ಸಾಲು ಸಾಲು…

-ಮಾಲತಿ ಪಟ್ಟಣಶೆಟ್ಟಿ

 

 

 

 

 

1.

ಅಲ್ಲಿ ಬಾನ ತುಂಬಿವೆ

ಬೆಳ್ಳಕ್ಕಿಯ ರೆಕ್ಕೆಗಳು,

ವಿಸ್ಮಿತ ಕಣ್ಣು ಹಾರಿವೆ ಸಾಲು ಸಾಲು;

ಅಲ್ಲಿ ಕಾಡನು ತುಂಬಿದೆ

ಪಕ್ಷಿಗಾನದ ಹಾಡು,

ಆಸೆಗಳು ಹೊರಟಿವೆ ಅಲ್ಲಿ ಸಾಲು ಸಾಲು;

ಅಗೋ ಚೈತ್ರದ ಮಾಮರ

ಕಿಕ್ಕಿರಿದು ಮಾವು ತೂಗುತಿವೆ,

ನಾಲಗೆ ಚಪಲ ಹೊರಟಿವೆ ಸಾಲು ಸಾಲು;

ಎಲ್ಲಿವೆಯೋ ಮಲ್ಲಿಗೆ ಕಂಟಿ

ಇಲ್ಲಿ ಬಂದ ಪರಿಮಳಕೆ,

ಮುದಗೊಂಡ ಮನವು ಹೊರಟಿವೆ ಸಾಲು ಸಾಲು.

2.

ಇಲ್ಲಿ ಆಸ್ಪತ್ರೆಯ ಬಾಗಿಲಿಗೆ

ಕಾಯ್ದು ಸೊತ ಜೀವಗಳ

ನಿಟ್ಟುಸಿರು ಹೊರಟು ನಿಂತಿವೆ ಸಾಲು ಸಾಲು;

ಇಲ್ಲಿ ರಸ್ತೆ ರಸ್ತೆ ಅನಾಥ

ಶವ ಸಂಸ್ಕಾರಕ್ಕಾಗಿ

ಬೇಡುತಿವೆ ದೈನ್ಯ ಸಾಲು ಸಾಲು;

ಇಲ್ಲಿ ಅಂಗಡಿಯ ಬಾಗಿಲು

ದಾರಿಗಾಣದೆ ಮುಚ್ಚಿವೆ

ಖಿನ್ನತೆಯ ಚಿತ್ರಗಳು ಸಾಲು ಸಾಲು;

ಕಬ್ಬಿಣದ ಸರಳಿನ ಕಿಟಕಿಗೆ

ಜೋತ ಜೋಲು ಮುಖಗಳಲ್ಲಿ

ಶೂನ್ಯತೆಯ ಭಾವಗಳ ಸಾಲು ಸಾಲು.

3.

ಅಲ್ಲಿಯ ಪ್ರಕೃತಿ ಬಿಂಬ

ಇಲ್ಲಿ ಪ್ರತಿಫಲಿಸದೆ

ವಿಕೃತ ರೂಪ ತಳೆದಿವೆ ಸಾಲು ಸಾಲು

ನೆಮ್ಮದಿಯ ಬಾಳೆಮಗೆ ಮುಂದೆ ಆಗದಿರಲಿ ಸವಾಲು!

-ಮಾಲತಿ ಪಟ್ಟಣಶೆಟ್ಟಿ

Leave a Reply

Your email address will not be published.