ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ

2014ರಲ್ಲಿ ಜಾರಿಯಾದ ಶಾಸನದ ಪ್ರಕಾರ ಕಾರ್ಪೋರೇಟ್ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿ ಹೊರುವುದು ಕಡ್ಡಾಯ. ಈ ಸಂಸ್ಥೆಗಳು ತಮ್ಮ ವಾರ್ಷಿಕ ನಿವ್ವಳ ಲಾಭದಲ್ಲಿ ಕನಿಷ್ಠ ಶೇಕಡಾ ಎರಡರಷ್ಟನ್ನು ಸಾಮಾಜಿಕ ಚಟುವಟಿಕೆಗಳಿಗೆ ವ್ಯಯಿಸಬೇಕು. ಸಂಸ್ಥೆಯೊಂದರ ಸಿ.ಎಸ್.ಆರ್. ಕಾರ್ಯಕ್ರಮಗಳ ಜಾರಿಯಲ್ಲಿ ಸ್ವತಃ ತೊಡಗಿಸಿಕೊಂಡಿರುವ ಲೇಖಕರು ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಸಮಾಜದ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದವರು ಆ ಸಮಾಜಕ್ಕೆ ಅಲ್ಪವನ್ನಾದರೂ ಮರಳಿ ನೀಡುವ ಸತ್ಸಂಪ್ರದಾಯ ಭಾರತಕ್ಕೆ ಹೊಸದೇನಲ್ಲ. ವ್ಯಕ್ತಿಗಳು, ಸಂಘ-ಸಂಸ್ಥೆಗಳು ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಜಮ್‍ಷೆಡ್‍ಪುರದ ಟಾಟಾ ಐರನ್ ಅಂಡ್ ಸ್ಟೀಲ್ ಕಂಪನಿ ಲಿಮಿಟೆಡ್ (ಈಗಿನ ಟಾಟಾ ಸ್ಟೀಲ್) ನೂರು ವರ್ಷಗಳಷ್ಟು ಹಿಂದೆಯೇ ಸಾಮಾಜಿಕ ಜವಾಬ್ದಾರಿಯನ್ನು ಸ್ವಯಂಪ್ರೇರಣೆಯಿಂದ ನಿರ್ವಹಿಸಿ ಇಡೀ ದೇಶಕ್ಕೆ (ಇಡೀ ವಿಶ್ವಕ್ಕೇ ಎನ್ನಬಹುದೇನೋ) ಮಾದರಿಯೆನಿಸಿತ್ತು.

ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿ.ಎಸ್.ಆರ್.) ಅರ್ಥಾತ್ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಭಾರತದಲ್ಲಿ ಸಾಂಪ್ರದಾಯಿಕವಾಗಿ ಜನೋಪಕಾರಿ ಚಟುವಟಿಕೆಯ ರೂಪದಲ್ಲಿದ್ದು ಅಷ್ಟಾಗಿ ಚರ್ಚೆಗೆ ಒಳಗಾಗದ ವಿಷಯವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಇದರ ಸ್ವರೂಪ ಬದಲಾಗಿದೆ. ದೇಣಿಗೆ ನೀಡುವ ಸಂಪ್ರದಾಯದ ಸೀಮಿತ ಪರಿಧಿಯಿಂದ ಹೊರಗೆ ಸಿ.ಎಸ್.ಆರ್.ನ ವ್ಯಾಪ್ತಿ ವಿಸ್ತರಿಸಿದೆ. ಅದು ವಿಧೇಯಕಗಳನ್ನು ಮೀರಿ ಆರ್ಥಿಕ, ಸಾಮಾಜಿಕ, ಹಾಗೂ ಪರಿಸರ ಆಯಾಮಗಳನ್ನು ಒಗ್ಗೂಡಿಸಿಕೊಂಡು ಸಾಮಾಜಿಕ ಒಳಿತಿಗೆ ನೆರವಾಗುವ ರೀತಿಯಲ್ಲಿ ಸಂಸ್ಥೆಗಳು ವ್ಯವಹಾರ ನಡೆಸುವ ಪರಿಯಾಗಿ ಬದಲಾಗಿದೆ.

ದಿನಾಂಕ 27 ಫೆಬ್ರವರಿ 2014ರಲ್ಲಿ ಪ್ರಕಟಗೊಂಡ ಕಂಪನೀಸ್ ಆಕ್ಟ್ 2013ರ ಸೆಕ್ಷನ್ 135 ಭಾರತದಲ್ಲಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯನ್ನು ಕಡ್ಡಾಯಗೊಳಿಸಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಈ ಶಾಸನ 2014ರ ಏಪ್ರಿಲ್ ಮೊದಲ ದಿನದಿಂದ ಜಾರಿಗೆ ಬಂದಿದೆ. 500 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಬಂಡವಾಳ ಹೊಂದಿರುವ, ಅಥವಾ ವಾರ್ಷಿಕ 1000 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರ ನಡೆಸುವ, ಅಥವಾ ವಾರ್ಷಿಕ 5 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಲಾಭ ಗಳಿಸುವ ಸಂಸ್ಥೆಗಳು ಈ ಶಾಸನದ ವ್ಯಾಪ್ತಿಗೆ ಒಳಪಡುತ್ತವೆ.

ಇಂತಹ ಕಂಪನಿಗಳು ವಾರ್ಷಿಕ ನಿವ್ವಳ ಲಾಭದಲ್ಲಿ ಕನಿಷ್ಠ ಶೇಕಡ ಎರಡರಷ್ಟನ್ನು ಸಿ.ಎಸ್.ಆರ್. ಚಟುವಟಿಕೆಗಳಿಗೆ ವ್ಯಯಿಸಬೇಕು. ಇದಕ್ಕಾಗಿ ಆಡಳಿತ ಮಂಡಳಿಯು ಕನಿಷ್ಠ ಒಬ್ಬ ಸ್ವತಂತ್ರ ನಿರ್ದೇಶಕರೂ ಸೇರಿದಂತೆ ಮೂರು ಅಥವಾ ಹೆಚ್ಚಿನ ನಿರ್ದೇಶಕರನ್ನೊಳಗೊಂಡ ಸಿ.ಎಸ್.ಆರ್. ಕಮಿಟಿಯನ್ನು ನೇಮಿಸಬೇಕು (ಇಬ್ಬರೇ ನಿರ್ದೇಶಕರಿರುವ ಖಾಸಗಿ ಕಂಪನಿಗಳಿಗೆ ನಿರ್ದೇಶಕರ ಸಂಖ್ಯೆಯಲ್ಲಿ ವಿನಾಯಿತಿ ಇದೆ). ಇಷ್ಟೇ ಅಲ್ಲದೆ ಇದು ಸಿ.ಎಸ್.ಆರ್. ಪಾಲಿಸಿಯನ್ನು ಅನುಮೋದಿಸಬೇಕು; ಸಿ.ಎಸ್.ಆರ್. ನಿಧಿಯನ್ನು ಚಟುವಟಿಕೆಗಳಿಗೆ ವ್ಯಯಿಸಲಾಗದಿದ್ದರೆ ಕಾರಣಗಳನ್ನು ನೀಡಬೇಕು; ಇವೆಲ್ಲವುಗಳನ್ನು ನಿರ್ದೇಶಕರ ವರದಿ ಹಾಗೂ ಕಂಪನಿಯ ಜಾಲತಾಣದಲ್ಲಿ ಪ್ರಕಟಿಸಬೇಕು.

ಅನುಬಂಧ ಏಳರ ಹನ್ನೊಂದು ಶಿರ್ಷಿಕೆಗಳಡಿಯಲ್ಲಿ ಉಲ್ಲೇಖಿಸಲಾಗಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಪೂರಕವಾಗುವ ಚಟುವಟಿಕೆಗಳನ್ನು ಸಿ.ಎಸ್.ಆರ್. ಎಂದು ಈ ಶಾಸನ ಪರಿಗಣಿಸುತ್ತದೆ. ಶಿಕ್ಷಣ, ಜಲಸಂರಕ್ಷಣೆ, ಆರೋಗ್ಯ-ನೈರ್ಮಲ್ಯ, ಬಡತನ ನಿರ್ಮೂಲನೆ, ಪರಿಸರ ಸಂರಕ್ಷಣೆ, ಕ್ರೀಡೆ ಮತ್ತು ಸಂಸ್ಕೃತಿ, ಲಿಂಗ ಸಮಾನತೆ, ಇತ್ಯಾದಿಗಳು ಈ ಅನುಬಂಧದಲ್ಲಿ ಸೇರಿವೆ. ಸಿ.ಎಸ್.ಆರ್. ನಿಧಿಯನ್ನು ಭಾರತದಲ್ಲಿಯೇ ವ್ಯಯಿಸಬೇಕು ಹಾಗು ಆಡಳಿತಾತ್ಮಕ ವೆಚ್ಚ ಶೇಕಡ 5ಕ್ಕಿಂತ ಹೆಚ್ಚಾಗಿರಬಾರದೆಂಬ ನಿಯಮಗಳಿರುವುದನ್ನು ಗಮನಿಸಬೇಕು.

ಸಿ.ಎಸ್.ಆರ್. ಕಮಿಟಿಯ ಕರ್ತವ್ಯಗಳು
• ನಿಯಮಾವಳಿಗಳನ್ನು ರೂಪಿಸಿ ಆಡಳಿತ ಮಂಡಳಿಗೆ ಶಿಫಾರಸು ಮಾಡುವುದು.
• ಸಿ.ಎಸ್.ಆರ್. ಚಟುವಟಿಕೆಗಳು ಮತ್ತು ವೆಚ್ಚಗಳನ್ನು ಆಡಳಿತ ಮಂಡಳಿಗೆ ಶಿಫಾರಸು ಮಾಡುವುದು.
• ಸಿ.ಎಸ್.ಆರ್. ಪಾಲಿಸಿಯನ್ನು ನಿರ್ದೇಶಿಸುವುದು.
• ಸಿ.ಎಸ್.ಆರ್. ಚಟುವಟಿಕೆಗಳನ್ನು ನಿಯಂತ್ರಿಸಲು ಪಾರದರ್ಶಕ ಕಾರ್ಯವಿಧಾನಗಳನ್ನು ರೂಪಿಸುವುದು.

ಸಿ.ಎಸ್.ಆರ್. ನಿಧಿಯನ್ನು ವ್ಯಯಿಸಲು ಲಭ್ಯವಿರುವ ಮಾರ್ಗಗಳು
• ಕಂಪನಿಯೇ ನೇರವಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು.
• ನೋಂದಾಯಿತ ಟ್ರಸ್ಟ್ ಗೆ ಯೋಜನೆಗಳನ್ನು ವಹಿಸುವುದು.
• ನೋಂದಾಯಿತ ಸೊಸೈಟಿಯ ಮೂಲಕ ಯೋಜನೆಗಳನ್ನು ಕಾರ್ಯಗತಗೊಳಿಸುವುದು.
• ಸೆಕ್ಷನ್ 8ರಡಿಯಲ್ಲಿ ಸ್ಥಾಪನೆಗೊಂಡ ಸಂಸ್ಥೆಗಳನ್ನು ಬಳಸಿಕೊಳ್ಳುವುದು.
• ಸಮುದಾಯ ಆಧಾರಿತ ಅಥವ/ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗ ಪಡೆಯುವುದು.

ಸಿ.ಎಸ್.ಆರ್. ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಕಾರ್ಯವಿಧಾನಗಳನ್ನು ಶಿಫಾರಸು ಮಾಡಲು ಆರು ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯೊಂದು 2015ರ ಫೆಬ್ರವರಿ 3ರಂದು ರಚನೆಗೊಂಡಿತು.

ಈ ಶಾಸನ ಅನುಷ್ಠಾನಕ್ಕೆ ಬಂದ ಮೊದಲ ಆರ್ಥಿಕ ವರ್ಷದಲ್ಲಿ 10475 ಕಂಪನಿಗಳು 14675 ಕೋಟಿ ರೂಪಾಯಿಗಳನ್ನು ಸಿ.ಎಸ್.ಆರ್. ಚಟುವಟಿಕೆಗಳಿಗೆ ಖರ್ಚು ಮಾಡಬೇಕಿತ್ತು. ಆದರೆ, 8803 ಕೋಟಿ ರೂಪಾಯಿಗಳನ್ನು ಮಾತ್ರ ಬಳಸಲಾಯಿತು. ನಿಗದಿಪಡಿಸಿದ ಮೊತ್ತವನ್ನು ವೆಚ್ಚ ಮಾಡುವಲ್ಲಿ ಕಂಪನಿಗಳು ವಿಫಲವಾಗಲು ಸಂಪನ್ಮೂಲಗಳ ಕೊರತೆ, ಸಮಂಜಸ ಯೋಜನೆಗಳನ್ನು ಗುರ್ತಿಸುವಲ್ಲಿನ ಅಡಚಣೆಗಳು, ರೂಪುರೇಷೆಗಳನ್ನು ತಯಾರಿಸುವಲ್ಲಿನ ವಿಳಂಬ, ಇತ್ಯಾದಿಗಳು ಪ್ರಮುಖ ಪಾತ್ರವಹಿಸಿವೆ.

ಶಿಕ್ಷಣ-ಕೌಶಲ್ಯಾಭಿವೃದ್ಧಿ ಮತ್ತು ಆರೋಗ್ಯ-ನೈರ್ಮಲ್ಯ ಸಿಂಹಪಾಲು ಪಡೆದ ಕ್ಷೇತ್ರಗಳು. ಸಿ.ಎಸ್.ಆರ್. ಹಣವನ್ನು ಕಳೆದ ನಾಲ್ಕು ವರ್ಷಗಳಲ್ಲಿ ಹೇಗೆ ಖರ್ಚು ಮಾಡಿದ್ದೇವೆ ಮತ್ತು ಮುಂದೆ ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಭಾರತದ ಸಂಸ್ಥೆಗಳ ಸಮಾಜಮುಖಿ ಭವಿಷ್ಯವನ್ನು ವ್ಯಾಖ್ಯಾನಿಸುತ್ತವೆ ಎನ್ನುತ್ತದೆ ಈ ವರದಿ.

ಕ್ರಿಸಿಲ್ ವರದಿಯ ಪ್ರಕಾರ 2018ರ ಮಾರ್ಚ್ 31ಕ್ಕೆ ಅಂತ್ಯಗೊಂಡ ನಾಲ್ಕು ಆರ್ಥಿಕ ವರ್ಷಗಳಲ್ಲಿ ಕಂಪನಿಗಳ ಸಿ.ಎಸ್.ಆರ್. ವೆಚ್ಚ 50000 ಕೋಟಿ ರೂಪಾಯಿಗಳನ್ನು ಮೀರಿತ್ತು. ಆದರೆ, ವ್ಯಯಿಸಲಾಗದ ವೆಚ್ಚ ಇದಕ್ಕಿಂತ ಅಧಿಕವಾಗಿದ್ದು (60000 ಕೋಟಿ ರೂಪಾಯಿಗಳಿಗೂ ಹೆಚ್ಚು) ಸಿ.ಎಸ್.ಆರ್. ಅನುಷ್ಠಾನದಲ್ಲಿನ ಅಡಚಣೆಗಳನ್ನು ಗುರ್ತಿಸಿ, ಇವುಗಳನ್ನು ಕ್ಷಿಪ್ರವಾಗಿ ನಿವಾರಿಸಬೇಕಾದ ಅಗತ್ಯವನ್ನು ಮನಗಾಣಿಸಿದೆ. ಸಿ.ಎಸ್.ಆರ್. ಯೋಜನೆಗಳ ನಿರ್ವಹಣೆ ಮತ್ತು ಪರಿಣಾಮಗಳ ಮೌಲ್ಯಮಾಪನವಾಗಬೇಕೆಂಬ ಅಂಶವನ್ನೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಗ್ರ 500 ಕಂಪನಿಗಳ ಅಂಕಿ-ಅಂಶಗಳನ್ನಾಧರಿಸಿದ ಇನ್ನೊಂದು ವರದಿಯಂತೆ, 2014-15ರಲ್ಲಿ 8188 ಕೋಟಿ ರೂಪಾಯಿಗಳಿದ್ದ ಸಿ.ಎಸ್.ಆರ್. ವೆಚ್ಚ 2017-18ರಲ್ಲಿ 11215 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು. ಇದರಲ್ಲಿ ಶಿಕ್ಷಣ-ಕೌಶಲ್ಯಾಭಿವೃದ್ಧಿ ಮತ್ತು ಆರೋಗ್ಯ-ನೈರ್ಮಲ್ಯ ಸಿಂಹಪಾಲು ಪಡೆದ ಕ್ಷೇತ್ರಗಳು. ಸಿ.ಎಸ್.ಆರ್. ಹಣವನ್ನು ಕಳೆದ ನಾಲ್ಕು ವರ್ಷಗಳಲ್ಲಿ ಹೇಗೆ ಖರ್ಚು ಮಾಡಿದ್ದೇವೆ ಮತ್ತು ಮುಂದೆ ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಭಾರತದ ಸಂಸ್ಥೆಗಳ ಸಮಾಜಮುಖಿ ಭವಿಷ್ಯವನ್ನು ವ್ಯಾಖ್ಯಾನಿಸುತ್ತವೆ ಎನ್ನುತ್ತದೆ ಈ ವರದಿ. ಸಂಸ್ಥೆಗಳ ಸಿ.ಎಸ್.ಆರ್. ನಿರ್ವಹಣಾ ಸಾಮರ್ಥ್ಯ ಹೆಚ್ಚಿಸಲು ಅಡ್ಡಿಯಾಗಿರುವ ಆಡಳಿತಾತ್ಮಕ ವೆಚ್ಚದ 5% ಮಿತಿಯನ್ನು ಪುನರ್‍ಪರಿಸೀಲಿಸಬೇಕಾದ ಅಗತ್ಯವಿದೆಯೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತದೆ. ಒಟ್ಟು ಸಿ.ಎಸ್.ಆರ್. ನಿಧಿಯಲ್ಲಿ ಮೊದಲ 10 ಕಂಪನಿಗಳ ಪಾಲು 33% ಹಾಗೂ ಪ್ರಥಮ 20 ಕಂಪನಿಗಳ ಪಾಲು 45% ಆಗಿರುವುದು ಗಮನಾರ್ಹ. 16% ಪಾಲಿನೊಡನೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, 6% ಪಾಲು ಪಡೆದಿರುವ ಕರ್ನಾಟಕ ತೃತೀಯ ಸ್ಥಾನದಲ್ಲಿದೆ. ಅನೇಕ ಕಂಪನಿಗಳು ಕನಿಷ್ಠ ಮಿತಿಗಿಂತ ಅಧಿಕ ಹಣವನ್ನು ಸಿ.ಎಸ್.ಆರ್.ಗೆ ವಿನಿಯೋಗಿಸಿವೆ.

ಕ್ರಮಿಸಿದ ಹಾದಿ

ಸಿ.ಎಸ್.ಆರ್.ನ ಆರಂಭಿಕ ವರ್ಷಗಳಲ್ಲಿ, ಸುಲಭವಾಗಿ ಲಭ್ಯವಿದ್ದ ಶಿಕ್ಷಣ ಕ್ಷೇತ್ರಕ್ಕೆ ಲಗ್ಗೆಯಿಟ್ಟವರ ಸಂಖ್ಯೆಯೇ ಹೆಚ್ಚು. ಶಾಲಾ ಕೊಠಡಿ-ಶೌಚಾಲಯಗಳ ದುರಸ್ತಿ/ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಲೇಖನ ಸಾಮಗ್ರಿಗಳ ವಿತರಣೆ, ಇತ್ಯಾದಿಗಳ ಕಡೆಗೆ ಗಮನ ಹರಿಸಿದ್ದು ಸಹಜವೇ ಆಗಿತ್ತು. ಅಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ತೆರೆದ ಬಾಹುಗಳಿಂದ ಸ್ವಾಗತಿಸಿದರಲ್ಲದೆ, ಸಹಕಾರವನ್ನೂ ನೀಡಿದ್ದು ಅಚ್ಚರಿಯೆನಿಸಲಿಲ್ಲ. ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರೂ ಸಂಭ್ರಮಿಸಿದರು. ಈ ಸಂಭ್ರಮ ಬಹು ಕಾಲ ಉಳಿಯಲಿಲ್ಲ.

ನಿರ್ವಹಣೆಯ ಕೊರತೆ ಹಾಗೂ ಕೆಲವೆಡೆ ವಿತರಿಸಿದ ಸಾಮಗ್ರಿಗಳ ಸಮರ್ಪಕ ಬಳಕೆಯಾಗದಿರುವುದು, ಖರ್ಚು ಮಾಡಿದ ಹಣ ವ್ಯರ್ಥವಾಗುತ್ತಿದೆಯೆಂಬ ಭಾವನೆ ಮೂಡಿಸಿತು; ಬರುವ ದಿನಗಳಲ್ಲಿ ನಿರ್ವಹಣೆ ಮತ್ತು ಸ್ಥಿರತೆಗೆ ಗಮನ ಕೊಡಬೇಕು ಹಾಗೂ ಯೋಜನೆಗಳನ್ನು ಕಾರ್ಯಗತಗೊಳಿಸುವ ಮುನ್ನ ಅಗತ್ಯಗಳನ್ನು ಅರಿತುಕೊಳ್ಳಬೇಕೆಂಬ ಪಾಠ ಕಲಿಸಿತು. ಚಟುವಟಿಕೆಗಳಲ್ಲಿ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಸಮಿತಿಗಳು, ಸ್ಥಳೀಯ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವುದರಿಂದ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಬಹುದೆಂಬ ನಂಬಿಕೆಯನ್ನು ದೃಢಗೊಳಿಸಿತು.

ಕೆಲವು ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ‘ಶಾಲೆಗಾಗಿ ನಾವು ನೀವು’ ಅಭಿಯಾನ ಹಮ್ಮಿಕೊಂಡಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಪ್ರತಿನಿಧಿಗಳು,

ಮೂಲಭೂತ ಸೌಕರ್ಯಗಳನ್ನು ಪೂರೈಸಿದ ನಂತರ ಪಠ್ಯೇತರ ಚಟುವಟಿಕೆಗಳಿಗೆ ಗಮನ ಹರಿಸಲಾಯಿತು.. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ಶಾಲೆಗಳಲ್ಲಿ ಯೋಗ, ಸಂಗೀತ, ಚಿತ್ರಕಲೆ ಮುಂತಾದ ಪಠ್ಯೇತರ ಚಟುವಟಿಕೆಗಳು ಆರಂಭವಾದವು. ಬಹುತೇಕ ಶಾಲೆಗಳು ಇವನ್ನು ಸ್ವಾಗತಿಸಿದರೂ ಸ್ಥಳಾಭಾವ, ಸಮಯಾಭಾವ, ಆಸಕ್ತ ವಿದ್ಯಾರ್ಥಿಗಳ ಕೊರತೆ, ಇತ್ಯಾದಿಗಳು ಚಿಂತನೆಗೆ ದೂಡಿದವು.

ಕಾಲಚಕ್ರ ಉರುಳಿದಂತೆ ಶಾಲೆಗಳ ಅಭಿವೃದ್ಧಿಗೆ ಕಂಪೆನಿಗಳ ನಡುವಿನ ಸ್ಪರ್ಧೆ ಮತ್ತು ಫಲಾನುಭವಿಗಳ ನಿರೀಕ್ಷೆ ಎರಡೂ ಅಧಿಕವಾಗತೊಡಗಿದವು. ಇಂತಹ ಅನಾರೋಗ್ಯಕರ ಬೆಳವಣಿಗೆಯಿಂದ ಸಿ.ಎಸ್.ಆರ್.ನ ಮೂಲ ಉದ್ದೇಶಕ್ಕೆ ಧಕ್ಕೆಯುಂಟಾಗುತ್ತದೆ ಎಂಬುದನ್ನು ಕಂಪನಿಗಳು ಅರಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕೆಲವು ಸಮಮನಸ್ಕ ಕಂಪನಿಗಳು ಒಂದಾಗಿ ಪರಸ್ಪರ ಪೂರಕವಾಗುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮುಂದಾದವು. ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ‘ಶಾಲೆಗಾಗಿ ನಾವು ನೀವು’ ಅಭಿಯಾನ ಹಮ್ಮಿಕೊಂಡಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಪ್ರತಿನಿಧಿಗಳು, ಸಂಸ್ಥೆಗಳ ಸಿ.ಎಸ್.ಆರ್. ಮುಖ್ಯಸ್ಥರು, ಸರ್ಕಾರೇತರ ಸಂಘಗಳು ಭಾಗಿಯಾಗಿ ಬೇಕುಬೇಡಗಳನ್ನು ಚರ್ಚಿಸುವುದರಿಂದ ಇಂತಹ ಸಮಸ್ಯೆಗಳನ್ನು ಪರಿಹರಿಸುವುದು ಸುಲಭವಾಗಿದೆ.

ಅನುಭಜನ್ಯ ಸೂತ್ರಗಳು
ಸ್ಪಷ್ಟ ಧ್ಯೇಯೋದ್ದೇಶಗಳನ್ನು ಹೊಂದಿರಬೇಕು.
• ಇವುಗಳಿಗನುಗುಣವಾಗಿ ಕಾರ್ಯಕ್ಷೇತ್ರಗಳನ್ನು ಆಯ್ದುಕೊಳ್ಳಬೇಕು.
• ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ನುರಿತ / ಸಮರ್ಥ ಪಾಲುದಾರರನ್ನು ನಿಯೋಜಿಸಬೇಕು.
• ಎಲ್ಲ ಪಾಲುದಾರರು ಹಾಗು ಫಲಾನುಭವಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
• ನಿಗದಿತ ವೇಳಾಪಟ್ಟಿಯಂತೆ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಬೇಕು.
• ಅಗತ್ಯವಿದ್ದಲ್ಲಿ ಸೂಕ್ತ ಮಾರ್ಪಾಟು ಮಾಡಬೇಕು.
• ಸಿ.ಎಸ್.ಆರ್.ನಲ್ಲಿ ತೊಡಗಿಸಿಕೊಳ್ಳಲು ಕಂಪನಿಯ ಸಿಬ್ಬಂದಿಗೆ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡಬೇಕು.
• ಒಂದು ಗ್ರಾಮ ಅಥವಾ ಪ್ರದೇಶದ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಳ್ಳಬೇಕು.

ಸಿ.ಎಸ್.ಆರ್.ನ ಉಪಉತ್ಪನ್ನಗಳು
• ಸಿ.ಎಸ್.ಆರ್. ಖರ್ಚಿನ ಬಾಬತ್ತಾದರೂ ಇದರಿಂದ ಸಂಸ್ಥೆಗಳಿಗೆ ಪರೋಕ್ಷವಾಗಿ ಲಾಭವಿದೆ.
• ಸಿ.ಎಸ್.ಆರ್. ವೃತ್ತಿಪರರಿಗೆ ಅವಕಾಶದ ಬಾಗಿಲು ತೆರೆದಿದೆ.
• ಸಾವಿರಾರು ಸಂಘ-ಸಂಸ್ಥೆಗಳು ತಮ್ಮ ಅಸ್ತಿತ್ವವನ್ನು ಉಳಿಸಿ-ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.
• ಸಂಸ್ಥೆಗಳ ಕುರಿತಂತೆ ಸಮಾಜದ ದೃಷ್ಟಿಕೋನ ಬದಲಾಗುತ್ತಿದೆ.

ಅಪಾಯದ ಕಂದಕಗಳು
• ಸಂಸ್ಥೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ಆದ್ಯತೆ ನೀಡಬೇಕೆಂಬ ನಿಯಮ ಪ್ರಾದೇಶಿಕ ಅಸಮತೋಲನ ಉಂಟುಮಾಡಬಹುದು.
• ಕೆಲವು ಕ್ಷೇತ್ರಗಳು ಶಕ್ತಿಯುತವಾಗಿ ಮತ್ತೆ ಕೆಲವು ಕ್ಷೇತ್ರಗಳು ಸೊರಗುವ ಸಾಧ್ಯತೆಗಳು.
• ಫಲಾನುಭವಿಗಳು ಪರಾವಲಂಬಿಗಳಾಗುವ ಸಾಧ್ಯತೆಗಳು.
• ಸರ್ಕಾರ ತನ್ನ ಜವಾಬ್ದಾರಿಯನ್ನು ಕ್ರಮೇಣ ಕಡಿಮೆಗೊಳಿಸಿಕೊಳ್ಳುವ ಸಾಧ್ಯತೆಗಳು.

Leave a Reply

Your email address will not be published.