ಸಾಂಕ್ರಾಮಿಕ ರೋಗ ಕನ್ನಡ ಸಾಹಿತ್ಯಕ್ಕೆ ಕೇಂದ್ರ ವಸ್ತುವಾಗಿ ಒದಗಿಲ್ಲ!

ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಒಟ್ಟಾರೆಯಾಗಿ ನೋಡಿದರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಪೂರ್ಣ ಪ್ರಮಾಣದ ಚಿತ್ರಣವೇ ಕಾಣುವುದಿಲ್ಲ. ಇಂತಹ ಮಹತ್ವದ ಸಂಗತಿಯನ್ನು ಕನ್ನಡ ಲೇಖಕರು ತಮ್ಮ ಸಾಹಿತ್ಯದ ವಸ್ತುವನ್ನಾಗಿ ಏಕೆ ಮಾಡಿಕೊಂಡಿಲ್ಲ ಎನ್ನುವ ಕುತೂಹಲ ಮತ್ತು ಆಶ್ಚರ್ಯ ಹುಟ್ಟಿಸುವ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ.

ಕಾದಂಬರಿ ಪ್ರಕಾರದ ಸಾಹಿತ್ಯ ಕನ್ನಡದಲ್ಲಿ ವಿಪುಲವಾಗಿ ಬಂದಿದೆ. ನವೋದಯ ಕಾಲಘಟ್ಟದಿಂದ ಮೊದಲ್ಗೊಂಡು ಈ ಕಾಲದ ಅನೇಕ ಲೇಖಕರು ಕಾದಂಬರಿ ಪ್ರಕಾರವನ್ನು ಗಂಭೀರವಾಗಿ ತೆಗೆದುಕೊಂಡು ಕೃಷಿ ಮಾಡುತ್ತಿದ್ದಾರೆ. ಕಾದಂಬರಿ ಏನು ಇತಿಹಾಸವಲ್ಲ. ಆದರೆ ಕಾದಂಬರಿ ಹುಟ್ಟಿದ ಕಲಘಟ್ಟದಲ್ಲಿಯ ಇತಿಹಾಸದ ಸನ್ನಿವೇಶದ ಎಳೆಗಳು ಖಂಡಿತವಾಗಿಯೂ ಕಾದಂಬರಿಯಲ್ಲಿ ಇರುತ್ತವೆ. ಅಂದರೆ ಕಾದಂಬರಿಯನ್ನು ಅದು ಹುಟ್ಟಿದ ಕಾಲಘಟ್ಟದ ಸನ್ನಿವೇಶ ಮತ್ತು ಅಗಿನ ಅಲ್ಲಿಯ ಪರಿಸ್ಥಿಯ ಸಂಗತಿಯನ್ನು ತಿಳಿಯುವದಕ್ಕಾಗಿ ನಾವು ಓದಬಹುದಾಗಿದೆ. ಬರೀ ಕಥೆಗಾಗಿಯೂ ಕಾದಂಬರಿಯನ್ನು ಓದಬಹುದು. ಆದರೆ ಆ ಕತೆಗೆ ಪೂರಕವಾದ ಆಗಿನ ಸನ್ನಿವೇಶವೇ ಕಾದಂಬರಿಯ ಹೂರಣವಾಗಿರುವುದನ್ನು ಅಲ್ಲಗಳೆಯಲಾಗದು.

ಕಾದಂಬರಿ ತನ್ನ ಕಾಲದ ಸಾಮಾಜಿಕ ಸಂಗತಿಯನ್ನೇ ವಸ್ತುವನ್ನಾಗಿ ಮಾಡಿಕೊಂಡಿರುತ್ತದೆ. ಪತ್ತೇದಾರಿ ಮತ್ತು ಐತಿಹಾಸಿಕ ಕಾದಂಬರಿಗಳನ್ನು ಹೊರತುಪಡಿಸಿ ಈ ಮಾತು. ಆದರೆ ಕನ್ನಡ ಕಾದಂಬರಿಗಳ ಇತಿಹಾಸವನ್ನು ನೋಡಿದಾಗ ನಮ್ಮ ಕಾದಂಬರಿಕಾರರು ತಮ್ಮ ಕಾಲದ ಪ್ರಕ್ಷುಬ್ಧ ಸಂಗತಿಗೆ ಮುಖಾಮುಖಿಯಾಗಿ ಕಾದಂಬರಿ ಕಟ್ಟಲಿಲ್ಲ ಎನ್ನಿಸುತ್ತದೆ.

ನೋಡಿ, ಈಗ ಐವತ್ತು ವರ್ಷಗಳ ಆಚೆ ಕನ್ನಡ ನಾಡಿನಲ್ಲಿ ಮಹಾಮಾರಿಯಾಗಿ ಕಾಡಿದ ಪ್ಲೇಗ್ ಎಂಬ ರೋಗವು ಆ ಕಾಲಘಟ್ಟದಲ್ಲಿ ಉಂಟು ಮಾಡಿದ ಸಾಮಾಜಿಕ ವಿಪ್ಲವಗಳ ಬಗ್ಗೆ ನಮ್ಮ ಕಾದಂಬರಿಕಾರರು ಮಹಾಮೌನ ತಾಳಿದ್ದಾರೆ, ಯಾಕೆ? ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ ಎಂ.ಎಸ್.ಪುಟ್ಟಣ್ಣನವರ ‘ಮಾಡಿದ್ದುಣ್ಣೊ ಮಾರಾಯ’ ಅನಂತಮೂರ್ತಿ ಅವರ ‘ಸಂಸ್ಕಾರ’, ಭೈರಪ್ಪನವರ ‘ಗೃಹಭಂಗ’ ಮತ್ತು ತೀರ ಇತ್ತೀಚಿನ ಚಂದ್ರಕಾಂತ ಕುಸನೂರರ ‘ಯಾತನಾ ಶಿಬಿರ’ ಕಾದಂಬರಿಗಳಲ್ಲಿ ಸಾಂಕ್ರಾಮಿಕ ರೋಗದ ಪ್ರಸ್ತಾಪವನ್ನು ಕಾಣಬಹುದು.

ಕನ್ನಡದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕುರಿತಾಗಿಯೂ ನಾಲ್ಕೈದು ಕಾದಂಬರಿಗಳು ಮಾತ್ರ ಸಿಗುತ್ತವೆ. ಇನ್ನು  ನಮ್ಮ ಹಾಗೆಯೇ ಸುಂದರ ಮುಖ ಹೊತ್ತು ಹುಟ್ಟಿದ ಅದೆಷ್ಟೋ ಮಕ್ಕಳು ಮೈಲಿಬೇನೆ (ಸಿಡುಬು)  ರೋಗಕ್ಕೆ ತುತ್ತಾಗಿ ತಮ್ಮ ಮುಖದಲ್ಲಿ ವಿಕಾರವಾದ ಕಲೆಗಳನ್ನು ಮಾಡಿಕೊಂಡು, ಅದು ಹೇಗೋ ಬದುಕುಳಿದವರ ಬಗ್ಗೆ ಯಾವ ಕಾದಂಬರಿಯಲ್ಲೂ ಬಂದಿಲ್ಲ. ಅದೆಷ್ಟೋ ತಾಯಂದಿರು ತಮ್ಮ ಒಂದೇ ಕೂಸನ್ನು ದಡಾರ (ಕೂಸುಗಳಿಗೆ ಬರುವ ರೋಗ) ರೋಗಕ್ಕೆ ಬಲಿಕೊಟ್ಟು ದುರಂತ ಬದುಕನ್ನು ಬಾಳಿದವರಿದ್ದಾರೆ. ಆದರೂ ಕನ್ನಡದಲ್ಲಿ ಆ ಬಗೆಯ ವಸ್ತುವನ್ನು ಇಟ್ಟುಕೊಂಡು ಯಾವ ಕಾದಂಬರಿಯೂ ಬಂದಿಲ್ಲ.

ಮೇಲೆ ಹೇಳಿದ ಕಾದಂಬರಿಗಳು ಕೂಡಾ ಪ್ಲೇಗ್ ಎನ್ನುವ ಸಾಂಕ್ರಾಮಿಕ ರೋಗವು ಸಮಾಜದ ವಿವಿಧ ಸ್ತರಗಳ ಮೇಲೆ, ಅಂದರೆ ಸಾಮಾಜಿಕ, ಆರ್ಥಿಕ, ಇತ್ಯಾದಿಗಳ ಮೇಲೆ ಉಂಟು ಮಾಡಿದ ಪರಿಣಾಮದ ಬಗ್ಗೆ ಮಾತಾಡುವುದಿಲ್ಲ. ಸಂಸ್ಕಾರ ಕಾದಂಬರಿಯಲ್ಲಿ ಅಗ್ರಹಾರದಲ್ಲಿ ಉಂಟಾಗುವ ಜಾತಿ ಸಮಸ್ಯೆಯ, ಬಿಕ್ಕಟ್ಟಿನ ಬಗ್ಗೆಯೇ ಕಾದಂಬರಿ ವಿವರಿಸುತ್ತ ಹೋಗುತ್ತದೆ. ರಸ್ತೆ ಮತ್ತು ಮನೆಗಳಲ್ಲಿ ಸತ್ತ ಇಲಿಗಳು ಬೀಳುವುದರ ವರ್ಣನೆ ಇದೆಯೇ ವಿನಾ ಅದರ ಒಟ್ಟಾರೆ ಸಾಮಾಜಿಕ ಪರಿಣಾಮ ಇಲ್ಲಿ ಇಲ್ಲವಾಗಿದೆ.

ಹಾಗೆಯೇ ಭೈರಪ್ಪನವರ ಗೃಹಭಂಗದಲ್ಲಿ ಕೂಡಾ ಪ್ಲೇಗ್ ಒಂದು ಕುಟುಂಬದಲ್ಲಿ ಉಂಟಾಗುವ ಅನಾಹುತವನ್ನು ಮಾತ್ರ ಚಿತ್ರಿಸುತ್ತದೆ. ಆದರೆ ಇಡೀ ಹಳ್ಳಿ ಅಥವಾ ಪ್ರ‍್ರಾಂತದಲ್ಲಿ ಪ್ಲೇಗ್ ರೋಗದಿಂದ ಆಗುವ ಅನಾಹುತಗಳ ಚಿತ್ರಣವಿಲ್ಲ.

ಹಾಗೆ ನೋಡಿದರೆ ನಮ್ಮ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಒಟ್ಟಾರೆಯಾಗಿ ನೋಡುವಾಗ ಸಾಂಕ್ರಾಮಿಕ ರೋಗಗಳ ಬಗ್ಗೆ ವಿವರವಾದ ಚಿತ್ರಣಗಳೇ ಇಲ್ಲ. ಎಂ.ವ್ಯಾಸ ಅವರ ಕತೆಗಳಲ್ಲಿ ಬರುವ ರೋಗವು ವ್ಯಕ್ತಿಗತವಾಗಿದೆ. ಹಾಗೆಯೇ ಲಂಕೇಶರ ಗುಣಮುಖ ನಾಟಕದಲ್ಲಿಯ ರಾಜನಿಗೆ ಬರುವ ರೋಗವು ಅವನೊಬ್ಬನ ಸಮಸ್ಯೆಯಾಗಿ ಮಾತ್ರ ಬರುತ್ತದೆ. ತ್ರಿವೇಣಿ ಕಾದಂಬರಿಯಲ್ಲಿ ಬರುವ ಮಾನಸಿಕ ರೋಗದ ಪ್ರಸ್ತಾಪ ಕೂಡಾ ಸಮುದಾಯದ ಸಮಸ್ಯೆಯಾಗಿ ಬರುವುದಿಲ್ಲ. ಇದು ಬಹಳ ಕುತೂಹಲಕಾರಿ ಸಂಗತಿಯಾಗಿದೆ.

ಕನ್ನಡದ ಲೇಖಕರು ಒಂದು ವಸ್ತುವನ್ನು (ಥೀಮ್) ಇಡೀಯಾಗಿ ಇಟ್ಟುಕೊಂಡು ಕಾದಂಬರಿ ರಚಿಸುತ್ತಿಲ್ಲ ಎನ್ನಿಸುತ್ತದೆ. ಅಂದರೆ ಇವರಾರೂ ಥೀಮ್ಯಾಟಿಕ್ ಲೇಖಕರಲ್ಲ (ಭೈರಪ್ಪನವರನ್ನು ಹೊರತು ಪಡಿಸಿ). ಹಾಗಾಗಿ ಮಹಾ ಸಾಂಕ್ರಾಮಿಕ ರೋಗಗಳನ್ನೇ ಒಂದು ಥೀಮ್ ಆಗಿ ಇಟ್ಟುಕೊಂಡು ಇಲ್ಲಿ ಸಾಹಿತ್ಯ ಹುಟ್ಟಿ ಬಂದಿಲ್ಲ ಎನಿಸುತ್ತದೆ.

ಜಾಗತಿಕ ಕಾದಂಬರಿಗಳನ್ನು ಗಮನಿಸಿದಾಗ ಪಾಶ್ಚಾತ್ಯ ಕಾದಂಬರಿಕಾರರು ಅಗಿನ ಕಾಲದ ಮಹಾಮಾರಿ ಸಾಂಕ್ರಾಮಿಕ ರೋಗವಾದ ಪ್ಲೇಗ್ ಬಗ್ಗೆ ಬಹಳಷ್ಟು ಕಾದಂಬರಿಗಳನ್ನು ಬರೆದಿದ್ದಾರೆ. ಜ್ಯಾಕ ಲಂಡನ್ ಎಂಬ ಅಮೆರಿಕೆಯ ಲೇಖಕ 1912ರಲ್ಲಿ ಬರೆದ ‘ದಿ ಸ್ಕಾರ್ಲೆಟ್ ಪ್ಲೇಗ್’ ಕಾದಂಬರಿಯು ಆಧುನಿಕ ಸಾಹಿತ್ಯದಲ್ಲಿ ರೋಗದ ಬಗ್ಗೆ ಬರೆದ ಮೊದಲ ಕಾದಂಬರಿಯಾಗಿದೆ. ಆ ಮಾಹಾರೋಗದಿಂದ ಪವಾಡ ಸದೃಶನಾಗಿ ಬದುಕುಳಿದ ಜೇಮ್ಸ ಹಾವರ್ಡ ಸ್ಮಿತ್ ಅಥವಾ ‘ಗ್ರ್ಯಾನ್ಸರ್’ ಹೇಗೆ ಪ್ಲೇಗ್ ಜನರನ್ನು ಕೊಂದು ಹಾಕಿತು, ಹೇಗೆ ಅದಕ್ಕೆ ಔಷಧವನ್ನು ಕಂಡು ಹಿಡಿಯಲಾಗದೆ ಜನ ಸತ್ತು ಬಿದ್ದರು ಎನ್ನುವ ವಿವರಗಳನ್ನು ತನ್ನ ಮೊಮ್ಮಕ್ಕಳಿಗೆ ಕಥೆಮಾಡಿ ಹೇಳುತ್ತಾನೆ. ಕಾದಂಬರಿಯು ಭಯಾನಕ ಮತ್ತು ಕರುಣಪೂರಿತ ಚಿತ್ರಣಗಳನ್ನು ಕೊಡುತ್ತ ಹೋಗುತ್ತದೆ. ಪ್ಲೇಗ್‌ದಿಂದ ತಪ್ಪಿಸಿಕೊಳ್ಳುವದೆಂದರೆ ರೋಗಿಯಿಂದ ದೈಹಿಕ ಅಂತರ ಕಾಪಾಡಿಕೊಳ್ಳುವುದೊಂದೇ ಮಾರ್ಗ ಎಂದು ಕಾದಂಬರಿ ಹೇಳುತ್ತದೆ (ಈಗ ನಾವು ಕ್ವಾರಂಟೈನ್ ಬಗ್ಗೆ ಮಾತಾಡುತ್ತಿದ್ದೇವೆ).

ಮನುಷ್ಯರು ಮಾಡಿದ ಪಾಪದಿಂದ ಈ ರೋಗ ಬಂದಿದೆ ಎಂದು ಈ ರೋಗವನ್ನು ಪಾಪಕ್ಕೆ ಜೋಡಿಸಲಾಗಿತ್ತು. ಪ್ಲೇಗ್ ಬಗ್ಗೆ ಇರುವ ಇದೇ ವಿಚಾರವು ಗ್ರೀಕ್ ಸಾಹಿತ್ಯದ ಇಲಿಯಡ್‌ದಲ್ಲಿ ಮತ್ತು ಸಾಪೋಕ್ಲಿಸ್‌ನ ಕಿಂಗ್ ಇಡಿಪಸ್ ನಾಟಕದಲ್ಲೂ ಮುಂದುವರೆದಿತ್ತು.

ಗ್ರೀಕ್ ಇತಿಹಾಸಕಾರ ತುಸಿಡೈಡ್ (460-395 ಬಿ.ಸಿ.) ತನ್ನ ‘ಫಿಲೋಫೋಯೇಸಿಯನ್ ಯುದ್ಧ’ ಎಂಬ ಇತಿಹಾಸ ಪುಸ್ತಕದಲ್ಲಿ ಮತ್ತು ಲ್ಯಾಟಿನ್ ಕವಿ ಲುಕ್ರೆಟಿಸ್‌ನು  ತನ್ನ ‘ಡೆ ರೆರುಮ್ ನಾಚುರ’ ಪುಸ್ತಕದಲ್ಲಿ ಪ್ಲೇಗ್ ರೋಗ ಪಾಪಿಗಳು ಮತ್ತು ಪುಣ್ಯವಂತರು ಎಂದು ಭೇದಭಾವ ಮಾಡುವದಿಲ್ಲ ಎಂದು ಬರೆದ.

ನಂತರದಲ್ಲಿ ಮಧ್ಯಕಾಲೀನ ಬರೆಹದಲ್ಲಿ ಗಿವನ್ನಿ ಬ್ಯೊಕಾಸಿವೋನ (1313-1375) ‘ ಡೆಕ್ಯಾಮರಾನ್’ ಮತ್ತು ಜೆಪ್ರಿ ಚಾಸರನ (1343-1400) ‘ದಿ ಕ್ಯಾಂಟರಬರಿ ಟೇಲ್ಸ’ ಗಳಲ್ಲಿ ಮಹಾರೋಗದಿಂದ ಉಂಟಾದ  ಮನುಷ್ಯರ ಭಯದ ಬಗ್ಗೆ ಇರುವ ವಿವರಗಳನ್ನು ಕಾಣುತ್ತೇವೆ. ಮನುಷ್ಯನ ಅತ್ಯಾಸೆ, ಭ್ರಷ್ಟಾಚಾರ, ಮೋಸ ಇತ್ಯಾದಿಗಳಿಂದಾಗಿ ನೈತಿಕ ಮತ್ತು ದೈಹಿಕ ಸಾವುಗಳು ಘಟಿಸುತ್ತವೆ ಎಂದು ಹೇಳಲಾಗಿದೆ. ಡೇನಿಯಲ್ ಡಿಪೋ (1645-1731) ‘ಏ ಜರ್ನಲ್ ಆಫ್ ದಿ ಪ್ಲೇಗ್ ಇಯರ್’ ದಲ್ಲಿ ಪ್ಲೇಗ್ ರೋಗವೇ ಕೇಂದ್ರ ವಿಷಯವಾಗಿದೆ. 1665ರಲ್ಲಿ ಇಂಗ್ಲಂಡದಲ್ಲಿ ಸಂಭವಿಸಿದ ಮಹಾಪ್ಲೇಗ್‌ದ ಸವಿವರಗಳು ಈ ಕೃತಿಯಲ್ಲಿ ಸಿಗುತ್ತವೆ. ಇಟಲಿಯ ಕಾದಂಬರಿಕಾರ ಅಲೆಜಾಂಡ್ರೋ ಮೆಂಜೋನಿ (1785-1873) ಕಾದಂಬರಿಯಲ್ಲಿ ಪ್ಲೇಗ್ ರೋಗದ ಬಗ್ಗೆ ವಿಶೇಷ ವಿವರಗಳು ಇವೆ. ಇಂಗ್ಲೀಷ್ ಸಾಹಿತ್ಯದಲ್ಲಿ ಮೇರಿ ಶೆಲ್ಲಿಯ (1797-1851) ‘ದಿ ಲಾಸ್ಟ್ ಮ್ಯಾನ್’ ಕಾದಂಬರಿಯಲ್ಲಿ ಪ್ಲೇಗ್ ರೋಗವು ಮನುಷ್ಯನನ್ನು ಸಿಟ್ಟಿನಿಂದ ಕೊಲ್ಲುತ್ತದೆ ಎನ್ನುವ ವಿವರ ಇದೆ.

1842ರಲ್ಲಿ ಅಮೇರಿಕೆಯ ಎಡ್ಗರ ಅಲೆನ್ ಪೋ ಬರೆದ ‘ದಿ ಮಾಸ್ಕ್ ಆಫ್ ದಿ ರೆಡ್ ಡೆತ್’ ಎಂಬ ಕತೆ ಸಾಹಿತ್ಯ ಲೋಕದಲ್ಲಿ ಪ್ಲೇಗ್ ಎಂಬ ಮಹಾಮಾರಿ ಬಗ್ಗೆ ಬರೆದ ಅಪರೂಪದ ಕತೆಯಾಗಿದೆ.  ಈ ಕತೆಯಲ್ಲಿ ಪ್ಲೇಗ್‌ನ್ನು ಮಾನವರೂಪಿಯಾಗಿ ಚಿತ್ರಿಸಲಾಗಿದೆ. ಈ ಕತೆ ನಮ್ಮ ಕಣ್ಣಿಗೆ ಕಾಣದ ಸಂಗತಿಯೊಂದು ಕೆಂಪುಸಾವಿಗೆ ಕಾರಣವಾಗುತ್ತಿದೆ ಮತ್ತು ಸಾವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತದೆ. 1947ರಲ್ಲಿ ಬಂದ ಅಲ್ಬರ್ಟ್ ಕಮೂನ ಪ್ರಸಿದ್ಧ ಕಾದಂಬರಿ ‘ದಿ ಪ್ಲೇಗ್’ನ್ನು ನಾವು ಗಮನಿಸದೆ ಇರಲಾಗದು. ಮಾರ್ಕ್ವೆಜ್‌ನ ‘ಲವ್ ಇನ್ ದ ಟೈಮ್ ಆಫ್ ಕಾಲರಾ’ ರೋಗದ ಹೆಸರಿಟ್ಟುಕೊಂಡು ಬಂದ ಕೃತಿಯಾಗಿದೆ.

ಹೀಗೆ ಜಾಗತಿಕ ಸಾಹಿತ್ಯದ ಇತಿಹಾಸದಲ್ಲಿ ಈ ಬಗೆಯ ತಮ್ಮ ಕಾಲದ ಸಾಮಾಜಿಕ ವ್ಯವಸ್ಥೆಯನ್ನು ದಿಕ್ಕೆಡಿಸಿದ ರೋಗದ ಬಗ್ಗೆ ಅಲ್ಲಿಯ ಸಂವೇದನಾಶೀಲ ಲೇಖಕರು ತಮ್ಮ ಕತೆ ಮತ್ತು ಕಾದಂಬರಿಗಳ ಮೂಲಕ ಸ್ಪಂದಿಸಿದ್ದಾರೆ. ಆದರೆ ಯಾಕೆ ನಮ್ಮ ಕನ್ನಡದ ಲೇಖಕರು ಇಂತಹ ಮಹತ್ವದ ಸಂಗತಿಯನ್ನು ತಮ್ಮ ಸಾಹಿತ್ಯದ ವಸ್ತುವನ್ನಾಗಿ ಮಾಡಿಕೊಂಡಿಲ್ಲ ಎನ್ನುವ ಕುತೂಹಲ ಮತ್ತು ಆಶ್ಚರ್ಯ ಹುಟ್ಟಿಸುವ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ.

*ಲೇಖಕರು ಕನ್ನಡದ ಬಹುಮುಖ್ಯ ಕಾದಂಬರಿಕಾರರು; ನಿವೃತ್ತ ಪ್ರಾಧ್ಯಾಪಕರು, ಅಥಣಿಯಲ್ಲಿ ವಾಸ.

 

 

Leave a Reply

Your email address will not be published.