ಸಹಸ್ರಮಾನದ ಬಾಲರು ಯಾವುದಕ್ಕೂ ಸೋಲರು!

ಅವರಿಗೆ ಕೈಯಲ್ಲಿ ಮೊಬೈಲಿರದಿದ್ದರೆ ಬದುಕು ಬೇಸರವಾಗುತ್ತದೆ. ವೈಫೈ ಇಲ್ಲದಿದ್ದರಂತೂ ಜೀವನವೇ ಶೂನ್ಯ. ಇದಕ್ಕೆಲ್ಲ ಕಾರಣ ಅವರಿಗೆ ಮನೆಯಲ್ಲಿ ಸಿಗದ ಸೂಕ್ತ ವಾತಾವರಣ.

ತಂತ್ರಜ್ಞಾನದ ನಿರಂತರ ಸಂಶೋಧನೆಯಿಂದ ‘ನಿನ್ನೆಯದು ನಿನ್ನೆಗೆ, ಇಂದಿನದು ಇಂದಿಗೆ’ ಬೇಕೆನ್ನುವ ಬಳಕೆದಾರ ಸುಸ್ಥಿತಿ ಮತ್ತು ಮನಸ್ಥಿತಿಯ ಪರಿಣಾಮವಾಗಿ, ಇಂದಿವ ಮನೆ-ಮನಗಳು ವಿದ್ಯುನ್ಮಾನ ಆಲಯಗಳಾಗಿ ಮಾರ್ಪಡುತ್ತಿವೆ. ಇಂಥ ವಾತಾವರಣದಲ್ಲಿ ಹುಟ್ಟಿ ಬೆಳೆಯುತ್ತಿರುವವರು ನಮ್ಮ ಸಹಸ್ರಮಾನದ ಮಕ್ಕಳು.

ಈ ಮಕ್ಕಳ ತಂದೆ-ತಾಯಿಗಳು, ತಮ್ಮ ಯಾವುದೇ ಹಿರಿಯ ತಲೆಮಾರು ಕಂಡರಿಯದ ಅಪರಿಮಿತ ಸೌಲಭ್ಯ, ಸೌಕರ್ಯಗಳನ್ನು ಪಡೆದುಕೊಂಡಿದ್ದಾರೆ. ಬ್ಯಾಂಕಿನಲ್ಲಿ ಹಣ, ಅಂಗೈಯಲ್ಲಿ ತಂತ್ರಜ್ಞಾನದ ಮಹಾಶಕ್ತಿ ಹೊಂದಿದ್ದಾರೆ. ಆದರೆ ಇವರು ಸಂಬಂಧಗಳನ್ನು ಉಳಿಸಿ-ಬೆಳೆಸಲು ಸಮಯವೇ ಇಲ್ಲದಷ್ಟು ಬಡವರು!

ಆಗ ಮಕ್ಕಳು ಅತ್ತರೆ ಹಾಲು, ಹಣ್ಣು, ಮಿಠಾಯಿ ಅಥವಾ ಗಿಲಕಿ ಕೊಟ್ಟು ಸಮ್ಮನಾಗಿಸುತ್ತಿದ್ದರು. ಈಗ ಅವುಗಳ ಕೈಗೆ ಮೊದಲು ಸಿಗುವುದು ಐಪ್ಯಾಡ್, ಸ್ಮಾರ್ಟ್‍ಫೋನುಗಳೇ. ಹೀಗಾಗಿ, ಕೈಯಲ್ಲಿ ತಂತ್ರಜ್ಞಾನವಿಲ್ಲದೆ ಸಹಸ್ರಮಾನದ ಮಕ್ಕಳು ಸುಮ್ಮನಿರಲು ಸಾಧ್ಯವಿಲ್ಲವೆನ್ನುವ ಸ್ಥಿತಿ. ನಾವು ಅಳು ಮತ್ತು ನಗುವಿನ ಮಜಾ ಮಕ್ಕಳಿಗೆ ಅರ್ಥವಾಗದಂತೆ ಮಾಡಿಬಿಟ್ಟಿದ್ದೇವೆ ಎಂದು ಅನಿಸುವುದಿಲ್ಲವೆ?

ಹಿಂದಿನ ಕಾಲದಲ್ಲಿ ಮಕ್ಕಳ ಹುಟ್ಟುಹಬ್ಬಕ್ಕೆ ಸಂಬಂಧಿಕರೆಲ್ಲರೂ ಸೇರುತ್ತಿದ್ದರು; ಮಗು ಸುಂದರ ಒಡನಾಟ, ಕುಟುಂಬದ ಒಂದುಗೂಡುವಿಕೆ, ಸಂತಸದ ಕ್ಷಣಗಳನ್ನು ಮತ್ತು ಸಾಮಾಜಿಕ ಮೌಲ್ಯಗಳನ್ನು ಕಣ್ಣಾರೆ ಕಾಣುತ್ತಿತ್ತು, ತನಗರಿವಿಲ್ಲದೆಯೇ ಒಳ್ಳೆಯತನವನ್ನು ರೂಢಿಸಿಕೊಳ್ಳುತ್ತಿತ್ತು. ಈಗ ಬರೀ ಮಗುವಿನ ಕ್ಲಾಸ್‍ಮೇಟುಗಳು ಬರುತ್ತಾರೆ. ಮಗುವಿಗೆ ಸಿಗುವುದು ಮನರಂಜನೆ ಮಾತ್ರ. ಹೀಗಾಗಿ, ಮಗು ಸಂಬಂಧಗಳ ಅರಿವಿಲ್ಲದೆ, ಕುಟುಂಬದ ಮಹತ್ವ ತಿಳಿಯದೇ ಪ್ರತ್ಯೇಕಗೊಳ್ಳುತ್ತದೆ. ಅಂತರ್ಜಾಲದ ಪ್ರಭಾವಕ್ಕೊಳಗಾಗಿ ತನ್ನದೇ ಯೋಚನೆಯ ಹೊಸ ಜಗತ್ತನ್ನು ಸೃಷ್ಟಿಸಿಕೊಂಡುಬಿಡುತ್ತದೆ.

ಇದು ಅತ್ಯಂತ ಸ್ವಾಭಾವಿಕವಾಗಿತ್ತು. ಆದರೆ, ಈಗ ಮಕ್ಕಳಿಗೆ ಬೇಸಿಗೆ ರಜೆ ಬಂತೆಂದರೆ ತಂದೆ-ತಾಯಿಗಳು ತಮಗೆ ಕಿರಿಕಿರಿಯಾಗುತ್ತದೆಂದು, ತಮ್ಮ ಸ್ವಾತಂತ್ರ್ಯಕ್ಕೆ ಎಲ್ಲೊ ಧಕ್ಕೆ ಬರುತ್ತದೆಯೆಂದು ಒದ್ದಾಡುತ್ತಾರೆ.

ಆಗ ಬೇಸಿಗೆ ರಜೆ ಬಂದರೆ ಮಗು ಅಜ್ಜ-ಅಜ್ಜಿಯರ ಮನೆಗೆ ಹೋಗುವುದು ಸಾಮಾನ್ಯವಾಗಿತ್ತು. ಅಲ್ಲಿ ಅಜ್ಜ-ಅಜ್ಜಿಯರು ಮೊಮ್ಮಗುವಿಗೆ ಕಥೆ ಹೇಳುತ್ತ, ತಂತಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಗಳ ಮಹತ್ವವನ್ನು ತಿಳಿಸಿಕೊಡುತ್ತಿದ್ದರು. ಇದು ಅತ್ಯಂತ ಸ್ವಾಭಾವಿಕವಾಗಿತ್ತು. ಆದರೆ, ಈಗ ಮಕ್ಕಳಿಗೆ ಬೇಸಿಗೆ ರಜೆ ಬಂತೆಂದರೆ ತಂದೆ-ತಾಯಿಗಳು ತಮಗೆ ಕಿರಿಕಿರಿಯಾಗುತ್ತದೆಂದು, ತಮ್ಮ ಸ್ವಾತಂತ್ರ್ಯಕ್ಕೆ ಎಲ್ಲೊ ಧಕ್ಕೆ ಬರುತ್ತದೆಯೆಂದು ಒದ್ದಾಡುತ್ತಾರೆ. ಹೇಗಾದ್ರೂ ಮಾಡಿ ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ.

ಮಗು ಬೇಸಿಗೆಯ ರಜೆಯಲ್ಲೂ ಮನರಂಜನೆಯೆಂಬ ಬಿಸಿಲು ಕುದುರೆಯನ್ನೇರಿ ಮೂರು-ನಾಲ್ಕು ತಾಸಿನವರೆಗೆ ಮನೆಯಿಂದ ಹೊರಗೆ ಉಳಿಯುತ್ತದೆ. ಹೀಗಾಗಿ, ಮನೆ-ರಂಜನೆ ಮರೆತುಹೋಗುತ್ತದೆ. ಬೇಸಿಗೆ ಶಿಬಿರದಲ್ಲಿ, ತಾನು ಬಿಡಿಸಿದ ಚಿತ್ರಕ್ಕೆ ತಂದೆ-ತಾಯಿಗಳಿಂದ ಸಿಗುವ ಮೆಚ್ಚುಗೆಯೇ ಶ್ರೇಷ್ಠವೆಂದು ಭಾವಿಸುತ್ತಾ, ತನ್ನ ಕೃತಕ ಲೋಕವನ್ನು ವಿಸ್ತರಿಸುತ್ತ ಹೋಗಿಬಿಡುತ್ತದೆ.

ಸಹಸ್ರಮಾನದ ಮಕ್ಕಳು ನಿರಂತರ ಸ್ವಾಭಾವಿಕವಲ್ಲದ ವಾತಾವರಣಕ್ಕೆ ಒಗ್ಗಿಕೊಂಡುಬಿಟ್ಟಿವೆ. ಅವರ ಪ್ರಭಾವಲಯವು ಮನೆಯಲ್ಲಿಲ್ಲ; ಹೊರಗಣ ಆಕರ್ಷಣೆಗಳು ಆವರಿಸಿಕೊಂಡಿವೆ. ಅವರಿಗೆ ಕೈಯಲ್ಲಿ ಮೊಬೈಲಿರದಿದ್ದರೆ ಬದುಕು ಬೇಸರವಾಗುತ್ತದೆ. ವೈಫೈ ಇಲ್ಲದಿದ್ದರಂತೂ ಜೀವನವೇ ಶೂನ್ಯ. ಇದಕ್ಕೆಲ್ಲ ಕಾರಣ ಅವರಿಗೆ ಮನೆಯಲ್ಲಿ ಸಿಗದ ಸೂಕ್ತ ವಾತಾವರಣ.

ಸಹಸ್ರಮಾನದ ಮಕ್ಕಳು ತಂತ್ರಜ್ಞಾನದ ಮೂಲನಿವಾಸಿಗಳು. ಆದ್ದರಿಂದ ಅವರ ನಡೆ-ನುಡಿಗಳು ನೇರ ಮತ್ತು ದಿಟ್ಟ. ಸ್ಪಷ್ಟತೆಯನ್ನು ಮೈಗೂಡಿಸಿಕೊಂಡಿರುವ ಈ ಮಕ್ಕಳು ಯಾವುದಕ್ಕೂ ಜಗ್ಗುವುದಿಲ್ಲ. ಈ ವರ್ತನೆ ಅವರ ತಂದೆ-ತಾಯಿಗಳಿಗೆ ಆಘಾತವುಂಟು ಮಾಡುತ್ತದೆ. ಮಗು ಬೆಳೆಯುವ ಸಮಯದಲ್ಲಿ, ಅದರ ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ವಾತಾವರಣ ಕಲ್ಪಿಸದಿದ್ದುದೇ ಈ ಸ್ಥಿತಿಗೆ ಕಾರಣವೆನ್ನುವುದು ಆ ತಂದೆ-ತಾಯಿಗಳಿಗೆ ಅರ್ಥವೇ ಆಗುವುದಿಲ್ಲ.

ಮನೆಯ ವಾತಾವರಣ ಮತ್ತು ಶಾಲೆಯ ವಾತಾವರಣವೂ ಪೂರಕವಾಗಿಲ್ಲದ ಕಾರಣ ಮಗುವಿಗೆ ನಿರ್ದಿಷ್ಟತೆಯ ಕೊರತೆ ಕಾಡುತ್ತದೆ. ಓದಿನಲ್ಲಿ ಸ್ಫೂರ್ತಿಯಿಲ್ಲದೆ, ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಮ್, ಯುಟ್ಯೂಬ್, ವಾಟ್ಸಪ್ ಗಳಲ್ಲಿ ಮಗು ಕಾಲಕಳೆಯುತ್ತ ಮುಳುಗಿಬಿಡುತ್ತಿದೆ.

ಈಗ ಸಮಾಜದಲ್ಲಿ ಮಧುರ ಮಾತುಗಳು ಕಡಿಮೆ; ಬರಿ ಸಂಕ್ಷಿಪ್ತರೂಪಗಳೇ ತುಂಬಿಕೊಂಡಿವೆ. ‘ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು’ ಸಂದೇಶದ ಜಾಗೆಗೆ HBD ಬಂದುಬಿಟ್ಟಿದೆ. ಸಾವಿನ ಸಂದರ್ಭದಲ್ಲಿ RIP ಸಂದೇಶ ಹೋಗುತ್ತದೆ. ತಂದೆ-ತಾಯಿಗಳ ಈ ನಡವಳಿಕೆಯನ್ನು ಮಗು ತನ್ನದಾಗಿಸುತ್ತಾ, ಅದನ್ನೇ ಬಳಸುತ್ತಾ ಸಾಗುತ್ತದೆ. ಮನೆಯ ವಾತಾವರಣ ಮತ್ತು ಶಾಲೆಯ ವಾತಾವರಣವೂ ಪೂರಕವಾಗಿಲ್ಲದ ಕಾರಣ ಮಗುವಿಗೆ ನಿರ್ದಿಷ್ಟತೆಯ ಕೊರತೆ ಕಾಡುತ್ತದೆ. ಓದಿನಲ್ಲಿ ಸ್ಫೂರ್ತಿಯಿಲ್ಲದೆ, ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಮ್, ಯುಟ್ಯೂಬ್, ವಾಟ್ಸಪ್ ಗಳಲ್ಲಿ ಮಗು ಕಾಲಕಳೆಯುತ್ತ ಮುಳುಗಿಬಿಡುತ್ತಿದೆ.

ಸಂಬಂಧಗಳ ದಟ್ಟತೆ ಅನುಭವಿಸದೇ ಮಗು ಒಣತ್ವವನ್ನು ಧಾರಾಳವಾಗಿ ಬಳಸುತ್ತಿದೆ. ಕುಟುಂಬದ ಸ್ಥಾನದಲ್ಲಿ ಸ್ನೇಹಿತರು ಆಸೀನರಾಗಿದ್ದಾರೆ. ಉದಾರತೆಯ ಜಾಗದಲ್ಲಿ ಉಪೇಕ್ಷತೆ ಬೀಡುಬಿಟ್ಟಿದೆ. ಪ್ರೀತಿಯಿರಬೇಕಾದಲ್ಲಿ ಮನರಂಜನೆ ರಾರಾಜಿಸುತ್ತಿದೆ. ಕಲಿಕೆಯ ಶ್ರೇಷ್ಠತೆಯನ್ನು ಹೇಳಿಕೊಡಬೇಕಾದಲ್ಲಿ ಬರೀ ಗಳಿಕೆಯ ಉತ್ಪ್ರೇಕ್ಷೆಯ ಬಗ್ಗೆ ಮಾತನಾಡಲಾಗುತ್ತಿದೆ. ಸಹಸ್ರಮಾನದ ಮಕ್ಕಳು ಇದನ್ನೆಲ್ಲ ಮೈಯೆಲ್ಲ ಕಣ್ಣಾಗಿ ನೋಡುತ್ತಲೇ ಬೆಳೆಯುತ್ತಿದ್ದಾರೆ.

ಸಹಸ್ರಮಾನದ ಮಕ್ಕಳಲ್ಲಿ ಒಳಗಿನ ಆನಂದಕ್ಕಿಂತ ಹೊರಗಿನ ಮಜವೇ ಮೆರೆಯುತ್ತಿದೆ. ಇಡೀ ದಿನ ಅಂತರ್ಜಾಲದಲ್ಲಿ ಮಗ್ನವಾಗಿರುವುದೇ ನಿಜವಾದ ಲೋಕವಾಗಿದೆ. ಮೆಸೇಜುಗಳ ಬರುವಿಕೆಗೆ ಕಾಯುವುದು, ಆ ಮೆಸೇಜು ಬಂದ ಕ್ಷಣಾರ್ಧದಲ್ಲಿಯೇ ಅವಕ್ಕೆ ಉತ್ತರಿಸುವುದು ಇವರ ಜ್ಯೇಷ್ಠ ಕಲೆಯಾಗಿದೆ.

ಪಕ್ಕದಲ್ಲಿ ಯಾರೇ ಇದ್ದರೂ ಸ್ಪಂದಿಸದ ಪ್ರವೀಣರಿವರು. ಸಂಯಮ, ಸಂವೇದನೆ, ಸಹಾಯ, ಮತ್ತು ಸಂಪರ್ಕ ಎಂಬ ಶಬ್ದಗಳಿಗೆ ಹೊಸ ಭಾಷ್ಯವನ್ನೇ ಬರೆದ ವಿರಾಟ ಪೀಳಿಗೆಯಿದು. ಇವರಿಗೆ ಏನಾದರೂ ಬರಲಿ ನೋಡೋಣ ಎನ್ನುವ ಹುಂಬು ಧೈರ್ಯವಿದೆ. ಇವರು ಹೀಗಿದ್ದಾರೆ ಎನ್ನುವುದಕ್ಕಿಂತ, ನಾವವರನ್ನು ಹಾಗೆ ಮಾಡಿದ್ದೇವೆ ಎನ್ನುವುದೇ ಸತ್ಯ!

*ಲೇಖಕರು ಐಟಿ ಉದ್ಯಮದಲ್ಲಿ ಉನ್ನತ ಅಧಿಕಾರಿ; ಸಾಹಿತಿ, ಶಿಕ್ಷಣ ತಜ್ಞ, ತರಬೇತಿದಾರರಾಗಿ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published.