ಸಾಂಕ್ರಾಮಿಕ ಸೋಂಕಿನ ಸ್ವಾನುಭವ ಕಥನ

ನನ್ನ ದೀರ್ಘ ಜೀವನಯಾನದಲ್ಲಿ ಪ್ರಕೃತಿ ವಿಕೋಪದ, ವೈರಸ್ಸುಗಳ ಉಪಟಳವನ್ನು ದಾಟಿ ಮುನ್ನೆಡೆಯುತ್ತಿರುವುದು ಒಂದು ಪವಾಡದಂತೆ ಕಾಣಬಹುದು!

 

ಬೆಟ್ಟದ ಮೇಲೊಂದು ಮನೆಯ ಮಾಡಿ

ಮೃಗಗಳಿಗಂಜಿದೊಡೆಂತಯ್ಯಾ

ಸಮುದ್ರದ ತಡಿಯಲ್ಲಿ ಮನೆಯಮಾಡಿ

ನೆರೆತೆರೆಗಂಜಿದಡೆಂತಯ್ಯಾ

ಸಂತೆಯಲೊಂದು ಮನೆಯ ಮಾಡಿ

ಶಬ್ದಕೆ ನಾಚಿದಡೆಂತಯ್ಯ

ಬುವಿಯಮೇಲೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ

ಕೋಪವತಾಳದೆ ಸಮಾಧಾನಿಯಾಗಿರಬೇಕು

ಚೆನ್ನಮಲ್ಲಿಕಾರ್ಜುನಯ್ಯಾ ನೀ ಕೇಳಯ್ಯಾ.

ಅಕ್ಕನ ಈ ವಚನ ಏನನ್ನು ತಿಳಿಯಹೇಳುತ್ತದೆ: ವಿಶ್ವಮಾರುಕಟ್ಟೆಗೆ ಮಾರುಹೋಗಿ/ ಕೊರೋನಾಗಂಜಿದಡೆಂತಯ್ಯಾ ಎಂಬುದನ್ನು ತಾನೆ? ಮೀಡಿಯಾಗಳ ಬೊಬ್ಬೆಗೆ, ಮಾಧ್ಯಮಗಳ ಅರಚಾಟಕ್ಕೆ ಸರ್ಕಾರಗಳ ಗುರಿಯಿಲ್ಲದ ಪರದಾಟಕ್ಕೆ ಅಂಜಿ ಕುಳಿತುಕೊಳ್ಳುತ್ತೀರೋ ಅಥವ ಆತ್ಮ ಸ್ಥೈರ್ಯದಿಂದ ವೈರಸ್ಸನ್ನು ಎದುರಿಸಿ ‘ಪ್ರಕೃತಿಯೇ ಪರಮಾತ್ಮ’ ನೆಂಬ ಅಧ್ಯಾತ್ಮದಿಂದ ಪ್ರಕೃತಿ ಸ್ನೇಹಿಯಾಗಿ ಸರಳ ಸುಂದರ ಬದುಕು ಕಟ್ಟಿಕೊಳ್ಳುತ್ತೀರೋ?

ನನ್ನ ಈ ದೀರ್ಘ ಜೀವನ ಯಾನದಲ್ಲಿ ಪ್ರಕೃತಿ ವಿಕೋಪದ ವೈರಸ್ಸ್ಗಳ ಉಪಟಳವನ್ನು ದಾಟಿ ಮುನ್ನೆಡೆಯುತ್ತಿರುವುದು ಒಂದು ಪವಾಡದಂತೆ ಕಾಣಬಹುದು. ಆ ಕಥನ ಹೀಗಿದೆ:

ಪ್ರೈಮರಿ ಶಾಲೆ ಬಾಲಕನಾಗಿದ್ದಾಗ ಒಮ್ಮೆ ಅತಿಯಾದ ಜ್ವರ ಬಂದು ಮೂರುನಾಲ್ಕು ದಿನ ಪ್ರಜ್ಞೆ ತಪ್ಪಿ ಮಲಗಿದ್ದೆ. ವೈದ್ಯರು ಯಾವುದೋ ವೈರಸ್ ಇರಬೇಕೆಂದು ಯಾವುದೋ ಮದ್ದುಕೊಟ್ಟರು. ಅಕ್ಕಪಕ್ಕದವರೆಲ್ಲಾ ಬಾಲಗ್ರಹ ಇರಬೇಕು, ಮಕ್ಕಳಿಗೆ ಅತಿಯಾದ ಜ್ವರ ಬಂದು ಪ್ರಜ್ಞೆ ತಪ್ಪುತ್ತೆ. ತಡಕೊಳೊ ಶಕ್ತಿ ಇರೋ ಮಕ್ಕಳು ಹುಶಾರಾಗ್ತಾರೆ. ಅದೆಲ್ಲಾ ದೇವರ ದಯೆ ಎಂದಾಡಿಕೊಂಡರು.  ಅಪ್ಪ ಒಂದು ದಿನ ಏನೋ ಮಗು ಎಲ್ಲಿಗೆ ಹೋಗಿದ್ದೆಯೋ ಮೂರ‍್ನಾಲ್ಕು ದಿನ ಎಂದು ಕೇಳಿದಾಗ ‘ನಕ್ಷತ್ರಗಳ ಜೊತೆ ಇದ್ದೆ. ಒಬ್ಬಳು ಗೆಳತಿ ಜೊತೆ ಆಟ ಆಡ್ತಿದ್ದೆ. ನಾನು ಬರ‍್ತೀನಿ ಹೋಗು ಜೊತೇಲಿ ನಿಮ್ಮನೇಲೆ ಆಡೋಣ ಎಂದು ದಬ್ಬಿದಳು. ಬಂದುಬಿಟ್ಟೆ ಅವಳಿನ್ನು ಬರ್ಲೇ ಇಲ್ಲ ಎಂದು ಹೇಳಿದ್ದು ಕೇಳಿ ಎಲ್ಲರೂ ನಕ್ಕಿದ್ದರಂತೆ. ಈ ಕಥೆಯನ್ನು ನಮ್ಮಮ್ಮ ಅಪ್ಪ ಹೇಳಿಕೊಂಡು ನಗುತ್ತಿದ್ದರು.

ಇನ್ನೊಮ್ಮೆ ಎಸ್.ಎಸ್.ಎಲ್.ಸಿ ಓದುತ್ತಿದ್ದಾಗ ಸುಮಾರು ಒಂದು ಒಂದೂವರೆ ತಿಂಗಳವರೆಗೆ ಶೀತಜ್ವರ ಪೀಡಿತನಾಗಿ ಮಲಗಿದ್ದೆ. ನಮ್ಮೂರಿನಲ್ಲಿ ಡಾಕ್ಟರು ಇರಲಿಲ್ಲ. ನಾನಾತರದ ಜಿಟಿಕೆಗಳು ನನ್ನ ಹಣೆಯನ್ನು ಅಲಂಕರಿಸಿದ್ದವು. ಮನೆಮದ್ದು, ಮಳೇಕಾಳಿಂಗ ಸೊಪ್ಪಿನ ಕಹಿ ರಸ; ಒಂದು ನಾಲ್ಕುದಿನ ನಾಲ್ಕು ನಾಲ್ಕು ತೊಟ್ಟು ಬ್ರಾಂದಿಯನ್ನೂ ಕುಡಿಸಿದರು. ಯಾವುದರಿಂದಲು ಜಪ್ಪಯ್ಯಾ ಅಂದರು ಜ್ವರ ಬಿಡಲಿಲ್ಲ.

ನನ್ನಪ್ಪ ಗಾಬರಿಯಿಂದ ಪಕ್ಕದ ಹಳ್ಳಿಯ ಸರ್ಕಾರಿ ಆಸ್ಪತ್ರೆಯ ಎಲ್.ಎಂ.ಪಿ ಡಿಪ್ಲೊಮಾ ಓದಿದ್ದ ವೈದ್ಯರನ್ನು ಕರೆತಂದರು. ಪರೀಕ್ಷಿಸಿ, ಅದರ ಕಥೆಯನ್ನೆಲ್ಲಾ ಕೇಳಿ ವಿಶಮಶೀತಜ್ವರ ಇರಬೇಕು, ಟೈಫಾಯ್ಡ್ ಎಂದೂ ಕರಿತಾರೆ. ಇದಕ್ಕೇ ಅಂತ ನಿರ್ದಿಷ್ಟವಾದ ಔಷಧಿ ಇನ್ನು ಬಂದಿಲ್ಲ. ಜ್ವರ ಶೀತಕ್ಕೆ ಕೊಡುವ ಔಷಧಿ ಕೊಡ್ತೀನಿ, ಒಂದಿಷ್ಟು ಮಿಕ್ಷಚರ್ ಕೊಡ್ತೀನಿ. ದಿನಕ್ಕೆ ಮೂರುಸಲ ಮಾತ್ರೆ ಎರಡನ್ನೂ ಕೊಡಿ. ದೇವರಮೇಲೆ ಭಾರಹಾಕಿ ನೋಡೋಣ ಎಂದು ಹೇಳಿ ವಾರಕ್ಕೆ ಒಂದೆರಡು ಸಲ ಬಂದು ನೋಡಿಕೊಂಡು ಹೋಗುತ್ತಿದ್ದರು.

ಈ ಜ್ವರಕ್ಕೆ ಪಥ್ಯ ಒಂದೇ ಪರಿಣಾಮಕಾರಿಯಾದ ಮೂಲ ಮದ್ದು: ಮೆದುವಾದ ತೆಳ್ಳನೆ ರವೆ ಗಂಜಿ, ಒಡೆಸಿದ ಹಾಲಿನ ನೀರು, ಬೆಡ್ ರೆಷ್ಟ್. ಇನ್ಯಾವ ಆಹಾರವನ್ನೂ ಕೊಡಬಾರದು. ಎಣ್ಣೆ ಮುಟ್ಟೋ ಹಾಗು ಇಲ್ಲ, ವಗ್ಗರಣೆ ಹಾಕಿದ ಖನಗನ್ನೂ ಮೂಸಬಾರದು. ಸ್ನಾನ ಮಾಡಬಾರದು. ಒಮ್ಮೊಮ್ಮೆ ಬಟ್ಟೆಯನ್ನು ಬಿಸಿನೀರಿನಲ್ಲಿ ಅದ್ದಿ, ಹಿಂಡಿ ಮೈ ಒರೆಸಬಹುದು. ಈ ಪಥ್ಯಗಳನ್ನು ಪಾಲಿಸಿ ಜೋಪಾನವಾಗಿ ನೋಡಿಕೊಳ್ಳಿ. ಒಂದೊಂದುವರೆ ತಿಂಗಳು, ನಲವತ್ತೆಂಟು ದಿನಗಳಲ್ಲಿ ಜ್ವರ ಬಿಡುತ್ತೆ. ಪಥ್ಯವೇ ಇದರ ಮುಖ್ಯ ಮದ್ದು ಎಂದು ಎಚ್ಚರಿಸುತ್ತಿದ್ದರು. ಮನೆಯವರೆಲ್ಲಾ ಒಂದು ರೀತಿಯ ಪಥ್ಯವನ್ನು ಅನುಭವಿಸುತ್ತಾ ಜೋಪಾನ ಮಾಡಿದರು.

ಒಂದು ದಿನ ಮೈ ಬೆವರಿ ಅಮ್ಮನನ್ನು ಕರೆದು ಹೇಳಿದೆ. ಮನೆಯವರೆಲ್ಲಾ ಓಡಿಬಂದು ಹೊದ್ದಿಗೆ ತೆಗದು ಮೈವರೆಸಿ ಮಲಗಿಸಿದರು. ಅಮ್ಮ ದೇವರಿಗೆ ತುಪ್ಪದ ದೀಪ ಹಚ್ಚಿಟ್ಟರು. ಡಾಕ್ಟರು ಬಂದು ನೋಡಿ. ಗೆದ್ದೆ ಸತ್ಯಣ್ಣ ಎಂದರು. ನನ್ನಪ್ಪ ಅಮ್ಮನಿಗೆ, ನೀವು ಪಾಲಿಸಿದ ಪಥ್ಯದ ಆಹಾರ, ಮದ್ದು ಕೊಡುತ್ತಿದ್ದುದು, ಜೊತೆಗೆ ನಿಮ್ಮಮ್ಮನ ವ್ರತ ನಿನ್ನ ಕಾಪಾಡಿತು ಎಂದು ಖುಷಿಪಟ್ಟರು. ಆಗ ಅಮ್ಮ ನಿಮ್ಮಂತ ಪುಣ್ಯಾತ್ಮ ಡಾಕ್ಟರಿಗೆ ನಮ್ಮ ಒಂದು ನಮಸ್ಕಾರ ಎಂದು ಕೃತಜ್ಞತೆ ಸಮರ್ಪಿಸಿವುದಷ್ಟೇ ನಮ್ಮ ಪಾಲಿಗೆ ಎಂದು ಕೈಮುಗಿದರು.

ನನ್ನ ತಲೆಯ ಕೂದಲೆಲ್ಲ ಉದುರಿ ಬೋಳಾಗಿತ್ತು, ಮೂರು ತಿಂಗಳು ಮನೆಯಿಂದ ಹೊರಗೆಬರದೆ ರೆಸ್ಟ್ ನಲ್ಲಿದ್ದೆ. ಆ ವರ್ಷ ಪರೀಕ್ಷೆಗೂ ಕಟ್ಟಲಿಕ್ಕಾಗಲಿಲ್ಲ. ಮುಂದಿನ ವರ್ಷ ಕಟ್ಟಿ ಪಾಸ್ ಮಾಡಿಕೊಂಡೇ ಅನ್ನಿ. ಮತ್ತೊಮ್ಮೆ ಚಳ್ಳಕೆರೆಯಲ್ಲಿ ಉಪನ್ಯಾಸಕನಾಗಿದ್ದಾಗ ಪ್ಯಾರಾ ಟೈಫಾಯ್ಡ್ ಆಗಿ ಮದುವೆಯನ್ನೂ ಮುಂದೂಡಬೇಕಾಯ್ತು. ಆಗ ಟೈಫಾಯ್ಡ್ ವೈರಸ್ಗೆ ಒಂದೆರಡು ಮದ್ದು ಬಂದಿತ್ತು.

*

ಶಿವಮೊಗ್ಗೆ ಕಾಲೇಜಿಗೆ ಉಪನ್ಯಾಸಕನಾಗಿ ಬಂದಮೇಲೆ, ಮಡದಿ ಭದ್ರಾವತಿ ಆಕಾಶವಾಣಿಯಲ್ಲಿ ಅನೌನ್ಸರ್ ಆಗಿದ್ದಳು; ಭದ್ರಾವತಿಯಲ್ಲಿ ವಾಸಿಸುತ್ತಿದ್ದೆವು. ಆಗ ಒಮ್ಮೆ ಮಿಡ್‌ಟರ್ಮ್ ರಜೆ ಸಮಯದಲ್ಲಿ ಕಣ್ಣು ಅಂಗೈ ಹಳದಿಯಾಗಿ ಕಾಣಿಸಿಕೊಂಡಿತು. ಬ್ಲಡ್ ಟೆಷ್ಟ್ ಮಾಡಿಸಿದಾಗ ಜಾಂಡೀಸ್ ಆಗಿದೆ ಎಂದು ಖಚಿತವಾಯ್ತ್ತು. ಇದು ನಿಂತ ನೀರಿನಲ್ಲಿ ಹುಟ್ಟುವ ರೋಗಾಣುವಿನ ಸೋಂಕು (ಎರಡು ಡ್ಯಾಮ್‌ನ ನೀರು ಕುಡಿಯುವವರು ನಾವು). ಅದಕ್ಕೇ ಸ್ಪೆಸಿಫಿಕ್ ಔಷಧಿಯೂ ಇಲ್ಲ. ಲಿವ್ 52 ಎಂಬ ಆಯರ‍್ವೇದಿಕ್ ಮಾತ್ರೆ ಕೊಟ್ಟಿದ್ದರು. ಮತ್ಯಾವುದೋ ನೇಟೀವ್ ಸೊಪ್ಪಿನ ರಸ ಒಂದು ಮೂರುದಿನ ಕುಡಿದೆ. ಈ ವೈರಸ್ ಲಿವರ್ ಅನ್ನು ವೀಕ್ ಮಾಡುವುದರಿಂದ. ಫುಡ್ ಕಂಟ್ರೋಲ್, ಪಥ್ಯವೇ ಮದ್ದು. ಎಳನೀರು, ಕಬ್ಬಿನ ಹಾಲಿನ ರಸ, ಹೆಸರುಬೇಳೆ ಸೀಮೇ ಅಕ್ಕಿ ಮೃದುವಾದ ಪಾಯಿಸ ಇಂಥಾದ್ದು. ಎಣ್ಣೆ ಪದಾರ್ಥ, ಖಾರವಾದದ್ದು, ಸ್ಪೈಸ್, ಗಟ್ಟಿಯಾದ ಆಹಾರವೆಲ್ಲಾ ವರ್ಜ್ಯ. ರೆಷ್ಟ್, ಪಥ್ಯ ಪಾಲಿಸುವುದು ಮುಖ್ಯ. ಅಂತೂ ಜಾಂಡೀಸ್ ರೋಗಾಣುವನ್ನು ಎದುರಿಸಿ ಗೆದ್ದದ್ದಾಯ್ತು.

ಇದಾದ ಮೇಲೆ ಬಂತು ನೋಡಿ ‘ಆರ್ಥೋ ವೈರಸ್ ಫೀವರ್’. 102-103 ಡಿಗ್ರಿ ಜ್ವರ, ಕೈಕಾಲು ಸ್ವಾದೀನ ತಪ್ಪಿ ತಿರುಗಾಡಲಾಗದೆ ನಿಲ್ಲಲಾಗದೆ ಕುಸಿದು ಬೀಳುವ ಸ್ಥಿತಿ -ಸೋಂಕು ಖಾಯಿಲೆಯಿಂದ. ವೈದ್ಯರು ಆಗ ಲಭ್ಯವಿದ್ದ ಶೀತ ಜ್ವರಕ್ಕೆಂದು ಕೊಡುವ ಆಂಟಿಬಯೋಟಿಕ್ ಕ್ಯಾಪ್ಸೂಲ್, ಪ್ಯಾರಸಿಟಮಾಲ್ ಮಾತ್ರೆ ಕೊಟ್ಟಿದ್ದರು. ಮದ್ದೂ ದಕ್ಕದೆ ವಾಮಿಟ್ ಆಯ್ತು. ಯಾವ ಮಾತ್ರೆಯನ್ನು ತಗೋಬೇಡಿ ನಿಲ್ಲಿಸಿ. ಸಾಫ್ಟ್ ಫುಡ್, ರೆಸ್ಟ್ ತಗೊಳಿ. ಆರಾಮ್ ಆಗ್ತೀರಿ ಅಂದರು. ನಾಲ್ಕಾರು ದಿನಗಳಲ್ಲಿ ಜ್ವರ ಬಿಡ್ತು. ಆದರೆ ನಿಂತುಕೊಳ್ಳಲು ತಿರುಗಾಡಲು ಸಾಧ್ಯವಾಗದ ಸ್ಥಿತಿ. ಅದಕ್ಕೆ ಒಂದಿಷ್ಟು ಟಾನಿಕ್. ಒಂದಾರು ತಿಂಗಳು ಬೇಕಾಯ್ತು ಚೇತರಿಸಿಕೊಳ್ಳಲು, ಮಾಮೂಲಿ ಓಡಾಡಿಕೊಂಡಿರಲು.  ಈ ವೈರಸ್‌ಗೂ ನಿರ್ದಿಷ್ಟವಾದ ಮೆಡಿಸೀನ್ ಇಲ್ಲ. ತಾಳಿಕೊಳ್ಳುವ ಶಕ್ತಿ ಇರುವವನು ಬಚಾವಾಗುತ್ತಾನೆ. ಹಾಗೆಯೇ ಮಂಕೀ ಖಾಯಿಲೆ, ಚಿಕನ್ ಗುನಿಯಾ, ಡೆಂಗ್ಯೂ ಸ್ಪೈನ್ ಫ್ಲೂ, ಎಷ್ಟೋ ವರ್ಷಗಳಿಂದ ಕಾಡುತ್ತಿರುವ ಇನ್ಫ್ಲೂಯೆನ್ಸಾ (ಫ್ಲೂ) ಇವೆಲ್ಲವುಗಳ ಜೊತೆ ಸಾಮಾಜಿಕ ಬದುಕು ಸಾಗುತ್ತಲೇ ಇದೆ.

ಈಗ ಬಂದಿದೆ ನೋಡಿ: ಬಾವಲಿಯಿಂದ ಹರಡುವ ರೋಗಾಣು. ಚೀನಾದವರು ಆಹಾರಕ್ಕಾಗಿ ಬ್ಯಾಟ್ ಪಕ್ಷಿಯನ್ನು ಕೊಂದು ಪರೀಕ್ಷೆ ಮಾಡ್ತಿದ್ದಾಗ ಸೋಂಕಿದ ರೋಗಾಣು ಹರಡಿ ಜಗದ್‌ವ್ಯಾಪಿಯಾಗಿ ಲಕ್ಷಾಂತರ ರೋಗಿಗಳನ್ನು ಬಲಿಪಡೆಯುತ್ತಿರುವ ಕೊರೋನಾ –ಕೋವಿಡ್ 19. ಈ ರೋಗಕ್ಕೆ ಲಸಿಕೆಗಾಗಿ ಶೋಧ ನಡೆಯುತ್ತಿದೆ. ಯಾವತ್ತಿಗೆ ಯಾವ ವಿಜ್ಞಾನಿ ಕಂಡುಹಿಡಿಯುತ್ತಾನೋ ದೇವರೇ ಬಲ್ಲ. ಹೆಚ್ಚಿನ ರೋಗಾಣುಗಳೆಲ್ಲಾ ಗಾಳಿಯ ಮೂಲಕ ಕುಡಿಯುವ ನೀರಿನ ಮೂಲಕ ಹರಡುತ್ತವೇ ಎಂಬ ಪ್ರತೀತಿ ಇದೆ. ಆದರೆ ಈ ಕೊರೋನ ರೋಗಿಗಳ ಸಂಪರ್ಕದಿಂದ ಹರಡುತ್ತದೆ ಎಂದು ಬೊಬ್ಬೆಹೊಡೆಯುತ್ತ್ತಿದ್ದಾರೆ.

ಸದ್ಯ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಅದಕ್ಕಾಗಿ ಹರಸಾಹಸ ಪಡುತ್ತಿರುವ ಸರ್ಕಾರ. ನನ್ನಂತ ವೃದ್ಧರನ್ನು ಮಕ್ಕಳನ್ನು ಮನೆಬಿಟ್ಟು ಹೊರಗೆ ಬರಬೇಡಿ ಎಂಬ ಕಿವಿಮಾತು. ನನಗಂತೂ ಮಿತ್ರರು, ವಿದ್ಯಾರ್ಥಿ ಮಿತ್ರರಿಂದ ಮನೆಯಲ್ಲೇ ಇರಲು ವಾರಂಟ್ ಕರೆಗಳು. ಇರುವ ಯಾವುದೋ ಖಾಯಿಲೆ ಮದ್ದು ಕೊಟ್ಟು ಗುಣಪಡಿಸಲು ಹೆಣಗುತ್ತಿರುವ ವಾರಿಯರ್‌ಗಳು. ಟೆಸ್ಟ್ ಟೆಸ್ಟ್, ಟೆಸ್ಟ್, ಕ್ವಾರಂಟೈನ್, ಕ್ವಾರಂಟೈನ್ ಕ್ವಾರಂಟೈನ್.

ಎಲ್ಲ ಸಂಪರ್ಕಸಾಧನಗಳು ಉದ್ಯೋಗಗಳು, ಉತ್ಪಾದನೆ ಕುಂಠಿತವಾಗಿ ಸರ್ಕಾರ, ಕೂಲಿ ಕಾರ್ಮಿಕರ, ಉದ್ಯೋಗದಲ್ಲಿ ತೊಡಗಿದ್ದವರ ಆದಾಯ ನಿಂತುಹೋಗಿ ಹೊಟ್ಟೆ ಬಟ್ಟೆ ವಸತಿಗೆ ಪರದಾಟ. ವ್ಯಾಪಾರ ವೈಹಿವಾಟು ಎಲ್ಲ ಮನುಷ್ಯ ಚಟುವಟಿಕೆಗಳು ಅಸ್ತವ್ಯಸ್ಥಗೊಂಡು ಇಡೀ ದೇಶಕ್ಕೆ ದೇಶವೇ ರೋಗಗ್ರಸ್ಥವಾಗಿದೆ. ಪರಿಹಾರ ಕಾಣುತ್ತಿಲ್ಲ.

ಇಷ್ಟಾದರೂ ರಾಷ್ಟ್ರ, ರಾಜ್ಯ ನಾಯಕರ ದೊಂಬರಾಟಕ್ಕೆ ಕೊನೆಯೇ ಇಲ್ಲ. ಗಂಟೆಹೊಡೆದು ಜಾಗಟೆ ಬಾರಿಸಿದ್ದೇನು ಶಂಖ ಊದಿ ಎಂದು ಹೇಳಿದ್ದೇನು; ದೀಪ ಹಚ್ಚಿ, ಮೋಂಬತ್ತಿ ಬೆಳಗಿ ರೋಗಾಣುವನ್ನು ಭಸ್ಮ ಮಾಡಿದ್ದೇನು. ಆತ್ಮ ನಿರ್ಭರತೆಯ ಅಂತರಾತ್ಮದ ಮಾತುಗಳೇನು. ಮಾಡಬೇಕಾದುದನ್ನು ವಿವೇಕದಿಂದ ಮಾಡದೆ ಲ್ಯೂನೆಟಿಕ್ ಅಸೈಲಮ್‌ಗಳಂತೆ ಗೋಚರಿಸುತ್ತಿರುವ ಆಡಳಿತ ವ್ಯವಸ್ಥೆ. 

ಇಂಥ ಸಂದರ್ಭದಲ್ಲಿ ನಮಗಿರುವ ಒಂದೇ ಕ್ಷೇಮದ ಮಾರ್ಗವೆಂದರೆ ನೇಚರ್ ಫ್ರೆಂಡ್ಲಿಯಾಗಿ ಪರ್ಯಾವರಣವನ್ನು ಕಲುಷಿತಗೊಳಿಸದೆ ಪರಿಶುದ್ಧವಾಗಿರುವಂತೆ ಕಾಪಾಡಿಕೊಳ್ಳುವುದು. ನೀತಿಯುತ ಸರಳ ಸಾತ್ವಿಕ ಜೀವನ. ದುರಾಸೆಯನ್ನು ಬಿಟ್ಟು, ಶುಚಿ ರುಚಿಯಾದ ಮಿತವಾದ ಆಹಾರ, ಪ್ರಕೃತಿ ಕೊಟ್ಟಷ್ಟಕ್ಕೆ ತೃಪ್ತಿಪಡುತ್ತಾ ‘ಅನಂದಮಯ ಈ ಜಗ ಹೃದಯ ಏತಕೆ ಭಯಮಾಣೋ’ ಎಂದು ಜೀವಿಸುವುದಷ್ಟೆ.  

Leave a Reply

Your email address will not be published.