ಸಾಹಿತ್ಯ ಸಮ್ಮೇಳನದ ಠರಾವಿನಂತೆ…!

-ಶ್ರೀನಿವಾಸ ಜೋಕಟ್ಟೆ

ಇದೀಗ ಮತ್ತೆ 2021ರ ನಿರೀಕ್ಷೆಗಳ ಸಂಕಲ್ಪ ಮಾಡುವ ಸಮಯ ಬಂದಿದೆ. ಈ ಸಲ ಹಿಂದಿನ ವರ್ಷದ ಸಿಂಹಾವಲೋಕನಕ್ಕೆ ಯಾವ ಅರ್ಥವೂ ಉಳಿದಿಲ್ಲ. ಹಾಗೆನೋಡಿದರೆ ಸಂಕಲ್ಪ ಮಾಡಲು ಯಾವುದೇ ಮುಹೂರ್ತ ಬೇಡ, ಅದಕ್ಕೊಂದು ಸ್ಟಾಟಿಂಗ್ ಪಾಯಿಂಟ್ ಎನ್ನುವುದಿದ್ದರೆ ಸಾಕು.

2021ರ ಪ್ರಮುಖ ನಿರೀಕ್ಷೆ ಏನು ಅಂದರೆ ಒಂದೇ ಒಂದು- ಅದು, ಕೊರೊನಾ ಮಹಾಮಾರಿ ಈ ವರ್ಷ ವಿಜೃಂಭಿಸದಿರಲಿ! ಕೊರೊನಾ ಮತ್ತೆ ತನ್ನ ಅಲೆ ಕಾಣಿಸಿದರೆ ಎಲ್ಲ ಲೆಕ್ಕಾಚಾರಗಳು ಉಲ್ಟಾ ಆದೀತು. ಈ ಎಚ್ಚರಿಕೆ ಇರಲೇಬೇಕು. ಟೆಕ್ನಾಲಜಿ ನಮ್ಮನ್ನು ಬದುಕಿಸಬಹುದು ಎಂಬ ಭ್ರಮೆ ನಾನಂತೂ ಇಟ್ಟುಕೊಂಡಿಲ್ಲ. ಆದರೂ ಅದನ್ನು ದಾಟಿ ಕೆಲವು ನಿರೀಕ್ಷೆಗಳು ಇವೆ.

ಭಾರತ ಯುವಜನತೆಯ ದೇಶ ಎಂದು ಭಾಷಣಗಳಲ್ಲಿ ಹೆಮ್ಮೆಪಡುವ ನಮಗೆ ಉದ್ಯೋಗದ ಏನಾದರೂ ಆಶಾ ಭಾವನೆಗಳು ಈ ವರ್ಷ ಸಿಗಬಹುದೇ? ಪ್ರತೀ ವರ್ಷ ಮುಂಬಯಿ ಕರ್ನಾಟಕ ಸಂಘದ ಪತ್ರಿಕೆಯ ಜನವರಿ ತಿಂಗಳ ಸಂಪಾದಕೀಯದಲ್ಲಿ ನಾನು ಹೊಸ ವರ್ಷದ ನಿರೀಕ್ಷೆಗಳನ್ನು ಬರೆಯುತ್ತಿದ್ದೆ. ಆದರೆ 2020ನೇ ವರ್ಷದ ನಿರೀಕ್ಷೆಗಳು ಅದನ್ನೆಲ್ಲ ಪಾತಾಳಕ್ಕೆ ಎಸೆದಿವೆ. ಹಾಗಂತ ಕನಸುಗಳನ್ನು ಇರಿಸುತ್ತಲೇ ಬಂದವನು, ಭ್ರಮೆಗಳನ್ನಲ್ಲ.

ಪ್ರಕೃತಿಯ ಎದುರು ಈವಾಗ ನಿರೀಕ್ಷೆಗಳನ್ನು ಇರಿಸುವುದೂ ಅಷ್ಟು ಸುಲಭವಿಲ್ಲ ಎಂಬ ಅನುಭವ ಪಡೆದ ನಂತರವಾದರೂ ಸ್ವಲ್ಪ ಎಚ್ಚರಿಕೆ ಇರಿಸಬೇಕಲ್ಲ? ಪೂರಾ ದೇಶವೇ ನಾನಾ ಕಾರಣಗಳಿಗೆ ಸಂಕಷ್ಟದಲ್ಲಿರುವಾಗ, ಸಮಾಜವೇ ಅನಾರೋಗ್ಯಕ್ಕೆ ತುತ್ತಾಗಿರುವಾಗ, ಭ್ರಷ್ಟರು ಅದರಲ್ಲಿ ಕೂಡಾ ತಮ್ಮ ಪಾಲನ್ನು ಕಬಳಿಸುವ ಪ್ರವೃತ್ತಿ ಧಾರಾಳವಾಗಿ ಕಾಣಿಸುತ್ತಿದ್ದಾರೆ. ಇಂತಹ ಸಮಾಜದ ನಡುವೆ ಇರುವ ನಾವು ಹೊಸದಾಗಿ ಏನು ನಿರೀಕ್ಷೆ ಇರಿಸುವುದು?

ಈ ಸಂದರ್ಭ ನನಗೆ ಪ್ರತೀ ಬಾರಿ ಸಾಹಿತ್ಯ ಸಮ್ಮೇಳನದ ಕೊನೆಯಲ್ಲಿ ಠರಾವು ಮಂಡಿಸಿದ ದೃಶ್ಯ ನೆನಪಾಗುತ್ತದೆ. ಮುಂದಿನ ಸಮ್ಮೇಳನಕ್ಕೆ ಮತ್ತೆ ಹೊಸ ಠರಾವು ಮಂಡನೆ. ಅದರಲ್ಲಿ ಎಷ್ಟು ಅನುಷ್ಟಾನಕ್ಕೆ ಬರುತ್ತವೆ? ಈಗೀಗ ನನಗೂ ಹೊಸ ವರ್ಷದ ನಿರೀಕ್ಷೆಗಳು ಅದಕ್ಕಿಂತ ಭಿನ್ನ ಅಂತೇನೂ ಅನ್ನಿಸುವುದಿಲ್ಲ.

ಹಾಗಿದ್ದೂ ಮೊದಲಿಗೆ ಕೊರೊನಾ ಮಹಾಮಾರಿ ಮಾಯವಾಗಲಿ, ವ್ಯಾಕ್ಸಿನ್ ಎಲ್ಲ ಜನರಿಗೆ ಸಿಗಲಿ ಎನ್ನುವುದು ಮಾತ್ರ ಪ್ರಮುಖ ನಿರೀಕ್ಷೆ.

ಜೊತೆಗೆ ಹಿಂದಿನAತೆ ಎಲ್ಲ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಡಿಮೆ ಆಗಲಿ, ಖಾಸಗಿ ಶಾಲೆಗಳ ಫೀಸ್ ಕಡಿಮೆ ಮಾಡಲಿ, ಕೃಷಿ ಕಾನೂನು ರದ್ದುಗೊಳ್ಳಲಿ, ಪೊಲೀಸರು ಮಾನವೀಯವಾಗಿ ಕೆಲಸ ಮಾಡಲಿ, ಮಳೆಬೆಳೆ ಸರಿಯಾಗಿ ಕಂಡುಬರಲಿ…. ಇಂಥ ಯಾವುದೇ ನಿರೀಕ್ಷೆ ಈ ಬಾರಿ ನನ್ನಲ್ಲಿಲ್ಲ!

ನಾನೊಂದು ಕಥೆ ಹೇಳುತ್ತೇನೆ:

ದೇಶದ ಹಲವೆಡೆಗಳಲ್ಲಿ ಕೆಲಸ ಮಾಡಿದ ಮುಂಬೈಯಲ್ಲಿ ಫಿಲ್ಮ್ ಲೈನ್‌ನಲ್ಲಿದ್ದ ಬದ್ರಿನಾರಾಯಣ ಎಂಬವರು 2016ರಲ್ಲಿ ಎಲ್ಲವನ್ನು ಬಿಟ್ಟು ಒರಿಸ್ಸಾದ ತಮ್ಮ ಊರಿಗೆ ಹೋದರು. ಮಂಗ ನಾಯಿ ಮುಂತಾದ ಸಾಕುಪ್ರಾಣಿಗಳ ಜೊತೆ ತಮ್ಮ ಕುಟುಂಬ ಆಟವಾಡುವ ಆ ಬದುಕನ್ನು ವೀಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಹಾಕಿದರು. ಅವರ ಪತ್ನಿಯು ವಾನರರಿಗೆ ಕಾಳು ತಿನ್ನಿಸುತ್ತಿರುವ, ಆಟವಾಡುವ.. ಹೀಗೆ ಅನೇಕ ವಿಡಿಯೋ ಯೂಟ್ಯೂಬ್ ನಲ್ಲಿ ಹಾಕಿದ್ದು ಭಾರೀ ಜನಪ್ರಿಯವಾಯ್ತು. ನೋಡುನೋಡುತ್ತಿದ್ದಂತೆ 5ವರ್ಷಗಳಲ್ಲಿ 15ಲಕ್ಷ 60 ಸಾವಿರಕ್ಕೂ ಹೆಚ್ಚು ಸಬ್ ಸ್ಕೆçöÊಬ್ ಹೊಂದಿದರು. ಇಂದು ಪ್ರತಿ ತಿಂಗಳು ಅವರಿಗೆ ಯೂಟ್ಯೂಬ್‌ನಿಂದ 60ರಿಂದ 70 ಸಾವಿರ ಸಿಗುತ್ತದೆ.

ಹೊಸವರ್ಷದ ನಿರೀಕ್ಷೆಯ ಸಮಯ ಬದ್ರಿನಾರಾಯಣರ ಈ ಯಶಸ್ಸಿನ ಕಥೆಯೂ ನೆನಪಾಗುತ್ತದೆ. ಉದ್ಯೋಗದ ಬೆನ್ನು ಹತ್ತಿ ಸಿಗದವರು ನಿರಾಶೆಯ ಮಾತುಗಳನ್ನು ಆಡುತ್ತಾರಲ್ಲ, ಆವಾಗಲೆಲ್ಲ ಈ ಘಟನೆ ಯಾಕೋ ಎದುರಾಗುತ್ತದೆ. ಬದಲಾವಣೆಯನ್ನು ನಾವು ಸ್ವೀಕರಿಸಬೇಕು. ಈ ಸ್ವೀಕರಿಸುವ ಸಂಕಲ್ಪವೇ ನಮ್ಮನ್ನು ಮುಂದಕ್ಕೆ ಕೊಂಡು ಹೋಗುತ್ತದೆ.

ನಾನು ಪತ್ರಿಕಾರಂಗದಲ್ಲಿ ಇರುವವನು. ಮುದ್ರಣ ಮಾಧ್ಯಮ ಕೊರೊನಾ ಕಾಲದಲ್ಲಿ ಹಲವು ಬದಲಾವಣೆಗಳನ್ನು ಕಾಣಿಸಿತು, ಹೊಡೆತ ಅನುಭವಿಸಿತು. ಆದರೆ ದೃಶ್ಯ (ಟಿವಿ) ಮಾಧ್ಯಮ ವಿಜೃಂಭಿಸಿತ್ತು. ನನ್ನ ಕ್ಷೇತ್ರದ ಮಾಮೂಲಿ ನಿರೀಕ್ಷೆಗಳನ್ನೂ ಇರಿಸಲು ಸಾಧ್ಯವಾಗುತ್ತಿಲ್ಲ. ಕೊರೊನಾ ನೆಪದಿಂದ ಕೆಲವು ಪತ್ರಿಕೆಗಳ ಮಾಲಕರು ಸಿಕ್ಕಿದ ಛಾನ್ಸ್ ಎಂದು ನೌಕರರ ಸಂಖ್ಯೆ ಕಡಿತ ಮಾಡಿದರು.

ಪತ್ರಿಕಾ ರಂಗದಲ್ಲಿರುವ ಅನೇಕ ಮಿತ್ರರು ಕೆಲಸ ಕಳಕೊಂಡದ್ದು, ಹಲವರು ವೆಬ್ ಪತ್ರಿಕೆ, ಯುಟ್ಯೂಬ್ ಚಾನಲ್ ಶುರುಮಾಡಿ ತಾವು ಇನ್ನೂ ಜೀವಂತ ಇದ್ದೇವೆ ಅಂತ ತೋರಿಸುತ್ತಿದ್ದಾರೆ.

ಆದರೆ ಅದರಿಂದ ಬದುಕು ನಡೆಸಲು ಸಾಧ್ಯವೇ? ಬದ್ರಿನಾರಾಯಣ ಅಂಥವರ ಮಂಗನಾಯಿಗಳ ಆಟದ ಯುಟ್ಯೂಬ್ ಹೇಗೆ ಗೆದ್ದಿತು ಎಂದು ಮತ್ತೊಮ್ಮೆ ನನಗೆ ನೆನಪಾಗುತ್ತಿರುವುದು ಯಾಕೆಂದೇ ನನಗೆ ಅರ್ಥ ಆಗುತ್ತಿಲ್ಲ!

 

Leave a Reply

Your email address will not be published.