ಸಾಹಿತ್ಯ ಕೃತಿಯ ವಿಮರ್ಶೆಯಲ್ಲಿ ಸಾಹಿತಿಯ ಧೋರಣೆ ಪರಿಗಣಿಸಬೇಕೆ..?

ಸಮಾಜಮುಖಿ ಆಗಸ್ಟ್ ಸಂಚಿಕೆಯ ಮುಖ್ಯಚರ್ಚೆ:

ನಾವು ಇದುವರೆಗೆ ಹೇಳಿದ್ದು ಏನೇ ಆದರೂ ಮಾಡಿದ್ದು ಮಾತ್ರ ಅದರ ವಿರುದ್ಧ ದಿಕ್ಕಿನಲ್ಲಿಯೇ ಇದೆ. ಕನ್ನಡ ಸಾಹಿತ್ಯ ವಿಮರ್ಶೆಯ ಸೋಗಲಾಡಿತನದಲ್ಲಿ ವಿಮರ್ಶೆ ಪ್ರಾಕಾರ ಸೊರಗಿದೆ. ತಮ್ಮನ್ನು ಹೀಯಾಳಿಸಿದರೆಂದು ಶೂದ್ರರೆಲ್ಲಾ ಅಡಿಗರ ಕಾವ್ಯವನ್ನು ಬಹಿಷ್ಕರಿಸಿದ್ದಾರೆ. ಪ್ರಗತಿಪರರಿಗೆ ಭೈರಪ್ಪನವರ ಕಾದಂಬರಿಗಳಲ್ಲಿ ಕೇವಲ ವೈದಿಕಶಾಹಿಯ ವಿಜೃಂಭಣೆ ಹಾಗೂ ಧಾರ್ಮಿಕ ಮತಾಂಧತೆಯೇ ಕಾಣುತ್ತದೆ. ಕುವೆಂಪು ಸಾಹಿತ್ಯವನ್ನು ಮುಕ್ತಮನಸ್ಸಿನಿಂದ ಬ್ರಾಹ್ಮಣರು ಒಪ್ಪಿದಂತೆ ಕಾಣುವುದಿಲ್ಲ. ಹೆದರಿಕೆಯಿಂದಲೋ ಅಥವಾ ಹಿಂಜರಿಕೆಯಿಂದಲೋ ದೇವನೂರರ ಬರಹಗಳನ್ನು ತೀಕ್ಷ್ಣ ವಿಮರ್ಶೆಗೆ ಒಳಪಡಿಸಿದಂತೆ ಕಾಣುವುದಿಲ್ಲ. ಕಾರ್ನಾಡರನ್ನಂತೂ ಸಾಹಿತಿಯೆಂದು ಒಪ್ಪಲೇ ಬಹಳಷ್ಟು ಜನರು ತಯಾರಿಲ್ಲ. ಎಲ್ಲರಿಗೂ ಸಲ್ಲುವ ಕಂಬಾರರ ಕೃತಿಗಳ ಸೃಜನಶೀಲತೆಯನ್ನು ವಿಮರ್ಶೆಗೆ ಒಳಪಡಿಸಲು ಯಾರೂ ಮುಂದೆ ಬರುವಂತಿಲ್ಲ.

ಕನ್ನಡದಲ್ಲಿ ವಸ್ತುನಿಷ್ಠ ಹಾಗೂ ನಿರ್ಭಿಡೆಯ ಮೌಲ್ಯನಿರ್ಧಾರಕ ಸಾಹಿತ್ಯ ವಿಮರ್ಶೆಯೇ ಕಣ್ಮರೆಯಾಗುತ್ತಿದೆ. ನಮ್ಮ ವಿಮರ್ಶಕರು ಕೃತಿಯೊಂದರ ಪರಿಚಯ ನೀಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಎರಡು ಮಾತಿನ ಮೌಲ್ಯಮಾಪನಕ್ಕೆ ತಮ್ಮನ್ನು ತಾವು ಸೀಮಿತಗೊಳಿಸುತ್ತಾರೆ. ಇನ್ನು ಕೆಲವರು ಪುಸ್ತಕವೊಂದರ ಎರಡು ರಕ್ಷಾಕವಚಗಳ ನಡುವಿನ ಬರಹವನ್ನು ವಿಮರ್ಶೆ ಮಾಡುವ ಬದಲು ಬರಹಗಾರನ ಹಿನ್ನೆಲೆ, ಸಾರ್ವಜನಿಕ ಧೋರಣೆಗಳು ಹಾಗೂ ಉದ್ದೇಶವನ್ನು ಟೀಕಿಸಹೊರಡುತ್ತಾರೆ. ಆ ಕೃತಿಯನ್ನು ತಮ್ಮದೇ ಸಾರ್ವಜನಿಕ ಜೀವನದ ನಿಲುವುಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೆ.

ಯಾವುದು ಸರಿ..? ಯಾವುದು ತಪ್ಪು..?

  • ಸಾಹಿತಿಯ ಬೇರೆಲ್ಲಾ ಕೃತಿಗಳನ್ನು, ಹಿನ್ನೆಲೆಯನ್ನು ಮತ್ತು ಸಾರ್ವಜನಿಕ ನಿಲುವು-ಧೋರಣೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕೃತಿಯೊಂದನ್ನು ಕೇವಲ ಅದರ ಪಠ್ಯಕ್ಕೆ ಸೀಮಿತಗೊಳಿಸಿ ಸಾಹಿತ್ಯ ವಿಮರ್ಶೆ ಮಾಡಬೇಕೆ..? 
  • ಸಾಹಿತಿಯ ಪೂರ್ವಾಪರ, ಇಲ್ಲಿಯವರೆಗಿನ ಬರಹಗಳು ಹಾಗೂ ಪ್ರಚ್ಛನ್ನ-ಪ್ರಕಾಶಿತ ಧೋರಣೆಗಳನ್ನು ಬಿಟ್ಟು ಕೃತಿಯೊಂದರಲ್ಲಿ ಅಡಕವಾಗಿರುವ ಸತ್ಯ-ಆಶಯಗಳ ಹುಡುಕಾಟ ಮತ್ತು ಮೌಲ್ಯಮಾಪಕ ವಿಮರ್ಶೆ ಸಾಧ್ಯವೇ..?

ಈ ಎರಡು ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ಕನ್ನಡ ವಿಮರ್ಶೆಯನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚುವ ಅವಕಾಶವಿದೆ. ಉತ್ತಮ ವಿಮರ್ಶೆ ಸತ್ತರೆ ಉತ್ತಮ ಸಾಹಿತ್ಯ ಸಾಯುವ ದಿನಗಳು ದೂರವಿಲ್ಲ ಎಂಬ ಎಚ್ಚರಿಕೆ ನೀಡುವ ಸಂದರ್ಭ ಒದಗಿಸುತ್ತದೆ. ಕನ್ನಡದ ಅತಿಮುಖ್ಯ ಸಾಹಿತಿ-ವಿಮರ್ಶಕರು ಭಾಗವಹಿಸುವ ಈ ಚರ್ಚೆಯಲ್ಲಿ ನೀವು ಪಾಲ್ಗೊಂಡು ನಿಮ್ಮ ನಿಲುವಿನ ಹಿಂದಿನ ತರ್ಕವನ್ನು ವಿಶದಗೊಳಿಸಬಹುದಾಗಿದೆ. ನಿಮ್ಮ ಬರಹ ಜುಲೈ 18 ರೊಳಗೆ ನಮಗೆ ಸಲ್ಲಲಿ.

ಸಂಪರ್ಕ ವಿಳಾಸ:
ಸಂಪಾದಕರು, ‘ಚಿಂತನಶೀಲ ಸಮಾಜಮುಖಿ’ 111, ಕೃಷ್ಣಪ್ಪ ಕಾಂಪೌಂಡ್, ಲಾಲ್‍ಬಾಗ್ ರಸ್ತೆ, ಬೆಂಗಳೂರು-560027
email: samajamukhi2017@gmail.com Phones: 9606934018 / 9448520414 Website: www.samajamukhi.com

Leave a Reply

Your email address will not be published.