ಸಾಂಕ್ರಾಮಿಕದ ಅಂತ್ಯ ಹೇಗೆ..? ಚಿಕಿತ್ಸೆಯೋ..? ಲಸಿಕೆಯೋ..? ಸಮೂಹ ಪ್ರತಿರಕ್ಷೆಯೋ..?ಸೆಪ್ಟೆಂಬರ್ ಸಂಚಿಕೆಯ ಮುಖ್ಯ ಚರ್ಚೆ:

ಸಾಂಕ್ರಾಮಿಕದ ಅಂತ್ಯ ಹೇಗೆ..? ಚಿಕಿತ್ಸೆಯೋ..? ಲಸಿಕೆಯೋ..? ಸಮೂಹ ಪ್ರತಿರಕ್ಷೆಯೋ..?

ಕೋವಿಡ್-19 ವೈರಾಣು ಇನ್ನು ನಮ್ಮ ನಡುವೆಯೇ ಇರಲಿದೆ. ಮುಂದಿನ ವರ್ಷಗಳಲ್ಲಿ ಮಲೇರಿಯಾ, ಕಾಲರಾ, ಇನ್‌ಫ್ಲುಯೆಂಜಾ ರೋಗಗಳಂತೆ ವೈರಾಣು ಕಾರಣಿತ ಈ ರೋಗವೂ ನಮ್ಮ ಬದುಕಿನ ಭಾಗವೇ ಆಗಿ ಉಳಿಯುವಂತೆ ಕಾಣುತ್ತಿದೆ. ಆದರೆ ಈ ವೈರಾಣುವಿನಿಂದ ಹಬ್ಬಿದ ಸಾಂಕ್ರಾಮಿಕ ರೋಗ ಕೊನೆಗಾಣುವುದು ಹೇಗೆ ಎಂಬ ಚರ್ಚೆ ಇಂದು ಪ್ರಸ್ತುತವಾಗಲಿದೆ. ಯಾವ ದಾರಿಯಲ್ಲಿ ವೈರಾಣುವಿನಿಂದ ಪ್ರಾಣಭಯ ದೂರವಾಗುವುದೋ ಹಾಗೂ ಯಾವ ರೀತಿಯಲ್ಲಿ ವೈರಾಣುವಿನ ಹರಡುವಿಕೆ ತಪ್ಪುವುದೋ ಎಂಬುದು ಮುಂದಿನ ತಿಂಗಳುಗಳಲ್ಲಿ ನಿರ್ಧಾರವಾಗಲಿದೆ.

ರೆಮ್‌ಡೆಸಿವಿರ್, ಫ್ಯಾವಿಪಿರವಿರ್, ಡೆಕ್ಸೋಮೆಥಸೋನ್, ಇಟೋಲಿಝುಮಾಬ್ ಸೇರಿದಂತೆ ಹಲವು ಚುಚ್ಚುಮದ್ದು ಹಾಗೂ ಔಷಧಿಗಳು ಬಂದಿವೆ. ಆದರೆ ಇವುಗಳಲ್ಲಿ ಯಾವುದೂ ನೂರಕ್ಕೆ ನೂರರಷ್ಟು ಪ್ರಾಣಹಾನಿ ತಡೆಯುವ ಭರವಸೆ ನೀಡುತ್ತಿಲ್ಲ. ಆಕ್ಸ್ಫರ್ಡ್, ಮಾಡೆರ್ನಾ, ಕೋವ್ಯಾಕ್ಸಿನ್ ಸೇರಿದಂತೆ ಹಲವು ಲಸಿಕೆಗಳು ಲ್ಯಾಬೊರೇಟರಿಗಳಿಂದ ಆಚೆ ಬಂದು ಜನರ ನಡುವೆ ಪ್ರಯೋಗವಾಗುತ್ತಿವೆ. ಇವು ದೊಡ್ಡ ಸಂಖ್ಯೆಯಲ್ಲಿ ಎಲ್ಲರಿಗೂ ಲಭ್ಯವಾಗಲು ಮೂರು-ನಾಲ್ಕು ತಿಂಗಳುಗಳೇ ಬೇಕು. ಮೇಲಾಗಿ ಈ ಲಸಿಕೆಗಳು ರೋಗದ ಸಾಂಕ್ರಾಮಿಕತೆಯನ್ನು ಹೇಗೆ ತಡೆಯುತ್ತವೆ ಎಂಬುದಿನ್ನೂ ಕಾಣಬೇಕಿದೆ.

ಈ ಮಧ್ಯೆ ಮಹಾನಗರಗಳಲ್ಲಿ ಈಗಾಗಲೇ ವೈರಾಣು ಶೇಕಡಾ 20 ರಿಂದ 30 ರಷ್ಟು ಜನರಲ್ಲಿ ಹಬ್ಬಿ ಸಮೂಹ ಪ್ರತಿರಕ್ಷೆಗೆ (ಹರ್ಡ್ ಇಮ್ಯುನಿಟಿ) ಬೇಕಾದ ಶೇಕಡಾ 50 ರಿಂದ 60 ರಷ್ಟು ಜನರಿಗೆ ಹಬ್ಬುವಲ್ಲಿಗೆ ಬೆಳೆಯುತ್ತಿದೆ.

 

ಹಾಗಾದರೆ ಈ ಸೋಂಕುರೋಗದ ‘ಸಾಂಕ್ರಾಮಿಕತೆ’ ಅಂತ್ಯ ಕಾಣುವುದು ಹೇಗೆ..? ಸಾಂಕ್ರಾಮಿಕ ತಜ್ಞರು, ವೈರಾಣು ತಜ್ಞರು, ಲಸಿಕೆ ತಜ್ಞರು ಮತ್ತಿತರ ಪರಿಣತರು ಏನು ಹೇಳುತ್ತಾರೆ? ಕೇಳಿ ನೋಡೋಣ.

ಇದೇ ಸಮಯದಲ್ಲಿ ಸಮಾಜಮುಖಿ ಪತ್ರಿಕೆಯ ಓದುಗರು ಅನುಭವಿಸಿದ ಕೋವಿಡ್ ರಗಳೆಗಳನ್ನೂ ಹಂಚಿಕೊಳ್ಳೋಣ. ಇಂಥ ವೈಯಕ್ತಿಕ ಅನುಭವಗಳನ್ನು (ಇಲ್ಲವೆಂದು ಆಶಿಸೋಣ) ಆಗಸ್ಟ್ 20ರೊಳಗೆ ಬರೆದು ಕಳಿಸಿ.

ಸಮಾಜಮುಖಿ ಮಾಸಪತ್ರಿಕೆ

ನಂ. 114, ಕೃಷ್ಣಪ್ಪ ಬಡಾವಣೆ, ಲಾಲ್‌ಬಾಗ್ ರಸ್ತೆ

ಬೆಂಗಳೂರು-560027

ಇಮೇಲ್: samajamukhi2017@gmail.com

ದೂ: 9606934018

Leave a Reply

Your email address will not be published.