ಸಾಂಸ್ಕೃತಿಕ ಹೊಣೆಗಾರಿಕೆ ಹೊತ್ತ ಮುಖ್ತಿಯಾರ್ ಅಲಿ

ಮುಖ್ತಿಯಾರ್ ಹೊನ್ನಾವರಕ್ಕೆ ಗಾಂಧಿ ಜಯಂತಿಯಂದು ಹಾಡಲು ಬಂದಾಗ (2019), ಡಾ.ಎಚ್.ಎಸ್.ಅನುಪಮಾ ಅವರ ಮನೆಯಲ್ಲಿ ವಾರಕಾಲ ಉಳಿದಿದ್ದರು. ಆಗ ಸಂದರ್ಶನವನ್ನು ಮಾಡಲಾಯಿತು. ಉರ್ದುವಿನಲ್ಲಿರುವ ಸಂದರ್ಶನ ಕನ್ನಡಕ್ಕೆ ಅನುವಾದಗೊಂಡು ಅಕ್ಷರರೂಪಕ್ಕೆ ಬರುವಾಗ, ಮಾತು, ಹಾವಭಾವ ಮತ್ತು ಹಾಡಿಕೆಗಳಲ್ಲಿ ವ್ಯಕ್ತವಾದ ನಾದ, ಅರ್ಥ ಮತ್ತು ಧ್ವನಿಗಳನ್ನು ಕಳೆದುಕೊಂಡಿದೆ. ಮುಗ್ಧ ಮತ್ತು ಸಾದಾಸೀದ ವ್ಯಕ್ತಿತ್ವದ ಮುಖ್ತಿಯಾರ್, ಮಿರಾಸಿ ಪರಂಪರೆ, ಆಧುನಿಕತೆ, ತಮ್ಮ ಕಲ್ಪನೆಯ ಭಾರತದ ಬಗ್ಗೆ ಆಡಿರುವ ಮಾತುಗಳು ಮೌಲಿಕವಾದವು. ಬಗೆಯ ಸಾಂಸ್ಕೃತಿಕ ಹೊಣೆಗಾರಿಕೆಯ ಪ್ರಜ್ಞೆಯನ್ನು ನಾನು ಪಂಡಿತ್ ರಾಜೀವ ತಾರಾನಾಥರನ್ನು ಸಂದರ್ಶನ ಮಾಡುವಾಗ ಕಂಡಿದ್ದೆ. ಕರ್ನಾಟಕ ಸಂಗೀತದ ಟಿ.ಎನ್.ಕೃಷ್ಣ ಅವರ ಮಾತುಕತೆಗಳಲ್ಲಿ ಕಂಡಿರುವೆ. ಹಲವು ಧರ್ಮ ಸಂಸ್ಕೃತಿ ಭಾಷೆಗಳ ಗರ್ಭದಲ್ಲಿ ಮೈದಳೆವ ವಿಷಯಕ್ಕೆ ಹೋಲಿಸಿದರೆ, ದಕ್ಷಿಣಾದಿ ಸಂಗೀತಕ್ಕಿಂತ ಹಿಂದೂಸ್ತಾನಿ ಸಂಗೀತವು ಹೆಚ್ಚು ಸಂಕರಶೀಲ ಮತ್ತು ಜಾತ್ಯತೀತ ಅನಿಸುತ್ತದೆ.

-ರಹಮತ್ ತರೀಕೆರೆ

ಚಿತ್ರಗಳು: ಡಾ.ಕೃಷ್ಣ

 

 

 

 

 

ನೀವು ಕರ್ನಾಟಕದಲ್ಲಿ ಬಹಳ ಜನಪ್ರಿಯರಾಗಿದ್ದೀರಿ.

ನನ್ನ ಜನ್ಮಭೂಮಿ ರಾಜಸ್ತಾನ. ಕರ್ಮಭೂಮಿ ಕರ್ನಾಟಕ. ನನ್ನ ಮೊದಲ ಕಾರ್ಯಕ್ರಮ ದಸರಾ ಉತ್ಸವದಲ್ಲಾಯಿತು. ನಂತರ ಮೈಸೂರಿನ `ಬಹುರೂಪಿ ಉತ್ಸವ’ದಲ್ಲಿ ಹಾಡಿದೆ. ಹಂಪಿ, ಸಾಗರ ಹೊನ್ನಾವರ ಧಾರವಾಡ ಗದಗ ಕೋಲಾರ ಬೆಂಗಳೂರುಗಳಲ್ಲಿ ಜನ ಕರೆಸಿದರು. ರಾಜಸ್ತಾನದಲ್ಲಿ ಸಿಕ್ಕಿದ್ದಕ್ಕಿಂತ ಹೆಚ್ಚಿನ ಪ್ರೀತಿ ಕೀರ್ತಿ ಹಣ ಇಲ್ಲಿ ಸಿಕ್ಕಿದೆ.

 

 

 

 

ನಿಮ್ಮ ಜನ್ಮಭೂಮಿಯಲ್ಲಿ ಯಾಕೆ ಬೆಂಬಲವಿಲ್ಲ?

ಅಲ್ಲಿ ಉಸಿರು ಸಿಕ್ಕಿಕೊಂಡಂತಾಗುತ್ತದೆ. ನಮ್ಮ ಸಂಸ್ಕøತಿಯು ಪಂಜಾಬ್ ಗಡಿಯಲ್ಲಿರುವ ಗಂಗಾನಗರದಿಂದ ಶುರುವಾಗಿ, ರಾಜಸ್ತಾನ ಒಳಗೊಂಡು ಗುಜರಾತಿನ ಕಛ್‍ತನಕ ಹಬ್ಬಿದೆ. ಇದೆಲ್ಲವೂ ಗಡಿಭಾಗ. ಇಲ್ಲಿನ ಮುಸ್ಲಿಮರು ಗಾನಾಬಜಾನ ಕೇಳಲು ನಿಲ್ಲಿಸಿದರು. ಒಮ್ಮೆ ನಮ್ಮೂರ ಮಸೀದಿಯಲ್ಲಿ ಒಬ್ಬ ಎದ್ದುನಿಂತು `ಮಿರಾಸಿಗಳಿಂದ ಚಂದಾ ಪಡೆಯುವುದು ಹರಾಂ’ ಎಂದು ಹೇಳಿದ. ನನ್ನ ತಮ್ಮನ ಮಗ ಚಂದಾ ರಶೀದಿಯನ್ನೆಲ್ಲ ಒಯ್ದು ಮುಂದಿಟ್ಟು `ನಮ್ಮ ಹಣ ಹರಾಂ ಆಗಿದ್ದರೆ ವಾಪಾಸು ಕೊಡಿ. ನಾವು ಗುಡಿಗೆ ಕೊಡುತ್ತೇವೆ’ ಎಂದ. ಅವನ ತೀರ್ಮಾನ ಸರಿಯಿತ್ತು. ಯಾಕೆಂದರೆ ಮಸೀದಿ ಮಂದಿರಗಳ ನಡುವೆ ಭೇದವಿಲ್ಲ ಎಂದು ಹೇಳಬೇಕಿತ್ತು. ನಾವು ಮಂದಿರಗಳಲ್ಲೂ ಹಾಡುವವರು.

ನಿಮ್ಮನ್ನು ಗಾಯಕರಾಗಿ ರೂಪಿಸಿದ ಪರಿಸರದ ಬಗ್ಗೆ ತಿಳಿಸಿರಿ 

ನಮ್ಮೂರು ರಾಜಸ್ತಾನದ ಪೂಗಲ್. ಜೈಸಲ್ಮೇರ್ ಜಿಲ್ಲೆಯಲ್ಲಿದೆ. ಹಿಂದೆ ಅದು ರಾಜಸಂಸ್ಥಾನವಾಗಿತ್ತು. ಈಗಲೂ ಅರಮನೆ ಕೋಟೆಯ ಅವಶೇಷಗಳಿವೆ. ಇಲ್ಲಿ ಮಿರಾಸಿ ಸಂಗೀತಗಾರರು ಹೆಚ್ಚಾಗಿರುವರು. ಪಾಕಿಸ್ತಾನದ ಗಡಿ ನಮ್ಮೂರಿಂದ 47 ಕಿಮೀ. ವಿಭಜನೆಗೆ ಮುಂಚೆ ನಮ್ಮ ಹಿರಿಯರು ನಡೆದುಕೊಂಡೇ ಈಗ ಗಡಿಯಾಚೆಗಿರುವ ಊರುಗಳಿಗೆ ಹೋಗುತ್ತಿದ್ದರು. ಅಲ್ಲಿ ನಮ್ಮ ಬಂಧುಗಳಿದ್ದರು. ದರ್ಗಾಗಳಿದ್ದವು. ಆದರೆ ದೇಶ ವಿಭಜನೆಯಾದಾಗ ಪೂಗಲಿನ ಮುಸ್ಲಿಮರು ವಲಸೆ ಹೋಗಲಿಲ್ಲ. ಪಂಜಾಬಿನಲ್ಲಾದಂತೆ ಇಲ್ಲಿ ಹಿಂಸಾಚಾರ ಸಂಭವಿಸಲಿಲ್ಲ. ಒಂದು ಎಲೆಯೂ ಅಲುಗಾಡಲಿಲ್ಲ. ಪೂಗಲ್‍ನ ರಾಜ `ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಇಲ್ಲಿ ಯಾರೂ ನಿಮಗೆ ತೊಂದರೆ ಕೊಡುವುದಿಲ್ಲ. ನೆಮ್ಮದಿಯಿಂದ ಇರಿ’ ಎಂದು ಹೇಳಿ ನಮ್ಮನ್ನು ಇರಿಸಿಕೊಂಡ. ನಮ್ಮಲ್ಲಿ ಅನೇಕರಿಗೆ ದೇಶ ವಿಭಜನೆಯಾಗಿದೆ, ಹಿಂಸಾಚಾರವಾಗುತ್ತಿದೆ ಎಂಬುದೂ ಗೊತ್ತಾಗಲಿಲ್ಲ.

ಮಿರಾಸಿ ಸಮುದಾಯದ ವಿಶೇಷತೆಯೇನು?

ಪೈಗಂಬರ್ ಕಾಲದಲ್ಲಿ ಆಸ್ಸಾ ಕಾಸ್ಸಾ ಎಂಬ ಸೋದರರಿದ್ದರು. ಇವರು ನಮ್ಮ ಪೂರ್ವಜರು. ಇವರು ದಮಾಮ್ ವಾದ್ಯ ಬಾರಿಸುತ್ತಿದ್ದರು. ಇವರ ಹಾಡುಗಳನ್ನು ಪೈಗಂಬರ್ ಇಷ್ಟಪಟ್ಟು ಕೇಳುತ್ತಿದ್ದರು. ನೀವು ಓದು-ಬರೆಹವಿಲ್ಲದೆಯೂ ವಿದ್ವಾಂಸರಾಗಿರಿ ಎಂದು ಹರಸಿದರು. ಭಾರತದಲ್ಲಿ ನಮ್ಮ ಹಿರೀಕರು ಫರೀದ್‍ಕೋಟ್‍ಗೆ ಹೋಗುವುದು, ಫರೀದಸಾಹೇಬರ ದರ್ಗಾದಲ್ಲಿ ಹಾಡುವುದು; ಮಿಥನ್‍ಕೋಟ್‍ಗೆ ಹೋಗುವುದು ಸೂಫಿಕವಿ ಗುಲಾಂ ಫರೀದ್ ದರ್ಗಾದಲ್ಲಿ ಹಾಡುವುದು- ಹೀಗೆ ದರ್ಗಾದಿಂದ ದರ್ಗಾಕ್ಕೆ ಮದುವೆಯಿಂದ ಮದುವೆಗೆ ಚಲಿಸುತ್ತಿದ್ದರು. ರಾಜಸ್ತಾನದ ಊರುಗಳಲ್ಲಿ ಪ್ರಾಯಕ್ಕೆ ಬಂದ ಮಕ್ಕಳ ಮದುವೆ ವರ್ಷಕ್ಕೊಮ್ಮೆ ಒಟ್ಟಿಗೇ ಆಗುತ್ತಿತ್ತು. ಆಗ ಇಡೀ ಪ್ರದೇಶದಲ್ಲಿ ಹರಡಿಹೋಗಿದ್ದ ನೆಂಟರು ಒಟ್ಟುಗೂಡುತ್ತಿದ್ದರು. ಮದುಮಕ್ಕಳ ಮನೆಯವರಿಗೆ ಊಟ ಹಾಕಿಸುವುದಷ್ಟೇ ಖರ್ಚು. ಒಂದು ತಿಂಗಳು ನಡೆಯುತ್ತಿದ್ದ ಈ ಮದುವೆಗಳಿಗೆ ಮಿರಾಸಿಗಳು ಬರುತ್ತಿದ್ದರು. ನೆಲದಲ್ಲಿ ಕೂತು ಹಾಡುತ್ತಿದ್ದರು.  ಹಾಡು ಕೇಳುವುದಕ್ಕೆಂದೇ ಕೆಲವರು ಬರುತ್ತಿದ್ದರು. ಅವರು ಕೊಟ್ಟ ಸಂಭಾವನೆಯಲ್ಲಿ ಜೀವನ ಮಾಡುತ್ತಿದ್ದರು.

ಪರಂಪರೆ ಈಗಲೂ ಉಳಿದುಕೊಂಡಿದೆಯಾ?

ಇಲ್ಲ. ಎಲ್ಲ ಅಳಿದುಹೋಗಿದೆ. ಪಾಕಿಸ್ತಾನದಿಂದ ನಿರಾಶ್ರಿತರಾಗಿ ಲಕ್ಷಾಂತರ ಜನ ರಾಜಸ್ತಾನಕ್ಕೆ ಬಂದರು. ಅವರಿಗೆ ಇಲ್ಲಿ ಆಶ್ರಯ ಕಲ್ಪಿಸಲಾಯಿತು. ಒಂದು ಲಕ್ಷದಷ್ಟು ಜನರನ್ನು ಪೂಗಲ್ ಪ್ರದೇಶದಲ್ಲಿ ನೆಲೆಗೊಳಿಸಲಾಯಿತು. ಗಡಿಭಾಗದಲ್ಲಿ ಮಿಲಿಟರಿ ಫೈರಿಂಗ್‍ಗಾಗಿ ಕೆಲವು ಹಳ್ಳಿಗಳನ್ನು ಖಾಲಿ ಮಾಡಿಸಿದರು. ಅಲ್ಲಿಯ ಜನರನ್ನು ತಂದು ನಮ್ಮಲ್ಲಿ ಕೂರಿಸಿದರು. ಪಂಜಾಬಿನಿಂದ ನೀರಿನ ಕಾಲುವೆ ಬಂದಾಗ ಪಂಜಾಬಿಗಳು ಬಂದು ಜಮೀನು ಖರೀದಿಸಿದರು. ನಾವು ಇವರನ್ನೆಲ್ಲ ನೋಡುತ್ತ ನಮ್ಮ ಸಂಸ್ಕೃತಿಯನ್ನೆ  ಮರೆತುಬಿಟ್ಟೆವು.

ಊರೊಟ್ಟಿನ ಸಂಬಂಧಗಳಲ್ಲಿ ಯಾವ ಬದಲಾವಣೆ ಆಯಿತು?

ದೇಶ ವಿಭಜನೆಯಿಂದ ಗಡಿಯಾಚೆಗಿದ್ದ ನಮ್ಮ ಬಂಧುಗಳ ಸಂಪರ್ಕ ಕಡಿದುಹೋಯಿತು. ಆದರೆ ಸ್ಥಳೀಯ ಸಂಬಂಧಗಳು ಹಾಗೆಯೇ ಉಳಿದವು. 1970-80ರ ತನಕ ಭಾಯಿಚಾರ ಚೆನ್ನಾಗಿತ್ತು. ನಾವು ಮನೆಯಲ್ಲಿ ಮದುವೆ ಮಾಡಬೇಕಾದರೆ ಊರ ಹಿರಿಯರ ಹತ್ತಿರ ಹೋಗಿ ಇಂಥ ಕಡೆ ಸಂಬಂಧ ಮಾಡಿದ್ದೇವೆ ಎಂದು ಹೇಳುತ್ತಿದ್ದೆವು. ಅವರು ಸಂಬಂಧಪಟ್ಟ ಊರಿನಿಂದ ವರದಿ ತರಿಸಿಕೊಂಡು ಸಾಧಕ ಬಾಧಕ ತಿಳಿಸುತ್ತಿದ್ದರು. ಇದೆಲ್ಲ ಇಲ್ಲವಾಯಿತು. ನಮ್ಮಲ್ಲಿ ಒಳ್ಳೆಯ ಜಮೀನಿಲ್ಲ. ವ್ಯಾಪಾರವಿಲ್ಲ. ಫ್ಯಾಕ್ಟರಿಗಳಿಲ್ಲ. ದಿನ ದುಡಿದು ತಿನ್ನುವವರು. ಇಂಥಲ್ಲಿ ಕಲಾವಿದರು ಯಾರಿಗಾಗಿ ಹಾಡಬೇಕು? ಅವರನ್ನು ಸಾಕುವವರು ಯಾರು? ಸಾಮೂಹಿಕ ಉತ್ಸವಗಳು ಮದುವೆಗಳು ಮುಗಿದುಹೋದವು. ದರ್ಗಾಗಳಿಗೆ ಮಂದಿರಗಳಿಗೆ ಹೋಗಿ ಹಾಡುತ್ತಿದ್ದೆವು. ಮಂದಿರ-ಮಸೀದಿ ಜಗಳ ಆರಂಭವಾದ ಬಳಿಕ ಮುಸ್ಲಿಂ ಕಲಾವಿದರು ಮಂದಿರದೊಳಗೆ ಹೋಗುವಂತಿಲ್ಲ ಎಂದು ಕೆಲವರು ನಿಬರ್ಂಧ ಹೇರಿದರು.

ಇದು ತಪ್ಪು ಅನ್ನುವವರೂ ಇರಬೇಕಲ್ಲ?

ಇದ್ದಾರೆ. 20-25 ವರ್ಷಗಳ ಹಿಂದಿನ ಮಾತು. ಊರಲ್ಲಿ ಒಂದು ಮೀಟಿಂಗ್ ನಡೆಯಿತು. ಸಾವಿರ ಮಂದಿ ಸೇರಿದ್ದರು. ನಮ್ಮೂರಿನ ಒಬ್ಬ ಠಾಕೂರರೂ ಮೀಟಿಂಗಿಗೆ ಬಂದಿದ್ದರು. ಅವರಿಗೆ ಮಾತಿಗೆ ಬಹಳ ಬೆಲೆಯಿತ್ತು. ಮೀಟಿಂಗಿನಲ್ಲಿ ಯಾರೊ ಒಬ್ಬ `ಮಿರಾಸಿಗಳು ಗೋಮಾಂಸ ತಿನ್ನುತ್ತಾರೆ’ ಎಂದು ಆರೋಪ ಮಾಡಿದನು. ಆಗ ಠಾಕೂರ್ ಎದ್ದುನಿಂತು ಹೇಳಿದರು `ನಾವು ಹಸು ಕರೆಯುವುದನ್ನು ನಿಲ್ಲಿಸಿದಾಗ ಮೇವು ನಿಲ್ಲಿಸಿ ಬೀದಿಗೆ ಅಟ್ಟುತ್ತೇವೆ. ಮುಸ್ಲಿಮರಲ್ಲಿ ನೂರಾರು ರಾಸುಗಳಿವೆ. ದನ ಮೇಯುವಾಗ ಮುಸ್ಲಿಮನಿಗೆ ಮುಟ್ಟಿ ತೋರಿಸಿ. ನಾನು ನಿಮಗೆ ನನ್ನೆಲ್ಲ ಸಂಪತ್ತನ್ನು ಧಾರೆಯೆರೆಯುವೆ. ಇದು ಅವರಿಗೂ ನಮಗೂ ಇರೋ ವ್ಯತ್ಯಾಸ. ಅವರಿಗೆ ದನ ತಿನ್ನುವವರು ಎಂದು ಹೇಳುತ್ತಿದ್ದೀರಾ?’ ಎಂದು ಸವಾಲು ಹಾಕಿದರು. ಇಂಥ ಭಾಯಿಚಾರ ನಮ್ಮೂರಲ್ಲಿತ್ತು. ಆದರೆ ಈಗೀಗ ಯಾಕೆಂದು ಗೊತ್ತಿಲ್ಲ, ಬಾಲ್ಯದಲ್ಲಿ ಒಟ್ಟಿಗೆ ಕಲಿತು ಆಡಿದ ಗೆಳೆಯರು ಮಾತಾಡುವಾಗಲೂ ಮಾನಸಿಕ ದೂರ ಆಚರಿಸುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವುದಿಲ್ಲ. ಮುಖನೋಡಿ ನಗುವುದಿಲ್ಲ. ಮಾತಿನಲ್ಲಿ ಮೊದಲು ಏನು ಪ್ರೀತಿಯಿತ್ತು, ಅದು ಕಾಣೆಯಾಗಿದೆ. ನಗುವಿನಲ್ಲಿ ಆಪ್ತತೆ ಇಲ್ಲ. ಸನ್ನಿವೇಶ ನಿಜಕ್ಕೂ ಕೆಟ್ಟಿದೆ. ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ.

ರಾಜಸ್ತಾನದ ಪಶುಪಾಲಕ ಮುಸ್ಲಿಮರ ಬಗ್ಗೆ ಕೊಂಚ ವಿವರಿಸಿ

ನಮ್ಮಲ್ಲಿ ಮುಸ್ಲಿಮರು ವ್ಯಾಪಾರಸ್ಥರಲ್ಲ. ಪಶುಪಾಲನೆ ಮತ್ತು ರೈತಾಪಿ ಮಾಡುತ್ತಾರೆ.  ವ್ಯಾಪಾರವೆಂದರೂ ಅದು ಪಶುಗಳದ್ದೇ. ಪಶುಪಾಲಕ ಮುಸ್ಲಿಮರನ್ನು ಜಲೂಕ ಎನ್ನುತ್ತಾರೆ. ದನಗಳನ್ನು ಅವರು ಪ್ರೀತಿಯಿಂದ ಸಾಕುತ್ತಾರೆ.  ನಮ್ಮಲ್ಲಿ ಬರ ಬಿದ್ದರೆ ಪಂಜಾಬಿಗೆ ಹೋಗುತ್ತಾರೆ. ಅವರಲ್ಲಿ ಹಸುಗಳ ಜತೆ ಸಂವಾದ ಮಾಡುವ ವಿಶೇಷ ಭಾಷೆಯಿದೆ. ಒಮ್ಮೆ ಸೀಟಿ ಹೊಡೆದರೆ ದನವೆಲ್ಲ ಒಂದು ಮಗ್ಗುಲಿಗೆ ಹೋಗಿಬಿಡುತ್ತವೆ. ಅವರನ್ನು ಯಾರಾದರೂ ಹೊರಗಿನವರು ಮುಟ್ಟಿದರೆ ದನಗಳೇ ತಿವಿದು ಓಡಿಸಿ ಮಾಲಕನನ್ನು ರಕ್ಷ್ಷಿಸುತ್ತವೆ.

ಈಗಿರುವ ಅಪನಂಬಿಕೆ ದ್ವೇಷದ ಸನ್ನಿವೇಶ ಸುಧಾರಿಸಬಹುದಾ?

ಸುಧಾರಿಸಬಹುದು. ಎಷ್ಟೇ ಜಗಳವಾಡಲಿ, ದೇವರಿಗೆ ಒಪ್ಪಿಗೆಯಿಲ್ಲದಿದ್ದರೆ ದ್ವೇಷ ಬಹಳ ದಿನ ಉಳಿವುದಿಲ್ಲ. ಸಾಮಾನ್ಯವಾಗಿ ನಾನು ಊರಿನಲ್ಲಿ ಹಾಡಿದರೆ ಸಂಭಾವನೆ ಪಡೆಯುವುದಿಲ್ಲ. ಸಂಬಂಧ ಉಳಿಸಿಕೊಳ್ಳಬೇಕಲ್ಲವಾ? ಆದರೆ ನನ್ನ ಉದಾರತೆಯನ್ನು ಕೆಲವರು ಬೇರೆಯೇ ಅರ್ಥದಲ್ಲಿ ತೆಗೆದುಕೊಳ್ಳುತ್ತಾರೆ. ಸಂಬಂಧ ಹಾಳಾಗಿವೆ. ಆದರೂ ವಿಷ ಹರಡಿಲ್ಲ. ಈಚೆಗೆ ಕೆಲವು ಘಟನೆ ನಡೆದವು. ಪೈಗಂಬರ್ ಸಾಹೇಬರ ಬಗ್ಗೆ ಯಾರೊ ಫೇಸಬುಕ್ಕಿನಲ್ಲಿ ಹಾಕಿದಾಗ ಪ್ರಕ್ಷುಬ್ಧತೆ ಆಯಿತು. ಆದರೆ ಎರಡೂ ಕಡೆಯ ವಿವೇಕಿಗಳು ಸೇರಿ, ಪ್ರೀತಿವಿಶ್ವಾಸದಿಂದ ಸಮಾಧಾನ ಹೇಳಿ ಅಷ್ಟಕ್ಕೇ ಮುಗಿಸಿದರು.

ರಾಜಸ್ತಾನವು ಮೊಯಿನುದ್ದೀನ್ ಚಿಸ್ತಿಯವರ ದರ್ಗಾದಿಂದ ಖ್ಯಾತವಾಗಿದೆ. ಅದರ ಜತೆ ನಿಮ್ಮ ಸಂಬಂಧ ಯಾವ ತರಹದ್ದು?

ಮುಸ್ಲಿಮರು ಹಾಡು ಕೇಳುವುದನ್ನು ನಿಲ್ಲಿಸಿದರೂ, ನಾವು ದರ್ಗಾಗಳಲ್ಲಿ ಮಾತ್ರ ಹಾಡುತ್ತಲಿದ್ದೇವೆ. ಸೂಫಿ ಸಂತರಿಂದಲೇ ನಮ್ಮ ಪರಂಪರೆ ಉಳಿದಿದೆ. ಮೊಯಿನುದ್ದೀನ್ ಚಿಸ್ತಿಯವರು ಹಾಡು ಕೇಳದೆ ಊಟ ಮಾಡುತ್ತಿರಲಿಲ್ಲ. ಅವರ ಉದ್ದೇಶ ಗಾಯಕರ ಬದುಕಿಗೆ ಆಸರೆ ಕೊಡುವುದೇ ಆಗಿತ್ತು. ಅವರೊಮ್ಮೆ ಬಗ್ದಾದಿಗೆ ಅಬ್ದುಲ್ ಖಾದರ್ ಜೀಲಾನಿಯವರ ಅತಿಥಿಯಾಗಿ ಹೋಗಿದ್ದರು. ರಾತ್ರಿ ಊಟದ ಹೊತ್ತಾಯಿತು. ಆಗ ಚಿಸ್ತಿಯವರು `ಖಾದ್ರಿ ಸಾಹೇಬರೆ, ನಾವು ಹಾಡು ಕೇಳದೆ ಊಟ ಮಾಡುವುದಿಲ್ಲ. ಇದು ನಮ್ಮ ನಿಯಮ’ ಎಂದರು. ಖಾದ್ರಿಯವರು ಸಂಗೀತ ನಿಷೇಧಿಸಿದ್ದರಿಂದ ಬಗ್ದಾದಿನಲ್ಲಿ ಒಬ್ಬ ಹಾಡುಗಾರನೂ ಉಳಿದಿರಲಿಲ್ಲ. ಎಷ್ಟು ಹುಡುಕಿಸಿದರೂ ಯಾರೂ ಸಿಗಲಿಲ್ಲ. ಆಗ ಚಿಸ್ತಿಯವರು ಹೇಳಿದರು `ಒಂದೊಮ್ಮೆ ಗಾಯಕ ಸತ್ತಿದ್ದರೂ ಸರಿ. ಗೋರಿಯಿಂದ ಹೊರಗೆ ತೆಗೆಯಿರಿ. ಅವನಿಗೆ ಜೀವಕೊಟ್ಟು ಹಾಡಿಸಿ ಕೇಳಬೇಕು’.  ಸತ್ತ ಗಾಯಕರನ್ನು ಬದುಕಿಸಿ ಹಾಡಿಸಿದ ಸಂತ ಅವರು.

ನೀವು ಅಜ್ಮೀರ್ ದರ್ಗಾದಲ್ಲಿ ಹಾಡಿದ್ದೀರಾ?

ಉರುಸಿನಲ್ಲಿ ಒಂದು ನಿಮಿಷ ಅವಕಾಶ ಸಿಕ್ಕುವುದೂ ಕಷ್ಟ. ಪಾಕಿಸ್ತಾನ ಬಾಂಗ್ಲಾದೇಶ ಇರಾನ್ ಇರಾಕ್ ಮಲೇಶಿಯಾ ಆಫ್ರಿಕಾಗಳಿಂದ ಕಲಾವಿದರು ಬರುತ್ತಾರೆ. ಕೆನಡಾದ ತಾಹಿರ್ ಖವಾಲ್ ಕೂಡ ಬರುತ್ತಾರೆ. ಹಾಡುವವರ ಪಾಳಿ ಬಹಳ ಉದ್ದವಿರುತ್ತದೆ. `ಅಷ್ಟು ದೂರದಿಂದ ಗಾಯನ ಸೇವೆಗೆ ಆಗಮಿಸಿದ್ದಾರೆ’ ಎಂದು ಸ್ಥಳೀಯರಾದ ನಾವು ಹಿಂಜರಿಯುತ್ತೇವೆ. ಉರುಸಿಲ್ಲದ ದಿನಗಳಲ್ಲಿ ಬಂದು ಹಾಜರಿ ಹಾಕುತ್ತೇವೆ. ದರ್ಗಾದ ಆಸ್ಥಾನದಿಂದ ನೇಮಕವಾದ ಖವಾಲರು ಬೇರೆ ಇದ್ದಾರೆ. ಅವರು ಚಿಸ್ತಿಯವರ ಶೇರಾ ಹಾಡಿ ಹೋಗಿಬಿಡುತ್ತಾರೆ. ಮಿಕ್ಕ ಕಲಾವಿದರು ಹಾಜರಿ ಹಾಕಲೆಂದೇ ಬರುತ್ತಾರೆ. ಆತ್ಮಸಂತುಷ್ಟಿಗಾಗಿ ಹಾಡುತ್ತಾರೆ. ನಮಾಜಿನ ಹೊತ್ತು ಬಿಟ್ಟು ದಿನ 24 ಗಂಟೆಯೂ ಹಾಡಿಕೆ ಇರುತ್ತದೆ. 

ಆಸ್ಥಾನ ಕಲಾವಿದರು ಹಾಡುವ ಶೇರಾ ಯಾವುದು?

`ಕಿರುಪಾ ಕರೋ ಮಹರಾಜ್ ಮೊಯಿನುದ್ದೀನ್’ (ಹಾಡಿ ತೋರಿಸುತ್ತ) ಇದು ಮಾಂಡ್ ರಾಗದಲ್ಲಿದೆ. ಮೆಹದಿ ಹಸನ್‍ಸಾಹೇಬರು ಮಾಂಡ್ ರಾಗದಲ್ಲಿ ಗಜಲ್ ಹಾಡುತ್ತಿದ್ದರು. `ಮೊಹಬ್ಬತ್ ಕರನೇವಾಲೇ ಕಂನ ಹೋಂಗೆ, ತೇರಿ ಮೆಹಫಿಲ್ ಮೇ ಲೇಕಿನ್ ಹಮ್ನಾ ಹೋಂಗೆ’ (ಹಾಡಿ ತೋರಿಸುತ್ತ) ಇದು ಮಾಂಡ್ ರಾಗದಲ್ಲಿದೆ. ರಾಜಸ್ತಾನಿ ಜನಪದ ಗಾಯಕರು ಹಾಡುವ `ಕೇಸರಿಯಾ ಬಾಲಂ ಆವೊ, ಬಧಾರೊ ಮ್ಹಾರೇ ದೇಸ್’ ಕೂಡ ಮಾಂಡ್‍ನಲ್ಲಿದೆ. ಒಮ್ಮೆ ಲತಾ ಮಂಗೇಶ್ಕರ್‍ರಿಗೆ `ನಿಮ್ಮ ಪ್ರಿಯವಾದ ಗಾಯಕ ಯಾರು?’ ಎಂದು ಕೇಳಿದರು. ಅದಕ್ಕವರು `ಮೆಹದಿ ಹಸನ್’ ಎಂದು ಜವಾಬುಕೊಟ್ಟರು. ಅವರ ಕಂಠದಲ್ಲಿ ಸ್ವತಃ ದೇವರೇ ಕೂತು ಹಾಡುತ್ತಾನೆಂದೂ ಹೇಳಿದರು.

ದೇಶ ವಿಭಜನೆ ಆಯಿತು. ಆದರೆ ಹಾಡು-ರಾಗಗಳು ವಿಭಜನೆಯಾಗಲಿಲ್ಲ

ಹಾಡುಗಾರರೂ ವಿಭಜನೆ ಆಗಲಿಲ್ಲ. ಒಮ್ಮೆ ಮೆಹದಿ ಹಸನ್ ರಾಜಸ್ತಾನಕ್ಕೆ ಬಂದಿದ್ದರು. ಅವರಿಗೆ ರಾಜಸ್ತಾನಿಗಳು ಮೋನ್ (ಕೃಷ್ಣಾ) ಎಂದು ಪ್ರೀತಿಯಿಂದ ಕರೆಯುತ್ತಾರೆ. ಅವರು ಬಂದಾಗ ಝುಂಜುಣ್ ಜಿಲ್ಲೆಯಲ್ಲಿರುವ ಹುಟ್ಟೂರಾದ ಲುನಾದಲ್ಲಿ ಉಳಿದರು. ಮೆಹಫಿಲಿನಲ್ಲಿ `ಕೇಸರಿಯಾ ಬಾಲಂ’ ಹಾಡಿದರು. ಸರ್ಕಾರದಿಂದ ಅವರಿಗೆ ಸನ್ಮಾನವಿತ್ತು. ಆಗ ಮುಖ್ಯಮಂತ್ರಿ ಕೇಳಿದರು `ನಿಮಗೆ ನಾವು ಯಾವ ಸೇವೆ ಮಾಡಲಿ? ಆಗ ಮೆಹದಿ ಹಸನ್ `ನನಗೇನೂ ಬೇಡ. ಜುಂಜುಣ್‍ದಿಂದ ನನ್ನ ಊರಿಗೆ ರಸ್ತೆ ಮಾಡಿಸಿರಿ’ ಎಂದು ಕೋರಿದರು.

ಅನೇಕರ ಕಂಠದಿಂದ `ಕೇಸರಿಯಾ’ ಕೇಳಿರುವೆ. ಅವುಗಳಲ್ಲೆಲ್ಲ ಅಲ್ಲಾ ಜೀಲಾನಿಬಾಯಿ ಅವರ ಹಾಡಿಕೆ ವಿಶಿಷ್ಟವಾದುದು. ಹಾಡಿನ ಹಿನ್ನೆಲೆಯೇನು?

ರಾಜಸ್ತಾನದಲ್ಲಿ ಮಳೆ ಕಡಿಮೆ. ಮಳೆ ಬೀಳುವ ಹೊತ್ತಲ್ಲಿ ಸೂರ್ಯ ಮುಳುಗುವಾಗ ಮೇಘದ ಬಣ್ಣ ಕೇಸರಿಯಾಗುತ್ತದೆ. ಅದನ್ನು ನೋಡುತ್ತ ನಮ್ಮ ದೇಶಕ್ಕೆ ಬಾ ಎಂದು ಮಳೆಯನ್ನು ಕರೆವ ಹಾಡಿದು; ಇದು ಪ್ರೇಮಗೀತೆ ಕೂಡ. ಈಗಿದು ರಾಜಸ್ತಾನದ ಸ್ವಾಗತಗೀತೆಯಾಗಿದೆ.

ಒಮ್ಮೆ ರೇಶ್ಮಾ ತಮ್ಮ ಸಂದರ್ಶನದಲ್ಲಿ ಹೇಳಿದ್ದರು: `ಕಲಾವಿದರಿಗೆ ದೇಶದ ಗಡಿಗಳು ಇರುವುದಿಲ್ಲ’

ದೇಶದ ಮಾತ್ರವಲ್ಲ, ಧರ್ಮ ಜಾತಿಯ ಗಡಿಗಳೂ ಇರುವುದಿಲ್ಲ. ಸಂಗೀತವೇ ಅವರ ಧರ್ಮ. ಬಿಸ್ಮಿಲ್ಲಾಖಾನರು ಬನಾರಸ್ಸಿನ ಹನುಮಾನ್ ಗುಡಿಯಲ್ಲಿ ಶಹನಾಯಿ ನುಡಿಸುತ್ತಿದ್ದರು. ಸಂಗೀತಕ್ಕೆ ಬಂದರೆ ಮತಧರ್ಮದ ಬಗ್ಗೆ ಬೇರೆಯೇ ಆಳವಾದ ಚಿಂತನೆ ಶುರುವಾಗುತ್ತದೆ. ಧರ್ಮದಲ್ಲಿ ಒಳಿತಾವುದು ಕೆಡುಕಾವುದು ಗೊತ್ತಾಗುತ್ತದೆ. ನಾವು ಎಲ್ಲ ಧರ್ಮಗಳನ್ನು ಬೆರೆಸಿಬಿಡುತ್ತೇವೆ. ನಮಗೆ ಅಲಿ ಸಾಹೇಬ್ ಇರುವಂತೆ ಹಿಂದುಗಳಿಗೆ ಬಜರಂಗಬಲಿ; ಹಿಂದೂಗಳಿಗೆ ನವರಾತ್ರಿ ಇರುವಂತೆ ನಮ್ಮ ಮೊಹರಮ್ಮಿಗೆ ಒಂಬತ್ತು ದಿನಗಳು; ಪ್ರವಾದಿ ಇಬ್ರಾಹಿಂ ಮಗನ ಖುರ್ಬಾನಿ ಮಾಡಿದಂತೆ ಭಾರತದಲ್ಲಿ ಮಯೂರಧ್ವಜ ಮಗನನ್ನು ಬಲಿಗೊಟ್ಟನು. ಇಂತಹ ಸಮಾನ ಆಶಯದ ಕತೆಗಳನ್ನು ಬೆರೆಸುತ್ತೇವೆ. ರಾಮ ತನ್ನ ಮಲತಾಯಿಯ ಮಾತಿಗೆ 14 ವರ್ಷ ಸಿಂಹಾಸನ ಬಿಟ್ಟು ಕಾಡಿಗೆ ಹೋದವನು. ಎಂಥ ದೊಡ್ಡ ಆದರ್ಶವಾದಿ? ಅಂಥ ಮಹಾನುಭಾವನನ್ನು ಇಟ್ಟುಕೊಂಡು ದ್ವೇಷ ಸಾಧಿಸಿದರು. 

ನೀವು ಯಾವ್ಯಾವ ಭಾಷೆಯಲ್ಲಿ ಹಾಡುತ್ತೀರಿ?

ಉರ್ದುವಿನಲ್ಲಿ ಗಜಲ್-ಖವಾಲಿ ಹಾಡುತ್ತೇನೆ. ಪಂಜಾಬಿ ಫಾರಸಿ ಹಿಂದಿ ರಾಜಸ್ತಾನಿಗಳಲ್ಲಿ ಹಾಡುತ್ತೇನೆ. ರಾಜಸ್ತಾನದಲ್ಲಿ ಪ್ರತಿ ಪ್ರದೇಶಕ್ಕೂ ಪ್ರತಿ ಸಮುದಾಯಕ್ಕೂ ಅದರದ್ದೇ ವಿಶಿಷ್ಟ ಜನಭಾಷೆಯಿದೆ. ಇದೆಲ್ಲವನ್ನೂ ರಾಜಸ್ತಾನಿ ಎನ್ನುತ್ತಿದ್ದೇವೆ.  ರಾಜಸ್ತಾನಿಗೆ ಮಾನ್ಯತೆ ಕೊಡಬೇಕೆಂದು ಬೇಡಿಕೆ ಇಡಲಾಗಿದೆ. ಆದರೆ ಯಾವ ಸಮುದಾಯದ ಭಾಷೆಯನ್ನು ರಾಜಸ್ತಾನಿ ಎನ್ನಬೇಕು ಎನ್ನುವುದೇ ಸಮಸ್ಯೆ.

ನಿಮ್ಮ ಯಾನದಲ್ಲಿ ತಿರುವಿನ ಘಟ್ಟವೆಂದರೆ ಯಾವುದು?

2004ನೇ ಇಸವಿ. ನಂಟರ ಮನೆಗೆಂದು ಬಿಕನೇರಿಗೆ ಹೋಗಿದ್ದೆವು. ಬಸ್‍ಸ್ಟ್ಯಾಂಡಿನಿಂದ ಆಟೊ ಹಿಡಿದು ಮನೆಯತ್ತ ಹೋಗುವಾಗ ನಡುವೆ ಆಟೊ ಕೆಟ್ಟು ನಿಂತಿತು. ಬಳಿಕ ನಡೆದುಕೊಂಡೇ ಹೊರಟೆವು. ಅಲ್ಲೊಂದು ಕಡೆ ಹಾಲಿನಲ್ಲಿ ಸ್ಥಳೀಯ ಕಲಾವಿದರ ಆಡಿಶನ್ ನಡೆಯುತ್ತಿತ್ತು. ಆಡಿಶನ್‍ಗೆ ಬಂದಿದ್ದವರು ಹೆಚ್ಚಾಗಿ ಸಂಗೀತ ಶಾಲೆಗಳಲ್ಲಿ ಕಲಿತವರು. ಅವರು ಸಿನಿಮಾ ಹಾಡುಗಳನ್ನು ಹಾಡುತ್ತಿದ್ದರು.  ಆಡಿಶನ್ ತೆಗೆದುಕೊಳ್ಳಲು ದೆಹಲಿಯ ಪ್ರೇರಣಾ ಎಂಬ ಕಲಾವಿದೆ ಬಂದಿದ್ದರು.  ಟೀಬ್ರೆಕ್ ಹೊತ್ತಲ್ಲಿ `ಒಳ್ಳೇ ಗಾಯಕರು ಯಾರೂ ಸಿಗುತ್ತಿಲ್ಲ’ ಎಂದು ಪ್ರೇರಣಾ ತಮ್ಮ ಸ್ನೇಹಿತರೊಂದಿಗೆ ಮಾತಾಡಿಕೊಳ್ಳುತ್ತಿದ್ದರು. ನಾವು ಅಲ್ಲೇ ನಿಂತಿದ್ದೆವು. ಪ್ರೇರಣಾ ಕೇಳಿದರು `ನೀವ್ಯಾರು?’. ನಾವು ಹೇಳಿದೆವು `ಪೂಗಲ್‍ನವರು’. `ಹಾಡಲು ಬರುತ್ತಾ?’ `ಹೌದು’. `ಹಾಗಾದರೆ ಈ ಫಾರ್ಮ್ ತುಂಬಿರಿ’. ನಮಗೆ ಫಾರ್ಮ ತುಂಬುವುದಕ್ಕೂ ಬರುತ್ತಿರಲಿಲ್ಲ. ಅವರೇ ತುಂಬಿಸಿದರು. ನಮ್ಮ ಪಾಳಿ ಕೊನೆಯದು. ಹಾಡಿದೆ. ಇವನ ಹಾಡಿನಲ್ಲಿ ಬೇರೆಯೇ ಒಂದು ಪರಂಪರೆಯ ಗುಣವಿದೆ ಎಂದು ನನ್ನನ್ನು ಆಯ್ಕೆ ಮಾಡಿದರು. ದೆಹಲಿಯ ಇಂಡಿಯಾ ಇಂಟರ್ ನ್ಯಾಶನಲ್ ಸೆಂಟರ್‍ಗೆ ಆಹ್ವಾನಿಸಿದರು. ಅದು ಮೂರು ದಿನದ ಫೆಸ್ಟಿವಲ್. ಮೊದಲ ಕಾರ್ಯಕ್ರಮ ಶಿವತಾಂಡವ ನೃತ್ಯ. ಎರಡನೆಯದು ಗುಜರಾತಿ ಗಾಯಕಿಯದು. ಮೂರನೆಯದು ಮಹಾರಾಷ್ಟ್ರದ ರಾಜಾ ಕಾಳೆಯವರ ಸಂಗೀತ. ನಮ್ಮದು ನಾಲ್ಕನೆಯದಿತ್ತು. ನಮ್ಮ ನಂತರ ಬಾಲಮುರಳಿ ಕೃಷ್ಣ. ನಮಗೆ 25 ನಿಮಿಷ ಕೊಟ್ಟಿದ್ದರು. ಗಾಬರಿಯಿಂದ ನಮ್ಮ ಹಾಡಿಕೆ ಕೆಟ್ಟರೆ ನಿಲ್ಲಿಸುವುದಕ್ಕೆ ಸೂಚನೆ ಕೊಡಲು ಒಬ್ಬ ವ್ಯಕ್ತಿಯನ್ನು ವೇದಿಕೆ ಮುಂದೆ ಕೂರಿಸಿದ್ದರು. ನಾನು ಬುಲ್ಲೆಶಾ ಮತ್ತು ಕಬೀರರನ್ನು ಹಾಡಿದೆ. `ಚಾದರಿಯಾ ಝೀನಿಝೀನಿ’ ಹಾಡಿದಾಗ ಪ್ರೇಕ್ಷಕರು ವೇದಿಕೆ ಮೇಲೆ ನುಗ್ಗಿ ಬಂದರು. ಒನ್ಸ್ ಮೋರ್ ಮಾಡಿದರು. ನಮಗೆ ಒಂದು ಗಂಟೆ ಅವಕಾಶ ಕೊಟ್ಟರು. ಕಾರ್ಯಕ್ರಮದಲ್ಲಿದ್ದ ವ್ಯಕ್ತಿಯೊಬ್ಬರು ನಮ್ಮನ್ನು ಮುಂದೆ ಶಬನಂ ಅವರಿಗೆ ಪರಿಚಯಿಸಿದರು. ಶಬನಂ ಕಬೀರ್ ಪ್ರಾಜೆಕ್ಟಿನ ಮೂಲಕ ನನ್ನನ್ನು ಜಗತ್ತಿಗೇ ಪರಿಚಯಿದರು. ಅವರ ಸಹಾಯಕರೊಬ್ಬರು ಮುಂಬಯಿಗೆ ನಮ್ಮನ್ನು ಆಹ್ವಾನಿಸಿದರು. ಅಲ್ಲಿ ಒರೇಲಿ ಅವರಿಗೆ ಪರಿಚಯಿಸಿದರು. ಒರೇಲಿಯವರು ನಮಗೆ ಬೆಲ್ಜಿಯಂ ಕರೆದುಕೊಂಡು ಹೋದರು. ಆಮೇಲೆ ಪೋಲೆಂಡ್ ಜರ್ಮನಿ ಕೆನಡಾ ಫ್ರಾನ್ಸ್‍ಗಳಿಗೆ ಹೋಗಿ ಹಾಡಿದೆ.

ಬೇರೆಬೇರೆ ದೇಶಗಳಲ್ಲಿ ಹಲವು ಭಾಷೆಯ ರಚನೆಗಳನ್ನು ಹಾಡುತ್ತೀರಿ. ಕೇಳುಗರಿಗೆ ಹಾಡಿನ ಅರ್ಥ ಸಂವಹನವಾಗದ ತೊಡಕು ಸೃಷ್ಟಿಯಾಗಿದೆಯಾ?

ನಾವು ಜನಪದ ಗಾಯಕರು. ಶತಮಾನಗಳಿಂದ ಹಾಡುವುದು ನಮ್ಮ ಕಸುಬು.  ನನ್ನದು 26ನೇ ತಲೆಮಾರು. ನಮಗೆ ಸಂತೋಷ ಕೊಡುವ ಪರಫಾರ್ಮೆನ್ಸೇ ದೊಡ್ಡದು. ಜನರಿಗೆ ಅರ್ಥವಾಯಿತೇ ಇಲ್ಲವೇ ಎನ್ನುವುದು ಎರಡನೇ ಪ್ರಶ್ನೆ. ಜರ್ಮನಿಯಲ್ಲಿ ಒಬ್ಬ ನನ್ನ ರೇಡಿಯೊ ಸಂದರ್ಶನ ಮಾಡಿ ಅದರ ಸಿಡಿ ಕೊಟ್ಟ. ನನಗೆ ಭಾಷೆ ಗೊತ್ತಾಗಲಿಲ್ಲ. ಸಂದರ್ಶನದ ಅರ್ಥ ತಿಳಿದ ಮೇಲೆ ಆತ ನನ್ನ ಬಗ್ಗೆ ಮತ್ತು ನಮ್ಮ ಸಂಗೀತ ಬಗ್ಗೆ ಎಷ್ಟು ಚೆನ್ನಾಗಿ ತಿಳಿದುಕೊಂಡಿದ್ದಾನೆ ಎಂದು ಗೊತ್ತಾಯಿತು. ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಕೇವಲ ಆಲಾಪದಿಂದಲೇ ಅರ್ಥ ಅನುಭವ ಭಾವ ದಾಟಿಸಿಬಿಡುತ್ತದೆ. (ಮೊಬೈಲಿನಿಂದ ಒಬ್ಬ ಫ್ರೆಂಚ್ ಹುಡುಗಿ ಕಬೀರ್ ಭಜನ್ ಹಾಡುತ್ತಿರುವ ದೃಶ್ಯ ತೋರಿಸುತ್ತ) ನೋಡಿ, ಈಕೆ ಅರ್ಥವನ್ನು ಅರಿವಳಂತೆ ಹಾಡುತ್ತಿದ್ದಾಳೆ.

ನಿಮ್ಮ ಪರಂಪರೆ ಮುಂದುವರೆಸಲು ಯಾವ ಸವಾಲುಗಳಿವೆ? 

ಹಿಂದೆ ರಾಜಸ್ತಾನದಲ್ಲಿ ದೊರೆಗಳೂ ನವಾಬರೂ ಇದ್ದರು. ಗಾಯಕರನ್ನು ಆಸ್ಥಾನದಲ್ಲಿಟ್ಟು ಪೋಷಿಸುತ್ತಿದ್ದರು. ಆಗ ಕಲಾವಿದರಿಗೆ ತಮ್ಮ ಮಕ್ಕಳನ್ನು ಸಂಗೀತದಲ್ಲಿ ಹಾಕಬೇಕು ಅನಿಸುತ್ತಿತ್ತು. ನಾನು ಅಜ್ಜ ಅಪ್ಪ ಕಲಿಸಿದ್ದನ್ನು ಹಾಡುತ್ತಿದ್ದೇನೆ. ಅದನ್ನು ನನ್ನ ಮಕ್ಕಳು ಕಲಿಯಬೇಕೆಂದು ಬಯಸುತ್ತೇನೆ. ಸಂಗೀತವು ಪ್ರಾಯೋಗಿಕವಾದ ಮೌಖಿಕ ಕಲೆ; ತಲೆಮಾರುಗಳಿಂದ ಬೆಳೆದು ಅದರ ಪರಂಪರೆ ಒಂದು ಯೂನಿವರ್ಸಿಟಿಯೇ ಆಗಿದೆ. ಇದರ ಜತೆಗೆ ಕಾಲವೇ ನಮಗೆ ಕಲಿಸುತ್ತದೆ. ನಮ್ಮ ಹಿರೀಕರ ಕಾಲಕ್ಕೆ ಮನರಂಜನೆ ಸಾಧನಗಳಿರಲಿಲ್ಲ. ಜಾತ್ರೆ ಉತ್ಸವಗಳಲ್ಲಿ ಕುಸ್ತಿ ಇರುವಂತೆ ಮಿರಾಸಿಗಳು ಹಾಡಬೇಕೆಂದು ಜನ ಬಯಸುತ್ತಿದ್ದರು. ಕಲಾವಿದರು ಜನಪ್ರಿಯತೆ ಪಡೆಯಲು ಕಷ್ಟಪಟ್ಟು ಕಲಿಯುತ್ತಿದ್ದರು. ತಾವಾಗಿ ಹೋಗಿ ಹಾಡುತ್ತಿದ್ದರು. ಜನ ಕೊಟ್ಟದ್ದನ್ನು ತೆಗೆದುಕೊಂಡು ಜೀವನ ಮಾಡುತ್ತಿದ್ದರು.  ಈಗ ಈ ಪರಂಪರೆಗೆ ತಂತ್ರಜ್ಞಾನವು ಹೊಸ ಸವಾಲನ್ನು ಒಡ್ಡಿದೆ. ನಾನು ಪ್ರಾಯಕ್ಕೆ ಬಂದಾಗ ತಂದೆಯವರು ನನ್ನ ಹಾಡಿಕೆ ನಿಲ್ಲಿಸಿದರು. `ಟಿವಿಯಲ್ಲಿ ಹಾಡು ಬರುತ್ತಿದೆ. ನಮ್ಮ ಕಸುಬು ಇಲ್ಲಿಗೆ ಮುಗಿಯಿತು’ ಎಂದರು. ಜೀವನಕ್ಕೆ ಬೇಕಾಗಿ ನನಗೆ ಟೈಲರಿಂಗ್ ಕಲಿಸಿದರು. ಹತ್ತು ವರ್ಷ ಹಾಡಿಕೆ ಬಿಟ್ಟು ಟೈಲರಿಂಗ್ ಮಾಡಿದೆ. ಹೊಲಗೆಲಸ ಮಾಡಿದೆ. 1998ರಲ್ಲಿ ತಂದೆ `ಈಗ ನಿನಗೆ ಹಾಡಬೇಕೆನಿಸಿದರೆ ಹಾಡು’ ಎಂದರು. ಆಗ ನಾನು ಅಜ್ಜ, ಚಿಕ್ಕಪ್ಪ, ಬಂಧುಗಳಾದ ಗುಲಾಂ ಮಹಮದ್ ಅವರ ಜತೆ ಗಹನವಾಗಿ ಚರ್ಚಿಸಿ, ನಮ್ಮ ಪರಂಪರೆಯನ್ನು ಅರಿತುಕೊಂಡೆ. ಗುಲಾಂ ಮಹಮದ್ ಒಬ್ಬ ಅನುಭಾವಿಯಾಗಿದ್ದವರು. ಉಸ್ತಾದ್ ಬಡೇ ಗುಲಾಮಲಿ ಖಾನರ ಜತೆ ಇದ್ದವರು. ದೊಡ್ಡ ಗಾಯಕರನ್ನು ಹುಡುಕಿಕೊಂಡು ಊರಿಂದ ಊರಿಗೆ ಹೋಗಿ, ಹಣ್ಣು ಮಾರಿ ಹಣ ಸಂಪಾದಿಸುವುದು, ಹಾಡು ಕೇಳುವುದು, ಗಾಯಕರ ಸೇವೆ ಮಾಡುವುದು-ಮಾಡಿದವರು. ಅವರಿಂದ ನಾನು ಬಹಳ ಕಲಿತೆ. ಕೊನೆಯ ದಿನಗಳಲ್ಲಿ ಅವರ ಸೇವೆ ಮಾಡಿದೆ.ರಿಯಾಜ್ ಶುರುಮಾಡಿದೆ. ಇದೆಲ್ಲ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಮಿರಾಸಿ ಪರಂಪರೆಯಲ್ಲಿ ಹೊಸ ಗಾಯಕರನ್ನು ರೂಪಿಸುವ ವಿಧಾನ ಹೇಗಿರುತ್ತದೆ?

ಮಕ್ಕಳಿಗೆ ಚಿಕ್ಕಂದಿನಿಂದಲೇ ತರಬೇತಿ ಶುರು ಮಾಡುತ್ತೇವೆ. ಅವರ ದೌರ್ಬಲ್ಯ ಗಮನಿಸುತ್ತೇವೆ. ಮುಖ್ಯವಾಗಿ ಶ್ವಾಸಕೋಶದ ಸಾಮಥ್ರ್ಯ ನೋಡುತ್ತೇವೆ. ಗಾಳಿಯ ಒತ್ತಡ ಹಾಕಿ ಅದನ್ನು ಗಟ್ಟಿಗೊಳಿಸುತ್ತೇವೆ. `ಇವನನ್ನು ನೀವು ಎತ್ತಿ ಒಗೆಯಬಲ್ಲೆ’ ಎಂದು ಕುಸ್ತಿಗೆ ಪ್ರಚೋದಿಸುತ್ತೇವೆ. ಶಕ್ತಿ ಕಮ್ಮಿಯಿದ್ದರೆ ತಕ್ಕ ಆಹಾರ ಕೊಡುತ್ತೇವೆ. ಒಳ್ಳೆಯ ಗಾಯಕರು ಒಳ್ಳೇ ಪೈಲವಾನರೂ ಆಗಬೇಕು. ನನಗೆ ಸಂಘಟಕರು `ನಿಮಗೆ ಮೈಕಿನ ಅಗತ್ಯವಿಲ್ಲ’ ಎನ್ನುತ್ತಿರುತ್ತಾರೆ. ಇದರ ಯಶಸ್ಸು ಬಾಲ್ಯದಿಂದ ಸಿಕ್ಕ ತರಬೇತಿಗೆ ಹೋಗುತ್ತದೆ. ನಾನು ಇಂಡಿಯಾ ಇಂಟರ್‍ನ್ಯಾಶನಲ್ ಸೆಂಟರಿನ ಕಾರ್ಯಕ್ರಮಕ್ಕೆ ಆಯ್ಕೆಯಾಗಲು ಕಾರಣ, ಪರಂಪರೆ ಕಲಿಸಿದ್ದ ಸ್ಪರ್ಧೆಯ ಗುಣ. ಮನಸ್ಸು, ಕಂಠ, ದೇಹದ ಮೂರಕ್ಕೂ ತರಬೇತಿ ಬೇಕು. ಮೆಹದಿ ಹಸನರಿಗೆ ಮೂರು ವರ್ಷವಿರುವಾಗಲೇ ಇಬ್ಬರು ದೈಹಿಕ ಮತ್ತು ಕಂಠದ ತರಬೇತಿ ಕೊಡಲು ಹಿಂದೆ ಬಿದ್ದಿದ್ದರು. ಉಸ್ತಾದ್ ಬಡೇಗುಲಾಬ್ ಅಲಿಖಾನ್ ಸಾಹೇಬರು ಪೈಲ್ವಾನರಾಗಿದ್ದರು. ಹುಸೇನ್ ಬಕ್ಷ್ ಸಾಹೇಬರು ಎದುರಾಳಿಗೆ ಕುಸ್ತಿಗೆ ಕರೆಯುತ್ತಿದ್ದಾರೆ ಎಂಬಂತೆ ಹಾಡುತ್ತಿದ್ದರು.

ನಿಮ್ಮ ಹಿರೀಕರ ಜತೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ಕೊಟ್ಟಿದ್ದೀರಾ?

ದೆಹಲಿಯಲ್ಲಿ ಒಂದು ಕಾರ್ಯಕ್ರಮ ಕೊಟ್ಟೆ-2003ರಲ್ಲಿ. ಯಾರೋ ನಿಮ್ಮಂತಹ ಸಂಗೀತಪ್ರೇಮಿ ತಮ್ಮ ಕಾಲನಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವದು. ಆಗ ನನಗೆ 32 ವರುಷ. ನಮ್ಮ ಹಿರೀಕರಿಗೆ `ನೀವು ನನ್ನ ಜತೆ ದೆಹಲಿಗೆ ಬರಬೇಕು’ ಎಂದೆ. ಆಗ ಅಪ್ಪ ಬಸಾಯೇಖಾನರಿಗೆ 78 ವರ್ಷ. ಜತೆಗೆ ಚಿಕ್ಕಪ್ಪ ಇದ್ದರು. ಗುಲಾಮ ಮಹಮದ್ ಅವರಿಗೆ 96. ಇವರೆಲ್ಲರೂ `ನಾವು ವಿಲಾಯತಿಗೆ ಹೋಗುತ್ತಿದ್ದೇವೆ’ ಎಂದು ಊರು ತುಂಬಾ ಹೇಳಿಕೊಂಡು ತಿರುಗಿದರು. ಒಂಟೆಯ ಮೇಲೆ ಸಂಗೀತವಾದ್ಯ ಹೇರಿಕೊಂಡು ಕಾಲುನಡಿಗೆ ಮಾಡಿದವರು, ಮೊದಲ ಸಲ ರೈಲಿನಲ್ಲಿ ಪಯಣಿಸಿದರು. ರೈಲಿನಲ್ಲಿ ಎಲ್ಲರಿಗೂ ನೀರಬಾಟಲಿ ಕೊಂಡುಕೊಟ್ಟೆ. ನಮ್ಮ ಮಾಮಾ ಮನ್ಸೂರ್ ಖಾನರು- ಅವರಂತೆ ಜನಪದ ಶೈಲಿಯಲ್ಲಿ ತಬಲಾ ನುಡಿಸುವವರು ಯಾರೂ ಇಲ್ಲ- `ಅರೇ ಮುಖ್ತಿಯಾರ್. ರೈಲಿನ ನಳಗಳಲ್ಲಿ ಅಷ್ಟು ನೀರಿದೆ. ನೀನೇಕೆ ಹಣ ಹಾಳು ಮಾಡುತ್ತಿದ್ದೀಯ?’ ಎಂದು ಬೈದರು. ರಾಜಸ್ತಾನದಲ್ಲಿ ನೀರಿನ ಸಮಸ್ಯೆ ಬಹಳ. ಹೀಗಾಗಿ ನೀರು ಎಲ್ಲಿ ಕಂಡರೂ ಕುಡಿಯುವುದೇ. ಇವರೆಲ್ಲ ದೆಹಲಿ ಕಂಡು ಗಾಬರಿಗೊಂಡಿದ್ದರು. ಯಾರಿಗೂ ಹಿಂದಿ ಬರುತ್ತಿರಲಿಲ್ಲ. ಆದರೆ ಎಲ್ಲರೂ ಚೆನ್ನಾಗಿ ಹಾಡಿದರು. ಬಳಿಕ ದೆಹಲಿಯ ಜಾಮಿಯಾ ಮಸೀದಿಗೆ ಹೋದೆವು. ನಮಾಜ್ ಮಾಡಿದೆವು. ನಾನು ಬೆಲ್ಜಿಯಂ ಹೊರಟಾಗಲಂತೂ, ನಮ್ಮ ಸಮುದಾಯದವರೆಲ್ಲ ಬಹಳ ಸಂತೋಷಪಟ್ಟರು.

ಈತನಕ ಯಾವ್ಯಾವ ದೇಶಗಳಲ್ಲಿ ಹಾಡಿದ್ದೀರಿ?

ಬೆಲ್ಜಿಯಂ ಪೋಲೆಂಡ್ ಜರ್ಮನಿ ಕೆನಡಾ ಫ್ರಾನ್ಸ್ ಹೋಗಿರುವೆ. ಮೊರಕ್ಕೊ ಹೋಗಿರುವೆ. ಪಾಕಿಸ್ತಾನದಿಂದ ಒಮ್ಮೆ ಆಹ್ವಾನ ಬಂದಿತ್ತು. ಹೋಗಲು ಸಾಧ್ಯವಾಗಲಿಲ್ಲ. ಟಿಕೆಟ್ಟನ್ನು ಹೊಂಚುವುದರಲ್ಲಿ ಸಮಸ್ಯೆಯಾಯಿತು. ನಮ್ಮ ಸಮುದಾಯದ ಬಂಧುಗಳು ಪಕ್ಕದ ಜಿಲ್ಲೆ ಬಹವಲಪುರದಲ್ಲಿದ್ದಾರೆ. ಗಡಿಭಾಗದಲ್ಲಿ ಫೋನು ಮಾಡುವುದಕ್ಕೆ ಸೇನೆಯ ಅನುಮತಿ ಬೇಕು. ದೇಶ ವಿದೇಶಗಳಲ್ಲಿ ಅಲೆದಾಡುವ ನನ್ನಂತಹವರ ಮೇಲೆ ನಿಗಾ ಇಡಲಾಗುತ್ತದೆ. ವ್ಯಕ್ತಿಗಾಗಲಿ ದೇಶಕ್ಕಾಗಲಿ ಬದುಕಲು ಮುಖ್ಯವಾಗಿ ನೆಮ್ಮದಿ ಬೇಕಿದೆ.

ಈಗ ನಿಮ್ಮ ಪರಂಪರೆಯನ್ನು ಮುಂದುವರೆಸುತ್ತ ಇರುವವರು ಯಾರು?

ಇದು ನನಗೂ ಕಾಡುತ್ತಿರುವ ಬಹಳ ಕಷ್ಟದ ಪ್ರಶ್ನೆ. ಹೊಸ ತಲೆಮಾರಿಗೆ ಏನು ಮಾಡಬೇಕೆಂದೇ ಅರ್ಥವಾಗುತ್ತಿಲ್ಲ. ಅದು ಸೀಳುಹಾದಿಯಲ್ಲಿದೆ. ಕಲಾವಿದನಿಗೆ ಇದ್ದಕ್ಕಿದ್ದಂತೆ ದೊಡ್ಡ ಎಕ್ಸಪೋಶರ್ ಸಿಗುವುದಿಲ್ಲ. ಅದಕ್ಕಾಗಿ  ಕಷ್ಟಪಡಬೇಕಾಗುತ್ತದೆ. ನಮ್ಮ ಹಿರೀಕರಲ್ಲಿ ಈಗ ಯಾರೂ ಉಳಿದಿಲ್ಲ. ಅವರಿಲ್ಲದೆ ಹೊಸ ಎಕ್ಸಪೋಶರಿಗೆ ಅರ್ಥವೂ ಇಲ್ಲ. ನನ್ನಲ್ಲಿ ಇಬ್ಬರು ಹುಡುಗರು ಕಲಿಯುತ್ತಿದ್ದಾರೆ. ಅವರಿಗೆ ನಮ್ಮ ಕಬೀರ ಪರಂಪರೆಯಲ್ಲೇ ಹಾಡಿ ಎಂದು ಹೇಳುತ್ತಿದ್ದೇನೆ. ಹುಡುಗರಿಗೆ ಪರಂಪರೆ ಮುಂದುವರೆಸುವುದರಲ್ಲಿ ಆಸಕ್ತಿಯಿಲ್ಲ. ಬಾಲಿವುಡ್ ಕೋಕ್ ಸ್ಡುಡಿಯೊಗೆ ಹೋಗಬೇಕೆಂದು ತವಕ. ಆದರೆ ಅಲ್ಲಿ ಹೋಗುವುದಕ್ಕಾದರೂ ಭದ್ರ ಬುನಾದಿ ಬೇಕಲ್ಲ. ಸಿನಿಮಾಕ್ಕೆ ಹೋಗುವುದರಿಂದ ಹಣ ಕೀರ್ತಿ ಬರಬಹುದು. ಆದರೆ ಪರಂಪರೆಯ ಸಂಪರ್ಕದಲ್ಲಿರುವಾಗ ಕಲಾವಿದರಿಗೆ ಸಿಗುವು ಕಸುವು ಅದನ್ನು ಕತ್ತರಿಸಿಕೊಂಡು ಹೋದಾಗ ಸಿಗುವುದಿಲ್ಲ.

ಇದನ್ನು ಕೊಂಚ ವಿವರಿಸಿ

ನನ್ನ ಮುಂಬೈ ಅನುಭವವನ್ನೇ ತಗೊಳ್ಳಿ. ನಾನು ಅಲ್ಲಿದ್ದಾಗ ಸಿನಿಮಾಗಳಿಗೆ ಹಾಡಿದೆ. ಬಹಳಷ್ಟು ಸಂಗೀತಗಾರರ ಪರಿಚಯವಾಯಿತು. ಸ್ಥಿತಿವಂತ ಮಿರಾಸಿ ಜನ ಊಟಕ್ಕೆ ಕರೆಯುತ್ತಿದ್ದರು. ಗೌರವಿಸುತ್ತಿದ್ದರು. ನನ್ನ ಪ್ರವೃತ್ತಿಯಲ್ಲಿ ವಿಚಿತ್ರ ಬದಲಾವಣೆ ಆಯಿತು. ಹೀಗಿರುತ್ತ ಒಂದು ದಿನ ಗೆಳೆಯರು ಹೇಳಿದರು, `ಅರೆ ಯಾರ್! ನೀನು ಸಿನಿಮಾಕ್ಕೆ ಹಾಡಲು ನಿಂತೆಯಾ? ದುಡ್ಡಿನ ಹಿಂದೆ ಓಡಬೇಡ. ನೀನು ನಿನ್ನ ಪರಂಪರೆಯಲ್ಲಿ ಹಾಡುವಾಗ ಕಾಣುವಷ್ಟು ಸಮರ್ಥನಾಗಿ ಸಿನಿಮಾದಲ್ಲಿ ಕಾಣುವುದಿಲ್ಲ’ ಎಂದು ಎಚ್ಚರಿಸಿದರು. ಯಾವ ಪರಂಪರೆಯ ಬಲದಿಂದ ಇಲ್ಲಿತನಕ ಬಂದೆನೊ ಅದು ತುಂಡುಗಡಿಯುತ್ತಿದೆ ಎಂದು ನನಗೂ ಅನಿಸುತ್ತಿತ್ತು. ಈಗ ಸ್ನೇಹಿತರ ಮಾತು ನಾಟಿತು. ಪರಂಪರೆಯಲ್ಲಿ ಮುಂದುವರೆಸುವ ನಿಶ್ಚಯ ಮಾಡಿದೆ. ಮುಂಬೈ ಬಿಟ್ಟು ಊರಿಗೆ ಬಂದೆ. ನಮ್ಮದು ಕಬೀರನ ಪರಂಪರೆ. ಅವನನ್ನು ಹೊರತುಪಡಿಸಿ ಬೇರೇನೂ ಇಲ್ಲ. ಹಿಂದೊಮ್ಮೆ  ನಮ್ಮ ಹಿರೀಕರಿಗೆ ಕಬೀರನಿಂದ ಈಗ ಏನೂ ಆಗುವುದಿಲ್ಲ ಎಂದು ಅನಿಸಿತ್ತು. ಆದರೆ ಈಗ ಕಬೀರನ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಇದನ್ನು ಜನರ ಎದುರು ಮಂಡಿಸುವುದರಲ್ಲಿ ನನಗೆ ಕೊಂಚ ಅನುಭವವೂ ದಕ್ಕಿದೆ. ಕಬೀರನ ಪರಂಪರೆಯನ್ನು ನಮ್ಮ ಹುಡುಗರ ತಲೆಯಲ್ಲಿ ಹಾಕಬೇಕು. ಅವರೊಳಗೆ ಮುಖ್ತಿಯಾರನನ್ನು ತುಂಬಬೇಕು.

ನುಸ್ರತ್ ಫತೇಯಲಿ ಖಾನರು ಎರಡೂ ಹಾದಿಗಳಲ್ಲಿ ಪಯಣಿಸಿ ಯಶಸ್ವಿಯಾದರು 

ಅವರು ದೊಡ್ಡ ಕಲಾವಿದರು. ಮೊದಲ ಘಟ್ಟದಲ್ಲಿ ಪರಂಪರೆಯಲ್ಲಿದ್ದು ಮಹತ್ವದ ಕೆಲಸ ಮಾಡಿದರು. ಆದರೆ ಕೊನೆಯ ದಿನಗಳಲ್ಲಿ ಹೆಚ್ಚಾಗಿ ಫ್ಯೂಶನ್ ಹಾದಿಯಲ್ಲಿ ಹೋಗಿಬಿಟ್ಟರು; ಸ್ಟುಡಿಯೊ ಮತ್ತು ವಿದೇಶ ಪ್ರವಾಸಗಳಲ್ಲಿ ಬಿಜಿಯಾಗಿಬಿಟ್ಟರು; ಲಂಡನಿನಲ್ಲಿ ಮನೆಮಾಡಿದರು. ನನಗೂ ಒಮ್ಮೆ ಕೋಕ್ ಸ್ಟುಡಿಯೊಗೆ ಹೋಗುವ ಅವಕಾಶ ಸಿಕ್ಕಿತ್ತು. ಆದರೆ ತೃಪ್ತಿ ಸಿಗಲಿಲ್ಲ. ಅವರು ತಮಗೆ ಬೇಕಾದಂತೆ ಹಾಡಿಸುತ್ತಾರೆ. ನಮಗೆ ಬೇಕಾದಂತೆ ಅಲ್ಲ.

ಜನಪದ ಗಾಯಕರಾದ ನೀವು ಆಧುನಿಕ ವೇದಿಕೆಗಳಿಗೆ ತೆರೆದುಕೊಳ್ಳುವಾಗ ಸಮಸ್ಯೆ ಆಗುತ್ತಿತ್ತಾ? 

ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿತ್ತು. ಒಂದು ತಮಾಶೆ ಪ್ರಸಂಗ ಹೇಳುತ್ತೇಣೆ. ಇಂಡಿಯಾ ಇಂಟರ್‍ನ್ಯಾಶನಲ್ ಸೆಂಟರ್ ಕಾರ್ಯಕ್ರಮಕ್ಕೆ ನಾವು ಚಾದರಿನಲ್ಲಿ ಹಾರ್ಮೊನಿಯಂ ಕಟ್ಟಿಕೊಂಡು, ಅಲೆಮಾರಿಗಳ ತರಹ ಹೋಗಿದ್ದೆವು. ನಮ್ಮನ್ನು ಅಧಿಕಾರಿಗಳು ಒಳಗೆ ಬಿಟ್ಟುಕೊಳ್ಳಲಿಲ್ಲ. ಆಗ ಪ್ರೇರಣಾಗೆ ಫೋನ್ ಮಾಡಿದೆವು. ಅವರು ತಮ್ಮ ಕಡೆಯ ವ್ಯಕ್ತಿಯನ್ನು ಕಳಿಸಿ ಪ್ರವೇಶ ಕೊಡಿಸಿದರು. ಅವರು ದಾಲ್ ರೋಟಿ ಗಜ್ಜರಿಸಬ್ಜಿಯ ಊಟ ಕೊಡಿಸಿ, ರಿಯಾಜ್ ಮಾಡಿಕೊಂಡು ರೂಮಿನಲ್ಲಿರಿ. ನಾಡಿದ್ದು ನಿಮ್ಮ ಕಾರ್ಯಕ್ರಮ ಎಂದು ಹೇಳಿದರು. ಸಂಜೆಯಾಯಿತು. ಊಟ ಮಾಡಬೇಕು. ಮೆನು ಇಂಗ್ಲೀಶನಲ್ಲಿದೆ. ನಡುಗುತ್ತ ಮ್ಯಾನೇಜರಿಗೆ ಫೋನ್ ಮಾಡಿ `ಊಟ ಬೇಕು’ ಎಂದೆವು. `ಏನು ಊಟ’ ಎಂದು ಕೇಳಲು `ಮಧ್ಯಾಹ್ನ ಕೊಟ್ಟಿದ್ದನ್ನೇ ಕೊಡಿ’ ಎಂದೆವು. ಹೀಗೆ ಐದು ಹೊತ್ತು ಒಂದೇ ಊಟ ಮಾಡಿದೆವು.  ಸಂಘಟಕರಿಗೆ `ಸರ್, ಈ ಜನ ನೀವು ಮೊದಲ ದಿನ ಆರ್ಡರ್ ಮಾಡಿದ್ದನ್ನೇ ಪ್ರತಿದಿನ ತೆಗೆದುಕೊಳ್ಳುತ್ತಿದ್ದಾರೆ’ ಸೆಂಟರಿನ ಮೇನೇಜರ್ ಎಂದು ಹೇಳಿರಬೇಕು. ಸಂಘಟಕರು `ಪ್ರತಿದಿನ ಯಾಕೆ ಒಂದೇ ಊಟ ಮಾಡುತ್ತಿದ್ದೀರಿ? ಬೇಕಾದ್ದನ್ನು ತರಿಸಿಕೊಂಡು ತಿನ್ನಿ’ ಎಂದರು. ಆಗ ನಾವೆಂದವು `ಸರ್, ನಮಗೆ ಆರ್ಡರ್ ಮಾಡಲು ಬರುವುದಿಲ್ಲ’. ಆಗವರು ನಮ್ಮನ್ನು ಕಿಚನ್ನಿಗೆ ಕರೆದೊಯ್ದು, ಅಡುಗೆಯವರಿಗೆ ಪರಿಚಯಿಸಿ, ಇವರು ಕೇಳಿದ್ದನ್ನು ಕೊಡಿ ಎಂದು ಹೇಳಿದರು.

ಕಬೀರ ಪರಂಪರೆಗೂ ದರ್ಗಾಗಳ ಸೂಫಿ ಹಾಡಿಕೆಗೂ ವ್ಯತ್ಯಾಸವೇನು?

ಕಬೀರನೇ ದೊಡ್ಡಸೂಫಿ. ಸೂಫಿಗಳು ಸಾಂಪ್ರದಾಯಿಕ ಧರ್ಮದ ವಿಷಯದಲ್ಲಿ ಕೊಂಚ ರಾಜಿ ಮಾಡಿಕೊಳ್ಳುತ್ತಾರೆ. ನಮಾಜ್ ಮಾಡುವುದಾದರೆ ಮಾಡುತ್ತಾರೆ. ಕಬೀರ ಹಾಗಲ್ಲ. `ಮಸೀದಿಯಲ್ಲಿ ಬಾಂಗ್ ಕೊಡುವ ಮುಲ್ಲಾ, ನಿನ್ನ ಒಡೆಯ ಕಿವುಡನೇ? ಆತ ಇರುವೆಯ ಗೆಜ್ಜೆಯ ನಾದವನ್ನೂ ಆಲಿಸಬಲ್ಲವನು’ ಎಂದು ಹೇಳುತ್ತಾನೆ. ಅವನಿಗೆ ಲೋಕವನ್ನು ಮೆಚ್ಚಿಸುವ ಗರಜಿರಲಿಲ್ಲ. ಆತ್ಮಸಂತೋಷಕ್ಕೆ ಬೇಕಾಗಿ ಹಾಡುತ್ತಿದ್ದನು. ನಿಜವಾದ ಅನುಭಾವಿ ಎಲ್ಲ ಧರ್ಮಗಳ ದೋಷಗಳನ್ನು ಟೀಕೆ ಮಾಡುತ್ತಾನೆ. ಭಕ್ತಿ ಅನುಭಾವ ಒಳಗಿಂದ ಬರಬೇಕು. ಈಗಲೂ ಗುಡಿ ಅಥವಾ ಮಸೀದಿಯೊಳಗಿಂದ ಮೈಕಿನಲ್ಲಿ ಶಬ್ದ ಬರುವಾಗ, ಅದರ ಅಗತ್ಯವಿಲ್ಲ ಎಂದು ಆತ ಹೇಳಿದ್ದು ನೆನಪಾಗುತ್ತದೆ.

ಸತ್ಸಂಗ ಮತ್ತು ಸಾರ್ವಜನಿಕ ಸಂಗೀತ ಕಾರ್ಯಕ್ರಮದಲ್ಲಿ ಏನು ವ್ಯತ್ಯಾಸ?

ಬಹಳ ವ್ಯತ್ಯಾಸವಿದೆ. ಒಟ್ಟಿಗೆ ಕೂತು ಹಾಡಿಕೆ ಮಾಡುತ್ತಿದ್ದರೆ, ಕಲಾವಿದರ ಮತ್ತು ಕೇಳುಗರ ನಡುವೆ ಹೊಸ ಆಧ್ಯಾತ್ಮಿಕ ಸಂಬಂಧ ಬೆಳೆಯುತ್ತದೆ. ಒಳಗಿಂದ ಚೈತನ್ಯ ಹೊಮ್ಮುತ್ತದೆ. ಅದು ನಮಗೇ ಅರಿವಾಗುವುದಿಲ್ಲ. ಆಗ ಹಾಡಿಕೆಯೇ ಬೇರೆ ತರಹ ಆಗಿಬಿಡುತ್ತದೆ. ಖವಾಲಿ ಮತ್ತು ಮೆಹಫಿಲೆ ಸಮಾದಲ್ಲಿ ಕೂಡ ಈ ಫರಕಿದೆ. ಸತ್ಸಂಗದಲ್ಲಿ ಹಾಡಿನ ನಡುವೆ ವಿವರಣೆ ಇರಬಹುದು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಸ್ವಲ್ಪ ಕಮರ್ಶಿಯಲ್ ಆಗಿಬಿಡುತ್ತೇವೆ. ಟೆನ್ಶನ್ ಇರುತ್ತದೆ.

ಒಬ್ಬರೇ ಹಾಡಿಕೊಳ್ಳುವಾಗ?

ಯಾವುದೊ ಲೋಕಕ್ಕೆ ಹೋದ ಅನುಭವವಾಗುತ್ತದೆ. ಅಪೂರ್ವವಾದ ಸುಖ ಸಿಗುತ್ತದೆ. ಕಣ್ಣು ಪ್ರಜ್ವಲಿಸುತ್ತವೆ. ಹಾಡಿನ ನಿಜವಾದ ಅರ್ಥ ಇದೇ. ಆಗ ನಾವು ಸೀಮೋಲ್ಲಂಘನೆ ಮಾಡಿ ಮುಂದೆ ಹೋಗುತ್ತೇವೆ. ಹೊಸದನ್ನು ಮಾಡಬೇಕೆಂಬ ಪ್ರೇರಣೆ ಹುಟ್ಟುತ್ತದೆ. ರಿಯಾಜ್ ಎಂದರೆ ಆರಾಧನೆ. ದೇವರ ಜತೆಗೆ ಮಾಡುವ ಸಂವಾದ. ಆರಾಧನೆ ಇದ್ದಾಗ ಒಳಗಿನ ಅಹಂಕಾರ ನಾಶವಾಗುತ್ತದೆ. ಕಬೀರ `ಅಠಸಠ ತೀರತ ಘಟಕೇ ಅಂದರ್’ ಎಂದು ಹೇಳಿದಂತೆ, ಮಕ್ಕಾ-ಮದೀನ ನಮ್ಮೊಳಗೇ ಇವೆ ಅನಿಸುತ್ತದೆ. ಅವನ್ನು ನಾವು ಕಾಣತೊಡಗುತ್ತೇವೆ.

ನಿಮ್ಮ ಪ್ರಕಾರ ಕಬೀರನ ಅನುಭಾವದ ದರ್ಶನದ ಸಾರ ಯಾವುದು?

ಆತ ಹಾದಿಯನ್ನು ತೋರಿಸಲಿಲ್ಲ. ಕಸಾಯಿಯವನ ಮನೆಯ ಬಳಿ ಗುಡಿಸಲು ಹಾಕಿಕೊಂಡರೆ ನೀವೇಕೆ ಚಿಂತೆ ಮಾಡುವಿರಿ? ಅವನು ಮಾಡಿದ್ದನ್ನು ಅವನು ಉಣ್ಣುತ್ತಾನೆ’ ಎಂದು ಹೇಳಿದ; ಅವನು ಕುರಿಗಳನ್ನು ಉಳಿಸಲು ಯಾವುದೇ ಹಾದಿ ಹುಡುಕಲಿಲ್ಲ. ಅವನ ಕಾಲಕ್ಕೆ ಸಮಾಜದಲ್ಲಿ ಸ್ಪೃಶ್ಯ-ಅಸ್ಪೃಶ್ಯ ಮೇಲು-ಕೀಳು ಭಾವ ತೀವ್ರವಾಗಿತ್ತು.  `ಕಲ್ಲುಮಣ್ಣುಗಳಿಂದ ಮಸೀದಿ ಕಟ್ಟಿಸಿದರೆ ದೇವರು ನಿಮ್ಮವನಾಗುವನೇ’ ಎಂದು ಆತ ಪ್ರಶ್ನಿಸಿದ. `ಜನರನ್ನು ಭಯಪಡಿಸಿ ಒತ್ತಾಯಮಾಡಿ ಧರ್ಮದೊಳಕ್ಕೆ ತರುವುದೇಕೆ? ಯಾರಿಗೆ ದೇವರು ಬೇಕಾಗಿದ್ದಾನೊ, ಅವನು ತನ್ನೊಳಗಿನಿಂದ ಹುಡುಕಿಕೊಳ್ಳಬೇಕು. ಎಲ್ಲೀತನಕ ದೇವರು ಎಂದರೇನೆಂದು ಅರ್ಥವಾಗುವುದಿಲ್ಲವೊ, ಅಲ್ಲೀತನಕ ಮಾಡುವ ಆಚರಣೆಗಳೆಲ್ಲ ವ್ಯರ್ಥ. ಆತ್ಮಜ್ಞಾನ ಹುಟ್ಟದೆ ಲೋಕದ ಮತ್ತು ದೇವರ ಬಗ್ಗೆ ಪ್ರೀತಿ ಹುಟ್ಟುವುದಿಲ್ಲ’ ಎಂದ. ಅವನ ಕಾಲಕ್ಕೆ ಮೊಗಲರ ಆಳಿಕೆಯಿತ್ತು. ಕ್ರಾಂತಿಕಾರಿಯಾಗಿ ಮಾತಾಡುವುದು ಸುಲಭವಾಗಿರಲಿಲ್ಲ. ಆದರೆ ಅವನು ಯಾರಿಗೂ ಹೆದರಲಿಲ್ಲ.

ಮತಧರ್ಮದ ಹೆಸರಲ್ಲಿ ಗಲಭೆ ಹಿಂಸೆ ಘಟಿಸುವಾಗ ಕಲಾವಿದರಾಗಿ ಹೇಗೆ ಪರಿಭಾವಿಸುತ್ತೀರಿ?

ರಹಮತ್‍ಜೀ, ಬಹಳ ದುಃಖಿತನಾಗುತ್ತೇನೆ. ಚಿಂತೆಯಾಗುತ್ತದೆ. ಮನುಷ್ಯರ ಹೋರಾಟ ಮೂರು ವಿಷಯಗಳಲ್ಲಿ ನಡೆಯುತ್ತದೆ. ನಿತ್ಯ ಜೀವನಕ್ಕಾಗಿ. ಇದು ಆದಿಯಿಂದಲೂ ನಡೆದುಬಂದಿದೆ. ಪ್ರಳಯಕಾಲದವರೆಗೂ ಇರುತ್ತದೆ. ಎರಡನೆಯದು ಸಂಪತ್ತಿಗಾಗಿ. ಮೂರನೆಯದು ಧರ್ಮಕ್ಕಾಗಿ. ಈ ಮೂರನೇ ಹೋರಾಟಕ್ಕೆ ಮದ್ದಿಲ್ಲ.  ಮುಸ್ಲಿಮರಿರುವ ದೇಶಗಳಲ್ಲೇ ಧರ್ಮದ ಹೆಸರಲ್ಲಿ ಹಿಂಸೆ ನಡೆಯುತ್ತಿವೆ. ಶಿಯಾ ಸೂಫಿಗಳನ್ನು ಯಾರು ಕೊಲ್ಲುತ್ತಿದ್ದಾರೆ? ಮಕ್ಕಳನ್ನು ಯಾರು ಸಾಯಿಸುತ್ತಿದ್ದಾರೆ? ಒಬ್ಬ ಕಲಾವಿದನಾಗಿ ಕಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾನು ಬಲ್ಲೆ. ನನ್ನ ಹಾಡಿನ ದನಿಯ ಪ್ರಭಾವ ನಿಮ್ಮ ಮೇಲೆ ಆಗುತ್ತದೆಯಾದರೆ, ನನ್ನ ಕಲೆಯೊಳಗಿನ ಅಂತರ್ಗತ ಶಕ್ತಿ ಯಾವುದು? ಒಂದೇ ನಿಮಿಷದಲ್ಲಿ ನಿಮ್ಮ ಮನಸ್ಸಿನೊಳಗೆ ಅದು ತುಂಬಿಕೊಳ್ಳಬೇಕಾದರೆ ನಿಮ್ಮ ದೌರ್ಬಲ್ಯ ಏನು? ಈ ಸ್ವಭಾವತಃ ದುಷ್ಟರಾದವರು ದ್ವೇಷವನ್ನು ಒಮ್ಮೆಲೇ ಮೆದುಳಿನಲ್ಲಿ ಊರಿಬಿಡುತ್ತಾರೆ. ಗೋಧ್ರ್ರಾದಲ್ಲಿ ತಮ್ಮ ಜತೆವಾಸಿಗಳನ್ನು ಕೊಂದವರ ಮೆದುಳಿನಲ್ಲಿ ಯಾರು ಏನನ್ನು ಹಾಕಿದ್ದರು? ಯಾರೊ ಯಾರನ್ನೊ ಕೊಂದುಬಿಡುತ್ತಾರೆ. ಅದರ ಫಾಯದೆ ಇನ್ಯಾರೊ ಪಡೆಯುತ್ತಾರೆ. ಪೇಟೆಗಳು ಬಂದಾಗುತ್ತವೆ. ಪರಸ್ಪರ ಖಡ್ಗಗಳು ಒರೆಯಿಂದ ಹೊರಬರುತ್ತವೆ. ದ್ವೇಷವನ್ನು ಹಬ್ಬಿಸುವವರ ಶಕ್ತಿ ಯಾವುದು? ಅದರ ಪ್ರಭಾವಕ್ಕೆ ಒಳಗಾಗುವವರ ದೌರ್ಬಲ್ಯ ಯಾವುದು? ಅರ್ಥವಾಗುವುದಿಲ್ಲ.

ನಿಮ್ಮ ಹಲವಾರು ಕಛೇರಿ ಕೇಳಿರುವೆ. ಕೆಲವು ಕಾರ್ಯಕ್ರಮಗಳಲ್ಲಿ ನಿಮ್ಮ ಮೂಡು ಅಷ್ಟು ಚೆನ್ನಾಗಿರುವುದಿಲ್ಲ.

ಒಮ್ಮೊಮ್ಮೆ ಹೀಗಾಗುತ್ತದೆ. ಹವಾಮಾನವನ್ನು ನಿಯಂತ್ರಿಸುವುದು ಅಲ್ಲಾನ ಕೈಲಿದೆ. ಕೇಳುಗರ ಸ್ಪಂದನೆಯೂ ಮೂಡನ್ನು ಬದಲಿಸುತ್ತದೆ. ಸಂಗೀತದ ಸೂಕ್ಷ್ಮವನ್ನು ಹಿಡಿಯುವ ಕೇಳುಗರಿಲ್ಲದಾಗ, ಅವರಿಗೆ ಹಾಡಿನ ಅರ್ಥ ಸಿಗುತ್ತಿಲ್ಲ ಅನಿಸಿದಾಗ, ಹಾಡಿಕೆ ತಾನಾಗಿಯೇ ಮಂಕಾಗುತ್ತದೆ. ಅಂಥವರಿಗಾಗಿ ಬೇರೆಯೇ ತಯಾರಿ ಬೇಕು. ಹಾಡುವ ಮುಂಚೆ ಹಾಡಿನ ಅರ್ಥವನ್ನು ಅವರ ಭಾಷೆಯಲ್ಲಿ ಹೇಳಬಹುದು.

ಗೋರಖಪುರಕ್ಕೆ ಹೋಗಿದ್ದೀರಾ?

ಹೋಗಿದ್ದೇನೆ. ಕಾರ್ಯಕ್ರಮ ಉದ್ಘಾಟಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಂದಿದ್ದರು. ನಾನು ಹಾಡುವ ಹೊತ್ತಿಗೆ ಭಾಷಣ ಮುಗಿಸಿ ಹೋಗಿದ್ದರು. ಜನವಿತ್ತು. ಹಾಡಿದೆ. ಸಭೆಯಲ್ಲಿ ಒಬ್ಬ ಎದ್ದುನಿಂತು `ಕಬೀರನ ಸಮಾಧಿ ನಮ್ಮೂರಲ್ಲಿದೆ. ಆದರೆ ಹಾಡಲು ರಾಜಸ್ತಾನದಿಂದ ಕಲಾವಿದರನ್ನು ಕರೆಸಿದ್ದೀರಿ. ಇಲ್ಲಿ ಯಾರೂ ಇಲ್ಲವೇ?’ ಎಂದು ಸಂಘಟಕರಲ್ಲಿ ಪ್ರಶ್ನಿಸಿದ. ಸಂಘಟಕರು `ಇಲ್ಲಿಯೂ ಕಲಾವಿದರಿದ್ದಾರೆ. ಆದರೆ ಕಬೀರನ ಭಾಷೆಯನ್ನು ಚೆನ್ನಾಗಿ ಅರಿತ ಜನಪದ ಪರಂಪರೆ ರಾಜಸ್ತಾನದಲ್ಲಿದೆ. ಈ ಪರಂಪರೆಯ ಕಲಾವಿದರು ಜೀವಮಾನವಿಡೀ ಇದನ್ನೇ ಹಾಡುವರು. ಅವರಿಗೆ ಕಬೀರನ ದರ್ಶನದಲ್ಲಿ ವಿಶೇಷ ತರಬೇತಿಯಿದೆ. ಅದಕ್ಕಾಗಿ ಕರೆಸಿದ್ದೇವೆ’ ಎಂದರು. ಪ್ರಶ್ನೆಯೂ ಸರಿಯಿತ್ತು. ಉತ್ತರವೂ ಸರಿಯಿತ್ತು.

ಮಿರಾಸಿ ಸಮುದಾಯದಿಂದ ಬಂದ ದೊಡ್ಡ ಗಾಯಕರು ಯಾರು?

ಪಾಕಿಸ್ತಾನದಲ್ಲಿ ರೇಶ್ಮಾ, ಮೆಹದಿ ಹಸನ್, ನುಸ್ರತ್ ಫತೇಅಲಿಖಾನ್, ಗುಲಾಮಲಿ ಖಾನ್, ಫರೀದ್ ಅಯಾಜ್, ಹುಸೇನ್‍ಬಕ್ಷ್ ಧಡ್ಡಿ; ಭಾರತದಲ್ಲಿ ಫಯಾಜ್‍ಖಾನ್, ರಶೀದ್‍ಖಾನ್. ದುರದೃಷ್ಟವೆಂದರೆ, ಕೆಲವರು ದೊಡ್ಡ ಹೆಸರು ಪಡೆದು ಖಾನ್ ಸಾಹೇಬರಾದ ಬಳಿಕ, ಸಮುದಾಯದತ್ತ ತಿರುಗಿ ನೋಡುವುದಿಲ್ಲ.

 

 

ಸಂಗೀತದಲ್ಲಿ ನಿಮ್ಮ ಆದರ್ಶ ಯಾರು?

ಎಲ್ಲರನ್ನೂ ಒಂದೇ ಚೌಕಟ್ಟಿನಲ್ಲಿ ಇಡಲು ಬರುವುದಿಲ್ಲ. ಬೇರೆಬೇರೆ ಕಾರಣಕ್ಕಾಗಿ ಎಲ್ಲರೂ ಆದರ್ಶಗಳೇ, ಲೆಜೆಂಡುಗಳೇ. ಭೀಮಸೇನ ಜೋಶಿಯವರಂತೆ ತಾನ್ ಹೊಡೆಯುವುದು ಎಲ್ಲರಿಗೂ ಸಾಧ್ಯವಿಲ್ಲ. ಬಡೇಗುಲಾಮಲಿ ಖಾನರು ಆಕಾರದಲ್ಲಿ ಹಾಡುತ್ತಾರೆ. ಅವರಿಗೆ ಶಬ್ದಗಳ ಜರೂರತ್ತು ಬೀಳುವುದಿಲ್ಲ. ಆಆ ಎಂದು ಶುರುಮಾಡಿದರೆ, ಇದೇ ಭಾವವನ್ನು ಪ್ರಕಟಿಸಲು ಯತ್ನಿಸುತ್ತಿದ್ದಾರೆ ಎಂದು ತಿಳಿದುಬಿಡುತ್ತದೆ. ಅಮೀರಖಾನ್ ಸಾಹೇಬರು ದೊಡ್ಡ ವಿದ್ವಾನರು. ಕಡಿಮೆ ಶಬ್ದಗಳಲ್ಲಿ ಅಪಾರ ಪ್ರಭಾವ ಬೀರುವ ಅವರ ಸಟೀಕತಾ ಗುಣ ದೊಡ್ಡದು. ದುಗುಡದ ದನಿ ಹೊರಡಿಸುವುದರಲ್ಲಿ ಅಬ್ದುಲ್ ಕರೀಂಖಾನರನ್ನು ಮೀರಿಸಿದವರಿಲ್ಲ. ಬಡೇಗುಲಾಂ ಹಾಗೂ ಅಮೀರ್ ಖಾನರು ತಮ್ಮ ಪ್ರಯೋಗಗಳಿಗೆ ಖ್ಯಾತರು. ಎಲ್ಲಿವರೆಗೆ ಕಲಾವಿದರಲ್ಲಿ ಬಾಗುವಿಕೆ ಕಲಿಯುವ ನಮ್ರತೆ ಇರುತ್ತದೆಯೊ ಅಲ್ಲಿತನಕ ಬೆಳೆಯುತ್ತ ಇರುತ್ತಾರೆ. ದೊಡ್ಡಕಲಾವಿದರ ಪಾದಗಳಲ್ಲಿ ಕುಳಿತು ಕಲಿಯುವುದು ಯಾವಾಗಲೂ ಇರುತ್ತದೆ. ನಾನು ಪರಿಪೂರ್ಣ ಎಂದು ಭಾವಿಸಿದ ದಿನ ನಾವು ಖತಂ ಆಗುತ್ತೇವೆ. ದೊಡ್ಡ ಕಲಾವಿದರು ಸಾಯುವ ಕಾಲಕ್ಕೂ ನಾವಿನ್ನೂ ಕಲಿಯುತ್ತಿದ್ದೇವೆ ಎಂದೇ ಹೇಳುತ್ತಿದ್ದರು.

ಕಲಾವಿದರಾಗಿ ನಿಮ್ಮ ಭಾರತದ ಕಲ್ಪನೆ ಯಾವುದು?

ಒಂದು ಅಂತಾರಾಷ್ಟ್ರೀಯ ಸೆಮಿನಾರ್ ನಡೆಯಿತು-ರಾಮಕೃಷ್ಣಾಶ್ರಮದಲ್ಲಿ. ಜಗತ್ತಿನ ಎಲ್ಲ ಕಡೆಯಿಂದ ಜನ ಬಂದಿದ್ದರು. ಸೋದರತೆ ಪ್ರೇಮ ಪ್ರೀತಿ ಬಗ್ಗೆ, ಜಗತ್ತಿನ ಕಲಾವಿದರು ವಿಜ್ಞಾನಿಗಳು ಚಿಂತಕರು ಕ್ರೀಡಾಪಟುಗಳು ತಮ್ಮ ಚಿಂತನೆ ಹಂಚಿಕೊಳ್ಳುವ ಕಾರ್ಯಕ್ರಮವದು. ಡಾ. ಕರಣಸಿಂಗ್ ಬಂದಿದ್ದರು; ಕ್ರಿಕೆಟರ್ ಕಪಿಲದೇವರ ಉಪನ್ಯಾಸವಿತ್ತು. ಅಬ್ದುಲ್ ಕಲಾಮರ ಉಪನ್ಯಾಸವಿತ್ತು.  ಇಂತಹ ದೊಡ್ಡದೊಡ್ಡ ವ್ಯಕ್ತಿಗಳ ಮಧ್ಯೆ ನನ್ನಂತಹ ಹಳ್ಳಿ ಕಲಾವಿದ, ಲೋಕದ ನೆಮ್ಮದಿ ಸೋದರತೆ ಬಗ್ಗೆ ಏನು ತಾನೇ ಹೇಳಬಲ್ಲೆ? ನಾನು ಭಾಷಣ ಮಾಡಲಿಲ್ಲ. ಬದಲಿಗೆ ಅಜಾನ್, ಹರಿಓಂ, ಸಿಖ್ಖರ ವಾಹೆಗುರು ಹಾಗೂ ಕ್ರೈಸ್ತರ ಹಿಮ್ ಎಲ್ಲವನ್ನೂ ಸೇರಿಸಿ ಒಂದು ರಚನೆ ಮಾಡಿ ಹಾಡಿದೆ. ಅದರಲ್ಲಿ ಯಾವುದೇ ಭಾಷೆಯ ಶಬ್ದವನ್ನು ಸೇರಿಸಲಿಲ್ಲ. ಕೇವಲ ನಾದ. ಅಜಾಂನ್ ಬಳಿಕ ಹರಿಓಂ, ಇದಾದ ಬಳಿಕ ವಾಹೆಗುರು, ಮತ್ತೆ ಹಿಮ್-ಹೀಗೆ 20 ನಿಮಿಷ ಆಲಾಪನೆ ಮಾಡಿದೆ. ಕೇಳುಗರಿಗೆ ಆಲಾಪನೆಯಿಂದಲೇ ಇದು ಮಸೀದಿಯ ಬಾಂಗ್, ಇದು ಮಂದಿರದ ದನಿ, ಇದು ಗುರುಬಾಣಿದಿದು ಚರ್ಚಿನ ಗಾಯನ ಅನಿಸುವ ಹಾಗೆ ಪುನರುಕ್ತಿ ಮಾಡಿದೆ. (ಹಾಡಿ ತೋರಿಸುವರು.) ಸಭೆಯಲ್ಲಿ ಇದರ ದೊಡ್ಡ ಪರಿಣಾಮವಾಯಿತು. ಎಲ್ಲ ಉಪನ್ಯಾಸಕರು ಈ ನಾದದ ಬಗ್ಗೆಯೇ ಮಾತಾಡಿದರು. ಕರಣಸಿಂಗ್ `ಒಬ್ಬ ವ್ಯಕ್ತಿಯೊಳಗೆ ಅಲ್ಲಾ, ಹರಿ, ವಾಹೆಗುರು, ಯೇಸು ಎಲ್ಲರೂ ಇದ್ದಾರೆ ಎನ್ನುವುದನ್ನು ಈ ಜನಪದ ಕಲಾವಿದ ನಮಗೆ ತೋರಿಸಿಕೊಟ್ಟ’ ಎಂದು ವಿಶ್ಲೇಷಿಸಿದರು. ರಹಮತ್ ಜೀ, ನಿಮ್ಮ ಪ್ರಶ್ನೆಗೆ ನನ್ನ ಉತ್ತರವಿಷ್ಟೇ: ನನ್ನ ಆವಾಜಿನಲ್ಲಿ ಅಲ್ಲಾ ಹರಿ ವಾಹೆಗುರು ಯೇಸು ತುಂಬಿಕೊಳ್ಳುತ್ತಾರೆಂದರೆ, ಭಾರತದ ಇಷ್ಟು ದೊಡ್ಡ ಜಾಗದಲ್ಲಿ ನಾವು ಯಾಕೆ ಒಟ್ಟಾಗಿ ಇರುವುದಕ್ಕೆ ಸಾಧ್ಯವಿಲ್ಲ? ಇದು ನನ್ನ ಕಲ್ಪನೆಯ ದೇಶ. ನನ್ನ ಕನಸು.

ನಿಮ್ಮ ಮುಂದಿನ ಪಯಣದ ದಿಕ್ಕು ಯಾವುದು?

ನನಗೆ ಜನರಿಂದ ಅಪಾರ ಪ್ರೀತಿ ಸಿಕ್ಕಿದೆ. ಕಾರ್ಯಕ್ರಮ ಸಿಕ್ಕಿವೆ. ಆದರೆ ಏನನ್ನು ಸಾಧಿಸಬೇಕು ಎಂದಿರುವೆನೊ ಆ ಗುರಿ ಮಾತ್ರ ದೂರದೂರ ಹೋಗುತ್ತಿದೆ. ಗುರಿಮುಟ್ಟುವ ಹಾದಿಯೂ ಕಾಣುತ್ತಿಲ್ಲ.

ಕರ್ನಾಟಕದಲ್ಲಿ ನೆಲೆಸಲು ಬಯಸುವ ಮುಖ್ತಿಯಾರ್ ಅಲಿ

ಕರ್ನಾಟಕದಿಂದ ಸಂಗೀತವನ್ನು ಉತ್ತರ ಭಾರತಕ್ಕೆ ಕೊಂಡೊಯ್ದವರಲ್ಲಿ ಮಾಗಡಿ ಸೀಮೆಯ ಸಾತನೂರಿನ ಪುಂಡರೀಕ ವಿಠಲನು (16ನೇ ಶತ.)  ಒಬ್ಬನು. ಚಕ್ರವರ್ತಿ ಅಕಬರನ ಆಸ್ಥಾನ ವಿದ್ವಾಂಸನಾದ ಈತ `ರಾಗಮಾಲಾ’ ಎಂಬ ಸಂಗೀತ ಗ್ರಂಥ ರಚಿಸಿದನು. ಚಕ್ರವರ್ತಿಯು ಈತನಿಗೆ `ಅಕಬರೀಯ ಕಾಳಿದಾಸ’ ಬಿರುದನ್ನು ನೀಡಿದನು. ಇದಕ್ಕೆ ಪ್ರತಿಯಾಗಿ ಕರ್ನಾಟಕಕ್ಕೆ ಹಿಂದೂಸ್ತಾನಿ ಸಂಗೀತವನ್ನು ತಂದವರಲ್ಲಿ ಭೂಗಂಧರ್ವ ರೆಹಮತ್‍ಖಾನ್, ಅಬ್ದುಲ್ ಕರೀಂಖಾನ್ ಹಾಗೂ ಅಲ್ಲಾದಿಯಾಖಾನ್, ಅಲಿ ಅಕಬರಖಾನ್ ಮುಖ್ಯರು. ಇವರು ಪ್ರತಿನಿಧಿಸುವ ಗ್ವಾಲಿಯರ್ ಕಿರಾಣ ಜೈಪುರ ಕೊಲ್ಕತ್ತಾ ಘರಾಣೆಗಳಲ್ಲಿ, ಸವಾಯಿ ಗಂಧರ್ವ, ಭೀಮಸೇನ ಜೋಶಿ, ಗಂಗೂಬಾಯಿ, ಮಲ್ಲಿಕಾರ್ಜುನ ಮನಸೂರ, ರಾಜೀವ ತಾರಾನಾಥ ಮುಂತಾದ ಸಂಗೀತಗಾರರು ಬಂದರು. 

ಈಚೆಗೆ ಉತ್ತರ ಭಾರತದಿಂದ ಜನಪದ ಗಾಯಕರು ಕರ್ನಾಟಕಕ್ಕೆ ಬಂದು ಹೊಸ ಸಂಗೀತದ ರುಚಿಯನ್ನು ಹರಡುತ್ತಾರೆ. ಇವರಲ್ಲಿ ರಾಜಸ್ತಾನದ ಮುಖ್ತಿಯಾರ್ ಅಲಿ, ಮಧ್ಯಪ್ರದೇಶದ ಪ್ರಹ್ಲಾದ್ ಟಿಪಾನಿಯಾ, ಪಂಜಾಬಿನ ಶಬನಂ ಮುಖ್ಯರು. ಇವರ ಜನಪ್ರಿಯತೆಗೆ ನಾದ ಮಾಧುರ್ಯಕ್ಕಿಂತ ಮಿಗಿಲಾದ ಕಾರಣ, ಕಬೀರ್ ಭಜನಗಳು ಮತ್ತು ಅದರಲ್ಲಿರುವ ಅನುಭಾವ, ಸಾಮರಸ್ಯದ ಆಶಯ, ವೈಚಾರಿಕತೆ. ಕಬೀರನ ನಿರ್ಗುಣ ಭಜನೆಗಳ ಹಾಡಿಕೆಗೆ ಖ್ಯಾತರಾದ ಕುಮಾರ ಗಂಧರ್ವರು ಕರ್ನಾಟಕ ಬಿಟ್ಟು ಮಧ್ಯಪ್ರದೇಶದ ದೇವಾಸವನ್ನು ನೆಲೆಮನೆಯಾಗಿಸಿಕೊಂಡರು.

ಕಬೀರ್ ಗಾಯಕರಾದ ಶಬನಂ ಕರ್ನಾಟಕವಾಸಿಯಾಗಿದ್ದಾರೆ. ಮುಖ್ತಿಯಾರ್ ಅಲಿ ಕೂಡ ಕರ್ನಾಟಕದಲ್ಲಿ ನೆಲೆಸಲು ಬಯಸುತ್ತಿದ್ದಾರೆ. ಹೀಗೆ ಶತಮಾನಗಳಿಂದ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಸಂಗೀತದ ಚುಂಬಕ ಗಾಳಿಯೂ ಬೀಸುತ್ತಲೇ ಇದೆ. ಚರಿತ್ರೆಯ ಹೆಸರಲ್ಲಿ ದೆಹಲಿ-ದಖನುಗಳ ನಡುವಣ ರಾಜಕೀಯ ಕದನಗಳನ್ನು ಕಲಿಸುವ ಶಿಕ್ಷಣ ವ್ಯವಸ್ಥೆ, ಇಂತಹ ಸಾಂಸ್ಕøತಿಕ ಕೊಡುಕೊಳೆಗಳನ್ನು ತಿಳಿಸದಿರುವುದು ದುರಂತ.  

ಮಧ್ಯಪ್ರದೇಶ ರಾಜಸ್ತಾನ ಸಿಂಧ್ ಗುಜರಾತುಗಳಲ್ಲೂ, ಪಾಕಿಸ್ತಾನದ ಸಿಂಧ್ ಪಂಜಾಬ್ ಪ್ರಾಂತ್ಯಗಳಲ್ಲೂ ಅಲೆಮಾರಿ ಜನಪದ ಗಾಯಕರಿದ್ದಾರೆ. ಇವರು ದರ್ಗಾ ಗುರುದ್ವಾರ ಗುಡಿಗಳ ಭೇದವಿಲ್ಲದೆ ಗುರುಬಾಣಿ, ಭಜನ್, ಖವಾಲಿ, ಗಜಲ್ ಹಾಡುವ ದೇಶಿ ಅನುಭಾವಿಗಳು. ಇವರನ್ನು ಮಿರಾಸಿ, ಕಲಾವಂತ, ರಬಾಬಿ, ಧಾಡಿ ಎಂದು ಗುರುತಿಸುವರು. ಅರಬ್ಬಿಯಲ್ಲಿ `ಮಿರಾಸ್’ ಎಂದರೆ ಪರಂಪರೆ ಎಂದರ್ಥ. ಕರ್ನಾಟಕದ ಹೆಳವರ ಹಾಗೆ, ಮಿರಾಸಿಗಳು ಮನೆತನ ಮತ್ತು ಸ್ಥಳೀಯ ರಾಜರ ಚರಿತ್ರೆಯನ್ನು ಹಾಡುತ್ತಿದ್ದ ಕುಲ ಕಥನಕಾರರು. ಇವರಲ್ಲಿ ಕೆಲವರು ಹಿಂದೂಸ್ತಾನಿ ಸಂಗೀತದ ಪಿತಾಮಹ ಅಮೀರಖುಸ್ರೊ  ಪ್ರಭಾವದಿಂದ ಸೂಫಿ ಪಂಥದಲ್ಲಿ ಗುರುತಿಸಿಕೊಂಡು,

ದರ್ಗಾಗಳಲ್ಲಿ ನೆಲೆಗೊಂಡರು. ಇದಕ್ಕೆ ಪೂರಕವಾಗಿ ಅಜ್ಮೀರಿನ ಮೊಯಿನುದ್ದೀನ್ ಚಿಸ್ತಿ, ದೆಹಲಿಯ ನಿಜಾಮುದ್ದೀನ್ ಚಿಸ್ತಿ ಮುಂತಾದ ಸೂಫಿಗಳು ಸಂಗೀತಪ್ರಿಯರಾಗಿದ್ದರು. ಕೆಲವು ಮಿರಾಸಿಗಳು ದೊರೆಗಳ ಆಸ್ಥಾನ ಗಾಯಕರಾಗಿ ತಮ್ಮದೇ ಘರಾಣೆ ಆರಂಭಿಸಿದರು. ಮತ್ತೆ ಕೆಲವರು ಮದುವೆ ಉತ್ಸವ ಉರುಸುಗಳಲ್ಲಿ ಹಾಡುತ್ತ ಚಾರಣ ಗಾಯಕರಾಗಿಯೇ ಉಳಿದುಕೊಂಡರು.

ಸಾಮಾಜಿಕವಾಗಿ ಕೆಳಸ್ತರಕ್ಕೆ ಸೇರಿದ ಮಿರಾಸಿಗಳಲ್ಲಿ ಸಿಖ್ ಮುಸ್ಲಿಂ ಹಿಂದೂ ಧರ್ಮಗಳಿಗೆ ಸೇರಿದವರಿದ್ದಾರೆ.

ಇವರು ಜನಪದ ರಚನೆಗಳ ಜತೆಗೆ ಮೊಯಿನುದ್ದೀನ್ ಚಿಸ್ತಿ, ಅಮೀರ್‍ಖುಸ್ರೊ, ಶಹಬಾಸ್ ಖಲಂದರ್, ಬುಲ್ಲೇಶಾ, ಕಬೀರ್, ಮೀರಾ ಮುಂತಾದವರ ರಚನೆಗಳನ್ನು ಎತ್ತಿಕೊಳ್ಳುವರು. ಈ ರಚನೆಗಳು ಪಂಜಾಬಿ ಗುಜರಾತಿ ಪೂರ್ವಿ ಪರ್ಶಿಯನ್ ಉರ್ದು ಸಿಂಧಿ ಭಾಷೆಯಲ್ಲಿವೆ. ಹೀಗೆ ಬಹುಭಾಷಿಕ, ಬಹುಧಾರ್ಮಿಕ, ಬಹುಪ್ರಾಂತೀಯ ಸಮುದಾಯವಾದ ಮಿರಾಸಿಗಳು, ದೇಶ-ಪ್ರಾಂತ್ಯಗಳ ಗಡಿಯ ಹಂಗಿಲ್ಲದೆ ವಿಶಾಲ ಪ್ರದೇಶದಲ್ಲಿ ಹರಿದಾಡುತ್ತಿದ್ದವರು.  ದೇಶವಿಭಜನೆಯು ಈ ಸಮುದಾಯವನ್ನು ಎರಡು ದೇಶಗಳಲ್ಲಿ ಹಂಚಿಹಾಕಿತು.  ದೇಶವಿಭಜನೆಯ ಬಲಿಪಶುಗಳಾದ ಮಿರಾಸಿಗಳಲ್ಲಿ ಅಗಲಿಕೆಯ ಪ್ರಜ್ಞೆ ವೈಯಕ್ತಿಕ ಅನುಭವವಾಗಿದೆ. ಹೀಗಾಗಿಯೇ ಇವರು ಹಾಡುವ ಹೀರಾ-ರಾಂಜಾರಂತಹ ಪ್ರೇಮಿಗಳ, ಗುರು-ಶಿಷ್ಯರ, ವಿರಹ-ಮಿಲನದ ಹಾಡುಗಳು, ಪರೋಕ್ಷವಾಗಿ ಅವರ ವ್ಯಥೆಯ ಕಥನಗಳಂತೆಯೂ ಕೇಳಿಸುತ್ತವೆ. ಅದರಲ್ಲೂ `ಕೇಸರಿಯಾ ಬಾಲಂ’ `ಲಂಬೀ ಜುದಾಯಿ’ ರಚನೆಗಳು ತಲ್ಲಣ ಹುಟ್ಟಿಸುವ ವಿರಹಗೀತೆಗಳು. ಎರಡೂ ದೇಶಗಳಲ್ಲಿ ಮೂಲಭೂತವಾದಿಗಳ ಒತ್ತಡದಲ್ಲಿಯೇ ತಮ್ಮ ಪರಂಪರೆಯನ್ನು ರಕ್ಷಿಸಿಕೊಂಡು ಬಂದಿರುವ ಈ ಸಮುದಾಯವು, ಗಾಯನ, ಕಾವ್ಯ, ಅನುಭಾವ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ದಾಟಿಸುತ್ತ ಬಂದಿದೆ.

ಈ ಪರಂಪರೆಯಲ್ಲಿ ಮೂಡಿದ ಗಾಯಕರಲ್ಲಿ ಮುಖ್ತಿಯಾರ್ ಅಲಿ ಒಬ್ಬರು. ಶಬನಂ ಅವರ ಕಬೀರ್ ಸಾಕ್ಷ್ಯಚಿತ್ರದ ಮೂಲಕ ಹೊರಲೋಕಕ್ಕೆ ಪರಿಚಿvರಾದ ಮುಕ್ತಿಯಾರ್, ಕರ್ನಾಟಕದಲ್ಲಿ ಜನಪ್ರಿಯರಾಗಿದ್ದಾರೆ.  ದಸರಾ ಉತ್ಸವ, ಹಂಪಿ ಉತ್ಸವ ಒಳಗೊಂಡಂತೆ ಕರ್ನಾಟಕದ ಅನೇಕ ಊರುಗಳಲ್ಲಿ ಹಾಡಿದ್ದಾರೆ. ಅವರಿಗೆ ಎಚ್. ಎಲ್. ನಾಗೇಗೌಡ ಪ್ರಶಸ್ತಿ ಸಂದಿದೆ. ಇವರ ಹಾಡಿಕೆ ಶುರುವಾಗುವುದೇ ಖುಸ್ರೋ ಅವರ `ಹರಿಓಂ’ ರಚನೆಯಿಂದ. ಜಾತ್ಯತೀತ ಪರಂಪರೆಯ ಹಾಡಿಕೆಯ ಪ್ರತಿನಿಧಿಯಂತಿರುವ ಮುಕ್ತಿಯಾರ್ ವೈಯಕ್ತಿಕವಾಗಿ ಒಬ್ಬ ಅನುಭಾವಿ- ಸಾಧಕ ಕೂಡ.

Leave a Reply

Your email address will not be published.