ಸಾಮಾಜಿಕ ಜೀವನ ಕ್ರಮಗಳ ನೈತಿಕ ಶಕ್ತಿಯೇ ಸಾಂಕ್ರಾಮಿಕ ರೋಗಗಳಿಗೆ ಮದ್ದು

ಬಚ್ಚಿಟ್ಟ ಬಯಕೆಗಳೇ ನಮ್ಮ ಕನಸುಗಳು, ಒತ್ತಡದ ಮಾನಸಿಕ ಹಿಂಸೆಗಳೇ ಮನೋರೋಗಗಳು ಎಂದು ಮನೋವಿಶ್ಲೇಷಣೆ ಮಾಡಿದ ಸಿಗ್ಮಂಡ್ ಫ್ರಾಯ್ಡ್ ಆ ಮೂಲಕ ಮನುಷ್ಯರ ಭಯ, ಆತಂಕ, ತಳಮಳದ ವರ್ತನೆಗಳು ಮತ್ತು ಸ್ವಪ್ನಗಳ ಸಿದ್ಧಾಂತ ಮಂಡಿಸಿದ. ಆ ರೀತಿಯಲ್ಲಿ ಈ ಕೊರೋನಾ ಕಾಲದ ಜಾಗತಿಕ ಮನೋವಿಶ್ಲೇಷಣೆ ಆಗಬೇಕು.

ವಿಕಾಸದ ಹಾದಿಯಲ್ಲಿ ಮಾನವ ಸಾಕಷ್ಟು ಸಾಂಕ್ರಾಮಿಕ ರೋಗಬಾಧೆಗಳನ್ನು ಅನುಭವಿಸಿ ಬಂದಿದ್ದಾನೆ. ಕೊರೋನಾ ಈ ಕಾಲದ ಒಂದು ಎಚ್ಚರಿಕೆಯ ಗಂಟೆ. ಎಲ್ಲ ರೋಗಗಳಿಗೂ ನಿಸರ್ಗದಲ್ಲೆ, ಸಮಾಜಗಳಲ್ಲೆ ಔಷಧವಿದೆ. ಯಾವ ಜೀವಿಯೂ ನಿಸರ್ಗಕ್ಕೆ ವೈರಿ ಅಲ್ಲ, ಮೇಲುಕೀಳು ಅಲ್ಲ. ನಿಸರ್ಗದಲ್ಲಿ ಮನುಷ್ಯ ಮನುಷ್ಯನಿಗೇ ಅಪಾಯಕಾರಿ. ಸಮಾಜಗಳು ಸಹನೆಯಿಂದ ಹೊಂದಾಣಿಕೆಯಿಂದ ಬಾಳುವುದಿಲ್ಲ.

ಕೊರೋನಾ ಸಾಂಕ್ರಾಮಿಕ ವೈರಸ್ಸು ಮನುಷ್ಯನನ್ನು ಕೊಲ್ಲಬೇಕು ಎಂದು ಹುಟ್ಟಿದ್ದಲ್ಲ. ಯಾವುದೇ ಸಾಂಕ್ರಾಮಿಕ ರೋಗಗಳಿಗೂ ಕಿಲ್ಲಿಂಗ್ ಇನ್‌ಸ್ಟಿಂಕ್ಟ್ ಇಲ್ಲ; ಭಾಗಶಃ ಅದು ಮಾನವರಲ್ಲೇ ಹೆಚ್ಚೇನೊ. ವೈರಾಣುಗಳಿಂದಾಗಿ ಸತ್ತದ್ದು ನಿಜ; ಆದರೆ ಆ ರೋಗಕ್ಕೆ ಮನುಷ್ಯರನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ಆದರೆ ಮನುಷ್ಯ ಸಹಮಾನವರನ್ನು ಕೊಲ್ಲುವ ವರ್ತನೆಗಳಲ್ಲಿ ಬಹಳ ಚಾಣಾಕ್ಷನಿದ್ದಾನೆ.

ಬಚ್ಚಿಟ್ಟ ಬಯಕೆಗಳೇ ನಮ್ಮ ಕನಸುಗಳು; ಒತ್ತಡದ ಮಾನಸಿಕ ಹಿಂಸೆಗಳೇ ಮನೋರೋಗಗಳು ಎಂದು ಮೊದಲ ಮಹಾಯುದ್ಧದ ರೋಗಿಗಳನ್ನು ಅವಲಂಬಿಸಿ ಮನೋವಿಶ್ಲೇಷಣೆ ಮಾಡಿದ ಸಿಗ್ಮಂಡ್ ಫ್ರಾಯ್ಡ್. ಆ ಮೂಲಕ ಮನುಷ್ಯರ ಭಯ, ಆತಂಕ, ತಳಮಳದ ವರ್ತನೆಗಳು ಮತ್ತು ಸ್ವಪ್ನಗಳ ಸಿದ್ಧಾಂತ ಮಂಡಿಸಿದ. ಈ ಕೊರೋನಾ ಕಾಲದ ಜಾಗತಿಕ ಮನೋ ವಿಶ್ಲೇಷಣೆ ಆಗಬೇಕು. ಆತನ ಶಿಷ್ಯ ಯೂಂಗ್ ಗತಕಾಲದ ಪುರಾಣಗಳ ಮೂಲಕ ಮಾನವ ಮನಸ್ಸು ಹೇಗೆ ಸಂಕೇತಗಳಲ್ಲಿ ವ್ಯಕ್ತವಾಗಿದೆ ಎಂದು ಸುಪ್ತ ಮನಸ್ಸಿನ ಆಳ ಹುಡುಕಿದ.

ಹಿಂದೂ ಧರ್ಮ ಸಾವುನೋವು ಪುನರ್ ಜನ್ಮಗಳಿಗೆ ಪಾಪಪುಣ್ಯಗಳೇ ಕಾರಣ ಎಂದು ಕರ್ಮ ಸಿದ್ಧಾಂತವ ಬೋಧಿಸಿತ್ತು. ಇಸ್ಲಾಂ ಧರ್ಮ ಮರುಭೂಮಿಯ ಬರ್ಬರ ಸಮಾಜದಲ್ಲಿ ಹುಟ್ಟಿತ್ತು. ಬದುಕುಳಿಯುವ ಜೀವಜಲಕ್ಕೆ ಮಿಡಿದು ಕ್ರೌರ್ಯದ ವಿರುದ್ಧವಾಗಿ ಸಹಮಾನವ ಪ್ರೇಮವನ್ನು ಪೈಗಂಬರ್ ಸಾರಿದ್ದರು. ಅದೇ ನೆಲೆಯಲ್ಲೇ ಸಮಕಾಲೀನವಾಗಿ ಏಸುಕ್ರಿಸ್ತ ಕರುಣೆಯ ನಾಗರಿಕತೆಯ ಚರ್ಚಿನ ಘಂಟೆ ಬಾರಿಸಿದ್ದ.

ಹಿಂದೂ ಧರ್ಮ ಪ್ರಾಚೀನವಾದುದು. ಅದರ ಜ್ಞಾನ ಪರಂಪರೆಗಳೆಲ್ಲ ಕಲಸುಮೇಲೋಗರವಾಗಿವೆ. ಶುಸ್ರುತ ಆದಿವಾಸಿಯಿಂದ ಔಷಧಶಾಸ್ತ್ರ ಕಲಿತನೊ… ಮಧ್ಯ ಏಷ್ಯಾದಿಂದ ಬಂದ ಆರ್ಯರಿಂದ ಅರಿತನೊ…! ಟರ್ಕಿಯಿಂದ ಬಂದವರ ಭೌಗೋಳಿಕ ಪರಿಸರದಲ್ಲಿ ಅಂತಹ ಮರಗಿಡ ಜೀವಜಾಲದ ಅರಿವಿರಲಿಲ್ಲ. ಹರಪ್ಪಾ ನಾಗರಿಕತೆಯಲ್ಲಿದ್ದ ಜ್ಞಾನ ಪರಂಪರೆಗಳು ದೇಶೀಯವಾಗಿ ವೈವಿಧ್ಯವಾಗಿದ್ದವು. ಕಾಲಾಂತರದಲ್ಲಿ ಆರ್ಯರು ಆಕ್ರಮಿಸಿಕೊಂಡು ಆ ವಿಚಾರಗಳನ್ನು ವೇದ ವಿಜ್ಞಾನದಲ್ಲಿ ನಿರ್ದಿಷ್ಟಗೊಳಿಸಿಕೊಂಡರು. ಒಂದು ಬಗೆಯಲ್ಲಿ ಜ್ಞಾನದ ಪೇಟೆಂಟ್ ಪಡೆದರು. ಹರಪ್ಪಾ ನಾಗರಿಕತೆ ಆರ್ಯರಿಂದ ನಾಶವಾಗಿತ್ತು; ಸಾಂಕ್ರಾಮಿಕ ರೋಗದಿಂದಲ್ಲ.

ಸಾಂಕ್ರಾಮಿಕ ರೋಗ ಪರಿಹಾರಕ್ಕೆ ಸಂಸ್ಕೃತಿಗಳಲ್ಲೂ ಕ್ರಮಗಳಿವೆ. ಅವೆಲ್ಲ ಜೀವನ ಕ್ರಮಗಳು. ಕೊರೋನಾ ಕಾಲದಲ್ಲಿ ಜೀವನ ಕ್ರಮಗಳ ಮೇಲೆ ನಿಯಂತ್ರಣ ಹೇರುವ ಮೂಲಕ ಸಾಂಕ್ರಾಮಿಕತೆಯನ್ನು ತಡೆಯಬಹುದು ಎಂಬ ಸರಳ ಉಪಾಯದಿಂದ ಸಂಚಾರ ತಪ್ಪಿಸಲಾಯಿತು. ಲಾಕ್‌ಡೌನ್ ಮಾಡಲಾಯಿತು. ಗೃಹ ನಾಗರಿಕತೆಯೇ ಆದಿಮಾನವ ಕಾಡಿನ ಕಾಲದ್ದು. ಪ್ರಾಣಿಗಳನ್ನು ಬೇಟೆ ಆಡಿ ಬಂದು ಬದುಕುವ ಆರ್ಥಿಕತೆ ಅಲ್ಲ ಇವತ್ತಿನದು. ಪ್ರಿಮಿಟೀವ್ ಎಕಾನಮಿಗೂ; ಪೋಸ್ಟ್ ಗ್ಲೋಬಲ್ ಎಕಾನಮಿಗೂ ದೊಡ್ಡ ಕಾಲದ ಅಂತರವಿದೆ. ಮನುಷ್ಯನೇ ಕಂಡುಹಿಡಿದ ಯಂತ್ರಗಳೆಲ್ಲ ಕಾರ್ಖಾನೆಗಳಲ್ಲಿ ತುಕ್ಕು ಹಿಡಿಯುವ ಸ್ಥಿತಿ ಬಂದರೆ ಮತ್ತೆ ಹೊಸ ವೈರಸ್ಸುಗಳು ಹುಟ್ಟುವ ಸಾಧ್ಯತೆ ಇದೆ. ಅದರಲ್ಲೂ ಡಿಜಿಟಲ್ ಯುಗದ ಯಂತ್ರಗಳ ಬಾಧೆಗಳು ಪರಿಹಾರಗಳು ಇನ್ನೂ ದೊಡ್ಡ ತಲೆನೋವು. ಕೊನೆಯಲ್ಲಿ ಇದನ್ನು ಇನ್ನಷ್ಟು ಹೇಳುವೆ.

ಮನುಷ್ಯರ ಮನೋರೋಗ ಬಹಳ ಬೆಳದು ಮುಂದೆ ಬಂದುಬಿಟ್ಟಿದೆ. ವಿಕಾಸ ವಿಜ್ಞಾನಿಗಳ ಪ್ರಕಾರ ಮನುಷ್ಯ ಈಗ ತಾನೆ ಹುಟ್ಟಿ ಕಾಲಾಂತರದ ಭೌತ ಕಾಲಮಾನದ ಆಕಾಶ ವಿಕಾಸದಲ್ಲಿ ಒಂದು ನಿಮಿಷವೂ ಆಗಿಲ್ಲವಂತೆ. ಅಕಾಲಿಕ ಆಕಸ್ಮಿಕ ವೈರಸ್ಸುಗಳು ಮಳೆ ಬಂದ ಹಾಗೆಯೇ ಕೊಡೆ ಹಿಡಿದರೆ ಸಾಯುವುದೇ… ಹೋಮೋ ಸೆಫಿಯನ್ ಹುಟ್ಟಿ ಇನ್ನೂ ಸತ್ತೇ ಇಲ್ಲ. ಸತ್ತುಸತ್ತು ಹುಟ್ಟಿಹುಟ್ಟಿ ಸಾಂಕ್ರಾಮಿಕ ವಿಚಾರಗಳ ಜೊತೆಯೇ ಅನಾಮಿಕ ಸಾಂಕ್ರಾಮಿಕತೆಯನ್ನೂ ಹಬ್ಬಿಸುತ್ತಿದ್ದಾನಲ್ಲಾ… ರೋಗ ನಿರೋಧಕ ಶಕ್ತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸುತ್ತಿದೆ. ರೋಗ ನಿರೋಧಕವನ್ನು ಆದಿವಾಸಿಗಳು, ದಮನಿತರು ಹೇಗೆ ದಕ್ಕಿಸಿಕೊಂಡರು. ಈ ಬಗ್ಗೆ ಜೈವಿಕ, ಮಾನಸಿಕ, ಸಾಮಾಜಿಕ ಹಾಗೂ ಆಹಾರ ಸಂಶೋಧನೆಯು ವೈವಿಧ್ಯವಾಗಿ ಜೀವ ನೆಲೆಗಳಲ್ಲಿ ಹೇಗಾಗಿದೆಯೊ ಗೊತ್ತಿಲ್ಲ.

ಊಟ ಬಲ್ಲವನಿಗೆ ರೋಗವಿಲ್ಲ ಎನ್ನುತ್ತದೆ ಜನಪದ. ಪತಂಜಲಿಯ ಯೋಗ ಜ್ಞಾನ ದೇಹಾರೋಗ್ಯದ ವಿವೇಕ. ತರಾವರಿ ರೋಗಗಳಿಗೆ ಸಾವಿರಾರು ಮದ್ದುಗಳು ಜಗತ್ತಿನಲ್ಲಿವೆ. ಸಾವು, ರೋಗ, ಮುಪ್ಪು, ನೋವು ಅನಿವಾರ್ಯ; ಹುಟ್ಟೂ ಆಕಸ್ಮಿಕ. ಆಹಾರ ಕ್ರಮಗಳೇ ಆರೋಗ್ಯ ಸಂಹಿತೆ ಎಂದು ಶುಸ್ರುತವಾದವಿದೆ. ಮುಂದುವರಿದು ಹೇಳುವುದಾದರೆ; ನಿಮ್ಮ ದೇಹದ ಸಾಂಕ್ರಾಮಿಕವೊ ಅಸಾಂಕ್ರಾಮಿಕವೊ ಆಗಿರುವ ರೋಗ ಆ ಸಂದರ್ಭಕ್ಕೆ ನಿಮ್ಮದೇ ಆದ ರೋಗ. ಅದು ನಿಮ್ಮನ್ನೇ ಮನೆ ಮಾಡಿಕೊಂಡಿರುವಾಗ ನೀವೇ ನಿಮ್ಮ ರೋಗಗಳ ವೈದ್ಯರಾಗಬೇಕು; ಜೀವನ ಕ್ರಮವೂ ಆಹಾರವೂ ತಂತಾನೆ ಔಷಧವಾಗಬೇಕು. ಕುಟುಂಬ ಎಂಬ ಸಮಾಜದ ಆರಂಭಿಕ ಘಟಕವನ್ನು ಹೀಗಾಗಿಯೇ ಯಾವತ್ತೂ ಯಾವ ಸರ್ಕಾರವೂ ದೇಶವೂ ಒಂದು ಸುರಕ್ಷಿತ ವಲಯ ಎಂದು ಭಾವಿಸುವುದು.

ಹಸಿವು ಕೂಡ ಒಂದು ಬಗೆಯಲ್ಲಿ ದೇಹ ಮನಸ್ಸಿನ ಶುದ್ಧಿಯ ನಡವಳಿಕೆ ಬಡದೇಶಗಳಲ್ಲಿದೆ. ಆಹಾರ ಉದ್ಯಮ ಮತ್ತು ಔಷಧ ಉದ್ಯಮಗಳಿಗೆ ಜಾಗತೀಕರಣದ ಈ ಕಾಲದಲ್ಲಿ ಹೆಚ್ಚು ನಿಗೂಢ ಸಂಬಂಧಗಳಿವೆ. ಇವೆರಡೂ ಅನೇಕ ಬಗೆಯ ರೋಗಗಳಿಗೆ ದಾರಿ ಮಾಡಿವೆ. ಬುದ್ಧ ಹಸಿವಿನಿಂದ ಮನಸ್ಸಿನ ಗರ್ವದ ದುರಾಸೆಯ ಕೊಬ್ಬನ್ನು ಕರಗಿಸುವ ಮಾನಸಿಕ ಸಂವರ್ಧನೆಯ ಮದ್ದನ್ನು ಸಾರಿದ. ಅಂತಹ ಬುದ್ಧತ್ವ ಪಾಲಿಸುವ ಚೀನಾದಲ್ಲೇ ಅತಿಯಾಗಿ ಮಾಂಸಾಹಾರ ಸೇವಿಸುವ ಆ ಸಮಾಜದಿಂದ ಕೊರೋನ ಹುಟ್ಟಿ ಬಂದದ್ದು ವಿಪರ್ಯಾಸಕರ.

ತಂತ್ರಜ್ಞಾನದ ವೇಗದ ಜೀವನ ಕ್ರಮದಲ್ಲಿ ಸಾಂಕ್ರಾಮಿಕ ರೋಗಗಳು ಯುದ್ಧಗಳ ರಣಭೂಮಿಯಾಗಿ ಪರಿವರ್ತನೆ ಆಗಬಲ್ಲವು. ರೋಗಿಗಳು ಕದ್ದು ಮುಚ್ಚಿ ಯಾಕೆ ತಲೆ ಮರೆಸಿಕೊಳ್ಳುತ್ತ ಸಾಂಕ್ರಾಮಿಕವಾಗುವರು? ರೋಗ ತಡೆಗೆ ಈಗ ಕಾನೂನು ಕ್ರಮಗಳಿವೆ. ಸಾಮಾಜಿಕ ಭಯವಿದೆ. ಬಡಪಾಯಿ ರೋಗಿಗಳು ವಿಪರೀತ ವಿಧಿವಾದಿಗಳು. ದೇವರು ಮಾಡಿದಂತಾಗಲಿ ಎಂದು ಸಾಯಲು ಸಿದ್ಧವಾಗಿರುತ್ತಾರೆ. ಸಾಯುವ ಮುನ್ನ ಬಂಧು ಬಳಗ ಮಡದಿ ಮಕ್ಕಳ ಮುಂದೆ ಅತ್ತು ಕರೆದು ಸಾಂತ್ವನ ಬಯಸುತ್ತಾರೆ. ಸಾಂತ್ವನ ಅಂತಿಮ ಔಷಧಿ ಅಲ್ಲ; ಸಾಮಾಜಿಕ ಜೀವನದ ಹೊಣೆಗಾರಿಕೆಯ ತಿಳಿವಳಿಕೆ ಬಹಳ ಮುಖ್ಯ.

ಕೊರೋನಾ ಭಯಾನಕ ಸಾಂಕ್ರಾಮಿಕ ರೋಗ ಅಲ್ಲ. ನಾಳೆ ನಾಳೆ ಇನ್ನೂ ಸೂಪರ್ ಸಾನಿಕ್ ವೇಗದಲ್ಲಿ ಗಾಳಿಯ ಜೊತೆ ಅಸಂಖ್ಯ ವೈರಸ್ಸು ಬೆರೆತು ಬಂದು ಇಡೀ ಮನುಷ್ಯರನ್ನೆ ಸವಾಲಿಗೆ ಒಡ್ಡಬಹುದು. ಅಂತಹ ಡೈನೋಸಾರಸ್‌ಗಳೇ ದೈತ್ಯವಾಗಿದ್ದರೂ ಬದುಕಿ ಉಳಿಯಲಿಲ್ಲ. ಆದರೆ ಆ ಜೀವಿಗಳ ಪುಟ್ಟ ರೂಪಗಳು ಮತ್ತದೇ ಭೂಮಿಯ ಮೇಲೆ ಬದುಕಿ ಉಳಿಯುವ ಹೋರಾಟದಲ್ಲಿ ರೂಪಾಂತರಗೊಂಡು ಬಂದಿವೆ. ಮನುಷ್ಯರ ಪಾಡೂ ಹಾಗೆಯೇ… ಡೈನೋಸಾರಸ್‌ಗಿಂತಲೂ ಸೊಳ್ಳೆ, ಜಿರಲೆ, ನೊಣಗಳು ಮೊದಲೇ ಭೂಮಿಯ ಮೇಲೆ ಹುಟ್ಟಿದ್ದವಂತೆ. ಹೈಸ್ಕೂಲಿನಲ್ಲಿ ಮಾಸ್ತರು ನಮಗೆ ಅಮೀಬಾ ಏಕಾಣು ಜೀವಿಯನ್ನು ದೂರದರ್ಶಕದಿಂದ ತೋರಿಸಿದ್ದರು. ಅವು ಈಗಲೂ ಬದುಕಿವೆ ಹೇಗೆ? ಏನು ಕಾರಣ? ಯಾಕೆ ಉಳಿದುಕೊಂಡಿವೆ? ಇದ್ದಕ್ಕಿದ್ದಂತೆ ಜನಸಂಖ್ಯಾ ಸ್ಫೋಟ ಯಾಕಿಷ್ಟು ಆಯಿತು? ಅದರ ಅಗತ್ಯ ಏನಿತ್ತು. ಮನುಷ್ಯ ಸಾಮರ್ಥ್ಯ ಎನ್ನುವುದೇ… ಹಾಗಾದರೆ ಸಾಂಕ್ರಾಮಿಕ ರೋಗಗಳು ಬಂದರೆ ಬರಲಿ ಬಿಡೀ… ಡಾರ್ವಿನ್ ಹೇಳಿದಂತೆ ಬದುಕಿ ಉಳಿಯುವ ಸಾಮರ್ಥ್ಯ ಇದ್ದವರು ಉಳಿಯುತ್ತಾರೆ…

ಹೀಗೆ ಈ ಕಾಲದಲ್ಲಿ ವಾದಿಸಲು ಬರುವುದಿಲ್ಲ. ಸುಮ್ಮನೆ ಖುಷಿಗೆ ಒಂದು ಕಾಡು ಕುರಿಯನ್ನೂ ಕೊಲ್ಲುವಂತಿಲ್ಲ. ಜೀವನ ಕ್ರಮಗಳಲ್ಲಿ ಈ ಕಾಲದ ನಾಗರಿಕತೆಗೆ ಹೊಂದುವಂತೆ ನೀತಿಸಂಹಿತೆಯ ಸುಧಾರಣೆಗಳನ್ನು ಅಳವಡಿಸಿಕೊಂಡೇ ಜೀವ ಇರುವಷ್ಟು ಕಾಲ ಅದನ್ನು ರೋಗಮುಕ್ತವಾಗಿ ಕಾಯ್ದುಕೊಳ್ಳಬೇಕು. ಸಾಂಕ್ರಾಮಿಕ ಪಿಡುಗುಗಳು ಮಾನವ ದುರಂತಗಳ ದೊಡ್ಡ ಸಂಗತಿ. ಅದು ವೈಯಕ್ತಿಕ ಸಮಸ್ಯೆ ಅಲ್ಲ. ದಿನಾ ಸಾಯೋರಿಗೆ ಅಳೋರು ಯಾರು ಎಂದು ನಿರ್ಲಕ್ಷ್ಯ ಮಾಡುವ ಉಡಾಫೆ ಅಲ್ಲ ಅದು. ಸಾಮೂಹಿಕವಾಗಿ ಸಾರ್ವತ್ರಿಕವಾಗಿ ಪರಿಹಾರಗಳೇ ಕಾಣದೆ ಸಾಂಘಿಕವಾಗಿ ಸಾವೇ ಸಾಂಕ್ರಾಮಿಕವಾದಂತೆ ಅಬ್ಬರಿಸಿ ಬರುವಾಗ ಯಾವ ದೇಶಗಳಿಗೂ ಊರುಕೇರಿ ಮನೆಗಳಿಗೂ ಆಗ ಗಡಿಗಳು ಇರುವುದಿಲ್ಲ.

ಎರಡನೆ ಮಹಾಯುದ್ಧದಿಂದ ಜಗತ್ತು ಪಾಠ ಕಲಿಯಿತು. ಎಲ್ಲ ದೇಶಗಳೂ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡವು. ಎರಡನೆ ಮಹಾಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಅಮೆರಿಕಾ ಅಣ್ವಸ್ತ್ರಗಳ ಕಂಡುಕೊಂಡು ಅಣುಯುದ್ಧಗಳಿಗೆ ಬೇಕಾದ ಸಾಮರ್ಥ್ಯ ಸಾಧಿಸಿತು. ಈಗಲೂ ಎಲ್ಲ ದೇಶಗಳಿಗೂ ಬೇಕಾದಷ್ಟು ಯುದ್ಧೋಪಕರಣಗಳನ್ನು ಅದು ಮಾರಿ ಬೃಹತ್ ಬಂಡವಾಳವನ್ನು ಬಾಚಿ ಶ್ರೀಮಂತವಾಗಿದೆ. ಆದರೆ, ಈಗ ಕರೋನಾ ಕಾಲದಲ್ಲಿ ಸಾಂಕ್ರಾಮಿಕತೆಯನ್ನು ತಡೆಯಲಾಗದೆ ತನ್ನ ನಾಗರಿಕರನ್ನು ಸಮಾಧಿ ಮಾಡುತ್ತಿದೆ. ತನಗೆ ಪೈಪೋಟಿ ಆಗುತ್ತಿರುವ ಚೀನಾದ ಬಗ್ಗೆ ಈಗ ಅದು ಆರೋಪಿಸುತ್ತಾ ಭಾರತವನ್ನು ಈ ರೋಗಕಾಲದಲ್ಲಿ ಆಪ್ತಮಿತ್ರನಂತೆ ವಿಶ್ವ ರಾಜಕೀಯ ಮಾಡುತ್ತಿದೆ. ಕರೋನಾ ರೋಗಾಣುವಿಗೆ ಬೇಕಾದ ಔಷಧ ಸಹಾಯ ಸಹಕಾರಕ್ಕೆ ಒಪ್ಪಂದ ಮಾಡಿಕೊಳ್ಳುತ್ತಿದೆ.

ಜಾಗತೀಕರಣದ ಎರಡನೆ ಹಂತವಿದು. ವಿಶ್ವ ಆರ್ಥಿಕ ಬಲ ಕರೋನಾದಿಂದ ದುತ್ತೆಂದು ಕುಸಿಯಿತು. ಕಷ್ಟ ನಷ್ಟ ರೋಗ ನಿವಾರಣೆ ಆದ ನಂತರ ಮತ್ತೆ ಜಗತ್ತಿನ ಎಲ್ಲ ಹೆದ್ದಾರಿಗಳೂ ವಾಯು ಮಾರ್ಗಗಳು ಸಾಗರದ ಹಾದಿಗಳು ಚಾಲೂ ಆಗಿ ಅಂಗಡಿಗಳು ಬಾಗಿಲು ತೆರೆದು ಅದೇ ವಿಶ್ವ ವ್ಯಾಪಾರದ ಷೇರುಪೇಟೆಯ ವಹಿವಾಟು ಮುಂದುವರಿಯುತ್ತದೆ. ಆದರೆ ಮನುಷ್ಯನ ಕೇಡು ಯಾವತ್ತೂ ಅತ್ಯಾಧುನಿಕ ತಾಂತ್ರೀಕೃತವಾಗುತ್ತ ಸುಖದ ಗುರಿಯಲ್ಲಿ ನರಕದ ತಪ್ಪು ದಾರಿಗಿಳಿದು ತಾನೇ ಸಾಂಕ್ರಾಮಿಕ ರೋಗಾಣುವಿನಂತೆ ರೂಪಾಂತರವಾಗುತ್ತಿದ್ದಾನೆ. ಕಾಫ್ಕಾನ ಮೆಟಮಾರ್ಫಸಿಸ್ ಕಥೆ ನೆನಪಾಗುತ್ತಿದೆ.

ಈ ಕಾಲದ ಮನುಷ್ಯರು ನಾವು ತುಂಬಾ ಸುಶಿಕ್ಷಿತರು, ನಾಗರಿಕರು, ಮಾನವೀಯ ಅಂತಃಕರಣದ ಪ್ರತಿಮೆಗಳು, ಆದರೆ ಒಳಗೆ ಭಯಾನಕ ಮೃಗಗಳು, ರೋಗಗ್ರಸ್ಥ ಸಾಂಕ್ರಾಮಿಕ ಮನಸ್ಸಿನ ಅತ್ಯಂತ ಅಪಾಯಕಾರಿ ಸಂರಕ್ಷಿತ ಸಮಾಜದವರು. ಅತಿಯಾದ ನಯವಂಚಕ ನಾಗರಿಕ ಸಮಾಜಗಳು ಸಾಂಕ್ರಾಮಿಕ ರೋಗಗಳಿಂದ ಬಚಾವಾಗಬಹುದು. ಅದು ತಾತ್ಕಾಲಿಕ ಮಾತ್ರ. ನಮ್ಮ ಕವಚಗಳು ಯಕಃಶ್ಚಿತ್ ಅಷ್ಟೇ… ಕರೋನ ರೋಗಾಣುವಿನಿಂದ ಜಗತ್ತು ಬಿಡುಗಡೆ ಆಗಲಿ. ಆ ನಂತರ ಅದರಿಂದ ವಿಶ್ವ ರಾಜಕೀಯ ಆರ್ಥಿಕ ಸಾಮಾಜಿಕ ರಾಜಕಾರಣದ ಪಾಠ ಕಲಿಯಲಿ.

*ಲೇಖಕರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು, ಖ್ಯಾತ ಕಥೆಗಾರರು, ಚಿಂತಕರು.

Leave a Reply

Your email address will not be published.