ಸಾಂಪ್ರದಾಯಿಕ ನಂಬಿಕೆ ಅಲ್ಲಾಡಿಸುವ ದೇವದತ್ತ ಪಟ್ಟನಾಯಕರ ‘ಸೀತಾ’

ಕೃತಿಯ ಹೆಸರು ‘ಸೀತಾ’ ಎಂದಿದ್ದರೂ ಕಟ್ಟಿಕೊಡುವುದು ಮಾತ್ರ ನಿಯಮನಿಷ್ಠ ರಾಮನ ಕಥೆಯನ್ನು. ಇದು ರಾಮಾಯಣದ ಬಗೆಗಿನ ಅನೇಕ ನಂಬಿಕೆಗಳನ್ನು, ಶ್ರದ್ಧೆ, ಪೂಜ್ಯತಾಭಾವವನ್ನು ಮರು ಪರಿಶೀಲಿಸುವಂತೆ ಮಾಡುತ್ತದೆ.

 -ಡಾ.ಸರಜೂ ಕಾಟ್ಕರ್

 

ಸೀತಾ

ರಾಮಾಯಣದ ಸಚಿತ್ರ ಮರುಕಥನ

ದೇವದತ್ತ ಪಟ್ಟನಾಯಕ

ಅನು: ಪದ್ಮರಾಜ ದಂಡಾವತಿ

ಪುಟ: 374, ಬೆಲೆ: ರೂ.700

ಪ್ರಥಮ ಮುದ್ರಣ: 2020

ಮನೋಹರ ಗ್ರಂಥಮಾಲ, ಲಕ್ಷ್ಮೀ ಭವನ

ಸುಭಾಷ್ ರಸ್ತೆ, ಧಾರವಾಡ-580001 

ದೇವದತ್ತ ಪಟ್ಟನಾಯಕರು ಇಂಗ್ಲಿಷಿನಲ್ಲಿ ಸೀತೆಯ ಬಗೆಗೆ ಬರೆದ ಬೃಹತ್ ಕೃತಿ, ಕನ್ನಡಕ್ಕೆ ಅನುವಾದವಾಗಿ ಬಂದಿದೆ. ರಾಯಲ್ ಸೈಜಿನಲ್ಲಿ ಒಟ್ಟು 374 ಪುಟಗಳಷ್ಟಿರುವ ಈ ಕೃತಿಯನ್ನು ಪತ್ರಕರ್ತ ಪದ್ಮರಾಜ ದಂಡಾವತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕದಲ್ಲಿ ಪಟ್ಟನಾಯಕರೇ ಬಿಡಿಸಿದ 250ಕ್ಕೂ ಮಿಕ್ಕಿ ಚಿತ್ರಗಳಿವೆ. ಪುಸ್ತಕವನ್ನು ಧಾರವಾಡದ ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ್ದಾರೆ.

ದೇವದತ್ತ ಪಟ್ಟನಾಯಕರು ವೃತ್ತಿಯಲ್ಲಿ ಮೆಡಿಕಲ್ ಡಾಕ್ಟರು. ಒಂದಿಷ್ಟು ಕಾಲ ವೈದ್ಯಕೀಯವನ್ನು ಪ್ರಾಕ್ಟೀಸು ಮಾಡಿದ ಅವರು ಅನಂತರ ಪೂರ್ಣಪ್ರಮಾಣದ ಲೇಖಕರಾಗಿ ರೂಪುಗೊಂಡರು. ಪುರಾಣ ಕಥನಗಳು ಮತ್ತು ಇತಿಹಾಸ ಇವೆರಡು ಅವರ ಆಸಕ್ತಿಯ ಕ್ಷೇತ್ರಗಳು. ಮಹಾಭಾರತವನ್ನು ಅವರು ‘ಜಯ’ ಎಂಬ ಹೆಸರಿನಲ್ಲಿ ಪುನರ್‌ವ್ಯಾಖ್ಯಾನಿಸಿದ್ದಾರೆ (ಇದನ್ನು ಗಿರಡ್ಡಿ ಗೋವಿಂದರಾಜ್ ಕನ್ನಡಕ್ಕೆ ಅನುವಾದಿಸಿದ್ದಾರೆ; ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನವೂ ಬಂದಿದೆ).

ರಾಮಾಯಣದ ಬಗ್ಗೆಯೇ ಅವರು ಐದು ಕೃತಿಗಳನ್ನು ಬರೆದಿದ್ದಾರೆ. ಈ ಎಲ್ಲ ಕೃತಿಗಳೂ ಬೆಸ್ಟ್ ಸೆಲ್ಲರ್ ಎಂದೇ ಗುರುತಿಸಲಾಗಿವೆ. ಪುರಾಣಗಳನ್ನು ಇತಿಹಾಸದ ದೃಷ್ಟಿಯಿಂದ ತಾವು ನೋಡುತ್ತಿರುವುದಾಗಿ ಈ ಹಿಂದೆ ಅವರು ನೀಡಿದ ಒಂದು ಸಂದರ್ಶನದಲ್ಲಿ ಹೇಳಿದ್ದರು.

ಪ್ರಸ್ತುತ ಪಟ್ಟನಾಯಕರು ಕೃತಿಯ ಹೆಸರನ್ನು ‘ಸೀತಾ’ ಎಂದು ಇಟ್ಟಿದ್ದರೂ ಅದು ರಾಮನ ಕಥೆಯೇ ಆಗಿದೆ. ಸೀತೆ ಮತ್ತು ರಾಮ ಇವೆರಡೂ ಬೇರೆ ಬೇರೆ ಅಲ್ಲವೆಂದು ನಂಬಿರುವ ಜನಮಾನಸಿಗರು ರಾಮನನ್ನು ಸೀತಾರಾಮನೆಂದೋ, ಸಿಯಾರಾಮನೆಂದೋ ಗುರುತಿಸುತ್ತಾರೆ. ರಾಮ ಮತ್ತು ಸೀತೆಯರು ಕೂಡಿ ದಾಂಪತ್ಯ ಜೀವನ ನಡೆಸಿದ ಅವಧಿ ಅತ್ಯಂತ ಕಡಿಮೆಯಾಗಿದ್ದರೂ ಅವರನ್ನು ಆದರ್ಶ ದಂಪತಿ ಎಂದೇ ಈಗಲೂ ಜನರು ಭಾವಿಸಿದ್ದಾರೆ.

ದೇವದತ್ತ ಪಟ್ಟನಾಯಕರ ‘ಸೀತಾ’ ಅನೇಕಾನೇಕ ರಾಮಾಯಣಗಳ ಒಂದು ಸುಂದರವಾದ ಗುಚ್ಛ. ಕನ್ನಡದ ಅನುವಾದ ಕೃತಿಗೆ ಮುನ್ನುಡಿಯನ್ನು ಬರೆದ ಪ್ರಸಿದ್ಧ ವಿಮರ್ಶಕರಾದ ಸಿ.ಎನ್.ರಾಮಚಂದ್ರನ್ ಇದನ್ನು ‘ಭಿನ್ನ ಭಿನ್ನ ಎಳೆಗಳ ರೋಚಕ ನೇಯ್ಗೆ’ ಎಂದು ಕರೆದಿದ್ದಾರೆ. ಇದೊಂದು ಕೊಲ್ಲಾಪುರಿ ಮಿಸಳ್ ಭಾಜಿ. ಈ ಕೃತಿಯನ್ನು ರೂಪಿಸುವಾಗ ಅವರು ಅನೇಕಾನೇಕ ರಾಮಾಯಣ ಪಠ್ಯಗಳ ಸಹಾಯವನ್ನು ತೆಗೆದುಕೊಂಡಿದ್ದಾರೆ. ಮೂಲ ಶರೀರವು ವಾಲ್ಮೀಕಿಯದಾಗಿದ್ದರೂ ಪಟ್ಟನಾಯಕರು ಒಂದೆಡೆಯಿಂದ ಕಾಲುಗಳನ್ನು, ಇನ್ನೊಂದೆಡೆಯಿಂದ ಕೈಗಳನ್ನು ಮಗದೊಂದಡೆಯಿಂದ ಕಿವಿ, ಕಣ್ಣುಗಳನ್ನು ಮತ್ತು ಇನ್ನೊಂದು ಕಡೆಯಿಂದ ಹೊಟ್ಟೆ ಬೆನ್ನುಗಳನ್ನು ತಂದು ಅವುಗಳನ್ನು ಮೂಲ ಶರೀರಕ್ಕೆ ಜೋಡಿಸಿದ್ದಾರೆ. ಈ ಜೋಡನೆಯು ಒಂದು ವಿಶಿಷ್ಟ ರೀತಿಯಲ್ಲಿ ಮಾಡಿರುವುದರಿಂದ ಕಥೆಯ ಓದಿಗೆ ಯಾವ ಅಡಚಣೆಯೂ ಉಂಟಾಗುವುದಿಲ್ಲ. ಈ ಜೋಡನೆಯು ಬಣ್ಣ ಬಣ್ಣದ ಒಂದು ಕೊಲಾಜ್ ಆರ್ಟ್ದಂತೆ ಕಂಗೊಳಿಸುತ್ತದೆ.

ಅಂತಾರಾಷ್ಟ್ರೀಯ ಖ್ಯಾತಿಯ ಕನ್ನಡದ ಕವಿ ಎ.ಕೆ.ರಾಮಾನುಜನ್ ಮುನ್ನೂರು ರಾಮಾಯಣಗಳನ್ನು ಹುಡುಕಿ ಅವುಗಳನ್ನು ಸಂಗ್ರಹಿಸಿದ್ದರು. ಅವರೇ ಒಂದು ಸಂದರ್ಭದಲ್ಲಿ ‘ನನಗೆ ಸಿಕ್ಕಿದ್ದು ಬರೀ ಮುನ್ನೂರು ರಾಮಾಯಣಗಳು. ಆದರೆ ಕನಿಷ್ಠ 3000 ರಾಮಾಯಣಗಳಾದರೂ ಅಸ್ತಿತ್ವದಲ್ಲಿವೆ’ ಎಂದು ಹೇಳಿದ್ದರು. ರಾಮಾಯಣವನ್ನು ತಮ್ಮ ತಮ್ಮ ಪರಿಸರಕ್ಕೆ, ತಮ್ಮ ತಮ್ಮ ನಂಬುಗೆಗಳಿಗೆ ಹಾಗೂ ತಮ್ಮ ತಮ್ಮ ಜಾಯಮಾನಕ್ಕೆ ಹೊಂದಿಕೊಳ್ಳುವಂತೆ ಅನೇಕರು ಪುನರ್ಲೇಖಿಸಿದ್ದಾರೆ. ರಾಮ-ಸೀತೆಯರು ಗಂಡ ಹೆಂಡತಿಯೆಂದು ವಾಲ್ಮೀಕಿ ಚಿತ್ರಿಸಿದ್ದರೆ, ಕೆಲವರು ಅವರನ್ನು ಅಣ್ಣ ತಂಗಿಯರಾಗಿ ನೋಡಿದ್ದಾರೆ. ಸೀತೆಯನ್ನು ರಾವಣನ ಮಗಳನ್ನಾಗಿಸಿದ ರಾಮಾಯಣವೂ ಇದೆ. ಬೌದ್ಧ ರಾಮಾಯಣದ ಒಂದು ಪಠ್ಯದಲ್ಲಿ ರಾವಣನಿಗೆ ತಾನು ಸೀತೆಯನ್ನು ಅಪಹರಿಸಿದುದು ತಪ್ಪಾಗಿತ್ತೆಂದು ಜ್ಞಾನೋದಯವಾಗಿ ಅದಕ್ಕೆ ಪ್ರಾಯಶ್ಚಿತ್ತವಾಗಿ ಆತ ಸನ್ಯಾಸಿಯಾಗಿ ಕಾಡಿಗೆ ಹೋಗುವ ಕಥೆಯೂ ಇದೆ.

ಭಾರತದಲ್ಲಿ ಎಷ್ಟು ಭಾಷೆಗಳಿವೆಯೋ ಅಷ್ಟು ಜಾನಪದ ರಾಮಾಯಣಗಳಿವೆ. ವಾಲ್ಮೀಕಿಯು ಲವ ಕುಶರನ್ನು ಅವಳಿಯಾಗಿ ಚಿತ್ರಿಸಿದರೆ ಕೆಲವು ರಾಮಾಯಣಗಳು ಸೀತೆಗೆ ವಾಲ್ಮೀಕಿ ಆಶ್ರಮದಲ್ಲಿ ಬರೀ ಲವ ಅಷ್ಟೇ ಹುಟ್ಟುತ್ತಾನೆ; ವಾಲ್ಮೀಕಿಯು ಹುಲ್ಲಿನಿಂದ ಕುಶನನ್ನು ತಯಾರಿಸಿ ಅದಕ್ಕೆ ಜೀವ ತುಂಬಿ ಸೀತೆಗೆ ನೀಡುತ್ತಾನೆ. ಜಾನಪದ ರಾಮಾಯಣಗಳು, ಮಹಿಳಾ ರಾಮಾಯಣಗಳು ತಾವು ಅತ್ತೆಯ ಮನೆಯಲ್ಲಿ ಪಡುವ ಕಷ್ಟಗಳನ್ನು ಸೀತೆಯು ಅನುಭವಿಸುವಂತೆ ಚಿತ್ರಿಸಿದ್ದಾರೆ. ಭಾರತದಲ್ಲಿ ವ್ಯಕ್ತಿಗೊಂದೊಂದು ರಾಮಾಯಣಗಳಿವೆ.

ಪಟ್ಟನಾಯಕರು ಬಹುಶ್ರುತ ವಿದ್ವಾಂಸರು. ದೇಶದ ಉದ್ದಗಲಗಳಲ್ಲಿ ಅಸ್ತಿತ್ವದಲ್ಲಿರುವ ಅನೇಕಾನೇಕ ರಾಮಾಯಣಗಳನ್ನು ಸಂಗ್ರಹಿಸಿ ಓದಿದ್ದಾರೆ; ಜೊತೆಗೆ ಭಾರತದ ಅಕ್ಕಪಕ್ಕದಲ್ಲಿರುವ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ರಾಮಾಯಣಗಳನ್ನು ಓದಿದ್ದಾರೆ. ಅವುಗಳನ್ನೆಲ್ಲ ಇಲ್ಲಿ ಕಥೆಗೆ ಹೊಂದುವಂತೆ ಕಾಪಿಪೇಸ್ಟ್ ಮಾಡಿದ್ದಾರೆ. ಸಾಂಪ್ರದಾಯಿಕವಾಗಿ ವಾಲ್ಮೀಕಿ ರಾಮಾಯಣವನ್ನು ಓದಿದವರಿಗೆ ಇಲ್ಲಿಯ ಅನೇಕ ಕಥೆಗಳು, ಪ್ರಸಂಗಗಳು ಹೊಸದೆನ್ನಿಸುತ್ತವೆ. ಪಟ್ಟನಾಯಕರ ರಾಮಾಯಣದಲ್ಲಿ ಸೀತೆ ರಾಮನನ್ನು ಸ್ವಯಂವರಕ್ಕಿಂತ ಮೊದಲೇ ಭೇಟಿಯಾಗುತ್ತಾಳೆ. ಸ್ವಯಂವರಕ್ಕಾಗಿ ಮೀಸಲಾಗಿದ್ದ ಶಿವಧನಸ್ಸನ್ನು ಆಕೆ ಒಂದೇ ಕೈಯಿಂದ ಎತ್ತುತ್ತಾಳೆ; ಅಹಲ್ಯೆಯೆಡೆಗೆ ಇಂದ್ರ ನಿಯಮಿತವಾಗಿ ಗೌತಮ ಋಷಿ ಹೊರಗೆ ಹೋದಾಗ ಬಂದುಹೋಗುತ್ತಿರುತ್ತಾನೆ. ಅಹಲ್ಯೆಯ ಮಗಳೇ ಅಂಜನಾ, ಆಕೆ ಹನುಮಂತನ ತಾಯಿ- ಹೀಗೆ ವಾಲ್ಮೀಕಿ ರಾಮಾಯಣದಲ್ಲಿ ಅಪರಿಚಿತವಾಗಿರುವ ಅನೇಕಾನೇಕ ರಮ್ಯಾತಿರಮ್ಯ ಕಥೆಗಳು ಪಟ್ಟನಾಯಕರ ಸಂಗ್ರಹದಲ್ಲಿವೆ.

ಪಟ್ಟನಾಯಕರು ಪ್ರತಿ ಅಧ್ಯಾಯದ ನಂತರ ವಿಪುಲವಾದ ಟಿಪ್ಪಣಿಗಳನ್ನು ನೀಡಿದ್ದಾರೆ. ಈ ಟಿಪ್ಪಣಿಗಳನ್ನು ಅವರು ಅನೇಕ ಗ್ರಂಥಗಳಿಂದ, ವ್ಯಕ್ತಿಗಳಿಂದ ಸಂಗ್ರಹಿಸಿದ್ದಾರೆ. ಎಷ್ಟೋ ಕಡೆಗೆ ಮೂಲ ಅಧ್ಯಾಯಕ್ಕಿಂತ ಈ ಟಿಪ್ಪಣಿಗಳು ಹೆಚ್ಚು ಭಾರವೆನ್ನಿಸುವಂತಿವೆ. ಮೂಗಿಗಿಂತ ಮೂಗುತಿ ಭಾರವೆಂಬಂತೆ.

ಪಟ್ಟನಾಯಕರು ಅನೇಕ ಭಾಷೆಗಳ ರಾಮಾಯಣಗಳನ್ನು ಅಭ್ಯಸಿಸಿ ಇಲ್ಲಿ ಪ್ರಸ್ತಾಪಿಸಿದ್ದರೂ ಅವರು ಕನ್ನಡದ ಕುವೆಂಪು ರಾಮಾಯಣವನ್ನು ಅವಲೋಕಿಸಿಲ್ಲವೆನ್ನುವುದನ್ನು ಮುನ್ನುಡಿ ಬರೆದ ಸಿಎನ್‌ಆರ್ ಹಾಗೂ ಅನುವಾದಕ ಪದ್ಮರಾಜ ದಂಡಾವತಿ ಇಲ್ಲಿ ನಮೂದಿಸಿದ್ದಾರೆ. ಅವರಿಗೆ ಶಿವನ ಲಿಂಗವು ಭೂಮಿಯೊಳಗೆ ಹೂತು ಹೋದ ಗೋಕರ್ಣವೂ ಗೊತ್ತಿಲ್ಲವೆನ್ನುವುದನ್ನು ದಂಡಾವತಿಯವರು ಅಡಿಟಿಪ್ಪಣಿಯಲ್ಲಿ ತಮ್ಮ ಟಿಪ್ಪಣಿಯನ್ನೂ ಸೇರಿಸಿದ್ದಾರೆ.

ರಾಮನು ಸೀತೆಯನ್ನು ವರಿಸಿದಾಗಲೇ ಆತನ ಸಹೋದರರಾದ ಲಕ್ಷ್ಮಣ, ಶತೃಘ್ನ ಹಾಗೂ ಭರತರು ಸೀತೆಯ ಸಹೋದರಿಯರಾದ ಊರ್ಮಿಳೆ, ಮಾಂಡವಿ ಮತ್ತು ಶ್ರುತಕೀರ್ತಿಯರನ್ನು ಲಗ್ನವಾದರು. ಅವರೆಲ್ಲ ಅಯೋಧ್ಯೆಗೆ ಮರಳಿದಾಗ ವಧುಗಳ ಮೂಗಿನ ಎಡ ಹೊರಳೆಗೆ ಹಾಗೂ ವರರ ಬಲ ಹೊರಳೆಗೆ ಮುತ್ತು ರತ್ನಗಳಿದ್ದ ಮುರುವುಗಳನ್ನು ಚುಚ್ಚಿದರೆಂದು ಪಟ್ಟನಾಯಕರು ಬರೆಯುತ್ತಾರೆ. ಆದರೆ ಅಡಿಟಿಪ್ಪಣಿ ಕೊಡುವಾಗ ಜಗನ್ನಾಥ ಪುರಿ ದೇವಸ್ಥಾನದಲ್ಲಿನ ಕೃಷ್ಣನ ಮೂರ್ತಿಯ ಮೂಗಿನ ಬಲ ಹೊರಳೆಯಲ್ಲಿ ಮುರುವು ಇದೆಯೆಂಬ ಉದಾಹರಣೆಯನ್ನು ಕೊಡುತ್ತಾರೆ.

ಪ್ರಾಚೀನ ಭಾರತದಲ್ಲಿ ಕೆಲವು ಸಮುದಾಯಗಳಲ್ಲಿ ಪುರುಷರ ಮೂಗು ಚುಚ್ಚುತ್ತಿದ್ದರೆಂದು ಹೇಳುವ ಪಟ್ಟನಾಯಕರು ರಾಮಾಯಣ ಕಾಲದ ಉದಾಹರಣೆಯನ್ನು ಕೊಡದೆ ರಾಮನ ಮುಂದಿನ ಅವತಾರವಾದ ಕೃಷ್ಣನ ಕಾಲದ ಉದಾಹರಣೆಯನ್ನು ನೀಡುತ್ತಾರೆ. ಮದುವೆಯಾದ ನೂತನ ವಧು-ವರರ ಮೂಗು ಚುಚ್ಚುವುದನ್ನು ತಾನು ಎಲ್ಲಿಂದ ತೆಗೆದುಕೊಂಡಿದ್ದೇನೆಂಬ ವಿವರಣೆಯನ್ನು ಮಾತ್ರ ಅವರು ಎಲ್ಲಿಯೂ ನಮೂದಿಸಿಲ್ಲ. ಇತಿಹಾಸಕಾರರ ಪ್ರಕಾರ ಮೂಗುತಿಯ ಕಲ್ಪನೆಯು (ಹೆಣ್ಣುಮಕ್ಕಳಿಗಾಗಿ) ಭಾರತಕ್ಕೆ ಮುಸಲ್ಮಾನರ ಪ್ರವೇಶದ ನಂತರವೇ ಅಸ್ತಿತ್ವದಲ್ಲಿ ಬಂದದ್ದು. ನಾಸಾಭರಣವೆಂಬುದು ಪ್ರಾಚೀನ ಭಾರತದಲ್ಲಿ ಇರಲಿಲ್ಲವೆಂಬುದು ದೇವಸ್ಥಾನಗಳ ಮೇಲೆ ಕೆತ್ತಿದ ಅನೇಕ ಶಿಲ್ಪಗಳಲ್ಲಿ ಕಾಣಬಹುದು.

ಪಟ್ಟನಾಯಕರು ಕಥೆಯನ್ನು ಹೆಣೆಯುವುದರಲ್ಲಿ ಪಂಚತಂತ್ರದ ವಿಷ್ಣುಶರ್ಮನನ್ನೂ ಮೀರಿಸುತ್ತಾರೆ. ಕಥೆಗೊಂದು ಕಥೆ, ಅದಕ್ಕೊಂದು ಉಪಕಥೆ. ಆ ಉಪಕಥೆಗೆ ಮಗದೊಂದು ಮರಿಕಥೆ-ಹೀಗೆ ಅವರ ಕಥೆಯ ಹರಹು ಇಡೀ ಕೃತಿಯಲ್ಲಿ ವಿಜೃಂಭಿಸಿರುವುದನ್ನು ಕಾಣಬಹುದು. ಅವರಿಗೆ ಚಿತ್ರಕಲೆಯೂ ಒಲಿದಿರುವುದರಿಂದ ಆ ಕಥೆಗೆ ಇನ್ನಷ್ಟು ಮೆರಗು ಬರುವಂತೆ ತಮ್ಮ ಕೃತಿಯನ್ನು ರೂಪಿಸಿದ್ದಾರೆ. ಇವರ ಚಿತ್ರಗಳಲ್ಲಿ ರಾಮನಿಗೆ ಮೀಸೆ ಇದೆ. ರಾಮನಿಗೆ ಮೀಸೆ ಇರುವ ಚಿತ್ರವನ್ನು ಭಾರತೀಯರು ಕಲ್ಪಿಸಲೂ ಸಾಧ್ಯವಿಲ್ಲ. ಆದರೆ ಇವರು ಯಾವ ಮೂಲದಿಂದ ರಾಮನಿಗೆ ಮೀಸೆ ಇರುವ ಕಲ್ಪನೆಯನ್ನು ತೆಗೆದುಕೊಂಡರು ಎಂಬುದನ್ನು ನಮೂದಿಸಿಲ್ಲ. ಮಹಾರಾಷ್ಟ್ರದ ಚಿತ್ರಕಥೆ, ಆಂಧ್ರಪ್ರದೇಶದ ಕಮಲ್‌ಕಾರಿಯಂಥ ಸಾಂಪ್ರದಾಯಿಕ ಕಲೆಗಳಲ್ಲಿ ಹಾಗೂ ಕೆಲವು ಚಿಕಣಿ ಕಲೆಗಳಲ್ಲಿ ರಾಮನ ಮುಖದ ಮೇಲೆ ಮೀಸೆ ಇದೆಯೆಂಬ ಅಡಿ ಟಿಪ್ಪಣಿಯನ್ನು ಅವರು ನೀಡಿದ್ದಾರೆ. ಆದರೆ ಯಾವುದೇ ಪಠ್ಯದಲ್ಲಿ ರಾಮನಿಗೆ ಮೀಸೆ ಇದೆಯೆಂಬ ಉಲ್ಲೇಖ ಇರಲಿಕ್ಕಿಲ್ಲ. ವಾಲ್ಮೀಕಿಯೂ ತನ್ನ ರಾಮಾಯಣದಲ್ಲಿ ರಾಮನಿಗೆ ಮೀಸೆ ಇತ್ತೆಂಬ ಉಲ್ಲೇಖ ಮಾಡಿದಂತೆ ಕಾಣಿಸುವುದಿಲ್ಲ.

ರಾಮನಿಗಿಂತ ಮೊದಲು ಅನೇಕ ರಾಮಾಯಣಗಳು ಆಗಿ ಹೋಗಿವೆ. ರಾಮನು ಮನುಷ್ಯ ಯೋನಿಯಲ್ಲಿ ಹುಟ್ಟಿದ್ದರೂ ಆತನಿಗೆ ತಾನು ಅವತಾರಪುರುಷನೆಂಬ ಕಲ್ಪನೆ ಇದೆ; ಮುಂದಿನ ಅವತಾರದಲ್ಲಿ ತಾನು ಕೃಷ್ಣನಾಗಿ ಜನಿಸುವೆನೆಂದೂ ಲಕ್ಷ್ಮಣನು ಬಲರಾಮನಾಗಿ ಜನಿಸುತ್ತಾನೆಂದೂ ಹೇಳುತ್ತಾನೆ. ತನ್ನನ್ನು ವಿವಾಹವಾಗಲು ಬಯಸುವವರಿಗೆ ಮುಂದಿನ ಜನ್ಮದಲ್ಲಿ ತಾನು ಕೃಷ್ಣನಾದಾಗ ಅವರು ತನ್ನ ಹೆಂಡತಿಯರಾಗುತ್ತಾರೆಂಬ ಅಭಯ ನೀಡುತ್ತಾನೆ. ರಾಮಾಯಣದಲ್ಲಿ ರಾಮ ನಿಯಮಗಳಿಗೆ, ನಿಯಮಗಳ ಶಿಸ್ತಿಗೆ ಒಳಪಡುವ ಒಬ್ಬ ವ್ಯಕ್ತಿ. ಆ ನಿಯಮಗಳ ಪಾಲನೆಯೇ ಎಲ್ಲ ಸಂಕಟಗಳನ್ನು, ಕಷ್ಟಗಳನ್ನು ನರ‍್ಮಿಸುತ್ತವೆ. ಆತ ತನ್ನ ಮನೆತನದ ಗೌರವವನ್ನು ಕಾಪಾಡುವುದರ ಸಲುವಾಗಿ ಏನನ್ನೂ ಮಾಡಲು ಹಿಂತೆಗೆಯಲಾರ.

ಸೀತೆಯನ್ನು ಆತ ರಾವಣನ ಬಂಧನದಿಂದ ಬಿಡಿಸಿದ್ದು ತನ್ನ ಮನೆತನದ ಗೌರವವನ್ನು ಕಾಪಾಡುವುದಕ್ಕಾಗಿ. ಪಟ್ಟನಾಯಕರ ರಾಮಾಯಣದಲ್ಲಿ ಆತ ಸೀತಾ ಮುಕ್ತಿಯ ನಂತರ ಸೀತೆಗೆ ಹೇಳುವ ಮಾತುಗಳನ್ನು ಕೇಳಿದರೆ ಒಂದು ಕ್ಷಣ ಶಾಕ್ ಆಗುವುದು ಖಂಡಿತ. ‘ನೀನು ನನ್ನ ಮುಂದೆ ಬಂದು ನಿಂತಿರುವುದರಿಂದ ನೀನು ಸ್ವತಂತ್ರಳು. ನೀನು ನನ್ನ ಮುಂದೆ ಬಂದು ನಿಂತಿರುವುದರಿಂದ ನನಗೆ ಸಂತೋಷವಾಗಿಲ್ಲ ಎಂದು ಎಲ್ಲರಿಗೂ ತಿಳಿಯಲಿ. ನೀನು ಅಪಹರಣವಾದ ನಂತರ ನೀನು ನಿನ್ನನ್ನೇ ಕೊಂದುಕೊಳ್ಳುವ ಬದಲು ಪರಪುರುಷನ ಆಶ್ರಯದಲ್ಲಿ ಮಳೆಗಾಲ ಕಳೆದಿರುವಿಯಾದ್ದರಿಂದ ನೀನು ನನ್ನ ಕಣ್ಣಿನ ಕಪ್ಪುಗುಡ್ಡೆಯ ಹಾಗೆ, ನಮ್ಮ ಕುಟುಂಬದ ಹೆಸರಿಗೆ ಒಂದು ಕಪ್ಪು ಚುಕ್ಕೆ. ಈಗ ನೀನು ನಿನಗೆ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗಬಹುದು, ವಿಭೀಷಣನ ಜೊತೆಗೆ, ಸುಗ್ರೀವನ ಜೊತೆಗೆ ಅಥವಾ ಲಕ್ಷ್ಮಣನ ಜೊತೆಗೆ. ನಾನು ನಿನ್ನ ಮೇಲೆ ಯಾವ ಹಕ್ಕನ್ನೂ ಸಾಧಿಸುವುದಿಲ್ಲ ಎಂದು ಎಲ್ಲರಿಗೂ ತಿಳಿದಿರಲಿ’.

ಈ ಮಾತುಗಳು ಮರ್ಯಾದಾ ಪುರುಷೋತ್ತಮನೆಂದು ಪ್ರಖ್ಯಾತನಾದ, ತನ್ನ ಹೆಸರಿನ ಜೊತೆಗೆ ತನ್ನ ಹೆಂಡತಿಯ ಹೆಸರನ್ನೂ ಸೇರಿಸಿಕೊಂಡಿರುವ, ಭಾರತೀಯ ಸ್ತ್ರೀ ಕುಲವು ಆದರ್ಶ ಪತಿಯೆಂದು ಸ್ವೀಕರಿಸಲ್ಪಟ್ಟ ರಾಮನ ಬಾಯಿಯಿಂದ ಬರುತ್ತವೆ. ಈ ಪಠ್ಯದ ಬಗ್ಗೆ ಪಟ್ಟನಾಯಕರ ಅಡಿಟಿಪ್ಪಣಿ ಮೌನ ವಹಿಸುತ್ತದೆ. ರಾಮನು ಗರ್ಭಿಣಿ ಸೀತೆಯನ್ನು ಕಾಡಿಗೆ ಅಟ್ಟುವಾಗಲೂ ಹೇಳುವ ಮಾತುಗಳು ಪಟ್ಟನಾಯಕರ ರಾಮಾಯಣದಲ್ಲಿ ಹೀಗಿವೆ:

‘ಆಕೆ ನನ್ನ ಮಾತು ಎಂದೂ ಕೇಳುವುದಿಲ್ಲ. ಅರಮನೆಯಲ್ಲಿ ಇರು ಎಂದರೆ ಅವಳು ನನ್ನ ಜೊತೆಗೆ ಕಾಡಿಗೆ ಬಂದಳು. ಕಾಡಿನಲ್ಲಿ ಗುಡಿಸಲಿನಲ್ಲಿ ಇರು ಎಂದು ಹೇಳಿದರೆ ಅವಳು ಹೊರಗೆ ಹೆಜ್ಜೆ ಇಟ್ಟೇ ಬಿಟ್ಟಳು. ರಾವಣನನ್ನು ಕೊಂದ ನಂತರ ಮದುವೆಯ ಬಂಧನದಿಂದ ಆಕೆಯನ್ನು ಮುಕ್ತ ಮಾಡಬೇಕೆಂದು ಒರಟಾಗಿ ನಡೆದುಕೊಂಡರೆ ಆಕೆ ಅಗ್ನಿ ಪ್ರವೇಶ ಮಾಡಿ ತನ್ನ ಪರಿಶುದ್ಧತೆಯನ್ನು ಸಾಬೀತು ಮಾಡಿ ನನ್ನ ಜೊತೆಗೆ ನಗರಕ್ಕೆ ಬಂದಳು. ಈಗ ನಿನ್ನ ಪರಿಶುದ್ಧತೆಯ ಬಗ್ಗೆ ಜನರು ಹಾದಿಬೀದಿಯಲ್ಲಿ ಆಡಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಅವಳು ಸಂಕೀರ್ಣವಾದ ಪ್ರಶ್ನೆಗಳನ್ನು ಕೇಳುತ್ತಾಳೆ. ನಾನು ಅವುಗಳಿಗೆಲ್ಲ ಉತ್ತರ ಕೊಡಲು ಅಸಮರ್ಥ’.

ಏಕಪತ್ನಿವ್ರತಸ್ಥನಾದ ರಾಮನು ತನ್ನ ಹೆಂಡತಿಯ ಬಗೆಗೆ ಈ ರೀತಿಯಾಗಿ ನಡೆದುಕೊಂಡಿರುವುದು ಸೋಜಿಗವಾದರೂ ಅಡಿಟಿಪ್ಪಣಿಯಲ್ಲಿ ಪಟ್ಟನಾಯಕರು ರಾಮನು ಬರೀ ಪುರುಷೋತ್ತಮನಷ್ಟೇ ಅಲ್ಲ ಆತ ಮರ್ಯಾದಾ ಪುರುಷೋತ್ತಮನಾಗಿದ್ದಾನೆ. ಆತ ನಿಯಮಗಳನ್ನು ಪಾಲಿಸುತ್ತಾನೆ ಎಂಬ ಸಮರ್ಥನೆಯನ್ನು ನೀಡುತ್ತಾರೆ. ಸೀತೆಯು ಈ ರೀತಿ ಇದ್ದಿರಬಹುದಾದ ಹಟದ ಸ್ವಭಾವವು ವಾಲ್ಮೀಕಿ ರಾಮಾಯಣದಲ್ಲಿ ಕಾಣಬರುವುದಿಲ್ಲ.

ಪಟ್ಟನಾಯಕರ ಈ ಕೃತಿಯು ಅನೇಕ ಕಥೆಗಳ ಒಂದು ಬೃಹತ್ ಗ್ರಂಥವಾಗಿದೆ. ಒಂದು ಪ್ರದೇಶದ ಕಥೆಯಿಂದ ಇನ್ನೊಂದು ಪ್ರದೇಶದ ಕಥೆಗೆ ಪಟ್ಟನಾಯಕರು ಸಲೀಸಾಗಿ ಜಿಗಿದು ಕಥೆಯ ಓಘವು ಸಲೀಸಾಗಿ ಸಾಗುವಂತೆ ನೋಡಿಕೊಳ್ಳುತ್ತಾರೆ. ಇದು ಅವರ ಸೃಜನಶೀಲತೆಯ ಶಕ್ತಿ. ಇಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳು ಒಂದೇ ವೇದಿಕೆಯ ಮೇಲೆ ನಡೆಯುತ್ತವೆ. ವಿವೇಕ ಮತ್ತು ಪ್ರಜ್ಞೆ ಈ ಎರಡನ್ನೂ ಅವರು ಅನೇಕ ಕಡೆಯಲ್ಲಿ ಮುಖಾಮುಖಿಯನ್ನಾಗಿಸಿದ್ದಾರೆ. ಜನಕ ಮಹಾರಾಜನ ಮಗಳಾದ ಸೀತೆ ಇಷ್ಟೆಲ್ಲ ಕಷ್ಟವನ್ನು ಅದೇಕೆ ಪಡಬೇಕಾಯಿತೆಂಬುದಕ್ಕೆ ಅದು ಆಕೆಯ ಪೂರ್ವಜನ್ಮದ ಫಲವೆಂದು ಕರ್ಮಸಿದ್ಧಾಂತಕ್ಕೆ ಹೊರಳುತ್ತಾನೆ. ಅನೇಕ ಸಲ ರಾಮ ಸಹಿತ ಈಗ ಏನು ನಡೆಯುತ್ತಿದೆಯೋ ಅದೆಲ್ಲ ಕ್ರಿಯೆಯ ಪ್ರತಿಕ್ರಿಯೆ ಎಂದು ಹೇಳುವಲ್ಲಿಯೂ ಕರ್ಮಸಿದ್ಧಾಂತವನ್ನು ಸಮರ್ಥಿಸುತ್ತಾನೆ.

ಪಟ್ಟನಾಯಕರ ಎಲ್ಲ ಕೃತಿಗಳೂ ಚರ್ಚೆಗೀಡಾಗಿವೆ. ಅವರ ಇಂಗ್ಲಿಷ್ ಶೈಲಿ ಅತ್ಯಂತ ಕ್ಲಿಷ್ಟಕರವಾದ ಶೈಲಿ. ಸಿಎನ್‌ಆರ್‌ರವರು ತಮ್ಮ ಮುನ್ನುಡಿಯಲ್ಲಿಯೂ ಈ ಮಾತುಗಳನ್ನು ಪ್ರಸ್ತಾಪಿಸಿದ್ದಾರೆ. 80 ಶಬ್ದಗಳ ಒಂದೇ ಒಂದು ವಾಕ್ಯದ ಉದಾಹರಣೆಯನ್ನು ಸಿಎನ್‌ಆರ್ ಇಲ್ಲಿ ನೀಡಿದ್ದಾರೆ. ಪಟ್ಟನಾಯಕರ ಈ ಒಂದು ವಾಕ್ಯವು ಕನ್ನಡದ ಹತ್ತು ವಾಕ್ಯಗಳಿಗೆ ಸಮನಾಗಿದೆ. ಇಂತಹ ಶೈಲಿಯ ಪುಸ್ತಕವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸುವುದು ಒಂದು ಸವಾಲೇ ಸರಿ. ಈ ಸವಾಲನ್ನು ಸ್ವೀಕರಿಸಿ ಪದ್ಮರಾಜ ದಂಡಾವತಿಯವರು ಒಂದು ಅಪರೂಪದ ಕೃತಿಯು ಕನ್ನಡಕ್ಕೆ ದಕ್ಕುವಂತೆ ಮಾಡಿದ್ದಾರೆ.

ಅನುವಾದ ಕ್ರಿಯೆ ಬಲು ಕಷ್ಟದ್ದು. ಮೂಲ ಲೇಖಕನ ಪರಕಾಯ ಪ್ರವೇಶ ಮಾಡಿ ಅವನ ಭಾವನೆ, ಆಶಯಗಳನ್ನು ತನ್ನ ಭಾಷೆಗೆ ಇಳಿಸುವುದು ಸುಲಭದ ಮಾತಲ್ಲ. ಅನೇಕ ಸಂದರ್ಭಗಳಲ್ಲಿ ಶಬ್ದಶಃ ಅನುವಾದ ಮಾಡಿ ಮೂಲ ಲೇಖಕನ ಆಶಯವನ್ನೇ ನಾಶ ಮಾಡಿದ ಉದಾಹರಣೆಗಳು ನಮ್ಮ ಎದುರು ಇವೆ. ಆದರೆ ಪತ್ರಕರ್ತ ಪದ್ಮರಾಜ ದಂಡಾವತಿಯವರಿಗೆ ಭಾಷೆಯನ್ನು ಹೇಗೆ ಪಳಗಿಸಬೇಕೆಂಬುದು ಗೊತ್ತು. ಅವರು ತೆಗೆದುಕೊಂಡಿದ್ದು ಪಟ್ಟನಾಯಕರಂತಹ ಬಹುಮುಖ ಪ್ರತಿಭೆಯ, ವಿವಾದಾತ್ಮಕ ಲೇಖಕನ ಕೃತಿ; ಅದೂ ರಾಯಲ್ ಆಕಾರದ 350ಕ್ಕೂ ಮಿಕ್ಕಿ ಪುಟಗಳ ಬೃಹತ್ ಗ್ರಂಥ. ಕ್ಲಿಷ್ಟ ಶೈಲಿಯ, ಅತ್ಯಂತ ಆಸಕ್ತಿದಾಯಕ ವಿಷಯಗಳನ್ನೊಳಗೊಂಡ ಕೃತಿಯನ್ನು ದಂಡಾವತಿಯವರು ಬಲು ಸಮರ್ಥವಾಗಿ, ಕನ್ನಡದ್ದೇ ಕೃತಿಯೆಂಬ ಭಾವನೆ ಬರುವಂತೆ ಅನುವಾದಿಸಿದ್ದಾರೆ. ಇದು ಅವರು ಅನುವಾದಿಸುತ್ತಿರುವ ಮೊಟ್ಟಮೊದಲ ಕೃತಿ ಎಂಬುದು ಗಮನಾರ್ಹ.

ನಮ್ಮಲ್ಲಿಯ ‘ತ’ಕಾರವು ಉತ್ತರ ಭಾರತದಲ್ಲಿ ‘ಡ’ಕಾರವಾಗುತ್ತದೆ. ನಾವು ‘ತಾಟಕಾ’ ಅಂದ್ರೆ ಉತ್ತರದವರು ‘ತಾಡಕಾ’ ಅನ್ನುತ್ತಾರೆ. ದಂಡಾವತಿಯವರು ಉತ್ತರದಲ್ಲಿ ಪಟ್ಟನಾಯಕರು ಬಳಸಿದ ಹೆಸರುಗಳಿಗೆ ಕನ್ನಡದ ಸ್ಪರ್ಶ ನೀಡಿದ್ದಾರೆ. ಉತ್ತರ ಭಾರತದಲ್ಲಿ ಕೃಷ್ಣನಿಗೆ ‘ರಣಛೋಡದಾಸ್’ ಎಂದೂ ಕರೆಯುತ್ತಾರೆ. ಜಾಂಬುವಂತನ ಜೊತೆಗೆ ಹೋರಾಡುವಾಗ ಆತ ರಣರಂಗವನ್ನು ಬಿಟ್ಟು ಓಡಿ ಹೋಗಿದ್ದನೆಂದು ಅವನಿಗೆ ಈ ಹೆಸರು. ಈ ಹೆಸರು ಗುಜರಾತ್ ರಾಜ್ಯದಲ್ಲಿ ಸಾಮಾನ್ಯ. ಆದರೆ ಕನ್ನಡ ಅನುವಾದದಲ್ಲಿ ಆ ಹೆಸರು ರಣಚೋರದಾಸನೆಂದಾಗಿದೆ. ‘ಡ’ವನ್ನು ‘ರ’ವನ್ನಾಗಿ ಅರ್ಥೈಸಿಕೊಂಡಿದ್ದರ ಪ್ರಮಾದ ಇದು.

ಸೀತೆಯ ಅನ್ವೇಷಣೆಗೆ ಅಂಗದನ ನಾಯಕತ್ವದಲ್ಲಿ ಹೋದ ಕಪಿಗಳ ತಂಡವು ಸಮುದ್ರ ತಟದಲ್ಲಿ ಸಂಪಾತಿಯೆಂಬ ಗರುಡ ಪಕ್ಷಿಯನ್ನು ಭೇಟಿಯಾಗುತ್ತದೆ. ಈ ಸಂಪಾತಿಯು ಒಂದೆಡೆ ತಾನು ಜಟಾಯುವಿನ ಅಣ್ಣನೆಂದು ಹೇಳಿಕೊಂಡರೆ, ಮುಂದಿನ ಪ್ಯಾರಾದಲ್ಲಿ ತಮ್ಮನೆಂದು ಹೇಳಿಕೊಳ್ಳುತ್ತದೆ. ಮೂಲದಲ್ಲಿಯ ‘ಬ್ರದರ್’ ಎಂಬ ಪದವು ಇಲ್ಲಿ ಅಣ್ಣ, ತಮ್ಮನೆಂಬ ವ್ಯತ್ಯಾಸ ಕಳೆದುಕೊಂಡಿದೆ.

ಧಾರವಾಡದ ಮನೋಹರ ಗ್ರಂಥಮಾಲೆ 2020ರ ಆರಂಭದ ಏಳು ತಿಂಗಳಲ್ಲಿ ಪ್ರಕಟಿಸಿದ ಅನೇಕ ಕೃತಿಗಳನ್ನು ನಾನು ಓದಿದ್ದೇನೆ. ಅವುಗಳಲ್ಲಿ ‘ಸೀತಾ’ ಉತ್ಕೃಷ್ಟವಾಗಿ ನಿಲ್ಲುತ್ತದೆ. ಈ ಅವಧಿಯಲ್ಲಿ ಇದಕ್ಕೆ ಸರಿಸಮಾನವಾದ ಕೃತಿಯು ಕನ್ನಡದಲ್ಲಿ ಬಂದಿಲ್ಲವೆನ್ನುವುದು ನನ್ನ ಓದಿನ ಅನುಭವ.

*ಲೇಖಕರು ಹಿರಿಯ ಸಾಹಿತಿ; ಸಾಹಿತ್ಯದಲ್ಲಿ ಪಿಎಚ್.ಡಿ. ಮಾಡಿದ ಮೊದಲ ಕಾರ್ಯನಿರತ ಪತ್ರಕರ್ತರು. ಕವಿತೆ, ಕಾದಂಬರಿ, ನಾಟಕ, ಅನುವಾದ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯ ಛಾಪು ಮೂಡಿಸಿದ್ದಾರೆ. ಬೆಳಗಾವಿಯಲ್ಲಿ ವಾಸ.

Leave a Reply

Your email address will not be published.