ಸಾಹಿತ್ಯದಲ್ಲಿ ಅಸಂಗತತೆ

– ಕಾದಂಬಿನಿ

ಅಸಂಗತ ಆಲೋಚನೆಗಳನ್ನು ಸಾಹಿತ್ಯದಲ್ಲಿ ಅಳವಡಿಸುವ ಪ್ರಕ್ರಿಯೆಯು ಪಾಶ್ಚಾತ್ಯರಲ್ಲಿ ಕಳೆದ ಶತಮಾನದ ಆದಿಯಲ್ಲಿಯೇ ಆರಂಭಗೊಂಡಿತು.

ಅಸಂಗತತೆಯನ್ನು ಸಾಹಿತ್ಯದಲ್ಲಿ ಎರಡು ರೀತಿಯಲ್ಲಿ ತರಲಾಯಿತು. ಉದ್ದೇಶಪೂರ್ವಕವಾಗಿ ಹಾಸ್ಯಾಸ್ಪದ, ವಿಲಕ್ಷಣ ಮತ್ತು ಅಸಂಗತತೆಯನ್ನು ಮಿಳಿತಗೊಳಿಸುವುದು ಒಂದಾದರೆ ಮಾನವನ ಸಾಮಾಜಿಕ ಅಸ್ತಿತ್ವಕ್ಕಿಂತ ಆಂತರಿಕ ಅಸ್ತಿತ್ವವೇ ಮುಖ್ಯ ಎಂಬ ನಂಬಿಕೆಯಿಂದ ಅಸಂಗತತೆಯನ್ನು ಪ್ರತಿಪಾದಿಸುವುದು ಇನ್ನೊಂದು.

ಯೂರೋಪಿನಲ್ಲಿ ಕಲಾತ್ಮಕ ಮತ್ತು ಸಾಹಿತ್ಯಿಕ ಪರಿಸರದ ಸಾಂಪ್ರದಾಯಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಶಿಷ್ಟ ಹಾಗೂ ಅಸಂಬದ್ಧತೆಯಿಂದ ಅಪಹಾಸ್ಯ ಮಾಡುವ ಮೂಲಕ ಗುಡಿಸಿ ಹಾಕುವ ಉದ್ದೇಶದಿಂದ ಸ್ವಿಟ್ಜರ್ಲೆಂಡಿನ ಜ್ಯೂರಿಚ್ ಎಂಬಲ್ಲಿ ದಾದಾ ಚಳವಳಿ ಆರಂಭವಾಗಿತ್ತು. ಅಲ್ಲಿಂದ ಅದು ಹರಿವೊಡೆದು 1915ರ ಸುಮಾ ರಿಗೆ ನ್ಯೂಯಾರ್ಕಿನಲ್ಲಿ ಕಾಣಿಸಿಕೊಂಡು 1920ರ ಹೊತ್ತಿಗೆ ಫ್ರಾನ್ಸಿನಲ್ಲಿ ಮುನ್ನೆಲೆಗೆ ಬಂದಿತು. ಸುಮಾರು 1915 ರಿಂದ 1923ರ ವರೆಗೆ ನಡೆದ ಈ ದಾದಾ ಚಳವಳಿಯು ಕಲೆ ಮತ್ತು ಸಾಹಿತ್ಯದಲ್ಲಿ ಅಸಂಬದ್ಧತೆಯನ್ನು ಉದ್ದೇಶಪೂರ್ವಕವಾಗಿ ಅಳವಡಿಸಿಕೊಂಡಿತು.

ಆದರೆ 1940ರ ಹೊತ್ತಿಗೆ ಅಲ್ಬರ್ಟ್ ಕಮು ಪ್ರತಿಪಾದಿಸಿದ ಅಸಂಗತತೆಯು ಎರಡನೆಯ ಬಗೆಯದು. ಕಮುವಿನ ಆಂತರಿಕ ಅಸ್ತಿತ್ವದ ಕುರಿತ ವಿಚಾರಗಳು ಆ ಕಾಲದವರನ್ನು ಯಾವ ರೀತಿಯಲ್ಲಿ ಪ್ರಭಾವಿಸಿದವೆಂದರೆ 1940 ರಿಂದ 1989ರ ವರೆಗಿನ ಕಾಲಘಟ್ಟವನ್ನು ಅಸಂಗತ ಚಳವಳಿ ಎಂದೇ ಗುರುತಿಸಲಾಗಿದೆ.

ಸಾಹಿತ್ಯದಲ್ಲಿ ಅಸಂಗತತೆಯನ್ನು ಕಮುವಿಗಿಂತಲೂ ಮೊದಲು ಪರಿಚಯಿಸಿದವನು ಸೋರೆನ್ ಕಾಯ್ರ್ಕೆಗಾರ್ಡ್. ಈ ಚಿಂತನೆಗಳನ್ನು ಅಭಿವೃದ್ಧಿಪಡಿಸಿದವನು ಅಲ್ಬರ್ಟ್ ಕಮು. ‘ಆಂತರಿಕ ಅಸಂಗತತೆಯೇ ಜೀವನದ ಮೂಲ ತತ್ವ ಹಾಗೂ ಅವನು ಎದುರುಗೊಳ್ಳಬೇಕಾದ ಮೊದಲ ಸತ್ಯ’ ಎನ್ನುವ ಕಮು ಅಸಂಗತತೆಯ ವಿಚಾರಧಾರೆಯನ್ನು ತನ್ನ ‘ದ ಮಿತ್ ಆಫ್ ಸಿಸಿಫಸ್’ ಕೃತಿಯ ಮೂಲಕ ಮಂಡಿಸುತ್ತಾನೆ. ಈ ಕೃತಿಯಲ್ಲಿ ಆತ ಗ್ರೀಸಿನ ದಂತಕಥೆಯಾದ ಸಿಸಿಫಸ್ ನ, ಕಡಿದಾದ ಬೆಟ್ಟದ ಮೇಲೆ ಮೇಲ್ಮುಖವಾಗಿ ದೊಡ್ಡ ಬಂಡೆಯೊಂದನ್ನು ಶ್ರಮವಹಿಸಿ ಉರುಳಿಸುತ್ತಾ ಕೊಂಡೊಯ್ಯುವ ಹಾಗೂ ಬೆಟ್ಟದ ಇಳಿಜಾರಿನಲ್ಲಿ ಪುನಃ ಕೆಳಕ್ಕೆ ಉರುಳಿದಂತೆಲ್ಲ ಅದನ್ನು ಮತ್ತೆ ಮತ್ತೆ ಮೇಲ್ಮುಖವಾಗಿ ಉರುಳಿಸುವ ನಿರಂತರ ಕ್ರಿಯೆಯೊಂದರ ಸಶಕ್ತ ರೂಪಕವನ್ನು ಕಟ್ಟಿಕೊಡುತ್ತಾನೆ. ಈ ಬದುಕಿಗೆ ಯಾವ ಅರ್ಥವಾಗಲೀ ಉದ್ದೇಶವಾಗಲೀ ಇಲ್ಲ ಎನ್ನುವ ಅವನು ಸಾಮಾಜಿಕ ಅಸ್ತಿತ್ವವನ್ನು ನಿರಾಕರಿಸಿ ಆಂತರಿಕ ಅಸ್ತಿತ್ವವಾದವನ್ನು ಎತ್ತಿ ಹಿಡಿಯುತ್ತಾನೆ. ವ್ಯಕ್ತಿವಾದವನ್ನು ಪ್ರತಿಪಾದಿಸುವ ಕಮುವಿನ ‘ದ ಸ್ಟ್ರೇಂಜ್’, ‘ದ ಪ್ಲೇಗ್’ ಕೃತಿಗಳೂ ಅಸಂಗತತೆಯನ್ನೇ ಬಿಂಬಿಸಿದವು.

ಫ್ರಾನ್ಜ್ ಕಾಫ್ಕಾ (1883-1924) ಕೂಡ ತನ್ನ ಸಣ್ಣ ಕಥೆಗಳಲ್ಲಿ, ಅದರಲ್ಲೂ ‘ಮೆಟಾಮಾರ್ಫಸಿಸ್’ ಕಥೆಯಲ್ಲಿ ಅಸಂಗತತೆಯನ್ನು ಬಹಳ ಚೆನ್ನಾಗಿ ಬಳಸಿದ್ದಾನೆ. ರಾತ್ರಿ ಮಲಗಿದ ಒಬ್ಬನು ಬೆಳಕು ಹರಿಯುವುದರೊಳಗಾಗಿ ಜಿರಲೆಯಾಗಿ ಪರಿವರ್ತನೆಯಾಗಿರುತ್ತಾನೆ. ಆಗ ನೆನ್ನೆಯವರೆಗೂ ಅನ್ಯೋನ್ಯವಾಗಿ ನಡೆದುಕೊಂಡಿದ್ದ ಜಗತ್ತು ಏಕಾಏಕಿ ಅಸಹ್ಯಪಟ್ಟು ಅವನನ್ನು ದೂರ ಮಾಡುವ ಚಿತ್ರಣದ ಮೂಲಕ ಕಾಫ್ಕಾ ಜಗತ್ತನ್ನು ಬೆರಗುಗೊಳಿಸಿದವನು. ಸುಮಾರು 1940 ರಿಂದ 1989 ರ ತನಕ ಮುಂದುವರಿದ ಅಸಂಗತ ಚಳವಳಿಯಲ್ಲಿ ಕಾಫ್ಕಾ, ಕಮು, ಪಾವ್ಲ್ ಆಸ್ಟರ್, ಕರ್ಟ್ ಮೊನ್ನೆಗರ್ ಮುಂತಾದವರು ಪ್ರಮುಖ ಪಾತ್ರವಹಿಸಿದರು.

ಈ ಚಳುವಳಿಯ ನಡುವೆಯೇ 1950-60ರ ಅವಧಿಯಲ್ಲಿ ಅಸಂಗತ ನಾಟಕ ಕೂಡ ಹುಟ್ಟುಪಡೆಯಿತು. ಮಾರ್ಟಿನ್ ಎಸ್ಲಿನ್ ಎಂಬುವವನು ಅಸಂಗತ ನಾಟಕವನ್ನು ಪ್ರಯೋಗಿಸಿದ. ಇವನ ನಂತರ ಅಲ್ಬರ್ಟ್ ಕಮುನ ವಿಚಾರಧಾರೆಯಿಂದ ಪ್ರೇರಿತನಾದ ಸಾಮ್ಯುಯೆಲ್ ಬೆಕೆಟನು 1953ರಲ್ಲಿ ‘ವೇಯ್ಟಿಂಗ್ ಫಾರ್ ಗೋಡೋ’ ಎಂಬ ನಾಟಕವನ್ನು ಕೊಟ್ಟ. ಈ ನಾಟಕದಲ್ಲಿ ಬರಲಿರುವ ಗೋಡೋನಿಗಾಗಿ ನಿರಂತರವಾಗಿ ಕಾಯುವ, ಈ ಕಾಯುವಿಕೆಯ ನಡುವಿನ ಬೇಸರ, ಅಸಹನೆ, ನೋವು ಮುಂತಾದ ವಿಚಾರಗಳಿಂದ ಜರುಗುವ ವಿಲಕ್ಷಣ ಭ್ರಾಮಕ ಸಂಗತಿಗಳು ಕಾಣಿಸುತ್ತವೆ. ಹೀಗೆ ಬೆಕೆಟ್ ಅಸಂಗತ ನಾಟಕ ಪರಂಪರೆಗೆ ಬುನಾದಿ ಹಾಕುತ್ತಾನೆ. ಯುಜಿನಿ ಅಯನೆಸ್ಕೋ, ಹೆರಾಲ್ಡ್ ಪಿಂಟರ್, ಆರ್ಥರ್ ಅಡಮೋವ್, ಜೀನ್ ಜೀನೆ ಮುಂತಾದವರು ಮುಂದುವರಿಸುತ್ತಾರೆ.

ಆದರೆ ಇವ್ಯಾವೂ ಸಂಘಟಿತ ಚಳವಳಿಗಳಲ್ಲ. ಇವುಗಳ ಅಸಂಗತ ಗುಣಲಕ್ಷಣಗಳ ಸಾಮ್ಯವನ್ನು ಗುರುತಿಸಿ ವಿಮರ್ಶಕರು ಅವಕ್ಕೆ ಕೊಟ್ಟ ಹಣೆಪಟ್ಟಿಗಳಷ್ಟೇ. ಈ ಕಾಲಘಟ್ಟದಲ್ಲಿ ಯೂರೋಪ್ ಮತ್ತು ಅಮೆರಿಕೆಯ ಅಸಂಗತ ಚಳವಳಿಯು ಹುಟ್ಟುವುದಕ್ಕೆ ಕಾರಣವಾದದ್ದು ಅಂದಿನ ಮಹಾಯುದ್ಧಗಳು, ಹಿಟ್ಲರನ ಸರ್ವಾಧಿಕಾರ, ರಾಜಪ್ರಭುತ್ವದ ಆಟಾಟೋಪಗಳು, ಅರಾಜಕತೆಗಳು, ಸಾವುನೋವುಗಳು, ಆ ಕಾಲದ ಜನ ಎದುರಿಸಿದ ವ್ಯತಿರಿಕ್ತ ಪರಿಸ್ಥಿತಿಗಳು ಕಾರಣವಾಗಿದ್ದವು. ಬದುಕಿನ ನಶ್ವರತೆ, ನಿರರ್ಥಕತೆ, ನಿರಂತರ ಹೋರಾಟದ ಹೊರತು ಬದುಕಿಗೆ ಯಾವುದೇ ಅರ್ಥ ವಿಲ್ಲ. ಕಾಯುತ್ತಾನೆ ಆದರೆ ಯಾವುದೂ ಬರುವುದಿಲ್ಲ. ಅಸಂಗತತೆಯೇ ಸತ್ಯ ಹಾಗೂ ಮನುಷ್ಯ ಯಾವಾಗಲೂ ಒಂಟಿ. ಈ ಬಗೆಯ ಭಾವಗಳು ಬಹುಶಃ ಅಂದಿನ ಕಾಲಘಟ್ಟ ಎದುರಿಸಿದ ಪ್ರತಿಕೂಲ ಪರಿಸ್ಥಿತಿಯ ಪರಿಣಾಮಗಳು.

ಆದರೆ ಪಾಶ್ಚಾತ್ಯರು, ಈ ಅಸಂಗತತೆಯ ಸಿದ್ಧಾಂತಕ್ಕೆ ಭವಿಷ್ಯವಿಲ್ಲ, ಮನುಷ್ಯನ ಅಸ್ತಿತ್ವ ಋಣಾತ್ಮಕ ವಿಚಾರಧಾರೆಯಲ್ಲಿ ಇಲ್ಲ ಮತ್ತು ಇರಕೂಡದು, ಆತ ಸಂಘಜೀವಿ, ಮಹತ್ವಾಕಾಂಕ್ಷಿ ಎನ್ನುವುದನ್ನು ಗ್ರಹಿಸಿ ನಿಧಾನಕ್ಕೆ ಅಸಂಗತ ಪರಂಪರೆಯನ್ನು ಬದಿಗೆ ಸರಿಸಿ ಸಮುದಾಯವಾದದೆಡೆ, ಸಮಾಜವಾದದೆಡೆ ಹೊರಳತೊಡಗಿದರು.

ಕನ್ನಡದ ಸಾಹಿತ್ಯದ ಸಂದರ್ಭದಲ್ಲಿಯೂ ಹಲವರು ಕಮು ಕಾಫ್ಕರ ಪ್ರಭಾವಕ್ಕೆ ಒಳಗಾದರು. ಇಲ್ಲಿನ ನಾಟಕಗಳಲ್ಲೂ ಅವರ ಪ್ರಭಾವ ಕಾಣ ತೊಡಗಿತು. ಆದರೆ ಲಂಕೇಶ್, ತೇಜಸ್ವಿ, ಮತ್ತಿತರ ಕೆಲವರು ಆರಂಭದಲ್ಲಿಯೇ ಅದನ್ನು ಬಿಡಿಸಿಕೊಂಡದ್ದು ಕನ್ನಡದ ಸಂದರ್ಭದಲ್ಲಿ ಬಹುಮುಖ್ಯ ಸಂಗತಿ.

Leave a Reply

Your email address will not be published.