ಸಾಮಾಜಿಕ ಸಂಶೋಧನೆ: ವರ್ತಮಾನ ಮತ್ತು ಭವಿಷ್ಯ

-ಡಾ.ಪ್ರವೀಣ ಟಿ.ಎಲ್.

ಸಾಮಾಜಿಕ ಸಂಶೋಧನೆಗಳ ಚಿಂತಾಜನಕ ಸ್ಥಿತಿಗೆ ಇರಬಹುದಾದ ಕಾರಣಗಳನ್ನು ಗುರುತಿಸುವುದು ನಮ್ಮ ಪ್ರಾಥಮಿಕ ಜವಾಬ್ದಾರಿ. ಪ್ರಸ್ತುತ ಬರಹವು ಸಾಮಾಜಿಕ ಸಂಶೋಧನೆಗಳ ವರ್ತಮಾನ ಮತ್ತು ಭವಿಷ್ಯದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.

ಭಾರತೀಯ ಸಾಮಾಜಿಕ ಸಂಶೋಧನೆಯ ಸ್ಥಿತಿಗತಿ ಕುರಿತು ಚರ್ಚೆ ಬಹಳ ಹಿಂದಿನಿದಲೂ ನಡೆಯುತ್ತಲೇ ಬಂದಿದೆ. ಸಂಶೋಧನೆಯ ಗುಣಮಟ್ಟ ಕುಸಿಯುತ್ತಿದೆ ಎಂದು ಅನೇಕ ವಿದ್ವಾಂಸರು, ಸಮಿತಿಗಳು ಅಭಿಪ್ರಾಯ ಪಡುತ್ತಲೇ ಬಂದಿವೆ. ಹಾಗೆಯೇ ಒಂದಷ್ಟು ಕಾರಣಗಳನ್ನು ಗುರುತಿಸಲು ಈ ಹಿಂದೆಯೇ ಪ್ರಯತ್ನಿಸಿವೆ ಕೂಡ: ಮೇಲ್ವಿಚಾರಕರ ಸಮಸ್ಯೆ; ಸಂಶೋಧಕರ ಆರ್ಥಿಕ ಸಮಸ್ಯೆ; ಭಾಷೆಯ ಸಮಸ್ಯೆ; ಸಲಕರಣೆಗಳ ಕೊರತೆ; ಮತ್ತು ಉತ್ತಮ ಗ್ರಂಥಾಲಯಗಳ ಅಲಭ್ಯತೆ ಮತ್ತು ಪಟ್ಟಿ ಹೀಗೆ ಮುಂದುವರೆಯುತ್ತದೆ.

ಈ ಅಗತ್ಯಗಳನ್ನು ಪೂರೈಸಲು ಸರ್ಕಾರ ಮತ್ತು ಸಂಬಧಿತ ಸಂಸ್ಥೆಗಳು ಉತ್ತಮವಾಗಿಯೇ ಸ್ಪಂದಿಸುತ್ತಿವೆ. ಸಂಶೋಧನಾ ಗುಣಮಟ್ಟವನ್ನು ಸುಧಾರಿಸುವ ಹಲವು ಪ್ರಾಮಾಣಿಕ ಪ್ರಯತ್ನಗಳು ಸರ್ಕಾರದ ಕಡೆಯಿಂದ ನಡೆಯುತ್ತಲೇ ಇವೆ. ಈ ಎಲ್ಲಾ ಪೂರೈಕೆಗಳ ನಂತರವೂ ಸಾಮಾಜಿಕ ಸಂಶೋಧನೆಯ ಗುಣಮಟ್ಟದ ಕುರಿತ ಹಿಂದಿನ ತಕರಾರುಗಳು ಹಾಗೆಯೇ ಮುಂದುವರೆಯುತ್ತಿವೆ.

ಸಂಶೋಧನೆಯ ಗುಣಮಟ್ಟಕ್ಕೂ ಈ ಅಂಶಗಳಿಗೂ ಸಂಬಧವೇ ಇಲ್ಲವೆಂದೇನೂ ಅಲ್ಲ. ಆದರೆ ಇವುಗಳಿಗಿಂತ ಮುಖ್ಯವಾಗಿರಬಹುದಾದ ಕಾರಣಗಳು ಬೇರೆಯೇ ಇರಬೇಕು ಎಂದು ಊಹಿಸಬಹುದು. ಸಂಶೋಧನೆಗಳು ಹೊಸ ಜ್ಞಾನವನ್ನು ಸೃಜಿಸದ ಹೊರತು ಅವುಗಳು ತಮ್ಮ ಪ್ರಾಮುಖ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಸಂಶೋಧನೆಗಳ ಚಿಂತಾಜನಕ ಸ್ಥಿತಿಗೆ ಇರಬಹುದಾದ ಕಾರಣಗಳನ್ನು ಗುರುತಿಸುವುದು ನಮ್ಮ ಪ್ರಾಥಮಿಕ ಜವಾಬ್ದಾರಿ.

ವರ್ತಮಾನದ ‘ಸಮಸ್ಯೆ’

ಸಾಮಾಜ ವಿಜ್ಞಾನವು ವ್ಯಕ್ತಿಗಳ ಸಾಮಾಜಿಕ ಮತ್ತು ನಡವಳಿಕೆಯ ಜೊತೆ ವ್ಯವಹರಿಸುವ ಒಂದು ಅಧ್ಯಯನ ಕ್ರಮ. ಜ್ಞಾನವನ್ನು ರೂಪಿಸುವ ಉದ್ದೇಶದಿಂದ ಸಮಾಜದಲ್ಲಿ ಮನುಷ್ಯನ ನಡವಳಿಕೆಯ ವ್ಯವಸ್ಥಿತ ಅಧ್ಯಯನ ನಡೆಸುತ್ತದೆ. ಸಮಾಜದ ಕುರಿತು ಹೊಸ ಹೊಸ ಸಿದ್ಧಾಂತಗಳು ಸೃಷ್ಟಿಯಾಗಬೇಕೆಂದರೆ, ಸಾಮಾಜಿಕ ಸಂಶೋಧನೆಗಳು ಪರಿಣಾಮಕಾರಿಯಾಗಿ ಜರುಗಬೇಕಾಗುತ್ತದೆ. ಈ ನಿಟ್ಟಿನ ಪ್ರಯತ್ನಗಳು ಆಧುನಿಕ ಶಿಕ್ಷಣದ ಜೊತೆಗೆ ನಡೆಯಲಾರಂಭಿಸಿದವು. ವಿಶೇಷವಾಗಿ, ೧೯೭೦ರ ನಂತರ, ಭಾರತದಲ್ಲಿ ಸಾಮಾಜಿಕ ಸಂಶೋಧನೆಗಳನ್ನು ಅಭಿವೃದ್ಧಿಪಡಿಸಲು ಅನೇಕ ಗಂಭೀರ ಪ್ರಯತ್ನಗಳು ನಡೆದಿವೆ.

ಇಂದು ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾಗಿದೆ. ಸಮಾಜ ವಿಜ್ಞಾನ ವಿಭಾಗಗಳು, ಪ್ರಾಧ್ಯಾಪಕರ ಸಂಖ್ಯೆಯೂ ಹೆಚ್ಚಿದೆ. ಸಂಶೋಧನೆಗೆ ಹೆಚ್ಚಿನ ಅವಕಾಶಗಳೂ ದೊರೆತಿವೆ. ಅಭಿವೃದ್ಧಿ ಅಧ್ಯಯನ ಕೇಂದ್ರಗಳ ಸ್ಥಾಪನೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರಗಳು ಹೀಗೆ ಸಾಮಾಜಿಕ ಸಂಶೋಧನೆಗೆ ಅವಕಾಶಗಳು ಹೆಚ್ಚಾಗುತ್ತಲೇ ಸಾಗುತ್ತಿದೆ. ಹಾಗೆಯೇ ಪರಿಷ್ಕೃತ ನಿಯಮಾವಳಿಗಳನ್ನು ಆಗಾಗ ಯುಜಿಸಿಯು ಹೊರಡಿಸುತ್ತಲೇ ಇರುತ್ತದೆ. ಆದರೂ ವಿವಿಗಳಲ್ಲಿ ಸಂಶೋಧನಾ ವಾತಾವರಣವನ್ನು ಸುಧಾರಿಸಲು ಸಾಧ್ಯವಾಗುತ್ತಲೇ ಇಲ್ಲ. ಈ ಹಿಂದೆ ಅಷ್ಟೊಂದು ಕಠೋರ ನಿಯಮಾವಳಿಗಳು ಇಲ್ಲದೇ ಇದ್ದಂತಹ ಸಂದರ್ಭದಲ್ಲಿ ಹಲವಾರು ಉತ್ತಮ ಸಂಶೋಧನೆಗಳು, ಜ್ಞಾನಸೃಷ್ಟಿಯ ಪ್ರಯತ್ನಗಳು ಕರ್ನಾಟಕ ಮತ್ತು ಭಾರತೀಯ ಸಂದರ್ಭದಲ್ಲಿ ಜರುಗಿರುವುದು ಸತ್ಯ.

ಪಿಹೆಚ್‌ಡಿಗೆ ಸೇರ್ಪಡೆಗೊಳ್ಳುತ್ತಿರುವವರ ಪಟ್ಟಿಯನ್ನು ತೋರಿಸಿ, ಸಂಶೋಧನೆಗಳು ಹೆಚ್ಚುತ್ತಿವೆ ಎಂದರೆ ಅದು ಮೂರ್ಖತನವಾದೀತು. ಹಾಗಾಗಿ ಪಿಹೆಚ್‌ಡಿಗಳಿಗೂ ಸಂಶೋಧನೆಗಳಿಗೂ ಸಂಬಧವೇ ಇಲ್ಲದ ಸ್ಥಿತಿಗೆ ಬಂದು ನಿಂತಿದೆ. ಸಂಶೋಧನೆಗಳೆoದರೆ, ಇರುವ ತಿಳಿವಳಿಕೆಯನ್ನು ಪ್ರಶ್ನಿಸುವ/ವಿಮರ್ಶಿಸುವ, ಹೊಸ ತಿಳಿವಳಿಕೆಯನ್ನು ಕಟ್ಟುವ, ಆ ಮೂಲಕ ಸಮಾಜದಲ್ಲಿ ಉತ್ತಮವಾಗಿ ವ್ಯವಹರಿಸುವ ಸಾಧ್ಯತೆಗಳನ್ನು ಹೆಚ್ಚಿಸುವುದೇ ಆಗಿದೆ. ಆದರೆ ವರ್ತಮಾನದ ಸ್ಥಿತಿಯು ಸಾಮಾಜಿಕ ಸಂಶೋಧನೆಗಳ ಭವಿಷ್ಯವನ್ನು ಆಶಾದಾಯಕವಾಗಿ ಕಟ್ಟಿಕೊಳ್ಳುವಂತಿಲ್ಲ. ಈಗಿನ ಸ್ಥಿತಿಯು ಸುಧಾರಿಸುವ ಮುನ್ಸೂಚನೆಗಳು ಕಂಡುಬರುತ್ತಿಲ್ಲ.  

ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಯನ್ನು ಉನ್ನತಮಟ್ಟಕ್ಕೇರಿಸಲು ಸರ್ಕಾರಿ ಸಂಸ್ಥೆಗಳಾದ ಯು.ಜಿ.ಸಿ, ಐಸಿಹೆಚ್‌ಆರ್, ಐಸಿಎಸ್‌ಎಸ್‌ಆರ್ ಮಂತಾದವುಗಳತೆಯೇ ಖಾಸಗೀ ಸಂಸ್ಥೆಗಳು ಸಹ ಪ್ರೋತ್ಸಾಹಿಸುತ್ತಿವೆ. ಒಂದೆಡೆ, ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳಲ್ಲಿ ಡಾಕ್ಟರೇಟ್ ಸಂಶೋಧನೆಗಾಗಿ ಹೆಚ್ಚಿನ ಫೆಲೋಶಿಪ್ಪುಗಳನ್ನು ಘೋಷಿಸಿದರೆ, ಮತ್ತೊಂದೆಡೆ ಹಲವಾರು ಸಂಶೋಧನಾ ಯೋಜನೆಗಳನ್ನು ಒದಗಿಸುವ ಯತ್ನಗಳಾಗುತ್ತಿವೆ. ರಾಷ್ಟಿಯ ಮಟ್ಟದಲ್ಲಿ ರತನ್ ಟಾಟಾ ಸಂಸ್ಥೆ, ಅಜೀಂ ಪ್ರೇಮ್‌ಜಿ ಫೌಂಡೇಶನ್ ಮತ್ತಿತರ ಸಂಸ್ಥೆಗಳು ಸಣ್ಣ ಮತ್ತು ಬೃಹತ್ ಸಂಶೋಧನಾ ಯೋಜನೆಗಳಿಗೆ ಧನಸಹಾಯ ಮಾಡುತ್ತಿರುವ ಕೆಲವು ಖಾಸಗೀ ಸಂಸ್ಥೆಗಳು. ಹಾಗೆಯೇ, ಸಾಮಾಜಿಕ ಮತ್ತು ಆರ್ಥಿಕ ಸಂಶೋಧನೆಗಳಿಗಾಗಿ ವಿಶ್ವಸಂಸ್ಥೆಯ ಏಜೆನ್ಸಿಗಳು, ಫೋರ್ಡ್ ಫೌಂಡೇಶನ್, ಯೂರೋಪಿಯನ್ ಯೂನಿಯನ್ ಮುಂತಾದ ಅಂತರಾಷ್ಟಿಯ ಸಂಸ್ಥೆಗಳು ಸಹ ಹಣಕಾಸಿನ ನೆರವನ್ನು ನೀಡಲು ಮುಂದಾಗಿವೆ.

ಆರ್ಥಿಕ ಮತ್ತು ಭೌತಿಕ ಸೌಲಭ್ಯಗಳಲ್ಲಿ ಗಣನೀಯ ಪ್ರಮಾಣದ ಏರುಗತಿ ಕಂಡುಬದರೂ ಸಾಮಾಜಿಕ ಸಂಶೋಧನೆಗಳ  ಗುಣಮಟ್ಟವು ಇಳಿಮುಖದಲ್ಲಿಯೇ ಚಲಿಸುತ್ತಿದೆ. ಇದೇ ವರ್ತಮಾನವು ಮುಂದುವರೆದರೆ ಸಮಾಜ ವಿಜ್ಞಾನಗಳು ಮತ್ತು ಮಾನವಿಕ ಶಾಸ್ತಗಳ ಭವಿಷ್ಯವು ಚಿಂತಾಜನಕವಾಗುವುದರಲ್ಲಿ ಯಾವ ಅನುಮಾನವೂ ಬೇಡ. ಆದ್ದರಿಂದ ಈಗಿನ ಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಆಲೋಚಿಸಬೇಕಿದೆ. ಆದರೆ ಬದಲಾವಣೆಗೂ ಮೊದಲು ಸಮಸ್ಯೆಯ ಮೂಲವನ್ನು ಅರಿಯುವುದು ಮತ್ತು ಪರಿಹರಿಸಿಕೊಳ್ಳುವುದು ಅಗತ್ಯ.

ಭವಿಷ್ಯಕ್ಕಾಗಿ ಕೆಲವು ಆಲೋಚನೆಗಳು

ಸಮಾಜಿಕ ಸಂಶೋಧನೆಗಳ ಇಂದಿನ ಸ್ಥಿತಿಯನ್ನು ವಿಸ್ತೃತವಾಗಿ ಮಾತನಾಡುವ ಅವಶ್ಯಕತೆಯಂತೂ ಇದೆ. ಆದರೆ ಈ ಬರಹದಲ್ಲಿ ಎಲ್ಲವನ್ನು ಸೇರಿಸುವುದು ಕಷ್ಟ. ಆದ್ದರಿಂದ ಕೆಲವು ಪ್ರಮುಖ ಅಂಶಗಳ ಕಡೆಗೆ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸಲಾಗಿದೆ.

ಸಮಸ್ಯೆಯ ಆಯ್ಕೆಯಲ್ಲಿಯೇ ಅಸ್ಪಷ್ಟತೆ: ಸಂಶೋಧನಾ ವಿಧಾನದ ಬಗ್ಗೆ ರಾಜ್ಯ ಮಟ್ಟದ ಕಾರ್ಯಗಾರವನ್ನು ಹಿಂದೊಮ್ಮೆ ನಡೆಸಲಾಗಿತ್ತು. ಸಮಾಜ ವಿಜ್ಞಾನ ಮತ್ತು ಮಾನವಿಕ ಶಾಸ್ತçಗಳ ಸಂಶೋಧನಾರ್ಥಿಗಳನ್ನು ಆಹ್ವಾನಿಸಲಾಗಿತ್ತು. ಆ ಸಮಯದಲ್ಲಿ ವ್ಯಕ್ತವಾದ ಕೆಲವು ಸಂಶೋಧನಾ ವಿಷಯಗಳು- “ಬಿಎಂಟಿಸಿ ಕಂಡಕ್ಟರುಗಳ ಸಮಸ್ಯೆ-ಒಂದು ಅಧ್ಯಯನ”; “ಬಾಲಕಾರ್ಮಿಕರ ಸಮಸ್ಯೆಗಳು: ಹಾಸನ ಜಿಲ್ಲೆಯ ಒಂದು ಅಧ್ಯಯನ” “ಸೊಲ್ಲಾಪುರ ಚಪ್ಪಲಿಗಳು -ಒಂದು ಅಧ್ಯಯನ”, “ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ -ತುಮಕೂರು ಜಿಲ್ಲೆಯ ಅಧ್ಯಯನ”, “ಕನ್ನಡ ಸಾಹಿತ್ಯದಲ್ಲಿ ವೇಶ್ಯೆಯರ ಸ್ಥಿತಿಗತಿ” ಇತ್ಯಾದಿ. ಮುಖ್ಯವಾಗಿ ಗಮನಿಸಬೇಕಾದುದೆಂದರೆ, ೧. ಕೆಲವು ಸಾಮಾಜಿಕ ಸಮಸ್ಯೆಗಳು ನೇರವಾಗಿ ಸಂಶೋಧನಾ ಸಮಸ್ಯೆಗಳಾಗಿವೆ. ೨. ಕೆಲವು ಸಂಶೋಧನಾ ವಿಷಯಗಳ ಪ್ರಸ್ತುತತೆಯನ್ನು ಗುರುತಿಸುವುದೇ ಹರಸಾಹಸ. ೩. ಅನಾವಶ್ಯಕವಾದ ಮಾಹಿತಿಯ ಕ್ರೋಢೀಕರಣ ಮತ್ತು ಪುನರಾವರ್ತಿತ ಅಧ್ಯಯನಗಳು. 

ಮೊದಲನೆಯದಾಗಿ, ನಿಸ್ಸಂದೇಹವಾಗಿ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವುದು ಸಮಾಜ ಶಾಸ್ತಜ್ಞರ ಜವಾಬ್ದಾರಿ. ಆದರೆ ಸಾಮಾಜಿಕ ಸಮಸ್ಯೆಗಳೇ ಸಂಶೋಧನಾ ಸಮಸ್ಯೆಗಳಾಗುವುದಿಲ್ಲ. ಸಂಶೋಧನಾ ಸಮಸ್ಯೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಸಮಸ್ಯೆಯ ಆಯ್ಕೆ ಮತ್ತು ಅದರ ಸ್ವರೂಪವನ್ನು ಗುರುತಿಸುವುದು ಮಹತ್ವದ್ದಾಗಿದೆ. ನಮ್ಮ ಸಂಶೋಧನೆಗಳು ಸಮಾಜದ ಸಮಸ್ಯೆಗಳನ್ನು ಅರ್ಥೈಸಲು ಮತ್ತು ಆ ಮೂಲಕ ಪರಿಹಾರ ಸೂಚಿಸಲು ಒಂದು ವಿವರಣಾ ಚೌಕಟ್ಟನ್ನು ಒದಗಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಹಾಗೆಂದು ಸಮಾಜದ ಸಮಸ್ಯೆಗಳು ಸಂಶೋಧನೆಗೆ ಮುಖ್ಯವೇ ಅಲ್ಲ ಎಂಬುದು ಈ ಮಾತಿನ ಇಂಗಿತವಲ್ಲ. ಬದಲಾಗಿ ಆ ಸಮಸ್ಯೆಯನ್ನು ಈ ಮುಂಚಿನ ಅಧ್ಯಯನಗಳು ಹೇಗೆ ಗ್ರಹಿಸಿವೆ, ಸಮಸ್ಯೆಗೆ ಯಾವ ಕಾರಣಗಳನ್ನು ಗುರುತಿಸಿವೆ ಹಾಗೂ ಯಾವ ಯಾವ ಪರಿಹಾರಗಳನ್ನು ಸೂಚಿಸಿವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಮುಂದುವರೆದು, ಹಿಂದಿನ ಅಧ್ಯಯನಗಳು ಗುರುತಿಸಿರುವ ಕಾರಣ, ಪರಿಹಾರಗಳಲ್ಲಿನ ನ್ಯೂನತೆಗಳೇನು? ಎಂಬುದನ್ನೂ ವಿಶ್ಲೇಷಿಸಿ, ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಸೂತ್ರೀಕರಿಸಬೇಕಾಗುತ್ತದೆ. 

ಎರಡು ಮತ್ತು ಮೂರನೆಯ ಅಂಶಗಳಿಗೆ ಸಂಬಧಿಸಿದAತೆ, ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಯಾವ ಸಂಗತಿಗಳನ್ನು ಸಂಶೋಧನೆಗೆ ಆಯ್ದುಕೊಳ್ಳಬೇಕು ಎಂಬುದೇ ಅರ್ಥವಾಗದ ಸ್ಥಿತಿ ಇದೆ. ಕಾರಣ ಮೂಲಭೂತವಾಗಿ ಸಂಶೋಧನೆಯ ಬಗೆಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದು. ಸಂಶೋಧನೆಯನ್ನು ಕೇವಲ ಪದವಿಯ ಸಲುವಾಗಿ ಮಾಡಬೇಕಾ ಇಲ್ಲವೇ ಜ್ಞಾನ ಸಂಪಾದನೆಯ ಮತ್ತು ಪರಿಷ್ಕರಣೆಯ ಸಲುವಾಗಿ ಮಾಡಬೇಕಾ ಎಂಬ ಅರಿವು ಮೂಡಿಸುವಲ್ಲಿ ಸೋಲುತ್ತಿದ್ದೇವೆ.

ಇಂದಿನ ಬಹುತೇಕ ಸಂಶೋಧನೆಗಳು ಕೇವಲ ಪದವಿಗೋಸ್ಕರ ಎಂಬುದು ಮೇಲ್ನೋಟಕ್ಕೆ ತಿಳಿಯುವ ಸತ್ಯ. ಹಾಗಾಗಿ ಯಾವುದಾದರೊಂದು ಸರಳವಾಗಿರುವ ವಿಷಯವನ್ನು ಆಯ್ದುಕೊಂಡು, ಒಂದಷ್ಟು ಮಾಹಿತಿ ಸಂಗ್ರಹಿಸಿ, ಒಂದು ಪ್ರಬಂಧವನ್ನು ತಯಾರಿಸಿದರೆ ಸಾಕು ಎನ್ನುವಂತಾಗಿದೆ. ರಾಜ್ಯಶಾಸ್ತç ಮಾತ್ರವಲ್ಲದೇ ಇತರ ಸಮಾಜ ವಿಜ್ಞಾನದ ಅಧ್ಯಯನ ಶಿಸ್ತುಗಳಲ್ಲಿ ಲೆಕ್ಕವಿಲ್ಲದಷ್ಟು ಅಧ್ಯಯನಗಳು “ಮಹಾತ್ಮಾಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆ” ಕುರಿತಂತೆ ನಡೆದಿವೆ. ಅವುಗಳಲ್ಲಿ ಬಹುತೇಕ ತೀರ್ಮಾನಗಳು ಒಂದೇ ರೀತಿಯವು ಎಂಬುದೂ ಅಷ್ಟೇ ಸತ್ಯ. ಭಿನ್ನತೆ ಇರುವುದು ಅವರು ಮಾಹಿತಿ ಕಲೆಹಾಕಲು ಆಯ್ದುಕೊಂಡಿರುವ ಕ್ಷೇತ್ರಗಳ/ಜಿಲ್ಲೆಗಳ ಹೆಸರುಗಳಲ್ಲಿ ಮಾತ್ರವೇ. ಆದರೆ ಈ ಸರ್ಕಾರಿ ಯೋಜನೆಗಳ ಕುರಿತಂತೆ ಪ್ರತೀವರ್ಷ ಸರ್ಕಾರೀ ಮತ್ತು ಸರ್ಕಾರೇತರ ಸಂಸ್ಥೆಗಳು ಮಾಹಿತಿ ಕಲೆಹಾಕಿ ವರದಿಗಳನ್ನು ತಯಾರಿಸಿರುತ್ತವೆ. ಇಲ್ಲಿ ಸೃಜಿಸಬಹುದಾದ ಹೊಸ ಜ್ಞಾನದ ಸಾಧ್ಯತೆಯಾದರೂ ಏನು? ಹಾಗೆಯೇ ಅನಾವಶ್ಯಕವಾದ ಪುನರಾವರ್ತನೆಗಳು- ಇದರಿಂದ ಸಿಗುವ ಲಾಭವಾದರೂ ಏನು? 

ಸಂಶೋಧನೆಯ ಸಮಸ್ಯೆಯನ್ನು ಸೂತ್ರೀಕರಿಸುವುದು ಸಹ ಬಹುಮುಖ್ಯ ಘಟ್ಟ. ಈ ಕೆಲಸ ಉತ್ತಮವಾದರೆ, ಮುಂದಿನ ಹಂತಗಳನ್ನು ಅದೇ ನಿಟ್ಟಿನಲ್ಲಿ ಕ್ರಮಿಸಲೇಬೇಕಾದ ಒತ್ತಡ ಬೀಳುತ್ತದೆ. ಆದರೆ ಈ ಹಂತಗಳನ್ನು ಕ್ರಮಿಸಲು ಸಂಶೋಧನಾ-ಗುರುಗಳ ನಿಜವಾದ ಮಾರ್ಗದರ್ಶನ ಅತ್ಯವಶ್ಯಕ. ಕನ್ನಡದ ಸಂದರ್ಭಕ್ಕೆ ಸೀಮಿತವಾಗಿ ಹೇಳುವುದಾದರೆ, ರಾಜ್ಯಶಾಸ್ತç, ಸಮಾಜಶಾಸ್ತç, ಅರ್ಥಶಾಸ್ತç ಮುಂತಾದ ಎಲ್ಲಾ ಅಧ್ಯಯನ ಕ್ಷೇತ್ರಗಳಲ್ಲಿಯೂ ಕಲಿಸುವ ಮೇಷ್ಟುçಗಳಿದ್ದರು, ಅವರ ತಲೆಮಾರು ವಯೋಸಹಜ ಕಾರಣಗಳಿಗಾಗಿ ಇಂದು ತೆರೆಮರೆಗೆ ಸರಿಯುತ್ತಿದೆ. ಅವರ ಸ್ಥಾನಗಳನ್ನು ತುಂಬುವ ನಿಟ್ಟಿನಲ್ಲಿ ಇಂದಿನ ಮೇಷ್ಟುçಗಳ ಕನಿಷ್ಠ ಪ್ರಯತ್ನ ಸಾಗಿದೆಯೇ? ಎಂಬ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಲ್ಲಿ ಕೇವಲ ಸಂಶೋಧಕರನ್ನು, ಮಾರ್ಗದರ್ಶಕರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ನಮ್ಮ ವ್ಯವಸ್ಥೆಯ ಪಾಲೂ ಅಷ್ಟೇ ಇದೆ. ವಿವಿಯ ಒಳಗಿನ ರಾಜಕಾರಣ ಮತ್ತು ಬಾಹ್ಯ ರಾಜಕಾರಣದ ಹಸ್ತಕ್ಷೇಪಗಳು ಹೊಸ ಜ್ಞಾನಸೃಷ್ಟಿಯ ವಿಷಯಗಳ ಆಯ್ಕೆಯಿಂದ ಹಿಂಜರಿಯುವAತೆ ಪ್ರೇರೇಪಿಸುತ್ತವೆ.

ಸೈದ್ಧಾಂತಿಕ ಚಟುವಟಿಕೆಯ ಕೊರತೆ ಮತ್ತು ಐಡಿಯಾಲಜಿಗಳನ್ನು ಸಮರ್ಥಿಸುವ ಒತ್ತಡ: ಯಾವುದೇ ವಿಷಯದ ಕುರಿತು ಆಳವಾದ ಅಧ್ಯಯನ ಮಾಡಿ ಅದರಲ್ಲಿರುವ ಸಮಸ್ಯೆಗಳನ್ನು ಗುರುತಿಸಿದರೂ, ಅವುಗಳನ್ನು ಸೈದ್ಧಾಂತಿಕವಾಗಿ ವಿವರಿಸುವ ಕಾರ್ಯವು ನಮಗೆ ಅಭ್ಯಾಸವಿಲ್ಲದಂತಾಗಿದೆ. ಸಂಶೋಧಕರಾಗಿ, ಮಾರ್ಗದರ್ಶಕರಾಗಿ ಅದನ್ನು ಕಲಿಯುವುದು ಮತ್ತು ಕಲಿಸುವುದು ಪ್ರಾಥಮಿಕ ಕರ್ತವ್ಯವೇ ಆಗಿರುತ್ತದೆ. ತಾವು ಆಯ್ಕೆಮಾಡಿಕೊಂಡ ಸಂಶೋಧನಾ ವಿಷಯ ಕುರಿತು ಯಾವ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಈ ಹಿಂದೆ ಅಧ್ಯಯನಗಳು ನಡೆದಿವೆ; ಅಂತಹ ಅಧ್ಯಯನಗಳಲ್ಲಿನ ದೋಷಗಳನ್ನು ಗುರುತಿಸಿ ನಮ್ಮ ಅಧ್ಯಯನವು ಹೇಗೆ ಅವುಗಳಿಗಿಂತ ಉತ್ತಮವಾಗಿದೆ ಎಂದು ಸೈದ್ಧಾಂತಿಕರಿಸಬೇಕಾಗುತ್ತದೆ. ಇದರ ಅನುಪಸ್ಥಿತಿಯನ್ನು ನಮ್ಮ ಬಹುತೇಕ ಸಂಶೋಧನೆಗಳಲ್ಲಿ ಕಾಣುತ್ತೇವೆ. 

ಭಾರತದಲ್ಲಿ ಹೆಚ್ಚಿನ ಸಾಮಾಜಿಕ ಸಂಶೋಧನೆಗಳು ಸೈದ್ಧಾಂತಿಕ ಚರ್ಚೆಗಳ ಕೊರತೆಯಿಂದ ಬಳಲುತ್ತಿವೆ. ಹಲವು ಸಂಶೋಧನೆಗಳು ಮುಖ್ಯವಲ್ಲದ ಕೆಲವು ಡೇಟಾಗಳನ್ನು ಸಂಗ್ರಹಿಸುವುದಕ್ಕೆ ಸೀಮಿತವಾಗಿದ್ದು, ಸೈದ್ಧಾಂತಿಕವಾದ ವಿಶ್ಲೇಷಣೆಯಿಂದ ದೂರವೇ ಉಳಿದಿವೆ. ಸೈದ್ಧಾಂತಿಕತೆ ಎಂದರೆ ಒಂದು ಕ್ರಮಬದ್ಧವಾದ, ವೈಜ್ಞಾನಿಕವಾದ ಹುಡುಕಾಟ. ಅಂದರೆ, ಒಂದು ಸಂಶೋಧನೆಯು ಹಳೆಯ ಚರ್ಚೆಗಳನ್ನು ಉನ್ನತ ಹಂತಕ್ಕೆ ಅಥವಾ ಉತ್ತಮ ಸೂತ್ರೀಕರಣಕ್ಕೆ ಕೊಂಡೊಯ್ಯಬೇಕು. ಹಿಂದಿನ ಅಧ್ಯಯನಗಳ ಸಮಸ್ಯೆಗಳನ್ನು ತೋರಿಸಲು ಪ್ರಯತ್ನಿಸಬೇಕು. ಮತ್ತು ಹೊಸ ರೀತಿಯಲ್ಲಿ ವಿಶ್ಲೇಷಿಸುವ ಮೂಲಕ ನಮ್ಮ ಸುತ್ತಲಿನ ಸಮಾಜವನ್ನು ಮತ್ತು ಸಮಾಜದ ಜೊತೆಗಿನ ನಮ್ಮ ಅನುಭವವನ್ನು ವಿಸ್ತರಿಸಲು ಸಹಕರಿಸಬೇಕು. ಅದು ಜ್ಞಾನ ಪರಂಪರೆಗೆ ನೀಡುವ ಕೊಡುಗೆಯಾಗಲಿದೆ. ಆದರೆ ವರ್ತಮಾನದ ನಮ್ಮ ಸಾಮಾಜಿಕ ಸಂಶೋಧನಾ ಸನ್ನಿವೇಶಗಳು ಈ ರೀತಿಯಾಗಿಲ್ಲ.

ನಮ್ಮ ಸಂಶೋಧನೆಗಳು ಸೊರಗುತ್ತಿರಲು ಇರುವ ಮತ್ತೊಂದು ಕಾರಣವೆಂದರೆ, ಪ್ರಮುಖ ವಿಶ್ವವಿದ್ಯಾಲಯಗಳ ಸಂಶೋಧಕರು ಸೈದ್ಧಾಂತಿಕ ಚರ್ಚೆಗಳಿಗಿಂತ ರಾಜಕೀಯ ಐಡಿಯಾಲಜಿಗಳ ಸಮರ್ಥನೆಗೆ ಹೆಚ್ಚಿನ ಶ್ರಮವನ್ನು ವ್ಯಯಿಸುತ್ತಿದ್ದಾರೆ. ಸಂಶೋಧನೆಯ ಹೆಸರಿನಲ್ಲಿ ಐಡಿಯಲಾಜಿಗಳ ನಂಬಿಕೆಗಳನ್ನೇ ಮರುಸೃಷ್ಟಿಸುತ್ತಿದ್ದಾರೆ. ಶುದ್ಧ ಸೈದ್ಧಾಂತಿಕ ಚಟುವಟಿಕೆಗಳು ಐಡಿಯಾಲಜಿಗಳ ಪ್ರಭಾವದಿಂದ ಮುಕ್ತವಾಗಿರಬೇಕು ಮತ್ತು ಐಡಿಯಾಲಜಿಗಳ ಮಿತಿಗಳನ್ನು ತೋರಿಸುವ ಪ್ರಯತ್ನವನ್ನು ನಡೆಸಬೇಕಾಗುತ್ತದೆ. ಆದರೆ ಐಡಿಯಾಲಜಿ ಪ್ರಣೀತ ಹೋರಾಟಗಳು, ರಾಜಕಾರಣ ಅಸ್ತಿತ್ವದಲ್ಲಿರುವುದರಿಂದ ಅವುಗಳ ನಂಬಿಕೆಗಳನ್ನು ಪ್ರಶ್ನಿಸುವ ಸಂಶೋಧನೆಗಳನ್ನು, ಸೈದ್ಧಾಂತಿಕತೆಯನ್ನು ಸಹಿಸಿಕೊಳ್ಳದ ಸ್ಥಿತಿಯು ನಿರ್ಮಾಣವಾಗಿದೆ. ಕೆಲವು ಸಂಶೋಧನಾ ಕೇಂದ್ರಗಳ ಮೇಲೆ ದಾಳಿ ಮಾಡಿರುವ, ಮುಚ್ಚಿಸಿರುವ ಉದಾಹರಣೆಗಳು ಕರ್ನಾಟಕ ಮತ್ತು ದೇಶದ ಇತಿಹಾಸದಲ್ಲಿ ಸಿಗುತ್ತವೆ. ಅದು ಐಡಿಯಾಲಜಿಗಳ ಮತ್ತು ಅವುಗಳನ್ನಾಧರಿಸಿದ ಹೋರಾಟಗಳ ಮೂಲಭೂತ ಗುಣವೇ ಆಗಿದೆ.

ಸಿದ್ಧಾಂತಗಳು ಪರಮಸತ್ಯಗಳನ್ನು ಪ್ರತಿಪಾಧಿಸುತವುದಿಲ್ಲ, ಕಾಲಕಾಲಕ್ಕೆ ಮಾರ್ಪಾಡಾಗುತ್ತಿರುತ್ತವೆ ಅಥವಾ ಹೊಸ ಥಿಯರಿಗಳು ಹಳೆ ಸಿದ್ಧಾಂತಗಳ ಜಾಗಕ್ಕೆ ಬಂದುಬಿಡುತ್ತವೆ. ಆದರೆ ಇದಕ್ಕೆ ವಿರುದ್ಧವಾಗಿ ಐಡಿಯಾಲಜಿಗಳು ಅಂತಿಮ ಸತ್ಯದ ಪ್ರತಿಪಾದನೆ ಮಾಡುವುದರಿಂದ ಆ ನಂಬಿಕೆಗಳನ್ನೇ ಸತ್ಯಗಳೆಂದು ಒಪ್ಪಿಕೊಳ್ಳಬೇಕು ಮತ್ತು ಆ ಚೌಕಟ್ಟಿನಲ್ಲಿಯೇ ಸುತ್ತಮುತ್ತಲಿನ ಘಟನೆಗಳನ್ನು ವಿವರಿಸಿಕೊಳ್ಳಬೇಕಾಗುತ್ತದೆ. ಆ ವಿವರಣೆಯನ್ನು ನಿರಾಕರಿಸುವವರನ್ನು ದ್ವೇಷಿಸುವುದು ಸಹಜ ಪ್ರಕ್ರಿಯೆಯಾಗುತ್ತದೆ. ತಾವು ನಂಬಿರುವ ವಿಚಾರಗಳೇ ಸತ್ಯವೆಂದಾದಾಗ ಹೊಸ ಹುಡುಕಾಟದ ಮಾರ್ಗಗಳು ಮುಚ್ಚಲೇಬೇಕಾಗುತ್ತದೆೆ. ಐಡಿಯಾಲಜಿಗಳು ಸಂಶೋಧನೆಯ ಮಾರ್ಗಗಳನ್ನು ಅಥವಾ ಸೈದ್ಧಾಂತಿಕತೆಯನ್ನು ವಿರೋಧಿಸುತ್ತವೆ. ಅವರ ನಂಬಿಕೆಗಳು, ವಾಸ್ತವ ಬೇರೆ ಇರಬಹುದು ಎಂಬ ಸೂಚನೆಯನ್ನು ಗಮನಿಸದ ಹಾಗೆ ಕುರುಡಾಗಿಸುತ್ತವೆ. ಹಾಗಾಗಿ ವಾಸ್ತವವನ್ನು/ ಸತ್ಯವನ್ನು ಹುಡುಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆತ ನಂಬಿಕೊAಡಿರುವುದೇ ಅಂತಿಮ ಸತ್ಯದ ಸ್ಥಾನವನ್ನು ಅಲಂಕರಿಸಿರುತ್ತದೆ.

ವಿಶ್ವವಿದ್ಯಾಲಯಗಳು ರಾಜಕೀಯ ಹಸ್ತಕ್ಷೇಪಗಳಿಂದ ಮುಕ್ತವಾದರೆ, ಸೈದ್ಧಾಂತಿಕ ಪ್ರಕ್ರಿಯೆಯನ್ನು ಉತ್ತೇಜಿಸಿ, ಐಡಿಯಾಲಜಿಕಲ್ ಚೌಕಟ್ಟಿನಿಂದ ಹೊರಗೆ ತರಲು ಪ್ರಯತ್ನಿಸಬಹುದು. ಸೈದ್ಧಾಂತಿಕವಾಗಿ ತೊಡಗಿಸಿಕೊಂಡಾಗ ಮಾತ್ರ ಸಮಾಜದ ಬಗ್ಗೆ ಜ್ಞಾನದ ಪರಿಷ್ಕರಣೆ ಸಾಧ್ಯ. ಅಂತಹ ಸಂಶೋಧನೆಗಳು ಅಸ್ತಿತ್ವದಲ್ಲಿರುವ ಪ್ರಬಲ ವಿವರಣೆಗಳ ಮೂಲ ಕಲ್ಪನೆಯನ್ನೇ ಪ್ರಶ್ನೆಮಾಡುತ್ತವೆ.  ಆದರೆ ಹಳೆಯ ವಿವರಣೆಗಳು ಹಲವು ಸಂಸ್ಥೆಗಳಿಗೆ, ರಾಜಕೀಯ ಪಕ್ಷಗಳಿಗೆ ಮತ್ತು ಹಲವು ಹೋರಾಟಗಳಿಗೆ ಅಡಿಪಾಯಗಳಾಗಿರುತ್ತವೆ. ಒಂದೊಮ್ಮೆ ಅವುಗಳೇ ಪ್ರಶ್ನಿಸಲ್ಪಟ್ಟರೆ ಇವುಗಳ ಅಸ್ತಿತ್ವವೇ ಅಲ್ಲಾಡುವಂತಾಗುತ್ತದೆ. ಆದ್ದರಿಂದ ಇವರು ಈ ಸೈದ್ಧಾಂತಿಕ ತೊಡಗಿಸುಕೊಳ್ಳುವಿಕೆಯನ್ನು ಸಹಿಸುವುದಿಲ್ಲ ಮತ್ತು ಶತಾಯಗತಾಯ ನಿಲ್ಲಿಸಲು ಪ್ರಯತ್ನಿಸುತ್ತಾರೆ. 

ಒಟ್ಟಾರೆಯಾಗಿ, ಭಾರತೀಯ ಸಾಮಾಜಿಕ ಸಂಶೋಧನಾ ಕ್ಷೇತ್ರದ ವರ್ತಮಾತನದ ಸ್ಥಿತಿಯು ಚಿಂತಾಜನಕವಾಗಿದೆ. ಕನ್ನಡದ ಸಂದರ್ಭದಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ ಎಂದರೆ ಬೇಜಾರಾಗಬೇಕಿಲ್ಲ. ಸಂಶೋಧನಾ ವಲಯ ಮೈಕೊಡವಿ ಎದ್ದೇಳಬೇಕೆಂದರೆ ಹೀಗೆ ಹೇಳುವುದು ಅಗತ್ಯ ಕೂಡ.  ಸಂಶೋಧನಾ ಸ್ಥಿತಿಯನ್ನು ಶ್ರೀಮಂತಗೊಳಿಸಲು ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಆದರೆ ನಿರೀಕ್ಷೆಗಳು ಇನ್ನೂ ಈಡೇರಿಲ್ಲ. ಆದ್ದರಿಂದ ನಾವು ಸಾಮಾಜಿಕ ಸಂಶೋಧನೆಯ ಬೆಳವಣಿಗೆಗಳನ್ನು ಪುನರ್ವಿಮರ್ಶಿಸಲೇಬೇಕಾದ ಕಾಲಘಟ್ಟದಲ್ಲಿ ಇದ್ದೇವೆ. ಅದಕ್ಕೆ ಕನ್ನಡದ ಪತ್ರಿಕೆಯು ವೇದಿಕೆಯನ್ನು ನಿರ್ಮಿಸಿಕೊಟ್ಟಿರುವುದು, ಈ ಕುರಿತು ಕನ್ನಡಿಗರ ಗಮನ ಸೆಳೆಯುವ ಪ್ರಾಮಾಣಿಕ ಯತ್ನಕ್ಕೆ ಮುಂದಾಗಿರುವುದು ಸ್ವಾಗತಾರ್ಹ. 

ಈಗಲಾದರೂ ಸರಿಯಾಗಿ ಆಲೋಚಿಸದಿದ್ದರೆ, ಸಾಮಾಜಿಕ ವಿಜ್ಞಾನಗಳು ಶೀಘ್ರದಲ್ಲಿಯೇ ಕಣ್ಮರೆಯಾಗಲಿವೆ. ಸಮಾಜ ವಿಜ್ಞಾನ ಕ್ಷೇತ್ರದ ಯುವ ಪೀಳಿಗೆಯವರು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಸಮಾಜದ ಕುರಿತು ವೈಜ್ಞಾನಿಕ ಸಿದ್ಧಾಂತಗಳನ್ನು ನಿರ್ಮಿಸಲು ಪ್ರಾರಂಭಿಸಿದಾಗ ಮಾತ್ರ ಇದು ಸಾಧ್ಯ. ದುರಾದೃಷ್ಟವಶಾತ್, ನಾವು ಐಡಿಯಾಲಜಿಕಲ್ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜಕೀಯ ಪಕ್ಷಗಳಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಇದೇ ವರ್ತಮಾನವು ಮುಂದುವರೆದರೆ ಜ್ಞಾನಸೃಷ್ಟಿಯ ಭವಿಷ್ಯವು ರಾಜಕೀಯ ಚಟುವಟಿಕೆಯ ಭಾಗವಾಗಿ ಗುರುತಿಸಿಕೊಳ್ಳಲಿದೆ. ಆಗ ಉನ್ನತ ಶಿಕ್ಷಣವು ಬೌದ್ಧಿಕ ಚಟುವಟಿಕೆಯ ಬದಲಾಗಿ ರಾಜಕೀಯ ಪ್ರಕ್ರಿಯೆಯಾಗಿ ಬದಲಾಗಲಿದೆ. ಮುಂದುವರೆದು ಈ ಜ್ಞಾನಶಿಸ್ತುಗಳು ಅವನತಿಯನ್ನು ಕಾಣಲಿವೆ.

*ಲೇಖಕರು ದಾವಣಗೆರೆ ವಿಶ್ವವಿದ್ಯಾಲಯದ ರಾಜ್ಯಶಾಸ್ತç ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.