ಸಾಗರ ಪರಿಸರದಲ್ಲಿ ಸಮಾಜಮುಖಿ ನಡಿಗೆ

ವಿ.ಹರಿನಾಥ ಬಾಬು ಸಿರುಗುಪ್ಪ

ಮೊದಲ ದಿನ…

ಕೊರೋನಾ ಕಾರಣದಿಂದ ಸರಿ ಸುಮಾರು ಒಂದು ವರ್ಷದವರೆಗೆ ನಡೆದುನೋಡು ಕರ್ನಾಟಕ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಹಾಗೆ ನೋಡಿದರೆ ಈ ಸಾಗರದ ನಡಿಗೆ ಕಳೆದ ವರ್ಷ ಇದೇ ದಿನಗಳಲ್ಲಿ ನಡೆಯಬೇಕಾಗಿತ್ತು. ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ನಡಿಗೆ ಛಲವಿಡಿದ ತ್ರಿವಿಕ್ರಮನಂತೆ ಮತ್ತೆ ಅಲ್ಲಿಗೇ ಆಯೋಜಿಸಲಾಗಿತ್ತು! ಸಾಗರದ ನಡಿಗೆಯ ಕನಸು ಕಾಣುತ್ತಿದ್ದ ‘ಸಮಾಜಮುಖಿ’ ಮನಸುಗಳು ನಡಿಗೆಯ ಹಿಂದಿನ ದಿನವೇ ಶಿವಮೊಗ್ಗದೆಡೆಗೆ ಪ್ರಯಾಣ ಬೆಳೆಸಿದ್ದವು. ನಡಿಗೆಯ ದಿನ ಶಿವಮೊಗ್ಗೆಯನ್ನು ನಿಧಾನಕ್ಕೆ ಆವರಿಸಿಕೊಳ್ಳುತ್ತಿದ್ದ ಬೆಳಗಿನ ಎಳೆ ಬಿಸಿಲಲ್ಲಿ ಪತ್ರಿಕಾಭವನದಲ್ಲಿ ತಂಡ ತಂಡವಾಗಿ ಬಂದು ಸೇರಿದವರು ಅಲ್ಲಿ ಆಯೋಜಿಸಿದ್ದ ಬಿಸಿ ಬಿಸಿ ತಿಂಡಿಯನ್ನು ಸವಿಯುತ್ತಾ ಒಂದು ವರ್ಷಕ್ಕೂ ಮೇಲ್ಪಟ್ಟು ದೂರವಾಗಿದ್ದ ಸ್ನೇಹದ ನೆನಪುಗಳನ್ನು, ಈ ಹಿಂದಿನ ನಡಿಗೆಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ಈ ನಡುವಿನ ಕೊರೋನಾ ಕಾಲದ ಘಟನೆಗಳನ್ನು ಭಯಂಕರವಾಗಿ ನೆನಯುತ್ತಾ, ಹೊಸ ಸದಸ್ಯರನ್ನು ಪರಸ್ಪರ ಪರಿಚಯಿಸಿಕೊಳ್ಳುತ್ತಾ, ನಡಿಗೆಯ ಖುಷಿಯ ಕ್ಷಣಗಳಿಗೆ ಮೆಲ್ಲನೆ ತಮ್ಮನ್ನು ತಾವೇ ತೆರೆದುಕೊಳ್ಳತೊಡಗಿದರು.

ಪತಿಕಾ ಭವನದಿಂದ ಶಿವಪ್ಪ ನಾಯಕನ ಅರಮನೆಗೆ ನಡಿಗೆಯ ಜಾಥಾವನ್ನು ಶಿವಮೊಗ್ಗ ಸ್ಥಳೀಯ ಭಾರತ್ ಟಿವಿ ಸಂಪಾದಕರಾದ ಹಾಲಸ್ವಾಮಿಯವರು ಉದ್ಘಾಟಿಸಿದರು. ತಂಡದ ಸದಸ್ಯರಾದ ಶಶಿಧರ್ ಭಾರಿಘಾಟ್ ರವರು ನಡಿಗೆಯ ರೂಪರೇ಼ಖೆಗಳನ್ನು ಮತ್ತು ಅದರ ಮಹತ್ವವನ್ನು ಕುರಿತು ವಿವರಿಸಿದರು. ಸಮಾಜಮುಖಿಯ ನಡಿಗೆಯ ‘ಬ್ಯಾನರ್’ ಹಿಡಿದು ಶಿವಮೊಗ್ಗದ ಬೀದಿಯಲ್ಲಿ ಸಾಗಿದ ತಂಡ ಶಿವಪ್ಪನಾಯಕರ ಅರಮನೆಗೆ ಬಂದು ನಿಂತಿತು. ಮರಮುಟ್ಟುಗಳಿಂದ ಮಾಡಲ್ಪಟ್ಟ ದೊಡ್ಡ ದೊಡ್ಡ ಕಂಬಗಳು, ಕಟಾಂಜನಗಳು, ಬಾಗಿಲುಗಳು, ಅವುಗಳ ಮೇಲಿನ ಚಿತ್ತಾರದ ಕೆತ್ತನೆಗಳು, ಅರಮನೆಯ ಭವ್ಯ ಸೌಂದರ್ಯಕ್ಕೆ ಮತ್ತದರ ಬೃಹತ್ತಿಗೆ – ಮಹತ್ತಿಗೆ, ಒಳಗಿದ್ದ ಅರಸರ ಕಾಲದ ಉಡುಗೆ ತೊಡುಗೆ, ಯುದ್ಧ ಸಾಮಾಗ್ರಿಗಳು ಇತ್ಯಾದಿಗಳ ಜೊತೆಗೆ ಹಿಂಭಾಗದಲ್ಲಿ ಮತ್ತು ಅರಮನೆಯ ಹೊರಾಂಗಣದಲ್ಲಿ ಇಡಲಾಗಿದ್ದ ಶಾಸನಗಳು, ತಾಳೆಗರಿಗಳ ಓಲೆಗಳು, ಶಿಲ್ಪಗಳ ಸಂಗ್ರಹಕ್ಕೆ ಮನಸೋತು ಮೂಕವಾಗಿ ಹೋದೆವು. ಪಕ್ಕದಲ್ಲೇ ಹರಿಯುತ್ತಿದ್ದೆ ತುಂಗೆಯ ಜೊತೆಗೆರಡು ಮಾತಾಡಿ, ಮನಸೋಯಿಚ್ಛೆ ಫೋಟೋ ತೆಗೆಸಿಕೊಂಡು ಮತ್ತೊಮ್ಮೆ ಪತ್ರಿಕಾಭವನಕ್ಕೆ ಬಂದು ಸೇರಿದೆವು. ಅರಮನೆಯಲ್ಲಿ ನಮಗೆ ಗೈಡ್ ಇಲ್ಲದ್ದರ ಕೊರತೆಯ ಜೊತೆಗೆ ಇನ್ನಷ್ಟು ಸಮಯವಿದ್ದರೆ ಎಂಬ ಭಾವ ಕಾಡುತ್ತಲೇ ಇತ್ತು.

ಹನ್ನೊಂದು ಗಂಟೆಗೆ ನೂರಾರು ಪ್ರದರ್ಶನಗಳನ್ನು ಕಂಡು ರಂಗಾಸಕ್ತರ ಮತ್ತು ರಂಗಕರ್ಮಿಗಳ ಮನದಲ್ಲಿ ಅಚ್ಚಾಗಿದ್ದ ಶಶಿಧರ್ ಭಾರಿಘಾಟ್ ಅವರ ‘ಸಹಗಮನ’ ಮತ್ತು ‘ಸಾಯುವನೇ ಚಿರಂಜೀವಿ’ ನಾಟಕ ಕೃತಿಗಳನ್ನು ಸಮಾಜಮುಖಿ ಪ್ರಕಾಶನದಿಂದ ಬಿಡುಗಡೆ ಮಾಡಲಾಯಿತು. ಖ್ಯಾತ ವಿಮರ್ಶಕರಾದ ರಾಜೇಂದ್ರ ಚೆನ್ನಿಯವರು ಪುಸ್ತಕವನ್ನು ಬಿಡುಗಡೆಗೊಳಿಸಿ ಪ್ರಸ್ತುತ ಸಾಮಾಜಿಕ ಅನಿಷ್ಠಗಳ ಬಗ್ಗೆ ವಿಚಾರಪೂರ್ಣ ಮಾತುಗಳನ್ನಾಡಿದರೆ, ಪುಸ್ತಕವನ್ನು ಮತ್ತದರ ಪ್ರದರ್ಶನಗಳ ಮಹತ್ತನ್ನು ಮತ್ತು ಅದರಿಂದ ತಾವು ಹೇಗೆ ಪ್ರಭಾವಿತನಾದೆ ಎನ್ನುವುದರ ಕುರಿತು ಸಾಸಿವೆಹಳ್ಳಿ ಸತೀಶ್ ತಮ್ಮ ಅನುಭವ ಹಂಚಿಕೊOಡರು.

ಪೂರ್ವ ನಿಗದಿಯಂತೆ ನಮ್ಮ ಪ್ರಯಾಣ ಸುಮಾರು ಎರಡು ಗಂಟೆಗೆ ಸಾಗರದ ವರದಶ್ರೀ ತಲುಪಿತ್ತು. ಈ ನಡುವೆ ಸಾಗರದ ನಡುಬೀದಿಯಲ್ಲಿ ನಮ್ಮ ಬಸ್ಸು ದಾರಿ ತಪ್ಪಿ ಬಂದ ಪರಿಣಾಮವಾಗಿ ಹಿಂದಕ್ಕೆ ತೆಗೆದುಕೊಳ್ಳುವಾಗ ನಿಂತು ಬಿಡಬೇಕೆ..? ಒಂದತ್ತು ನಿಮಿಷ ‘ತಳ್ಳು ಗೋವಿಂದ’ ಪ್ರವಹಸನದಿಂದಾಗಿ ‘ಟ್ರಾಫಿಕ್’ ಸಮಸ್ಯೆಗೆ ಕಾರಣವಾಗಬೇಕಾಯ್ತು. ನಡಿಗೆಯ ಅಂದ ಹೆಚ್ಚಿಸುವುದು ಇಂಥವೇ ತಾನೆ! ಲಗೇಜನ್ನೂ ಸಹ ಇಳಿಸದೆ, ರೂಮಿನೊಳಗಡೆಗೂ ಹೋಗದೆ ಸಮಯಾಭಾವದ ನೆಪವೊಡ್ಡಿ ನೇರ ಕೆಳದಿಗೆ ಹೊರಡಬೇಕಾಯಿತು. ಅಲ್ಲಿಯ ಮ್ಯೂಸಿಯಂನಲ್ಲಿಯ ವಸ್ತುಗಳೊಡನೆ ಉಭಯಕುಶಲೋಪರಿಯಲ್ಲಿ ತೊಡಗಿಕೊಂಡ ನಮ್ಮ ಜನ ಒಪ್ಪವಾಗಿ ಸಂಗ್ರಹಿಸಿಟ್ಟಿದ್ದ ತಾಳೆಗರಿಗಳೊಡನೆಯೂ ಮಾತುಕತೆಗಿಳಿದುಬಿಟ್ಟರು. ಬಹುಶಃ ನಾವೆಲ್ಲರೂ ನೋಡಿರಬಹುದಾದ ಇಷ್ಟು ಬೃಹತ್ತಾದ ತಾಳೆಗರಿಗಳ ಸಂಗ್ರಹ ಇದೇ ಆಗಿತ್ತು ಎನಿಸುತ್ತೆ.

ಕೆಳದಿಯ ರಾಣಿ ಚೆನ್ನಮ್ಮಳ ನೆನಪಿನಲ್ಲಿ ನಿರ್ಮಿಸಲಾಗಿದ್ದ ಅರಮನೆಯ ಹಜಾರ ಮತ್ತು ಅದರ ಆವರಣದಲ್ಲಿಯ ಶ್ರೀ ರಾಮೇಶ್ವರ ದೇವಾಲಯದ ಸಮುಚ್ಛಯಗಳಲ್ಲಿ ಓಡಾಡಿ ಹಲವು ಫೋಟೋಗಳಿಗೆ ಸಾಕ್ಷಿಯಾಗಿದ್ದಾಯ್ತು. ವಿಶಾಲವಾದ ಅಂಗಳ, ದೊಡ್ಡ ದೇವಸ್ಥಾನ, ದೀಪಸ್ಥಂಭ, ಅದರ ಮೇಲಿದ್ದ ರಾಣಿ ಪರಿವಾರದ ಚಿತ್ರ, ಮೂಲೆಯಲ್ಲಿ ಕುಳಿತಿದ್ದ ಬಾವಿ, ಎರಡು ದೇವಾಲಯಗಳ ಮಧ್ಯದಲ್ಲಿ ಕೆತ್ತಲ್ಪಟ್ಟಿದ್ದ ಪ್ರಾಣಿಗಳ ಮಧ್ಯದಲ್ಲಿದ್ದ ಲೈಂಗಿಕ ಶಿಲ್ಪಗಳು, ಅದೇ ಮೂಲೆಯಲ್ಲಿ ಕಂಡೂ ಕಾಣದಂತಿದ್ದ ಬೇಡರ ಕಣ್ಣಪ್ಪನ ಚಿತ್ರ, ಹಾಗೆಯೇ ದೇವಾಲಯದ ಬೆನ್ನಿಗಿದ್ದ ವಾಸ್ತು ಪುರುಷನ ಚಿತ್ರ ಅದರೊಟ್ಟಿಗಿದ್ದ ಅಳತೆ ಕೋಲು ಮತ್ತು ಶನಿ ಮೆಟ್ಟಿದ ಆಂಜನೇಯನ ವಿಗ್ರಹ ಹೀಗೆ ಇಂಚಿAಚೂ ಬಿಡದೆ ಕಣು,್ಣ ಕೆಮರಾದ ಜೊತೆಗೆ ಮನಸುಗಳನ್ನು ತುಂಬಿಕೊAಡು ಸಾಗರದ ವರದಶ್ರೀಗೆ ಹಿಂದಿರುಗಿ ಬಂದಾಗ ಪಕ್ಕದ ಕೆರೆಯಲ್ಲಿ ಸೂರ್ಯ ಮುಳುಗಲು ಸಜ್ಜಾಗಿ ನಿಂತಿದ್ದ!

ಮತ್ತೊAದು ಗಂಟೆಯೊಳಗೆ ಹೋಟೆಲಿನ ಸಭಾಗೃಹದಲ್ಲಿ ಏರ್ಪಡಿಸಲಾಗಿದ್ದ ಕುಗ್ವೆ ಗ್ರಾಮದ ಜನಪದ ಸೋಬಾನೆ ಹಾಡುಗಳು ಹಾಗೆ ಜೋಗಪ್ಪನ ಗೀಗೀ ಪದಗಳು ನಮ್ಮ ಇಡೀ ದಿನದ ದಣಿವನ್ನು ನೀಗಿಸಿ ಹೊಸ ಉಲ್ಲಾಸವನ್ನು ನೀಡಿದವು. ಜನಪದ ಕಲೆಗಳು ಮಾಸಿಹೋಗುತ್ತಿರುವ ಈ ಸಂದರ್ಭದಲ್ಲಿ ನಡಿಗೆಯ ಆಯೋಜಕರು ಇಂಥಾದ್ದೊAದು ಕಾರ್ಯಕ್ರಮವೇರ್ಪಡಿಸಿದ್ದಕ್ಕೆ ಅಭಿನಂದನಾರ್ಹರು.

ಎರಡನೇ ದಿನ…

ಸೂರ್ಯ ಮಂಜಿನೊಳಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ತೇಲಾಡಿಕೊಂಡಿದ್ದ! ಗಂಟೆ ಎಂಟಾದರೂ ಹೊರ ಬಾರದೆ ಮಗುವಿನಂತೆ ಹಟಮಾಡುತ್ತಿದ್ದ. ಇದು ಶ್ರೀಧರ ಆಶ್ರಮಕ್ಕೆ ಕಾಲ್ನಡಿಗೆಯಲ್ಲಿ ಹೊರಟವರಿಗೆ ಒಂದು ರೀತಿಯ ವರವೇ ಆಗಿತ್ತು. ಬಿಸಿಲಿಲ್ಲದೆ ಆಯಾಸವಾಗದಂತೆ ನಡೆಯಲು. ಸುಮಾರು ನಾಲ್ಕು ಕಿಮೀಗಳ ದೂರವನ್ನು ಹಾಡು , ಹರಟೆ, ಕೀಟಲೆಗಳ ಜೊತೆಗೆ ಎಡಬಲದಿ ಹಾಸಿದ್ದ ಹೂ, ಕಾಯಿ, ಗಿಡ, ಮರಗಳ ಸೊಬಗನ್ನು ಹಕ್ಕಿಗಳ ಹಾಡಿನ ಇಂಚರವನ್ನೂ ಮಂಜು ಬಿಡಿಸಿಟ್ಟಿದ್ದ ಮುತ್ತಿನ ಮಣಿ ಹಾರಗಳ ಸೊಬಗನ್ನು ಸವಿಯುತ್ತಾ ಶ್ರೀಧರ ಗುಡ್ಡವನ್ನು ಮುಟ್ಟಿದಾಗ ನಡಿಗೆಯ ಸಾರ್ಥಕತೆ ಮನದಟ್ಟಾಯಿತು. ಶ್ರೀಧರ ಆಶ್ರಮದಲ್ಲಿ ಸ್ವಲ್ಪ ಹೊತ್ತು ಕಳೆದು ಕೆಲವರು ಸಿಕ್ಕ ಸಮಯದಲ್ಲೇ ಯೋಗ ಧ್ಯಾನದಲ್ಲಿ ಮೈಮರೆತರು! ಕೆಳಗಿನ ಪುಷ್ಕರಣಿಯ ನೀರಿನಲ್ಲಿ ಧನ್ಯತೆಯನ್ನನುಭವಿಸುತ್ತಿದ್ದವರಿಗೆ ‘ಚಂಬೆ’ಯವರ ಘರ್ಜನೆ ಬಸ್ಸಿನ ಸೀಟುಗಳವರೆಗೂ ಓಡಿಸಿತು.

 

ಕೊಟ್ಟೆ ಇಡ್ಲಿ, ಚಟ್ನಿ, ಕೇಸರಿಬಾತ್ ಸವಿಯನ್ನು ಸವಿದು ಅಘೋರೇಶ್ವರನನ್ನು ಕಣ್ತುಂಬಿಕೊಳ್ಳಲು ಹೊರಟೆವು. ಇಕ್ಕೇರಿಯ ಅಘೋರೇಶ್ವರ ಕರ್ನಾಟಕದ ವಿಶಿಷ್ಠ ದೇವಾಲಯಗಳಲ್ಲೊಂದು. ಇಲ್ಲಿಯ ನಂದಿ ವಿಗ್ರಹ, ವೀರಭದ್ರನ ಶಿಲ್ಪಗಳು, ಕುಶಲ ಕೆತ್ತನೆಗಳು, ಶಿವನ ರುದ್ರ ಭೈರವ ಸ್ವರೂಪದ ಚಿತ್ರಗಳು ನಾಥಪಂಥ ಮತ್ತು ಕಾಳಾಮುಖ ಪಂಥದ ಚಹರೆಗಳನ್ನು ಒಡಮೂಡಿಸಿಕೊಂಡಿದೆ. ಇಲ್ಲಿಂದ ವರದಾ ನದಿ ಮೂಲವನ್ನು ಸಂದರ್ಶಿಸಿಕೊAಡು ಪ್ರಸನ್ನರ ಶ್ರಮಜೀವಿ ಆಶ್ರಮಕ್ಕೆ ಲಗ್ಗೆಯಿಟ್ಟೆವು!

ಅಲ್ಲಿ ನಮಗಾಗಿ ರಂಗಕರ್ಮಿ ಹಾಗು ನಿರ್ದೇಶಕಿ ಪ್ರತಿಭಾ ಸಾಗರ ಕಾಯುತ್ತಲಿದ್ದರು. ಆಶ್ರಮದ ಮೂಲೆ ಮೂಲೆಗಳಿಗೆ ನಮ್ಮನ್ನು ಸ್ವತಃ ಕರೆದೊಯ್ದ ಬಣ್ಣ ತಯಾರಿಕೆ, ಬಣ್ಣ ಹಾಕುವಿಕೆ, ನೂಲುಗಳ ಸಿದ್ಧತೆ, ನೇಯ್ಗೆ, ಬಟ್ಟೆ ಹೊಲೆಯುವುದು, ಅಚ್ಚು ಹಾಕುವುದು ಹೀಗೆ ವಿವಿಧ ಆಯಾಮಗಳ ಪರಿಚಯವ ಮಾಡಿಸಿ ನಮಗೆ ಶ್ರಮಜೀವಿಗಳ ಬಗ್ಗೆ ಗೌರವ ಭಾವನೆ ತಳೆಯುವಂತೆ ಮಾಡಿತು.

ಚರಕದ ಪಕ್ಕದಲ್ಲಿದ್ದ ಕಿನ್ನರಿಮೇಳ ನಮ್ಮನ್ನು ಅಕ್ಷರಶಃ ಕಿನ್ನರ ಲೋಕಕ್ಕೆ ಕರೆದೊಯ್ಯಿತು. ತುಮರಿಯನ್ನು ಕೇಂದ್ರವಾಗಿಟ್ಟುಕೊAಡು ಪ್ರಾರಂಭವಾದ ಮತ್ತು ಈಗಲೂ ತುಮರಿಯಲ್ಲಿಯೇ ಪ್ರಧಾನವಾಗಿ ಕಾರ್ಯಕ್ರಮ ನಡೆಸುತ್ತಿರುವ ಕಿನ್ನರಮೇಳ ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ಮಕ್ಕಳ ರಂಗಭೂಮಿಗೆ ಸಂಬAಧಿಸಿದ

ಬೇರೆ ಬೇರೆ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸುತ್ತಾ ಬಂದಿದೆ. ಅಲ್ಲಿ ನಮಗಾಗಿ ಚಿತ್ತಾಲರ ಅಬೋಲಿನ ಕಥೆಯನ್ನು ನಾಟಕವಾಗಿ ಅಭಿನಯಿಸಿದ ಶಿಬಿರಾರ್ಥಿಗಳು ನಮ್ಮ ಎದೆಯಾಳದೊಳಗೆ ಇಳಿದುಬಿಟ್ಟಿದ್ದರು. ಹಾಗೆಯೇ ಹಲವು ಕಥೆಗಳನ್ನು ಸಹ ಅಭಿನಯಿಸಿ ಕಥೆ ಹೇಳುವ ರೀತಿಗೆ ಹೊಸತನದ ಸ್ಪರ್ಶ ನೀಡಿದರು. ಅಲ್ಲಿಯೇ ಮಲೆನಾಡಿನ ವಿಶೇಷ ಖಾದ್ಯಗಳ ಜೊತೆಗೆ ಭೂರೀ ಭೋಜನ ಸವಿದು ನೀನಾಸಂ ಕಡೆಗೆ ಹೆಜ್ಜೆ ತುಳಿದೆವು.

ಕರ್ನಾಟಕದ ಮಟ್ಟಿಗೆ ರಂಗಭೂಮಿಯ ಕಾಶಿಯಂತಿರುವ ‘ನೀನಾಸಂ’ ಮ್ಯಾಗ್‌ಸೆಸೆ ಪ್ರಶಸ್ತಿ ವಿಜೇತ ಕೆ ವಿ ಸುಬ್ಬಣ್ಣನವರ ಕನಸಿನ ಕೂಸು. ಶಿವರಾಮಕಾರಂತರ ಹೆಸರಿನ ಭವ್ಯ ರಂಗಮAದಿರದ ಒಳ ಹೊರಗನ್ನು ಕಣ್ತುಂಬಿಕೊAಡು, ಸಂಜೆ ಕೆ ವಿ ಅಕ್ಷರ ರೊಡನೆ ನೀನಾಸಂ ಮತ್ತು ಇಂದಿನ ರಂಗಭೂಮಿಗೆ ಸಂಬAಧಸಿದAತೆ ವಿಚಾರ ವಿನಿಮಯ ಮಾಡಿಕೊಂಡೆವು. ಇದು ನಮ್ಮನ್ನು ರಂಗಭೂಮಿಯ ಬಗ್ಗೆ ಇನ್ನಷ್ಟು ಆಸ್ಥೆಯಿಂದ ನೋಡುವಂತೆ ಮಾಡಿತು. ನಮಗಾಗಿಯೇ ಆಯೋಜಿಸಿದ್ದ ಪಾಶ್ಚಾತ್ಯ ನಾಟಕ ‘ಮಳ್ಳ ಗಿಂಪೆಲ್’ ನಾಟಕವನ್ನು ನೋಡಿಕೊಂಡು ಸೊಗಸಾಗಿ ಅಭಿನಯಿಸಿದ ಪ್ರಶಿಕ್ಷಣಾರ್ಥಿಗಳನ್ನು ಅಭಿನಂದಿಸಿ ಮತ್ತೆ ಸಾಗರದ ವರದಶ್ರೀಗೆ ಬಂದು ಸೇರಿಕೊಂಡೆವು. ಹಿಂದಿನ ದಿನದಂತೆಯೇ ಊಟವಾದನಂತರ ಹಾಡು ಕುಣಿತ ನಗೆಹನಿ ಇತ್ಯಾದಿಗಳೊಂದಿಗೆ ಮನಸು ಹಗುರ ಮಾಡಿಕೊಂಡು ರೂಮು ಸೇರಿ ನಿದ್ದೆಗೆ ಜಾರಿದ್ದೇ ತಿಳಿಯಲಿಲ್ಲ.

ಕೊನೆಯ ದಿನ…

ಸಾಗರದಿಂದ ಹೊಸನಗರದ ಕಡೆಗೆ ಸಾಮಾನು ಸರಂಜಾಮುಗಳೊಡನೆ ಹೊರಟವರಿಗೆ ಹೊಸನಗರದ ಬಸ್ ನಿಲ್ದಾಣದಲ್ಲಿ ರುಚಿಯಾದ ತಿಂಡಿ ಕಾಯುತ್ತಿತ್ತು ಅಥವಾ ನಾವೆ ಅದಕ್ಕಾಗಿ ಕಾದು ಕುಳಿತೆವು! ನಗರದ ಶಿವಪ್ಪನಾಯಕನ ಕೋಟೆ ನಮ್ಮನ್ನು ಕೈಬೀಸಿ ಕರೆಯುತ್ತಿದ್ದಂತೆ ನಾವುಗಳೆಲ್ಲಾ ಆ ಎಳೆಯ ಬಿಸಿಲಿನಲ್ಲಿ ನಲಿದಾಡುತ್ತಾ ಸುತ್ತಲೂ ಹರಡಿದ್ದ ಮಲೆಯ ಹಸಿರ ಸಿರಿಗೆ ಮನಸೋತು ಹಕ್ಕಿಯಂತೆ ಹಾರಾಡಿ, ನವಿಲಿನಂತೆ ಕುಣಿದಾಡಿ ಚಿಕ್ಕಮಕ್ಕಳಂತೆ ಎಲ್ಲಾ ಬಿಗುಮಾನಗಳನ್ನು ಕಿತ್ತೊಗೆದು ಒಂದಾಗಿ ಬೆರೆತು ಕಲೆತು ಖುಷಿಗೊಂದು ಹೊಸ ಭಾಷ್ಯ ಬರೆದೆವು. ಕೋಟೆಯಿಂದಿಳಿದ ಮನಸ್ಸುಗಳು ಎಳೆನೀರು ಮತ್ತು ಕಬ್ಬಿನ ಹಾಲಿನ ಸವಿಯಲ್ಲಿ ಮಿಂದು ಅಲ್ಲಿಯೇ ಮರದ ಕೆಳಗೆ ಕುಳಿತು ನಡಿಗೆಯ ಅವಲೋಕನ ಮಾಡಿದೆವು. ಈ ಹಂತದಲ್ಲಿ ನಿನ್ನೆ ದಿನ ನೀನಾಸಂ ವಿದ್ಯಾರ್ಥಿಗಳು ಅಭಿನಯಿಸಿದ ‘ಮಳ್ಳ ಗಿಂಪೆಲ್’ ನಾಟಕದ ಅನಿಸಿಕೆ, ವಿಮರ್ಶೆ, ಚರ್ಚೆಯನ್ನು ಮಾಡಿದ್ದು ಆ ನಾಟಕ ಮತ್ತು ಅಭಿನಯಿಸಿದವರಿಗೆ ಸಲ್ಲಿಸಿದ ನಮನವಾಗಿತ್ತು. ಮುಂದುವರಿದು ಸಮಾಜಮುಖಿ ಪತ್ರಿಕೆಯೊಡನೆ ನಾವೆಲ್ಲಾ ಹೇಗೆ ಕೈಜೋಡಿಸಿ ಒಂದು ಸುಂದರ ಮತ್ತು ಸ್ವಸ್ತ ಸಮಾಜದ ನಿರ್ಮಾಣ ಮಾಡಲು ಸಹಕರಿಸಬಹದು ಎಂಬ ಆಲೋಚೆನೆಯ ಜೊತೆಗೆ ಮುಂದಿನ ನಡಿಗೆ ರೂಪರೇಷಗಳು ಮತ್ತು ಈ ನಡಿಗೆಯ ಲೋಪಗಳನ್ನು ಒಟ್ಟಾಗಿ ಚರ್ಚಿಸಿ ಪರಸ್ಪರ ಹಾರೈಸಿಕೊಂಡು ಬೀಳ್ಕೊಂಡೆವು.

ಅಕೇಶಿಯಾ ಎಂಬ ವಿಷವೃಕ್ಷ

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಶಶಿಧರ ಭಾರೀಘಾಟ್ ಅವರ ‘ಸಹಗಮನ ಮತ್ತು ಸಾಯುವನೆ ಚಿರಂಜೀವಿ’ ನಾಟಕದ ಪುಸ್ತಕದ ಬಿಡುಗಡೆಯನ್ನು ನೆರವೇರಿಸಿ ಮಾತನಾಡಿದ ವಿಚಾರವಾದಿ ರಾಜೇಂದ್ರ ಚೆನ್ನಿ ತಮ್ಮ ಮಾತಿನ ಮಧ್ಯೆ ಅಕೇಶಿಯಾ ಮರವನ್ನು ಕುರಿತು ಪ್ರಸ್ತಾಪಿಸಿದರು.

ಅಕೇಶಿಯಾ ಮರವು ಆಸ್ಟ್ರೇಲಿಯಾ ಮೂಲದ್ದಾಗಿದ್ದು ಅತ್ಯಂತ ವೇಗವಾಗಿ ಬೆಳೆಯುವ ಕಾರಣಕ್ಕಾಗಿ ಅದನ್ನು ಈ ಹಿಂದೆ ಮೈಸೂರು ಪೇಪರ್ ಮಿಲ್ (ಎಂಪಿಎಂ) ಗಾಗಿ ಕಚ್ಚಾವಸ್ತು ಉತ್ಪಾದನೆಗೆಂದು ಸುಮಾರು 80 ಸಾವಿರ ಎಕರೆ ಅರಣ್ಯ ಭೂಮಿಯನ್ನು ನಲವತ್ತು ವರ್ಷಗಳ ಗುತ್ತಿಗೆಯ ಆಧಾರದ ಮೇರೆ ಖಾಸಗಿ ಕಂಪನಿಗಳಿಗೆ ನೀಡಲಾಗಿತ್ತು ಆದರೆ ಈಗ ಯಾವ ಕಾರ್ಖಾನೆಗಳು ಇಲ್ಲದಿದ್ದರೂ, ಇದ್ದ ಕಾರ್ಖಾನೆಗಳು ಮುಚ್ಚಲ್ಪಟ್ಟಿದ್ದರೂ, ಗುತ್ತಿಗೆ ಅವಧಿ ಮೀರಿದ ನಂತರವೂ ಅಷ್ಟೂ ಭೂಮಿಯನ್ನು ಮತ್ತೆ ಮುಂದಿನ ನಲವತ್ತು ವರ್ಷಗಳಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಿದ್ದು ಸರಿಯಲ್ಲವೆಂದು ಇದರಿಂದ ಖಾಸಗಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟಂತಾಗುವುದೇ ಹೊರತು ಸಾರ್ವಜನಿಕರಿಗಾಗಲಿ ಅಥವಾ ಪರಿಸರಕ್ಕಾಗಲಿ ಯಾವುದೇ ಪ್ರಯೋಜನವಿಲ್ಲವೆಂದು ತಿಳಿಸಿದರು.

ಇದು ಸ್ಥಳೀಯ ಪರಿಸರದಲ್ಲದ ಮರವಾಗಿರುವುದರಿಂದ ಪ್ರಕೃತಿಯಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ. ಅಲ್ಲದೆ ವನ್ಯಜೀವಿ, ಜನಜೀವನ, ಹವಾಮಾನ, ಅಂತರ್ಜಲ ಮಟ್ಟದ ಮೇಲೆ ಹೀಗೆ ಹಲವು ದುಷ್ಪರಿಣಾಮಗಳನ್ನು ಉಂಟುಮಾಡುವುದರಿಂದ ಮುಂದಿನ ಪೀಳಿಗೆಗೆ ನಾವು ವಿಷವನ್ನಷ್ಟೆ ಬಿಟ್ಟು ಹೋಗಬಹುದು ಎಂದು ಅಕೇಶಿಯಾ ಮರದ ಅಪಾಯವನ್ನು ಕುರಿತು ಎಚ್ಚರಿಸಿದರು. ಈ ಮರದ ನೆರಳಿನಲ್ಲಿ ಯಾವ ಸಸ್ಯವೂ ಬೆಳೆಯಲಾರದು. ಕನಿಷ್ಠ ಹುಲ್ಲು ಸಹ ಬೆಳೆಯುವುದಿಲ್ಲ ಎಂಬುದು ವಿಚಾರಯೋಗ್ಯವೆನಿಸಿತು. ಇದರಿಂದ ಪಶು ಪಕ್ಷಿ ಪ್ರಾಣಿಗಳಿಗೆ ಆಗಬಹುದಾದ ಹಾನಿಯನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ.

ಈ ಬಗ್ಗೆ ಶಿವಮೊಗ್ಗೆಯಾದ್ಯಂತ ‘ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ’ ರಚಿಸಿಕೊಂಡು ಕರಪತ್ರಗಳನ್ನು ಮುದ್ರಿಸಿ ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಸರಕಾರದ ಗಮನ ಸೆಳೆವ ಕಾರ್ಯಕ್ರಮವನ್ನು ನಡೆಸುತ್ತಿರುವುದಾಗಿ ತಿಳಿಸಿದರು.

Leave a Reply

Your email address will not be published.