ಸಾವು ಬದುಕಿನ ನಡುವೆ ವಲಸೆ ಕಾರ್ಮಿಕರ ಸಂಘರ್ಷ

ಈಗಾಗಲೇ ಕನ್ನಡ ಸುದ್ದಿಮನೆಗಳಲ್ಲಿ ‘ವಲಸೆ ಬಾಂಬ್’ ಉತ್ಪಾದನೆ ಮಾಡಿಯಾಗಿದೆ! ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲದೆ ಕೊರೋನಾ ಪೀಡಿತ ಸಮುದಾಯದೊಳಗೆ ಸಂಚರಿಸುವ ವಲಸೆ ಕಾರ್ಮಿಕರು ರೋಗವಾಹಕರಾದರೆ ಅಚ್ಚರಿಪಡಬೇಕಿಲ್ಲ.

ಕೊರೋನಾ ವೈರಾಣು ಭಾರತದ ಸಮಸ್ತ ಜನತೆಯನ್ನು ಬಾಧಿಸುತ್ತಿದೆ. 65 ದಿನಗಳ ಲಾಕ್‌ಡೌನ್ ನಂತರವೂ ಭಾರತ ಈ ವೈರಾಣುವಿನ ದಾಳಿಯಿಂದ ತತ್ತರಿಸುತ್ತಲೇ ಇದೆ. ಕೊರೋನಾ ಸದ್ಯಕ್ಕೆ ಹೋಗುವುದಿಲ್ಲ ಹಾಗಾಗಿಯೇ ಪ್ರಧಾನಿ ಮೋದಿ ಕೊರೋನಾದೊಂದಿಗೆ ಬದುಕಲು ಕಲಿಯುವಂತೆ ಕರೆ ನೀಡಿದ್ದಾರೆ. ಇದು ಸಮಾಜದ ಹಿತವಲಯದಲ್ಲಿರುವ ಮಧ್ಯಮವರ್ಗಗಳಿಗೆ, ಶ್ರೀಮಂತರಿಗೆ ಮತ್ತು ನಗರ-ಪಟ್ಟಣಗಳಲ್ಲಿ ನೆಲೆ ಕಂಡುಕೊಂಡಿರುವ ಜನಸಮುದಾಯಕ್ಕೆ ಆಪ್ಯಾಯಮಾನವಾಗಿ ಕಾಣುತ್ತದೆ. ಮಾನವ ಸಮಾಜ ಎಂತಹುದೇ ವಿಪತ್ತು ಎದುರಾದರೂ ಅದರೊಡನೆ ಬದುಕಲು ಕಲಿಯುತ್ತದೆ, ಬದುಕುತ್ತದೆ.

ಆದರೆ ಕಳೆದ ಒಂದು ತಿಂಗಳ ಅವಧಿಯಲ್ಲಿ ದೇಶದ ವಿದ್ಯಮಾನಗಳತ್ತ ಕಣ್ಣಾಡಿಸಿದಾಗ ಬದುಕಲು ಕಲಿಯುವುದೆಂದರೆ ಏನು ಎನ್ನುವ ಪ್ರಶ್ನೆ ಉದ್ಭವಿಸಿದರೆ ಅಚ್ಚರಿಯೇನಿಲ್ಲ. ಏಕೆಂದರೆ ಕೊರೋನಾ ಈ ದೇಶದ ಕೋಟ್ಯಂತರ ಶ್ರಮಜೀವಿಗಳನ್ನು ನಡುಬೀದಿಯಲ್ಲಿ ತಂದು ನಿಲ್ಲಿಸಿದೆ. ಈ ಪರಿಸ್ಥಿತಿಗೆ ಕೊರೋನಾ ಕಾರಣವಲ್ಲ. ಕೊರೋನಾದಿಂದ ಉದ್ಭವಿಸಿರುವ ಪರಿಸ್ಥಿತಿ, ಸಮಾಜೋ ಆರ್ಥಿಕ ಸನ್ನಿವೇಶಗಳು ಕಾರಣ. ಮಾರ್ಚ್ 24ರಂದು ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿದ ಕೇಂದ್ರ ಸರ್ಕಾರಕ್ಕೆ ಭಾರತದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಎಷ್ಟಿದೆ, ರಾಜ್ಯಾವಾರು ಅಂಕಿಅಂಶಗಳೇನು, ಈ ಶ್ರಮಜೀವಿಗಳ ಜೀವನೋಪಾಯದ ಮಾರ್ಗಗಳೇನು ಎನ್ನುವುದರ ಮಾಹಿತಿಯೇ ಇರಲಿಲ್ಲ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ.

ಕೇಂದ್ರ ಸರ್ಕಾರ ವಿಧಿಸಿದ ಲಾಕ್‌ಡೌನ್ ಪರಿಣಾಮ ದೇಶದಲ್ಲಿ 12 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇವರ ಪೈಕಿ ನಾಲ್ಕು ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಶೇ 78ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಕೂಲಿ ಪಾವತಿಯಾಗಿಲ್ಲ ಎಂದು ಸಮೀಕ್ಷೆಯೊಂದರಲ್ಲಿ ಹೇಳಲಾಗಿದೆ.  Stranded Workers Action Network (SWAN) ಸಂಸ್ಥೆ ನಡೆಸಿದ ಸಮೀಕ್ಷೆಯೊಂದರ ಅನುಸಾರ ಮೊದಲ 21 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಶೇ.96ರಷ್ಟು ಕಾರ್ಮಿಕರಿಗೆ ಸರ್ಕಾರದಿಂದ ಪಡಿತರ ದೊರೆತಿರಲಿಲ್ಲ. ಶೇ.70ರಷ್ಟು ಜನರಿಗೆ ಸಿದ್ಧ ಆಹಾರ ದೊರೆತಿರಲಿಲ್ಲ. ಶೇ.74ರಷ್ಟು ಕಾರ್ಮಿಕರ ಬಳಿ ತಮ್ಮ ಅರ್ಧದಿನದ ಕೂಲಿ ಮಾತ್ರ ಉಳಿದಿತ್ತು. ಶೇ 89ರಷ್ಟು ಜನರಿಗೆ ಮಾಲೀಕರು ಕೂಲಿ ನೀಡಿರಲಿಲ್ಲ. ಶೇ 50ರಷ್ಟು ಕಾರ್ಮಿಕರ ಬಳಿ ಒಂದು ದಿನಕ್ಕಾಗುವ ಆಹಾರ ಮಾತ್ರ ಉಳಿದಿತ್ತು. ಶೇ 64ರಷ್ಟು ಕಾರ್ಮಿಕರ ಬಳಿ ನೂರು ರೂಗಳಷ್ಟೂ ಹಣ ಇರಲಿಲ್ಲ. ಈ ಪರಿಸ್ಥಿತಿಯಲ್ಲೇ ಒಂದು ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ಸ್ವಂತ ಗ್ರಾಮಗಳಿಗೆ ತೆರಳಲು ಸಜ್ಜಾಗಿ ನೋಂದಣಿ ಮಾಡಿಸಿದ್ದರು.

ದುರಂತ ಎಂದರೆ ಮೊದಲನೆ ಲಾಕ್‌ಡೌನ್ ಮಾರ್ಗದರ್ಶಿ ಸೂತ್ರಗಳಲ್ಲಿ ವಲಸೆ ಕಾರ್ಮಿಕರ ಬಗ್ಗೆ ಉಲ್ಲೇಖವೇ ಇರಲಿಲ್ಲ. ಲಕ್ಷಾಂತರ ಜನರು ತಮ್ಮ ಊರುಗಳಿಗೆ ನಡೆದುಕೊಂಡೇ ಹೋಗಲು ರಸ್ತೆಗಿಳಿದಾಗಲೇ ಸರ್ಕಾರಕ್ಕೆ ಜ್ಞಾನೋದಯವಾಗಿತ್ತು. ಈ ಸಂದರ್ಭದಲ್ಲಿ ದೆಹಲಿ, ನೊಯಿಡಾ ಮುಂತಾದೆಡೆ ಸಾವಿರಾರು ವಲಸೆ ಕಾರ್ಮಿಕರನ್ನು ಬಸ್ಸುಗಳಲ್ಲಿ ತುಂಬಿ ರವಾನಿಸಲಾಗಿತ್ತು. ಆದರೆ ಸರ್ಕಾರದ ಸಾರಿಗೆ ವ್ಯವಸ್ಥೆಗೆ ಎದುರುನೋಡದ ಲಕ್ಷಾಂತರ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ಸಾವಿರಾರು ಕಿಲೋಮೀಟರ್ ಕ್ರಮಿಸಲು ಸಿದ್ಧವಾಗಿದ್ದರು. ಏತನ್ಮಧ್ಯೆ ಉತ್ತರಖಂಡದಲ್ಲಿ ಸಿಲುಕಿದ್ದ ಯಾತ್ರಾರ್ಥಿಗಳಿಗೆ, ವಾರಣಾಸಿಯಲ್ಲಿ ಸಿಲುಕಿದ್ದ ಆಂಧ್ರಪ್ರದೇಶದ ಪ್ರವಾಸಿಗರಿಗೆ, ನಾಂದೇಡ್‌ನಲ್ಲಿದ್ದ ಪಂಜಾಬ್‌ನ ಯಾತ್ರಿಗಳಿಗೆ, ರಾಜಸ್ಥಾನದ ಕೋಟಾದಲ್ಲಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ವಿಶೇಷ ಡಿಲಕ್ಸ್ ಬಸ್ಸುಗಳ ವ್ಯವಸ್ಥೆ ಮಾಡಿದ್ದ ಸರ್ಕಾರಗಳು ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡುವ ಚಿಂತನೆಯನ್ನೂ ಮಾಡದಿದ್ದುದನ್ನು ಕಂಡಿದ್ದೇವೆ.

ಪಂಜಾಬಿನಿಂದ ಉತ್ತರಪ್ರದೇಶದ ಝಾನ್ಸಿಗೆ, ಮಹಾರಾಷ್ಟçದಿಂದ ಬಿಹಾರಕ್ಕೆ, ದೆಹಲಿ ನೊಯಿಡಾ ಬಳಿ ಇರುವ ಯಮುನಾನಗರದಿಂದ ಗುಜರಾತ್, ರಾಜಸ್ಥಾನ, ಉತ್ತರಪ್ರದೇಶಕ್ಕೆ ನೂರಾರು, ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಹೊರಟಿದ್ದ ಸಾವಿರಾರು ವಲಸೆ ಕಾರ್ಮಿಕರು ದೇಶದ ಮಾಧ್ಯಮಗಳ ಕಣ್ಣಿಗೆ ಬಿದ್ದ ನಂತರವೇ ಸರ್ಕಾರ ಎಚ್ಚೆತ್ತುಕೊಂಡಿತ್ತು. ಎರಡನೆಯ ಲಾಕ್‌ಡೌನ್ ಅವಧಿಯ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಸಿದ್ಧತೆ ನಡೆಸಿತ್ತು. ಆದರೆ ಕೆಲವೇ ದಿನಗಳಲ್ಲಿ ಈ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸಲಾಗಿತ್ತು.

ವಲಸೆ ಕಾರ್ಮಿಕರಿಗಾಗಿಯೇ ನಿಯೋಜಿಸಲಾಗಿದ್ದ ರೈಲುಗಳಲ್ಲಿ ಸಾಮಾನ್ಯ ಪ್ರಯಾಣಿಕರಂತೆಯೇ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಾದ ವಲಸೆ ಕಾರ್ಮಿಕರು ತಮ್ಮ ಬಳಿ ಇದ್ದು ಉಳಿತಾಯವನ್ನು ಖರ್ಚು ಮಾಡಬೇಕಾಗಿದ್ದೇ ಅಲ್ಲದೆ ಸಾವಿರಾರು ಕಾರ್ಮಿಕರು ಸಾಲ ಮಾಡಬೇಕಾಗಿತ್ತು. ಕಾರ್ಮಿಕರ ಪ್ರಯಾಣ ವೆಚ್ಚವನ್ನು ಭರಿಸುವ ಹೊಣೆ ರಾಜ್ಯಸರ್ಕಾರಗಳ ಮೇಲೆ ಹೇರಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಭಾರತೀಯ ರೈಲ್ವೆ ಶ್ರಮಿಕ್ ಎಕ್ಸ್ಪ್ರೆಸ್ ರೈಲುಗಳನ್ನು ಎಲ್ಲ ರಾಜ್ಯಗಳಿಂದಲೂ ಒದಗಿಸಿದ್ದು, ಪ್ರತ್ಯೇಕವಾಗಿ ವಲಸೆ ಕಾರ್ಮಿಕರಿಗೆಂದೇ ನಿಯೋಜಿಸಲಾಗಿದೆ. ಆದರೆ ಎಲ್ಲ ಕಾರ್ಮಿಕರೂ ಆನ್‌ಲೈನ್ ನೋಂದಣಿ ಮಾಡಿಸುವ ನಿಯಮ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳಲು ಬೋಗಿಗಳಲ್ಲಿ ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಸಾಗಿಸುವ ನಿಯಮದಿಂದ ವಲಸೆ ಕಾರ್ಮಿಕರು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಕಾರ್ಮಿಕ ಅವಧೇಶನ ವಿಷಾದಗಾಥೆ

ನನ್ನ ಮನೆಯ ಪೈಂಟ್ ಮಾಡಿಸುವ ಸಮಯದಲ್ಲಿ ಅವಧೇಶ ಎಂಬ ಸುಮಾರು 25 ವರ್ಷದ ಪೈಂಟರನ ಪರಿಚಯವಾಯಿತು. ಆತ ಸದ್ಯ ತಾನಿರುವ ಮನೆಯು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇದ್ದು ಅಲ್ಲಿಂದ ಓಡಾಡಲು ದೂರವಾಗುವುದೆಂದು ನನ್ನ ಮನೆಯ ಹತ್ತಿರವೇ ಒಂದು ರೂಮ್ ಕೊಡಿಸಲು ಕೇಳಿದ. ಆಗ ನನ್ನ ಮನೆಯ ಪಕ್ಕದ ಕಟ್ಟಡದಲ್ಲಿ ಒಂದು ರೂಮನ್ನು ಬಾಡಿಗೆಗೆ ಕೊಡಿಸಿದೆ.

ನನ್ನ ಮನೆಯ ಪೈಂಟ್ ಮಾಡುವಾಗ ಅವನ ಕೆಲಸದ ಬಗೆಗಿನ ಶ್ರದ್ಧೆ ಮತ್ತು ಸಹನೆ ಗಮನ ಸೆಳೆಯುವಂತಿತ್ತು. ಯಾವುದೇ ಬೇಸರ ಮಾಡಿಕೊಳ್ಳದೇ ನಾನು ಹೇಳಿದ ಎಲ್ಲಾ ಕೆಲಸಗಳನ್ನು ನಗುನಗುತ್ತಾ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ. ತದನಂತರ ನಾನು ಕೊಡಿಸಿದ ರೂಮ್‌ನಲ್ಲೇ ಬಾಡಿಗೆಗೆ ಇದ್ದುಕೊಂಡು ತನ್ನ ಕಾಯಕ ಮುಂದುವರಿಸಿದ.

ಲಾಕ್‌ಡೌನ್ ಸಂದರ್ಭದಲ್ಲಿ ಒಂದು ದಿನ ಪೈಂಟರ್ ಅವಧೇಶ ಪೋನ್ ಮಾಡಿ ತಾನಿರುವ ಕಟ್ಟಡದ ಅಂಚೆ ವಿಳಾಸ ಕೇಳಿದ. ಊರಿಗೆ ಮರಳುವ ಸಲುವಾಗಿ ತನ್ನ ಊರಿನ ಪಂಚಾಯಿಯಲ್ಲಿ ನೋಂದಣಿ ಮಾಡಿಸಲು ಅವನಿಗೆ ಈ ಮಾಹಿತಿ ಬೇಕಿತ್ತು. ‘ಏಕೆ ಊರಿಗೆ ಹೋಗುತ್ತಿಯಾ, ಇಲ್ಲೇ ಇರು’ ಎಂದು ಸಲಹೆ ನೀಡಿದೆ. ಆಗ ಅವನು, ‘ಊರಿಂದ ಬಂದು 14 ತಿಂಗಳು ಕಳೆದಿವೆ, ಮದುವೆ ಮಾಡಿಕೊಂಡು ಮೂರು ತಿಂಗಳಲ್ಲೇ ಕೆಲಸಕ್ಕೆಂದು ಬೆಂಗಳೂರಿಗೆ ಬಂದೆ. 3 ತಿಂಗಳ ಹಿಂದೆ ನನಗೆ ಹೆಣ್ಣು ಮಗು ಹುಟ್ಟಿದೆ. ಕೆಲಸದ ಒತ್ತಡದಲ್ಲಿ ಊರಿಗೆ ಹೋಗಲು ಆಗಿರಲಿಲ್ಲ. ಅಷ್ಟರಲ್ಲಿಯೇ ಲಾಕ್‌ಡೌನ್ ಆಯಿತು’ ಎಂದು ತನ್ನ ಕತೆ ಬಿಚ್ಚಿಟ್ಟ.

ಮಗನನ್ನು ನೋಡುವ ಅವನ ಬಯಕೆ ನನಗೆ ಅರ್ಥವಾಯಿತು. ಅವನಿಗೆ ವಿಳಾಸ ನೀಡಿದೆ. ಒಂದು ವಾರದ ನಂತರ ಪುನಃ ಫೋನ್ ಮಾಡಿ ನಮ್ಮ ಬಡಾವಣೆಯು ಯಾವ ಪೋಲಿಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ ಮತ್ತು ಅದರ ವಿಳಾಸವನ್ನು ಕೇಳಿ ತಿಳಿದುಕೊಂಡ. 2-3 ದಿನಗಳ ನಂತರ ನಾನು ವಿಷಯ ತಿಳಿಯಲು ಕರೆ ಮಾಡಿದೆ. ಆಗ ಅವನು ಮಾದನಾಯಕನಹಳ್ಳಿ ಪೋಲಿಸ್ ಠಾಣೆಯ ಮುಂದೆ ಊರಿಗೆ ಹೋಗಲು ನೋಂದಾಯಿಸಿಕೊಳ್ಳಲು ಸರತಿಯ ಸಾಲಿನಲ್ಲಿ ನಿಂತಿದ್ದ. ಅಲ್ಲಿ ನೋಂದಾಯಿಸಲು 50 ರೂಪಾಯಿ ವಸೂಲಿ ಮಾಡುವುದನ್ನು ತಿಳಿಸಿದ.

ಇದಾದ ಒಂದು ವಾರದ ನಂತರ ನನಗೆ ಕರೆ ಮಾಡಿ, ‘ಪೊಲೀಸ್ ಠಾಣೆಯಿಂದ ನನಗೆ ಪ್ರಯಾಣದ ಮಾಹಿತಿ ಇನ್ನು ದೊರೆತಿಲ್ಲ’ ಎಂದು ಕಷ್ಟ ತೋಡಿಕೊಂಡ. ನನ್ನ ಪರಿಚಯದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರಿಗೆ ಫೋನ್ ಮಾಡಿ ವಿಚಾರಿಸಿದಾಗ, ಅವನನ್ನು ತಕ್ಷಣ ಮಾದಾವರ ಹತ್ತಿರವಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರಿಗೆ ಬರಹೇಳಿದರು. ಅದರಂತೆ ಅವನನ್ನು ಕಳಿಸಿಕೊಟ್ಟೆ.

ಇದಾದ ಎರಡುಮೂರು ದಿನಗಳ ನಂತರ ಅವನ ಪಯಣ ವಿಚಾರಿಸಲು ಕರೆ ಮಾಡಿದೆ. ಆಗ ಅವನು ಇನ್ನೂ ಎಕ್ಸಿಬಿಷನ್ ಸೆಂಟರ್‌ನಲ್ಲೆ ಇರುವ ವಿಷಯ ಕೇಳಿ ದುಃಖವಾಯಿತು. ಅವನು ಪ್ರಯಾಣಿಸುವ ಸರದಿಯು ಇನ್ನು ಎರಡು ದಿನಗಳ ನಂತರ ಇರುವುದಾಗಿಯು ಮತ್ತು ಪ್ರಯಾಣಕ್ಕೆ ರೂ.1,010 ತೆಗೆದುಕೊಂಡರೆಂದು ತಿಳಿಸಿದ. 4 ದಿನಗಳ ನಂತರ ಅವಧೇಶ ಕರೆ ಮಾಡಿ ಸತತ 3 ದಿನಗಳ ಪ್ರಯಾಣದ ನಂತರ ಉತ್ತರ ಪ್ರದೇಶದ ತನ್ನ ತವರೂರು ಸೇರಿರುವುದಾಗಿ ಸಂತೋಷದಿಂದ ತಿಳಿಸಿದ. ಅವನ ಪ್ರಯಾಣದ ವಿವರ ಕೇಳಿದಾಗ, ಮಾರ್ಗ ಮಧ್ಯೆ ನಾಗಪುರದಲ್ಲಿ ಮಾತ್ರ ಎಲ್ಲಾ ಪ್ರಯಾಣಿಕರಿಗೂ ಊಟ ಕೊಟ್ಟರೆಂದೂ, ಬಾಕಿ 2 ದಿನಗಳ ಪ್ರಯಾಣದಲ್ಲಿ ಹಸಿವಿನಿಂದ ತತ್ತರಿಸಿ ಬರೀ ನೀರು ಕುಡಿದುಕೊಂಡು ಪ್ರಯಾಣಿಸಿದೆವು ಎಂದು ವಿಷಾದಿಸಿದ.

-ನಿಂಬಲಗುಂದಿ ವಿರೂಪಾಕ್ಷ

ರಾಜ್ಯ ಸರ್ಕಾರ ಬಹಳ ಉತ್ಸಾಹದಿಂದ ರಾಜ್ಯ ಸಾರಿಗೆ ಬಸ್ಸುಗಳನ್ನು ನಿಯೋಜಿಸಿ ರಾಜ್ಯದ ಇತರ ಜಿಲ್ಲೆಗಳ ವಲಸೆ ಕಾರ್ಮಿಕರನ್ನು ಅವರ ಸ್ವಗ್ರಾಮಗಳಿಗೆ ಕಳುಹಿಸಲು ಸಿದ್ಧತೆ ನಡೆಸಿದೆ. ಆದರೆ ಬಸ್ ಟಿಕೆಟ್ ಹಣವನ್ನು ಪಾವತಿಸುವ ಹೊಣೆಯನ್ನು ಕಾರ್ಮಿಕರ ಮೇಲೆ ಹೇರಿರುವುದು ಅಮಾನವೀಯ. ಸಾರಿಗೆ ನಿಗಮದ ಲಾಭನಷ್ಟ ಲೆಕ್ಕಾಚಾರಗಳು ಕಾರ್ಮಿಕರ ಅಲ್ಪ ಉಳಿತಾಯವನ್ನೂ ಕಸಿದುಕೊಳ್ಳುತ್ತಿದೆ. ರಾಜ್ಯದಲ್ಲಿ ಎಷ್ಟು ವಲಸೆ ಕಾರ್ಮಿಕರಿದ್ದಾರೆ ಎಂಬ ಖಚಿತ ಮಾಹಿತಿಯನ್ನೂ ಸರ್ಕಾರ ಒದಗಿಸದಿರುವುದು ಆಡಳಿತ ಯಂತ್ರದ ನಿಷ್ಕಿçಯತೆಗೆ ಕನ್ನಡಿ ಹಿಡಿದಂತಿದೆ. ಅನ್ಯ ರಾಜ್ಯಗಳಿಗೆ ಹೊರಟಿರುವ ಸಾವಿರಾರು ಕಾರ್ಮಿಕರು ಇನ್ನೂ ತಮ್ಮ ಸರದಿಗಾಗಿ ಕಾಯುತ್ತಲಿದ್ದು, ಅನೇಕರು ಪುನಃ ನಡೆದು ಹೋಗುವ ಸಾಧ್ಯತೆಗಳೂ ಇವೆ. ವಲಸೆ ಕಾರ್ಮಿಕರ ಬವಣೆ ಆಡಳಿತ ವ್ಯವಸ್ಥೆಗೆ ಒಂದು ಸಮಸ್ಯೆಯಾಗಿ ಕಾಣುತ್ತಿರುವುದೇ ನಮ್ಮ ಸಮಾಜದ ಆಂರ‍್ಯದಲ್ಲಿರುವ ತಾರತಮ್ಯ ನೀತಿಗೆ ಕನ್ನಡಿ ಹಿಡಿದಂತಿದೆ.

ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ ಆರ್ಥಿಕ ಪ್ಯಾಕೇಜ್ ವಲಸೆ ಕಾರ್ಮಿಕರ ಪಾಲಿಗೆ ಕನ್ನಡಿಯೊಳಗಿನ ಗಂಟಿನಂತಾಗಿದೆ. ಮಹಾರಾಷ್ಟçದ ಔರಂಗಾಬಾದ್‌ನಲ್ಲಿ ರೈಲಿಗೆ ಸಿಕ್ಕಿ ಮಡಿದ 16 ಕಾರ್ಮಿಕರು, ಉತ್ತರ ಭಾರತದಲ್ಲಿ ಅಪಘಾತಗಳಿಂದ ಮಡಿದ 25ಕ್ಕೂ ಹೆಚ್ಚು ಕಾರ್ಮಿಕರು, ಮೊದಲ ಲಾಕ್ ಡೌನ್ ಸಂದರ್ಭದಲ್ಲೇ ಕಾಲ್ನಡಿಗೆಯಲ್ಲಿ ಹೊರಟು ಹಸಿವಿನಿಂದ ಸಾವನ್ನಪ್ಪಿದ 25ಕ್ಕೂ ಹೆಚ್ಚು ಕಾರ್ಮಿಕರು, ತಮ್ಮ ಸ್ವಗ್ರಾಮಗಳನ್ನು ತಲುಪಿದರೂ ನಾಳಿನ ಚಿಂತೆಯಲ್ಲೇ ಬದುಕಬೇಕಾದ ಅನಿವಾರ್ಯತೆ ಎದುರಿಸುತ್ತಿರುವ ಲಕ್ಷಾಂತರ ಕಾರ್ಮಿಕರು ಭಾರತದ ಆಡಳಿತ ವ್ಯವಸ್ಥೆಯ ಕಣ್ಣಿಗೆ ಗೋಚರಿಸಿಯೇ ಇಲ್ಲ ಎನ್ನುವುದನ್ನು ಪ್ರಧಾನಿ ಘೋಷಿಸಿದ ಪ್ಯಾಕೇಜ್‌ನಲ್ಲಿ ಗುರುತಿಸಬಹುದು.

ಏಪ್ರಿಲ್ 20ರ ನಂತರ ಲಾಕ್ ಡೌನ್ ಸಡಿಲಿಕೆಯಾದರೂ ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆಯಾಗಿಲ್ಲ. ಮೇ 17ರ ಹೊತ್ತಿಗೆ ದೇಶದ ನಿರುದ್ಯೋಗ ಪ್ರಮಾಣ ಶೇ 24ರಷ್ಟಾಗಿದ್ದು ಇನ್ನೂ ಹೆಚ್ಚಾಗುವ ಸಂಭವವಿದೆ. ಆದಾಗ್ಯೂ ಲಾಕ್‌ಡೌನ್ ಸಡಿಲವಾದ ನಂತರ ನೌಕರಿಯಲ್ಲಿ ತೊಡಗಿರುವ ಕಾರ್ಮಿಕರ ಪ್ರಮಾಣ ಕೊಂಚ ಮಟ್ಟಿಗೆ ಹೆಚ್ಚಳವಾಗಿದೆ. ಏಪ್ರಿಲ್ 26ರಂದು ಶೇ 35.4ರಷ್ಟು ಕಾರ್ಮಿಕರು ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದರು. ಮೇ 17ರ ವೇಳೆಗೆ ಶೇ 38.8ರಷ್ಟು ಕಾರ್ಮಿಕರು ದುಡಿಮೆಯಲ್ಲಿ ತೊಡಗಿದ್ದಾರೆ. ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಮರಳುತ್ತಿರುವುದರಿಂದ ದುಡಿಮೆಯ ಪ್ರಮಾಣವೂ ಹೆಚ್ಚಾಗುತ್ತಿದೆ.

ಲಾಕ್‌ಡೌನ್ ಇಂದಲ್ಲ ನಾಳೆ ತೆರೆಯಲಾಗುತ್ತದೆ. ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಚುರುಕುಗೊಳ್ಳುತ್ತದೆ. ಆದರೆ ತಮ್ಮ ದುಡಿಮೆಯ ಕ್ಷೇತ್ರದಿಂದ ಸ್ವಂತ ಸೂರು ಅರಸಿ ಗ್ರಾಮಗಳಿಗೆ ತೆರಳಿರುವ ಲಕ್ಷಾಂತರ ವಲಸೆ ಕಾರ್ಮಿಕರನ್ನು ಕೊರೋನಾ ಸಹ ಕಾಡುತ್ತದೆ. ಈಗಾಗಲೇ ಕನ್ನಡ ಸುದ್ದಿಮನೆಗಳಲ್ಲಿ ವಲಸೆ ಬಾಂಬ್ ಉತ್ಪಾದನೆ ಮಾಡಿಯಾಗಿದೆ. ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲದೆ ಕೊರೋನಾ ಪೀಡಿತ ಸಮುದಾಯದೊಳಗಿನಿಂದಲೇ ಸಂಚರಿಸುವ ಈ ಕಾರ್ಮಿಕರು ರೋಗವಾಹಕರಾದರೆ ಅಚ್ಚರಿಪಡಬೇಕಿಲ್ಲ. ಇದರ ಹೊಣೆ ಕೇಂದ್ರ ಸರ್ಕಾರವೇ ಹೊರಬೇಕಾಗುತ್ತದೆ. ಲಾಕ್‌ಡೌನ್ ಆರಂಭವಾದ ದಿನಗಳಲ್ಲಿ ನಗರ ಕೇಂದ್ರಿತ ಹಿತವಲಯದ ಪ್ರಜೆಗಳನ್ನು ಕಾಪಾಡಿದ ಕೇಂದ್ರ ಸರ್ಕಾರಕ್ಕೆ ನಮ್ಮೊಳಗೆ ಕೋಟ್ಯಂತರ ವಲಸೆ ಕಾರ್ಮಿಕರು ಇದ್ದಾರೆ ಎಂದು ಯೋಚಿಸಲೂ ಇಲ್ಲ ಎನ್ನುವುದು ದುರಂತ.

ಇದರ ನೇರ ಪರಿಣಾಮವನ್ನು ಈಗ ಎದುರಿಸುತ್ತಿದ್ದೇವೆ. ಕೊರೋನಾ ಸೋಂಕು ಕಡಿಮೆಯಿದ್ದ ಸಂದರ್ಭದಲ್ಲಿ ಲಾಕ್‌ಡೌನ್ ವಿಧಿಸಿ ವಲಸೆ ಕಾರ್ಮಿಕರನ್ನು ಅಲಕ್ಷಿಸಿದ ಕೇಂದ್ರ ಸರ್ಕಾರ, ಸೋಂಕು ಸಾಮುದಾಯಿಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಈ ಕಾರ್ಮಿಕರನ್ನು ಅಖಾಡದಲ್ಲಿ ಇಳಿಸುತ್ತಿದೆ. ಜೊತೆಗೆ ಲಾಕ್‌ಡೌನ್ ನಿಯಮಗಳ ಸಡಿಲಿಕೆಯೂ ಆಗಿದೆ. ನಿರ್ಬಂಧಿತ ಅವಧಿಯಲ್ಲಿ ಬೀದಿ ಪಾಲಾಗಿದ್ದ ವಲಸೆ ಕಾರ್ಮಿಕರು, ಮುಕ್ತ ವಾತಾವರಣದಲ್ಲಿ ಕೊರೋನಾ ವೈರಾಣುವಿನೊಡನೆಯೇ ತಮ್ಮ ನೆಲೆಯತ್ತ ಸಾಗುವಂತೆ ಮಾಡಲಾಗಿದೆ. ಬಂಡವಾಳ ವ್ಯವಸ್ಥೆಯ ಕ್ರರ‍್ಯ ಮತ್ತು ಉಳ್ಳವರ ಆಡಳಿತ ವ್ಯವಸ್ಥೆಯ ತಾರತಮ್ಯಕ್ಕೆ ಇದಕ್ಕಿಂತಲೂ ಉತ್ತಮ ನಿದರ್ಶನ ಬೇಕಿಲ್ಲ ಎನಿಸುತ್ತದೆ.

ಲಾಕ್‌ಡೌನ್ ತೆರವುಗೊಂಡ ನಂತರ ಉಂಟಾಗುವ ಅನಿಶ್ಚಿತತೆ ಹೆಚ್ಚಾಗಿ ವಲಸೆ ಕಾರ್ಮಿಕರನ್ನೇ ಕಾಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯ ಕೊರತೆ, ಕೊರೋನಾ ಸೋಂಕಿನ ಭೀತಿ, ಜೀವನೋಪಾಯವಿಲ್ಲದ ಪರಿಸ್ಥಿತಿ, ನೌಕರಿ ಇಲ್ಲದ ಸನ್ನಿವೇಶ ವಲಸೆ ಕಾರ್ಮಿಕರನ್ನು ಮತ್ತೊಮ್ಮೆ ಬಡತನದ ಕೂಪಕ್ಕೆ ತಳ್ಳಿಬಿಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಯೋಜನೆಯೊಂದನ್ನು ಹೊರತುಪಡಿಸಿದರೆ ಈ ಕಾರ್ಮಿಕರಿಗೆ ಆಸರೆ ನೀಡುವ ಮತ್ತಾವುದೇ ಯೋಜನೆಗಳು ಇರುವುದಿಲ್ಲ. 2019-20ರಲ್ಲಿ ಗ್ರಾಮೀಣ ಪ್ರದೇಶದಲ್ಲಿ 2 ಕೋಟಿ 97 ಲಕ್ಷ ಕಾರ್ಮಿಕರು ದುಡಿಮೆಯಲ್ಲಿ ತೊಡಗಿದ್ದರು. ಈ ಸಂಖ್ಯೆ ಲಾಕ್ ಡೌನ್ ಸಂದರ್ಭದಲ್ಲಿ 1 ಕೋಟಿ 97 ಲಕ್ಷಕ್ಕೆ ಕುಸಿದಿದೆ. ಕೇಂದ್ರದ ಆರ್ಥಿಕ ಪ್ಯಾಕೇಜ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚಿನ ನಿಧಿ ಒದಗಿಸಿರುವುದರಿಂದ ಉದ್ಯೋಗ ಪ್ರಮಾಣ ಶೇ 10ರಷ್ಟು ಹೆಚ್ಚಾಗಬಹುದು. ಆಗಲೂ ಶೇ 40ರಷ್ಟು ಜನರು ಉದ್ಯೋಗವಿಲ್ಲದೆ ಪರದಾಡಬೇಕಾಗುತ್ತದೆ.

ಈ ಅನಿಶ್ಚಿತತೆ, ಸಂದಿಗ್ಧತೆ ಮತ್ತು ಅಭದ್ರತೆಗಳ ನಡುವೆಯೇ ಭಾರತದ ನಾಲ್ಕು ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ತ್ರಿಶಂಕುಗಳಂತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆರ್ಥಿಕತೆಯ ಕುಸಿತ ಹೆಚ್ಚಾದಂತೆಲ್ಲಾ ದುಡಿಮೆಯ ಬೇಡಿಕೆ ಕುಗ್ಗುತ್ತದೆ. ಕಾರ್ಖಾನೆಗಳಲ್ಲಿ ದುಡಿಮೆಯ ಅವಧಿಯನ್ನು ಹೆಚ್ಚಿಸಿರುವುದರಿಂದ ಗುತ್ತಿಗೆ ನೌಕರಿ, ದಿನಗೂಲಿ ನೌಕರಿಯೂ ಅಲಭ್ಯವಾಗುತ್ತದೆ. ಉದ್ಯಮಿಗಳ ಭಂಡಾರವೂ ಖಾಲಿಯಾಗಿರುವುದರಿಂದ ಹೆಚ್ಚಿನ ಪ್ರಮಾಣದ ಉದ್ದಿಮೆಗಳು ಕಡಿಮೆ ಕಾರ್ಮಿಕರೊಂದಿಗೇ ಕಾರ್ಯ ನಿರ್ವಹಿಸುತ್ತವೆ. ಬಂಡವಾಳ ವ್ಯವಸ್ಥೆಯಲ್ಲಿ ಲಾಭ ಗಳಿಕೆಯೇ ಪ್ರಧಾನವಾಗಿರುವುದರಿಂದ ಕಾರ್ಮಿಕರ ಬವಣೆ ಗಣನೆಗೆ ಬರುವುದಿಲ್ಲ.

ಈ ಅಸ್ಥಿರತೆಯ ನಡುವೆಯೇ ಭಾರತದ ಕೋಟ್ಯಂತರ ಕಾರ್ಮಿಕರು ಭವಿಷ್ಯದ ದಿನಗಳನ್ನು ಕಳೆಯಬೇಕಿದೆ. ಭವಿಷ್ಯ ಭಾರತದ ನಿರ್ಮಾತೃಗಳು ತಮ್ಮ ಜೀವನೋಪಾಯಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದ್ದರೆ ಅದಕ್ಕೆ ಕಾರಣ ಕೊರೋನಾ ಅಲ್ಲ, ಕೋವಿದ್ 19 ಅಲ್ಲ, ಇದಕ್ಕಿಂತಲೂ ಅಪಾಯಕಾರಿಯಾದ ಬಂಡವಾಳ ವ್ಯವಸ್ಥೆ ಮತ್ತು ಈ ವ್ಯವಸ್ಥೆಯನ್ನು ಪೋಷಿಸಿ, ಬೆಳೆಸಿ, ಸಂರಕ್ಷಿಸುವ ನಮ್ಮ ದೇಶದ ಆಳುವ ವರ್ಗಗಳು. ಹೋರಾಡಬೇಕಿರುವುದು ಕೊರೋನಾ ವಿರುದ್ಧ ಅಲ್ಲ, ಈ ದಬ್ಬಾಳಿಕೆಯ ವಿರುದ್ಧ.

*ಲೇಖಕರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು; ಕೆನರಾಬ್ಯಾಂಕ್ ಉದ್ಯೋಗಿ, ಮಾರ್ಕ್ಸ್ ವಾದಿ ಚಿಂತಕ, ಚಳವಳಿಗಳಲ್ಲಿ ಭಾಗಿ. 20ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ಎಲ್.ಬಸವರಾಜು ದತ್ತಿ ಪ್ರಶಸ್ತಿ ಪುರಸ್ಕೃತರು. ಹಾಲಿ ಮೈಸೂರಿನಲ್ಲಿ ವಾಸ.

Leave a Reply

Your email address will not be published.