ಸಾಂಸ್ಕೃತಿಕ ಅಪೌಷ್ಟಿಕತೆಯ ಭಾರತೀಯ ಎಡಪಂಥ

ಭಾರತದ ಸಂದರ್ಭದಲ್ಲಿ ಎಡಪಂಥೀಯ ರಾಜಕಾರಣವನ್ನು ಕಟು ವಿಮರ್ಶೆಗೆ ಒಡ್ಡುವ ಮೂಲಕ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಶೆಟ್ಟಿ ಅವರು ಸೈದ್ಧಾಂತಿಕ ಸಂವಾದವನ್ನು ಹುಟ್ಟುಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹಿರಿಯ ಎಡಪಂಥೀಯ ಸಿದ್ಧಾಂತಿ ಜಿ.ರಾಮಕೃಷ್ಣ ಅವರು ತಮ್ಮ ಸಶಕ್ತ ಸಮರ್ಥನೆಯನ್ನು ಮಂಡಿಸಿದ್ದಾರೆ. ಎಂದಿನಂತೆ ಆರೋಗ್ಯಪೂರ್ಣವಾದ ಮುಕ್ತ ಚರ್ಚೆಗೆ ಸಮಾಜಮುಖಿ ವೇದಿಕೆಯಾಗಿದೆ.

ಯಾವುದೇ ವಾದ ಅಥವಾ ವಿಚಾರಪಂಥ ನಿರ್ವಿವಾದವಾಗಿ ಇರಲು ಸಾಧ್ಯವಿಲ್ಲ. ಆದುದರಿಂದಲೇ, ಅವುಗಳನ್ನು ನಾವು ವಾದಗಳು ಎಂದು ಕರೆಯುವುದು. ವಾದಕ್ಕೆ ಒಂದು ಪ್ರತಿವಾದ ಇದ್ದೇ ಇರುತ್ತದೆ. ಪ್ರತಿವಾದದ ಜೊತೆಗೆ ಸಂವಾದಿಸದೆ ವಾದ ಬೆಳೆಯಲೂ ಸಾಧ್ಯವಿಲ್ಲ, ಉಳಿಯಲೂ ಸಾಧ್ಯವಿಲ್ಲ. ವಿಚಾರಪಂಥಗಳು ಒಂದು ನಿರ್ದಿಷ್ಟವಾದ ಚಾರಿತ್ರಿಕ ಪರಿಪ್ರೇಕ್ಷ್ಯದಲ್ಲಿ ಸಂಸ್ಕೃತಿ, ಸಮಾಜ, ರಾಜಕಾರಣ ಮತ್ತು ಅರ್ಥಿಕತೆಗಳಿಗೆ ಸಂಬಂಧಿಸಿದ ದೃಷ್ಟಿಕೋನಗಳನ್ನು ಮುಂದಿಡುತ್ತವೆ. ಈ ದೃಷ್ಟಿಕೋನಗಳು ಇತರ ವಿಚಾರಗಳ ಸಮಕ್ಷಮದಲ್ಲಿ ತಮ್ಮ ಚಿಂತನೆಗಳನ್ನು ಪರೀಕ್ಷಿಸುತ್ತ, ಮರುಪರಿಶೀಲಿಸುತ್ತ ವಾದಗಳಾಗಿ ರೂಪುಗೊಳ್ಳುತ್ತವೆ. ಈ ಅರ್ಥದಲ್ಲಿ, ವಿಶೇಷವಾಗಿ ಪಾಶ್ಚಾತ್ಯ ಜಗತ್ತಿನಲ್ಲಿ ಅನೇಕ ವಾದಗಳನ್ನು ನಾವು ಕಾಣುತ್ತೇವೆ. ಲಿಬರಲ್‍ವಾದ, ಬಂಡವಾಳವಾದ, ರಾಷ್ಟ್ರವಾದ, ಸಮಾಜವಾದ, ಮಾಕ್ರ್ಸ್‍ವಾದ, ಸೆಕ್ಯುಲರ್‍ವಾದ ಇತ್ಯಾದಿ.

ಈ ವಾದಗಳು ತಮ್ಮದೇ ಆದ ಚಾರಿತ್ರಿಕ, ಸಾಂಸ್ಕೃತಿಕ ಹಾಗೂ ವೈಚಾರಿಕ ನಿರ್ದಿಷ್ಟತೆಗಳನ್ನು ಹೊಂದಿವೆ. ಇವುಗಳನ್ನು ಅವು ರೂಪುಗೊಂಡ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ನಿರ್ದಿಷ್ಟತೆಗಳಿಂದ ಪ್ರತ್ಯೇಕಿಸಿ ಇನ್ನೊಂದು ಸಮಾಜದಲ್ಲಿ ಅನುಷ್ಠಾನಗೊಳಿಸುವಾಗ ಮಹತ್ವದ ಪಲ್ಲಟಗಳನ್ನು ಮಾಡಬೇಕಾಗುತ್ತದೆ. ಹಾಗೆ ಮಾಡದಿದ್ದಲ್ಲಿ ಈ ವಿಚಾರಪಂಥಗಳು ಯಾಂತ್ರಿಕವಾಗಿ ಕಾಣಿಸುತ್ತವೆ ಮಾತ್ರವಲ್ಲದೇ, ಅವುಗಳ ಅನ್ವಯ ದುಷ್ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತವೆ. ವಿಚಾರಪಂಥಗಳು ಮೂಲತಃ ಸಂಸ್ಕೃತಿ ನಿರ್ದಿಷ್ಟವಾಗಿ ರೂಪುಗೊಳ್ಳುವುದರಿಂದ ಅವುಗಳ ನೇರ ಅನ್ವಯ ಇತರ ಸಂಸ್ಕೃತಿಗಳ ಸ್ವಾಯತ್ತತೆಯನ್ನು ನಿರಾಕರಿಸುತ್ತದೆ. ಆದ್ದರಿಂದಲೇ ತತ್ತ್ವಜ್ಞಾನಿಗಳು ಅದರಲ್ಲೂ ವಿಶೇಷವಾಗಿ ರಾಜಕೀಯ ತತ್ವಜ್ಞಾನಿಗಳು ವಿಚಾರಪಂಥಗಳ ಅನ್ವಯ ಮತ್ತು ಅನುಷ್ಠಾನಗಳಿಗೆ ಸಂಬಂಧಿಸಿದ ಸಂಕೀರ್ಣತೆಗಳನ್ನು ಗಮನಿಸಿ ಅದನ್ನು ‘ತತ್ವಗಳ ವರ್ಗಾವಣೆಯ ಸಮಸ್ಯೆ’ ಎಂದು ಗುರುತಿಸುತ್ತಾರೆ.

ಜಗತ್ತಿನ ಬೇರೆ ಬೇರೆ ಸಮಾಜಗಳು ಈ ವಿಚಾರಪಂಥಗಳನ್ನು ತಮ್ಮ ಸ್ವ-ವಿಮರ್ಶೆಯ ಬೆಳಕಿನಲ್ಲಿ ಹೇಗೆ ಒಳಗೊಳ್ಳುತ್ತವೆ? ಎಷ್ಟನ್ನು ಒಳಗೊಳ್ಳುತ್ತವೆ?

ತತ್ವಗಳ ವರ್ಗಾವಣೆ ನಮ್ಮ ಕಾಲದಲ್ಲಿ ನಡೆಯಲೇಬೇಕಾದ ಹಾಗೂ ನಡೆಯುತ್ತಾ ಇರುವ ವಿದ್ಯಮಾನವಾಗಿದೆ. ಜಗತ್ತಿನ ವಿಭಿನ್ನ ಸಮಾಜಗಳು ಪರಸ್ಪರಾವಲಂಬನೆಯಲ್ಲಿ ಬದುಕುತ್ತಿರುವ ಈ ಕಾಲಘಟ್ಟದಲ್ಲಿ ವಾದಗಳು ತಾತ್ವಿಕ ದೃಷ್ಟಿಕೋನಗಳಾಗಿ ಅಥವಾ ತಾತ್ವಿಕ ದೃಷ್ಟಿಕೋನಗಳು ವಾದಗಳಾಗಿ ಹರಿದಾಡುತ್ತಿರುತ್ತವೆ. ಈ ಹರಿಯುವಿಕೆ ಅನಿವಾರ್ಯ. ಆದರೆ, ಜಗತ್ತಿನ ಬೇರೆ ಬೇರೆ ಸಮಾಜಗಳು ಈ ವಿಚಾರಪಂಥಗಳನ್ನು ತಮ್ಮ ಸ್ವ-ವಿಮರ್ಶೆಯ ಬೆಳಕಿನಲ್ಲಿ ಹೇಗೆ ಒಳಗೊಳ್ಳುತ್ತವೆ? ಎಷ್ಟನ್ನು ಒಳಗೊಳ್ಳುತ್ತವೆ? ಹಾಗೂ ಅವುಗಳನ್ನು ಹೇಗೆ ತಮ್ಮ ಸ್ವಂತಿಕೆಯ ಭಾಗವಾಗಿಸುತ್ತವೆ.? ಎನ್ನುವ ಅಂಶಗಳು ಈ ತತ್ವ ವರ್ಗಾವಣೆಯಲ್ಲಿ ಬಹುಮುಖ್ಯವಾದವುಗಳು. ಇಂದು ಜಗತ್ತಿನ ಯಾವುದೇ ಸಮಾಜ ತಾನು, ತನ್ನ ಸ್ವಂತಿಕೆಯ ನಿರ್ವಾತದಲ್ಲಿ ಸರ್ವತಂತ್ರ ಸ್ವತಂತ್ರವಾಗಿ ಇರುತ್ತೇನೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ, ಇಂದು ನಾವು ತತ್ವಜ್ಞಾನದ ವರ್ಗಾವಣೆಯ ಎಲ್ಲಾ ಸಾಧ್ಯತೆಗಳಿಗೆ ತೆರೆದುಕೊಳ್ಳಬೇಕಾಗಿದೆ. ಮಾತ್ರವಲ್ಲ, ಅದು ಎಸೆಯುವ ಸವಾಲುಗಳನ್ನೂ ಎದುರಿಸಬೇಕಾಗಿದೆ. ಅಂತೆಯೇ, ಆ ಮೂಲಕ ತತ್ವಚಿಂತನೆಯ ವಿಶ್ವವ್ಯಾಪಿತ್ವದ ಅರಿವಿನಲ್ಲಿ ತಮ್ಮತಮ್ಮ ಸಮಾಜಗಳ ಮರುಸಂಘಟನೆ ಮಾಡಿಕೊಳ್ಳಬೇಕಾಗಿದೆ.

ಮೇಲಿನ ಮಾತುಗಳನ್ನು ಭಾರತದ ಎಡಪಂಥೀಯತೆ ಇಂದು ಎದುರಿಸುತ್ತಿರುವ ಸಂಕಟ ಹಾಗೂ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವ ನೆಲೆಯಲ್ಲಿ ಬರೆಯುತ್ತಿದ್ದೇವೆ. ಭಾರತದಲ್ಲಿ ಎಡಪಂಥೀಯ ತತ್ವಚಿಂತನೆ ಮತ್ತು ಕ್ರಿಯಾಚರಣೆಗಳಲ್ಲಿ ಸಂಭವಿಸಿರುವ ಪ್ರಮಾದಗಳನ್ನು ಪರಿಶೀಲಿಸುವುದು ಈ ಬರಹದ ಉದ್ದೇಶ. ಇಂದಿನ ಬಲಪಂಥೀಯತೆಯ ಅಟ್ಟಹಾಸದಲ್ಲಿ ತೀವ್ರ ವಿಕ್ಷಿಪ್ತವಾಗಿ ಹಾಗೂ ದುರ್ಬಲವಾಗಿ ಕಾಣಿಸುವ ಎಡಪಂಥವನ್ನು ಹೀನಾಯಗೊಳಿಸುವುದು ನಮ್ಮ ಉದ್ದೇಶವಲ್ಲ. ಬದಲಾಗಿ ನಿರಂತರ ಸ್ವ-ವಿಮರ್ಶೆಯಲ್ಲಿ ಮಾತ್ರ ವಾದಗಳು ಸಜೀವಗೊಳ್ಳುತ್ತವೆ ಹಾಗೂ ಚೈತನ್ಯಶೀಲತೆಯ ರಾಜಕಾರಣವನ್ನು ನಡೆಸುತ್ತವೆ ಎನ್ನುವ ತಿಳಿವಳಿಕೆಯಿಂದ ಎಡಪಂಥದ ಒಳವಿಮರ್ಶಕರಾಗಿ ನಮ್ಮ ವಿಚಾರಗಳನ್ನು ಮುಂದಿಡುತ್ತಿದ್ದೇವೆ.

ಎಡಪಂಥೀಯತೆ ತನ್ನ ಸಹಜಸ್ವಭಾವದಲ್ಲಿಯೇ ಮೂಲಜಿಜ್ಞಾಸಿಕವಾದದ್ದು (ರ್ಯಾಡಿಕಲ್). ಅದು ಜಗತ್ತಿನಾದ್ಯಂತ ಅಧಿಕಾರಶಾಹಿಗೆ ಪ್ರತಿರೋಧವಾಗಿ ರೂಪುಗೊಂಡದ್ದು. ವ್ಯವಸ್ಥೆಯ ವಿರುದ್ಧದ ಪ್ರತಿಭಟನೆ ಅದರ ಮೂಲ ಧಾತು. ಆದ್ದರಿಂದಲೇ ಎಲ್ಲ ವಿಚಾರಗಳ ಒಳಹೊಕ್ಕು ತಳಮುಟ್ಟಿ ವಿಮರ್ಶಾತ್ಮಕವಾಗಿ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಜಾಯಮಾನವನ್ನು ಅದು ಹೊಂದಿದೆ. ಆದ್ದರಿಂದಲೇ ಅದು ಪ್ರಭುತ್ವಕ್ಕೆ ಪ್ರತಿಯಾದದ್ದು. ತನ್ನ ದೃಷ್ಟಿಕೋನಗಳನ್ನು ನಿರಂತರವಾದ ವಿಮರ್ಶೆಯ ಅಗ್ನಿದಿವ್ಯಕ್ಕೆ ಒಳಪಡಿಸಿದ್ದರಿಂದಲೇ ಅದು ಇಂದೂ ಸಜೀವವಾಗಿದೆ.

ವ್ಯವಸ್ಥೆಯ ಪ್ರತಿರೋಧವಾಗಿ ಚಿಗುರೊಡೆದ ಎಡಪಂಥ ತಾನೇ ಒಂದು ಅಧಿಕಾರಶಾಹಿಯಾಗಿ ಪ್ರತಿರೋಧಗಳನ್ನು ಹತ್ತಿಕ್ಕಿದ ದುರಂತದ ಕಥೆ ಕೇವಲ ರಷ್ಯಾಕ್ಕೆ ಮಾತ್ರ ಸೀಮಿತವಲ್ಲ. ಅದು ಇಂದು ನಾವು ಕಮ್ಯುನಿಸಮ್ ಎಂದು ಕರೆಯುವ ಮಾರ್ಕ್ಸ್‍ವಾದದ ಎಲ್ಲ ಅಧಿಕಾರಶಾಹೀ ರೂಪಗಳಲ್ಲಿ ಕಾಣಿಸುವಂತಹುದು.

ಈ ಎಡಪಂಥೀಯ ವಿಚಾರಗಳ ಸರಮಾಲೆಯಲ್ಲಿ ಒಂದು ಪ್ರಖರವಾದ ವೈಚಾರಿಕ ದೃಷ್ಟಿಕೋನವಾಗಿ ಮಾರ್ಕ್ಸ್‍ವಾದಕ್ಕೆ ವಿಶೇಷವಾದ ಸ್ಥಾನವಿದೆ. ಮಾರ್ಕ್ಸ್‍ನಿಂದ ಪ್ರಾರಂಭಿಸಿ ಇಂದಿನ ತನಕ ಮಾರ್ಕ್ಸ್‍ವಾದದ ಬೌದ್ಧಿಕ ಪರಂಪರೆಯಲ್ಲಿ ಗಹನವಾದ ಅನೇಕ ಚಿಂತಕರ ಪಟ್ಟಿಯನ್ನೇ ನಾವು ನೀಡಬಹುದು. ಈ ಚಿಂತಕರು ಬೇರೆಬೇರೆ ಸಮಾಜಗಳಲ್ಲಿ ಬೇರೆಬೇರೆ ಕಾಲಘಟ್ಟಗಳಲ್ಲಿ ಮಾರ್ಕ್ಸ್‍ವಾದದ ಮೂಲವಿಚಾರಗಳನ್ನು ಒರೆಗೆ ಹಚ್ಚಿ ಮರುಪರಿಶೀಲಿಸಿ ಹೊಸದಾಗಿ ಅದರ ಅರ್ಥನಿರೂಪಣೆಯನ್ನು ಮಾಡಿದ್ದಾರೆ.

ದುರಂತವೆಂದರೆ ಚೈತನ್ಯಶೀಲವಾದ ಎಡಪಂಥದ ಅತ್ಯಂತ ಪ್ರಖರ ನಿದರ್ಶನವಾದ ಮಾರ್ಕ್ಸ್‍ವಾದವೇ ಅಧಿಕಾರಶಾಹಿಯಾಗಿ ರೂಪಾಂತರಗೊಂಡಾಗ ಅದು ನಿಧಾನವಾಗಿ ಮತ್ತು ಹಂತಹಂತವಾಗಿ ತನ್ನ ಬೌದ್ಧಿಕ ಚೈತನ್ಯಶೀಲತೆಯನ್ನು ಕಳೆದುಕೊಂಡು ಸೈದ್ಧಾಂತಿಕವಾಗಿ ಸ್ಥಗಿತಗೊಂಡಿತು. ಅಕ್ಟೋಬರ್ ಕ್ರಾಂತಿಯ ಮೂಲಕ ರಾಜಕೀಯ ವ್ಯವಸ್ಥೆಯಾಗಿ ರೂಪಾಂತರಗೊಂಡ ಮಾರ್ಕ್ಸ್‍ವಾದ, ಲೆನಿನ್ ನಂತರದ ರಷ್ಯಾದಲ್ಲಿ ನಡೆಸಿದ ಅನಾಹುತಗಳು ಇಂದು ಚರಿತ್ರೆಯ ಅಧಿಕೃತ ಭಾಗ. ವ್ಯವಸ್ಥೆಯ ಪ್ರತಿರೋಧವಾಗಿ ಚಿಗುರೊಡೆದ ಎಡಪಂಥ ತಾನೇ ಒಂದು ಅಧಿಕಾರಶಾಹಿಯಾಗಿ ಪ್ರತಿರೋಧಗಳನ್ನು ಹತ್ತಿಕ್ಕಿದ ದುರಂತದ ಕಥೆ ಕೇವಲ ರಷ್ಯಾಕ್ಕೆ ಮಾತ್ರ ಸೀಮಿತವಲ್ಲ. ಅದು ಇಂದು ನಾವು ಕಮ್ಯುನಿಸಮ್ ಎಂದು ಕರೆಯುವ ಮಾರ್ಕ್ಸ್‍ವಾದದ ಎಲ್ಲ ಅಧಿಕಾರಶಾಹೀ ರೂಪಗಳಲ್ಲಿ ಕಾಣಿಸುವಂತಹುದು.

ಈ ಅಧಿಕಾರಶಾಹೀ ರೂಪ, ಮಾರ್ಕ್ಸ್‍ವಾದವನ್ನು ಒಂದು ಘನೀಕೃತ ಸಿದ್ಧಾಂತವಾಗಿ ಕೇವಲ ಅರ್ಥಶಾಸ್ತ್ರೀಯವಾಗಿ ನಿರೂಪಿಸುತ್ತ ಬಂದಿದೆ. ಇದರಿಂದಾಗಿ ಮಾರ್ಕ್ಸ್‍ವಾದ ಕಟ್ಟರ್ ಧಾರ್ಮಿಕ ಪಂಥಗಳಂತೆಯೇ ಅನುಲ್ಲಂಘೀನಯವಾದ ನಿಯಮಗಳ ಹಂದರವಾಗಿದೆ.

ಇವೆಲ್ಲವುಗಳಿಂದಲಾಗಿ ಮಾರ್ಕ್ಸ್‍ವಾದ ತನ್ನ ಅರ್ಥಶಾಸ್ತ್ರೀಯ ಕವಚದಿಂದಾಚೆಗೆ ಸಂಸ್ಕೃತಿಯ ಪ್ರಶ್ನೆಗಳನ್ನು ಹೆಚ್ಚು ಗಹನವಾಗಿ ಎದುರಿಸಲಾರಂಭಿಸಿತು. ಇವೆಲ್ಲವನ್ನೂ ಸಾಂಸ್ಕೃತಿಕ ಮಾರ್ಕ್ಸ್‍ವಾದ ಎಂದು ಸಂಕ್ಷಿಪ್ತವಾಗಿ ಕರೆಯಬಹುದು.

ಮಾರ್ಕ್ಸ್‍ವಾದಕ್ಕೆ ಅಂಟಿಕೊಂಡಿರುವ ಈ ಅರ್ಥಶಾಸ್ತ್ರೀಯತೆಯ ಜಾಡ್ಯಕ್ಕೆ ಪ್ರತಿಕ್ರಿಯೆಯಾಗಿ 20ನೆಯ ಶತಮಾನದ ಕಾಲಾವಧಿಯಲ್ಲಿ ಯುರೋಪಿನ ಬೇರೆಬೇರೆ ಸಮಾಜಗಳಲ್ಲಿ ಹೊಸಬಗೆಯ ವಿಚಾರಪಂಥಗಳು ಮೂಡಿಬಂದಿವೆ. ಈ ವಿಚಾರಪಂಥಗಳು ಒಂದು ಅರ್ಥದಲ್ಲಿ ಮಾರ್ಕ್ಸ್‍ವಾದಕ್ಕೆ ಪುನಶ್ಚೇತನವನ್ನು ಒದಗಿಸಿದವೆಂದೇ ಹೇಳಬಹುದು. ಇಟಲಿಯ ಕಮ್ಯುನಿಸ್ಟ್ ಪಕ್ಷದ ನೇತಾರ ಆಂಟೋನಿಯೋ ಗ್ರಾಂಶಿಯಿಂದ ತೊಡಗಿ ಜರ್ಮನಿಯ ಫ್ರಾಂಕ್‍ಪರ್ಟ್ ವಿಚಾರಪಂಥದ ಅನೇಕ ವಿದ್ವಾಂಸರು ಅಧಿಕಾರಶಾಹೀ ಮಾರ್ಕ್ಸ್‍ವಾದ ಅವಗಣಿಸಿದ ಸಂಸ್ಕೃತಿಯ ಪ್ರಶ್ನೆಗಳನ್ನು ಮುಂಚೂಣಿಗೆ ತಂದರು. ಉದಾಹರಣೆಗೆ ಗ್ರಾಂಶಿ ತನ್ನ ಹೆಜಿಮನಿ ಮತ್ತು ಸಾವಯವ ಬುದ್ಧಿಜೀವಿಗಳಂತಹ ಪರಿಕಲ್ಪನೆಗಳನ್ನು ಮಾರ್ಕ್ಸ್‍ವಾದದ ತಾತ್ತ್ವಿಕ ಚೌಕಟ್ಟಿನೊಳಗೆ ತಂದರೆ ಹಾಬರ್‍ಮಾಸ್, ಮರ್ಕ್ಯೂಸೆ, ಎರಿಕ್ ಫ್ರಾಂಮ್ ಮೊದಲಾದವರು ಸಂಸ್ಕೃತಿ ಹಾಗೂ ಮಾನಸಿಕತೆಗಳ ಪ್ರಶ್ನೆಗಳನ್ನು ಮಾರ್ಕ್ಸ್‍ವಾದದ ಮುಂದಿರಿಸಿದರು. ಅಷ್ಟು ಮಾತ್ರವಲ್ಲದೆ ಇಂಗ್ಲೆಂಡ್, ಆಸ್ಟ್ರಿಯಾ ಹಾಗೂ ಫ್ರಾನ್ಸ್ ಮೊದಲಾದ ದೇಶಗಳಲ್ಲಿ ಮಾರ್ಕ್ಸ್‍ವಾದದ ತಾತ್ತ್ವಿಕ ನೆಲೆಯಲ್ಲಿಯೇ ಹೊಸಹೊಸ ವಿಚಾರಗಳ ಅಲೆಗಳು ಎದ್ದು ಬರಲಾರಂಭಿಸಿದವು. ಇವೆಲ್ಲವುಗಳಿಂದಲಾಗಿ ಮಾರ್ಕ್ಸ್‍ವಾದ ತನ್ನ ಅರ್ಥಶಾಸ್ತ್ರೀಯ ಕವಚದಿಂದಾಚೆಗೆ ಸಂಸ್ಕೃತಿಯ ಪ್ರಶ್ನೆಗಳನ್ನು ಹೆಚ್ಚು ಗಹನವಾಗಿ ಎದುರಿಸಲಾರಂಭಿಸಿತು. ಇವೆಲ್ಲವನ್ನೂ ಸಾಂಸ್ಕೃತಿಕ ಮಾರ್ಕ್ಸ್‍ವಾದ ಎಂದು ಸಂಕ್ಷಿಪ್ತವಾಗಿ ಕರೆಯಬಹುದು.

ಈ ಹಿನ್ನೆಲೆಯಲ್ಲಿ ಭಾರತದ ಸಂಘಟಿತ ಎಡಪಂಥೀಯ ರಾಜಕಾರಣವನ್ನು ನಾವು ವಿಮರ್ಶೆಗೆ ಒಡ್ಡಬೇಕಾಗಿದೆ. ಸಂಘಟಿತ ಎಡಪಂಥ ಎನ್ನುವ ಪದವನ್ನು ನಾವು ವಿಶೇಷವಾಗಿ ಕಮ್ಯುನಿಸ್ಟ್ ಪಕ್ಷಗಳ ರಾಜಕಾರಣದ ಸಂದರ್ಭದಲ್ಲಿ ಬಳಸುತ್ತಿದ್ದೇವೆ. ಭಾರತದಲ್ಲಿ ಅನೇಕ ಬಣಗಳಾಗಿ ವಿಘಟಿತವಾಗಿರುವ ಕಮ್ಯುನಿಸ್ಟ್ ಚಳವಳಿ ಬಹುಮುಖ್ಯವಾದ ಜನಹೋರಾಟಗಳನ್ನು ಈ ದೇಶದಲ್ಲಿ ಮುನ್ನಡೆಸಿಕೊಂಡು ಬಂದಿದೆ. ಈ ಹೋರಾಟಗಳಲ್ಲಿ ಅವರು ವಹಿಸಿದ ನಾಯಕತ್ವ ಹಾಗೂ ಪರಿಶ್ರಮಗಳನ್ನು ಕಡೆಗಣಿಸುವಂತಿಲ್ಲ. ಅಂತೆಯೇ ಕೆಲವೊಮ್ಮೆ ಸಾಂಸ್ಕೃತಿಕವಾಗಿ ಮಹತ್ವವೆನಿಸುವ ಅನೇಕ ಪ್ರಶ್ನೆಗಳನ್ನೂ ಈ ಸಂಘಟಿತ ಎಡಪಂಥ ಎತ್ತಿದೆ. ಆದರೆ ಆಧುನಿಕ ಭಾರತದ ವಿಸ್ತೃತವಾದ ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡಿದಾಗ ಭಾರತದ ಎಡಪಂಥೀಯತೆ; ಬಲಪಂಥೀಯತೆಯ ಸಾಂಸ್ಕೃತಿಕ ರಾಜಕಾರಣದ ಎದುರಿಗೆ ನಿಸ್ತೇಜಗೊಂಡಂತೆ ಕಾಣಿಸುತ್ತದೆ.

ಕಳೆದ ಮೂವತ್ತು ವರ್ಷಗಳಲ್ಲಿ ಬಲಪಂಥೀಯತೆಯ ಸಾಂಸ್ಕೃತಿಕ ರಾಜಕಾರಣಕ್ಕೆ ಸಿಕ್ಕಿರುವ ಯಶಸ್ಸು ಹಾಗೂ ಜನಸಮುದಾಯಗಳ ಮೇಲೆ ಇಂದು ಅದು ಸಾಧಿಸಿರುವ ಹಿಡಿತ ಅದರ ದೀರ್ಘಕಾಲೀನ ಪರಿಶ್ರಮದ ರಾಜಕಾರಣದ ಫಲಶೃತಿ ಎನ್ನಬೇಕು. ಸಂಘಪರಿವಾರದ ಸಂಘಟನೆಗಳು ನಿರಂತರವಾಗಿ ನಡೆಸಿದ ಪ್ರಯತ್ನದ ಫಲವನ್ನು ಈಗ ಅವರು ಅನುಭವಿಸುತ್ತಿದ್ದಾರೆ. ಆಂಟೋನಿಯೋ ಗ್ರಾಂಶಿ ಹೇಳುವ ಸಾವಯವ ಬುದ್ಧಿಜೀವಿಗಳಂತೆ ಕಾಣಿಸುವ ಸಂಘಪರಿವಾರದ ಪ್ರಚಾರಕರ, ಕಾರ್ಯನಿರ್ವಾಹಕರ, ಬೌದ್ಧಿಕ ಪ್ರಮುಖರುಗಳ ಒಂದು ದೊಡ್ಡ ತಂಡವೇ ಬಲಪಂಥದ ಸಾಂಸ್ಕೃತಿಕ ರಾಜಕಾರಣದ ಬೆನ್ನೆಲುಬು. ಬಲಪಂಥೀಯ ರಾಜಕಾರಣ ಜನರ ದೈನಂದಿನ ಕಷ್ಟ-ಕಾರ್ಪಣ್ಯಗಳನ್ನು ಮರೆಮಾಚಲು ಭವ್ಯ ಭವಿಷ್ಯದ ಭರವಸೆಗಳನ್ನು ನೀಡುವಲ್ಲಿ ಶಕ್ತವಾಗಿದೆ. ಅದು ಇಲ್ಲದ ಶತ್ರುವನ್ನು ಸೃಷ್ಟಿಸಿ ಆ ಶತ್ರುವಿನ ವಿನಾಶಕ್ಕಾಗಿ ಜನಸಮುದಾಯಗಳ ಭಾವನೆಗಳನ್ನು ಉಕ್ಕೇರಿಸುತ್ತಿದೆ.

ಈ ಮಾತಿನ ಅರ್ಥ ಎಡಪಂಥ ತನ್ನ ಸಿದ್ಧಾಂತವನ್ನು ಬಿಟ್ಟುಕೊಡಬೇಕೆಂದಲ್ಲ. ತನ್ನ ಸಿದ್ಧಾಂತದ ಕಾಳಜಿಗಳನ್ನು ಜನಸಮುದಾಯಗಳ ಪ್ರಜ್ಞಾವಲಯದ ಭಾಗವಾಗಿಸುವ ದಾರಿಗಳನ್ನು ಅದು ಪರಿಶೋಧಿಸುತ್ತಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ಎಡಪಂಥ ತನ್ನ ಸಿದ್ಧಾಂತದ ನೆಲೆಯಿಂದಲೇ ಜನಸಮುದಾಯಗಳ ದೈನಂದಿನ ಕಷ್ಟ-ಕಾರ್ಪಣ್ಯಗಳಿಗೆ ಪ್ರತಿಸ್ಪಂದಿಸುತ್ತಿದೆ. ಆದರೆ ಇದರ ಜೊತೆಗೆ ಬಲಪಂಥೀಯ ರಾಜಕಾರಣ ಮುಂದಿಟ್ಟಿರುವ ಭವ್ಯ ಭರವಸೆಗಳನ್ನು ಪೆಳ್ಳೆಂದು ತೋರಿಸುವಲ್ಲಿ ಆಗಲೀ, ಅಥವಾ ಅದು ಕೃತಕವಾಗಿ ಸೃಷ್ಟಿಸಿದ ವೈರಿಯ ಮಾಯಾಜಾಲವನ್ನು ಛಿದ್ರಗೊಳಿಸುವಲ್ಲಿಯಾಗಲಿ ಎಡಪಂಥ ಯಶಸ್ವಿಯಾಗಿಲ್ಲ. ಹೀಗಾಗಿ ಎಡಪಂಥ ತನ್ನ ಸೈದ್ಧಾಂತಿಕತೆಯನ್ನು ಜನಸಮುದಾಯಗಳ ಲೋಕದೃಷ್ಟಿಗೆ ಅನುಗುಣವಾಗುವಂತೆ ಬಿಂಬಿಸುವಲ್ಲಿ ಸೋತು ಹೋಗಿದೆ. ಈ ಮಾತಿನ ಅರ್ಥ ಎಡಪಂಥ ತನ್ನ ಸಿದ್ಧಾಂತವನ್ನು ಬಿಟ್ಟುಕೊಡಬೇಕೆಂದಲ್ಲ. ತನ್ನ ಸಿದ್ಧಾಂತದ ಕಾಳಜಿಗಳನ್ನು ಜನಸಮುದಾಯಗಳ ಪ್ರಜ್ಞಾವಲಯದ ಭಾಗವಾಗಿಸುವ ದಾರಿಗಳನ್ನು ಅದು ಪರಿಶೋಧಿಸುತ್ತಿಲ್ಲ. ಆದ್ದರಿಂದಲೇ ಬಲಪಂಥೀಯತೆಯ ಸಾಂಸ್ಕೃತಿಕ ರಾಜಕಾರಣಕ್ಕೆ ಇದಿರಾಗಿ ಅಷ್ಟೇ ಪರಿಣಾಮಕಾರಿಯಾದ ಸಾಂಸ್ಕೃತಿಕ ರಾಜಕಾರಣದ ರೂಪು-ರೇಷೆಗಳನ್ನು ಎಡಪಂಥೀಯತೆ ಇನ್ನೂ ಕಂಡುಕೊಂಡಿಲ್ಲ.

ಇಲ್ಲಿ ಎಡಪಂಥದ ಪರವಾಗಿ ಒಂದು ಮಾತನ್ನು ಹೇಳಲೇಬೇಕಾಗಿದೆ. ಭಾರತೀಯ ಬದುಕಿನ ಯಜಮಾನ ಮೌಲ್ಯಗಳ ಒಂದು ಅಧಿಕೃತವಾದ ಸ್ಥಳಾವಕಾಶ ಬಲಪಂಥೀಯ ರಾಜಕಾರಣಕ್ಕೆ ಸಲೀಸಾಗಿ ಒದಗಿ ಬಂದಿದೆ. ಈ ಸ್ಥಳಾವಕಾಶವನ್ನು ತನ್ನ ರಾಜಕಾರಣದ ಪರಿಧಿಯೊಳಗೆ ಯಶಸ್ವಿಯಾಗಿ ಬಳಸಿಕೊಳ್ಳುವಲ್ಲಿ ಬಲಪಂಥ ಮೇಲುಗೈ ಸಾಧಿಸಿದೆ. ಎಡಪಂಥಕ್ಕೆ ಈ ತರಹದ ಸ್ಥಳಾವಕಾಶವಿಲ್ಲ. ಅದು ಹೊಸಬಗೆಯ ಸಾಂಸ್ಕೃತಿಕ ಅರ್ಥನಿರೂಪಣೆಗಳ ಮೂಲಕ ಈ ಸ್ಥಳಾವಕಾಶವನ್ನು ಸೃಷ್ಟಿಸಿಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಅದರ ಸಾಧನೆ ಸಮಸ್ಯಾತ್ಮಕವಾಗಿದೆ. ಯಾಕೆಂದರೆ ತನ್ನ ಮೂಲಜಿಜ್ಞಾಸಿಕ ಸಾಂಸ್ಕೃತಿಕ ರಾಜಕಾರಣವನ್ನು ಮುನ್ನಡೆಸಬಹುದಾಗಿದ್ದ ಅಥವಾ ಅದಕ್ಕೆ ಹೊಂದಿಕೆಯಾಗಬಹುದಾದ ಚಿಂತನೆಗಳನ್ನು ಮತ್ತು ಪ್ರತಿಮೆಗಳನ್ನು ಅದು ಉಡಾಫೆಯಿಂದ ಧಿಕ್ಕರಿಸಿದೆ.

ಮೇಲಿನ ಮಾತಿಗೆ ಸಮರ್ಥನೆಯಾಗಿ ನಾಲ್ಕು ನಿದರ್ಶನಗಳನ್ನು ನಾವು ನೀಡಬಹುದು. ಈ ನಾಲ್ಕೂ ನಿದರ್ಶನಗಳು ಆಧುನಿಕ ಭಾರತದ ಸಾಂಸ್ಕೃತಿಕ ಹಾಗೂ ಬೌದ್ಧಿಕ ಚರಿತ್ರೆಯ ಭಾಗವಾಗಿರುವಂತವುಗಳು. ಬಹಳ ಮೊದಲಿನಿಂದಲೂ ಭಾರತದ ಕಮ್ಯುನಿಸ್ಟ್ ನಾಯಕರು ಮಹಾತ್ಮಾಗಾಂಧಿಯವರ ಕುರಿತು ನಿರ್ಲಕ್ಷ್ಯದ ಧೋರಣೆಯನ್ನೇ ತಾಳಿದ್ದರು. ಭಾರತದ ಪ್ರಪ್ರಥಮ ಮಾರ್ಕ್ಸ್‍ವಾದೀ ಚಿಂತಕ ಎಂದು ಕರೆಯಬಹುದಾದ ಎಂ ಎನ್ ರಾಯ್ ಅವರಿಂದ ತೊಡಗಿ ಬಹಳ ಇತ್ತೀಚಿನ ತನಕದ ಕಮ್ಯುನಿಸ್ಟ್ ನಾಯಕರು ಗಾಂಧೀಜಿನ್ನು ಭಾರತದ ಬಂಡವಾಳಶಾಹೀ ವರ್ಗದ ದಲ್ಲಾಳಿ ಎಂದೂ, ತನ್ನ ವಿಚಾರಗಳಲ್ಲಿ ಮಧ್ಯಕಾಲೀನ ಧೋರಣೆಯವನೆಂದೂ ಜರೆದಿದ್ದರು. ಅವರ ಧಾರ್ಮಿಕ ರಾಜಕಾರಣದ ಆಳದಲ್ಲಿ ಹುದುಗಿದ್ದ ಮೂಲಜಿಜ್ಞಾಸಿಕ ಸಾಂಸ್ಕೃತಿಕ ಕಾಳಜಿಗಳನ್ನು ಸಹಾನುಭೂತಿಯಿಂದ ನೋಡುವ ವ್ಯವಧಾನ ಕಮ್ಯುನಿಸ್ಟ್ ನಾಯಕತ್ವದಲ್ಲಿ ಇರಲಿಲ್ಲವೆಂದೇ ಹೇಳಬೇಕು. ತಮ್ಮ ಸಾಂಸ್ಕೃತಿಕ ರಾಜಕಾರಣಕ್ಕೆ ಸಂಪನ್ಮೂಲವಾಗಬಹುದಾದ ಗಾಂಧೀಜಿಯವರನ್ನು ತ್ಯಾಜ್ಯ ಎಂದು ಪರಿಗಣಿಸಿದ್ದು ಭಾರತದ ಎಡಪಂಥೀಯ ಚಿಂತನೆಯ ಬಹಳ ದೊಡ್ಡ ಚಾರಿತ್ರಿಕ ತಪ್ಪು ಎನ್ನಬೇಕು.

ಸಂಘಟಿತ ಎಡಪಂಥ ಪ್ರತಿನಿಧಿಸಿದ ಮಾರ್ಕ್ಸ್‍ವಾದದ ಜೊತೆಗೆ ಹೇಳಿಕೊಳ್ಳುವ ನಂಟು ಇಲ್ಲದಿದ್ದರೂ ಮಾರ್ಕ್ಸ್‍ವಾದದ ಮೂಲ ಕಲ್ಪನೆಗಳಾದ ಚಾರಿತ್ರಿಕ ಭೌತವಾದ ಹಾಗೂ ವರ್ಗಸಂಘರ್ಷದ ತತ್ತ್ವಗಳನ್ನು ಭಾರತೀಯ ಸಂದರ್ಭಕ್ಕೆ ಮರುವ್ಯಾಖ್ಯಾನಿಸಲು ಅವರು ಯತ್ನಿಸಿದರು.

ಎರಡನೆಯದಾಗಿ ಮೊನ್ನೆಮೊನ್ನೆಯವರೆಗೆ ಬಿ.ಆರ್.ಅಂಬೇಡ್ಕರ್ ಭಾರತದ ಕಮ್ಯುನಿಸ್ಟ್ ನಾಯಕತ್ವಕ್ಕೆ ಅಷ್ಟೇನೂ ಆಪ್ಯಾಯಮಾನವಲ್ಲದ ವಿದ್ಯಮಾನವಾಗಿದ್ದರು. ಜಾತಿ ಪ್ರಶ್ನೆಯನ್ನು ತನ್ನ ರಾಜಕಾರಣದ ಕೇಂದ್ರವಾಗಿರಿಸಿದ ಅಂಬೇಡ್ಕರ್ ವರ್ಗಸಂಘರ್ಷದ ವೇದವಾಕ್ಯವನ್ನು ಅನುಸರಿಸುವ ಕಮ್ಯುನಿಸ್ಟರಿಗೆ ಇಷ್ಟವಾಗಲು ಹೇಗೆ ಸಾಧ್ಯ? ಅಂಬೇಡ್ಕರ್ ಅವರನ್ನು ತನ್ನ ರಾಜಕಾರಣದಲ್ಲಿ ಅರ್ಥಪೂರ್ಣವಾಗಿ ಒಳಗೊಳ್ಳಲು ಪ್ರಯತ್ನಿಸದೇ ಇರುವುದು ಭಾರತದ ಕಮ್ಯುನಿಸ್ಟ್ ರಾಜಕಾರಣದ ಇನ್ನೊಂದು ಪ್ರಮುಖ ಲೋಪವೆನ್ನಬೇಕು.

ಆಚಾರ್ಯ ನರೇಂದ್ರ ದೇವ ಓರ್ವ ವಿಶಿಷ್ಟ ಸಾಂಸ್ಕೃತಿಕ ನೆಲೆಯ ಮಾರ್ಕ್ಸ್‍ವಾದೀ ಚಿಂತಕ. ಅವರು ಕಾಂಗ್ರೆಸ್ ಸಮಾಜವಾದೀ ಪಕ್ಷದೊಳಗೆ ಜಯಪ್ರಕಾಶ್ ನಾರಾಯಣರ ಒಡಗೂಡಿ ಮಾರ್ಕ್ಸ್‍ವಾದೀ ನೆಲೆಯ ಸಮಾಜವಾದೀ ಸಿದ್ಧಾಂತವನ್ನು ರೂಪಿಸಲು ಯತ್ನಿಸಿದರು. ಅವರಿಗೆ ಸಂಘಟಿತ ಎಡಪಂಥ ಪ್ರತಿನಿಧಿಸಿದ ಮಾರ್ಕ್ಸ್‍ವಾದದ ಜೊತೆಗೆ ಹೇಳಿಕೊಳ್ಳುವ ನಂಟು ಇಲ್ಲದಿದ್ದರೂ ಮಾರ್ಕ್ಸ್‍ವಾದದ ಮೂಲ ಕಲ್ಪನೆಗಳಾದ ಚಾರಿತ್ರಿಕ ಭೌತವಾದ ಹಾಗೂ ವರ್ಗಸಂಘರ್ಷದ ತತ್ತ್ವಗಳನ್ನು ಭಾರತೀಯ ಸಂದರ್ಭಕ್ಕೆ ಮರುವ್ಯಾಖ್ಯಾನಿಸಲು ಅವರು ಯತ್ನಿಸಿದರು. ಬೌದ್ಧ ಧರ್ಮದ ಅತಿಶ್ರೇಷ್ಠ ಚಿಂತಕರಲ್ಲಿ ಒಬ್ಬರಾದ ನರೇಂದ್ರದೇವ ಭಾರತೀಯ ನೆಲೆಯ ಸಾಂಸ್ಕೃತಿಕ ಸಂವೇದನೆಯ ಮಾರ್ಕ್ಸ್‍ವಾದೀ ಚಿಂತನೆಗೆ ಒಂದು ಆಪ್ಯಾಯಮಾನವಾದ ಉದಾಹರಣೆ. ನರೇಂದ್ರದೇವ ಸ್ವಾತಂತ್ರ್ಯಾನಂತರ ಬಹಳ ಬೇಗನೇ ನಿಧನರಾದ್ದರಿಂದ ಮತ್ತು ಅವರು ಪ್ರತಿನಿಧಿಸಿದ ಸಮಾಜವಾದೀ ಪಕ್ಷದಲ್ಲಿ ಅವರಂತೆ ಮಾರ್ಕ್ಸ್‍ವಾದವನ್ನು ಸೃಜನಶೀಲವಾಗಿ ಮುಂದುವರಿಸಿಕೊಂಡು ಹೋಗುವವರು ಯಾರೂ ಇಲ್ಲದ್ದರಿಂದ ಅವರ ಜೊತೆಗೆ ಈ ಭಾರತೀಯ ಮಾರ್ಕ್ಸ್‍ವಾದದ ಅಂತ್ಯವಾಯಿತು ಎನ್ನಬೇಕು. ಭಾರತದ ಸಂಘಟಿತ ಎಡಪಂಥ ತನ್ನ ಆಚೆಗಿರುವ ಇತರ ಬಗೆಯ ಮಾರ್ಕ್ಸ್‍ವಾದೀ ಚಿಂತನೆಯನ್ನು ಒಳಗೊಳ್ಳದಿರುವುದಕ್ಕೆ ಅದು ನರೇಂದ್ರ ದೇವರಂಥವರ ಜೊತೆಗೆ ಸಂವಾದವನ್ನು ನಡೆಸದಿರುವುದೇ ಕಾರಣ. ಹೀಗೆ ಮಾರ್ಕ್ಸ್‍ವಾದ ಭಾರತೀಯ ಸಾಂಸ್ಕೃತಿಕ ಲೋಕವನ್ನು ತನ್ನಲ್ಲಿ ನಿಹಿತಗೊಳಿಸದೆ ಉಳಿದಿರುವುದು ಅದರ ಇನ್ನೊಂದು ವೈಫಲ್ಯವೆನ್ನಬಹುದು.

ಭಾರತದ ಎಡಪಂಥದ ಇತಿ-ಮಿತಿಗಳನ್ನು ಗುರುತಿಸುವ ನೆಲೆಯಲ್ಲಿ ನಾವು ಕೊಡುವ ನಾಲ್ಕನೆಯ ನಿದರ್ಶನ ರಾಮ ಮನೋಹರ ಲೋಹಿಯಾ. ಲೋಹಿಯಾ ಭಾರತದಲ್ಲಿ ವಸಾಹತುಶಾಹೀ ಸೃಷ್ಟಿಸಿದ ಬೌದ್ಧಿಕತೆಯ ಆಚೆ ವಸಾಹತೋತ್ತರ ಸಮಾಜಗಳಿಗೆ ಸೂಕ್ತವಾಗುವ ಚಿಂತನೆ ಮತ್ತು ಹೋರಾಟದ ದಾರಿಗಳನ್ನು ಹುಡುಕಲು ಯತ್ನಿಸಿದವರು. ಕಮ್ಯುನಿಸ್ಟ್ ಆಂದೋಲನ ಮತ್ತು ಪಕ್ಷಗಳ ಕುರಿತು ಅವರ ತಕರಾರುಗಳು ಏನೇ ಇದ್ದರೂ ಮಾರ್ಕ್ಸ್‍ವಾದವನ್ನು ಹೊಸರೀತಿಗಳಲ್ಲಿ ಆವಿಷ್ಕರಿಸಲು ಅವರ ಅನೇಕ ಹೋರಾಟದ ನೆಲೆಯ ಚಿಂತನೆಗಳು ಸಹಕಾರಿಯಾಗಿವೆ. ಆದರೆ ಕಮ್ಯುನಿಸ್ಟ್ ರಾಜಕಾರಣ ಲೋಹಿಯಾರಂತಹ ಸಂಸ್ಕೃತಿ ನಿಷ್ಟ ಚಿಂತಕರನ್ನು ಭಾರತದ ಮಧ್ಯಮ ವರ್ಗದ ಪ್ರತಿನಿಧಿಯೆಂದೇ ಪರಿಗಣಿಸಿತು. ಅವರ ಸೌಂದರ್ಯ ಮತ್ತು ಮೈ ಬಣ್ಣ, ವಸಿಷ್ಟರು ಮತ್ತು ವಾಲ್ಮೀಕಿಯರು, ದ್ರೌಪದಿ ಸೀತಾ ಯಾ ಸಾವಿತ್ರಿ, ರಾಮ ಕೃಷ್ಣ ಮತ್ತು ಶಿವ ಮೊದಲಾದ ಸಾಂಸ್ಕೃತಿಕ ಒಳನೋಟಗಳಿರುವ ಲೇಖನಗಳು ಭಾರತದ ಕಮ್ಯುನಿಸ್ಟ್ ನಾಯಕತ್ವಕ್ಕೆ ಭಾವಶೀಲ (ರೊಮ್ಯಾಂಟಿಕ್) ಮೈಮರೆಯುವಿಕೆ ಎಂದನಿಸಿತೇ ಹೊರತು ಆ ಮೂಲಕ ಹೇಗೆ ಲೋಹಿಯಾ ವಿಲಕ್ಷಣವಾಗಿರುವ ಭಾರತೀಯ ಸಮಾಜದ ಸಾಮಾಜಿಕ ಏರು-ಪೇರುಗಳನ್ನು ಗುರುತಿಸಿದರು ಎನ್ನುವುದು ವೇದ್ಯವಾಗಲಿಲ್ಲ.

ಅದು ಧಿಕ್ಕರಿಸಿದ ಈಗ ಬಲಪಂಥೀಯತೆಯ ಪಾಲಾಗಿರುವ ಅನೇಕ ಚಿಂತನೆಗಳನ್ನು ಮತ್ತು ಪ್ರತಿಮೆಗಳನ್ನು ಅದು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಾಗಿದೆ ಮತ್ತು ಆ ಮೂಲಕ ಸಾಂಸ್ಕೃತಿಕವಾಗಿ ಹೆಚ್ಚು ಪೌಷ್ಟಿಕಗೊಳ್ಳಬೇಕಾಗಿದೆ.

ಇಲ್ಲಿ ನಾವು ಪ್ರಸ್ತಾವಿಸಿರುವುದು ಕೆಲವೇ ಕೆಲವು ನಿದರ್ಶನಗಳಷ್ಟೇ. ಇಂತಹ ಅನೇಕ ಬಗೆಯ ನಿರಾಕರಣೆಗಳಲ್ಲಿ ನಾವು ಸಂಘಟಿತ ಎಡಪಂಥದ ಮಡಿವಂತಿಕೆಯನ್ನು ಕಾಣಬಹುದು. ಈ ಮಡಿವಂತಿಕೆ ಪ್ರತಿನಿಧಿಸುವ ‘ಹೊರಗಿಡುವಿಕೆ’ಯಿಂದಾಗಿ ಇಂದು ಭಾರತೀಯ ಎಡಪಂಥ ಕೃಶವಾಗಿ ಕಾಣಿಸುತ್ತಿದೆ. ಆದ್ದರಿಂದ ಇಂದಿನ ನಮ್ಮ ಸಾಂಸ್ಕೃತಿಕ ರಾಜಕೀಯ ಸಂದರ್ಭದಲ್ಲಿ ಎಡಪಂಥವನ್ನು ಹೆಚ್ಚು ಮುಕ್ತವಾದ ವಿಮರ್ಶಾತ್ಮಕ ಒಳಗೊಳ್ಳುವಿಕೆಯ ರಾಜಕಾರಣಕ್ಕೆ ತೆರೆಯಬೇಕಾಗಿದೆ. ಅದು ಧಿಕ್ಕರಿಸಿದ ಈಗ ಬಲಪಂಥೀಯತೆಯ ಪಾಲಾಗಿರುವ ಅನೇಕ ಚಿಂತನೆಗಳನ್ನು ಮತ್ತು ಪ್ರತಿಮೆಗಳನ್ನು ಅದು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಾಗಿದೆ ಮತ್ತು ಆ ಮೂಲಕ ಸಾಂಸ್ಕೃತಿಕವಾಗಿ ಹೆಚ್ಚು ಪೌಷ್ಟಿಕಗೊಳ್ಳಬೇಕಾಗಿದೆ.

ಇವೆಲ್ಲವುಗಳ ಹಿನ್ನೆಲೆಯಲ್ಲಿ ಭಾರತದ ಎಡಪಂಥೀಯತೆಯನ್ನು ಆಳವಾದ ವಿಮರ್ಶಾತ್ಮಕ ನಿಷ್ಕರ್ಷೆಗೆ ಒಳಪಡಿಸುವ ಅಗತ್ಯ ಇದೆ. ಈ ನಿಷ್ಕರ್ಷೆ ಭಾರತದಂತಹ ಅಸಮಾನ ಸಮಾಜದಲ್ಲಿ ಅದರ ಮಹತ್ವವನ್ನು ಅಲ್ಲಗಳೆಯುವಂತಹುದಲ್ಲ. ಬದಲಾಗಿ ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ನೆಲೆಗಳಲ್ಲಿ ಗಂಭೀರವಾದ ಸಂಕಟದಲ್ಲಿರುವ ಭಾರತದಂತಹ ವಸಾಹತೋತ್ತರ ಸಮಾಜಕ್ಕೆ ಮೌಲ್ಯಾತ್ಮಕವಾಗಿ ಅಗತ್ಯವಿರುವ ಸಾಂಸ್ಕೃತಿಕ ರಾಜಕಾರಣವನ್ನು ಎಡಪಂಥ ಒಳಗೊಳ್ಳಬೇಕಾಗಿದೆ ಎನ್ನುವುದು ನಮ್ಮ ಕಾಳಜಿ. ಈ ಒಳಗೊಳ್ಳುವಿಕೆ ತನ್ನ ಆಚೆಗಿನ ತತ್ತ್ವವನ್ನು ತನ್ನೊಳಗೆ ಅಂತರ್ಗತಗೊಳಿಸುವ ಸೃಜನಶೀಲ ಪ್ರಕ್ರಿಯೆಯಾಗಿದೆ. ವಿಭಿನ್ನವಾದ ದೃಷ್ಟಿಕೋನಗಳನ್ನು ಸಂವಾದಗಳ ಮೂಲಕ ತನ್ನ ತಾತ್ತ್ವಿಕ ಪರಿಧಿಯೊಳಗೆ ತರುವ ಈ ಕ್ರಿಯಾಚರಣೆಯನ್ನೇ ರಾಜಕೀಯ ತತ್ತ್ವಗಳ ವರ್ಗಾವಣೆ ಎಂದು ಕರೆಯುವುದಾಗಿದೆ.

*ರಾಜಾರಾಮ ತೋಳ್ಪಾಡಿಯವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರು. ನಿತ್ಯಾನಂದ ಬಿ.ಶೆಟ್ಟಿಯವರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಇಬ್ಬರೂ ಕಳೆದ ಒಂದು ವರ್ಷದಿಂದ ಸಾರ್ವಜನಿಕ ವಲಯದ ಅನೇಕ ವಿಷಯಗಳ ಬಗ್ಗೆ ಜೊತೆಯಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.

Leave a Reply

Your email address will not be published.