ಸಾಹಿತ್ಯ ಮತ್ತು ಸಾಮಾನ್ಯ ಜ್ಞಾನ

-ಎನ್.ಬೋರಲಿಂಗಯ್ಯ

ರಾಮಾಯಣ ಮಹಾಭಾರತಗಳು ಅವುಗಳ ಅನುಯಾಯಿಗಳಿಗೆ ಭಜನೆ ಮಾಡುವುದನ್ನು ಹೇಳಿಕೊಟ್ಟಿವೆ ಹೊರತು ಆ ಕೃತಿಗಳ ವೈಚಾರಿಕ ಆಕೃತಿಗಳು ಜನಸಮೂಹದಲ್ಲಿ ಹಾಸುಹೊಕ್ಕಾಗುವಂತೆ ನೋಡಿಕೊಳ್ಳಲಿಲ್ಲ. ಈ ಮಾತು ಕುವೆಂಪು ತೇಜಸ್ವಿ ಕಾರಂತರಾದಿ ಆಧುನಿಕ ಸೃಜನಶೀಲ ಲೇಖಕರಿಗೂ ಅನ್ವಯಿಸುತ್ತದೆ.

ಸಮಾಜಮುಖಿ ಜನೆವರಿ ಸಂಚಿಕೆಯಲ್ಲಿ ಸಾಹಿತ್ಯ ವಿಮರ್ಶೆಯನ್ನೂ ಗಂಭೀರವಾಗಿ ಗಣಿಸಿ “ವಿಮರ್ಶೆಗೆ ತಕ್ಕ ವಾತಾವರಣ ಏಕಿಲ್ಲ?” ಎಂಬ ಒಂದು ಒಳ್ಳೆಯ ಪ್ರಶ್ನೆಯೊಂದಿಗೆ ಒಳ್ಳೆಯ ಲೇಖನವೊಂದನ್ನು ಪ್ರಕಟಿಸಲಾಗಿದೆ. ಚರ್ಚೆಯನ್ನು ಆರಂಭಿಸಿರುವ ಓ.ಎಲ್.ನಾಗಭೂಷಣಸ್ವಾಮಿ ನಮ್ಮ ನಡುವಿನ ಒಬ್ಬ ಸಹೃದಯ ವಿಮರ್ಶಕ ಎನ್ನುವುದರಲ್ಲಿ ಅನುಮಾನವಿಲ್ಲ. ಶತಮಾನಗಳಷ್ಟು ಹಳೆಯ ಹೇಳಿಕೆಗಳನ್ನು ಮುಂದಿಟ್ಟುಕೊAಡು ವಿಮರ್ಶೆಗೆ ತಕ್ಕ ವಾತಾವರಣ (ಈಗಲೂ) ಏಕಿಲ್ಲಾ? ಎಂಬ ಪ್ರಶ್ನೆಯ ಹಾಸು ಬೀಸಿನ ಕಡೆಗೆ ಗಮನ ಸೆಳೆಯುತ್ತಿರುವುದೇ ಇದಕ್ಕೆ ಸಾಕ್ಷಿ.

ಇನ್ನು ಮುಂದಿನ ಸಂಚಿಕೆಗಳಲ್ಲಿ ಈ ಲೇಖನವನ್ನೂ ಒಳಗೊಂಡAತೆ ಚರ್ಚೆ ಮುಂದುವರಿಯಲು ಬೇಕಾದ ನನ್ನ ಈ ಕೆಳಗಿನ ಮೂರು ವಿಚಾರಗಳನ್ನು ಪೂರಕವಾಗಿ ಜೋಡಿಸಲು ಬಯಸಿದ್ದೇನೆ.

  1. ವಿಮರ್ಶೆಯಲ್ಲಿ ಸಾಮಾನ್ಯ ಜ್ಞಾನದ ಆವಶ್ಯಕತೆ.
  2. ಸೃಜನಶೀಲ ಸಾಹಿತ್ಯದ ಮಂಪರಿನಿAದ ನಮ್ಮ ಸಾಮಾನ್ಯ ಜನತೆಯನ್ನು

 ಹೊರತರಬೇಕಾಗಿದೆ.

  1. ಕನ್ನಡ ಸಾಹಿತ್ಯಕ್ಕೆ ಕನ್ನಡ ವಿಮರ್ಶಾ ಮಾರ್ಗವೊಂದು ಬೇಕಾಗಿದೆ.

ಮೊದಲಿಗೆ ಮೊದಲನೆಯದನ್ನೆ ನೋಡೋಣ. ಅಷ್ಟಕ್ಕೂ ವಿಮರ್ಶೆ ಎಂದರೇನು? ನಮ್ಮ ಸಾಮಾನ್ಯ ಜ್ಞಾನದ ವಿಸ್ತರಣೆ ತಾನೆ? ಆಗ ವಿಮರ್ಶೆ ಎನ್ನುವುದು ಯಾವುದಾದರೊಂದು ಗೊತ್ತಾದ ಕ್ಷೇತ್ರಕ್ಕೆ ಸಂಬAಧಪಡದೆ ಓ.ಎಲ್.ಎನ್. ಅವರು ತಿಳಿಸಿರುವಂತೆ ನಮ್ಮ ಜೀವನದ ಎಲ್ಲ ಕ್ಷೇತ್ರಕ್ಕೂ ಸಂಬAಧಪಟ್ಟ ಒಂದು ಸರ್ವಸಾಮಾನ್ಯ ವಿವೇಕವಾಗುತ್ತದೆ. ಜಗತ್ತಿನೆಲ್ಲ ಮಹಾಪುರುಷರೂ ದೊಡ್ಡವರಾಗಿರುವುದು ಅವರ ಸಾಮಾನ್ಯಜ್ಞಾನಕ್ಕೆ ಸಿಕ್ಕ ತರಬೇತಿ ಮತ್ತು ಅಭಿವ್ಯಕ್ತಿಸಲು ಸಿಕ್ಕ ಅವಕಾಶದಿಂದ ಅಷ್ಟೆ. ಇದನ್ನು ಹೆಚ್ಚು ಲಂಬಿಸದೆ ಸಾಹಿತ್ಯ ವಿಮರ್ಶೆಯಲ್ಲಿ ಸಾಮಾನ್ಯ ಜ್ಞಾನದ ಅಗತ್ಯ ಹೇಗಿದೆ ಎಂಬುದನ್ನು ಒಂದು ಉದಾಹರಣೆಯ ಮೂಲಕ ಮಂದಟ್ಟು ಮಾಡಿಕೊಳ್ಳುವುದಕ್ಕೆ ನಮ್ಮ ಮಹತ್ವದ ಕವಿ ಬೇಂದ್ರೆಯವರ ಜನಪ್ರಿಯ ಕವನ ‘ನಾನು’ ಎಂಬುದನ್ನೆ ನೋಡಬಹುದು. ಈ ಕವನದ ಮೂರನೆಯ ಪದ್ಯ:

ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ

ಜೀವAತ ಮಮತೆ ನಾನು

ಈ ಐದು ಐದೆಯರ ಪಂಚ ಪ್ರಾಣಗಳಾಗಿ

ಈ ಜೀವ ದೇವನಿಹನು

ನೇರವಾಗಿ ವಿಷಯಕ್ಕೆ ಬರುವುದಾದರೆ ಇಲ್ಲಿಯ “ನನ್ನ ತಾಯಿ”ಯನ್ನು ಇದುವರೆಗಿನ ಕನ್ನಡ ವಿಮರ್ಶೆ ಬೇಂದ್ರೆಯವರ ಸ್ವಂತ ತಾಯಿ ಪಾರ್ವತಿ ಅಥವಾ ಅಂಬಿಕೆ ಎಂಬAತೆಯೇ ಗ್ರಹಿಸಿ ವ್ಯಾಖ್ಯಾನಿಸಿದೆ. ಆದರೆ ‘ಈ ಐದು ಐದೆಯರ’ಲ್ಲಿ ಉಳಿದ ನಾಲ್ಕು -ವಿಶ್ವಮಾತೆ, ಭೂಮಿತಾಯಿ, ಭರತ ಮಾತೆ ಮತ್ತು ಕನ್ನಡ ತಾಯಿ- ಐದೆಯರನ್ನು ಗಮನಿಸಿ ಹೇಳುವುದಾದರೆ ಈ ‘ನನ್ನ ತಾಯಿ’ ಬೇಂದ್ರೆಯವರ ಸ್ವಂತ ತಾಯಿ ಪಾರ್ವತಿ ಖಂಡಿತ ಅಲ್ಲ. ಬದಲಿಗೆ ಧಾರವಾಡ. ಈ ತಿಳಿವಳಿಕೆಗೆ ಬೇಕಾಗಿರುವುದು ಸಾಮಾನ್ಯಜ್ಞಾನವೇ ಹೊರತು ವಿಶೇಷ ವಿಮರ್ಶಾಜ್ಞಾನವೇನೂ ಅಲ್ಲ. ಕವನದ ಕೊನೆಯ ಸಾಲು “ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ / ಅಂಬಿಕಾತನಯನಿವನು’ ಎಂಬುದು ಮತ್ತಷ್ಟು ಅಧಿಕಾರಯುತವಾಗಿ ಇದನ್ನು ಸ್ಪಷ್ಟ ಪಡಿಸುತ್ತದೆ.

ಈ ಸಾಮಾನ್ಯ ಜ್ಞಾನ ವಿಮರ್ಶೆಯಲ್ಲಿ ಮಾತ್ರವಲ್ಲ ಸೃಜನಶೀಲ ಕವಿಯಲ್ಲಿ ಕೂಡ ಉಪಯೋಗಕ್ಕೆ ಬರುತ್ತದೆ. ಉದಾಹರಣೆಗಾಗಿ ಬೇಂದ್ರೆಯವರದ್ದೆ ಮತ್ತೊಂದು ಪ್ರಖ್ಯಾತ ಕವನ ‘ನಾದಲೀಲೆ’ಯನ್ನೆ ಅವಲೋಕಿಸಬಹುದು. ಈ ಕವನವನ್ನು ಕುರಿತು ಜಿ.ಎಚ್.ನಾಯಕ್ ಮತ್ತು ಎಸ್.ಆರ್.ವಿಜಯಶಂಕರ್ ಅಂಥವರೂ ಪ್ರಾಯೋಗಿಕ ವಿಮರ್ಶೆ ಬರೆದಿದ್ದಾರೆ. ಕವನ ‘ನಾದಲೀಲೆ’ಯ ಮೊದಲ ಮೂರು ಪದ್ಯಗಳ ಮೂರು ಸಾಲುಗಳು:

  1. ತರಳ ಎರಳೆ ಚಿಗುರಚಿಗರೆ ಹೂವುಹೂವು ಹುಲ್ಲೆ
  2. ಕರೆವ ಕರುವು ಕುಣಿವ ಮಣಕ ತೊರೆವ ಗೋಗಭೀರೆ
  3. ಕಾದಲನೆಡೆ ಬೇಡ ಬಹಳು ಕಾದಲೆ ಹೂಮಾಲೆ

ಇಲ್ಲಿಯ ಮೊದಲನೆಯ ಎರಡು ಸಾಲುಗಳಲ್ಲಿ ಎರಡು ಪ್ರಾಣಿಗಳ ಸಂತತಿ ಅವುಗಳ ವಯೋಮಾನಕ್ಕನುಗುಣವಾಗಿ ನೇಯ್ಗೆಯಾಗಿರುವುದು ಮೇಲುನೋಟಕ್ಕೆ ಕಂಡುಬರುತ್ತದೆ. ಅದನ್ನು ಎರಡನೆಯ ಸಾಲು ಸ್ಪಷ್ಟವಾಗಿ ಸೂಚಿಸುತ್ತದೆ. ಅದರಂತೆ ಮೊದಲನೆಯ ಸಾಲಿನ ‘ತರಳ ಎರಳೆ’ ‘ಚಿಗುರ ಚಿಗರೆ’ ಅದಲು ಬದಲಾಗುವುದು ಅನಿವಾರ್ಯವಾಗುತ್ತದೆ. ಯಾಕಂದರೆ ತರಳಎರಳೆ ಚಿಗುರ ಚಿಗರೆಗಿಂತ ದೊಡ್ಡದು. ಎರಡನೆಯ ಸಾಲಿನಲ್ಲಿ ‘ಕರೆವ ಕರುವು’ ‘ಕುಡಿವ ಕರುವು’ ಆಗಿ ಬದಲಾದರೆ ಹೆಚ್ಚು ಸೂಕ್ತವಾಗುತ್ತದೆ. ಇದನ್ನು ಸರಿಪಡಿಸಿಕೊಳ್ಳಲು ಸ್ವತಃ ಕವಿಗೆ ಸಾಮಾನ್ಯಜ್ಞಾನ ಸಾಕಾಗುತ್ತಿತ್ತು. ಕವನದ ವಿಮರ್ಶಕರಾರೂ ಆ ಕಡೆಗೆ ತಿರುಗಿ ಕೂಡ ನೋಡದಿರುವುದು ಆಶ್ಚರ್ಯಕರವಾಗಿದೆ. ಇಲ್ಲಿಯ ಮೂರನೆಯ ಸಾಲಿನ ‘ಕಾದಲನೆಡೆ’ಯಲ್ಲಿನ ‘ಎಡೆ’ ಶಬ್ದವನ್ನು ಯಾರೂ ಸರಿಯಾಗಿ ಗಮನಿಸಿಯೇ ಇಲ್ಲ. ಎಡೆ ಎಂದರೆ ಪ್ರಸಾದ, ಹತ್ತಿರ ಮತ್ತು ಜಾಗ ಎಂಬರ್ಥಗಳಿವೆ. ಕವಿ ಬೇಂದ್ರೆ ಈ ಮೂರೂ ಅರ್ಥಗಳನ್ನು ಏಕತ್ರ ದುಡಿಸಿಕೊಳ್ಳುತ್ತಿರುವ ಪರಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಮಾತ್ರ ವಿಶೇಷ ವಿಮರ್ಶಾಜ್ಞಾನದ ಅಗತ್ಯವಿದೆ.

ಇನ್ನು ಎರಡನೆಯ ವಿಚಾರ ನನಗೆ ಈ ಮೊದಲನೆಯದಕ್ಕಿಂತ ಹೆಚ್ಚು ಮುಖ್ಯವಾಗಿ ಕಾಣಿಸುತ್ತದೆ. ಹೇಗೆಂದರೆ, ಜಗತ್ತಿನ ಎಲ್ಲ ಸಾಹಿತ್ಯ-ಕಲೆಗಳು ಜಗತ್ತಿನ ಎಲ್ಲ ಜನತೆಯ ಸಾಮಾನ್ಯಜ್ಞಾನದ ಮೇಲೆ ಯಾವ ಬಗೆಯ ಮಂಪರು ಕವಿಸಿವೆಯೆಂದರೆ ಅವರನ್ನು ಅದರಿಂದ ಹೊರತಂದು ಸ್ವತಂತ್ರವಾಗಿ ಯೋಚಿಸಿ ವಿಚಾರವಂತರಾಗಿ ಬದುಕುವಂತೆ ಮಾಡುವುದೇ ಅಸಾಧ್ಯವಾಗಿಬಿಟ್ಟಿದೆ. ನಮ್ಮ ಭಾರತೀಯ ಮತಧರ್ಮ ಗ್ರಂಥಗಳ ಆರಾಧನೆಯ ಸ್ವರೂಪವನ್ನೆ ಈ ದೃಷ್ಟಿಯಿಂದ ನೋಡಬಹುದು. ನಮ್ಮ ರಾಮಾಯಣ ಮಹಾಭಾರತಗಳಂತೂ ಅವುಗಳ ಅನುಯಾಯಿಗಳಿಗೆ ಭಜನೆ ಮಾಡುವುದನ್ನು ಹೇಳಿಕೊಟ್ಟಿವೆ ಹೊರತು ಆ ಕೃತಿಗಳ ವೈಚಾರಿಕ ಆಕೃತಿಗಳು ಜನಸಮೂಹದಲ್ಲಿ ಹಾಸುಹೊಕ್ಕಾಗುವಂತೆ ನೋಡಿಕೊಳ್ಳಲಿಲ್ಲ. ಈ ಮಾತು ಕುವೆಂಪು ತೇಜಸ್ವಿ ಕಾರಂತರಾದಿ ನಮ್ಮ ಆಧುನಿಕ ಸೃಜನಶೀಲ ಲೇಖಕರಿಗೂ ನಿಜ.

ಈ ಯಾವ ಲೇಖಕರ ವೈಚಾರಿಕ ಸಂವೇದನೆಗಳಿಗೆ ಮನಸೋತ ಜನಾಂಗ ನಮ್ಮಲ್ಲಿಲ್ಲ. ಒಂದೆ ಮಾತಿನಲ್ಲಿ ಹೇಳುವುದಾದರೆ ನಮ್ಮ ಎ.ಎನ್.ಮೂರ್ತಿರಾಯರ ‘ದೇವರು’ ಎಂಬ ನಾಸ್ತಿಕ ಪುಸ್ತಕವನ್ನು ಮಾರಿ ಬಂದ ಹಣವನ್ನೆಲ್ಲಾ ರಾಮಮಂದಿರ ನಿರ್ಮಾಣಕ್ಕಾಗಿ ರವಾನಿಸುತ್ತಿದ್ದಾರೆಂದು ಯಾರಾದರೂ ಹೇಳಿದರೆ ಅದು ಸುಳ್ಳೂ ಆಗುವುದಿಲ್ಲ, ಉತ್ಪೆçÃಕ್ಷೆಯೂ ಆಗುವುದಿಲ್ಲ. ಅಷ್ಟರಮಟ್ಟಿಗೆ ನಮ್ಮ ಎಲ್ಲ ಬಗೆಯ, ಎಲ್ಲ ವರ್ಗದ ಸೃಜನಶೀಲ ಕಲೆ ನಮ್ಮ ಒಟ್ಟಾರೆ ಸಾಮಾನ್ಯಜ್ಞಾನವನ್ನೆ ಜಡ್ಡುಗಟ್ಟಿಸಿ ಬಿಟ್ಟಿದೆ. (ಮತ್ತೊಮ್ಮೆ ಬಸವಣ್ಣನ ಆ ವಚನದ ಆ ಸಾಲೇ ನೆನಪಾಗುತ್ತದೆ “ತನ್ನ ಬಣ್ಣಿಸಬೇಡ ಇದರ ಹಳಿಯಲು ಬೇಡ”) ಈ ವೈಜ್ಞಾನಿಕಯುಗದಲ್ಲಿಯೂ ಎಂಥ ವಿಪರ್ಯಾಸ. ನೀವೇ ನೋಡಿ.

ಇನ್ನು ಮೂರನೆಯದು ಈ ಮೇಲಿನ ಎರಡಕ್ಕಿಂತಲೂ ಹೆಚ್ಚು ಸೂಕ್ಷö್ಮವಾದುದು ಮತ್ತು ಆಳವಾದುದು ಹಾಗೂ ಸದ್ದಿಲ್ಲದೆ ಕೀಳರಿಮೆಯ ತರ-ತಮಗಳನ್ನು ಸ್ಥಾಪಿಸುವಂಥದು. ಕನ್ನಡ ಸಾಹಿತ್ಯಕ್ಕೊಂದು ಕನ್ನಡ ಸಾಹಿತ್ಯ ವಿಮರ್ಶಾಮಾರ್ಗ ಬೇಕಾಗಿದೆ ಎಂಬ ಈ ಹೇಳಿಕೆಯನ್ನು ಕನ್ನಡ ಸಾಹಿತ್ಯಕ್ಕೊಂದು ಕನ್ನಡದ್ದೇ ಆದ ಸಾಹಿತ್ಯವಿಮರ್ಶಾಮಾರ್ಗ ಬೇಕಾಗಿದೆ ಎಂದು ಹೇಳುವುದರ ಮೂಲಕ ಸ್ಪಷ್ಟ ಪಡಿಸಬಹುದೇನೋ. ಅಂದರೆ ನನ್ನ ಮಾತಿನ ಅರ್ಥ ಇಷ್ಟೆ. ಆಧುನಿಕ ಎನ್ನಬಹುದಾದ ಕನ್ನಡ ಸಾಹಿತ್ಯ ತನ್ನ ಆರಂಭದಿAದಲೂ ಎಷ್ಟೇ ಪಾಶ್ಚಾತ್ಯ ಸಾಹಿತ್ಯ ಸಂಸ್ಕೃತಿಗಳಿAದ ಪ್ರಭಾವಿತವಾಗಿದ್ದರೂ ದೇಸೀಮಾರ್ಗದ ತನ್ನತನವನ್ನು ಬಿಟ್ಟುಕೊಡದೆ ನಮ್ಮದೆ ಆದ ಸಾಂಸ್ಕೃತಿಕ ಚಹರೆಗಳಿಗೆ ರೂಪಗೊಟ್ಟಿದೆ.

ಮಾಸ್ತಿ, ಬೇಂದ್ರೆ, ಕುವೆಂಪು, ಕಾರಂತ ಮುಂತಾದವರು ಈ ಕೆಲಸವನ್ನು ಗಟ್ಟಿಮುಟ್ಟಾಗಿಯೇ ಮಾಡಿದ್ದಾರೆ. ನಮ್ಮ ಸಾಹಿತ್ಯದ ಆರಂಭದ ದಿನಗಳಲ್ಲಿ ಬೇಂದ್ರೆ, ಕುವೆಂಪು, ಪುತಿನ ಮುಂತಾದವರು ತಮ್ಮ ಸಾಹಿತ್ಯದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದಕ್ಕೆ ತಮ್ಮದೇ ಆದ ಮೀಮಾಂಸಾ ರೂಪದ ವಿಮರ್ಶಾ ಮಾಪನವೊಂದನ್ನು ಕಂಡುಕೊAಡಿದ್ದರು. ಕುವೆಂಪು ಅವರ ದರ್ಶನ ವಿಮರ್ಶೆಯನ್ನೋ ಬೇಂದ್ರೆಯವರ ಸಾಹಿತ್ಯದ ವಿರಾಟ್ ಸ್ವರೂಪವನ್ನೋ ಓದುತ್ತಿದ್ದರೆ ಓದುಗನಿಗೊಂದು ಆತ್ಮೀಯ ವಾತಾವರಣ ಉಂಟಾಗುತ್ತಿತ್ತು.

ಆದರೆ ಕಳೆದ ಶತಮಾನದ ಉತ್ತರಾರ್ಧದಲ್ಲಿ ಬಂದ ನವ್ಯ ಪಂಥದವರು ಪೂರ್ತಿಯಾಗಿ ಈ ಮಾರ್ಗವನ್ನೆ ಬದಲಿಸಿದಂತೆ ಪಾಶ್ಚಾತ್ಯ ಸಾಹಿತ್ಯ ವಿಮರ್ಶಾ ಸಿದ್ಧಾಂತ ಮತ್ತು ಪರಿಭಾಷೆಯ ಮೂಲಕ ಆ ಜಾಗವನ್ನು ಆಕ್ರಮಿಸಿಕೊಂಡುಬಿಟ್ಟರು. ಕನ್ನಡ ಭಾಷೆ ಮತ್ತು ಸಾಹಿತ್ಯ ವಿಮರ್ಶೆಯ ದುರದೃಷ್ಟ ಎಂಬAತೆ ಆ ಎಲ್ಲರೂ ಬಹುತೇಕ ಇಂಗ್ಲಿಷ್ ಭಾಷಾಧ್ಯಾಪಕರೋ ಅಥವಾ ಇಂಗ್ಲಿಷ್ ಭಾಷೆಯ ಹಿನ್ನೆಲೆಯವರೋ ಆಗಿದ್ದುದು ಈ ಅನಿವಾರ್ಯ ಬಿಕ್ಕಟ್ಟನ್ನು ಸೃಷ್ಟಿಸಿತು. ಆ ವಿಮರ್ಶೆಯನ್ನು ಓದುತ್ತಿದ್ದರೆ ನಮ್ಮದೇ ಆದೊಂದು ಸಾಂಸ್ಕೃತಿಕ ಆವರಣವೇ ಸೃಷ್ಟಿಯಾಗುವುದಿಲ್ಲ. ನಮ್ಮ ಸೃಜನಶೀಲ ಸಾಹಿತ್ಯದ ಬಗೆಗಿನ ತಮ್ಮ ಅಭಿಪ್ರಾಯಗಳನ್ನು

ಸಮರ್ಥಿಸುವುದಕ್ಕೆ ಅವರು ಹೆಸರಿಸುವ ವಿಮರ್ಶಕರು ಬಹುತೇಕ ಪಾಶ್ಚಾತ್ಯರೇ ಆಗಿರುವುದು ಈ ಪರಿಸ್ಥಿತಿಯ ಮೂಲವಾಗುತ್ತದೆ. ಕನ್ನಡ ಹಿನ್ನೆಲೆಯ ಒಬ್ಬಿಬ್ಬ ವಿಮರ್ಶಕರು -ಉದಾಹರಣೆಗೆ ಡಿ.ಆರ್.ನಾಗರಾಜ್, ಎಚ್.ಎಸ್.ರಾಘವೇಂದ್ರರಾವ್- ಯು.ಆರ್.ಅನಂತಮೂರ್ತಿಯವರನ್ನೋ ಜಿ.ಎಸ್.ಅಮೂರರನ್ನೋ ನೆನಪಿಸುವ ರೀತಿಯಲ್ಲಿ ಬರೆಯತೊಡಗಿದರೇ ಹೊರತು ಕುವೆಂಪು, ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ ಮುಂತಾದ ಅಚ್ಚಗನ್ನಡ ಪ್ರಜ್ಞೆಯ ವಿಮರ್ಶನ ಕಲೆಯನ್ನು ಈ ನೆಲಕ್ಕೆ ಹತ್ತಿರವಾಗಿ ಕಟ್ಟುವ ಕೆಲಸದಿಂದ ದೂರವಾಗಿಬಿಟ್ಟರು. ಈ ಕಾರಣಕ್ಕಾಗಿಯೂ ಕನ್ನಡದ ಜನತೆಯ ಸಾಮಾನ್ಯಜ್ಞಾನವನ್ನು ವಿಸ್ತರಿಸುವ ತನ್ನ ನೈತಿಕ ಕೈಂಕರ್ಯದಿAದಲೂ -ಈಗ ನಾವು ಯಾವುದನ್ನು ಕನ್ನಡ ವಿಮರ್ಶೆಯೆಂದು ಕರೆಯುತ್ತಿದ್ದೇವೆಯೋ- ಅದು ದೂರಮಾಡಿ ಬಿಟ್ಟಿದೆ.

ಹಾಗಾಗಿ ಮನುಷ್ಯನ ಸಾಮಾನ್ಯಜ್ಞಾನವನ್ನು ವಿಸ್ತರಿಸಿ ಜಾಗತಿಕ ಮಟ್ಟದಲ್ಲಿ ಅವನಿಗೆ ಬೇಕಾಗಿರುವ ಒಂದು ನವನವೀನ ಸಹಕಾರ ಪ್ರಜ್ಞೆಯ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವ ವಿಮರ್ಶಾ ಮಾರ್ಗವೊಂದು ಭಾರತೀಯ -ಅಷ್ಟೇಕೆ ಜಗತ್ತಿನ- ಎಲ್ಲ ಭಾಷೆಗಳ ಸಂದರ್ಭದಲ್ಲಿಯೂ ನಿರ್ಮಾಣವಾಗಬೇಕಾಗಿದೆ. ಅಂಥ ಆತ್ಮೀಯ ವಾತಾವಣದಲ್ಲಿ ಮಾತ್ರ ಏನನ್ನಾದರೂ ಕಲಿಯಬಹುದು, ಕಲಿಸಬಹುದು.

Leave a Reply

Your email address will not be published.