ಸಂಪೂರ್ಣ ಉಚಿತ ಸಾರಿಗೆ

ಖಾಸಗಿ ವಾಹನಗಳ ಮೇಲಿನ ತೆರಿಗೆಯನ್ನು ದುಪ್ಪಟ್ಟುಗೊಳಿಸಿ, ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಉಚಿತ ಮಾಡಬಾರದೇಕೆ?

ಸಂಪೂರ್ಣ ಉಚಿತ ಸಾರಿಗೆ

ಪ್ರಪಂಚದಾದ್ಯಂತ ಸಾರ್ವಜನಿಕ ಸಾರಿಗೆ ಹಳಿಗಳ ಮೇಲೆ ಓಡುತ್ತಿದೆ. ವಿಶ್ವದ ಯಾವುದೇ ಮುಖ್ಯ ನಗರದಲ್ಲಿ ಮೆಟ್ರೋ, ಮಾನೋ, ಎಲಿವೇಟೆಡ್ ಕಾರಿಡಾರ್ ಹಾಗೂ ಪೂರಕ ಬಸ್ ವ್ಯವಸ್ಥೆಯ ಆಧಾರದಲ್ಲಿ ಜನಜೀವನ ಅವಲಂಬಿತವಾಗಿವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಮಾತ್ರ ಸಾರ್ವಜನಿಕ ಸಾರಿಗೆ ಖಾಸಗಿ ವಾಹನಗಳಲ್ಲಿಯೇ ಸಂಚರಿಸುವ ಕೆಟ್ಟ ಪದ್ಧತಿ ಬೆಳೆದು ಬಂದಿದೆ. ಇದಕ್ಕೆ ಕಾರಣಗಳು ಹಲವು:

  • ಮೊದಲನೆಯದಾಗಿ ಕಳೆದ 2-3 ದಶಕಗಳಿಂದ ನಗರೀಕರಣ ಕಡಿವಾಣವಿಲ್ಲದೆ ಬೆಳೆದು ನಗರಗಳ ಸಂಚಾರದಟ್ಟಣೆ ಮಿತಿ ಮೀರಿದೆ. ನಗರಾಡಳಿತಗಳು ಯೋಜನೆ ಮಾಡಿ ಸುಗಮ ಸಂಚಾರಕ್ಕೆ ಪರಿಹಾರ ಹುಡುಕುವ ಹೊತ್ತಿಗೆ ದಟ್ಟಣೆಯು ಮತ್ತಷ್ಟು ಬಿಗಡಾಯಿಸುತ್ತಿದೆ.
  • ದಟ್ಟ ಜನವಸತಿಯ ನಗರಗಳಲ್ಲಿ ಸಾರ್ವಜನಿಕ ಸಾರಿಗೆಗೆ ಪರಿಹಾರ ಕಂಡು ಹಿಡಿಯಲು ಸರ್ಕಾರಗಳು ಅಸಮರ್ಥವಾಗಿವೆ. ರಸ್ತೆ ವಿಸ್ತರಣೆ, ಮೆಟ್ರೋ ಜಾಲ, ದೂರದ ಜಾಗಗಳಿಗೆ ನೀರು-ವಿದ್ಯುತ್ ಸರಬರಾಜು ಮತ್ತಿತರ ಸಂಕೀರ್ಣ ಮತ್ತು ಕ್ಲಿಷ್ಟ ಪರಿಹಾರಗಳನ್ನು ಹುಡುಕಲು ಪ್ರಜಾಪ್ರಭುತ್ವದಡಿಯ ನಮ್ಮ ನಗರಾಡಳಿತಗಳು ಅಸಮರ್ಥವಾಗಿವೆ.
  • ವರ್ಗಭೇದದ ಬಗ್ಗೆ ಸಂವೇದಿಯಾಗಿರುವ ನಮ್ಮ ಸಮಾಜವು ಸಾರ್ವಜನಿಕ ಸಾರಿಗೆಯನ್ನು ಬಡವರಿಗಾಗಿಯೇ ಮೀಸಲಿರಿಸಿದೆ. ಸಿರಿವಂತರೆಂದರೆ ಅವರು ಖಾಸಗಿ ವಾಹನಗಳಲ್ಲಿ ಕುಳಿತು ಪಯಣ ಮಾಡಬೇಕೆಂಬ ಇರಾದೆಯೂ ಇದೆ.
  • ಮುಖ್ಯವಾಗಿ, ನಮ್ಮ ಸಾರ್ವಜನಿಕ ಸಾರಿಗೆಗೆ ಪೂರಕವಾಗಿ ರೈಲ್ವೆ ನಿಲ್ದಾಣಗಳು, ಬಸ್ ಶೆಲ್ಟರ್‍ಗಳು, ಫುಟ್‍ಪಾತ್‍ಗಳು ಮತ್ತು ಸಾರ್ವಜನಿಕ ಸ್ಥಳಗಳು ಶುಚಿಯಾಗಿಯೂ ಇಲ್ಲ ಹಾಗೂ ಸುರಕ್ಷಿತವಾಗಿಯೂ ಇಲ್ಲ. ಸಾರ್ವಜನಿಕ ಸಾರಿಗೆ ಬಳಸಬಯಸುವ ಪಯಣಿಗರನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ರಸ್ತೆ, ನಿಲ್ದಾಣ, ಕಾಲ್ದಾರಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ವಿನ್ಯಾಸಗೊಳಿಸಬೇಕೆಂಬ ಕಾಳಜಿಯೂ ನಮಗಿಲ್ಲ.

ಈ ಎಲ್ಲಾ ಕಾರಣಗಳಿಂದ ಸಾರ್ವಜನಿಕ ಸಾರಿಗೆಗಿಂತ ಖಾಸಗಿ ವಾಹನಗಳೇ ನಮಗೆ ಆಕರ್ಷಕವಾಗಿ ಕಂಡಿವೆ. ಇದರಲ್ಲಿ ಪ್ರಯಾಣಿಕರ ಪಾತ್ರವಿದ್ದರೂ ಮುಖ್ಯ ಪಾತ್ರ ಸರ್ಕಾರ ಹಾಗೂ ನಗರಾಡಳಿತಗಳದ್ದೇ ಎಂಬುದು ಸ್ಪಷ್ಟವಾಗಿದೆ. ಇದರಿಂದ ನಗರಗಳ ಸಂಚಾರದಟ್ಟಣೆ ಮತ್ತಷ್ಟು ಹೆಚ್ಚಾಗಿ ಬೆಂಗಳೂರಿನಂತಹ ನಗರದಲ್ಲಿ ಪಯಣಿಸುವುದೇ ದುರ್ಗಮ ಎನ್ನುವ ಪರಿಸ್ಥಿತಿಯಿದೆ. ಇದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದ್ದರೂ ಈ ಸಮಸ್ಯೆಗೆ ಪರಿಹಾರ ಹುಡುಕಲೇಬೇಕಾದ ಅನಿವಾರ್ಯತೆಯನ್ನೂ ಸೃಷ್ಟಿಸಿದೆ. ಈ ಸಮಸ್ಯೆಯನ್ನು ಹಾಗೆಯೇ ಬಿಟ್ಟರೆ ಬೆಂಗಳೂರು ನಗರವೇ ಕುಸಿದು ಬೀಳುವ ಪರಿಸ್ಥಿತಿ ಒದಗಬಹುದು.

ರಸ್ತೆಗಳನ್ನು ವಿಸ್ತರಣೆ ಮಾಡುತ್ತಾ ಹೋಗುವುದು ಶಾಶ್ವತ ಪರಿಹಾರವಲ್ಲದಿದ್ದರೂ ಕೆಲವು ಆಯಕಟ್ಟಿನ ಮತ್ತು ರಾಜರಸ್ತೆಗಳಲ್ಲಿ ಅಗತ್ಯ ವಿಸ್ತರಣೆ ಮಾಡಬೇಕಾಗಬಹುದು. ಜೊತೆಗೆ, ವೃತ್ತಗಳು ಮತ್ತು ಕೂಡುರಸ್ತೆಗಳನ್ನು ಮರುವಿನ್ಯಾಸ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈ ಕೂಡುರಸ್ತೆಗಳಲ್ಲಿ ಕೆಂಪು ದೀಪ ಅಳವಡಿಸುವ ಬದಲು ಅಲ್ಲಲ್ಲಿ ಯೂಟರ್ನ್‍ಗಳನ್ನು ಸ್ಥಾಪಿಸಿ ತಡೆರಹಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ನಮ್ಮ ಎಲ್ಲಾ ನಿಲ್ದಾಣ, ತಂಗುದಾಣ ಹಾಗೂ ಕಾಲುದಾರಿಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮರುವಿನ್ಯಾಸ ಹಾಗೂ ಕಾಮಗಾರಿ ಮಾಡಬೇಕು. ಸಾರ್ವಜನಿಕ ಸಾರಿಗೆಗೆ ಈಗಿರುವ ಖರ್ಚಿಗೆ ಎರಡರಷ್ಟು ಖರ್ಚು ಮಾಡಿ ದೈನಂದಿನ ಜನಜೀವನ ಕೇವಲ ಸಾರ್ವಜನಿಕ ಸಾರಿಗೆಯಲ್ಲಿಯೇ ಸಾಗುವಂತೆ ಲಭ್ಯ ಮಾಡಬೇಕು. ಬೆಂಗಳೂರಿನ ಯಾವುದೇ ಜಾಗದಿಂದ ಕೇವಲ ಎರಡು ಕಿ.ಮೀ. ದೂರದಲ್ಲಿ ಮೆಟ್ರೋ ನಿಲ್ದಾಣವೊಂದು ಸಿಗುವಂತೆ ಜಾಲ ವಿಸ್ತರಿಸಬೇಕು. ಬೇಕಿದ್ದರೆ ಮಾನೋ, ಹಬ್ ಅಂಡ್ ಸ್ಪೋಕ್ ಮಾದರಿಯಲ್ಲಿ ಸ್ಥಳೀಯ ಸಾರಿಗೆಯನ್ನೂ ಒದಗಿಸಬೇಕು.

ಇದೆಲ್ಲಕ್ಕೂ ಹಣ ಬೇಕಾಗುತ್ತದೆ. ಅದಕ್ಕಾಗಿ ಬೆಂಗಳೂರಿನಲ್ಲಿ ನೋಂದಾ ಯಿತ ವಾಹನಗಳ ಮೇಲೆ ತೆರಿಗೆಯನ್ನು ಹೆಚ್ಚಿಸಿ ಸಂಪನ್ಮೂಲ ಸಂಗ್ರಹ ಮಾಡಬೇಕು. ಬೆಂಗಳೂರಿನ ಹೊರಗಿನ ವಾಹನಗಳು ಬೆಂಗಳೂರು ಪ್ರವೇಶ ಮಾಡಲು ಶುಲ್ಕ ವಿಧಿಸಬೇಕು. ಕೆಲಸವಿಲ್ಲದೆ ಯಾರೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ಮಾಡಲಾರರು. ಜೊತೆಗೆ, ಸಂಚಾರ ಮಾಡದೆ ಅವರ ಜನಜೀವನ ಹಾಗೂ ವ್ಯವಹಾರಗಳು ನಡೆಯಲಾರವು. ಆದ ಕಾರಣ ಸಾರ್ವಜನಿಕ ಸಾರಿಗೆಯನ್ನು ಉಚಿತವೆನ್ನುವ ಮಟ್ಟಕ್ಕೆ ಒದಗಿಸಬೇಕು. ಹೆಸರಿಗೆ ಮಾತ್ರಕ್ಕೆ ಬಳಕೆದಾರರಿಗೆ ಶುಲ್ಕ ವಿಧಿಸಿದರೂ ಈ ಶುಲ್ಕವೂ ಸಾರ್ವಜನಿಕ ಸಾರಿಗೆಯನ್ನು ಅತ್ಯಂತ ಆಕರ್ಷಕವಾಗಿ ಮಾಡುವಂತಿರ ಬೇಕು. ನಾಡಿನ ಜನರೆಲ್ಲರೂ ಸಾರ್ವಜನಿಕ ಸಾರಿಗೆಯನ್ನೇ ಬಳಸುವಂತೆ ಮಾಡಿ ವರ್ಗಭೇದದ ಸನ್ನಿವೇಶವನ್ನು ನಿವಾರಣೆ ಮಾಡಬೇಕು.

Leave a Reply

Your email address will not be published.