ಸಾಂಕ್ರಾಮಿಕದ ಅಂತ್ಯ ಹೇಗೆ..? ಚಿಕಿತ್ಸೆಯೋ..? ಲಸಿಕೆಯೋ..? ಸಮೂಹ ರೋಗನಿರೋಧಕ ಶಕ್ತಿಯೋ..?

ಅನೇಕ ವಿದ್ಯಾವಂತರು, ಕ್ರಿಯಾಶೀಲರು ಮತ್ತೆ ಮತ್ತೆ ಕೇಳುವ, ತಮ್ಮನ್ನೇ ಕೇಳಿಕೊಳ್ಳುವ ಪ್ರಶ್ನೆಗಳು… ನಮ್ಮ ಬದುಕು ಮತ್ತೆ ಮಾಮೂಲಾಗುತ್ತದೆಯೇ? ಮತ್ತೆ ನಾನು ರಸ್ತೆಯಲ್ಲಿ ನಿಂತು ನಿರಾತಂಕವಾಗಿ ತಿಂಡಿ ತಿಂದು ಟೀ ಕುಡಿಯಬಲ್ಲೆನೇ? ಮತ್ತೆ ಸಹಸ್ರಾರು ಜನರೊಂದಿಗೆ ಬೆರೆಯಬಲ್ಲೆನೇ? ಈ ಪ್ರಶ್ನೆಗಳಿಗೆ ವಿಜ್ಞಾನದ ಉತ್ತರವೇನು? ಕೋವಿಡ್ ಕಲಿಗಾಲ ಮುಗಿಯುತ್ತದೆಯೇ? ಮುಗಿಯುವುದಿದ್ದರೆ ಯಾವಾಗ ಮುಗಿಯುತ್ತದೆ, ಹೇಗೆ ಮುಗಿಯುತ್ತದೆ, ಯಾವ ಕ್ರಮಗಳಿಂದ, ಎಷ್ಟರಮಟ್ಟಿಗೆ ಮುಗಿಯುತ್ತದೆ? ಇದೆಲ್ಲಕ್ಕೂ ಖಚಿತವಾದ ಉತ್ತರಗಳು ಕಷ್ಟವಾದರೂ, ವಿವಿಧ ದೇಶಗಳಲ್ಲಿ ಖಂಡಗಳಲ್ಲಿ ನಡೆದಿರುವ ಹಲವಾರು ಅಧ್ಯಯನಗಳು ಚೆಲ್ಲಿರುವ ಬೆಳಕು ಇಲ್ಲಿದೆ.

ಡಾ.ಬಿ.ಆರ್.ಮಂಜುನಾಥ್

ಬಹಳಷ್ಟು ಜನ ಕೊರೊನಾ ನಮ್ಮೊಂದಿಗಿರುತ್ತದೆ ಬಿಡಿ ಎನ್ನುತ್ತಿದ್ದಾರೆ. ಅದರ ಅರ್ಥ ಅದು ಇತರ ಅನೇಕ ವೈರಾಣು ಸೋಂಕುಗಳಂತೆ ಒಂದು ತೀರಾ ಕಡಿಮೆ ಸಂಖ್ಯೆಯಲ್ಲಿ ಉಳಿದಿರುತ್ತದೆ ಎಂಬ ಅರ್ಥದಲ್ಲಾದರೆ ಪರವಾಗಿಲ್ಲ. ಆದರೆ ಹೆಚ್ಚು ಕಡಿಮೆ ಈಗಿರುವಂತೆಯೇ ಮಹಾ ಉಪದ್ರವಕಾರಿಯಾಗಿ ಜನಜೀವನವನ್ನು ಅಲ್ಲೋಲ ಕಲ್ಲೋಲಕ್ಕೆ ತಳ್ಳಿ ಇರುತ್ತದೆ ಎಂದರೆ ಮಾತ್ರ ಅದು ತೀರಾ ಕಳವಳದ ವಿಷಯವಾಗುತ್ತದೆ.

ಅನೇಕ ಸಮಾಜಶಾಸ್ತ್ರಜ್ಞರು, ವೈದ್ಯಕೀಯ ಇತಿಹಾಸದ ತಜ್ಞರು ಹೇಳುವುದು ಕೊರೊನಾ ಎರಡು ರೀತಿಯಲ್ಲಿ ಮುಕ್ತಾಯ ಕಾಣುತ್ತದೆ ಎಂದು. ಮೊದಲನೆಯದು, ಸಮಾಜೋ-ಆರ್ಥಿಕ-ರಾಜಕೀಯ ಅಂತ್ಯ. ಇನ್ನೊಂದು ವೈಜ್ಞಾನಿಕ-ವೈದ್ಯಕೀಯ ಅಂತ್ಯ.

ಮೊದಲನೆಯದು, ರೋಗ ಹೇಗಾದರೂ ಇರಲಿ ನಾವು ಆದಷ್ಟೂ ಮಾಮೂಲಾಗಿ ಬಿಡೋಣ ಎನ್ನುವುದು. ಇದರಲ್ಲಿ ಆರ್ಥಿಕ ಒತ್ತಡದ್ದು ದೊಡ್ಡ ಪಾತ್ರ. ಅಂಗಡಿ, ಕಚೇರಿ ಇವೆಲ್ಲಾ ಪುನರಾರಂಭ ಆಗಲೇಬೇಕು. ಇಲ್ಲದಿದ್ದರೆ ನಿರುದ್ಯೋಗ, ಬಡತನ, ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಜನಗಳಲ್ಲೇ “ರೋಗಾಯಾಸ” ಕಾಣಿಸಿಕೊಳ್ಳುತ್ತದೆ. ಪ್ರಾಯಶಃ ಈ ಬೆಳವಣಿಗೆಯನ್ನು ನಾವು ಈಗಾಗಲೇ ಕಾಣುತ್ತಿದ್ದೇವೆ.

ಎರಡನೆಯದು, ವೈದ್ಯಕೀಯ ಅಂತ್ಯ. ಎಂದರೆ ಹೊಸ ರೋಗಗಳ ಸಂಖ್ಯೆ ಸೊನ್ನೆಗೆ ಅಥವಾ ಹತ್ತಿರ ಹತ್ತಿರ ಸೊನ್ನೆಗೆ ತಲುಪುವುದು. ಇದು ಹೇಗೆ ಸಾಧ್ಯ ಎಂದರೆ ಒಂದು ವೈರಸ್ ತಾನು ತಿನ್ನಬಹುದಾದ ಎಲ್ಲರನ್ನೂ ತಿಂದು ಮುಗಿಸಿ, ನಂತರ ಹಿಂದೆ ಅನೇಕ ಮಹಾರೋಗಗಳು ತಂತಾನೆ ನಮಗೆ ಗೊತ್ತಿಲ್ಲದ ಕಾರಣಗಳಿಂದ ನಿಂತುಹೋದಂತೆ ಈಗಲೂ ನಿಲ್ಲುವುದು. ಇನ್ನೊಂದು ವ್ಯಾಕ್ಸಿನ್‌ಗಳು ಆದಷ್ಟೂ ಬೇಗ ಮಾರುಕಟ್ಟೆಗೆ ಬಂದು ತಲುಪಬೇಕಾದವರನ್ನೆಲ್ಲಾ ತಲುಪಿ ರೋಗಕ್ಕೆ ಬ್ರೇಕ್ ಹಾಕುವುದು.

ಮೂರನೆಯ ಸಾಧ್ಯತೆ ಎಂದರೆ ಸಾಮೂಹಿಕ ರೋಗ ನಿರೋಧಕ ಶಕ್ತಿಯು ಸಮುದಾಯದಲ್ಲಿ ಸ್ಥಾಪಿತವಾಗಿ ರೋಗ ಹರಡುವುದು ನಿಧಾನವಾಗುತ್ತಾ ಇಲ್ಲವಾಗುವುದು. ಈ ಮೂರೂ ದೃಶ್ಯಾವಳಿಗಳೂ ಸಾಧ್ಯ. ಇವುಗಳ ಕುರಿತು ಅನೇಕ ಅಧ್ಯಯನಗಳು, ಚರ್ಚೆಗಳು, ವಿವಾದಗಳು ವಿಶ್ವದಾದ್ಯಂತ ಬಂದಿವೆ. ಅವುಗಳನ್ನು ಅವಲೋಕಿಸೋಣ.

ಆತಂಕಕಾರಿ ದೃಶ್ಯಾವಳಿ

ಈ ಮಹಾರೋಗದ ಮುಕ್ತಾಯ ಹೇಗಾಗಬಹುದು ಎಂಬುದರ ಬಗ್ಗೆ ಮಾತನಾಡುತ್ತಾ ವಿಶ್ವಸಂಸ್ಥೆಯ ಮಾಜಿ ತಜ್ಞರಾದ ಕಾಸ್ ಸ್ಟೋರ್‌ರವರು ಕೋವಿಡ್ ಸೋಂಕು ಮತ್ತೆ ಮತ್ತೆ ಕಾಣಿಸಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ. ಅವರು ಈ ಹಿಂದೆ ಜಗತ್ತಿನ ವಿವಿಧ ಸರ್ಕಾರಗಳನ್ನು ಏವಿಯನ್ ಫ್ಲೂಗಳ ಬಗ್ಗೆ ಎಚ್ಚರಿಸಿದ್ದರು. ಶ್ವಾಸಕೋಶದ ಸೋಂಕುಗಳು ಹೇಗೆ ಮತ್ತೆ ಮತ್ತೆ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತವೆಯೋ ಹಾಗೆಯೇ ಈಗ ಬರಲಿರುವ ಚಳಿಗಾಲದಲ್ಲಿ ಮತ್ತೊಮ್ಮೆ ಕೋವಿಡ್ ಅಲೆ ಕಾಣಿಸಿಕೊಳ್ಳಲಿದೆ ಮತ್ತು ಅದು ಈ ಬಾರಿ ಅತ್ಯಂತ ಭೀಕರವಾಗಿರಲಿದೆ ಎನ್ನುತ್ತಾರೆ ಅವರು.

ಅಲ್ಲದೇ ಈ ಬಾರಿ ಅದು ಕಾಣಿಸಿಕೊಳ್ಳುವ ಹೊತ್ತಿಗೆ ವ್ಯಾಕ್ಸಿನ್ ಸಿದ್ಧವಾಗಿರುವುದಿಲ್ಲ, ಸಿದ್ಧವಾಗಿದ್ದರೂ ಅದು ಎಲ್ಲರನ್ನೂ ತಲುಪಿರುವುದಿಲ್ಲ. ಹೀಗಾಗಿ ಈ ಅಲೆ ದೊಡ್ಡದಾಗಿ ಅಪ್ಪಳಿಸಿದ ನಂತರ, 2021ರ ಮಧ್ಯಭಾಗದ ವೇಳೆಗೆ ಮೂರನೆಯ ಅಲೆ ವಾಪಸ್ ಬರುತ್ತದೆ. ಅದು ಕೊಂಚ ದುರ್ಬಲವಾಗಿರುತ್ತದೆ. ಆ ಅಲೆಯು ಮುಗಿಯುವ ವೇಳೆಗೆ ಹೆಚ್ಚು ಕಮ್ಮಿ ಜಗತ್ತಿನ ಶೇಕಡಾ 80 ಜನರಲ್ಲಿ ರೋಗ ನಿರೋಧಕ ಶಕ್ತಿ ಕಂಡುಬರುತ್ತದೆ. ಹಾಗಾಗಿ ಅಲ್ಲಿಂದಾಚೆಗೆ ರೋಗ ದುರ್ಬಲವಾಗಿ ನಗಣ್ಯವಾಗುತ್ತದೆ. ಅವರ ಪ್ರಕಾರ ಕಡೆಗೂ ರೋಗಕ್ಕೆ ಬ್ರೇಕ್ ಹಾಕುವುದು ಜನತೆಯ ಈ ರೋಗ ನಿರೋಧಕ ಶಕ್ತಿಯೇ. ವೈರಸ್ ನಿಲ್ಲುವುದು ಅದಕ್ಕೆ ಆಹಾರ ಸಿಗದಂತಾದಾಗ. ಅದು ತಾನು ಸುಡಬಹುದಾದ ಎಲ್ಲ ಇಂಧನವನ್ನೂ ದಹಿಸಿ ಸುಮ್ಮನಾಗುವ ಕಾಳ್ಗಿಚ್ಚಿನಂತೆ, ಕೊಲ್ಲಬಹುದಾದ ಎಲ್ಲ ದುರ್ಬಲರು, ವೃದ್ಧರು, ಇತರ ರೋಗಗಳಿಂದ ಬಳಲುತ್ತಿರುವವರು ಎಲ್ಲರನ್ನೂ ಸ್ವಾಹಮಾಡಿ ಸುಮ್ಮನಾಗುತ್ತದೆ. ಎಂದರೆ ಸೋಂಕಿತರಾಗುವವರಲ್ಲಿ ಶೇಕಡಾ 3-4 ಭಾಗವನ್ನು ಅದು ಕೊಂದರೂ ಅದೊಂದು ಭಾರೀ ಸಂಖ್ಯೆಯೇ.

ಇದು ಸ್ವಲ್ಪ ಆತಂಕ ಹುಟ್ಟಿಸುವ ದೃಶ್ಯಾವಳಿಯೇ ಸರಿ. ಏಕೆಂದರೆ ಅಷ್ಟು ದೀರ್ಘಕಾಲ ಪರಿಹಾರವಿಲ್ಲದೆ ಸೋಂಕು ಮುಂದುವರೆದರೆ ನಾವು ಅದಕ್ಕೆ ವಿಪರೀತವಾದ ಸಾಮಾಜಿಕ ಆರ್ಥಿಕ ಬೆಲೆಯನ್ನು ತೆರಬೇಕಾಗುತ್ತದೆ. ಕುಸಿದಿರುವ ಆರ್ಥಿಕತೆಗಳು ಇನ್ನೂ ನೆಲಕಚ್ಚಬಹುದು. ಬಡತನ, ಮಾನಸಿಕ ಒತ್ತಡಗಳು ಹೆಚ್ಚಾಗುತ್ತವೆ. ಎಬೋಲಾ ರೋಗ ಬಂದಾಗ ಯುರೋಪಿನಲ್ಲಿ ಎಲ್ಲ ಆಫ್ರಿಕನ್ನರನ್ನೂ ಸಂಶಯದಿAದ ನೋಡಲಾಯಿತು. ಕರಿಯರನ್ನು, ಬಡವರನ್ನು, ಯಾವುದೋ ಒಂದು ದೇಶ-ಭಾಷೆಯವರನ್ನು ಗುಮಾನಿಯಿಂದ ನೋಡುವುದು ಇವೆಲ್ಲಾ ಸಾಮಾಜಿಕ ಒತ್ತಡಗಳಿಗೆ ಕಾರಣವಾಯಿತು ಎಂದು “ಸೈನ್ಸ್- ದ ವಯರ್’ ಪತ್ರಿಕೆಯ ವರದಿ ನೆನಪಿಸುತ್ತದೆ.

ಹಾಗೆಯೇ ಮಾನಸಿಕ ರೋಗಗಳು, ಆತ್ಮಹತ್ಯೆಗಳು, ಕೌಟುಂಬಿಕ ವಿರಸಗಳು ಉಲ್ಬಣಗೊಳ್ಳಬಹುದು. ಈ ದೆಶೆಯಲ್ಲಿ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರಗಳು, ಸಮಾಜ ಸೇವಾ ಸಂಸ್ಥೆಗಳು ಸಜ್ಜಾಗಬೇಕು. ಮಾಧ್ಯಮಗಳು ತಮ್ಮ ಪ್ರಸರಣವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ ಕೀಳು ಪ್ರಚಾರ ನಡೆಸುತ್ತಾ ಭಯ-ಆತಂಕಗಳನ್ನು ಹೆಚ್ಚಿಸುವ ಕೆಲಸ ಮಾಡಬಾರದು.

ವ್ಯಾಕ್ಸಿನ್ ಪರಿಹಾರದ ಸವಾಲುಗಳು

ವೈರಲ್ ಸೋಂಕಿನ ವ್ಯಾಧಿಗಳಿಗೆ ಪ್ರತಿಜೀವಕಗಳು (ಆ್ಯಂಟಿಬಯಾಟಿಕ್‌ಗಳು) ಕೆಲಸ ಮಾಡುವುದಿಲ್ಲವಾದ್ದರಿಂದ ಇಡಿಯ ಜಗತ್ತು ವ್ಯಾಕ್ಸಿನ್‌ಗಳತ್ತ ಆಶೆಯಿಂದ ಮೊಗಮಾಡಿದೆ. ಜಗತ್ತಿನಾದ್ಯಂತ ಕಡೆಯಪಕ್ಷ ನೂರ ಅರವತ್ತು ಲಸಿಕೆಗಳು ಪ್ರಯೋಗದ ವಿವಿಧ ಹಂತಗಳಲ್ಲಿವೆ. ಆದರೆ ವ್ಯಾಕ್ಸಿನ್ ಎಷ್ಟು ಪರಿಣಾಮಕಾರಿಯಾಗಬಹುದು ಎಂಬುದು ಬಹಳ ಸಂಕೀರ್ಣವಾದ ಪ್ರಶ್ನೆ.

ಯಾವುದೇ ರೋಗ ಬಂದುಹೋದ ಮೇಲೆ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗುತ್ತದೆ. ಯಾವ ಸೂಕ್ಷ್ಮಜೀವಿ ದೇಹವನ್ನು ಪ್ರವೇಶಿಸುವುದೋ ಅದನ್ನು ಹುಡುಕಿ ಬೆನ್ನಟ್ಟಿ ಬೇಟೆಯಾಡುವಂಥ ಪ್ರತಿಕಾಯಗಳನ್ನು ದೇಹದಲ್ಲಿನ ರೋಗ ನಿರೋಧಕ ಜೀವಕೋಶಗಳು ರಕ್ತಪ್ರವಾಹಕ್ಕೆ ಬಿಡುಗಡೆ ಮಾಡಿರುತ್ತವೆ. ಈ ಪ್ರತಿಕಾಯಗಳೂ ಪ್ರೊಟೀನ್‌ಗಳೇ. ಅವು ಬ್ಯಾಕ್ಟೀರಿಯಾ ಅಥವಾ ವೈರಸ್ಸಿನ ಪ್ರೊಟೀನ್‌ಗೆ ಹೋಗಿ ಅಂಟಿಕೊಂಡು ನಂತರ ಅದನ್ನು ನಾಶಮಾಡುತ್ತವೆ.

ವ್ಯಾಕ್ಸಿನಿನಲ್ಲಿ ಕೂಡಾ ರೋಗ ಸೃಷ್ಟಿಮಾಡಬಲ್ಲ ಸೂಕ್ಷ್ಮಾಣುವೇ ಇದ್ದರೂ ಅದು ದುರ್ಬಲವಾಗಿದ್ದು ದೇಹದಲ್ಲಿ ಅಗತ್ಯವಾದ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ಅದು ಮುಂದೆ ನಿಜವಾಗಿಯೂ ರೋಗವು ಸಶಕ್ತವಾದ ರೂಪದಲ್ಲಿ ಕಾಣಿಸಿಕೊಂಡಾಗ ಅದನ್ನು ಎದುರಿಸಲು ದೇಹವನ್ನು ಸಜ್ಜುಗೊಳಿಸಿರುತ್ತದೆ. ಇದು ವ್ಯಾಕ್ಸಿನ್ ಕೆಲಸ ಮಾಡುವುದರ ಹಿಂದಿರುವ ತತ್ವ. ಆದರೆ ಕೋವಿಡ್‌ಗೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳು ಉದ್ಭವಿಸಿವೆ.

ಸಂಕೀರ್ಣ ಪ್ರಶ್ನೆಗಳು

ಕೋವಿಡ್ ರೋಗ ಬಂದುಹೋದವರ ರಕ್ತದಲ್ಲಿನ ಪ್ರತಿಕಾಯಗಳ ಕುರಿತು ತಪಾಸಣೆ ಮಾಡಿದಾಗ, ಸುಮಾರು 2-3 ತಿಂಗಳ ನಂತರ ಪ್ರತಿಕಾಯಗಳ ಸಂಖ್ಯೆ ತೀರಾ ಕಡಿಮೆ ಇರುವುದು ಅಥವಾ ಅವುಗಳು ಸಂಪೂರ್ಣವಾಗಿ ಇಲ್ಲದೇ ಇರುವುದು ಕಂಡುಬಂತು ಎಂದು ಕೆಲವು ಅಧ್ಯಯನಗಳು ವರದಿ ಮಾಡಿದವು. ಇದರಿಂದ ಹೊಸ ಹೊಸ ಆತಂಕಗಳು, ಪ್ರಶ್ನೆಗಳು ಉದ್ಭವಿಸಿದವು. ಹೀಗಾದಲ್ಲಿ ರೋಗ ನಿರೋಧಕ ಶಕ್ತಿಯೂ ಬರುವುದಿಲ್ಲ, ವ್ಯಾಕ್ಸಿನ್‌ಗಳೂ ಪರಿಣಾಮಕಾರಿಯಾಗುವುದಿಲ್ಲ ಎಂಬುದೇ ಈ ಆತಂಕಕ್ಕೆ ಕಾರಣ. ಸಾಮಾನ್ಯವಾಗಿ ನಮ್ಮನ್ನು ಕಾಡುವ ಶೀತ ನೆಗಡಿಗೂ ಒಂದು ರೀತಿಯ ಕೊರೊನಾ ವೈರಾಣುವೇ ಕಾರಣ. ಅದಕ್ಕೆ ಸಂಬಂಧಿಸಿದಂತೆ ಸೃಷ್ಟಿಯಾಗುವ ರೋಗನಿರೋಧಕ ಶಕ್ತಿಯು ಮೂರು ವಾರಗಳ ಮೇಲೆ ಉಳಿಯುವುದಿಲ್ಲ.

ಇದಲ್ಲದೆ ಇನ್ನೊಂದು ಹೊಸ ಸಂದೇಹ ಉದ್ಭವಿಸಿತು. ಅದೆಂದರೆ, ಕೋವಿಡ್‌ಗೆ ಕಾರಣವಾದ ಕೊರೋನಾ ವೈರಾಣು ರೂಪಾಂತರ (ಮ್ಯುಟೇಶನ್) ಆಗಬಹುದು ಎಂಬುದು. ಕೊರೋನಾ ಜಾತಿಯ ವೈರಾಣುಗಳಲ್ಲಿ ಈ ಸಮಸ್ಯೆ ಇರುವುದು ನಿಜ. ಫ್ಲೂ ರೋಗದಲ್ಲಿ ಬರುವ ಸಮಸ್ಯೆಯೇ ಅದು. ಅದಕ್ಕೆ ಸಂಬಂಧಿಸಿದ ವೈರಾಣು ಎಷ್ಟೊಂದು ರೂಪಾಂತರವಾಗಿದೆಯೆಂದರೆ ಅದಕ್ಕೆ ಅತ್ಯಂತ ಸಮರ್ಥವಾದ, ಗ್ಯಾರೆಂಟಿಯಾದ ವ್ಯಾಕ್ಸಿನ್ ಅನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ. ಇದು ಈ ಭಯಂಕರ ಸಾರ್ಸ್- ಸಿಓವಿ-2 ವೈರಾಣುವಿನ ಮಟ್ಟಿಗೂ ಸತ್ಯವಾದರೆ ಗತಿಯೇನು? ಒಂದು ವ್ಯಾಕ್ಸಿನ್ ಮೂಲಕ ಒಬ್ಬ ಮನುಷ್ಯನ ದೇಹವು ಒಂದು ರೀತಿಯ ವೈರಾಣುವಿನ ದಾಳಿಗೆ ಸಜ್ಜಾಗಿ ನಿಂತಾಗ, ಅದು ಹೊಸ ರೂಪ ಧರಿಸಿ ಬಂದರೆ ಪರಿಹಾರವೇನು?

ರೋಗ ನಿರೋಧಕ ಶಕ್ತಿ ಬೇಗ ನಾಶವಾಗುವುದಾದರೆ ಮತ್ತೆ ಬೂಸ್ಟರ್ ಡೋಸ್ ವ್ಯಾಕ್ಸಿನ್‌ಗಳು ಬೇಕಾಗಬಹುದು. ಒಂದೊಂದು ಬಾರಿಯೂ ಅದನ್ನು ನೀಡಲು ಎಂತಹ ಬೃಹತ್ ವ್ಯವಸ್ಥೆ ಬೇಕಾಗುತ್ತದಲ್ಲ. ಭಾರತದಂತಹ ದೇಶದಲ್ಲಿ ಪ್ರತಿದಿನ ಒಂದು ಕೋಟಿ ಜನರಿಗೆ ವ್ಯಾಕ್ಸಿನ್ ಹಾಕಿದರೂ, ಎಲ್ಲರಿಗೂ ಹಾಕಲು ನಾಲ್ಕುವರೆ ಅಥವಾ ಐದು ತಿಂಗಳು ಬೇಕು. ಅಷ್ಟರಲ್ಲಿ ಮತ್ತೆ ಬೂಸ್ಟರ್ ಡೋಸ್ ಹಾಕಬೇಕಾದ ದಿನಾಂಕ ಬಂದುಬಿಟ್ಟಿರುತ್ತದೆಯೇ? ಈ ವ್ಯಾಕ್ಸಿನ್‌ಗಳ ವೆಚ್ಚವನ್ನು ಯಾರು ಭರಿಸುತ್ತಾರೆ, ಸರ್ಕಾರವೋ ಜನಸಾಮಾನ್ಯರೋ? ಬಡವರಿಗೆ ಉಚಿತವಾಗಿ ಲಸಿಕೆ ಹಾಕುವ ವ್ಯವಸ್ಥೆ ಇರದಿದ್ದಲ್ಲಿ ಈ ಯೋಜನೆ ಯಶಸ್ವಿಯಾಗುತ್ತದೆಯೇ? ಇದಕ್ಕೆ ಬೇಕಾದ ಕಟ್ಟಡ, ವೈದ್ಯರು, ದಾದಿಯರು ಇದನ್ನೆಲ್ಲಾ ಯಾವ ಪ್ರಮಾಣದಲ್ಲಿ ಸಂಘಟಿಸಿಕೊಳ್ಳಬೇಕು. ಇದಲ್ಲದೆ ಲಸಿಕೆ ಹಾಕುತ್ತಿರುವಾಗಲೇ ಅದಕ್ಕೆ ಅಡ್ಡಪರಿಣಾಮಗಳು (ಸೈಡ್ ಎಫೆಕ್ಟ್) ಬರಬಹುದು. ಅವುಗಳಲ್ಲಿ ಕೆಲವಕ್ಕಾದರೂ ತುರ್ತು ಚಿಕಿತ್ಸೆ, ತೀವ್ರ ನಿಗಾ ಬೇಕಾಗಬಹುದು. ಅದಕ್ಕೆ ಅಗತ್ಯವಾದ ಮೂಲಸೌಕರ್ಯ, ಔಷಧ ಎಲ್ಲದರ ಬಗ್ಗೆಯೂ ಈಗಲೇ ಯೋಚಿಸಬೇಕು.

ಆತಂಕಕ್ಕೆ ಕಾರಣಗಳು

ಕೆಲವೊಂದು ವ್ಯಾಕ್ಸಿನ್‌ಗಳು ಬಹಳಷ್ಟು ಯಶಸ್ವಿಯಾಗಿವೆ. ಉದಾಹರಣೆಗೆ ಸಿಡುಬು. ದಡಾರ (ಮೀಸಲ್ಸ್) ರೋಗದಲ್ಲಿ ಸಹ ವ್ಯಾಕ್ಸಿನ್‌ಗಳು 95-98 ಶೇಕಡಾ ಯಶಸ್ವಿಯಾಗಿವೆ. ಆದರೆ ಫ್ಲೂನಲ್ಲಿ ಇದು ಶೇಕಡಾ 20-60 ಮಾತ್ರ. ಅಲ್ಲದೆ ವ್ಯಾಕ್ಸಿನ್ ನಾಳೆ ಬೆಳಿಗ್ಗೆ ಏನೂ ನಮ್ಮ ಕೈ ಸೇರುವುದಿಲ್ಲ. ಆದ್ದರಿಂದಲೇ ಅಮೆರಿಕನ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್ ನಿಯತಕಾಲಿಕದಲ್ಲಿ ಬರೆಯುತ್ತಾ ಬ್ರೂಸ್, ವೈ-ಲೀ ಅವರು ನೀಡುವ ಎಚ್ಚರಿಕೆ ಎಂದರೆ ಸಾಮಾಜಿಕ ಅಂತರ, ಮುಖದ ಮಾಸ್ಕ್ ಧರಿಸುವುದು ಮುಂತಾದ ಮುನ್ನೆಚ್ಚರಿಕೆಯ ರಕ್ಷಣಾ ಕ್ರಮಗಳು ನಮ್ಮ ನಡುವೆ ಇನ್ನೂ ಬಹಳ ಕಾಲ ಉಳಿಯುತ್ತವೆ.

ವಿಶ್ವಸಂಸ್ಥೆಯ ಮಾಜಿ ಸಲಹೆಗಾರರಾದ ಕ್ಲಾಸ್ ಸ್ಟೋರ್ ಇನ್ನೊಂದು ಸವಾಲನ್ನು ನಮಗೆ ನೆನಪಿಸುತ್ತಾರೆ. ಅದೆಂದರೆ ಜರ್ಮನಿಯಂತಹ ಅಭಿವೃದ್ಧಿ ಹೊಂದಿರುವ ರಾಷ್ಟ್ರ ಸಹ 2021ರ ಆರಂಭದ ತಿಂಗಳುಗಳಿಗೆ ಮುನ್ನ ಜನರಿಗೆ ವ್ಯಾಕ್ಸಿನ್ ಒದಗಿಸುವುದು ಕಷ್ಟ ಮತ್ತು ಮೊದಲ ಮೂರು ನಾಲ್ಕು ತಿಂಗಳನ್ನು ವೃದ್ಧರಿಗೆ ಮತ್ತು ಅಪಾಯದಲ್ಲಿರುವವರಿಗೆ ಮೀಸಲಿಡಬೇಕಾದೀತು. ಅವರ ಅಂದಾಜಿನ ಪ್ರಕಾರ 2021ರ ಆರಂಭದ ವೇಳೆಗೆ ಅರ್ಧ ಬಿಲಿಯನ್ (50 ಕೋಟಿ) ವ್ಯಾಕ್ಸಿನ್ ಡೋಸ್‌ಗಳು ಸಿದ್ಧವಾಗಬಹುದು. ಆದರೆ ಇಡಿಯ ವಿಶ್ವದ ಜನಸಂಖ್ಯೆ ಇರುವುದು 7.5 ಬಿಲಿಯನ್ (750 ಕೋಟಿ). ಇಷ್ಟೂ ಜನಕ್ಕೆ ವ್ಯಾಕ್ಸಿನ್ ಸಿದ್ಧವಾಗುವುದು ಯಾವಾಗ?

ಅವರು ಇನ್ನೂ ಒಂದು ಆತಂಕವನ್ನು ಹೊರಗೆಡವುತ್ತಾರೆ. ಅದೆಂದರೆ ಶ್ರೀಮಂತ ರಾಷ್ಟ್ರಗಳೇನೋ ವ್ಯಾಕ್ಸಿನ್‌ಗೆ ಬೇಕಾದ ಸಂಪನ್ಮೂಲಗಳನ್ನು ಹೊಂದಿಸಬಹುದು. ಆದರೆ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾದಲ್ಲಿನ ರಾಷ್ಟçಗಳು ಇದನ್ನು ಹೇಗೆ ವ್ಯವಸ್ಥೆ ಮಾಡಿಕೊಂಡಾವು? ಮತ್ತು ಅತಿಹೆಚ್ಚು ಜನಸಂಖ್ಯೆ ಇರುವ ದೇಶಗಳು ಸಹ ಇವೇನೇ. ಹೀಗಾಗಿ ಇಡಿಯ ಜಗತ್ತು ವ್ಯಾಕ್ಸಿನ್ ಸಹಿತ ಹಾಗೂ ವ್ಯಾಕ್ಸಿನ್ ರಹಿತ ಎಂಬ ಶಿಬಿರಗಳಾಗಿ ಒಡೆದು ಹೋಗುತ್ತವೆ ಎಂಬುದು ಅವರ ಕಳಕಳಿ. ಇದು ಒಂದು ದೇಶದೊಳಗೂ ಆಗಬಹುದು. ಅಲ್ಲದೆ ವ್ಯಾಕ್ಸಿನ್ ನಿರ್ವಹಣೆಗೇ ನಮ್ಮ ಸಂಪನ್ಮೂಲ, ಮೂಲಸೌಕರ್ಯ, ಮಾನವ ಸಂಪನ್ಮೂಲ ಇವೆಲ್ಲಾ ಬಳಕೆಯಾದಾಗ ಉಳಿದ ರೋಗಗಳಿಗೆ ಬಲಿಯಾಗುವವರ ಗತಿ ಏನು?

ಹರ್ಡ್ ಇಮ್ಯೂನಿಟಿ

ಸಾಮೂಹಿಕ ರೋಗ ನಿರೋಧಕ ಶಕ್ತಿ ಎಂಬುದು ಇನ್ನೊಂದು ಚರ್ಚೆಯಲ್ಲಿರುವ ಪರಿಕಲ್ಪನೆ. ಅದೆಂದರೆ ಜನಸಂಖ್ಯೆಯಲ್ಲಿನ ಒಂದು ದೊಡ್ಡ ಭಾಗಕ್ಕೆ ರೋಗವು ತೀವ್ರವಾಗಿಯೋ, ಮೃದುವಾಗಿಯೋ ತಾಕಿ ಹೋದರೆ ಆಗ ಅನೇಕರಲ್ಲಿ ರೋಗ ನಿರೋಧಕ ಶಕ್ತಿ ಉಂಟಾಗಿ ರೋಗದ ಪ್ರಸರಣ ನಿಧಾನವಾಗುತ್ತದೆ ಎಂಬುದು ಇಲ್ಲಿರುವ ಚಿಂತನೆ. ಖೋ-ಖೋ ಆಟ ಮುಂದುವರೆಯುವುದು, ಎಂದರೆ ಸತತವಾಗಿ ಒಬ್ಬ ಆಟಗಾರ ಇನ್ನೊಬ್ಬನನ್ನು ಮುಟ್ಟುತ್ತಿರಬೇಕು. ಮುಟ್ಟಲು ಎದುರಿಗೆ ಆಟಗಾರ ಸಿಗದಿದ್ದಾಗ ಆಟವು ನಿಧಾನವಾಗುತ್ತದೆ. ಕಡೆಗೆ ನಿಂತೇ ಹೋಗುತ್ತದೆ. ಹಾಗೆಯೇ ಸೋಂಕು ಹರಡುವಿಕೆ ಸಹ.

ಸೋಂಕಿಗೆ ಎದುರಾಗುವ ಪ್ರತಿ ಇಬ್ಬರಲ್ಲಿ ಒಬ್ಬನಿಗೆ ಸೋಂಕು ನಿರೋಧಕ ಶಕ್ತಿ ಇದ್ದರೆ ಅಲ್ಲಿಗೆ ವ್ಯಾಧಿಯ ಪ್ರಸರಣದ ವೇಗವು ಗಣನೀಯವಾಗಿ ಕುಂಠಿತವಾಗುತ್ತದೆ. ಆದರೆ ನಾವು ಈಗಾಗಲೇ ಚರ್ಚಿಸಿದ ರೋಗ ನಿರೋಧಕ ಶಕ್ತಿಯ ಕುರಿತಾದ ಅನುಮಾನಗಳೇ ಇಲ್ಲಿಯೂ ತಲೆ ಎತ್ತುತ್ತವೆ. ಅಲ್ಲದೆ ಈ ಸಾಮೂಹಿಕ ರೋಗ ನಿರೋಧಕ ಶಕ್ತಿಯನ್ನು ನಂಬಿ ಕೈಕಟ್ಟಿ ಕೂರುವುದೆಂದರೆ ನಮ್ಮ ಸಮಾಜದಲ್ಲಿನ ಅರವತ್ತು ವರ್ಷ ವಯಸ್ಸು ಮೀರಿದ ವೃದ್ಧರಿಗೆ, ತೀವ್ರ ರೋಗದಿಂದ ಬಳಲುತ್ತಿರುವವರಿಗೆ ನಾವು ಮರಣಪತ್ರ ಬರೆದುಕೊಟ್ಟಂತೆ ಎಂಬ ಟೀಕೆ ಸಹಜವಾಗಿ ಬರುತ್ತದೆ.

ಇಂಗ್ಲೆಂಡ್ ಮತ್ತು ಸ್ವೀಡನ್ ದೇಶಗಳು ಈ ಧೋರಣೆ ತಳೆದಾಗ ಅವು ಕ್ರೂರ ಸರ್ಕಾರಗಳು ಎಂಬ ಮಾತು ಎಲ್ಲಡೆ ಕೇಳಿಬಂತು. ಇಂಗ್ಲೆಂಡ್ ಒಡನೆಯೇ ಆ ನಿಲುವಿನಿಂದ ಹಿಂದೆ ಸರಿಯಿತು. ಅದಕ್ಕೆ ಅಂಟಿಕೊಂಡು ಯಾವುದೇ ಲಾಕ್‌ಔಟ್ ಮಾಡದ ಸ್ವೀಡನ್‌ನಲ್ಲಿ ಸಾವಿನ ಪ್ರಮಾಣ ಹೆಚ್ಚಿರುವುದು ಕಂಡು ಬಂದಿದೆ. ಸಮೂಹ ರೋಗನಿರೋಧಕ ಶಕ್ತಿಯು ಜನಸಂಖ್ಯೆಯ ಎಷ್ಟು ಭಾಗದಲ್ಲಿ ಕಂಡು ಬಂದಾಗ ಅದು ರೋಗವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗುತ್ತದೆ ಎಂಬುದರ ಬಗ್ಗೆಯೂ ಒಮ್ಮತ ಇಲ್ಲ. ಕೆಲವರು ಶೇಕಡಾ 50 ಸಾಕು ಎಂದರೆ, ಬೇರೆ ತಜ್ಞರು ಅದು ಶೇಕಡಾ 70ನ್ನಾದರೂ ಮುಟ್ಟಬೇಕು ಎನ್ನುತ್ತಾರೆ.

ಆಶಾದಾಯಕ ಸಂಗತಿಗಳು

ನಾವು ಇಲ್ಲಿಯವರೆಗೂ ಎತ್ತಿರುವ ಅನೇಕ ಪ್ರಶ್ನೆಗಳಿಗೆ ಉತ್ತರವಾಗಿ ಬೇರೆ ಅಧ್ಯಯನಗಳು, ವಾದಗಳು ಬಂದಿವೆ. ಅವು ಆಶಾದಾಯಕವಾಗಿದ್ದು ಅವುಗಳನ್ನು ಗಮನಿಸದೇ ಹೋದಲ್ಲಿ ಕೋವಿಡ್ ಚಿತ್ರಣ ಅಪೂರ್ಣವಾಗುತ್ತದೆ.

ಅದರಲ್ಲಿ ಮುಖ್ಯವಾದದ್ದೆಂದರೆ ರೋಗನಿರೋಧಕ ಶಕ್ತಿ ಎಂದರೆ ಕೇವಲ ರಕ್ತದಲ್ಲಿ ಪ್ರತಿಕಾಯಗಳು (ಆ್ಯಂಟಿಬಾಡಿ) ಎಷ್ಟಿವೆ ಎಂಬುದಲ್ಲ. ಹೇಳಿ ಕೇಳಿ ಪ್ರತಿಕಾಯಗಳು ಪ್ರೋಟೀನ್‌ಗಳೇ ಹೊರತು ಸ್ವತಂತ್ರ ಜೀವಿಗಳಲ್ಲ. ಆದ್ದರಿಂದ ರೋಗ ಇಳಿಮುಖವಾದ ಮೇಲೆ, ನಾಶವಾದ ಮೇಲೆ ದೇಹಕ್ಕೆ ಆ ಪಾಟಿ ಪ್ರತಿಕಾಯಗಳು ಅಗತ್ಯವಿರುವುದಿಲ್ಲ. ಆದ್ದರಿಂದ ಒಂದು ಅವಧಿಯ ನಂತರ ಅವು ಸಾಯುವುದು ಸಹಜ ಪ್ರಕ್ರಿಯೆ. ಇದರ ಕುರಿತಾಗಿ ಬಂದ, ನಾವು ಹಿಂದೆ ಹೇಳಿದ ಇಂಗ್ಲೆಂಡಿನ ವರದಿಗಳನ್ನು ಮಾಧ್ಯಮಗಳು ರೋಚಕಗೊಳಿಸಿ ಪ್ರಸಾರ ಮಾಡಿದ್ದರಿಂದ ಅನಗತ್ಯ ಗೊಂದಲಗಳು ಹುಟ್ಟಿಕೊಂಡಿವೆ.

ವಾಸ್ತವದಲ್ಲಿ ರೋಗನಿರೋಧಕ ಶಕ್ತಿ ಎಂಬುದು ಒಂದು ಸಂಕೀರ್ಣವಾದ ವ್ಯವಸ್ಥೆ. ಪ್ರತಿಕಾಯಗಳಲ್ಲದೆ ಟಿ ಜೀವಕೋಶಗಳು, ಸಹಾಯಕ ಟಿ ಜೀವಕೋಶಗಳು ಮತ್ತು ಬಿ ಜೀವಕೋಶಗಳು ಇವೆಲ್ಲವೂ ಆ ವ್ಯವಸ್ಥೆಯ ಭಾಗಗಳು. ಇದರಲ್ಲಿ ಟಿ ಸೆಲ್‌ಗಳು ಸೋಂಕಿರುವಡೆ ಜೀವಕೋಶಗಳನ್ನು ಪ್ರವೇಶಿಸಿ ಕೊಲ್ಲುತ್ತವೆ. ಬಿ ಸೆಲ್‌ಗಳು ಅಸ್ಥಿಮಜ್ಜಕ್ಕೆ ಸೇರಿದ್ದು ಅವು ಹಿಂದಿನ ಸೋಂಕಿನ ನೆನಪನ್ನು ಕಾದಿರಿಸಿಕೊಂಡಿದ್ದು, ಇನ್ನೊಮ್ಮೆ ಆ ದಾಳಿ ಬಂದಾಗ ರೋಗವನ್ನು ನಿರೋಧಿಸುವ ಸರಣಿ ಕ್ರಿಯೆಯನ್ನು ಆರಂಭಿಸುತ್ತವೆ. ಸಹಾಯಕ ಟಿ ಜೀವಕೋಶಗಳು ಬಿ ಮತ್ತು ಟಿ ಜೀವಕೋಶಗಳನ್ನು ಜಾಗೃತಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೀಗಾಗಿ ರಕ್ತ ಪ್ರವಾಹದಲ್ಲಿ ಪ್ರತಿಕಾಯಗಳ ಸಂಖ್ಯೆ ಕಡಿಮೆಯಾದರೆ ಅದು ಗಾಬರಿಪಡಬೇಕಾದ ಸಂಗತಿ ಏನಿಲ್ಲ.

ಮೊದಲ ಸೋಂಕಿನಿಂದ ಸಾಕಷ್ಟು ಟಿ, ಸಹಾಯಕ ಟಿ ಮತ್ತು ಬಿ ಜೀವಕೋಶಗಳು ಸೃಷ್ಟಿಯಾಗಿವೆಯೇ ಎಂಬುದೇ ಮುಖ್ಯ ಪ್ರಶ್ನೆ. ಇದರ ಬಗ್ಗೆ ಇದೀಗ ತಾನೆ ಬಂದಿರುವ ಅಧ್ಯಯನಗಳು ತುಂಬಾ ಆಶಾದಾಯಕವಾಗಿವೆ. ಅವುಗಳಿಂದ ಸಾಮೂಹಿಕ ರೋಗ ನಿರೋಧಕ ಶಕ್ತಿಯು ಸೃಷ್ಟಿಯಾಗಿ ಅದು ಬಹುಕಾಲ ಉಳಿಯಬಹುದು ಎಂಬ ನಂಬಿಕೆ ಹುಟ್ಟಿದೆ. ಏಕೆಂದರೆ ಕೋವಿಡ್ ಬಂದುಹೋದ ಮೇಲೂ ತಿಂಗಳುಗಟ್ಟಲೆ ಈ ಜೀವಕೋಶಗಳು ಸಕ್ರಿಯವಾಗಿವೆ. ಅಲ್ಲದೆ ಅವು ಸುಲಭವಾಗಿ ಕಾಣಸಿಗದೆ ಅಸ್ಥಿಮಜ್ಜದಲ್ಲೋ, ಪ್ಲೀಹದಲ್ಲೋ ಬೈತಿಟ್ಟುಕೊಂಡಿರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದಲೇ ವ್ಯಾಕ್ಸಿನ್‌ಗಳು ಸಹ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದೆ.

ರೋಗ ನಿರೋಧಕ ಶಕ್ತಿಗೆ ಸಂಬಂಧಿಸಿದ ಅನೇಕ ಸಂಗತಿಗಳು ಬಹಳ ವಿಚಿತ್ರವಾದವು. ಇನ್‌ಫ್ಲುಯೆಂಜಾಗೆ ಸಂಬಂಧಿಸಿದಂತೆ ಬಿ ಸೆಲ್ ನೆನಪಿನ ಶಕ್ತಿ ಎಂಬತ್ತು ವರ್ಷಗಳ ಕಾಲ ಇದ್ದ ದಾಖಲೆ ಇದೆ. ಸಾರ್ಸ್ ಬಂದವರ ದೇಹದಲ್ಲಿ 17 ವರ್ಷ ಜೀವಕೋಶದ ನೆನಪು ಜಾಗೃತವಾಗಿದ್ದಿದ್ದಿದೆ. ಇದಲ್ಲದೆ ಕೋವಿಡ್-19 ವೈರಾಣು ಬೇಗ ರೂಪಾಂತರ ಹೊಂದುತ್ತಿಲ್ಲ ಎಂದೂ ಅಧ್ಯಯನಗಳು ಹೇಳುತ್ತಿವೆ. ಆದ್ದರಿಂದ ಹೊಸ ಹೊಸ ವ್ಯಾಕ್ಸಿನ್ ಬೇಕಾಗಬಹುದು ಎಂಬ ಆತಂಕಕ್ಕೂ ದೃಢವಾದ ಕಾರಣಗಳು ಕಾಣಬರುತ್ತಿಲ್ಲ.

ಅಂತರ್ಗತ ಅಂಶಗಳ ಪಾತ್ರ

ಯಾವುದಾದರೂ ಒಂದು ರೀತಿಯ ಕರೋನಾ ಸೋಂಕು ತಗುಲಿದವರಲ್ಲಿ ಉಳಿದ ಕರೋನಾಗಳಿಗೆ ಸಂಬಂಧಿಸಿದಂತೆ, ಎಂದರೆ ಕೋವಿಡ್‌ಗೂ ಸಹ ರೋಗ ನಿರೋಧಕ ಶಕ್ತಿ ಉಂಟಾಗಿರಬಹುದು ಎಂಬ ಅಭಿಪ್ರಾಯವಿದೆ. ಏಷ್ಯಾದ ಕೆಲವು ದೇಶಗಳಲಿ ಸೋಂಕಿನ ವೇಗ, ಸಾವಿನ ಸಂಖ್ಯೆ ಇವುಗಳು ಕಡಿಮೆ ಇರುವುದಕ್ಕೆ ಇದೂ ಒಂದು ಕಾರಣವಿರಬಹುದು ಎನ್ನಲಾಗಿದೆ.

ಇಂಥ ಎಷ್ಟೋ ಅಂಶಗಳಿಂದಲೇ ಮುಂಬೈನ ಧಾರಾವಿಯಂಥ ಕೊಳಚೆ ಪ್ರದೇಶದಲ್ಲಿ ಸಾವಿನ ಸಂಖ್ಯೆ ತೀರಾ ಕಡಿಮೆಯಾಗಿರಬೇಕು. ಏಷ್ಯಾದ ಅತಿದೊಡ್ಡ ಸ್ಲಂ ಆದ ಅಲ್ಲಿ ಲಕ್ಷಾಂತರ ಜನ ಕಿಕ್ಕಿರಿದು ತುಂಬಿದ ಇಕ್ಕಟ್ಟಾದ ಜಾಗಗಳಲ್ಲಿ ಬದುಕಿದ್ದಾರೆ. ಅಲ್ಲಿ ಪರಿಸ್ಥಿತಿ ನರಕಸದೃಶವಾಗುತ್ತದೆ, ಸಾವಿನ ಮೆರವಣಿಗೆ ಪ್ರತಿದಿನ, ಪ್ರತಿ ಗಂಟೆ ಜರುಗುತ್ತದೆ ಎಂದೇ ತಜ್ಞರು ಎಣಿಕೆ ಹಾಕಿದ್ದರು. ಆದರೆ ಪವಾಡ ಸದೃಶವಾಗಿ ವಾಸ್ತವಿಕ ಪರಿಸ್ಥಿತಿ ಹಾಗಾಗಲೇ ಇಲ್ಲ. ಎಂದರೆ ಮನುಷ್ಯನ ರೋಗ ನಿರೋಧಕ ಶಕ್ತಿಯಲ್ಲಿ ನಮಗೆ ಗೊತ್ತಿಲ್ಲದ ಯಾವುದೋ ಅಂತರ್ಗತ ಧನಾತ್ಮಕ ಅಂಶಗಳಿವೆ.

ಇದಲ್ಲದೆ ಭಾರತದ ಥೈರೊಕೇರ್ ಸಂಸ್ಥೆಯು ಈಗಾಗಲೇ ಸದ್ದಿಲ್ಲದೆ ಕೋಟ್ಯಂತರ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ವರದಿ ಮಾಡಿದೆ. ಆ ಸಂಸ್ಥೆಯು ಇಪ್ಪತ್ತು ದಿನಗಳಲ್ಲಿ ದೇಶದ 600 ಕೇಂದ್ರಗಳಲ್ಲಿ 60000 ಪರೀಕ್ಷೆ ನಡೆಸಿ ಭಾರತದಲ್ಲಿ ಶೇಕಡಾ 20ಕ್ಕಿಂತ ಹೆಚ್ಚು ಜನರಲ್ಲಿ ಯಾವುದೇ ಗಮನಾರ್ಹ ಸೋಂಕು ಕಾಣದೆ, ರೋಗದ ಚಿಹ್ನೆಗಳಲ್ಲದೆ ನಿಶಬ್ದವಾಗಿ ರೋಗನಿರೋಧಕ ಶಕ್ತಿ ಉಂಟಾಗಿದೆ ಎಂದು ವರದಿ ಮಾಡಿತು. ಇದು ಜುಲೈ 20ರ ಅಧ್ಯಯನ. ಎಂದರೆ ಈ ಲೇಖನ ಬೆಳಕು ಕಾಣುವ ಹೊತ್ತಿಗೆ ಈ ಅಂದಾಜು ಶೇಕಡಾ 40ನ್ನು ಮುಟ್ಟುವ ಸಾಧ್ಯತೆ ಇದೆ.

ಆದ್ದರಿಂದಲೇ ಅನೇಕರು ಅಕ್ಟೋಬರ್ ಅಂತ್ಯದ ವೇಳೆಗೆ ಅಥವಾ ನವೆಂಬರ್ ಮಧ್ಯಭಾಗದ ವೇಳೆಗೆ ಭಾರತದಲ್ಲಿ ಸೋಂಕಿನ ಪ್ರಸರಣದ ವೇಗ ತೀರಾ ಕಡಿಮೆಯಾಗುತ್ತದೆ ಎಂದು ಗಣಿತೀಯ ಲೆಕ್ಕಾಚಾರಗಳ ಮೂಲಕ, ಗಣಕಯಂತ್ರದ ಮಾದರಿಗಳ ಮೂಲಕ ಭವಿಷ್ಯ ನುಡಿಯುತ್ತಿದ್ದಾರೆ. ಹೀಗಾದಾಗ ವ್ಯಾಕ್ಸಿನ್ ಅವಶ್ಯಕತೆ ಮುಂಚಿನಷ್ಟು ಭಾರಿ ಪ್ರಮಾಣದಲ್ಲಿ ಬೇಕಾಗುವುದಿಲ್ಲ. ಅಲ್ಲದೆ ಅದರ ಯಶಸ್ಸಿನ ಪ್ರಮಾಣ ಶೇಕಡಾ 70 ಅಥವಾ 80 ಇರಬೇಕೆಂದೂ ಆಗುವುದಿಲ್ಲ. ಗಣನೀಯ ಪ್ರಮಾಣದ ಜನಸಂಖ್ಯೆಯಲ್ಲಿ ರೋಗ ನಿರೋಧಕ ಶಕ್ತಿ ಬಂದು, ಉಳಿದಂತೆ ಅಪಾಯದ ಹೊಸ್ತಿಲಲ್ಲಿರುವ ವೃದ್ಧರು, ದೀರ್ಘ ರೋಗದಿಂದ ಬಳಲುತ್ತಿರುವವರು ಇವರಿಗೆ ಒಂದು ಮಟ್ಟಿಗೆ ವ್ಯಾಕ್ಸಿನ್ ಕವಚ ತೊಡಿಸಲಾದರೆ ಅಲ್ಲಿಗೆ ರೋಗ ಪ್ರಸರಣದ ವೇಗ ಬಹುತೇಕ ಕುಂಠಿತವಾಗುತ್ತದೆ ಹಾಗೂ ಈ ಅವಧಿಯಲ್ಲಿ ನಮ್ಮ ಜನ ಕಲಿತಿರುವ ಹೊಸ ಆರೋಗ್ಯಕರ ಅಭ್ಯಾಸಗಳು ಇನ್ನಷ್ಟು ರಕ್ಷಣೆ ಒದಗಿಸುತ್ತವೆ.

ಲಸಿಕೆ ಸಾಧ್ಯತೆ

ಇದೀಗ ಇನ್ನೊಂದು ಹೊಸ ಸುದ್ದಿ ನಮಗೆ ಒಂದಿಷ್ಟು ಸಂತಸವನ್ನು ತಂದಿದೆ. ಅದೆಂದರೆ ಆಗಸ್ಟ್ ಎರಡನೇ ವಾರದಲ್ಲಿ ರಷ್ಯಾ ದೇಶದ ಗಾಮಾಲೆಯ ಎಪಿಡೆಮಿಕ್ ಮೈಕ್ರೊಬಯಾಲಜಿ ಸಂಸ್ಥೆಯು ಬಿಡುಗಡೆ ಮಾಡಿರುವ ಸ್ಟುಟ್ನಿಕ್-ವಿ ಎಂಬ ವ್ಯಾಕ್ಸಿನ್. ಇದರ ಬಗ್ಗೆ ಪಾಶ್ಚಾತ್ಯ ದೇಶಗಳಿಂದ ಟೀಕೆ ಬಂದಿದೆ. ರಷ್ಯಾ ಅವಸರದಲ್ಲಿ ಇದನ್ನು ಹೊರತಂದಿದೆ, ಎಲ್ಲಾ ಅವಶ್ಯಕ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಇದರ ಯಶಸ್ಸು ಪ್ರಶ್ನಾರ್ಹ, ಅಪಾಯ ಇರಬಹುದು ಎಂಬುದು ಟೀಕೆಯ ತಿರುಳು. ಇದನ್ನೆಲ್ಲಾ ಅಲ್ಲಗಳೆಯಲಿಕ್ಕೆ ಅಲ್ಲಿನ ಅಧ್ಯಕ್ಷರಾದ ಪುಟಿನ್ ಲಸಿಕೆಯನ್ನು ತಮ್ಮ ಮಗಳಿಗೆ ಹಾಕಿಸಿದ್ದಾರೆ.

ಒಟ್ಟಿನಲ್ಲಿ ವ್ಯಾಕ್ಸಿನ್ ತಯಾರಿಕೆಯಲ್ಲಿ ಲಾಭೋದ್ದೇಶ, ರಾಷ್ಟ್ರೀಯ ಹೆಮ್ಮೆ, ರಾಜಕೀಯ ಮೇಲಾಟ ಎಲ್ಲವೂ ಪ್ರವೇಶಿಸಿವೆ. ಯಾವ ದೇಶ ಮೊದಲು ಲಸಿಕೆಯನ್ನು ತಯಾರಿಸುತ್ತದೋ ಅವರಿಗೆ ಕೀರ್ತಿ ಹೆಚ್ಚು. ಲಸಿಕೆಯ ಮಾರುಕಟ್ಟೆಯೂ ದೊಡ್ಡದು. ಆದ್ದರಿಂದ ಆರೋಪ, ಪ್ರತ್ಯಾರೋಪ, ಸಮಜಾಯಿಷಿ ಎಲ್ಲವೂ ಸಹಜ. ಆದರೆ ಒಂದಂತೂ ನಿಜ. ರಷ್ಯಾದಲ್ಲದಿದ್ದರೆ, ಇಂಗ್ಲೆಂಡಿನದ್ದು ಇಲ್ಲದಿದ್ದರೆ ಚೀನಾ ಅಥವಾ ಅಮೆರಿಕಾ ಒಂದಲ್ಲ ಒಂದು ಯಶಸ್ವಿ ಲಸಿಕೆ ಹತ್ತಿರದಲ್ಲಿದೆ ಅಥವಾ ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಅನೇಕ ಲಸಿಕೆಗಳು ಬಂದು ಬೀಳಬಹುದು.

ಮಾನವ ಪ್ರಯತ್ನ

ಒಟ್ಟಿನಲ್ಲಿ ಈ ಕೊರೋನಾಯಣ ಅನೇಕ ಪ್ರಶ್ನೆಗಳನ್ನು ಎಬ್ಬಿಸಿದೆ. ಮನುಷ್ಯ ದೀರ್ಘಕಾಲ ನಿಸರ್ಗದೊಂದಿಗೆ ಕೆಟ್ಟದಾಗಿ ಚೆಲ್ಲಾಟವಾಡಿದ್ದಾನೆ. ಪರಿಸರವನ್ನು ಧ್ವಂಸಗೊಳಿಸಿದ್ದಾನೆ. ಬಹುದೊಡ್ಡ ಲಾಭಬಡುಕ ಕಂಪನಿಗಳು ಈ ವಿಶ್ವವನ್ನು ಹಿಂಡಿ ಹಿಪ್ಪಿ ಮಾಡಿವೆ. ಇದಕ್ಕೆ ಕೊನೆ ಹಾಕುವ ಕಡೆ ಮಾನವ ನಾಗರಿಕತೆ ತನ್ನ ಗಮನವನ್ನು ಹರಿಸಲೇಬೇಕು. ಅಲ್ಲದೆ ಈ ಕೋವಿಡ್ ಕಾಂಡದಲ್ಲಿ ನಾವು ಕಂಡುಕೊಂಡಂತೆ ರೋಗ ನಿಯಂತ್ರಣಕ್ಕೆ ದುಡಿಯುತ್ತಿರುವುದು ಲಾಭಬಡುಕ ಖಾಸಗಿ ವೈದ್ಯಕೀಯ ಕ್ಷೇತ್ರವಲ್ಲ. ನಿಜಕ್ಕೂ ಕೊರೋನಾ ಯೋಧರಾಗಿ ಮುಂಚೂಣಿಯಲ್ಲಿ ಯುದ್ಧವನ್ನು ನಿಭಾಯಿಸುತ್ತಿರುವುದು ನಿಸ್ವಾರ್ಥವಾಗಿ ದುಡಿಯುತ್ತಿರುವ ವೈದ್ಯರು, ದಾದಿಯರು, ಆಶಾಗಳು ಮುಂತಾದವರು ಮತ್ತು ಅವರನ್ನೆಲ್ಲಾ ಒಳಗೊಂಡಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆ. ಈ ಕ್ಷೇತ್ರವನ್ನು ಬಲಪಡಿಸಲು ನಾವು ಒತ್ತಡ ಹೇರಬೇಕಾಗಿದೆ.

ಒಟ್ಟಿನಲ್ಲಿ ನಾವೆಲ್ಲರೂ ಮಾನವ ಪ್ರಯತ್ನದಲ್ಲಿ, ವಿಜ್ಞಾನದಲ್ಲಿ, ಸಾಮಾನ್ಯ ಮನುಷ್ಯರ ಸದ್ವಿವೇಕದಲ್ಲಿ ನಂಬಿಕೆ ಇರಿಸೋಣ. ಮನುಕುಲ ಎಷ್ಟೋ ಭೀಕರ ಸವಾಲುಗಳನ್ನು ಗೆದ್ದಂತೆಯೇ ಇದನ್ನೂ ಗೆಲ್ಲಲಿದೆ ಎಂದೇ ಭಾವಿಸೋಣ.

*ಲೇಖಕರು ವೈದ್ಯಕೀಯ ಪದವಿ ನಂತರ ಓದು, ಬರವಣಿಗೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಕಣ ಬರಹ, ರಂಗಭೂಮಿ, ಅನುವಾದ ಇವು ಆಸಕ್ತಿಯ ಕ್ಷೇತ್ರಗಳು. ಇತ್ತೀಚೆಗೆ ಪ್ರಕಟವಾದ ಅನುವಾದಿತ ಕೃತಿಗಳು- `ರೆಡ್ ಮೆಡಿಸಿನ್’, `ಚರಿತ್ರೆ ಎಂದರೇನು’

 

 

Leave a Reply

Your email address will not be published.