ಸಾಳ್ವ ಕವಿಯ ರಸರತ್ನಾಕರ

ರಸೋತ್ಪತ್ತಿಯು ಪ್ರೇಕ್ಷಕನಲ್ಲೇ ಉಂಟಾದರೂ ನಟರ ನಟನೆಯು ಅದಕ್ಕೆ ವಿಭಾವ ಮತ್ತು ಅನುಭಾವಗಳಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಗೊಂದಲವಿಲ್ಲದಂತೆ ಹೇಳಿರುವುದು ಕವಿ ಸಾಳ್ವನ ವಿಶೇಷತೆಯಾಗಿದೆ.

ಗೇರುಸೊಪ್ಪೆಯ ಸಾಳ್ವ ಕವಿಯು (ಕ್ರಿ.ಶ.1550) ‘ಭಾರತ’, ‘ರಸರತ್ನಾಕರ’, ‘ವೈದ್ಯಸಾಂಗತ್ಯ’, ‘ಶಾರದಾವಿಲಾಸ’(?) ಎಂಬ ಕೃತಿಗಳನ್ನು ರಚಿಸಿದ್ದಾನೆ. ಇವನು ಜೈನಕವಿ. ಇವನ ತಂದೆ ಧರ್ಮಚಂದ್ರ; ಗುರು ದೇಶಿಗಣದ ಶ್ರುತಕೀರ್ತಿ. ಆಶ್ರಯದಾತ ಗೇರುಸೊಪ್ಪೆಯ (ನಗಿರ ರಾಜ್ಯದ) ಅರಸನಾದ ಸಾಳ್ವಮಲ್ಲ ದೇವರಾಯ.

‘ರಸರತ್ನಾಕರ’ವು ಒಂದು ಕನ್ನಡ ಅಲಂಕಾರ ಗ್ರಂಥ. ಇದರ ಆರಂಭದಲ್ಲಿ ಕವಿ ಸಾಳ್ವನು ಅಮೃತಾನಂದಿ, ರುದ್ರಭಟ್ಟ, ವಿದ್ಯಾನಾಥ, ಹೇಮಚಂದ್ರ ಈ ನಾಲ್ವರ ಮಾರ್ಗದಿಂದ ‘ಗ್ರಂಥಮಂ ವಿರಚಿಸಿದೆನೆಂ’, ‘ನಾಗವರ್ಮ ಕವಿಕಾಮಾದಿಗಳ ಮಾರ್ಗದಿಂ ರಸಭಾವಾಭಾಸಂಗಳಂ ವಿದ್ವತ್ಸಭೆಗಂ ಉಭಯ ಭಾಷೆಗಂ ಇಷ್ಟಮಪ್ಪಂತು ಕನ್ನಡಿಸಿದೆಂ’ ಎಂದು ಹೇಳಿಕೊಂಡಿದ್ದಾನೆ. ಈ ಗ್ರಂಥವು ಸೂತ್ರ ಮತ್ತು ವೃತ್ತಿಗಳ ರೂಪದಲ್ಲಿದೆ. ಪ್ರಾಚೀನ ಗ್ರಂಥಗಳಲ್ಲಿ ಬಂದ ಲಕ್ಷ್ಯಪದ್ಯಗಳ ಜೊತೆಗೆ ಕವಿಕಾಮನ ಶೃಂಗಾರ ರತ್ನಾಕರ, ನಾಗವರ್ಮನ ಕಾವ್ಯಾವಲೋಕನ, ಪಂಪ, ಪೊನ್ನ, ರನ್ನ, ನಾಗಚಂದ್ರ, ನೀಮಿಚಂದ್ರ, ರುದ್ರಭಟ್ಟ, ಅಗ್ಗಳ, ಜನ್ನ ಇವರೇ ಮೊದಲಾದ ಸುಪ್ರಸಿದ್ಧ ಕನ್ನಡ ಕವಿಗಳ ಕಾವ್ಯಗಳಿಂದ ಲಕ್ಷ್ಯಪದ್ಯಗಳನ್ನು ಆರಿಸಿಕೊಳ್ಳುವ ಮೂಲಕ ಸಮಗ್ರ ರಸ ಪ್ರಪಂಚವನ್ನು ವಿವರಿಸಿದ್ದಾನೆ.

ಸಾಳ್ವಕವಿಯು ಕಾವ್ಯದ ಆತ್ಮವಾದ ರಸದ ಮಹತ್ವವನ್ನು
ರಸಮಿಲ್ಲದ ಕಾವ್ಯಂ ನೀ
ರಸಮದ ಕೃತಿಗೆ ರಸಮೆ ಸಾರಂ ನೆಗಳ್ದೀ
ರಸರತ್ನಾಕರದೊಳ್ ನೆಂ
ರಸಭಾವಮನೆಂದ ಕವಿಯ ಕಬ್ಬಮೆ ಸಾರಂ ||
ಎಂದು ತಿಳಿಸಿಕೊಟ್ಟಿದ್ದಾನೆ.
ಭಾವಂ ವಿಭಾವಮೆಸೆವನು
ಭಾವಂ ಸಂಚಾರಿಭಾವಮೆಂಬಿವಂತಿವಂ
ದಾವಿಷ್ಕೃತಮಕ್ಕುಂ ರಸಮಾ
ವುದುಮೆಂದಗೆ ಭರತಶಾಸ್ತ್ರಕ್ರಮದಿಂ

ಭಾವ, ವಿಭಾವ, ಅನುಭಾವ ಸಂಚಾರಿ (ವ್ಯಭಿಚಾರಿ)ಭಾವ ಇವುಗಳಿಂದ ರಸೋತ್ಪತ್ತಿಯಾಗುತ್ತದೆ ಎಂದು ಹೇಳಿ ಗ್ರಂಥವನ್ನು ಆರಂಭಿಸಿದ್ದಾನೆ. ಚಿತ್ತವೃತ್ತಿಗಳು ಸ್ಥಾಯೀಭಾವವನ್ನು ಉದ್ಬೋಧಗೊಳಿಸುವುದರಿಂದ ಚಿತ್ತವೃತ್ತಿಗಳೇ ವಿಭಾವಗಳು. ಸ್ಥಾಯಿ, ವ್ಯಭಿಚಾರಿ ಎಂಬ ಲಕ್ಷಣದಿಂದ ಕೂಡಿದ ಚಿತ್ತವೃತ್ತಿಗಳನ್ನು ಸಾಮಾಜಿಕನು ಅನುಭವಿಸುವುದರಿಂದ ಅವೇ ಅನುಭಾವಗಳು. ಸಾಳ್ವನು ರಸಹುಟ್ಟುವ ಬಗೆ, ರಸಾನುಭವದ ವಿಧಗಳು, ಭಾವ ವಿಭಾವಾನುಭಾವಗಳ ಸ್ವರೂಪ ಪ್ರೇಕ್ಷಕರಲ್ಲಿ ರಸೋತ್ಪತ್ತಿಯಾಗುವ ಬಗೆಗಳನ್ನು ಕುರಿತು ಹೇಳಿದ್ದಾನೆ. ರತಿ, ಪರಿಹಾಸ, ಶೋಕ, ಉತ್ಸಾಹ, ಪ್ರಕೋಪ, ವಿಸ್ಮಯ, ಭಯ, ಜುಗುಪ್ಸೆ, ಶಮವೆಂಬ ಒಂಬತ್ತು ಸ್ಥಾಯಿ ಭಾವಗಳು; ಪುಲಕಾಶ್ರು ಸ್ವೇದ ಸ್ತಂಭ ಲಯ ಸ್ವರಭೇದ ಕಂಪ ವೈವಣ್ರ್ಯಂಗಳ್ ಎಂಬ ಎಂಟು ಸಾತ್ವಿಕಭಾವಗಳು; ಮತಿ, ಲಜ್ಜೆ, ವೇಗ, ಶಂಕೆ, ಮೊದಲಾದ ಮೂವತ್ತುಮೂರು ವ್ಯಭಿಚಾರಿಭಾವಗಳು. ಶೃಂಗಾರ, ಹಾಸ್ಯ, ಕರುಣ, ವೀರ, ರೌದ್ರ, ಅದ್ಭುತ, ಭಯಾನಕ, ಭೀಭತ್ಸ ಮತ್ತು ಶಾಂತರಸವೆಂಬ ನವರಸಗಳನ್ನು ಕುರಿತು ಹೇಳಿದ್ದಾನೆ.

‘ರಸರತ್ನಾಕರ’ದಲ್ಲಿ ನಾಲ್ಕು ಪ್ರಕರಣಗಳಿವೆ.

1. ಶೃಂಗಾರ ಪ್ರಪಂಚ ವಿವರಣಂ ಎಂಬ ಮೊದಲ ಪ್ರಕರಣದಲ್ಲಿ ಶೃಂಗಾರರಸದಲ್ಲಿ ಎರಡು ಬಗೆ 1.ಸಂಭೋಗ ಶೃಂಗಾರ, 2.ವಿಪ್ರಲಂಬ ಶೃಂಗಾರ. ಶೃಂಗಾರ ರಸದ ಆಲಂಬನ ಉದ್ದೀಪನ ವಿಭಾವಗಳು. ಶೃಂಗಾರ ರಸದ ಅನುಭವ, ಸಾತ್ವಿಕ ಭಾವ, ವ್ಯಭಿಚಾರಿ ಭಾವಗಳು, ಅಲ್ಲದೆ, ಶೃಂಗಾರ ರಸದ ಅವಸ್ಥೆಗಳನ್ನು ಹೇಳಿ ಲಕ್ಷ್ಯಪದಗಳೊಡನೆ ಉದಾಹರಿಸಿ,

ಪರಿಣಾಮವನಂತಂ ವ್ಯವ
ಹರಿಸುವುದವಂವಸ್ಥೆ ನೆಗಳ್ದುವನಂತಂ
ಪರಿಭಾವಿಸುವೊಡೆ ರಸವಿ
ಸ್ತರಮಂ ವಿವರಿಸುವೆನೆಂಬನಾವನುಮೊಳನೇ

ಎಂದು ಹೇಳಿದ್ದಾನೆ. ಅಂತಿಮವಾಗಿ ಈ ಎಲ್ಲಾ ಅವಸ್ಥೆಗಳು ಕೇವಲ ಸ್ತ್ರೀಯರಲ್ಲಿ ಮಾತ್ರ ಉಂಟಾಗುತ್ತವೆ ಎನ್ನುವುದು ಸರಿಯಲ್ಲ. ಉಚಿತ ವಿಧಿಯಿಂದ ಪುರುಷರಲ್ಲಿಯೂ ಉಂಟಾಗುತ್ತವೆ ಎಂದು ಹೇಳಿದ್ದಾನೆ.

2. ನವರಸಪ್ರಪಂಚಂ ಎಂಬ ಎರಡನೆಯ ಪ್ರಕರಣದಲ್ಲಿ ಹಾಸ್ಯರಸ, ಕರುಣರಸ, ವೀರರಸ, ರೌದ್ರರಸ, ಅದ್ಭುತರಸ, ಭಯಾನಕರಸ, ಬಿಭತ್ಸರಸ ಶಾಂತರಸ ಇವುಗಳ ಲಕ್ಷಣ, ಅನುಭವ, ಸಾತ್ವಿಕಭಾವಕಥನ ಮತ್ತು ಈ ರಸಗಳ ವಿವರಣೆ ಮತ್ತು ವಿಭೇದಗಳನ್ನು ಲಕ್ಷ್ಯಪದ್ಯಗಳೊಂದಿಗೆ ಉದಾಹರಿಸುತ್ತಾನೆ.

3. ನಾಯಕ ನಾಯಿಕಾ ವಿವರಣಂ ಎಂಬ ಮೂರನೆಯ ಪ್ರಕರಣದಲ್ಲಿ ನಾಯಕ ನಾಯಿಕೆಯರ ಲಕ್ಷಣ ಮತ್ತು ವಿವಿಧ ರಸಗಳ ಸಂದರ್ಭದಲ್ಲಿ ಅವರು ಅಭಿನಯಿಸುವ ಅನುಭಾವಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ. ಉದಾ: ಭಯಾನಕ ರಸಾಭಿನಯದಲ್ಲಿ ನಾವು ಕಾಣಬಹುದಾದ ಅನುಭಾವಗಳು ಹೀಗಿರುತ್ತವೆ

ಬೆರಲಂ ಕರ್ಚುವ ಪುತ್ತಂ
ಪರಿದೇವ ಕಯ್ದುವಿಕ್ಕಿ ಪೊಡಮಡುವ ಭಯ
ಜ್ವರದಿಂ ನಡುಗುವ ಭೀರುಗ
ಳರೆಬರ್ ಕನ್ನಡಿಸಿದರ್ ಭಯಾನಕ ರಸಮಂ

ಈ ಭಾಗಗಳ ಸ್ವಾರಸ್ಯಕ್ಕಾಗಿ ಈ ಗ್ರಂಥವನ್ನು ಪ್ರತಿಯೊಬ್ಬ ಸಾಹಿತ್ಯಾಸಕ್ತರೂ ಓದಲೇಬೇಕು.

4. ವ್ಯಭಿಚಾರಿ ವಿವರಣಂ ಎಂಬ ನಾಲ್ಕನೆಯ ಪ್ರಕರಣದಲ್ಲಿ ವ್ಯಭಿಚಾರಿಭಾವ, ಸಾತ್ವಿಕಭಾವ, ಇವುಗಳನ್ನು ವಿಭಾವಾನುಭಾವಗಳೊಡನೆ ಉದಾಹರಣ ಸಮೇತವಾಗಿ ವಿವರಿಸಿದ್ದಾನೆ.

ವಿಶೇಷತೆಗಳು:

1. ನಾಟಕಾಭಿನಯ ನಡೆಯುತ್ತಿರುವಾಗ ಪ್ರೇಕ್ಷಕರ ಗಮನಕ್ಕೆ ಬರುವುದು ನಟರ ಚಿತ್ತವೃತ್ತಿ ಅಥವಾ ‘ಭಾವ’. ಈ ಸ್ಥಾಯಿಭಾವವೇ ರಸೋತ್ಪತ್ತಿಗೆ ಮೂಲ. ಆದರೆ ಆ ಸ್ಥಾಯಿಭಾವ ಗಮನಕ್ಕೆ ಬರುವುದು ನಟರ ಮುಖದಲ್ಲಿ ಕಾಣುವ ‘ಅನುಭಾವಗಳ’ ಮೂಲಕವೇ. ಆದ್ದರಿಂದ ಪ್ರೇಕ್ಷಕರು ನಟರ ‘ವದನಗಳು ಪ್ರಕಟಿಸುವ’ ಅನುಭಾವಗಳ ಮೂಲಕ ಸ್ಥಾಯಿಭಾವವನ್ನು ತಿಳಿದು ರಸವನ್ನು ಸವಿಯುತ್ತಾರೆ. ‘ಭಾವ’ ಅಥವಾ ‘ಸ್ಥಾಯಿಭಾವ’ವೆಂದರೆ ಚಿತ್ತವೃತ್ತಿ ಮಾತ್ರ. ಸ್ಥಾಯಿಭಾವವು ರಸ ಪುಷ್ಟಿಯನ್ನು ಪಡೆಯುವಂತೆ ಮಾಡಿಕೊಡುವ ಕಾರಣಸಾಮಗ್ರಿಯೇ ‘ವಿಭಾವ’. ರಸವನ್ನು ರಸಜ್ಞರು ಯಾವುದರ ಮೂಲಕ ಮಾತ್ರ ಗ್ರಹಿಸಿ ಸವಿಯಲು ಸಾಧ್ಯವೋ ಅದೇ ಅನುಭಾವ ಅಥವಾ ಸ್ಥಾಯಿಭಾವದ ಕಾರ್ಯ. ಸಾಳ್ವನು ವಿವರಿಸುತ್ತಿರುವುದು ನಟರ ಅನುಭಾವಗಳನ್ನೇ ಹೊರತು, ರಸಿಕನಲ್ಲಿ ಉಂಟಾಗುವ ರೋಮಾಂಚನ, ಕಣ್ಣೀರು, ಮುಖವಿಕಾಸಗಳನ್ನಲ್ಲ.

ಹೀಗೆ ರಸೋತ್ಪತ್ತಿಯು ಪ್ರೇಕ್ಷಕನಲ್ಲೇ ಉಂಟಾದರೂ ನಟರ ನಟನೆಯು ಅದಕ್ಕೆ ವಿಭಾವ ಮತ್ತು ಅನುಭಾವಗಳಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಗೊಂದಲವಿಲ್ಲದಂತೆ ಹೇಳಿರುವುದು ಕವಿ ಸಾಳ್ವನ ವಿಶೇಷತೆಯಾಗಿದೆ.

2. ಶಾಂತರಸದಲ್ಲೂ ಜುಗುಪ್ಸೆ ಇರುವುದರಿಂದ ಅದನ್ನು ಭೀಭತ್ಸದಲ್ಲೇ ಸೇರಿಸಬಹುದೆ? ಎಂಬ ಪ್ರಶ್ನೆಗೆ ಶಾಂತರಸಕ್ಕೆ ಜುಗುಪ್ಸೆ ಸಂಚಾರೀ ಭಾವವೇ ಹೊರತು ಸ್ಥಾಯಿಯಲ್ಲ. “ಶಾಂತರಸ ಪರಿಪೂರ್ಣತೆಯೊಳದು ನಿರ್ಮೂಲ ಮಪ್ಪುದರಿಂ” ಶಾಂತರಸದ ಕೊನೆಯಲ್ಲಿ ಜುಗುಪ್ಸೆ ನಾಶವಾಗಿ ಶಾಂತಿಮಾತ್ರವೇ ಉಳಿಯುವುದರಿಂದ ಶಾಂತರಸವೇ ಬೇರೆ, ಭೀಭತ್ಸವೇ ಬೇರೆ ಎಂದು ಮನವರಿಕೆಯಾಗುವಂತೆ ನಿರ್ಣಯಿಸಿದ್ದಾನೆ.

3. ಶಾಂತರಸವನ್ನು ಧರ್ಮವೀರವೆಂದು ವೀರರಸದಲ್ಲೇ ಸೇರಿಸಿಬಿಡಬಹುದಲ್ಲವೆ? ಎಂಬ ಸಂದೇಹಕ್ಕೆ ಹೀಗೆ ಪರಿಹಾರ ಕೊಟ್ಟಿದ್ದಾನೆ.

“ವೀರರಸಮಭಿಮಾನ ರೂಪತ್ವಂ, ಶಾಂತರಸಂ ಅಹಂಕಾರೋಪಶಮೈಕರೂಪತ್ವಂ. ಅದರಿಂ ವೀರಶಾಂತಕ್ಕೆ ಏಕತ್ವಪರಿಕಲ್ಪನಮಾಗದು. ಅಂತಾದೊಡೆ ವೀರ ರೌದ್ರಕ್ಕಂ ಏಮೇಕತ್ವಮಪ್ಪುದರಿಂ ಧರ್ಮವೀರಾದಿಗಳ ಚಿತ್ತವೃತ್ತಿ ವಿಶೇಷಂಗಳವು ಸರ್ವಾಹಂಕಾರಂಗಳ್, ಅಹಂಕಾರ ರಹಿತಂ ಶಾಂತರಸಂ,” (ವೀರರಸದಲ್ಲಿ, ರೌದ್ರ ರಸದಲ್ಲಿ ವ್ಯಕ್ತಿಯ ಅಹಂಕಾರವೇ ಮುಖ್ಯವಾಗಿರುತ್ತದೆ. ಆದರೆ ಅಹಂಕಾರ ಸಂಪೂರ್ಣ ತಣ್ಣಗಾಗುವುದೇ ಶಾಂತಸ್ಥಿತಿ. ಆದ್ದರಿಂದ ಶಾಂತರಸವನ್ನು ಧರ್ಮವೀರರಸದಲ್ಲೇ ಆಗಲಿ, ಧರ್ಮರೌದ್ರ ರಸದಲ್ಲೇ ಆಗಲಿ ಸೇರಿಸಲು ಬರುವುದಿಲ್ಲ. ಅವುಗಳನ್ನು ಬೇರೆ ಬೇರೆಯಾಗಿಯೇ ಅನುಭವಿಸಬೇಕು).

“ಈ ಪಾಂಗಿಂ ಸ್ಥಾಪಿಸಿದೊಡೇನುಂ ವಿರೋಧಮಾಗದು.” ಎಂದು ರಸಭೇದಗಳನ್ನು ಮನವರಿಕೆ ಮಾಡಿಸಿದ ಕೀರ್ತಿ ಸಾಳ್ವನಿಗೆ ಸಲ್ಲುತ್ತದೆ.

ಶೃಂಗಾರದಿಂದ ಹಾಸ್ಯ, ರೌದ್ರದಿಂದ ಕರುಣ, ವೀರದಿಂದ ಅದ್ಭುತ ಮತ್ತು ಬೀಭತ್ಸದಿಂದ ಭಯಾನರಸಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಈ ಜೋಡಿ ರಸಗಳು ಪರಸ್ಪರ ಪೂರಕವಾಗಿವೆ ಆದರೆ

ಬೆರೆಸದವೂಲಿರ್ಕೆಶೃಂಗಾ
ರರಸಂ ಬೀಭತ್ಸದೊಳ್ ಭಯಂ ರೌದ್ರದೊಳಂ
ಕರುಣಂ ರಸದೊಳ್ ವೀರಂ
ಪರಿಹಾಸದೊಳದ್ಭುತಂ ವಿರೋಧವಿದೆಂದುಂ

ಈ ಪದ್ಯದಲ್ಲಿ ಹೇಳಿದ ಜೋಡಿ ರಸಗಳು ಪರಸ್ಪರ ವಿರುದ್ಧವಾಗಿವೆ. ಒಂದನೇ ರಸದ ಸ್ಥಾಯಿಭಾವವನ್ನು ಮತ್ತೊಂದು ರಸವು ನಾಶಗೊಳಿಸಿಬಿಡುತ್ತದೆ. ಆದ್ದರಿಂದ ಇವುಗಳನ್ನು ಬೆರೆಸಬಾರದು ಎಂಬುದು ಸಾಳ್ವನ ಕಳಕಳಿ.

“ಶಾಸ್ತ್ರ ಸಂಪ್ರದಾಯವನ್ನು ಅನುಸರಿಸಿ ರಸವಿಷಯದಲ್ಲಿ ಅನೇಕ ವಿವರಗಳನ್ನು ಸಂಗ್ರಹಿಸಿ, ಸರಳವಾಗಿ ನಿರೂಪಿಸಿ ಸಾಳ್ವನು ಶ್ಲಾಘನೆಗೆ ಪತ್ರನಾಗಿದ್ದಾನೆ. ಪಂಪ, ರನ್ನ, ನೇಮಿಚಂದ್ರ, ನಾಗಚಂದ್ರ ಮುಂತಾದ ಪ್ರಸಿದ್ಧ ಕನ್ನಡ ಕವಿಗಳ ಲಕ್ಷ್ಯಗಳನ್ನು ಉದಾಹರಿಸಿ ಲಕ್ಷಣ ಸಮನ್ವಯ ಮಾಡಿರುವುದು ಸಾಳ್ವನ ವೈಶಿಷ್ಟ್ಯ” ಎಂದು ಡಾ.ಕೆ.ಕೃಷ್ಣಮೂರ್ತಿ ಅವರ ಅಭಿಪ್ರಾಯವು ಕವಿಸಾಳ್ವನ ಶೃಂಗಾರರತ್ನಾಕರದ ಕೀರ್ತಿಯ ಹೆಗ್ಗುರುತಾಗಿದೆ.

ಆಧಾರ:
1. ಎಚ್.ಕೆ. ನರಸಿಂಹೇಗೌಡ, ಪೀಠಿಕೆ, ರಸರತ್ನಾಕರಂ, 1972, ಪುಟ 10-31

2. ಡಾ.ಕೆ.ಕೃಷ್ಣಮೂರ್ತಿ, ಕನ್ನಡದಲ್ಲಿ ಕಾವ್ಯತತ್ತ್ವ, 1964, ಪುಟ 61-64

*ಲೇಖಕರು ಮೂಲತಃ ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ., ಹಂಪಿ ಕನ್ನಡ ವಿ.ವಿಯಿಂದ ಪಿಎಚ್.ಡಿ. ಪಡೆದಿದ್ದಾರೆ. 27 ವರ್ಷಗಳಿಂದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಬೋಧಿಸಿ ಈಗ ತೆಕ್ಕಲಕೋಟೆಯಲ್ಲಿ ಸೇವೆಯನ್ನು ಮುಂದುವರಿಸಿದ್ದಾರೆ. ‘ವಾದಿರಾಜರ ಕೃತಿಗಳಲ್ಲಿ ಕೌಟುಂಬಿಕ ಸಾಮರಸ್ಯ’, ‘ಈಸಬೇಕು ಇದ್ದು ಜಯಿಸಬೇಕು’ ಕೃತಿಗಳು ಪ್ರಕಟವಾಗಿವೆ.

Leave a Reply

Your email address will not be published.