ಸಾಮಾಜಿಕ ಮಾಧ್ಯಮಕ್ಕೆ ಜವಾಬ್ದಾರಿ ಏಕಿಲ್ಲ? ಬೇಕಿಲ್ಲವೇ?

-ಎಂ.ಕೆ.ಆನಂದರಾಜೇ ಅರಸ್

ಸಾಮಾಜಿಕ ಮಾಧ್ಯಮಗಳ ಶಕ್ತಿ ಜಗತ್ತನ್ನೇ ಅಲುಗಾಡಿಸುತ್ತಿದೆ. ಇದು ಸಕಾರಾತ್ಮಕದ್ದಾದರೆ ಮನುಷ್ಯ ಈವರೆಗೆ ಕಂಡುಹಿಡಿದಿರುವ ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಉಳಿದುಬಿಡುತ್ತದೆ. ಒಂದು ಪಕ್ಷ ಇದರ ಋಣಾತ್ಮಕ ಗುಣಗಳು ಹೆಚ್ಚಾದಲ್ಲಿ, ಜಗತ್ತು ಈ ಮಾಧ್ಯಮಗಳಿಂದ ಉದ್ಭವಿಸಬಹುದಾದ ಜಟಿಲ ಸಮಸ್ಯೆಗಳನ್ನು ಬಗೆಹರಿಸುವುದರಲ್ಲೇ ಮುಳುಗಬೇಕಾಗುತ್ತದೆ.

ಗ್ರೀssಸ್ ಪುರಾಣದಲ್ಲಿ ಪ್ರಾಚೀನ ಗ್ರೀಸ್ ಕವಿ ಹೆಸಿಯಾಡ್‍ನ ಪ್ರಕಾರ ಪ್ರಮೀತಿಯಸ್ ಸ್ವರ್ಗದಿಂದ ಬೆಂಕಿ ಕದ್ದಾಗ, ಗ್ರೀಸರ ದೇವತೆಗಳ ರಾಜ ಜಿûೀಯಸ್ ಪ್ರಮೀತಿಯಸ್‍ನ ಸಹೋದರ ಎಪಿಮೆಥಿಯಸ್‍ಗೆ ಪ್ಯಾಂಡೋರಳನ್ನು ಉಡುಗೆಯಾಗಿ ನೀಡಿ ಸೇಡು ತೀರಿಸಿಕೊಳ್ಳುತ್ತಾನೆ. ಪ್ಯಾಂಡೋರ, ಅಗ್ನಿ, ಕಮ್ಮಾರ, ಬಡಗಿ ಹಾಗೂ ಇತರರಿಗೆ ದೇವತೆಯಾಗಿದ್ದ ಹೆಫೆಸ್ಟಸ್ ಸೃಷ್ಟಿಸಿದ ಮೊದಲ ಮಹಿಳೆಯಾಗಿರುತ್ತಾಳೆ. ಪ್ಯಾಂಡೋರ ಬಳಿ ದುರ್ದೆಸೆಗಳು ಹಾಗೂ ಕೆಡುಕುಗಳು ತುಂಬಿರುವ ಒಂದು ಪೆÉಟ್ಟಿಗೆಯಿದ್ದು, ಆ ಪೆಟ್ಟಿಗೆಯಲ್ಲಿ ಏನಿದೆ ಎಂಬುದರ ಅರಿವಿರುವುದಿಲ್ಲ. ಜಿûೀಯಸ್ ಆ ಪೆಟ್ಟಿಗೆಯನ್ನು ತೆರೆಯಬಾರದೆಂದು ಪ್ಯಾಂಡೋರಳಿಗೆ ಹೇಳಿರುತ್ತಾನೆ. ಕುತೂಹಲ ತಡೆಯಲಾರದೆ ಪ್ಯಾಂಡೋರ ಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿದ್ದ ಕೆಡುಕುಗಳು ಪ್ರಪಂಚಕ್ಕೆ ಬಿಡುಗಡೆಯಾಗುತ್ತವೆ. ಅವಸರದಿಂದ ಪ್ಯಾಂಡೋರಾ ಆ ಪೆಟ್ಟಿಗೆಯನ್ನು ಮುಚ್ಚುತ್ತಾಳೆ. ಒಂದೇ ಒಂದು ವಸ್ತು ಮಾತ್ರ ಪೆಟ್ಟಿಗೆಯಲ್ಲಿ ಉಳಿದುಬಿಡುತ್ತದೆ. `ಭರವಸೆ’ ಹಾಗೆ ಉಳಿದುಬಿಡುವ ವಸ್ತು.

ಈ ಶತಮಾನದಲ್ಲಿ ನಾವು ಸಾಮಾಜಿಕ ಮಾಧ್ಯಮಗಳಿಂದಾಗುತ್ತಿರುವ ಪ್ರತಿಕೂಲ ಪರಿಣಾಮಗಳನ್ನು ಗಮನಿಸಿದಾಗ ಈ ಮಾಧ್ಯಮಗಳು ವಸ್ತುತಃ ಪ್ಯಾಂಡೋರ ಪೆಟ್ಟಿಗೆಗಳಾಗಿವೆಯೇ ಎಂಬ ಆಲೋಚನೆ ಕಾಡುತ್ತದೆ. ಇಂತಹದೊಂದು ಅಭಿಪ್ರಾಯ ಒಬ್ಬ ಸಾಮಾನ್ಯ ಬಳಕೆದಾರನಾಗಿ ನನ್ನ ಅನಿಸಿಕೆ ಮಾತ್ರವಲ್ಲ. ಸಾಮಾಜಿಕ ಮಾಧ್ಯಮ ತಜ್ಞರು ಹಾಗೂ ವೃತ್ತಿಪರರು ಸಹ ಸಾಮಾಜಿಕ ಮಾಧ್ಯಮದ ಅನಿಯಂತ್ರಿತ ದೈತ್ಯ ಬೆಳವಣಿಗೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಫೇಸ್‍ಬುಕ್‍ನ `ಯೂಸರ್ ಗ್ರೋತ್’ನ ಮಾಜಿ ಉಪಾಧ್ಯಕ್ಷ ಚಮಥ್ ಪಾಲಿಹಪಿಟಿಯಾ, ಫೇಸ್‍ಬುಕ್ ಈಗ ನಿಯಂತ್ರಿಸಲಾಗದ ರಾಕ್ಷಸ ಎಂದು ಹೇಳುತ್ತಾರೆ. ನಾವು ಪರಸ್ಪರ ಸಂವಹನ ಮಾಡುವ ರೀತಿಗೆ ಮೂಲಭೂತವಾಗಿ ಹಾನಿಕಾರಕವಾಗಿರುವ ಸಂಸ್ಥೆಯ ಸ್ಥಾಪನೆ ಹಾಗೂ ಬೆಳವಣಿಗೆಯಲ್ಲಿ ಪಾತ್ರ ವಹಿಸಿದ್ದಕ್ಕಾಗಿ ವಿಷಾದ ಹಾಗೂ ಅಪರಾಧಿತ್ವ ಭಾವನೆಗಳು ಕಾಡುತ್ತಿವೆ ಎಂದು ಹೇಳುತ್ತಾರೆ. ಮುಂದುವರೆದು “ನಾವು ಸೃಷ್ಟಿಸಿದ ಪರಿಕರಗಳು ಸಮಾಜ ಕೆಲಸ ಮಾಡುವ ಬಗೆಯ ಸಾಮಾಜಿಕ ಚೌಕಟ್ಟನ್ನೇ ಹರಿದು ಹಾಕುತ್ತಿವೆ. ಇದು ಅಮೇರಿಕ ಅಥವಾ ರಷ್ಯಾದ ಸಮಸ್ಯೆ ಮಾತ್ರವಲ್ಲ. ಇದು ಜಾಗತಿಕ ಸಮಸ್ಯೆ,” ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.   

‘ಜವಾಬ್ದಾರಿ ಇಲ್ಲದೆ ಶಕ್ತಿ’ ಎಂಬ ಹೇಳಿಕೆ ಡಿಜಿಟಲ್-ಸಾಮಾಜಿಕ ಮಾಧ್ಯಮಗಳಿಗೆ ಸಾರಾಸಗಟಾಗಿ ಅನ್ವಯವಾಗುತ್ತದೆ. ಸಾಮಾಜಿಕ ಮಾಧ್ಯಮಗಳಿಂದ ಇಂದು ರಾಜಕೀಯ ಧ್ರುವೀಕರಣ, ಸೈದ್ಧಾಂತಿಕ ಧ್ರುವೀಕರಣ ನಮಗೆ ಭೀತಿ ಹುಟ್ಟಿಸುವ ವೇಗದಲ್ಲಿ ಹೆಚ್ಚಾಗುತ್ತಿದೆ. ಈ ಮಾಧ್ಯಮಗಳು ಆಗಾಗ್ಗೆ ಹುಟ್ಟುಹಾಕುವ ಕಿಚ್ಚು, ಅಸ್ಟ್ರೇಲಿಯಾದ, ಕ್ಯಾಲಿಫೆÇೀರ್ನಿಯಾದ ಬೃಹತ್ ಕಾಡ್ಗಿಚ್ಚುಗಳಿಗಿಂತ ದೊಡ್ಡದು. ಇವುಗಳ ಪ್ರಭಾವ ದೈತ್ಯವಾದದ್ದು. ಆದಾಯ ಬಾಯ್ಮೇಲೆ ಬೆರಳಿಟ್ಟುಕೊಳ್ಳುವಂತಹದ್ದು. 2019-20 ರಲ್ಲಿ ಫೇಸ್‍ಬುಕ್‍ನ ಆದಾಯ 86 ಬಿಲಿಯನ್ ಯು.ಎಸ್. ಡಾಲರ್‍ಗಳು. ಅಂದರೆ ಸುಮಾರು ಆರು ಲಕ್ಷ ಇಪ್ಪತ್ತೇಳು ಸಾವಿರ ಕೋಟಿ ರೂಪಾಯಿಗಳು. ಕರ್ನಾಟಕದ ವಾರ್ಷಿಕ ಆಯವ್ಯಯದ ಸುಮಾರು ಮೂರುಪಟ್ಟು. ಅದೇ ಸಾಲಿನಲ್ಲಿ ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ಯೂಟ್ಯೂಬ್‍ಗಳ ಒಟ್ಟಾರೆ ವಾರ್ಷಿಕ ಆದಾಯ ಸುಮಾರು 25 ಬಿಲಿಯನ್ ಯು.ಎಸ್. ಡಾಲರ್‍ಗಳಷ್ಟಿದೆ (ಸುಮಾರು ಒಂದು ಲಕ್ಷದ ಎಂಭತ್ತು ಸಾವಿರ ಕೋಟಿ ರೂಪಾಯಿಗಳು).

ಆರ್ಥಿಕವಾಗಿ ನಮ್ಮ ದೇಶದ ಅತ್ಯಂತ ಯಶಸ್ವಿ ದಿನಪತ್ರಿಕೆಯಾದ ಟೈಮ್ಸ್ ಆಫ್ ಇಂಡಿಯಾದ ವಾರ್ಷಿಕ ಆದಾಯ 2019-20ರಲ್ಲಿ ಸುಮಾರು ಏಳು ಸಾವಿರ ಕೋಟಿ ರೂಪಾಯಿಗಳಷ್ಟಿತ್ತು (ಫೇಸ್‍ಬುಕ್ ಆದಾಯಕ್ಕೆ ಹೋಲಿಸಿದರೆ ಇದು ಪಾಕೆಟ್ ಮನಿ). ಈ ಹೋಲಿಕೆ ಪ್ರತಿ ವರ್ಷ ಸುಮಾರು ಶೇಕಡ 20ರ ವೇಗದಲ್ಲಿ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮಗಳ ಆರ್ಥಿಕ ಸಾಮರ್ಥ್ಯ, ಪ್ರಭಾವ ಎಂತಹದು ಎಂಬುದನ್ನು ಬಿಂಬಿಸುತ್ತದೆ. ಇಷ್ಟೊಂದು ಅಗಾಧಮಟ್ಟದಲ್ಲಿ ಆದಾಯಗಳಿಸುತ್ತಿರುವ, ನೂರಾರು ಕೋಟಿ ಜನರು ಬಳಸುತ್ತಿರುವ ಈ ಸಾಮಾಜಿಕ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ಏನು, ಜಾಗತಿಕ ಶಾಂತಿಗೆ, ಸಮುದಾಯ ಸೌಹಾರ್ದತೆಗೆ, ಯುವಜನಾಂಗದ ಆರೋಗ್ಯಕಾರಿ ಬೆಳವಣಿಗೆಗೆ ಇವುಗಳ ಕೊಡುಗೆ ಏನು…?

ಆನೆ ತುಳಿದದ್ದೇ ಹಾದಿ

ಎರಡನೇ ಮಹಾಯುದ್ಧದ ತರುವಾಯ ಶೀತಲ ಸಮರ ಶುರುವಾಗಿ ಜಗತ್ತಿನಾದ್ಯಂತ ನ್ಯೂಕ್ಲಿಯರ್ ಶಸ್ತ್ರಗಳ ಬೆದರಿಕೆ ತುಂಬಿತ್ತು. ಅವುಗಳಿಗೀಗ ವಿರಾಮದ ಸಮಯ. ಈಗ ಡಿಜಿಟಲ್ ಯುದ್ಧದ ಕಾಲ. ಇದು ಟ್ವೀಟ್‍ಗಳ ಸಮರದ ಯುಗ. ಪ್ರಭಾವಿ ವ್ಯಕ್ತಿಗಳು ಮಾಡುವ ಟ್ವೀಟ್‍ಗಳು ಇಡೀ ಜಗತ್ತಿನಾದ್ಯಂತ ಅಲೆಗಳನ್ನು ಎಬ್ಬಿಸುತ್ತವೆ. ಅಮೇರಿಕದ ಹಾಡುಗಾರ್ತಿ ರಿಹಾನ್ನ ಮಾಡಿದ ಒಂದೇ ಒಂದು ಸಾಲಿನ ನಿರುಪದ್ರವ ಟ್ವೀಟಿಗೆ ಭಾರತದ ಕ್ರಿಕೆಟ್, ಸಿನಿಮಾ ದಿಗ್ಗಜರು ಆಕೆಯ ಮೇಲೆ ಮುಗಿಬಿದ್ದರು.  ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸಂದೇಶಗಳ ಸಾಮರ್ಥ್ಯ ಎಂತಹದೆಂದರೆ ಅವು ಸಮರವನ್ನು ಸಾರಬಲ್ಲವು, ಶಾಂತಿಯ ಬೆಸುಗೆಯನ್ನು ಹಾಕಬಲ್ಲವು. ಆದರೆ ಆನೆ ತುಳಿದದ್ದೇ ದಾರಿ ಎಂಬಂತೆ ಸಾಮಾಜಿಕ ಮಾಧ್ಯಮಗಳು ನಡೆಯುತ್ತಿರುವುದೇ ಹಾದಿಯಾಗುತ್ತಿದೆ.

ಈ ತಂತ್ರಜ್ಞಾನಗಳು ವಿನಾಶಕಾರಿ ಚಟುವಟಿಕೆಯ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿವೆ ಎಂಬ ಅಭಿಪ್ರಾಯ ಯಾರಲ್ಲಾದರೂ ಮೂಡುತ್ತದೆ. ಈ ಮಾಧ್ಯಮಗಳ ಹತೋಟಿ ಸಾಧಿಸುವವರಿಗೆ ಸರ್ಕಾರಗಳನ್ನು ರೂಪಿಸುವ, ಬೀಳಿಸುವ ಶಕ್ತಿಯಿರುತ್ತದೆ. ರಾಜಕೀಯ ಧ್ರುವೀಕರಣ ಮಾಡುವ, ಜನರನ್ನು ವಿಭಜಿಸುವ ಸಾಮರ್ಥ್ಯವಿರುತ್ತದೆ. ಈಗಾಗಲೇ ಪ್ರಪಂಚದಾದ್ಯಂತ ಡಿಜಿಟಲ್ ಮಾಧ್ಯಮಗಳ ಮುಖಾಂತರ ಛಾಯಾ ಸಮರಗಳು ನಡೆಯುತ್ತಿವೆ. ಮಾಹಿತಿ ಯುದ್ಧದಲ್ಲಿ ವಾಟ್ಸ್‍ಅಪ್ ಹಾಗೂ ಇತರೇ ಸಾಮಾಜಿಕ ಮಾಧ್ಯಮಗಳು ಪೂರ್ಣ ಪ್ರಮಾಣದಲ್ಲಿ ಭಾಗಿಯಾಗುತ್ತಿವೆ. 

ಸ್ಪರ್ಶಪರದೆ ಹಿಂದಿನ ಸಂಕೀರ್ಣತೆ

ಎಂಬತ್ತರ ಆಸುಪಾಸಿನಲ್ಲಿರುವ ಅಜ್ಜ-ಅಜ್ಜಿಯಂದಿರು ಸೇರಿದಂತೆ ಈಗ ಎಲ್ಲಾ ವಯೋಮಾನದವರು ಸುಲಭವಾಗಿ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಅದರ ಹಿಂದಿರುವ ಸಂಕೀರ್ಣತೆ ಎಲ್ಲರಿಗೂ ಅರ್ಥವಾಗುವುದಿಲ್ಲ. ಪ್ರತಿಯೊಂದು ಡಿಜಿಟಲ್ ಮಾಧ್ಯಮದ ಹಿಂದೆ, ಸ್ಪರ್ಶಪರದೆಯ ಹಿಂದೆ ಬಹಳ ನಿಖರವಾದ ತಂತ್ರಜ್ಞಾನವೂ, ವ್ಯೂಹತಂತ್ರಗಳೂ ಅಡಕವಾಗಿರುತ್ತದೆ. ಎಲ್ಲಾ ಸಾಮಾಜಿಕ ಮಾಧ್ಯಮ ಜಾಲತಾಣಗಳು (ಫೇಸ್‍ಬುಕ್, ಟ್ವಿಟ್ಟರ್, ಯೂಟ್ಯೂಬ್, ಇನ್ಸ್ಟಾಗ್ರಾಮ್, ಲಿಂಕ್‍ಡ್‍ಇನ್ ಇತ್ಯಾದಿ) ಲಾಭಗಳಿಸಲು ಒಂದೇ ವ್ಯೂಹತಂತ್ರವನ್ನು ಬಳಸುತ್ತವೆ. ಅದೆಂದರೆ ನಮ್ಮ `ಗಮನ’ ವನ್ನು ಅವರ ನಿಜವಾದ ಗ್ರಾಹಕರಿಗೆ, ಅಂದರೆ ಜಾಹೀರಾತುದಾರರಿಗೆ ಮಾರಾಟ ಮಾಡುವುದು.

ನಾವು ಒಂದು ಜಾಲತಾಣವನ್ನು ಅಥವಾ ಆ್ಯಪ್ ಅನ್ನು ಹೆಚ್ಚು ಹೆಚ್ಚು ಉಪಯೋಗಿಸಿದಂತೆಲ್ಲಾ ನಾವು ಹೆಚ್ಚು ಹೆಚ್ಚು ಜಾಹೀರಾತುಗಳನ್ನು ನೊಡುತ್ತೇವೆ. ಇದು ಜಾಹೀರಾತುದಾರರು ಹಾಗೂ ಜಾಲತಾಣಗಳು ಅಥವಾ ಸಾಮಾಜಿಕ ಮಾಧ್ಯಮ ವೇದಿಕೆಗಳು ಹೆಚ್ಚು ಲಾಭಗಳಿಸಲು ಸಾಧ್ಯಮಾಡಿಕೊಡುತ್ತದೆ. ನಾವು ಈ ಸಾಮಾಜಿಕ ಮಾಧ್ಯಮಗಳೊಡನೆ ಸಂವಹಿಸಿದಂತೆಲ್ಲಾ ಅಲ್ಲಿ ಪರದೆಯ ಹಿಂದಿರುವ ಕ್ರಮಾವಳಿಗಳು (ಆಲ್ಗೋರಿಥಮ್ಸ್) ನಮ್ಮ ಅಭಿರುಚಿ ಹಾಗೂ ಒಲವಿಗೆ ತಕ್ಕಂತೆ ಮಾಹಿತಿಗಳನ್ನು (ಪೆÇೀಸ್ಟ್‍ಗಳು, ವೀಡಿಯೋಗಳು, ಇತ್ಯಾದಿ) ಒದಗಿಸುತ್ತ ನಾವು ಹೆಚ್ಚು ಹೆಚ್ಚು ಸಮಯವನ್ನು ಸಾಮಾಜಿಕ ಜಾಲತಾಣಗಳು ಹಾಗೂ ಆ್ಯಪ್‍ಗಳ ಮೇಲೆ ಕಳೆಯುವಂತೆ ಮಾಡುತ್ತವೆ.

ಈ ಮಾಧ್ಯಮಗಳಿಗೆ ಅವುಗಳಲ್ಲಿ ಬರುವ ವಿಷಯವಸ್ತುಗಳನ್ನು ಮುಂಗಡ ಪರೀಕ್ಷಣ ಮಾಡಬೇಕಾದ, ಮಾಡರೇಟ್ ಮಾಡಬೇಕಾದ ಜವಾಬ್ದಾರಿಯಿರಬೇಕು. ಆದರೆ ಎಲ್ಲಾ ಸಾಮಾಜಿಕ ಮಾಧ್ಯಮಗಳು ಈ ವಿಷಯವನ್ನು ಬದಿಗೆ ಹಾಕುತ್ತವೆ. ಅಥವಾ ಈ ಮಾಧ್ಯಮಗಳಿಗೆ ಮುಂಗಡ ಪರೀಕ್ಷಣ ಮಾಡುವುದು ಸಾಧ್ಯವಾಗದೇ ಇರಬಹುದು. ಆದರೆ ಅವು ಉಪಯೋಗಿಸುವ ಕ್ರಮಾವಳಿಗಳನ್ನು (ಆಲ್ಗೋರಿಥಮ್ಸ್) ಸಾರ್ವತ್ರಿಕ ಒಳಿತಿನ ದೃಷ್ಟಿಯಿಂದ ರಚಿಸಿಕೊಳ್ಳಬಹುದು. ಆದರೆ ಸಾಮಾಜಿಕ ಮಾಧ್ಯಮಗಳು ಲಾಭದ ದೃಷ್ಟಿಕೋನದಿಂದ ಕ್ರಮಾವಳಿಗಳನ್ನು ಸೃಷ್ಟಿಸಿಕೊಂಡಿಸಿರುತ್ತವೆ. ಇದರಿಂದ ಆಗುವ ಪರಿಣಾಮವೇನೆಂದರೆ ಇದು ಅದರ ಬಳಕೆದಾರರಿಗೆ ಏನು ಬೇಕು ಅದನ್ನು ಮಾತ್ರ ನೀಡುತ್ತದೆ. ಯಾವ ಬಳಕೆದಾರರು ಪಿತೂರಿ ಅಥವಾ ಒಳಸಂಚಿನ ಸಿದ್ಧಾಂತಗಳೊಂದಿಗೆ ತೊಡಗಿಸಿಕೊಳ್ಳುತ್ತಾರೋ ಅಂಥಹವರಿಗೆ ಈ ಮಾಧ್ಯಮಗಳು ಹೆಚ್ಚು ಹೆಚ್ಚು ಪಿತೂರಿ ಸಿದ್ಧಾಂತಗಳನ್ನು ತೋರಿಸುತ್ತವೆ. ಇದೇ ರೀತಿ ಬಲಪಂಥೀಯರಿಗೆ ಹೆಚ್ಚು ಹೆಚ್ಚು ಬಲಪಂಥೀಯ ವಿಚಾರಗಳನ್ನು, ಎಡಪಂಥೀಯರಿಗೆ ಹೆಚ್ಚು ಹೆಚ್ಚು ಎಡಪಂಥೀಯ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳು ತೋರಿಸುತ್ತೇವೆ.

2016ರ ಅಮೇರಿಕದ ಪಿeóÁ್ಜ ಪಿತೂರಿ ಸಿದ್ಧಾಂತದ ಪ್ರಕರಣದಲ್ಲಿ ಫೇಸ್‍ಬುಕ್‍ನ ಶಿಫಾರಸ್ಸು ಯಂತ್ರ ಪಿತೂರಿ ಮನಸ್ಥಿತಿಯಿರುವ ಸಾಮಾಜಿಕ ಮಾಧ್ಯಮಗಳ ಬಳಕೆದಾರರಿಗೆ ಪಿeóÁ್ಜಗೇಟ್ ಗುಂಪು ಸೇರುವಂತೆ ಸೂಚನೆಗಳನ್ನು ಒದಗಿಸುತಿತ್ತು. ಹಾಗೂ ಬಿಲ್ ಹಾಗೂ ಹಿಲರಿ ಕ್ಲಿಂಟನ್ ವಾಷಿಂಗ್‍ಟನ್ ಡಿ.ಸಿ.ಯ ಕಾಮೆಟ್ ಪಿಂಗ್ ಪಾಂಘ್ ಪಿeóÉ್ಜೀರಿಯಾದ ನೆಲಮಾಳಿಗೆಯಲ್ಲಿ ಶಿಶುಕಾಮಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಂದು ಗಾಳಿಸುದ್ದಿ ಹಬ್ಬಿಸುತಿತ್ತು. ಈ ಒಳಸಂಚಿನ ಸಿದ್ಧಾಂತ ಎಷ್ಟರ ಮಟ್ಟಿಗೆ ಅದೇ ಮನಸ್ಥಿತಿಯನ್ನು ಹೊಂದಿರುವವರ ಗಮನಸೆಳೆಯಿತೆಂದರೆ ಕಡೆಗೆ ಒಬ್ಬ ಮನುಷ್ಯ ಬಂದೂಕಿನೊಡನೆ ಪಿeóÉ್ಜೀರಿಯಾ ರೆಸ್ಟೋರೆಂಟ್ ಪ್ರವೇಶಿಸಿ ಅಲ್ಲಿನ ಸಿಬ್ಬಂದಿಯೊಬ್ಬನ ಮೇಲೆ ಗುಂಡು ಹಾರಿಸಲು ನಿರ್ಧರಿಸುತ್ತಾನೆ.

ಅದೇ ವರ್ಷ ನವೆಂಬರ್‍ನಲ್ಲಿ ಬಿಬಿಸಿ ವಾಹಿನಿ ಟರ್ಕಿ ಸರ್ಕಾರದ ಪರವಾದ ಮಾಧ್ಯಮ ಸಂಸ್ಥೆಯೊಂದು ಪಿeóÁ್ಜಗೇಟ್ ಹ್ಯಾಷ್‍ಟ್ಯಾಗನ್ನು ಬಳಸಿ ಈ ಪಿತೂರಿ ಸಿದ್ಧಾಂತವನ್ನು ಟ್ವೀಟ್ ಮಾಡುತ್ತಿತ್ತೆಂದು ವರದಿ ಮಾಡುತ್ತದೆ. ಇದಕ್ಕೆ ಕಾರಣವೇನೆಂದರೆ, ವಾಸ್ತವವಾಗಿ ಟರ್ಕಿಯಲ್ಲಿ ನಡೆದಿದ್ದ ಮಕ್ಕಳ ದೌರ್ಜನ್ಯ ಹಗರಣವೊಂದು ಟರ್ಕಿ ಸರ್ಕಾರಕ್ಕೆ ಸಂಬಂಧಿಸಿದ ಪ್ರತಿಷ್ಠಾನವೊಂದರ ವರ್ಚಸ್ಸಿಗೆ ಧಕ್ಕೆ ತಂದಿರುತ್ತದೆ. ಆ ಸರ್ಕಾರದ ಪರವಾದ ಮಾಧ್ಯಮ ಸಂಸ್ಥೆಯ ಹಾಗೂ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್‍ನ ಬೆಂಬಲಿಗರ ಉದ್ದೇಶವು ವಿರೋಧಿಗಳನ್ನು ಕಪಟಿಗಳೆಂದು ದೂರುವುದು ಹಾಗೂ ಅಮೇರಿಕಾದ ಪಿeóÁ್ಜಗೇಟ್ ಬಗ್ಗೆ ಏಕೆ ಅಕ್ರೋಶಗೊಳ್ಳುತ್ತಿಲ್ಲವೆಂದು ಪ್ರಶ್ನಿಸುವುದಾಗಿರುತ್ತದೆ. ಈ ಮೂಲಕ ಟರ್ಕಿಯಲ್ಲಾಗಿದ್ದ ಹಗರಣದಿಂದ ಗಮನವನ್ನು ಬೇರೆಡೆ ಸೆಳೆಯುವುದಾಗಿತ್ತು. 

ಇಂತಹದೊಂದು ಚಟುವಟಿಕೆಯನ್ನು ಸಾಂಪ್ರಾದಾಯಿಕ ಮಾಧ್ಯಮಗಳ ಮೂಲಕ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮಗಳು ಒದಗಿಸುವ ಸಾಧ್ಯತೆಗಳು ಶಕ್ತಿಶಾಲಿಯಾದದ್ದು ಹಾಗೂ ವ್ಯಾಪಕವಾದದ್ದು. ಪಿeóÁ್ಜಗೇಟ್‍ನಂತಹ ಘಟನೆಯು ಹೇಗೆ ಸಾಮಾಜಿಕ ಮಾಧ್ಯಮ ವೇದಿಕೆಗಳು ಅವುಗಳ ಬಳಕೆದಾರರಿಗೆ ವಿಷಯುವಸ್ತುವಿನ ನ್ಯಾಯಸಮ್ಮತತೆಯನ್ನು ಬದಿಗಿಟ್ಟು ಅವರಿಗೆ ಏನು ಬೇಕೋ ಅದನ್ನು ನೀಡಲು ಮುಂದಾಗುತ್ತವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಆಹಾರ ಅಥವಾ ವೀಡಿಯೋ ಆಟಗಳಿಗೆ ಸಂಬಂಧಿಸಿದಾಗ ಸಾಮಾಜಿಕ ಮಾಧ್ಯಮಗಳ ಇಂತಹ ವರ್ತನೆ ನಿರುಪದ್ರವವಾಗಿರಬಹುದು. ಆದರೆ ರಾಜಕೀಯ, ಸಿದ್ಧಾಂತಗಳನ್ನು ಒಳಗೊಂಡಾಗ ಸಾಮಾಜಿಕ ಮಾಧ್ಯಮ ತಾನು ತನ್ನ ಬಳಕೆದಾರರಿಗೆ ನೀಡುವ ವಿಷಯವಸ್ತುವಿಗೆ ಸಂಬಂಧಿಸಿದಂತೆ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ.

ಪ್ರತಿಧ್ವನಿ ಕೋಣೆಗಳು

ಸಾಮಾಜಿಕ ಮಾಧ್ಯಮಗಳು ಪ್ರತಿಧ್ವನಿ ಕೋಣೆಗಳನ್ನು ಸೃಷ್ಟಿಸುತ್ತವೆ. ಇಲ್ಲಿ ಒಂದೇ ಮನಸ್ಥಿತಿಯನ್ನು ಹೊಂದಿರುವ ಬಳಕೆದಾರರ ನಡುವೆ ಪರಸ್ಪರ ಬೆರೆಯುವಿಕೆಯಾಗಿ, ಇದರಿಂದ ಅವರು ಪರಸ್ಪರ ಹೊಂದಿರುವ ನಂಬಿಕೆ ಹಾಗೂ ಆದ್ಯತೆಗಳು ವರ್ಧನೆಯಾಗುತ್ತವೆ. ಬಳಕೆದಾರರು ತಾವು ಈಗಾಗಲೇ ಹೊಂದಿರುವ ರಾಜಕೀಯ ನಂಬಿಕೆಗಳನ್ನು ರಾಜಕೀಯ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಇತರೇ ಬಳಕೆದಾರರೊಂದಿಗೆ ಸಂವಹನ ಮಾಡಿ ಖಚಿತಪಡಿಸಿಕೊಳ್ಳುತ್ತಾರೆ. ಈ ಬಳಕೆದಾರರ ಫೀಡ್‍ನಲ್ಲಿ ಅವರ ವಿರುದ್ಧದ ರಾಜಕೀಯ ಅಭಿಪ್ರಾಯಗಳನ್ನು ಹೊಂದಿರುವವರ ವಾದಗಳು, ಅಭಿಪ್ರಾಯಗಳು ಬರುವುದೇ ಇಲ್ಲ. ಇದರಿಂದಾಗುವುದೇನಂದರೆ ವ್ಯಕ್ತಿಗಳು ತಮ್ಮ ವೈಯಕ್ತಿಕ ಸೈದ್ಧಾಂತಿಕ ಭ್ರಾಂತಿಯಲ್ಲೇ ದ್ವೀಪವಾಗಿಬಿಡುತ್ತಾರೆ. ಪ್ರತಿಧ್ವನಿ ಕೋಣೆಗಳು ಹಾಗೂ ರಾಜಕೀಯ ಧ್ರುವೀಕರಣ ಯಾವ ಮಟ್ಟಿಗೆ ರಾಜಕೀಯ ಪಕ್ಷಪಾತವನ್ನು ಹೆಚ್ಚಿಸುತ್ತದೆಂದರೆ, ಚುನಾವಣೆ ಸಂದರ್ಭದಲ್ಲಿ ಮತದಾರರು ತಾವು ವಿರೋಧಿಸುವ ರಾಜಕೀಯ ಸಿದ್ಧಾಂತವಿರುವ ಪಕ್ಷದ ಬಗ್ಗೆ ಪ್ರತಿಕೂಲವಾದ ಅಭಿಪ್ರಾಯವನ್ನು ಇಟ್ಟುಕೊಂಡು ವ್ಯಕ್ತಿಗಿಂತ ಹೆಚ್ಚಾಗಿ ಪಕ್ಷಕ್ಕೆ ಮತ ಹಾಕುತ್ತಾರೆ.

ಕರ್ನಾಟಕ ಹಾಗೂ ಇತರೇ ರಾಜ್ಯಗಳಲ್ಲಿ ಕಳೆದ ಲೋಕಸಭಾ ಚುನಾವಣೆಗಳಲ್ಲಿ, ಮತದಾರು ಹಲವಾರು ಕ್ಷೇತ್ರಗಳಲ್ಲಿ ವ್ಯಕ್ತಿಗಿಂತ ಮೇಲಾಗಿ ಪಕ್ಷಕ್ಕೆ ಮತಹಾಕಿರುವುದನ್ನು ಇಲ್ಲಿ ಸ್ಮರಿಸಬಹುದು. ಇದರಿಂದ ಆಗುತ್ತಿರುವ ಬೆಳವಣಿಗೆ ಆರೋಗ್ಯಕರವಾದದ್ದೇ ಎಂಬ ಪ್ರಶ್ನೆ ಮೂಡುತ್ತದೆ. ವ್ಯಕ್ತಿಗಳು ಹೆಚ್ಚು ಪಕ್ಷಪಾತಿಗಳಾದಷ್ಟು ಅವರು ವಿರೋಧಿಸುವ ರಾಜಕೀಯ ಪಕ್ಷಗಳ ಮೇಲೆ ಹೆಚ್ಚು ದ್ವೇಷ ಕಾರುತ್ತಾರೆ, ಕೋಪದಿಂದ ಮತ ಚಲಾಯಿಸುತ್ತಾರೆ. ಈ ಸಾಮಾಜಿಕ ಮಾಧ್ಯಮಗಳಿಗೆ, ಟಿ.ವಿ.ಗಿರುವಂತೆ ನೋಡುಗರು, ಸುದ್ದಿಪತ್ರಿಕೆಗಳಿಗಿರುವಂತೆ ಓದುಗರಿರುವುದಿಲ್ಲ. ಇದನ್ನು ಉಪಯೋಗಿಸುವವರು ಬಳಕೆದಾರರಾಗಿರುತ್ತಾರೆ. ಅಂದರೆ ಇಲ್ಲಿ ಮಾರುಕಟ್ಟೆಯ ಚೌಕಟ್ಟು ಸಹಜವಾಗಿಯೇ ಬರುತ್ತದೆ. ಸಾಮಾಜಿಕ ಮಾಧ್ಯಮಗಳು ಉತ್ಪನ್ನಗಳು ಅಥವಾ ಸೇವೆಗಳಾಗಿರುತ್ತವೆ. ಮಾದಕ ವಸ್ತುಗಳಿಗೆ ವ್ಯಸನಿಗಳಾಗುವಂತೆ, ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಅವುಗಳ ವ್ಯಸನಿಗಳಾಗಿ ಪರಿವರ್ತಿತರಾಗುತ್ತಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಮಾಧ್ಯಮ

ಸಾಮಾಜಿಕ ಮಾಧ್ಯಮಗಳ ಲಕ್ಷಣಗಳನ್ನು ಅವಲೋಕಿಸಿದಾಗ ಮೊದಲ ನೋಟದಲ್ಲಿ ಅವು ಪ್ರಜಾಪ್ರಭುತ್ವಕ್ಕೆ ಪೂರಕವೆಂದು ಅನಿಸುತ್ತದೆ. ವಿಕೇಂದ್ರೀಕರಣ ಸಾಮಾಜಿಕ ಮಾಧ್ಯಮದ ಶಕ್ತಿಯಾಗಿದೆ. ಇಲ್ಲಿ ಯಾವುದೇ ವಿಷಯವಸ್ತುವನ್ನು ಯಾವುದೇ ಕೇಂದ್ರ ಶಕ್ತಿಯೊಂದು ನಿಯಂತ್ರಿಸುವುದಿಲ್ಲ. ಎಲ್ಲರೂ ಸ್ವತಂತ್ರವಾಗಿ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಬಹುದು. ಹೆಚ್ಚು ಜನರು ಸಾಮಾಜಿಕ ಮಾಧ್ಯಮದ ವೈವಿಧ್ಯಮಯ ವಿಷಯವಸ್ತುಗಳಿಗೆ ಒಡ್ದಿಕೊಂಡಂತೆಲ್ಲಾ ಪ್ರಜಾಪ್ರಭುತ್ವ ಹೆಚ್ಚು ಶಕ್ತಿ ಪಡೆಯುತ್ತದೆಂದು ಮೇಲುನೋಟಕ್ಕೆ ಅನ್ನಿಸಬಹುದು. ಸರ್ವಾಧಿಕಾರಿ ಪ್ರವೃತ್ತಿಯುಳ್ಳ ಸರ್ಕಾರಗಳಿಗೆ, ನಿರಂಕುಶ ಪ್ರಭುತ್ವ ಬಯಸುವವರಿಗೆ ಸಾಮಾಜಿಕ ಮಾಧ್ಯಮದ ಬಗ್ಗೆ ಹೆದರಿಕೆಯಿರುತ್ತದೆ. ಆದರೆ ಯಾರಲ್ಲಿ ಹೆಚ್ಚು ಸಂಪನ್ಮೂಲಗಳಿರುತ್ತದೋ, ಅವರ ಸಾಮಾಜಿಕ ಮಾಧಮಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು, ಅಬ್ಬರದ ಪ್ರಚಾರದ ಮೂಲಕ, ಜನಾಭಿಪ್ರಾಯವನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳುವ ಸಾಧ್ಯತೆಯಿದೆ.

ಸಾಮಾಜಿಕ ಮಾಧ್ಯಮದ ಪರಿಕರಗಳನ್ನು ಯಾರು ಬೇಕಾದರೂ ತಮ್ಮ ಉದ್ದೇಶಗಳಿಗೆ ತಕ್ಕಂತೆ ಬಳಸಿಕೊಳ್ಳಬಹುದು. ಒಬ್ಬ ಉಗ್ರವಾದಿ ಇದನ್ನು ಭಯಭೀತಿ ಹರಡಲು ಬಳಸಿಕೊಳ್ಳಬಹುದು. ಆಂದೋಲನಗಳ ಇತಿಹಾಸವನ್ನು ಗಮನಿಸಿ. ಎಲ್ಲಾ ಕ್ರಾಂತಿಗಳಲ್ಲಿ ಮೊದಲು ಸರ್ಕಾರಗಳು ವಿಚಾರವಾದಿಗಳನ್ನು, ಸಾಹಿತಿಗಳನ್ನು ಹಾಗೂ ಸ್ವತಂತ್ರ ಅಭಿಪ್ರಾಯದ ಪತ್ರಕರ್ತರನ್ನು ನಿಗ್ರಹಿಸಲು ಪ್ರಯತ್ನಿಸುತ್ತವೆ. ಉತ್ಸಾಹದ ಜಾಗದಲ್ಲಿ ಹೆದರಿಕೆ ಬರುತ್ತದೆ. ಒಬ್ಬ ಉಗ್ರವಾದಿಗೆ, ಒಬ್ಬ ಸರ್ವಾಧಿಕಾರಿಗೆ, ಒಬ್ಬ ದಬ್ಬಾಳಿಕೆ ಮಾಡುವವನಿಗೆ ಸಾಮಾಜಿಕ ಮಾಧ್ಯಮ ತಾನು ಬೇಕೆಂದ ಹಾಗೆ ಬಳಸಿಕೊಳ್ಳಬಹುದಾದ ಮಾಧ್ಯಮವಾಗಿಬಿಡುತ್ತದೆ. ಸಾಮಾಜಿಕ ಮಾಧ್ಯಮದ ಬೆಳವಣಿಗೆಯನ್ನು ಎಚ್ಚರಿಕೆಯಿಂದ ಗಮನಿಸಬೇಕಾದ ಅಗತ್ಯತೆಯಿದೆ.

ಪ್ರತಿಕೂಲ ಪರಿಣಾಮ

ಅಧಿಕ ಅಧಿಕ ಸಂಖ್ಯೆಯಲ್ಲಿ ಇಂದು ವಿದ್ಯಾರ್ಥಿಗಳು ಹಾಗೂ ಯುವಜನತೆ ಸಾಮಾಜಿಕ ಮಾಧ್ಯಮದ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಅವರ ಮೇಲಾಗುತ್ತಿರುವ ಪರಿಣಾಮ ಪ್ರತಿಕೂಲದ್ದಾಗಿದೆ. ಸಾಮಾಜಿಕ ಮಾಧ್ಯಮದ ಅತೀ ಹೆಚ್ಚಿನ ಬಳಕೆ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಸಾಮಾಜಿಕ ಮಾಧ್ಯಮದ ಬಳಕೆದಾರರಲ್ಲಿ ದೈಹಿಕ ಚಟುವಟಿಕೆ ಕುಂಠಿತವಾಗುತ್ತಿದೆ. ಮಾನವ ಮಟ್ಟದಲ್ಲಿನ ಪರಸ್ಪರ ಸಂವಹನ ಕಡಿಮೆಯಾಗುತ್ತಿದೆ. ಮುಖಾಮುಖಿ ಸಂವಹನ ಕಡಿಮೆಯಾಗುತ್ತಿದ್ದು, ಇದರಿಂದ ಮೂಲ ಮೌಖಿಕ ಸಂವಹನ, ಮುಖಭಾವ, ದೇಹ ಭಾಷೆ ಎಲ್ಲದರ ಮೇಲೂ ಪ್ರತಿಕೂಲ ಪರಿಣಾಮಗಳಾಗುತ್ತಿವೆ. ಸಾಮಾಜಿಕ ಮಾಧ್ಯಮ ನಾವು ಮನೆಯಿಂದ ಹೊರಗೆ ಹೋಗಿ ಇತರರೊಡನೆ ಬೆರೆಯುವ ಅಗತ್ಯವನ್ನೇ ತೆಗೆದುಹಾಕಿ ಮೂಲಭೂತವಾದ ಮಾನವ ಗುಣಗಳನ್ನೇ ಕಡಿಮೆ ಮಾಡುತ್ತಿದೆ.

ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಿಗೆ ಹೆಚ್ಚು ಹೆಚ್ಚಾಗಿ ವ್ಯಸನಿಗಳಾಗುತ್ತಿರುವುದರಿಂದ ಅವರು ತರಗತಿಗಳಲ್ಲಿ ಪಾಠದ ಮೇಲೆ ನಿಗಾ ಹರಿಸುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಿದ್ದು, ಅವರು ಹೊಸ ಹೊಸ ವಿಷಯಗಳನ್ನು ಕಳೆಯುವುದರಲ್ಲಿ ಹಿಂದುಳಿಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದ ಹೆಚ್ಚಿನ ಬಳಕೆ ಹಲವಾರು ಬಳಕೆದಾರರಲ್ಲಿ ಖಿನ್ನತೆಗೆ ಸಹ ಕಾರಣವಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಿಂದ ಬಹಳಷ್ಟು ಪ್ರಯೋಜನಗಳಿದ್ದರೂ ಸಹ, ಅವುಗಳ ಋಣಾತ್ಮಕ ಗುಣಗಳು ಈ ಪ್ರಯೋಜನಗಳನ್ನು ಹಿಂದೆ ಸರಿಸಿವೆ. ಸಾಮಾಜಿಕ ಮಾಧ್ಯಮ ಉಳಿದ ಮಾಧ್ಯಮಗಳಿಗೆ ಹೋಲಿಸಿದರೆ ಹೊಸ ತಂತ್ರಜ್ಞಾನವಾಗಿರುವುದರಿಂದ ಇದರ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಆಗಿರುವ ಸಂಶೋಧನೆ ಬಹಳ ಕಡಿಮೆಯದ್ದಾಗಿದೆ. ಆದರೆ ಈಗಾಗಲೇ ಕೈಗೊಂಡಿರುವ ಹಲವಾರು ಅಧ್ಯಯನಗಳು ಅಧಿಕವಾದ ಸಾಮಾಜಿಕ ಮಾಧ್ಯಮದ ಬಳಕೆ ಖಿನ್ನತೆ, ಒಂಟಿತನ, ಆತ್ಮಹತ್ಯೆ ಆಲೋಚನೆಗಳು, ಸ್ವಯಂಹಾನಿ, ಹಾಗೂ ಉದ್ವೇಗÀಗಳಿಗೆ ದಾರಿಮಾಡುತ್ತದೆ ಎಂದು ತಿಳಿಸಿವೆ.

ಈ ಅಭಿಪ್ರಾಯಕ್ಕೆ ವಿರುದ್ಧವಾಗಿ ವಾದಿಸುವ ಕೆಲವು ತಜ್ಞರು ಸಾಮಾಜಿಕ ಮಾಧ್ಯಮಗಳಿಂದ ಹಲವಾರು ಪ್ರಯೋಜನಗಳಿವೆ, ಒಂಟಿಯಾದ ಮಕ್ಕಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಮುದಾಯ ಬೆಂಬಲ ಸಿಗುತ್ತದೆ. ಮಾನಸಿಕ ಖಾಯಿಲೆಗಳಿಂದ ಬಳಲುತ್ತಿರುವ ಕೆಲವು ಮಕ್ಕಳು ತಮ್ಮ ಸಮಸ್ಯೆಯನ್ನು ಮುಕ್ತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿಸುತ್ತಾರೆ. ಅಂತಹವರ ಸಮಸ್ಯೆ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಅಭಿಪ್ರಾಯಗಳು ಸಾಮಾನ್ಯವಾಗಿ ಉತ್ತೇಜನಕಾರಿಯೂ, ಸಕಾರಾತ್ಮಕವೂ ಆಗಿರುತ್ತದೆ ಎಂದು ಹೇಳುತ್ತಾರೆ.

ಸಾಮಾಜಿಕ ಮಾಧ್ಯಮ, ಒಂದೆರಡು ದಶಕಗಳಷ್ಟು ಇತಿಹಾಸವಿರುವ ಹೊಸ ಮಾಧ್ಯಮವಾಗಿದೆ. ಈ ಮಾಧ್ಯಮಗಳ ಶಕ್ತಿ ಜಗತ್ತನ್ನೇ ಅಲುಗಾಡಿಸುತ್ತಿದೆ. ಈ ಶಕ್ತಿ ಹೆಚ್ಚು ಸಕಾರಾತ್ಮಕದ್ದಾದರೆ ಮನುಷ್ಯ ಈವರೆಗೆ ಕಂಡುಹಿಡಿದಿರುವ ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಉಳಿದುಬಿಡುತ್ತದೆ. ಒಂದು ಪಕ್ಷ ಇದರ ಋಣಾತ್ಮಕ ಗುಣಗಳು ಸಕಾರಾತ್ಮಕ ಗುಣಗಳಿಗಿಂತ ಹೆಚ್ಚಾದಲ್ಲಿ, ಜಗತ್ತು ಈ ಮಾಧ್ಯಮಗಳಿಂದ

ಉದ್ಭವಿಸಬಹುದಾದ ಜಟಿಲ ಸಮಸ್ಯೆಗಳನ್ನು ಬಗೆಹರಿಸುವುದರಲ್ಲೇ ತನ್ನ ಹೆಚ್ಚು ಸಮಯವನ್ನು ಕಳೆಯಬೇಕಾಗುತ್ತದೆ.

Leave a Reply

Your email address will not be published.