ಸಾಂಕ್ರಾಮಿಕ ರೋಗ ಸಂದರ್ಭದ ಸ್ಪಂದನೆ ಎಸ್.ಎಲ್.ಭೈರಪ್ಪ ಮಾದರಿ

ಎಸ್.ಎಲ್.ಭೈರಪ್ಪ ಅವರನ್ನು ಕನ್ನಡ ಸಾಹಿತ್ಯಲೋಕ ಹೇಗೆ ಕಂಡಿದೆ ಎಂಬ ಚರ್ಚೆ ಸೈದ್ಧಾಂತಿಕವಾಗಿ ಮಹತ್ವದ್ದಾದರೂ ಇಲ್ಲಿ ಅದು ಅಪ್ರಸ್ತುತ. ಆದರೆ ಎಸ್.ಎಲ್.ಭೈರಪ್ಪನವರು ವ್ಯಕ್ತಿಯಾಗಿ ಸಾಹಿತಿಯಾಗಿ ಸಾಂಕ್ರಾಮಿಕ ರೋಗವನ್ನು ಕಂಡಿರುವುದು, ಕಾಣುವಂತೆ ಮಾಡಿರುವುದು ಗಮನಾರ್ಹ.

ರೋಗ ವ್ಯಕ್ತಿ ಮತ್ತು ಕುಟುಂಬವನ್ನು ಸಂಕಷ್ಟಕ್ಕೀಡು ಮಾಡಿದರೆ, ಸಾಂಕ್ರಾಮಿಕ ರೋಗ ಇಡೀ ಹಳ್ಳಿ, ಸಮಾಜ, ದೇಶ, ವಿಶ್ವದ ಒಟ್ಟಾರೆಯ ಬದುಕನ್ನು ಸಂಕಟಕ್ಕೀಡು ಮಾಡುತ್ತದೆ. ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ಹಾಗೆ ವ್ಯವಸ್ಥೆ ಬುಡಮೇಲಾಗುವುದೆಂದರೆ ಪರೋಕ್ಷವಾಗಿ ವ್ಯಕ್ತಿ ಮತ್ತು ಕುಟುಂಬಗಳು ಬುಡಮೇಲಾಗುವುದು ಎಂದೇ ಅರ್ಥ. ಈ ಪ್ರಪಂಚ ತನ್ನ ಇತಿಹಾಸದಲ್ಲಿ ಹಲವು ಸಾಂಕ್ರಾಮಿಕ ರೋಗಗಳನ್ನು ಕಂಡಿದೆ, ಬಿದ್ದಿದೆ, ಮತ್ತೆ ಮೇಲೆದ್ದಿದೆ. ಹಾಗೆ ವ್ಯವಸ್ಥೆಯ ಪುನರ್ನಿರ್ಮಾಣದಲ್ಲಿ ಮಾನವರ ಅಂತಃಕರಣ ಹೇಗೆ ಜಾಗೃತಗೊಂಡು ದುಡಿದಿದೆ ಎಂಬುದಕ್ಕೂ ಸಾಕಷ್ಟು ಮಾದರಿಗಳಿವೆ. ಪ್ರತಿಯೊಂದು ಸೋಲು, ಸಂಕಟ, ಸಾವುಗಳ ಸಂದರ್ಭದಲ್ಲಿಯೂ ಅವೆಲ್ಲವುಗಳಿಗಿಂತ ಸ್ಫೂರ್ತಿ, ಸಂತೋಷ, ಬದುಕು ದೊಡ್ಡದು ಮತ್ತು ಚಿರಾಯು ಎಂಬುದು ಬೆನ್ನಿಗಿದೆ.

ಸಾಹಿತ್ಯಲೋಕ ಎಂಬುದು ಸಾಹಿತಿ-ಸಾಹಿತ್ಯ-ಸಹೃದಯ ಎಂಬ ತ್ರಿಕೋನಾತ್ಮಕ ರಚನೆಯ ಲೋಕ. ಇಲ್ಲಿ ಸಾಹಿತಿಯನ್ನೇ ಬ್ರಹ್ಮ ಎಂದು ಭಾರತೀಯ ಕಾವ್ಯಮೀಮಾಂಸೆ ಕರೆದಿದೆ. ಅವನದು ಲೋಕದ ಪ್ರತಿಸೃಷ್ಟಿಯಲ್ಲ ಅನುಸೃಷ್ಟಿ; ಹಾಗಾಗಿ ಅದು ಸಾಹಿತ್ಯಲೋಕ. ಈ ಸಾಹಿತ್ಯಲೋಕದ ಪ್ರಜೆಗಳೇ ಸಹೃದಯರು. ಅವರೂ ಹೃದಯ ಕವಿಗಳೇ ಆದ ಕಾರಣ. ಸಾಹಿತಿ ಸೃಷ್ಟಿಸಿದ ಸಾಹಿತ್ಯಲೋಕ ಸಹೃದಯರ ಮನೋಭೂಮಿಕೆಯಲ್ಲಿ ಅವರವರ ಭಾವಯತ್ರಿ ಪ್ರತಿಭೆಗೆ ಅನುಗುಣವಾಗಿ ಪುನರ್ಸೃಷ್ಟಿಯಾಗುತ್ತಾ ಅದು ನಿರಂತರವಾಗಿ ಜೀವಂತ ಚಲನೆಯನ್ನು ಉಳಿಸಿಕೊಂಡಿರುತ್ತದೆ. ಇಂದು ಪ್ಲೇಗ್ ಎಂಬ ಸಾಂಕ್ರಾಮಿಕ ರೋಗ ಲೋಕದಲ್ಲಿಲ್ಲ. ಆದರೆ ಸಾಹಿತ್ಯಲೋಕದಲ್ಲಿದೆ. ಆದರೆ ವಾಸ್ತವಲೋಕದಲ್ಲಿ ಪ್ಲೇಗಿನ ಬದಲು ಕೊರೊನಾ ಆಕ್ರಮಿಸಿ ಕುಳಿತಿದೆ. ಮುಂದೊಂದು ದಿನ ಅದು ಲೋಕದಲ್ಲಿ ಇಲ್ಲವಾಗಬಹುದು. ಆದರೆ ಸಾಹಿತ್ಯಲೋಕದಲ್ಲಿ ಜೀವಂತವಾಗಿರುತ್ತದೆ. ಕಲಿಯುವವರಿಗೊಂದು ಲೋಕದೃಷ್ಟಿಯನ್ನೂ ಜೀವನಾನುಭವವನ್ನೂ ಜೀವನಪ್ರೀತಿಯನ್ನೂ ಕಲಿಸುತ್ತಿರುತ್ತದೆ.

ಈ ಲೇಖನದಲ್ಲಿ ಸಾಹಿತಿ ಮತ್ತು ಸಾಹಿತ್ಯಕೃತಿಯನ್ನು ಮಾತ್ರ ಪರಿಗಣಿಸಿದ್ದೇನೆ. ಸಾಹಿತಿ ತುಂಬಾ ಸೂಕ್ಷ್ಮ ಸಂವೇದನಾಶೀಲರಾದವರೆಂದು ಸಮಾಜ, ಸಹೃದಯ ನಂಬಿ ಗೌರವಿಸುತ್ತಾ ಬಂದಿದೆ. ಆದರೆ ಸಾಹಿತಿ ದೇವರಲ್ಲ. ಸಾಹಿತಿಯೂ ಒಬ್ಬ ಮನುಷ್ಯ. ಒಬ್ಬ ಉತ್ತಮ ಮನುಷ್ಯನಾಗಲಾರದವ ಒಬ್ಬ ಉತ್ತಮ ಸಾಹಿತಿಯಾಗಿದ್ದರೂ ಅವನ ಹೆಂಡತಿ ಮಕ್ಕಳೇ ಅವನನ್ನು ಗೌರವಿಸಲಾರರು. ಆದರೆ ಸಾಹಿತಿಯೊಳಗಿನ ವ್ಯಕ್ತಿ ಕಾಲಾನುಕ್ರಮ ಕಣ್ಮರೆಯಾಗುವುದರಿಂದ ಅವನ ವ್ಯಕ್ತಿತ್ವ ಸಾಹಿತ್ಯ ಕೃತಿಗಳ ಮೂಲಕ ಮಾತ್ರ ಗಮನ ಸೆಳೆಯುತ್ತದೆ.

ಸಾಂಕ್ರಾಮಿಕ ರೋಗವನ್ನು ಸಾಹಿತಿಯಾದವರು ಮೂರು ರೀತಿಯಲ್ಲಿ ಎದುರುಗೊಳ್ಳಬಹುದು. ಒಂದು ತಾನು ಮನುಷ್ಯನಾಗಿ ಬದುಕಿದ್ದ ಕಾಲದಲ್ಲಿ ಇಡೀ ವ್ಯವಸ್ಥೆಯನ್ನು ಸಾಂಕ್ರಾಮಿಕ ರೋಗ ದುಃಖಕ್ಕೀಡು ಮಾಡಿದಾಗ ತನ್ನ ಕೈಲಾದ ಧನಸಹಾಯ, ಆಹಾರ, ಔಷಧಿ ವಿತರಣೆ, ಸೇವಾ ಚಟುವಟಿಕೆ ಮೊದಲಾದ ರೀತಿಯಲ್ಲಿ ನೆರವಾಗಬಹುದು. ಎರಡು, ಸಾಂಕ್ರಾಮಿಕ ರೋಗದಿಂದ ಬದುಕು ಅನುಭವಿಸಿದ ತಲ್ಲಣಗಳನ್ನು ಸಾಹಿತಿಯಾಗಿ ಕೃತಿರೂಪಕ್ಕಿಳಿಸಬಹುದು. ಮೂರು, ಅವರ ವೈಚಾರಿಕತೆ, ಸಿದ್ಧಾಂತ, ಜೀವನಾನುಭವ, ಜೀವನಾದರ್ಶಗಳ ಹಿನ್ನೆಲೆಯಲ್ಲಿ ಆ ಸಂಕಟದಿಂದ ಬಿಡುಗಡೆ ಪಡೆಯುವ ಹೊಸ ಹೊಸ ಸಾಧ್ಯತೆಯ ಹಾದಿಗಳನ್ನು ನಿರ್ಮಿಸಬಹುದು. ಈ ಮೂರೂ ರೀತಿಯ ಸ್ಪಂದನೆಗೆ ಉತ್ತಮ ಉದಾಹರಣೆ ಕನ್ನಡದ ಹೆಸರಾಂತ ಲೇಖಕ ಡಾ.ಎಸ್.ಎಲ್.ಭೈರಪ್ಪ.

ಕೊರೊನಾ ಸಾಂಕ್ರಾಮಿಕ ರೋಗ ಆಕ್ರಮಿಸಿದ ಈ ಹೊತ್ತಿನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪನವರು ಒಂದು ಲಕ್ಷ ರೂಪಾಯಿಯನ್ನು ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿರುವುದು ಒಂದು ಮಾದರಿಯ ದಾರಿ. ಅದೇ ರೀತಿಯಲ್ಲಿ ಲಕ್ಷಾಂತರ ಜನರು ತಮ್ಮ ತಮ್ಮ ಕೈಲಾದ ಎಲ್ಲಾ ರೀತಿಯ ದೇಣಿಗೆ, ಆಹಾರ, ಔಷಧಿ ವಿತರಣೆ, ಸೇವಾ ಚಟುವಟಿಕೆಗಳನ್ನೂ ಮಾಡಿದ್ದಾರೆ. ಅದೇ ಹೊತ್ತಿನಲ್ಲಿ ಯಾವ ಯಾವ ಸಾಹಿತಿಗಳು ವ್ಯಕ್ತಿಯಾಗಿ ಯಾವ ಯಾವ ರೀತಿಯಲ್ಲಿ ಕೊರೊನಾ ಸಂದರ್ಭದಲ್ಲಿ ಸ್ಪಂದಿಸಿದ್ದಾರೆ ಎಂಬುದರ ಅಧ್ಯಯನವೂ ನಡೆದರೆ ಉತ್ತಮ. ಇಲ್ಲದಿದ್ದಲ್ಲಿ ಸಾಹಿತಿಯಾದವನು ಸಮಾಜದ ಸಂಕಟವನ್ನು ಕೇವಲ ತನ್ನ
ಕೃತಿಯ ಬಂಡವಾಳವನ್ನಾಗಿಸಿಕೊಂಡು ಸನ್ಮಾನಗೊಳ್ಳುವ ಮಹಾಸ್ವಾರ್ಥಿಯಾಗಿಬಿಡುತ್ತಾನೆ.

ಈ ಹಿನ್ನೆಲೆಯಲ್ಲಿ ಎಸ್.ಎಲ್.ಭೈರಪ್ಪನವರ ಒಂದು ಲಕ್ಷ ದೇಣಿಗೆ ಹಾಗೂ ಈ ಹಿಂದಿನ ಗೃಹಭಂಗ ಕಾದಂಬರಿಗಳೆರಡೂ ಸಾಹಿತ್ಯಲೋಕ ನಮ್ಮ ಸಾಂಕ್ರಾಮಿಕ ರೋಗವನ್ನು ಹೇಗೆ ಕಂಡಿದೆ ಹಾಗೂ ಹೇಗೆ ಕಾಣಬೇಕು ಎಂಬ ಎರಡಕ್ಕೂ ಒಂದು ಉತ್ತಮ ಉದಾಹರಣೆ. ಅವರನ್ನು ಕನ್ನಡ ಸಾಹಿತ್ಯ ಲೋಕ ಹೇಗೆ ಕಂಡಿದೆ ಎಂಬ ಚರ್ಚೆ ಸೈದ್ಧಾಂತಿಕವಾಗಿ ಮಹತ್ವದ್ದಾದರೂ ಇಲ್ಲಿ ಅದು ಅಪ್ರಸ್ತುತ. ಆದರೆ ಎಸ್.ಎಲ್.ಭೈರಪ್ಪನವರು ವ್ಯಕ್ತಿಯಾಗಿ ಸಾಹಿತಿಯಾಗಿ ಸಾಂಕ್ರಾಮಿಕ ರೋಗವನ್ನು ಕಂಡಿರುವುದು, ಕಾಣುವಂತೆ ಮಾಡಿರುವುದು ಎಲ್ಲ ಕಾಲಕ್ಕೂ ಆದರ್ಶಪ್ರಾಯವಾದುದು.

ಗೃಹಭಂಗಗೊಳಿಸಿದ ಪ್ಲೇಗ್

ಪ್ಲೇಗ್ ಎಂಬುದು ಒಂದು ಸಾಂಕ್ರಾಮಿಕ ರೋಗ. ಕುವೆಂಪು ಅವರು ತಮ್ಮ ನೆನಪಿನ ದೋಣಿಯಲ್ಲಿ ಒಂದು ಸಂಜೆ ಆಟದ ಮೈದಾನದದಲ್ಲಿ ಚೆಂಡಾಟ ಮುಗಿಸಿ ಹುಡುಗರೆಲ್ಲ ಗುಂಪು ಕುಳಿತು ಹರಟೆ ಹೊಡೆಯುತ್ತಿದ್ದಾಗ ಒಬ್ಬ (ಅವನು ಡಾಕ್ಟರ ಮಗನಿರಬಹುದು) ಹೇಳಿದ ಅಲ್ಲೋ ಇಲ್ಲಿ ಕೇಳು ಜರ್ಮನಿಯಿಂದ ಒಂದು ಕಾಯಿಲೆ ಬಂದಿದೆಯಂತೆ ಅವರೇ ಇಂಗ್ಲಿಷರ ಮೇಲೆ ಕಳಿಸಿದ್ದಂತೋ! ಬೀಸುಬಡಿಗೆ ಜ್ವರ ಅಂತಾರೆ. ಬೀಸಿ ಬಡಿಗೆ ಹೊಡೆದರೆ ಹೆಂಗೆ ಸಾಯ್ತಾರೋ ಹಂಗೆ ಸಾಯ್ತಾರಂತೆ ಅದು ಬಂದ್ರೆ ಜನ!ಎಂದಿರುವ ಮಾತುಗಳು ಗಮನಾರ್ಹ.

ಇಂದು ಕೊರೊನಾ ಬಂದಿರುವ ಸಂದರ್ಭದಲ್ಲಿ ಈ ಕೊರೊನಾ ಚೀನಾದಿಂದ ಬಂದಿದೆ. ಅದು ಅಲ್ಲಿ ಮಾನವನಿರ್ಮಿತವಾಗಿರುವುದು ಎಂಬ ವಾದವೂ ಮುನ್ನೆಲೆಗೆ ಬಂದು ಅಮೆರಿಕಾ ಚೀನಾದಂತಹ ದೇಶಗಳ ಶೀತಲ ಸಮರವನ್ನು ವರ್ತಮಾನದಲ್ಲಿ ನೋಡುತ್ತಿದ್ದೇವೆ. ಪ್ಲೇಗ್ ಜರ್ಮನಿಯಿಂದ ಬಂದಿದ್ದಾದರೆ ಕೊರೊನಾ ಚೀನಾದಿಂದ ಬಂದಿದೆ. ಕೊರೊನಾ ಅಥವಾ ಪ್ಲೇಗ್ ರೋಗಗಳ ಹಿಂದೆ ಮುಂದೆ ರಾಜಕೀಯದ ನಂಟುಗಳೂ ಇವೆ. ತಾಲಿಬಾನಿಗಳೂ ಹರಡುತ್ತಿದ್ದಾರೆ ಎಂದಾಗ ಅವರಿಗೆ ಬುದ್ಧಿಮಾತು ಹೇಳುವ ಬದಲು ಕನ್ನಡದ ಎಡಪಂಥೀಯ ಚಿಂತಕರು ಸಾಹಿತಿಗಳು ಅವರನ್ನು ಸಮರ್ಥಿಸುವ ಮೂಲಕ ಮತ್ತೊಂದು ರೀತಿಯ ಕೋಮುವಾದಿಗಳಾದರು. ಮುಖ್ಯಮಂತ್ರಿಗೆ ಪತ್ರ ಬರೆದ ಇವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಷ್ಟೆಷ್ಟು ದೇಣಿಗೆ ನೀಡಿದರೋ ನನಗೆ ತಿಳಿಯದು. ಪತ್ರಿಕೆಗಳಲ್ಲಿ ಓದಿದ ನೆನಪಿಲ್ಲ. ಮೊಸಳೆ ಕಣ್ಣೀರಿನಿಂದ ಯಾರ ಯಾವ ಸಂಕಟಗಳೂ ನಿವಾರಣೆಯಾಗುವುದಿಲ್ಲ.

ಪಾದರಾಯನಪುರದ ಗಲಭೆಕೋರರನ್ನು ಪುಂಡರುಎಂದು ಕರೆದ ಕಥೆಗಾರ ಮೊಗಳ್ಳಿ ಗಣೇಶ್ ತಮ್ಮ ಫೇಸ್‌ಬುಕ್ಕಲ್ಲಿ ಬರೆದಾಗ ಅಬ್ದುಲ್ ರಶೀದ್ ಅವರಿಂದ ಮೊದಲ್ಗೊಂಡು ಮುಗಿಬಿದ್ದ ಹಿಂಡು ಸಾಂಕ್ರಾಮಿಕ ರೋಗ ಹರಡುವವರನ್ನು ಪುಂಡರೆಂದು ಕರೆಯಲೂ ಹಿಂದೆ ಮುಂದೆ ಮಾಡಿದ್ದು, ‘ಮುಸ್ಲಿಂ ಚಿಂತಕರ ಚಾವಡಿಎಂಬ ಹೊಸದೊಂದು ಸಾಹಿತಿಗಳ ಕೂಟವಿರುವುದು ವರ್ತಮಾನದಲ್ಲಿನ ಚಿತ್ರಗಳು. ಒಟ್ಟಾರೆ ದೇಶದ ಒಳಗೆ ಮತ್ತು ಹೊರಗೆ ರೋಗಕ್ಕೆ ಸ್ವಾರ್ಥ, ದ್ವೇಷ, ಅವಿವೇಕದ ರಾಜಕಾರಣವೂ ಕಾರಣವಾಗಿರುತ್ತದೆ ಎಂಬುದು ಇಂದಿನ ವರ್ತಮಾನದಂತೆ ಅಂದಿನ ಗೃಹಭಂಗಕಾದಂಬರಿಯಲ್ಲೂ ಕಂಡು ಬರುತ್ತದೆ.

ಗೃಹಭಂಗ ಕಾದಂಬರಿಯಲ್ಲಿ ಒಟ್ಟು ನಾಲ್ಕು ಬಾರಿ ಪ್ಲೇಗ್ ಬಂದಿದೆ. ಹಾಸನದಲ್ಲಿ ಕಲ್ಲೇಶನ ಧಾರೆಯಾದ ದಿನ ನಾಗಲಾಪುರದ ಬೆಸ್ತರ ಕೇರಿಯಲ್ಲಿ ಇಲಿ ಬಿದ್ದಿತು. ಅಂದರೆ ಪಿಳೇಗು ಮಾರಮ್ಮ ಊರಿಗೆ ಬರುತ್ತಾಳೆ. ತನಗೆ ಯಾರು ಹರಕೆ ನಡೆಸಿಲ್ಲವೋ, ಯಾರು ಭಕ್ತಿಯಿಂದ ನಡೆದುಕೊಳ್ಳುವುದಿಲ್ಲವೋ, ಅಂಥವರನ್ನೆಲ್ಲ ನುಂಗಿ ನೀರು ಕುಡಿಯುತ್ತಾಳೆಎಂದು ಆರಂಭವಾಗುವ ಪ್ಲೇಗಿನ ಚಿತ್ರ ಊರು ಬಿಟ್ಟು ಹೊಲದಲ್ಲಿ ಶೆಡ್ಡು ಹಾಕುವ ಪರಿಸ್ಥಿತಿಯನ್ನು ಕಟ್ಟಿಕೊಡುತ್ತದೆ.

ಅಂದು ಅದರ ಮೂರನೆಯ ದಿನ ಗೂಡೆ ಮಾರಮ್ಮನವರು ಬಂದರು. ರಟ್ಟೆ ದಪ್ಪದ, ಮಾರುದ್ದದ ಸೆಣಬಿನ ಚಾವಟಿಯನ್ನು ಬೀಸಿ ತನ್ನ ಮೈಯಿಗೆ ಫಟಾರನೆ ಹೊಡೆದುಕೊಳ್ಳುತ್ತಾಬಂದವರು ಸುತ್ತ ಅರವತ್ನಾಲ್ಕು ಹಳ್ಳಿಯಾಗೆ ಅಮ್ಮ ಕಾಣಿಸಿಕೊಂಡವ್ಳೆ! ದೂಳಿ ದುಪ್ಪಟ ಮಾಡುತವ್ಳೆ! ತಾಯೀರ ಬಿಟ್ಟು ಮಗೂನ ತಿಂತವ್ಳೆ! ಮಕ್ಕಳ ತಾಯೀರ ಎಳಕಂಡು ಹೋಗ್ತವ್ಳೆ! ಸೋಬನವಾಗದ ಹುಡುಗೀ ತಿಂತವ್ಳೆ! ಸೋಬನಕ್ಹೊದ ಗಂಡಿನ ಮುಂದಿಗೆ ಮುರಿದವ್ಳೆ! ಬಸಿರ ಹೆಂಗಸಿನ ಜೀವ ತಿಗದವ್ಳೆ! ಹಾಲ, ಲಲಲಲಲಲ ಛಟೀರ್ ಛಟ್ ಎಂದು ನಡುನಡುವೆ ಗಂಡಸು ಚಾವಟಿಯಿಂದ ತನ್ನ ಬರಿಯ ಮೈಮೇಲೆ ಹೊಡೆದುಕೊಳ್ಳುತ್ತಿದ್ದಎಂಬುದರಿಂದ ಆರಂಭವಾಗುತ್ತದೆ.

ಇಲ್ಲಿ ಬರುವ ಗೂಡೆಮಾರಮ್ಮನವರು” “ಪಿಳೇಗುಮಾರಮ್ಮನ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವುದು ಗಮನ ಸೆಳೆಯುತ್ತದೆ. ಯಾವ ಆಧುನಿಕ ತಂತ್ರಜ್ಞಾನವೂ ಸಮೂಹ ಮಾಧ್ಯಮವೂ ಇಲ್ಲದ ಕಾಲದಲ್ಲಿ ಊರು ಊರು ಸುತ್ತಿ ಜನಜಾಗೃತಿ ಮೂಡಿಸುತ್ತಿದ್ದ ಗೂಡೆಮಾರಮ್ಮನವರು ಮುಂದೆ ಬರದಂತಾಗುತ್ತಾರೆ. ಗ್ರಾಮ ಪಂಚಾಯ್ತಿ ಬೇಲೂರ ಡಂಗೂರ ಸಾರಿಸುವ ಕಾಲ ಬರುತ್ತದೆ.

ನಂಜಮ್ಮ ಚೊಚ್ಚಲ ಬಸುರಿಯಾದಂದು ಬಂದದ್ದು ಮೊದಲ ಪ್ಲೇಗಾದರೆ ಮಕ್ಕಳಾದ ಪಾರ್ವತಿ, ರಾಮಣ್ಣ ಸತ್ತದ್ದು ಮೂರನೆಯ ಪ್ಲೇಗು. ನಾಲ್ಕನೆಯ ಪ್ಲೇಗಿನಲ್ಲಿ ನಂಜಮ್ಮ ಅವಳ ಅಜ್ಜಿ ಅಕ್ಕಮ್ಮ ಸಾಯುತ್ತಾರೆ. ಮೊದಲನೆಯ ಪ್ಲೇಗಿನಲ್ಲಿ ಕಲ್ಲೇಶ ಬದುಕಿ ಉಳಿದರೆ ಮೂರನೆಯ ಪ್ಲೇಗಿನಲ್ಲಿ ವಿಶ್ವ ಬದುಕಿ ಉಳಿಯುತ್ತಾನೆ. ಕೊನೆಗೆ ಅಯ್ನೋರೊಡನೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಪ್ರಯಾಣ ಬೆಳೆಸುವುದರೊಂದಿಗೆ ಕಾದಂಬರಿ ಕೊನೆಯಾಗುತ್ತದೆ. ಪಾರ್ವತಿ, ರಾಮಣ್ಣನ ಸಾವಿನ ಸಂದರ್ಭವಂತೂ ಹೃದಯವನ್ನು ಕಲಕಿ ಎಂಥ ಜಡದ ಎದೆಯಲ್ಲೂ ಕಣ್ಣಿರ ತೇವವನ್ನು ಸೃಷ್ಟಿಸುತ್ತದೆ. ಸಾಂಕ್ರಾಮಿಕ ರೋಗ ಎಂದರೆ ಸಂಕಟ. ಸಂಕಟವೆಂದರೆ ಸಾಂಕ್ರಾಮಿಕ ರೋಗ.

ಊರಿನಲ್ಲಿ ಇಲಿ ಬಿದ್ದು ಊರು ಬಿಟ್ಟು ಶೆಡ್ಡಿನಲ್ಲಿ ವಾಸ ಮಾಡುವ ಚಿತ್ರ ನಾಲ್ಕೂ ಸಂದರ್ಭಗಳಲ್ಲೂ ಬರುತ್ತದೆ. ಅಲ್ಲೆಲ್ಲ ಮನುಷ್ಯರ ವಿಭಿನ್ನ ವ್ಯಕ್ತಿತ್ವ ಅವರ ಆಲೋಚನೆ ಮತ್ತು ಕ್ರಿಯೆಗಳ ಮೂಲಕ ಅಭಿವ್ಯಕ್ತವಾಗುತ್ತದೆ. ಪ್ಲೇಗಿನ ಹಾಗೂ ಬದುಕಿನ ಸಂಕಟ ಸವಾಲುಗಳ ವಿರುದ್ಧ ಹೋರಾಟದ ಕಿಚ್ಚು ಹೊತ್ತಿಸಿಕೊಂಡವಳು ನಂಜಮ್ಮ. ಅವಳ ಗಂಡ ಜೀವಂತ ಹೆಣ. ಹೊಗೆಸೊಪ್ಪಿನ ರಸದ ಅಮಲು ಮತ್ತು ಜೊಲ್ಲಿನಲ್ಲಿ ಸಂಪೂರ್ಣ ಜಡಗೊಂಡವನು, ಮೈದುನ ಅಪ್ಪಣ್ಣ ಕುಣಿಸಿದಂತೆ ಕುಣಿಯುವ ಕೈಗೊಂಬೆ. ಕಂಠಿ ಜೋಯಿಸ ಹಾಗೂ ಶಾನುಭೋಗ ಶ್ಯಾಮಣ್ಣನವರ ನಡುವಿನ ದ್ವೇಷ-ಸ್ವಾರ್ಥ-ಅವಿವೇಕ ಒಂದೆಡೆಯಾದರೆ ಗಂಗಮ್ಮ ಶಿವೇಗೌಡ, ಅಪ್ಪಯ್ಯ ಶಾಸ್ತಿ, ಅಣ್ಣಯ್ಯ ಶಾಸ್ತಿ, ಬೆಂದ ಮನೆಗಳ ಹಿರಿಯುವ ವಿಚಿತ್ರ ವ್ಯಕ್ತಿಗಳು. ಇಂಥವರ ನಡುವೆಯೇ ಗುಂಡೇಗೌಡ, ಅಯ್ನೋರು, ಮೇಷ್ಟು, ಮೇಷ್ಟ ಹೆಂಡ್ತಿ, ಹಾಗೂ ಸರ್ವಕ್ಕ, ನರಸೀ ಅಂತವರೇ ಪ್ಲೇಗಿನ ಹಾಗೂ ಬದುಕಿನ ಸಂಕಟವನ್ನು ಎದುರಿಸಲು ಅಗತ್ಯವಾದ ನೈತಿಕ, ಸಾತ್ವಿಕ ಧಾರ್ಮಿಕ ಜೀವಚೈತನ್ಯಗಳು. ಅವರೆಲ್ಲರೂ ನಂಜಮ್ಮನ ಕಷ್ಟಕ್ಕಾದರೂ ಕೂಡ ಸಾಂಕ್ರಾಮಿಕ ರೋಗದ ವಿರುದ್ಧ ಗೆಲ್ಲಲು ಸಾಧ್ಯವಾಗುವುದಿಲ್ಲ. ಇಡೀ ಗೃಹಭಂಗ ಕಾದಂಬರಿಯಲ್ಲಿ ಪ್ಲೇಗಿನ ಬೆಳವಣಿಗೆ ಭೀಕರತೆಯ ಚಲನೆಯ ಜೊತೆಜೊತೆಗೆ ಮನುಷ್ಯರ ವ್ಯಕ್ತಿತ್ವ, ಕೌಟುಂಬಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಪಲ್ಲಟಗಳನ್ನೂ ಚಿತ್ರಿಸಿದ್ದಾರೆ. ಸಾಂಕ್ರಾಮಿಕ ರೋಗ ಮಾಡಿದಂತಹ ನಾಶ ಹಾಗೂ ಅದರಿಂದ ಹೊರ ಬಂದು ಮೇಲೆದ್ದು ನಿಲ್ಲಲು ಮನುಷ್ಯ ನಡೆಸುವ ಸಾಹಸದ ಕಥನವಾಗಿದೆ.

ಪ್ಲೇಗಿನ ಅಮ್ಮ ನನ್‌ತಾವ ಏನೂ ಕಿತ್‌ಕಳಾದಿಲ್ಲ. ನಾನು ಗಂಡು ಇಲ್ಲೇ ಇರ್ತೀನಿಎಂದ ಕಂಠೀ ಜೋಯಿಸರಿಗೆ ಬಡಿಯಲಿಲ್ಲ ನಿಜ. ಆದರೆ ಪ್ಲೇಗು ಅವನ ತಾಯಿ, ಮಗಳು ಇಬ್ಬರು ಮೊಮ್ಮಕ್ಕಳನ್ನು ಕಿತ್‌ಕಳ್ತು. ಗೂಡೆಮಾರಮ್ಮನವರ ಎಚ್ಚರವನ್ನು ಕಡೆಗಣಿಸಿದ ಸಮಾಜದ ಪಾಡು ಅಯ್ನೋರ ಹಿಂದೆ ವಿಶ್ವ ಹೋಗುವ ಅನಿವಾರ್ಯತೆಯನ್ನು ನೋಡಬೇಕಾಯಿತು.

ಕಲ್ಲೇಶನಿಗೆ ಹಾಸನದಲ್ಲಿ ಕಂಕುಳಿನ ಗೆಡ್ಡೆಯನ್ನು ಕೊಯ್ದು ಕೀವು ಮತ್ತು ಕೊಳೆತ ಭಾಗವನ್ನು ತೆಗೆದುಹಾಕಿ ಔಷಧಿ ಕಟ್ಟಿದರು. ಜೀವಕ್ಕೆ ಭಯವಿಲ್ಲವೆನ್ನುವಂತಾಯಿತು.ಅವನು ಬದುಕಿ ಉಳಿದ. ಆದರೆ ಆಗತಾನೆ ಮದುವೆಯಾದ ನವವಧು ಹಸಿಮಯ್ಯಿನ ಪಾರ್ವತಿ, ಮುಂಜಿ ಮಾಡಿಸಿಕೊಂಡ ಅಂತಃಕರಣದ ಹೃದಯವಂತ, ಬುದ್ಧಿವಂತ ಹುಡುಗ ರಾಮಣ್ಣ ಗದ್ದೆ ಕಂಡ ಕೂಡಲೇ ಔಷಧಿ ಕೊಡಿಸಲಾಗದ ಕಾರಣ, ಖಾಯಿಲೆ ಬಂದ ಬಳಿಕ ಹೇಮಾದಿ ಪಾನಕ ಎಂಬ ಆಯುರ್ವೇದ ಔಷಧಿ ಪರಿಣಾಮ ಬೀರದ ಕಾರಣ, ಸರ್ಕಾರಿ ಆಸ್ಪತ್ರೆ ಔಷಧಿ ಅಲ್ಲಿನ ಕೆಲಸಗಾರನಿಂದಲೇ ನೀರುಎಂದು ಕರೆಸಿಕೊಳ್ಳುವಂತಿದ್ದ ಕಾರಣ, ಬದುಕಲಿಲ್ಲ. ಆದರೆ ಪ್ರಾರಂಭದಲ್ಲೇ ವಿಶ್ವನಿಗೆ ಹೇಮಾದಿ ಪಾನಕ ನೀಡಿದ ಕಾರಣ ಬದುಕಿದ. ಹರಕೆಗಳಿಂದ ಮನಸ್ಸಿನ ಖಾಯಿಲೆ ಗುಣವಾಗಬಹುದು. ಶೃಂಗೇರಿಯ ಶಾರದಮ್ಮನ ಹರಕೆ ತೀರಿಸಿದ್ದು ಕಾದಂಬರಿಯ ಲವಲವಿಕೆಯ ಭಾಗ. ಆದರೆ ಊರಿನ ಕಾಳಮ್ಮನ ಹರಕೆ ತೀರಿಸಲು ಹೋಗಿದ್ದಕ್ಕೆ ಅಮ್ಮನ ದೃಷ್ಟಿ ಬಡಿದು ಪ್ಲೇಗು ಬಂದು ಸತ್ರು ಎಂಬುದು ಕೆಳಜಾತಿಯ ದೇವರುಗಳ ಬಗ್ಗೆ ಭಯ ಹುಟ್ಟಿಸುವ ಹುನ್ನಾರ. ಆದರೆ ದೇಹ, ಮನಸ್ಸು ಬುದ್ಧಿ, ಜೀವ ಈ ನಾಲ್ಕಕ್ಕೂ ಅದರದ್ದೇ ಆದ ಔಷಧಿಗಳು ಬೇಕು. ಆಗ ಮಾತ್ರ ಸರ್ವಾಂಗೀನ ಆರೋಗ್ಯ ಸಿದ್ಧಿ ಸಾಧ್ಯ.

ಮಾದೇವಯ್ಯನವರ ಬಗ್ಗೆ ಕಾದಂಬರಿಯಲ್ಲಿ ಬರುವ ಒಳ್ಳೆಯ ಮನುಷ್ಯ ಎಂದು ಕರೆಯಬಹುದಾದ ವ್ಯಕ್ತಿ ಈ ಊರಿನಲ್ಲಿದ್ದವರು ಅವರೊಬ್ಬರೇಎಂಬ ಮಾತು ಪ್ಲೇಗಿನ ವಿರುದ್ಧದ ಹೋರಾಟದಲ್ಲಿ ಅವರು ನಂಜಮ್ಮನವರಿಗೆ ನೆರವಾದ ರೀತಿಗಳನ್ನು ಓದುವಾಗ ಮನಸ್ಸಿಗೆ ನಾಟುತ್ತದೆ.

ಬಸುರಿ ನಂಜಮ್ಮ ಅತ್ತೆಯಿಂದ ಹೊರಹಾಕಲ್ಪಟ್ಟು ಪ್ಲೇಗಿನ ಶೆಡ್ಡಿನಿಂದ ಯಾವ ಮನೆಗೆ ಹೋಗಬೇಕೆಂದು ತಿಳಿಯದೆ ಬೀದಿಗೆ ಬಿದ್ದಾಗ ಆಶ್ರಯ ನೀಡಿದವರು ಅವರ ಮನೆ ಮತ್ತೆ ಮೇಲೆದ್ದು ನಿಲ್ಲುವುದಕ್ಕೆ ನೆರವಾದವರು, ಕುರುಬರ ಹಳ್ಳಿಯ ಪಟೇಲ ಗುಂಡೇಗೌಡರು.

ಕುರುಬರಹಳ್ಳಿ ಇವರ ಶಾನುಭೋಗಿಕೆಗೆ ಸೇರಿದ ಗ್ರಾಮ. ಊರಿನ ನಲವತ್ತು ಮನೆಯೂ ಒಂದೇ ಜಾತಿ: ಹಾಲು ಮತದವರು. ಗುಂಡೇಗೌಡರು ನಲವತ್ತು ವರ್ಷದಿಂದ ಊರಿನ ಪಟೇಲಿಕೆ ಮಾಡುತ್ತಿದ್ದಾರೆ. ಧರ್ಮರಾಯ ಪಟೇಲ ಎಂದು ಸುತ್ತಮುತ್ತಲಿನ ಜನರೆಲ್ಲ ಹೇಳುವುದನ್ನು ನಂಜಮ್ಮನೂ ಕೇಳಿದ್ದಳು. ಅವರ ಪಟೇಲಿಕೆ ಶುರುವಾದ ಇಷ್ಟು ವರ್ಷದಲ್ಲಿ ಆ ಊರಲ್ಲಿ ಒಂದು ಕಳ್ಳತನವಾಗಿಲ್ಲ, ಒಂದು ಹಾದರ ನಡೆದಿಲ್ಲವಂತೆ. ಹೊಟ್ಟೆಗಿಲ್ಲ ಎಂಬ ಕಾರಣಕ್ಕೆ ಯಾರೂ ಊರು ಬಿಟ್ಟು ಬೇರೆ ಊರಿಗೆ ಒಕ್ಕಲೆತ್ತಿಕೊಂಡು ಹೋಗಿಲ್ಲವಂತೆ”. ಇಂಥ ಪಟೇಲ ಗುಂಡೇಗೌಡರೇ ನಂಜಮ್ಮ ನೀವು ಬ್ಯಾರೆ ಹೋಗಿ ನಮ್ಮತ್ತೆ ನೆನ್ನೆ ದಿನ ಹೇಳಿದ್ರು. ನಮಗೆ ಇರುಕ್ಕೆ ಒಂದು ನೆರಳಿಲ್ಲಎಂದಾಗ ನ್ಯಳ್‌ಗೇನಂತೆ, ನಂದೇ ಮನೆ ಇಲ್ವರಾ? ಅದ್ರಲ್ಲಿ ಕೂರಂತೆ. ಆಲುಕುಡಿಎಂದವರು, ಗುಂಡೇಗೌಡರನ್ನು ಏನು ಕೇಳಲು ತಾನು ಬಂದಿದ್ದಳೋ ಅದನ್ನು ಕೇಳುವ ಮೊದಲೇ ಅವರೇ ಕೊಟ್ಟಿದ್ದಾರೆ.

ಕುರುಬರ ಮನೆಯಲ್ಲಿ ಬ್ಯಾಹ್ಮಣರಾದ ನಂಜಮ್ಮ, ಲಿಂಗಾಯತ ಜಂಗಮರಾದ ಮಹಾದೇವಯ್ಯ ತಮ್ಮ ತಮ್ಮ ಅಡಿಗೆ ತಾವೇ ಮಾಡಿಕೊಂಡು ಉಂಡಿದಾರೆ. ಇಲ್ಲಿ ಜಾತಿವಿನಾಶದ ಘೋಷಣೆ ಇಲ್ಲದೆ, ಜಾತಿಯ ಬೇಲಿಯ ಆಚೆಗೂ ಪ್ರೀತಿಯ ನೀತಿಯ ಸಂಬಂಧಗಳಿವೆ. ಕೇಳದೇ ನೀಡುವ ತ್ಯಾಗ, ದಯೆಯ ಮೌಲ್ಯಗಳಿವೆ. ಕಾದಂಬರಿಯಲ್ಲಿ ಮುಂದೆ ಈ ಜಾತಿ ಸಡಿಲಗೊಂಡು ಮಾದೇವಯ್ಯ ಎಲ್ಲ ಜಾತೀ ಮನೆಯಲ್ಲೂ ಉಣ್ಣುವುದು ಕನ್ನಡ ನೆಲದ ಬಸವ ಮಾರ್ಗವೇ ಸಾಂಕ್ರಾಮಿಕ ರೋಗಕ್ಕೂ ಸರ್ವ ಔಷಧಿ ಎಂಬುದನ್ನು ಮನದಟ್ಟು ಮಾಡುತ್ತದೆ.

ಸಾಮಾಜಿಕ ನಿಂದನೆಗೆ ಒಳಗಾಗಿ ಊರಿನ ಸೂಳೆಎಂಬ ಕಳಂಕಕ್ಕೆ ತುತ್ತಾದ ನರಸೀ ಪಾತ್ರವೂ ಪ್ಲೇಗಿನಂತ ಎಲ್ಲಾ ಸಾಂಕ್ರಾಮಿಕ ರೋಗಗಳನ್ನು-(ದೈಹಿಕವಾದ, ಮಾನಸಿಕವಾದ, ಬೌದ್ಧಿಕವಾದ, ಆಧ್ಯಾತ್ಮಿಕವಾದ)- ಎಲ್ಲಾ ರೋಗಗಳನ್ನು ಎದುರಿಸಲು ಬೇಕಾದ ಮಾನವೀಯ ಅಂತಃಕರಣದ ವ್ಯಕ್ತಿತ್ವವಾಗಿ ಕಂಡುಬರುತ್ತದೆ. ಗಂಡ ಗಿರಿಯ ಶೆಟ್ಟಿ ತನ್ನ ತಂದೆ ಚನ್ನ ಶೆಟ್ಟಿಯ ಮೇಲೆ ನನ್ನಪ್ಪ ನನ್ನ ಹೆಂಡ್ತೀನ ಮಡೀಕಂಡವ್ನೆ. ಇಬ್ರಿಗೂ ದಂಡ ಆಕುಸ್ಬೇಕುಎಂದು ಆರೋಪ ಹೊರಿಸಿ ಪಂಚಾಯ್ತಿ ಸೇರಿಸಿದಾಗ ನರಸಮ್ಮ ಕೇಳಿದ ಪ್ರಶ್ನೆ ಅನ್ನೆಲ್ಡಾಳುದ್ದ ಬಾವಿಗೆ ಆರಾಳುದ್ದ ಅಗ್ಗ ಬುಟ್ರೆ ಎಟುಕ್‌ತೈತಾ?” ಎಂಬುದಕ್ಕೆ ಅಲ್ಲಿದ್ದವರಾರೂ ಉತ್ತರಿಸಲಿಲ್ಲ. ಅವಳೊಡನೆ ಮಲಗಿದವರಾರೂ ಕಳಂಕಿತರೆನಿಸಲಿಲ್ಲ. ಆದರೆ ನರಸಿ ಸೂಳೆಯಾದಳು. ಅಲ್ಲ, ಸೂಳೆಯನ್ನಾಗಿಸಿದರು.

ಅಂತಹ ನರಸಿ ಪ್ಲೇಗ್ ಎಂಬ ಸಾಂಕ್ರಾಮಿಕ ರೋಗ ಬಡಿದಾಗ ನಂಜಮ್ಮನ ಕುಟುಂಬಕ್ಕೆ ನೆರವಾದದ್ದು, ಜ್ವರದಿಂದ ನರಳುವ ವಿಶ್ವನಿಗೆ ತೊಡೆಮೇಲೆ ಮಲಗಿಸಿಕೊಂಡು ಗಂಜಿ ಮತ್ತು ಔಷಧಿ ಕುಡಿಸಿದ್ದು ಹೃದಯವನ್ನು ಕಲಕುತ್ತದೆ. ತನ್ನ ಇಬ್ಬರೂ ಮಕ್ಕಳನ್ನು ಬೆಂಕಿಗೆ ಇಟ್ಟು ಬಂದ ನಂಜಮ್ಮ ನರಸಮ್ಮನನ್ನು ಕುರಿತು ನರಸಮ್ಮಾ ಈ ಮಗ ನಂದಲ್ಲ. ನಂದು ಅಂದ್ರೆ ಪಾಪಿಸೂಳೇಮಗ ದೇವ್ರು ಕುಂಡೊಯ್ತಾನೆ. ನಿಂಗೆ ಕೊಟ್‌ಬಿಡ್ತೀನಿ. ನಿಂಗೂ ಹ್ಯಂಗೂ ಮಕ್ಳಿಲ್ಲ. ನೀನೇ ಸಾಕ್ಯಂಡ್‌ಬುಡುಎಂದು ಆಡಿದ ಮಾತುಗಳು ಸಂಕಟವನ್ನು ಗೆಲ್ಲಬೇಕೆಂದರೆ ಜಾತಿ, ಮತ, ಭಾಷೆ, ಬಣ್ಣ, ನೀತಿ ಗೀತಿ ಎಲ್ಲವನ್ನೂ ಮೀರಿ ಪ್ರೀತಿಯನ್ನು ಮಾತ್ರ ಸ್ವೀಕರಿಸಬೇಕು ಮತ್ತು ಹಂಚಬೇಕು ಎಂಬ ಸತ್ಯವನ್ನು ಗೃಹಭಂಗ ಮನವರಿಕೆ ಮಾಡಿಕೊಡುತ್ತದೆ.

ಅಮ್ಮನ ಗುಡಿಯ ಹತ್ತಿರ ಊರ ಹೆಂಗಸು ಮಕ್ಕಳಾದಿಯಾಗಿ ಎಲ್ಲರೂ ಒಂದು ಇನ್ಯಾಕುಲೇಶನ್ ಸೂಜಿ ಚುಚ್ಚಿಸಿಕೊಳ್ಳಬೇಕಂತೆ. ರೋಗ ಹಬ್ಬುವ ಮೊದಲೇ ಹಳ್ಳಿ ಹಳ್ಳಿಯಲ್ಲೂ ಸೂಜಿ ಚುಚ್ಚಬೇಕು ಅಂತ ಸರ್ಕಾರದ ಹುಕುಂ ಆಗಿದೆಯಂತೆಎಂಬ ಅರಿವು ಹಳ್ಳಿ ಹಳ್ಳಿಗಳಿಗೂ ಬಂತು. ಎಲ್ಲಾ ಪ್ರಭುತ್ವ, ಎಲ್ಲಾ ಧರ್ಮ ಕೆಟ್ಟದ್ದು ಎನ್ನುವ ಎಡಪಂಥೀಯರಿಗೆ ಪಟೇಲಗುಂಡೇಗೌಡರ ಪ್ರಭುತ್ವ, ಮಹಾದೇವಯ್ನೋರ ಧರ್ಮ, ನರಸಮ್ಮನ ಅಂತಃಕರಣ, ನಂಜಮ್ಮನ ಹೋರಾಟ, ಭೀತಿ, ಬದುಕು, ಕಂಠೀಜೋಯಿಸರ ವಿಶ್ವನ ನಿರ್ಭೀತಿ ಅರ್ಥವಾಗುವುದು ಹೇಗೆ?

ಗೃಹಭಂಗಕಾದಂಬರಿಯಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ, ಧಾರ್ಮಿಕ ಪ್ಲೇಗುಗಳಿವೆ. ಅವುಗಳಿಗೆ ಗೂಡೆಮಾರಮ್ಮ, ಮಹಾದೇವಯ್ಯ. ಗುಂಡೇಗೌಡ, ಕಂಠಿಜೋಯಿಸ, ವಿಶ್ವ, ನರಸಿಯಂಥ ಔಷಧಿಗಳಿವೆ. ಅವುಗಳ ಬಲದಿಂದ ನಂಜಮ್ಮನಂಥ ಅಸಹಾಯಕ, ಬಡ, ನಿರ್ಗತಿಕ ಮಹಿಳೆ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳುತ್ತಾಳೆ. ಗಂಗಮ್ಮನಂಥವರ ಮನಸ್ಸೂ ಪರಿವರ್ತನೆಯಾಗುತ್ತದೆ. ಪರಿವರ್ತನೆಯಾಗಬೇಕಾದ ಅದೆಷ್ಟೋ ಪಾತ್ರಗಳು ಹಾಗೇ ಉಳಿದಿವೆ. ಅವೆಲ್ಲವೂ ಬದಲಾಗುವುದಕ್ಕೆ ಅದೆಷ್ಟು ಪ್ಲೇಗು, ಕೊರೊನಾಗಳು ಬರಬೇಕೋ ಗೊತ್ತಿಲ್ಲ.

ಕಾದಂಬರಿಯಲ್ಲಿ ಬರುವ ಮೈಸೂರು ರಾಜ್ಯವನ್ನಾಳುವ ಮಹಾಸ್ವಾಮಿ ಶ್ರೀಮನ್ ಮಹಾರಾಜರ ಘನ ಸರ್ಕಾರವು ಅದನ್ನೂ (ಕಾಗದದ ಚೀಟಿ) ಅಚ್ಚು ಹಾಕಿಸಿತ್ತು. ಈಗ ಯುದ್ಧ ನಡೆಯುತ್ತಿದೆಯಂತೆ. ಯೂರೋಪು ದೇಶದಲ್ಲಿ ಜರ್ಮನಿಯವರು ಮುನ್ನುಗ್ಗುತ್ತಿದ್ದಾರಂತೆ. ಜಪಾನಿಯವರು ಇಂಡಿಯಾ ದೇಶವನ್ನು ಕಬಳಿಸಲು ಬರುತ್ತಿದ್ದಾರೆ. ನಮ್ಮ ಮೈಸೂರು ದೇಶದ ಮೇಲೂ ಬಾಂಬು ಬಂದು ಬೀಳಬಹುದು. ವಿಮಾನಗಳು ಬಂದಾಗ ಜನರು ಹೊರಗೆ ನಿಂತು ನೋಡಬಾರದು. ನಿಂತಲ್ಲಿಯೇ ಮಕಾಡೆ ಮಲಗಿಬಿಡಬೇಕು. ಶತ್ರುಗಳನ್ನು ಹೊಡೆದೋಡಿಸಲು ಯುದ್ಧನಿಧಿಗೆ ಜನರೆಲ್ಲ ಸಹಾಯ ಮಾಡಬೇಕು ಎಂದು ಬರೆದು ಕೊನೆಯಲ್ಲಿ ವಿಜಯಎಂದು ಹಾಕಿತ್ತುಎಂಬುದು ಈಗ ಕೊರೊನೋತ್ತರ ಜಗತ್ತಿನಲ್ಲಿ ಮರುಕಳಿಸಲಿ ಎಂದು ಪ್ರಾರ್ಥಿಸೋಣ. ಚೀನಾ ದೇಶ ಅಮೆರಿಕಾದೊಳಗೆ ನುಗ್ಗುತ್ತಿದೆ. ಪಾಕಿಸ್ತಾನಿಯರು ಭಾರತ ದೇಶವನ್ನು ಕಬಳಿಸಲು ಬರುತ್ತಿದ್ದಾರೆ ಎಂಬ ಕರಪತ್ರಗಳನ್ನು ಮುದ್ರಿಸುವ ಸಾಹಿತ್ಯ ಸೃಷ್ಟಿ ಆಗದಿರಲಿ.

ಸಾಂಕ್ರಾಮಿಕ ರೋಗ ಪ್ರಕೃತಿಯ ಸೃಷ್ಟಿಯಲ್ಲ. ಮನುಷ್ಯನ ವಿಕೃತಿಯ ಸೃಷ್ಟಿ. ಪ್ರೀತಿ, ನೆಮ್ಮದಿ, ಶಾಂತಿ ಇರುವಾಗ ಪಾರ್ವತಿ, ನೆಲದಮ್ಮ, ಶೃಂಗೇರಿಯ ಶಾರದಮ್ಮನಂತೆ ಶುಭ್ರಳೂ, ನಾದಮಯಳೂ, ವಿವೇಕಮಯಳೂ ಆಗಿರುತ್ತಾಳೆ. ಮನುಷ್ಯ ಮನೆ, ಸಮಾಜ, ಜಾತಿ, ಮತ, ದೇಶಗಳಲ್ಲಿ ದ್ವೇಷ, ಸ್ವಾರ್ಥ, ಕ್ರೌರ್ಯ ತುಂಬಿಕೊಂಡಾಗ ಅದೇ ಪಾರ್ವತಿ ನೆಲದಮ್ಮ ಕಾಳಿಯಾಗಿ ಅವತಾರವನ್ನು ತಾಳುತ್ತಾಳೆ. ಕಲ್ಕಿಎಂಬ ಕುವೆಂಪು ಅವರ ಕವಿತೆಯ ಕಲ್ಪನೆ ವಾಸ್ತವವಾಗುತ್ತದೆ. ಹೆಣದ ಬಣವೆಗಳಿಂದ ಯಾರಿಗೆ ಸುಖ? ವಿವೇಕ ಉದಯವಾಗಲಿ!

*ಲೇಖಕರು ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರು; ಪ್ರಸ್ತುತ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು.

Leave a Reply

Your email address will not be published.