭಾಷೆಯೂ ಉಳಿಯದು. ಯಾವಾಗ ನಾವು ಹೃದಯದಿಂದ ಮಾತನಾಡುತ್ತೇವೆಯೋ, ಆಗಲೇ ಭಾಷೆ ಉಳಿಯುವುದು. ಮಾತನಾಡುವುರಿಂದಲೇ ಭಾಷೆ ಉಳಿಯುತ್ತದೆ. ಕನ್ನಡದಲ್ಲಿ ಇರುವಷ್ಟು ಅದ್ಭುತವಾದ ಶಬ್ಧಗಳು ಬೇರೆ ಭಾಷೆಗಳಲ್ಲಿ ಸಿಗುವುದು ಕಷ್ಟ. ಇದನ್ನು ಇತರ ಭಾಷೆಯವರೇ ಹೇಳುತ್ತಾರೆ. ಭಾಷೆಗೆ ಭವಿಷ್ಯ ಇದೆ ಎಂಬ ನಂಬಿಕೆಯಿಂದಲೇ ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ.

ಹಲೋ…
ನಾನು ಸೌಜನ್ಯ,
ಆರ್.ಜೆ.ಸೌಜನ್ಯ…
ನಮಸ್ಕಾರ,
ನಾನು ನಿಮ್ಮ ಸೌಜನ್ಯ. ಕಳೆದ ಹನ್ನೊಂದು ವರ್ಷಗಳಿಂದ ಆರ್.ಜೆ. ವೃತ್ತಿಯಲ್ಲಿ ಇದ್ದೀನಿ. ರೇಡಿಯೋ ಸಿಟಿ 91.1 ನಲ್ಲಿ ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ‘ಡ್ರೈವ್ ಟೈಮ್’ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ದಿನಪತ್ರಿಕೆಯೊಂದರಲ್ಲಿ ಬರವಣೆಗೆ ಮಾಡಿದ ಅನುಭವವೂ ಇದೆ. ಕಾರ್ಯಕ್ರಮ ನಿರೂಪಣೆ ಜೊತೆಗೆ ಡಬ್ಬಿಂಗ್ ಕೂಡ ಮಾಡ್ತೀನಿ. ಇದು ನನ್ನ ಕಿರು ಪರಿಚಯ.
ಇನ್ನು ಸಮಾಜಮುಖಿ ಮಾಸಪತ್ರಿಕೆ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಮುಂದಿಟ್ಟುರುವ ಪ್ರಶ್ನೆಗಳಿಗೆ, ಇಗೋ… ನನ್ನ ಉತ್ತರಗಳು ಹೀಗಿವೆ…
……………………………………………………………
……………………………………………………………
? ? ? ? ?
‘ಅರೇ…! ಉತ್ತರಗಳೇ ಇಲ್ಲವಲ್ಲ…! ಮುದ್ರಣ ದೋಷವೇ?’ ಎಂದು ಅನುಮಾನ ಪಡಬೇಡಿ.
ಸಂದರ್ಶಕ ಮೌನೇಶ್ ಬಡಿಗೇರ
ಅವರ ಪ್ರಶ್ನೆಗಳಿಗೆ ನನ್ನ
ಉತ್ತರಗಳನ್ನು ನನ್ನ ದನಿಯಲ್ಲಿಯೇ
ಆಲಿಸಲು ಕೆಳಗಿನ ಕ್ಯೂಆರ್ ಕೋಡ್
ಸ್ಕ್ಯಾನ ಮಾಡಿ:

Leave a Reply

Your email address will not be published.