ಸಾರ್ವಜನಿಕ ಒಳಿತಿ’ನ ಮರುಪರಿಶೀಲನೆಯ  ಅಗತ್ಯ

ಮ್ಮ ಸಂಸ್ಕೃತಿ-ಮನೋಭಾವನೆ ಬದಲಾಗಲು ಸಾವಿರ ವರ್ಷಗಳದರೂ ಬೇಕು ಎಂಬ ನಾರಾಯಣಮೂರ್ತಿಯವರ ಮಾತಿನ ಸತ್ಯಾಸತ್ಯತೆ ಹುಡುಕುವ ಜೊತೆಗೆ ಅವರ ಮಾತಿನಲ್ಲಿರುವ ಕಾಳಜಿ, ಆತಂಕ ಮತ್ತು ಹತಾಶೆಯನ್ನು ನಾವು ಗಮನಿಸಬೇಕಿದೆ. ನಮ್ಮ ಸಾಂಸ್ಕೃತಿಕ ಹಿನ್ನೆಲೆ ನಮಗೆ ಗುಣಾತ್ಮಕವಾಗಿ ನೀಡಿರುವ ಅಂಶಗಳ ಜೊತೆಯಲ್ಲಿಯೇ ನಮಗೆ ನೀಡಿರುವ ಮಾನಸಿಕ ರೋಗಗಳನ್ನು ಗುರುತಿಸುವ ಕೆಲಸ ಇಂದು ಆಗಬೇಕಿದೆ. ಅನವಶ್ಯಕವಾಗಿ ಭಾರತೀಯ ಸಂಸ್ಕೃತಿಯನ್ನು ವೈಭವೀಕರಿಸುವ ಬದಲು ಹಲವು ಸಂಸ್ಕೃತಿಗಳ ಮಿಶ್ರಣವಾದ ಭಾರತೀಯತೆಯನ್ನು ಒಪ್ಪಿಕೊಂಡು ಸಾಂವಿಧಾನಿಕವಾಗಿ ‘ಸಾರ್ವಜನಿಕ ಒಳಿತು ಎಂಬ ಅಮೂರ್ತವನ್ನು ಸತ್ಯವಾಗಿಸಬೇಕಿದೆ.

-ಮೋಹನದಾಸ

ನಾರಾಯಣಮೂರ್ತಿಯವರ ಹೇಳಿಕೆ ನಮಗೆ ಅಚ್ಚರಿ ಮೂಡಿಸಿರಬಹುದು. ಯಾವಾಗಲೂ ಸಂಯಮದ ಮತ್ತು ಅಳೆದುತೂಗುವ ರೀತಿಯಲ್ಲಿ ಮಾತನಾಡುವ ಮೂರ್ತಿಯವರು ಈ ಬಾರಿ ನಮ್ಮನ್ನು ಬಡಿದೇಳಿಸುವ ರೀತಿಯಲ್ಲಿ ಮಾತನ್ನಾಡಿದ್ದಾರೆ. ಸಂಸ್ಕೃತಿಯ ಬಗ್ಗೆ ನಮ್ಮ ಇಬ್ಬಗೆಯ ಧೋರಣೆಯನ್ನು ಕಂಡು ಮೂರ್ತಿಯವರ ಸಂಯಮದ ಕಟ್ಟೆ ಒಡೆದು ಹೋಗಿರಬಹುದು. ಅಥವಾ ಉದ್ದೇಶಪೂರ್ವಕವಾಗಿ ಮೂರ್ತಿಯವರು ನಮಗೆ ‘ಶಾಕ್ ಥೆರಪಿ’ ನೀಡುವ ಸಲುವಾಗಿಯೇ ಈ ಹೇಳಿಕೆ ನೀಡಿರಬಹುದು.

ಕಾರಣ ಏನೇ ಇರಲಿ, ಮೂರ್ತಿಯವರ ಹೇಳಿಕೆ ಸಂಪ್ರದಾಯಸ್ಥರಿಗೆ ಅಪಥ್ಯವಾಗಬಹುದು. ಸನಾತನ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಈ ಸಂಪ್ರದಾಯಸ್ಥರು ಮೂರ್ತಿಯವರ ಮಾತುಗಳನ್ನು ಒಪ್ಪದೇ ಇರಬಹುದು. ವೇದ ಉಪನಿಷತ್ತುಗಳಿಂದ ಹಿಡಿದು ನಮ್ಮ ಸಂಸ್ಕೃತಿಯ ಭಾಗಗಳಾದ ಕಾವ್ಯಗಳು, ಪುರಾಣಗಳು, ನಾಟ್ಯ-ಸಂಗೀತ, ಶಿಲ್ಪಕಲೆ-ಚಿತ್ರಕಲೆ, ಯೋಗ-ಪ್ರಾಣಾಯಾಮಗಳ ಅನನ್ಯತೆ ಮತ್ತು ಶ್ರೇಷ್ಠತೆಯನ್ನು ಇವರು ಹೇಳಬಹುದು. ಇದುವರೆಗಿನ ಹಲವಾರು ರಾಜಮನೆತನಗಳ, ಸಾಮ್ರಾಜ್ಯಗಳ ಮತ್ತು ದಂಡಯಾತ್ರೆಗಳ ಹಿರಿಮೆ ಎತ್ತಿ ಹೇಳಬಹುದು. ನಲಂದ-ತಕ್ಷಶಿಲಾ, ಅಜಂತಾ-ಎಲ್ಲೊರ, ಹಂಪಿ-ಮೈಸೂರುಗಳ ಗರಿಮೆ ಒತ್ತಿ ಹೇಳಬಹುದು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಹೆಗ್ಗಳಿಕೆಯನ್ನು ಅಲ್ಲಗಳೆಯಲಾಗದು ಎಂದೂ ಹೇಳಬಹುದು.

ಅಲ್ಲಗಳೆಯುವ ಅಗತ್ಯವೇನಿಲ್ಲ. ಅದೇ ಸಂಸ್ಕೃತಿಯ ವರ್ಣಾಶ್ರಮ ಪದ್ಧತಿ, ಜಾತಿ ಶ್ರೇಣಿಗಳು, ಮಹಿಳಾ ದಮನ, ದಲಿತರ ಘೋರ ಅಪಮಾನ-ಶೋಷಣೆಗಳನ್ನು ಹೆಸರಿಸಿದರೇ ಸಾಕು, ಸನಾತನ ಸಂಸ್ಕೃತಿಯ ಬಗ್ಗೆ ಮಾತನಾಡುವವರ ದನಿ ಉಡುಗಿಹೋಗುತ್ತದೆ. ಸಮಾಜವನ್ನು ಉದ್ದಗಲಕ್ಕೆ ಒಡೆದು ಆಳುವ ಪದ್ಧತಿಯ ಬಗ್ಗೆಯೇ ಅಸಹ್ಯ ಮೂಡುತ್ತದೆ. ಸಮಾಜ ಮತ್ತು ಧರ್ಮ ಸುಧಾರಣೆಯ ಬಗ್ಗೆ ಉದಾತ್ತವಾಗಿ ಮಾತನಾಡಿದವರ ಹಿಂಬಾಲಕರೇ ಜಾತಿ-ಉಪಜಾತಿಗಳಲ್ಲಿ ಹರಿದು ಹಂಚಿ ಹೋಗಿರುವುದನ್ನು ನೋಡಿ ಕನಿಕರ ಮೂಡುತ್ತದೆ. ಜ್ಞಾನವನ್ನು ಬರೆದಿಡಲೂ ಹೆದರಿ ಕಿವಿಯಿಂದ ಕಿವಿಗೆ ಪ್ರಸರಣ ಮಾಡಬೇಕೆನ್ನುವವರ ಬಗ್ಗೆ ವಿಷಾದ ಮೂಡುತ್ತದೆ. ಸಮಷ್ಠಿಯಾಗಿ ಸಮುದಾಯವನ್ನು ಪ್ರತಿನಿಧಿಸದೇ ಕೇವಲ ಜಾತಿ-ವರ್ಗಗಳ ಹಿತವನ್ನು ಪ್ರತಿನಿಧಿಸುವವರ ಮೇಲೆ ಕೋಪವೂ ಬರುತ್ತದೆ.

ಹೇಗಿದ್ದರೂ ನಡೆಯುತ್ತದೆ ಅಥವಾ ಚಲ್ತಾ ಹೈ ಎಂದುಕೊಳ್ಳುವುದು ಹಾಗೂ ಉತ್ಕಷ್ಟತೆಯ ಬಗ್ಗೆ ಯಾವುದೇ ಕಾಳಜಿ ಇಲ್ಲದಿರುವುದೂ ನಮಗೆ ಕಾಣಸಿಗುತ್ತದೆ. ಸಹಜವಾಗಿ ನಮ್ಮ ಸರ್ಕಾರಗಳಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳು ಮನೆಮಾಡಿಕೊಂಡಿವೆ. ಸಮಷ್ಠಿಯ ಬಗ್ಗೆ ಹಾಗೂ ದೇಶದ ಬಗ್ಗೆ ಹೆಮ್ಮೆ ಗೌರವಗಳಿಲ್ಲದಿರುವುದು ಜಗಜ್ಜಾಹೀರಾಗಿದೆ.

ಈ ಎಲ್ಲಾ ಅಸಾಂಸ್ಕತಿಕ ಹಾಗೂ ಅಸಮಾನತೆಯ ಹಿನ್ನೆಲೆಯಿಂದ ನಮ್ಮ ಇದುವರೆಗಿನ ನಡವಳಿಕೆಯನ್ನು ಸಭ್ಯವೆಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತದೆ. ಇದರ ಜೊತೆಗೆ ಸಮಷ್ಠಿ ಹಿತದ ಬಗ್ಗೆ ಆಲಸ್ಯ ಹಾಗು ಅಸಡ್ಡೆ ಇದ್ದೇ ಇದೆ. ಕೆಲಸ ಕದಿಯುವುದು ಮತ್ತು ಯಾವುದೇ ಬದ್ಧತೆ ಇಲ್ಲದೆ ಕೆಲಸ ಮಾಡುವುದು ನಮ್ಮ ಮೊದಲನೇ ಗುಣವಾಗಿದೆ. ಹೇಗಿದ್ದರೂ ನಡೆಯುತ್ತದೆ ಅಥವಾ ಚಲ್ತಾ ಹೈ ಎಂದುಕೊಳ್ಳುವುದು ಹಾಗೂ ಉತ್ಕಷ್ಟತೆಯ ಬಗ್ಗೆ ಯಾವುದೇ ಕಾಳಜಿ ಇಲ್ಲದಿರುವುದೂ ನಮಗೆ ಕಾಣಸಿಗುತ್ತದೆ. ಸಹಜವಾಗಿ ನಮ್ಮ ಸರ್ಕಾರಗಳಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳು ಮನೆಮಾಡಿಕೊಂಡಿವೆ. ಸಮಷ್ಠಿಯ ಬಗ್ಗೆ ಹಾಗೂ ದೇಶದ ಬಗ್ಗೆ ಹೆಮ್ಮೆ ಗೌರವಗಳಿಲ್ಲದಿರುವುದು ಜಗಜ್ಜಾಹೀರಾಗಿದೆ.

ಬೇರೆಲ್ಲಾ ದೇಶಗಳ ಹೋಲಿಕೆಯಲ್ಲಿ ನಮ್ಮ ದೇಶದಲ್ಲಿ ಬೇಕಿರುವ ಎಲ್ಲಾ ಪ್ರಾಕೃತಿಕ ಸಂಪತ್ತು ಹೇರಳವಾಗಿದೆ. ಉತ್ಪಾದಕ ಮತ್ತು ಗ್ರಾಹಕ ಮಾನವ ಸಂಪನ್ಮೂಲವಿದೆ. ಎರಡು ಸಾವಿರ ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಉತ್ಪಾದಕ ವ್ಯವಸ್ಥೆಯಿದೆ. ಬಂಡವಾಳಶಾಹಿ ಪದ್ಧತಿಯ ಜೊತೆಜೊತೆಗೆ ಊಳಿಗಮಾನ್ಯ ಮತ್ತು ಸಮಾಜವಾದಿ ಪದ್ಧತಿಗಳೂ ನಮಗೆ ಪರಿಚಿತವಾಗಿವೆ. ಹಾಗಿದ್ದರೂ ಕೂಡಾ ದೇಶದ ಒಟ್ಟು ಆರ್ಥಿಕ ವ್ಯವಸ್ಥೆ ಹಿಂದುಳಿದಿದೆ. ಸರ್ಕಾರಿ ವಲಯವು ಕಳೆದ ಏಳು ದಶಕಗಳಲ್ಲಿ ಮಾಡಿದ ಹೂಡಿಕೆಯು ದೇಶದ ಬಹುತೇಕರ ಬಡತನ ನಿವಾರಿಸುವಲ್ಲಿ ಸೋತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪರಸ್ಪರ ನಂಬಿಕೆ ಹಾಗೂ ವಿಶ್ವಾಸದಿಂದ ಕಾಣುವ ಮನೋಭಾವ ದೂರವಾಗಿದೆ.

ನಾರಾಯಣಮೂರ್ತಿಯವರು ಹೇಳಿದಂತೆ ನಮ್ಮ ನಡವಳಿಕೆಯಲ್ಲಿ ರಾಷ್ಟ್ರಪ್ರೇಮ ಮರೆಯಾಗಿದೆ. ಸ್ಪರ್ಧಾತ್ಮಕ ಮನೋಭಾವ ಮತ್ತು ಚುರುಕುತನಗಳು ಮಾಯವಾಗಿವೆ. ಪ್ರಾಮಾಣಿಕತೆಯಾಗಲಿ ಅಥವಾ ಅರ್ಹತೆ ಆಧಾರದ ಆಯ್ಕೆಯಾಗಲೀ ನಮ್ಮ ಪರಿಭಾಷೆಯಲ್ಲಿ ಇಲ್ಲವೆನ್ನುವಂತೆ ಕಾಣುತ್ತಿದೆ. ಎಲ್ಲರಿಗೂ ಗೊತ್ತಿರುವ ಸತ್ಯವನ್ನೇ ಮೂರ್ತಿಯವರು ಹೇಳಿದ್ದಾರೆ. ಆದರೆ ಯಾರೂ ಹೇಳದ ಸಾರ್ವಜನಿಕ ಸತ್ಯವನ್ನು ಹೇಳುವ ದಾಷ್ಟ್ರ್ಯವನ್ನು ಅವರು ತೋರಿದ್ದಾರೆ. ನಮ್ಮ ವೈಜ್ಞಾನಿಕ ಹಿಂದುಳಿದಿರುವಿಕೆಗೆ ಕಾರಣವನ್ನೂ ಹುಡುಕುತ್ತಾರೆ. ನಮ್ಮ ವಿಜ್ಞಾನಿಗಳು ದೇಶದಲ್ಲಿ ಸೂಕ್ತ ಸೌಲಭ್ಯ ಹಾಗೂ ವಾತಾವರಣದ ಕೊರತೆಯ ಕಾರಣಕ್ಕೆ ಪರದೇಶಗಳಿಗೆ ವಲಸೆ ಹೋಗುವುದನ್ನು ಕಂಡು ಮರುಕ ಪಡುತ್ತಾರೆ. ಈ ಪ್ರತಿಭಾ ವಲಸೆ ತಡೆಹಿಡಿಯದಿದ್ದರೆ ದೇಶದ ಆರ್ಥಿಕ ಪ್ರಗತಿಯಾಗದು ಎಂಬುದನ್ನು ಒತ್ತಿ ಹೇಳುತ್ತಾರೆ.

ಅದರೆ ನಾವು ಸಾಂಸ್ಕತಿಕವಾಗಿ ಬದಲಾಗಬೇಕಾದರೆ ಒಂದೆರೆಡು ಸಾವಿರ ವರ್ಷಗಳಾದರೂ ಬೇಕು ಎಂಬ ವಿವಾದಿತ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಎಪ್ಪತ್ತು ವರ್ಷಗಳ ಹಿಂದೆಯೇ ನಾವು ಗಣತಂತ್ರವಾಗಿದ್ದೇವೆ ಹಾಗೂ ನಮ್ಮ ಸಂವಿಧಾನವನ್ನು ಬರೆದುಕೊಂಡಿದ್ದೇವೆ. ಕಳೆದ ಏಳು ದಶಕಗಳಲ್ಲಿ ಆರ್ಥಿಕವಾಗಿ ಕೂಡಾ ಸಾಕಷ್ಟು ಪ್ರಗತಿ ಕಂಡಿದ್ದೇವೆ. ದೇಶದ ಅರ್ಧಕ್ಕೂ ಹೆಚ್ಚು ಜನ ಬಡತನದ ಶಾಪದಿಂದ ವಿಮೋಚನೆ ಪಡೆದಿದ್ದಾರೆ. ಜನಸಂಖ್ಯೆಯ ಬಹುಭಾಗ ಶಿಕ್ಷಿತರೂ ಆಗಿದ್ದಾರೆ ಮತ್ತು ಆಧುನಿಕ ಸಂವಹನ ಮಾಧ್ಯಮಗಳಿಂದ ಸುತ್ತಮುತ್ತಲಿನ ಆಗುಹೋಗುಗಳನ್ನು ತಿಳಿಯುತ್ತಿದ್ದಾರೆ. ದೇಶದೆಲ್ಲೆಡೆ ಶಾಲೆ-ಕಾಲೇಜು-ವಿವಿಗಳು ತಲೆಯೆತ್ತಿ ಶಿಕ್ಷಣ ಪ್ರದಾನ ಮಾಡುತ್ತಿವೆ. ಬೇರೆಲ್ಲಾ ದೇಶಗಳಿಗಿಂತ ಡಿಜಿಟಲ್ ಜ್ಞಾನ ಭಾರತದಲ್ಲಿಯೇ ಹೆಚ್ಚಾಗಿದೆ. ಹಾಗಾದ ಮೇಲೆ ನಮ್ಮ ಸಾಂಸ್ಕತಿಕ ಮನೋಭಾವದ ಬದಲಾವಣೆಗೆ ಸಾವಿರಾರು ವರ್ಷಗಳು ಬೇಕೆ..?

ಧಾರವಾಡದ ಜನರ ಮನೋಭಾವ ಚಾಮರಾಜನಗರ ಜಿಲ್ಲೆಯ ಭಾವನೆಗಳಿಗೆ ವ್ಯತಿರಿಕ್ತವಾಗಬಹುದು. ನಗರ ಮತ್ತು ಹಳ್ಳಿಗಳ ಚಿಂತನಾಕ್ರಮದಲ್ಲಿಯೂ ಬದಲಾವಣೆ ಇರಬಹುದು. ಅಂತಹ ಸಂದರ್ಭದಲ್ಲಿ ದೇಶದ ಎಲ್ಲರ ಮನೋಭಾವವನ್ನು ಸಾಮಾನ್ಯೀಕರಣ ಮಾಡುವುದು ಅಷ್ಟೇನೂ ಸಮಂಜಸವಾಗಿ ಕಾಣುವುದಿಲ್ಲ.

1. ಮೊದಲಿಗೆ ನಮ್ಮ ಮನೋಸಂಸ್ಕೃತಿ ಬದಲಾಗಬೇಕು ಎಂಬುದನ್ನು ನಾವು ಒಪ್ಪಲೇಬೇಕು. ಆದರೆ ನಮ್ಮ ದೇಶದಲ್ಲಿ ಒಂದು ಸಂಸ್ಕೃತಿಯೆಂದೇನಲ್ಲ. ದೇಶದ ಉದ್ದಗಲಕ್ಕೆ ಜಿಲ್ಲೆಯಿಂದ ಜಿಲ್ಲೆಗೆ ನಮ್ಮ ಸಂಸ್ಕೃತಿ ಮತ್ತು ಮನೋಭಾವ ಬದಲಾಗುತ್ತದೆ. ಕರ್ನಾಟಕಕ್ಕೆ ಸೀಮಿತವಾಗಿ ಚರ್ಚೆ ಮಾಡುವುದೇ ಅದರೆ ದಕ್ಷಿಣ ಕನ್ನಡಕ್ಕೂ ಚಿತ್ರದುರ್ಗ ಜಿಲ್ಲೆಗೂ ಸಾಂಸ್ಕತಿಕವಾಗಿ ಯಾವುದೇ ಸಮಾನತೆ ಕಾಣದೇ ಹೋಗಬಹುದು. ಧಾರವಾಡದ ಜನರ ಮನೋಭಾವ ಚಾಮರಾಜನಗರ ಜಿಲ್ಲೆಯ ಭಾವನೆಗಳಿಗೆ ವ್ಯತಿರಿಕ್ತವಾಗಬಹುದು. ನಗರ ಮತ್ತು ಹಳ್ಳಿಗಳ ಚಿಂತನಾಕ್ರಮದಲ್ಲಿಯೂ ಬದಲಾವಣೆ ಇರಬಹುದು. ಅಂತಹ ಸಂದರ್ಭದಲ್ಲಿ ದೇಶದ ಎಲ್ಲರ ಮನೋಭಾವವನ್ನು ಸಾಮಾನ್ಯೀಕರಣ ಮಾಡುವುದು ಅಷ್ಟೇನೂ ಸಮಂಜಸವಾಗಿ ಕಾಣುವುದಿಲ್ಲ.

2. ಆಧುನಿಕತೆ ಮತ್ತು ವೈಜ್ಞಾನಿಕ ಮನೋಭಾವ ಕಡಿಮೆಯಾಗಲು ನಮ್ಮ ಧರ್ಮ-ಜಾತಿ-ಪರಂಪರೆಯ ಪುನರ್ಜನ್ಮವೂ ಕಾರಣವಿರಬಹುದು. ನಮ್ಮ ವಿಭಜಿತ ಮನೋಭಾವಕ್ಕೆ ಪರಸ್ಪರ ನಂಬಿಕೆ ಹಾಗೂ ವಿಶ್ವಾಸಗಳ ಕೊರತೆಯೂ ಕಾರಣವಾಗಿರಬಹುದು. ಅಂತಹ ಸಂದರ್ಭದಲ್ಲಿ ಧರ್ಮ-ಜಾತಿಗಳನ್ನು ಧಿಕ್ಕರಿಸಿ ಸಾಂವಿಧಾನಿಕ ಹೆದ್ದಾರಿಯನ್ನು ಹಿಡಿಯುವ ಧೀಮಂತ ನಾಯಕತ್ವ ಬೇಕಿತ್ತು. ಆದರೆ ನಮ್ಮ ಸಾಮಾಜಿಕ ಮತ್ತು ರಾಜಕೀಯ ನಾಯಕರು ಜನರನ್ನು ಒಗ್ಗೂಡಿಸಲು ಜಾತಿ-ಧರ್ಮಗಳ ಚಿಹ್ನೆಗಳನ್ನು ಬಳಸಿದ್ದಾರೆ. ಈ ಚಿಹ್ನೆಗಳು ಹಳೆಯ ಮನಸ್ಥಿತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಎಣೆಮಾಡಿಕೊಟ್ಟಿವೆ.

ಜ್ಯೋತಿಷ್ಯವೇ ವಿಜ್ಞಾನವೆಂದು ಹೇಳುವ ಮಟ್ಟಿಗೆ ಮತ್ತು ಅನಾವೃಷ್ಟಿಯ ಸಮಯದಲ್ಲಿ ಸರ್ಕಾರಗಳು ಹೋಮ-ಹವನ ಮಾಡುವ ಹಂತಕ್ಕೆ ಈ ಆಭಾಸ ಮುಂದುವರೆದಿದೆ. ವೈಜ್ಞಾನಿಕ ಮನೋಭಾವನೆಯ ಪರವಾಗಿ ಇಂದು ಮಾತನಾಡುವವರೇ ಇಲ್ಲವಾಗಿದ್ದಾರೆ. ಗಣತಂತ್ರ ದಿನವೆನ್ನುವುದು ಕೇವಲ ಸರ್ಕಾರಿ ರಜಕ್ಕಷ್ಟೇ ಸೀಮಿತ ಪ್ರಾಮುಖ್ಯ ಪಡೆದಿದೆ. ನಾವು ಗಳಿಸಿದ ಸ್ವಾತಂತ್ರ್ಯದ ಮೌಲ್ಯವನ್ನು ಮರೆತು ಸರ್ವಾಧಿಕಾರಿಯೊಬ್ಬ ಬಂದು ನಮ್ಮನ್ನು ಉದ್ಧಾರ ಮಾಡಲಿ ಎಂದು ಬೇಡುವಷ್ಟರ ಮಟ್ಟಿಗೆ ನಾವು ಅಸಹಾಯಕರಾಗಿದ್ದೇವೆ.

3. ಪರಸ್ಪರ ನಂಬಿಕೆ ಮತ್ತು ವಿಶ್ವಾಸದ ಕೊರತೆ ನಮ್ಮಲ್ಲಿ ಎಣಿಕೆಗಿಂತ ಹೆಚ್ಚು ವೈಮನಸ್ಸು ಮತ್ತು ದ್ವೇಷ ಸೃಷ್ಟಿ ಮಾಡುತ್ತದೆ. ಇರುವ ಒಂದೋ ಎರಡೂ ಅವಕಾಶಗಳಿಗೆ ಎಲ್ಲರೂ ಮುಗಿಬೀಳಬೇಕಾದ ಪರಿಸ್ಥಿತಿಯಿದೆ. ಈ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್‍ನ ಉದಾಹರಣೆಯನ್ನೇ ತೆಗೆದುಕೊಳ್ಳಿ. ರಣಜಿ ಟ್ರೋಫಿ ಹಾಗೂ ಟೆಸ್ಟ್ ಕ್ರಿಕೆಟ್‍ನ ಹೊರತಾಗಿ ದೇಶೀಯ ಕ್ರಿಕೆಟರ್‍ಗಳಿಗೆ ತಮ್ಮ ಸಾಮಥ್ರ್ಯ ತೋರುವ ಯಾವುದೇ ವೇದಿಕೆಗಳಿರಲಿಲ್ಲ. ಈ ಹಂತಕ್ಕೆ ಬರುವ ಮೊದಲು ಬಹಳಷ್ಟು ಕ್ರಿಕೆಟಿಗರು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಕ್ಕೆ ಬಲಿಯಾಗಿರುತ್ತಿದ್ದರು. ಆದರೆ ಇದೇ ಕ್ರಿಕೆಟ್‍ನಲ್ಲಿ ಖಾಸಗಿ ಮಾಲಿಕತ್ವದ ಐಪಿಎಲ್ ಟೂರ್ನಮೆಂಟ್ ಶುರುವಾದ ಮೇಲೆ ದೇಶೀಯ ಕ್ರಿಕೆಟರ್‍ಗಳಿಗೆ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಹತ್ತಾರು ಅವಕಾಶಗಳು ದೊರತಿವೆ.

20-20 ರ ಮಾದರಿ, ಏಕದಿನ ಪಂದ್ಯ ಹಾಗೂ ಟೆಸ್ಟ್ ಪಂದ್ಯಗಳು ಇಂದು ಆಟಗಾರರಿಗೆ ಬೆವರಿಳಿಯುವಷ್ಟು ಅವಕಾಶ ನೀಡುತ್ತಿವೆ. ದೇಶೀಯವಾಗಿ ಐಪಿಎಲ್ ಜೊತೆಗೆ ಇಂದು ಹಲವು ಹಂತದಲ್ಲಿ ಟೂರ್ನಿಗಳು ನಡೆಯುತ್ತಿದ್ದು ಪ್ರತಿಭಾಶಾಲಿ ಕ್ರಿಕೆಟರ್ ಒಬ್ಬನನ್ನು ಯಾರೂ ವಂಚಿಸಲು ಅಥವಾ ಅವಗಣನೆಗೆ ಒಳಪಡಿಸಲು ಆಗದಾಗಿದೆ.

ಇನ್ನೊಂದು ಉದಾಹರಣೆ ತೆಗೆದುಕೊಳ್ಳಿ. 80 ಮತ್ತು 90ರ ದಶಕಗಳಲ್ಲಿ ಬೆಂಗಳೂರಿನಲ್ಲಿ ಗುಣಮಟ್ಟದ ಶಾಲೆಗಳ ಕೊರತೆಯಿತ್ತು. ಬಿಷಪ್‍ಕಾಟನ್, ಸೊಫಿಯಾ, ಕುಮರನ್ಸ್ ಮತ್ತೆರೆಡು ಕಾನ್ವೆಂಟ್ ಶಾಲೆಗಳಿಗೆ ಭಾರೀ ಬೇಡಿಕೆಯಿತ್ತು. ಈ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕೆನ್ನುವವರು ಅವರಿವರ ದುಂಬಾಲು ಬಿದ್ದು ಹೇಗಾದರೂ ಮಾಡಿ ಪ್ರವೇಶ ಗಿಟ್ಟಿಸಲು ಹೆಣಗಾಡುತ್ತಿದ್ದರು. 90ರ ದಶಕದಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳ ಸರಣಿ ಉದ್ಘಾಟನೆಯಾಯಿತು. ಎನ್‍ಪಿಎಸ್, ಡಿಪಿಎಸ್, ಪ್ರೆಸಿಡೆನ್ಸಿ ಮತ್ತಿತರ ಹತ್ತಾರು ಸಂಸ್ಥೆಗಳು ಬೆಂಗಳೂರಿನಲ್ಲಿ ನೂರಾರು ಶಾಲೆಗಳನ್ನು ಸ್ಥಾಪಿಸಿದವು. ಈ ಶಾಲೆಗಳು ತಮ್ಮ

ಶಿಕ್ಷಕರಿಗೆ ಆಕರ್ಷಕ ಸಂಬಳವನ್ನೂ ನೀಡುವುದರೊಂದಿಗೆ ಗುಣಮಟ್ಟವನ್ನೂ ಹೆಚ್ಚಿಸಿಕೊಂಡವು. ಮೊದಮೊದಲು ಪರಸ್ಪರ ಪೈಪೋಟಿಯಲ್ಲಿ ಶಾಲಾಶುಲ್ಕ ಹೆಚ್ಚುಮಾಡುತ್ತಾ ಹೋದರೂ ನಂತರದಲ್ಲಿ ಸ್ಪರ್ಧೆಯ

ಕಾರಣದಿಂದ ಈ ಶಾಲೆಗಳ ಶುಲ್ಕವೂ ಸಮಾಧಾನಕರ ಆಗಬೇಕಾಗಿತ್ತು. ಹಿಂದಿಲ್ಲದ ಮುಗ್ಗಟ್ಟು ಇಲ್ಲವಾಗಿ ಇಂದು ಪೋಷಕರು ತಮ್ಮ

ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಶಾಲೆಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.

ಎಲ್ಲಿ ಕೊರತೆ ಇರುವುದೋ ಅಲ್ಲಿ ಪೈಪೋಟಿ ಸಹಜ. ಜೀವನಾವಶ್ಯಕ ವಸ್ತು ಮತ್ತು ಸೇವೆಗಳಲ್ಲಿ ನಾವು ಕೊರತೆ ನಿರ್ಮೂಲನ ಮಾಡಿಬಿಟ್ಟರೆ ಅನಗತ್ಯ ಪೈಪೋಟಿಯೂ ತಪ್ಪುತ್ತದೆ. ಇಂದು ಬೆಂಗಳೂರಿನಲ್ಲಿ ರೋಗಿಗಳು ವೈದ್ಯರನ್ನು ಹುಡುಕಿಕೊಂಡು ಹೋಗುವ ಬದಲು ಆಸ್ಪತ್ರೆಗಳು ರೋಗಿಗಳನ್ನು ಆಕರ್ಷಿಸುವತ್ತ ಜಾಹೀರಾತು ನೀಡಬೇಕಿದೆ. ಇದು ಆರೋಗ್ಯಕರ ಬೆಳವಣಿಗೆ. ನಮ್ಮ ಮೂಲ ಅವಶ್ಯಕತೆಗಳು, ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್ ಮತ್ತಿತರ ಎಲ್ಲಾ ವಿಷಯಗಳಲ್ಲಿಯೂ ಮೊದಲು ಕೊರತೆಯ ನಿರ್ಮೂಲನ ಮಾಡಬೇಕಿದೆ. ಕೊರತೆಯ ಬದಲು ಹೆಚ್ಚುವರಿ ಪೂರೈಕೆ ಆದರೆ ಇನ್ನೂ ಒಳ್ಳೆಯದು.

ಜೊತೆಯಲ್ಲಿ ಹೇಗೆ ನಮ್ಮಲ್ಲಿ ಕೊರತೆಯನ್ನೇ ಸೃಷ್ಟಿಮಾಡಲಾಗುತ್ತಿದೆ ಎಂಬುದನ್ನೂ ನಾವು ಪರಿಶೀಲಿಸಬೇಕಿದೆ. ಸರ್ಕಾರಗಳು ಬೇಕೆಂದೇ ಕೊರತೆಯ ಬಿಕ್ಕಟ್ಟು ಮೂಡಿಸಿ ಭ್ರಷ್ಟಾಚಾರಕ್ಕೆ ಸುಲಭಮಾರ್ಗ ಹುಡುಕಿಕೊಳ್ಳುತ್ತಿವೆ. ಬೆಂಗಳೂರಿನ ಸುತ್ತಮುತ್ತ ವಸತಿ, ವಾಣಿಜ್ಯ ಅಥವಾ ಕೈಗಾರಿಕೆ ಬಳಕೆಗೆ ಜಮೀನು ಲಭ್ಯವಿಲ್ಲ. ಭೂಪರಿವರ್ತನೆÉ ಯಾವುದೇ ಮಾರ್ಗದರ್ಶಿ ಸೂತ್ರಕ್ಕೆ ಒಳಪಟ್ಟಿಲ್ಲ. ಹೊಸ ಕಾಲೇಜು-ವಿವಿಗಳ ಪ್ರಾರಂಭಕ್ಕೆ ಅನುಮತಿ ಸಿಗುತ್ತಿಲ್ಲ. ಯಾವುದಾದರೂ ಸಬೂಬು ಹೇಳಿ ಸರ್ಕಾರಗಳು ಕೊರತೆ ನಿವಾರಣೆಗೆ ಅಡ್ಡಿಗಾಲು ಹಾಕುತ್ತಿವೆ.

4. ಸ್ಪರ್ಧೆಯ ನಿರ್ಣಯದ ಪಾರದರ್ಶಿಕತೆ ಮತ್ತು ನಿಷ್ಪಕ್ಷಪಾತದ ಬಗ್ಗೆ ನಮಗೆ ನಂಬಿಕೆಯಿಲ್ಲದಿದ್ದರೆ ನಾವು ವಾಮಮಾರ್ಗ ಹಿಡಿಯುವುದು ಸಹಜ. ಆದ್ದರಿಂದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಆಯ್ಕೆಗಳಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಪಾರದರ್ಶಕತೆ ತರುವುದು ಇಂದಿನ ಅಗತ್ಯವಾಗಿದೆ. ಇದು ಸ್ಪರ್ಧಾತ್ಮಕ ಮನೋಭಾವ ಹಾಗೂ ಕೇವಲ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡುವ ಹಾದಿಯನ್ನು ಸುಗಮಗೊಳಿಸೀತು. ರೈಲ್ವೆ ಹಾಗೂ ವಿಮಾನ ಪ್ರಯಾಣದ ಟಿಕೀಟು ಖರೀದಿ ಮತ್ತಿತರ ವ್ಯವಸ್ಥೆಯನ್ನು ಡಿಜಿಟಲ್ ಮಾಧ್ಯಮ ಸುಗಮಗೊಳಿಸಿದೆ. ಇತ್ತೀಚೆಗೆ ಫಾಸ್ಟ್‍ಟ್ಯಾಗ್ ಮುಖಾಂತರ ರಸ್ತೆಯಲ್ಲಿ ಬಳಕೆಶುಲ್ಕ ಕಟ್ಟುವುದೂ ಸುಗಮವಾಗಿದೆ. ಅದೇ ರೀತಿಯಲ್ಲಿ ನಮ್ಮ ಎಲ್ಲ ದೈನಂದಿನ ಚಟುವಟಿಕೆಗಳಲ್ಲೂ ಪಾರದರ್ಶಿ ಮತ್ತು ನಿಷ್ಪಕ್ಷಪಾತದ ಡಿಜಿಟಲ್ ಮಾಧ್ಯಮದ ಪರಿಹಾರಗಳನ್ನು ಬಳಸಬೇಕಿದೆ.

5. ನಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದು ನಾವು ಇದುವರೆಗೆ ಕಂಡುಕೊಂಡಿರುವ ಸೂತ್ರಗಳನ್ನೆಲ್ಲಾ ನಾವು ಮತ್ತೊಮ್ಮೆ ತಲೆಕೆಳಕಾಗಿ ಮಾಡಿ ಪರಿಶೀಲಿಸಬೇಕಿದೆ. ಈ ಪರಿಹಾರಗಳೇ ಸಮಸ್ಯೆಗಳಾಗಿವೆ ಎಂಬ ಅರಿವಿನಿಂದ ಈ ಎಲ್ಲಾ ‘ವ್ಯವಸ್ಥೆ’ಯ ಸಾಧನಗಳನ್ನು ಪ್ರಶ್ನಿಸಬೇಕಿದೆ. ಸರ್ಕಾರಿ ಸೇವೆ, ಸರ್ಕಾರಿ ವಿಶ್ವವಿದ್ಯಾನಿಲಯಗಳು, ಸಬ್ಸಿಡಿ, ಆರ್ಥಿಕ ಕಾನೂನುಗಳು, ಕೊಲೆಜಿಯಮ್ ಆಯ್ಕೆ ಮಂಡಳಿ, ಚುನಾವಣೆಯಲ್ಲಿ ವೆಚ್ಚದ ಮೇಲಿನ ನಿಯಂತ್ರಣ ಮತ್ತಿತರ ಬಿಳಿಯಾನೆಗಳನ್ನು ಎಳೆತಂದು ಬಯಲಲ್ಲಿ ನಿಲ್ಲಿಸಬೇಕಿದೆ. ಈ ಹಲವಾರು ಸಮಸ್ಯೆಗಳು ತಮ್ಮ ‘ಎಕ್ಸ್‍ಪೈರಿ ಡೇಟ್’ ಕಳೆದುಕೊಂಡಿವೆ. ಬೇರೆ ಹುದ್ದೆಗಳಲ್ಲಿ ಜಾತಿ ಆಧಾರಿತ ಮೀಸಲಾತಿ ಅಗತ್ಯವಿದ್ದರೂ ಶಿಕ್ಷಕ ಹುದ್ದೆಗಳಲ್ಲಿ ಮೀಸಲಾತಿ ಬೇಕಿದೆಯೇ ಎಂದು ನಾವು ಕೇಳಿಕೊಳ್ಳಬೇಕಿದೆ. ಈ ಹಲವು ತಪ್ಪು ಪರಿಹಾರಗಳು ತಮ್ಮದೇ

‘ಸ್ವಹಿತಾಸಕ್ತಿ’ ಗುಂಪುಗಳಾಗಿ ಪರಿವರ್ತನೆಗೊಂಡು ಇಡೀ ಸಮಾಜವನ್ನೇ ಬೆದರಿಸುತ್ತಿವೆ ಎಂಬುದನ್ನೂ ಕಾಣಬೇಕಿದೆ. ಮದಕರಿನಾಯಕನ ಸಂತತಿಯವರು ‘ಪರಿಶಿಷ್ಟ ಪಂಗಡ’ದ ಮೀಸಲಾತಿಗೆ ಅರ್ಹರೇ ಎಂದೂ ಕೇಳಬೇಕಿದೆ.

6. ‘ಸಾರ್ವಜನಿಕ ಒಳಿತು’ ಎಂಬುದರ ಮರು ವ್ಯಾಖ್ಯಾನದ ಅಗತ್ಯವಿದೆ. ಈ ಕಲ್ಪನೆಯ ತಪ್ಪು ವ್ಯಾಖ್ಯಾನ ನಮಗೆ ಬೇಕಿಲ್ಲದ ಸರ್ಕಾರಿ ಸೇವೆಗಳು, ಸರ್ಕಾರಿ ನೌಕರರು, ಸರ್ಕಾರಿ ನಿಯಂತ್ರಣ ಮತ್ತು ಸರ್ಕಾರಿ ಭ್ರಷ್ಟಾಚಾರವೆಂಬ ಮಹಾರೋಗ ನೀಡಿದೆ. ಈ ರೋಗಕ್ಕೆ ಮದ್ದು ಅರೆಯುವ ವಿಷಯದಲ್ಲಿ ಮರು ಚರ್ಚೆಯ ತುರ್ತು ಅಗತ್ಯವಿದೆ.

7. ನಮ್ಮ ಸಮಸ್ಯೆಗಳು ವಿಶೇಷ ಮತ್ತು ಪ್ರತ್ಯೇಕವೆಂಬ ಭಾವನೆಯೂ ಹೋಗಬೇಕು. ನಾವು ಇಂದು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಪಂಚದ ಹಲವಾರು ರಾಷ್ಟ್ರಗಳು ಈಗಾಗಲೇ ಎದುರಿಸಿ ಗೆದ್ದಿವೆ ಎಂಬುದನ್ನೂ ನಾವು ಕಾಣಬೇಕಿದೆ. ಬೇರೆ ರಾಷ್ಟ್ರಗಳ ‘ಸಮಸ್ಯೆ ಪರಿಹಾರ ಪ್ರಕ್ರಿಯೆ’ಯನ್ನು ನಾವು ಗೌರವಿಸಿ ಎರವಲು ಪಡೆಯಬೇಕಿದೆ.

Leave a Reply

Your email address will not be published.