‘ಸಾಂಸ್ಕೃತಿಕ’ ಮನಸ್ಸಿನ ಒಳ ಸೂಕ್ಷ್ಮಗಳು…

ಉದ್ಯಮಿ ನಾರಾಯಣಮೂರ್ತಿ ಅವರು ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಚರ್ಚಾರ್ಹವಾಗಿವೆ. ಅವರು ದೊಡ್ಡ ಉದ್ಯಮಶೀಲ ವ್ಯಕ್ತಿ. ನಾನು ‘ಸಂಸ್ಕೃತಿ ಕುರಿತು ಎಂ.ಎ. ಪದವಿ ತರಗತಿಯಲ್ಲಿ ಜಗತ್ತಿನ ಬಹುದೊಡ್ಡ ಸಂಸ್ಕೃತಿ ಚಿಂತಕ ಕ್ರೋಬರ್ ಅಂತಹವರ ವ್ಯಾಖ್ಯೆಯನ್ನು ಓದಿಕೊಂಡ, ಒಪ್ಪಿಕೊಂಡ, ಕಳೆದ ಮೂವತ್ತು ವರ್ಷಗಳಿಂದ ನಾಡಿನ ಅನೇಕ ಸಮುದಾಯಗಳನ್ನು ಅದೇ ನೆಲೆಯಲ್ಲಿ ಅಧ್ಯಯನ ಮಾಡಿ  ಕೃತಿಗಳನ್ನು ರಚಿಸಿರುವ ಒಂದಿಷ್ಟು ತಿಳಿವಳಿಕೆಯ ಹಿನ್ನೆಲೆಯಲ್ಲಿ ಅವರ ಅಭಿಪ್ರಾಯಗಳಿಗೆ ಹೀಗೆ ಪ್ರತಿಕ್ರಿಯಿಸಬಯಸುತ್ತೇನೆ:

 – ಡಾ.ಟಿ.ಗೋವಿಂದರಾಜು

1 ಶ್ರೀಯುತರ ಸದರಿ ಅಭಿಪ್ರಾಯಗಳು, ಇಂದು ಈ ದೇಶ ಮಠಮಾನ್ಯಗಳ ಹಿಡಿತಕ್ಕೆ ಸಿಕ್ಕಿ, ಭ್ರಷ್ಟ ರಾಜಕೀಯವು ಅಂತಹ ಧಾರ್ಮಿಕ ವ್ಯವಸ್ಥೆಯ ಹಿತಾಸಕ್ತಿಗೆ ಬೇಕಾದ ಎಲ್ಲಾ ಸೇವೆಗಳಿಗೂ ಕಟಿಬದ್ಧವಾಗಿರುವ ಸ್ಥಿತಿಯತ್ತ ನಮ್ಮ ಗಮನ ಹರಿಸಲು ಪ್ರಚೋದಕವಾಗಿವೆ. ದೇಶದಲ್ಲಿನ ವೈಜ್ಞಾನಿಕ ಸಂಶೋಧನೆ ಹಿಂದಿಳಿರುವಿಕೆಗೆ ಈ ಎರಡೂ ಪ್ರಬಲ ಶಕ್ತಿಗಳು ಅಡ್ಡಿಯಾಗಿವೆ. ‘ಈ ದೇಶದ ಬಡತನ, ಸಾಮಾಜಿಕ ಸಂಕಟಗಳಿಗೆ ಇಲ್ಲಿನವರಲ್ಲಿ ಅನಕ್ಷರತೆ ಹಾಗೂ ಮೌಢ್ಯಗಳನ್ನು ಬೆಳೆಸುತ್ತಿರುವ ಪುರೋಹಿತಶಾಹಿಯೇ ಕಾರಣ..’ ಎಂಬರ್ಥದಲ್ಲಿ ಸ್ವಾಮಿ ವಿವೇಕಾನಂದರು ದಶಕಗಳ ಹಿಂದೆಯೇ ಆಕ್ರೋಶಭರಿತರಾಗಿ ಹೇಳಿದ್ದರಲ್ಲಿಯೇ ನಾರಾಯಣಮೂರ್ತಿಯವರ ಅನಿಸಿಕೆಗೆ ಉತ್ತರವಿದೆ. 

ದೇಶದ ಅಭಿವೃದ್ಧಿಗೆ ಸ್ವಾಮೀಜಿಗಳು ಮಾರ್ಗದರ್ಶನ ನೀಡಬೇಕು-ಎಂದು ರಾಜಕಾರಣಿಗಳೂ, ಧರ್ಮ, ಸಂಸ್ಕೃತಿಗಳನ್ನು ನಿರ್ಲಕ್ಷಿಸುತ್ತಿರುವುದೇ ದೇಶದ ಅಧೋಗತಿಗೆ ಕಾರಣವೆಂದು ಹೆಚ್ಚಿನ ಕಾವೀಧಾರಿಗಳೂ ಅಲವತ್ತುಕೊಳ್ಳುತ್ತಿರುವುದರಲ್ಲಿ ದೇಶದ ಭವಿಷ್ಯದ ತಾತ್ಪರ್ಯವಿದೆ. ವೈಚಾರಿಕ ಹಾಗೂ ವೈಜ್ಞಾನಿಕ ಪ್ರಗತಿಯ ಮಹತ್ವದ ಬಗ್ಗೆ ಇವರಾರೂ ಮಾತಾಡುವುದಿಲ್ಲ. ಹೆಚ್ಚೆಂದರೆ ತಮ್ಮ ಸಂಸ್ಥೆಗಳಲ್ಲಿ ಹೊಸ ಕೋರ್ಸುಗಳನ್ನು ತೆರೆದು ಹೇಗೆ ಸಂಪಾದಿಸಬಹುದೆಂಬುದಷ್ಟಕ್ಕೇ ಅವರ ಕಾಳಜಿ ಇರುತ್ತದೆ.

‘ಇನ್ನೊಬ್ಬರದನ್ನು ಕದಿಯುವುದು, ಅಪ್ರಾಮಾಣಿಕತೆಗಳು’ ಕೇವಲ ಸಾಮಾನ್ಯ ಪ್ರಜೆಗಳಿಗಷ್ಟೇ ಮೀಸಲಾಗದೆ, ಇಲ್ಲಿನ ಅದೆಷ್ಟೋ ಸ್ವಾಮಿಗಳು, ರಾಜಕಾರಣಿಗಳು, ಉದ್ದಿಮೆದಾರರ ಬದುಕಿನ ಮಾರ್ಗವೇ ಆದಂತಿದೆ! ಇಂತಹ ಈ ಕಾವಿ ಮತ್ತು ಖಾದಿಗಳು ಮನಸು ಮಾಡಿದರೆ, ಒಂದಷ್ಟು ಮನುಷ್ಯರಾಗಿ ಉದಾರವಾಗಿ  ಬದಲಾಗಿ ಪ್ರಯತ್ನಿಸಿದರೆ ಈ ದೇಶದ ವೈಜ್ಞಾನಿಕ ಪ್ರಗತಿ ನವಗ್ರಹಗಳನ್ನೂ ವ್ಯಾಪಿಸಿ ಬೆಳೆಯುವುದು  ಕಷ್ಟವೇನಲ್ಲ. ಹಾಗಿಲ್ಲವಾದರೆ ಹಳೇ ದೇವಸ್ಥಾನಗಳ ಜಾಗದಲ್ಲಿ ಥಳಫಳ ಮಿನುಗುವ ಹೊಸಾ ಗುಡಿಗೋಪುರಗಳು ಪೈಪೋಟಿಯಲ್ಲಿ ಎಲ್ಲೆಡೆ  ತಲೆ ಎತ್ತಬಹುದು, ಅಷ್ಟೆ.

ನಾರಾಯಣಮೂರ್ತಿಯವರೂ ತಮಗೆ ಹತ್ತಿರವಾದ ಮಠಗಳ, ರಾಜಕಾರಣಿಗಳ ಸಂಸ್ಥೆಗಳಲ್ಲಿ  ಉನ್ನತಮಟ್ಟದ ಸಂಶೋಧನಾಂಗಗಳನ್ನು ಪ್ರಾರಂಭಿಸಿ ಅರ್ಹರನ್ನು ಅದರಲ್ಲಿ ತೊಡಗಿಸುವಂತಾದರೆ ಕೇವಲ ಎರಡುಮೂರು ದಶಕದಲ್ಲೇ ಬೇಕಾದಷ್ಟು ವಿಕ್ರಮಗಳನ್ನು ಸಾಧಿಸುವಂತಹ ಬುದ್ಧಿವಂತ ಯುವಶಕ್ತಿ  ನಮ್ಮಲ್ಲಿದೆ. ಏಕೆಂದರೆ, ಅಷ್ಟೇನೂ ಅನುಕೂಲವಿಲ್ಲದಿದ್ದರೂ ಕೇವಲ ಕಳೆದ 50 ವರ್ಷಗಳಲ್ಲಿಯೇ ಈ ದೇಶ ಜಾಗತಿಕಮಟ್ಟದಲ್ಲಿ ಮುಂಚೂಣಿಯಲ್ಲಿ ನಿಂತಿದೆ.

2  ‘ಸಂಸ್ಕೃತ ಕಲಿಯದವರಲ್ಲಿ ಸಂಸ್ಕೃತಿ ಇರುವುದಿಲ್ಲ’ ಎಂದು ಹೆಚ್ಚಿನವರು ಪ್ರತಿಪಾದಿಸುತ್ತಿರುವ ಹೊತ್ತಿನಲ್ಲಿ ನಾರಾಯಣಮೂರ್ತಿಯವರು ಯಾವ ಬಗೆಯ ‘ಸಂಸ್ಕೃತಿ’ ‘ಅರ್ಹತೆ’ಗಳ ಬಗ್ಗೆ ಚಿಂತಿತರಾಗಿದ್ದಾರೆ ಎಂಬುದೂ ಮುಖ್ಯ. ಚಿಂತಕ ಕ್ರೋಬರ್ ಪ್ರಕಾರ ಜಗತ್ತಿನಲ್ಲಿ ಎಲ್ಲಾ ಸಮುದಾಯಗಳಿಗೂ ತಮ್ಮದೇ ಆದ ರೀತಿ ನೀತಿಯ ಸಂಸ್ಕೃತಿ ಇವೆ. ಅದರಲ್ಲಿ ಯಾವುದೂ ಶ್ರೇಷ್ಠವೂ ಅಲ್ಲ, ಕನಿಷ್ಟವೂ ಅಲ್ಲ. ಆದ್ದರಿಂದ, ಯಾರೇ ಆದರೂ ‘ಅರ್ಹತೆ, ಪ್ರಾಮಾಣಿಕತೆ’ ಗಳನ್ನು ಕೇವಲ ‘ಸಂಸ್ಕೃತಿ’ಗೆ ಲಗತ್ತಿಸುವ ಆತುರದಲ್ಲಿ ಪ್ರತಿಯೊಬ್ಬನಲ್ಲೂ ಇರಲೇಬೇಕಾದ ‘ನಾಗರಿಕ ಪ್ರಜ್ಞೆ’ಯನ್ನು ನಿರ್ಲಕ್ಷಿಸಬಾರದು.

ಸಂಶೋಧನೆಯಲ್ಲಿ ಮುಂದುವರೆದ ಅದೆಷ್ಟೋ ದೇಶಗಳ ಕೆಲವೊಂದು ಸಾಮಾಜಿಕ, ಸಾಂಸ್ಕೃತಿಕ ಸಂಗತಿಗಳು ‘ಪ್ರಗತಿ ಕಾಣದ’ ದೇಶಗಳಿಗೆ ಒಪ್ಪಿಗೆಯಾಗುವುದೇ ಇಲ್ಲವಲ್ಲ! ಆದಾಗ್ಯೂ, ನಾರಾಯಣಮೂರ್ತಿಯವರ ಮಾತುಗಳಲ್ಲಿನ ಒಂದು ಕಾಳಜಿ ನಮ್ಮ ವ್ಯವಸ್ಥೆಯ ಕಣ್ಣು ತೆರೆಸುವಂತಾದರೆ ನಿಜಕ್ಕೂ ಒಳ್ಳೆಯದು: ಹೌದು, ‘ನಮ್ಮ ಮೇಧಾವಿಗಳನ್ನು ನಮ್ಮ ದೇಶದಲ್ಲಿಯೇ ಉಳಿಸಿಕೊಳ್ಳುವಂತಾಗಬೇಕು’. ಅದು ಸಾಧ್ಯವಾಗದಿದ್ದರೂ, ಇರುವವರಿಗೆ ಪೂರ್ಣ ಪ್ರೋತ್ಸಾಹ ಕೊಡುವಂತಾದರೆ ಆಗಲೂ ಹೆಚ್ಚಿನ ಪ್ರಗತಿ ಸಾಧ್ಯವಾಗುತ್ತದೆಯಲ್ಲವೇ?

3 ಸಿ.ಎ.ಎ., ಎನ್.ಆರ್.ಸಿ. ಅಂತಹ ಭೂತಗಳು ದೇಶವನ್ನು ತಲ್ಲಣ ಗೊಳಿಸುತ್ತಿರುವ ಹೊತ್ತಿನಲ್ಲಿ ಸಜ್ಜನರಾದ ನಾರಾಯಣಮೂರ್ತಿ ಯವರ ‘ಅಪ್ರಾಮಾಣಿಕತೆ, ದೇಶದ ಬಗ್ಗೆ ನಿರ್ಲಕ್ಷ್ಯ… ಗಳು ಪ್ರಗತಿ ಕಾಣದ ದೇಶದ ಗುಣಲಕ್ಷಣಗಳಾಗಿವೆ’ ಎಂಬ ಮಾತುಗಳು, ‘ಸಂಸ್ಕøತವೇ ದೇಶ ಭಾಷೆಯಾಗಬೇಕು; ಅದರಿಂದಲೇ ವೈಚಾರಿಕತೆ ಬೆಳವಣಿಗೆ ಸಾಧ್ಯ..’ ಎಂಬ ಇಂಗಿತದಲ್ಲಿ ಕಲಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿಯವರು ಆಡಿದರೆನ್ನಲಾದ ಮಾತುಗಳು ‘ಒಂದೇ ಸಂಸ್ಕೃತಿ’ಯನ್ನು ಪ್ರತಿಪಾದಿಸಿದರೆ ಅದಕ್ಕೆ ಯಾರು ಹೊಣೆಯಾದಾರು?

Leave a Reply

Your email address will not be published.