ಸಿಎಎ: ಕಲ್ಪಿತ ಗುಮ್ಮನ ಕರೆಯುವುದೇಕೆ?

ಈ ವಿಷಯದ ಕುರಿತಾದ ಚರ್ಚೆಯನ್ನು, ಪೌರತ್ವದ ಹೊಸ ವ್ಯಾಖ್ಯೆಯ ಅಗತ್ಯ ಪ್ರಸ್ತುತ ಸಂದರ್ಭದಲ್ಲಿ ಇತ್ತೇ? ಎಂಬ ಪ್ರಶ್ನೆಯೊಂದಿಗೇ ಆರಂಭಿಸಬೇಕಾಗುತ್ತದೆ. ಪೌರತ್ವದ ವ್ಯಾಖ್ಯಾನ ವಲಸೆ ಸಮಸ್ಯೆಯ ಜೊತೆ ಬೆಸೆದುಕೊಂಡಿದೆ. ವಲಸೆ ಸಮಸ್ಯೆಗೆ ಸಾಂಸ್ಕೃತಿಕ, ಆರ್ಥಿಕ ಮತ್ತು ಭದ್ರತೆಯ ಆಯಾಮ ಇದೆ.

ಸುಧೀಂದ್ರ ಬುಧ್ಯ

ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ‘ಪೌರತ್ವ ತಿದ್ದುಪಡಿ ಕಾಯ್ದೆ 2019’, ದೇಶವ್ಯಾಪಿ ಸಂಚಲನ ಉಂಟುಮಾಡಿದೆ. 1955ರ ಪೌರತ್ವ ಕಾಯಿದೆಗೆ ತಂದ ಈ ತಿದ್ದುಪಡಿ ಬೌದ್ಧಿಕ ವಲಯದಲ್ಲಿ ಪರ ಹಾಗೂ ವಿರೋಧದ ಚರ್ಚೆಯನ್ನು ಹುಟ್ಟುಹಾಕಿರುವುದಷ್ಠೆ ಅಲ್ಲದೇ, ದೇಶವ್ಯಾಪಿ ಜನ ಬೀದಿಗಿಳಿದು ಪ್ರತಿಭಟಿಸುವುದಕ್ಕೆ ಕಾರಣವಾಗಿದೆ.

ತಿದ್ದುಪಡಿಗೆ ತೀವ್ರ ವಿರೋಧ ದಾಖಲಾಗುತ್ತಿದ್ದಂತೆಯೇ, ಕಾಯ್ದೆಯನ್ನು ಬೆಂಬಲಿಸುವವರು ಕೂಡ ಸಭೆ, ಜಾಥಾಗಳನ್ನು ನಡೆಸುತ್ತಿದ್ದಾರೆ. ಈ ತಿದ್ದುಪಡಿಯನ್ನು ವಿರೋಧಿಸುತ್ತಿರುವವರ ಮುಖ್ಯ ಆಕ್ಷೇಪ `ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿ ಈ ನಿರ್ಣಯ ತರಲಾಗಿದೆ’ ಎಂಬುದಾಗಿದೆ. ಪರವಾಗಿರುವವರು ನೆರೆಯ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿವರಗಳನ್ನು ಬಿಚ್ಚಿಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಎರಡರ ನಡುವೆ ಕಾಯ್ದೆಯನ್ನು ತಮ್ಮ ಸ್ವಹಿತಾಸಕ್ತಿಗೆ ಪೂರಕವಾಗಿ ವ್ಯಾಖ್ಯಾನಿಸುವ, ವಾಸ್ತವವನ್ನು ಮರೆ ಮಾಚುವ, ಕಲ್ಪಿತ ಸಂಗತಿಗಳನ್ನು ಮುಂದಿಟ್ಟು ಜನರನ್ನು ಭೀತಿಗೆ ಒಳಪಡಿಸುವ ಪ್ರಯತ್ನಗಳೂ ನಡೆಯುತ್ತಿವೆ.

ಈ ವಿಷಯದ ಕುರಿತಾದ ಚರ್ಚೆಯನ್ನು, ಪೌರತ್ವದ ಹೊಸ ವ್ಯಾಖ್ಯೆಯ ಅಗತ್ಯ ಪ್ರಸ್ತುತ ಸಂದರ್ಭದಲ್ಲಿ ಇತ್ತೇ? ಎಂಬ ಪ್ರಶ್ನೆಯೊಂದಿಗೇ ಆರಂಭಿಸಬೇಕಾಗುತ್ತದೆ. ಪೌರತ್ವದ ವ್ಯಾಖ್ಯಾನ ವಲಸೆ ಸಮಸ್ಯೆಯ ಜೊತೆ ಬೆಸೆದುಕೊಂಡಿದೆ. ವಲಸೆ ಸಮಸ್ಯೆಗೆ ಸಾಂಸ್ಕೃತಿಕ, ಆರ್ಥಿಕ ಮತ್ತು ಭದ್ರತೆಯ ಆಯಾಮ ಇದೆ. ಅಕ್ರಮ ವಲಸೆ, ನುಸುಳುವಿಕೆ ಭಾರತದ ಗಡಿ ರಾಜ್ಯಗಳ ಬಹುದೊಡ್ಡ ಪ್ರದೇಶಗಳಲ್ಲಿ ದೇಶಿ ಸಂಸ್ಕೃತಿ ಮತ್ತು ಸಮುದಾಯಗಳನ್ನು ನಾಶ ಮಾಡಿದೆ. ಜೊತೆಗೆ ಜನಸಾಂದ್ರತೆಯ ದೇಶವಾಗಿರುವ ಭಾರತ, ವಿದೇಶಿಯರನ್ನು ಸ್ವೀಕರಿಸುವಲ್ಲಿ ಒಂದು ಮಾನದಂಡ ಇರಿಸಿಕೊಳ್ಳಬೇಕಾದ ಅಗತ್ಯವಿದೆ.

1955ರ ಪೌರತ್ವ ಕಾಯಿದೆಗೆ ಈಗ ತಂದಿರುವ ತಿದ್ದುಪಡಿಯಲ್ಲಿ ‘ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಗಾನಿಸ್ತಾನಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದ ಹಿಂದೂ, ಸಿಖ್, ಕ್ರೈಸ್ತ, ಜೈನ, ಬೌದ್ಧ ಹಾಗೂ ಪಾರ್ಸಿ ಜನಾಂಗದವರು 2014ರ ಡಿಸೆಂಬರ್ 31ಕ್ಕೆ ಮುನ್ನ ಭಾರತ ಪ್ರವೇಶಿಸಿದ್ದರೆ ಅವರಿಗೆ ಸರಳವಾಗಿ, ತ್ವರಿತಗತಿಯಲ್ಲಿ ಭಾರತದ ಪೌರತ್ವ ನೀಡಲಾಗುವುದು’ ಎಂದು ಹೇಳಲಾಗಿದೆ. ಭಾರತದ ಪೌರತ್ವ ಪಡೆಯಲು ಅಗತ್ಯವಿದ್ದ ‘12 ವರ್ಷಗಳ ವಾಸ್ತವ್ಯ’ ಎನ್ನುವ ವ್ಯಾಖ್ಯಾನವನ್ನು ಈ ಸಮುದಾಯಗಳ ವಿಷಯದಲ್ಲಿ ‘5 ವರ್ಷಗಳು’ ಎಂದು ಬದಲಾಯಿಸಿರುವುದು ಗುರುತಿಸಬೇಕಾದ ಅಂಶ. ಹಾಗಾಗಿ ಈಗಾಗಲೇ ಭಾರತದ ಪೌರರಾಗಿರುವ ಯಾರಿಗೂ, ಅವರು ಯಾವುದೇ ಧರ್ಮಕ್ಕೆ ಸೇರಿರಲಿ ಈ ತಿದ್ದುಪಡಿಯಿಂದ ಯಾವುದೇ ತೊಂದರೆಯಿಲ್ಲ.

ಈ ಬಗ್ಗೆ ಎದ್ದಿರುವ ಆಕ್ಷೇಪಗಳಲ್ಲಿ ಪ್ರಮುಖವಾದದ್ದು, ‘ಭಾರತ ಪಾಲಿಸಿಕೊಂಡು ಬಂದ ಜಾತ್ಯತೀತ ಮೌಲ್ಯಗಳಿಗೆ ಇದರಿಂದ ಅಪಚಾರವಾಗಿದೆ. ಈ ತಿದ್ದುಪಡಿಯಲ್ಲಿ ಮೂರು ದೇಶಗಳನ್ನೇ ಗುರುತಿಸುವ ಅಗತ್ಯವಿರಲಿಲ್ಲ, ಮುಸ್ಲಿಮರನ್ನಷ್ಠೆ ಬಿಟ್ಟು ಉಳಿದ ಧರ್ಮಗಳನ್ನು ಉಲ್ಲೇಖಿಸುವ ಜರೂರು ಇರಲಿಲ್ಲ. ಧಾರ್ಮಿಕ ದೌರ್ಜನ್ಯ ಎದುರಿಸಿ ನೆರೆರಾಷ್ಟ್ರಗಳಿಂದ ಭಾರತಕ್ಕೆ ಆಶ್ರಯ ಬಯಸಿ ಬರುವ ಎಲ್ಲರಿಗೂ ಪೌರತ್ವ ನೀಡುವ ಪ್ರಕ್ರಿಯೆಯನ್ನು ಸರಳೀಕರಿಸಬಹುದಿತ್ತು’ ಎಂಬುದಾಗಿದೆ. ನಿಜ, `ಉದಾರತೆ’ ಸ್ವಾತಂತ್ರ್ಯ ಪೂರ್ವದ ವರ್ಷಗಳಲ್ಲೂ ಭಾರತ ಎತ್ತಿ ಹಿಡಿದ ಮೌಲ್ಯ. ಜಗತ್ತಿನ ಹಲವು ಭಾಗಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಬಂದವರಿಗೆ ಈ ದೇಶ ಆಶ್ರಯ ನೀಡಿದೆ. ಹಾಗೆ ಬಂದವರನ್ನು ಬಲವಂತವಾಗಿ ಮತಾಂತರಿಸುವ ಕೆಲಸ ಈ ನೆಲದಲ್ಲಿ ನಡೆಯಲಿಲ್ಲ.

ಎರಡೂ ಭಾಗಗಳಲ್ಲಿ ಉಳಿದ ಅಲ್ಪಸಂಖ್ಯಾತರ ರಕ್ಷಣೆಗೆ `ನೆಹರು-ಲಿಯಾಖತ್ ಒಪ್ಪಂದ’ ಏರ್ಪಟ್ಟಿತು. ಆದರೆ ಈ ಒಪ್ಪಂದ ಪರಿಣಾಮಕಾರಿಯಾಗಲಿಲ್ಲ.

ಆದರೆ ಧರ್ಮಾಧಾರಿತವಾಗಿ ಭಾರತ ವಿಭಜನೆಯಾದ ಸಂದರ್ಭದಲ್ಲಿ ಕೆಲವು ತಪ್ಪುಗಳಾದವು. ನಾನಾ ಕಾರಣಗಳಿಂದಾಗಿ ಪಾಕಿಸ್ತಾನದ ಭಾಗದಲ್ಲಿ ಉಳಿದ ಹಿಂದೂ, ಸಿಖ್, ಪಾರ್ಸಿ, ಜೈನ, ಬೌದ್ಧರು ಅಲ್ಲಿ ಅಲ್ಪಸಂಖ್ಯಾತರಾದರು, ಭಾರತದಲ್ಲಿ ಉಳಿದ ಮುಸ್ಲಿಮರು ಇಲ್ಲಿ ಅಲ್ಪಸಂಖ್ಯಾತರಾದರು. ಹೀಗೆ ಎರಡೂ ಭಾಗಗಳಲ್ಲಿ ಉಳಿದ ಅಲ್ಪಸಂಖ್ಯಾತರ ರಕ್ಷಣೆಗೆ `ನೆಹರು-ಲಿಯಾಖತ್ ಒಪ್ಪಂದ’ ಏರ್ಪಟ್ಟಿತು. ಆದರೆ ಈ ಒಪ್ಪಂದ ಪರಿಣಾಮಕಾರಿಯಾಗಲಿಲ್ಲ. ಪಾಕಿಸ್ತಾನ ಮಾತಿಗೆ ತಪ್ಪದಂತೆ ತಡೆಯುವ ಕಠಿಣ ನಿಬಂಧನೆಗಳು ಒಪ್ಪಂದದಲ್ಲಿ ಇರಲಿಲ್ಲ. ಹಾಗಾಗಿಯೇ ಇದನ್ನು ವಿರೋಧಿಸಿ ಶ್ಯಾಮಪ್ರಸಾದ್ ಮುಖರ್ಜಿ ನೆಹರು ಸಂಪುಟದಿಂದ ಹೊರಬಂದರು. ಇದು ಒಂದು ಹಂತದ ವೈಫಲ್ಯ.

ನಂತರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಇಂದಿರಾ ಗಾಂಧಿ ದಿಟ್ಟ ನಿರ್ಧಾರ ಕೈಗೊಂಡರು. ಆದರೆ 1972ರ ಮಾರ್ಚ್ 19ರಂದು ಮಾಡಿಕೊಂಡ ಭಾರತ-ಬಾಂಗ್ಲಾ ದ್ವಿಪಕ್ಷೀಯ ಒಪ್ಪಂದದಲ್ಲಿ ಬಾಂಗ್ಲಾದೇಶದಲ್ಲಿದ್ದ ಹಿಂದೂಗಳ ಸುರಕ್ಷತೆಯನ್ನು ಖಾತ್ರಿಗೊಳಿಸಿಕೊಳ್ಳಬಹುದಾಗಿದ್ದ ಅವಕಾಶವನ್ನು ಕೈಚೆಲ್ಲಿದರು. ಇದರಿಂದಾಗಿ ಆ ಭಾಗದಲ್ಲಿ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಿದವು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಪ್ರಮಾಣ ಗಣನೀಯವಾಗಿ ಕುಗ್ಗುತ್ತಾ ಬಂತು. ಅಲ್ಪಸಂಖ್ಯಾತ ಸಮುದಾಯವನ್ನು ಬಲವಂತದ ಮತಾಂತರಕ್ಕೆ ಗುರಿ ಪಡಿಸಲಾಯಿತು. ಮತಾಂತರ ಆಗಲು ಒಪ್ಪದ ಪುರಷರನ್ನು ಹತ್ಯೆ ಮಾಡಲಾಯಿತು. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಯಿತು. ಹೀಗೆ ದೇಶ ವಿಭಜನೆಯ ಕಾಲದಲ್ಲಿ ಆದ ತಪ್ಪುಗಳಿಂದ ಬೆಂದವರು ಭಾರತದ ಆಶ್ರಯ ಅರಸಿ ಬರತೊಡಗಿದರು. ಆ ಅಲ್ಪಸಂಖ್ಯಾತ ಬಡಪಾಯಿಗಳಿಗೆ ಭಾರತ ಬಿಟ್ಟರೆ ಬೇರಾವ ದೇಶಕ್ಕೆ ಹೋಗಲು ಸಾಧ್ಯವಿತ್ತು? ಈ ಧಾರ್ಮಿಕ ಅಲ್ಪಸಂಖ್ಯಾತರು ತಮ್ಮ ಮೂಲ ಬೇರುಗಳನ್ನು ಭಾರತದಲ್ಲಿ ಕಂಡವರು, ಅವರಿಗೆ ಆಶ್ರಯ ಒದಗಿಸುವುದು ಭಾರತದ ನೈತಿಕ ಹೊಣೆ ಆಯಿತು.

ನಿಜ, ಇದು ಅಗತ್ಯವಾಗಿ ಮಾಡಬೇಕಾಗಿದ್ದ ಕೆಲಸ ಮತ್ತು ಭಾರತ ಹಲವು ಸಂದರ್ಭಗಳಲ್ಲಿ ನೆರೆರಾಷ್ಟ್ರಗಳ ಅಲ್ಪಸಂಖ್ಯಾತರ ಕುರಿತು ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ವೇದಿಕೆಗಳಲ್ಲಿ ಮಾತನಾಡಿದೆ.

ಕೇವಲ ಕೆಲವು ಧರ್ಮೀಯರನ್ನು ತಿದ್ದುಪಡಿಯಲ್ಲಿ ಹೆಸರಿಸಿದ್ದು ಸರಿಯೇ ಎಂದರೆ, ಹೀಗೆ ಪಟ್ಟಿ ಮಾಡಿದ್ದರಲ್ಲಿ ಒಂದು ರಾಜಕೀಯ ಇದೆ. ಅದನ್ನು ನಂತರ ನೋಡೋಣ. ಪಾಕಿಸ್ತಾನ ಅಹ್ಮದೀಯರನ್ನು ಕೂಡ ಮುಸಲ್ಮಾನರೆಂದು ಪರಿಗಣಿಸುವುದಿಲ್ಲ ಮತ್ತು ಅವರ ಮೇಲೂ ದೌರ್ಜನ್ಯಗಳಾಗುತ್ತಿರುವ ವರದಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿ ಉಲ್ಲೇಖಿಸಿದೆ. ಹಾಗಾಗಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿರುವ ಅಲ್ಪಸಂಖ್ಯಾತರು ಎಂದ ಮೇಲೆ ಅಹ್ಮದೀಯರು, ಸೂಫಿಗಳು ಕೂಡ ಈ ಪಟ್ಟಿಯಲ್ಲಿರಬೇಕಿತ್ತು.

ಎರಡನೆಯದಾಗಿ, ಸರ್ಕಾರ ಏಕಾಏಕಿ ಈ ಕಾಯಿದೆಯನ್ನು ತರುವ ಜರೂರಿತ್ತೆ ಎಂಬ ಪ್ರಶ್ನೆಯೂ ಎದ್ದಿದೆ. ನೆರೆರಾಷ್ಟ್ರಗಳ ಅಲ್ಪಸಂಖ್ಯಾತರ ಬಗ್ಗೆ ಸರ್ಕಾರಕ್ಕೆ ಕಾಳಜಿಯಿದ್ದಿದ್ದರೆ ಈ ವಿಷಯವನ್ನು ಅಂತರರಾಷ್ಟ್ರೀಯ ವೇದಿಕೆ ಮತ್ತು ವಿಶ್ವಸಂಸ್ಥೆಯಲ್ಲಿ ಚರ್ಚಿಸಿ, ಪಾಕಿಸ್ತಾನದ ವಿರುದ್ಧ ಅಭಿಪ್ರಾಯ ರೂಪಿಸುವ ಕೆಲಸ ಮಾಡಬಹುದಿತ್ತಲ್ಲವೇ ಎಂಬುದು ಪ್ರಶ್ನೆಯ ಮುಂದುವರಿದ ಭಾಗ. ನಿಜ, ಇದು ಅಗತ್ಯವಾಗಿ ಮಾಡಬೇಕಾಗಿದ್ದ ಕೆಲಸ ಮತ್ತು ಭಾರತ ಹಲವು ಸಂದರ್ಭಗಳಲ್ಲಿ ನೆರೆರಾಷ್ಟ್ರಗಳ ಅಲ್ಪಸಂಖ್ಯಾತರ ಕುರಿತು ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ವೇದಿಕೆಗಳಲ್ಲಿ ಮಾತನಾಡಿದೆ. ಕಳೆದ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ವಿಷಯ ಪ್ರಸ್ತಾಪಿಸಿದಾಗ, ಅದಕ್ಕೆ ಸಮರ್ಥವಾಗಿ ಉತ್ತರ ನೀಡಿದ್ದ, ಭಾರತ ಸರ್ಕಾರದ ಪ್ರತಿನಿಧಿ ವಿಧಿಶಾ ಮೈತ್ರಾ `ಪಾಕಿಸ್ತಾನದಲ್ಲಿ ಕ್ರೈಸ್ತರು, ಸಿಖ್ಖರು, ಅಹ್ಮದೀಯರು, ಹಿಂದೂಗಳು, ಶಿಯಾ, ಸಿಂಧೀ ಮತ್ತು ಬಲೂಚಿಗಳ ಮೇಲೆ ಧರ್ಮನಿಂದನೆ, ಹಿಂಸೆ, ಬಲವಂತದ ಮತಾಂತರ ನಿರಂತರವಾಗಿ ನಡೆಯುತ್ತಿದೆ’ ಎಂಬುದನ್ನು ಪ್ರಸ್ತಾಪಿಸಿದ್ದರು.

ಇದರ ಬೆನ್ನಲ್ಲೇ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ (ECOSOC) ಭಾಗವಾಗಿರುವ CSW 47 ಪುಟಗಳ ವರದಿಯನ್ನು ಬಿಡುಗಡೆಗೊಳಿಸಿ ‘ಪಾಕಿಸ್ತಾನದಲ್ಲಿರುವ ಕ್ರೈಸ್ತರು ಮತ್ತು ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಪ್ರತೀವರ್ಷ ಈ ಸಮುದಾಯಗಳ ನೂರಾರು ಮಹಿಳೆಯರನ್ನು ಮತಾಂತರವಾಗುವಂತೆ ಹಾಗೂ ಮುಸಲ್ಮಾನ ಪುರಷರನ್ನು ಮದುವೆಯಾಗುವಂತೆ ಒತ್ತಾಯಿಸಲಾಗುತ್ತಿದೆ. 18 ವರ್ಷಕ್ಕಿಂತ ಕಡಿಮೆ ವಯೋಮಾನದ, ಆರ್ಥಿಕವಾಗಿ ಹಿಂದುಳಿದ, ಗ್ರಾಮೀಣ ಭಾಗದ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಹಿಂಸೆಗೆ ಒಳಪಡುತ್ತಿದ್ದಾರೆ’ ಎಂದು ಹೇಳಿತು. ಹಾಗಾಗಿ ಜಾಗತಿಕ ವೇದಿಕೆಯಲ್ಲಿ ಭಾರತ ಈ ವಿಷಯವನ್ನು ಸಮರ್ಥವಾಗಿಯೇ ಮಂಡಿಸಿದೆ ಎನ್ನಬಹುದು.

ಟ್ರಂಪ್ ಅವರನ್ನು ಎದುರಿಸುವ ಶಕ್ತಿ ಇಲ್ಲ ಎಂಬ ಕಾರಣಕ್ಕೆ ಕ್ರೈಸ್ತರನ್ನು ಸೇರಿಸಲಾಗಿದೆ’ ಎನ್ನುವುದು ಒಂದು ವಾದ. ಆದರೆ ಪಾಕಿಸ್ತಾನದಲ್ಲಿ ಕ್ರೈಸ್ತ ಸಮುದಾಯ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ನೋಡಿದಾಗ ಇದೊಂದು ಪೇಲವವಾದ ಎನಿಸುತ್ತದೆ.

ಮೂರನೆಯದಾಗಿ, ಸಿಎಎಯಿಂದ ಮುಸಲ್ಮಾನರನ್ನು ಹೊರಗಿಟ್ಟು ಕ್ರೈಸ್ತರನ್ನು ಮಾತ್ರ ಸೇರಿಸಿಕೊಂಡ ಬಗ್ಗೆ ಸಂಶಯದ ಮಾತು ಕೇಳಿ ಬರುತ್ತಿವೆ. ‘ದೌರ್ಜನ್ಯಕ್ಕೆ ಒಳಗಾಗಿರುವ ಕ್ರೈಸ್ತರಿಗೆ ಆಶ್ರಯ ನೀಡಲು ಕ್ರೈಸ್ತರು ಬಹುಸಂಖ್ಯಾತರಾಗಿರುವ ದೇಶಗಳಿಲ್ಲವೇ. ಟ್ರಂಪ್ ಅವರನ್ನು ಎದುರಿಸುವ ಶಕ್ತಿ ಇಲ್ಲ ಎಂಬ ಕಾರಣಕ್ಕೆ ಕ್ರೈಸ್ತರನ್ನು ಸೇರಿಸಲಾಗಿದೆ’ ಎನ್ನುವುದು ಒಂದು ವಾದ. ಆದರೆ ಪಾಕಿಸ್ತಾನದಲ್ಲಿ ಕ್ರೈಸ್ತ ಸಮುದಾಯ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ನೋಡಿದಾಗ ಇದೊಂದು ಪೇಲವವಾದ ಎನಿಸುತ್ತದೆ.

ಇತ್ತೀಚಿನ ವರ್ಷಗಳನ್ನೇ ತೆಗೆದುಕೊಂಡರೆ 2015 ಹಾಗೂ 2016ರ ಮಾರ್ಚ್ ನಲ್ಲಿ ಲಾಹೋರ್ ಚರ್ಚ್ ಮೇಲೆ ನಡೆದ ಆತ್ಮಹತ್ಯಾ ದಾಳಿಗಳಲ್ಲಿ ಕ್ರಮವಾಗಿ 50 ಮತ್ತು 70 ಜನರು ಮೃತಪಟ್ಟಿದ್ದರು. 2013ರಲ್ಲಿ ಪೇಶಾವರದಲ್ಲಿ ಎರಡು ಇಂತಹದೇ ದಾಳಿಗಳು ನಡೆದು 80 ಮಂದಿ ಮೃತಪಟ್ಟಿದ್ದು ವರದಿಯಾಗಿತ್ತು. ಪಾಕಿಸ್ತಾನದಲ್ಲಿ ನಡೆದ ಕ್ರೈಸ್ತರ ಮೇಲಿನ ದಾಳಿಯನ್ನು ವಿವಿಧ ದೇಶಗಳು ಖಂಡಿಸಿದ್ದವು. ಹಾಗಾಗಿ ಕ್ರೈಸ್ತರನ್ನೂ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದ ಸಮೂಹ ಎಂದು ಕಾಯ್ದೆಯಡಿಯಲ್ಲಿ ತಂದಿದ್ದರೆ ಅದರಲ್ಲಿ ತಪ್ಪು ಕಾಣುವುದಿಲ್ಲ. ಉಳಿದಂತೆ ಈ ತಿದ್ದುಪಡಿಯಲ್ಲಿ ಹೆಸರಿಸಿರುವ ಪಾಕಿಸ್ತಾನ, ಆಪ್ಘಾನಿಸ್ತಾನ ‘ಇಸ್ಲಾಮಿಕ್ ಸ್ಟೇಟ್’ ಎಂದು ಗುರುತಿಸಿಕೊಂಡಿರುವ ದೇಶಗಳು. ಬಾಂಗ್ಲಾದೇಶ ಇಸ್ಲಾಂ ಅನ್ನು ರಾಷ್ಟ್ರೀಯ ಧರ್ಮ ಎಂದು ಒಪ್ಪಿಕೊಂಡಿರುವ ರಾಷ್ಟ್ರ. ಹಾಗಾಗಿ ಈ ದೇಶಗಳಿಂದ ಮುಸ್ಲಿಮರು ಧಾರ್ಮಿಕ ದೌರ್ಜನ್ಯದ ಹೆಸರಿನಲ್ಲಿ ಭಾರತಕ್ಕೆ ಬರುವುದಕ್ಕೆ ಯಾವುದೇ ಸಮರ್ಥನೆ ಇಲ್ಲ.

ಬಾಂಗ್ಲಾದೇಶ ಜಾತ್ಯತೀತ ಆಶಯಗಳಿಗೆ ಬದ್ಧವಾಗಿರುವ ದೇಶ ಎಂದು ಹೇಳಿಕೊಂಡರು ಅಲ್ಲಿನ ಪರಿಸ್ಥಿತಿ ಭಿನ್ನವಾಗಿಯೇನು ಇಲ್ಲ. ಬೌದ್ಧ, ಹಿಂದೂ, ಕ್ರೈಸ್ತರ ಮೇಲೆ ನಿರಂತರ ಹಲ್ಲೆಯಾಗುತ್ತಿರುವುದರ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯೇ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 2003ರಲ್ಲಿ ಮನಮೋಹನ್ ಸಿಂಗ್ ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದ್ದರು. ‘ಬಾಂಗ್ಲಾದಲ್ಲಿ ಉಳಿದು ಹೋಗಿರುವ ಅಲ್ಪಸಂಖ್ಯಾತರು ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ನಿರಾಶ್ರಿತರಾಗಿ ಭಾರತದತ್ತ ಬರುವ ಅವರಿಗೆ ಪೌರತ್ವ ನೀಡುವುದು ಭಾರತದ ನೈತಿಕ ಹೊಣೆಯಾಗುತ್ತದೆ’ ಎಂದು ನೆನಪಿಸಿದ್ದರು.

2017ರಲ್ಲಿ ಕಾನೂನು ತಿದ್ದುಪಡಿ ಮಾಡಿ, ಬಾಂಗ್ಲಾದೇಶದ ಸಂಸತ್ತಿಗೆ ನ್ಯಾಯಮೂರ್ತಿಗಳನ್ನು ಬದಲಾಯಿಸುವ ವಿಶೇಷ ಅಧಿಕಾರ ನೀಡಿ ಹಿಂದೂ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸುರೇಂದ್ರ ಕುಮಾರ್ ಸಿನ್ಹಾ ಅವರನ್ನು ರಾಜೀನಾಮೆ ಕೊಡಿಸಿದ್ದು ಇತ್ತೀಚಿನ ಘಟನೆ.

ಜಾತ್ಯತೀತ ಆಶಯಗಳಿಗೆ ಬದ್ಧವಾಗಿರುವ ಬಾಂಗ್ಲಾದೇಶದಲ್ಲಿ ಎಷ್ಟು ಮಂದಿ ಅಲ್ಪಸಂಖ್ಯಾತರು ರಾಜಕೀಯವಾಗಿ ಗುರುತಿಸಿಕೊಳ್ಳಲು, ಬೆಳೆಯಲು ಸಾಧ್ಯವಾಗಿದೆ ನೋಡಿದರೆ ನಿರಾಸೆಯಾಗುತ್ತದೆ. 2017ರಲ್ಲಿ ಕಾನೂನು ತಿದ್ದುಪಡಿ ಮಾಡಿ, ಬಾಂಗ್ಲಾದೇಶದ ಸಂಸತ್ತಿಗೆ ನ್ಯಾಯಮೂರ್ತಿಗಳನ್ನು ಬದಲಾಯಿಸುವ ವಿಶೇಷ ಅಧಿಕಾರ ನೀಡಿ ಹಿಂದೂ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸುರೇಂದ್ರ ಕುಮಾರ್ ಸಿನ್ಹಾ ಅವರನ್ನು ರಾಜೀನಾಮೆ ಕೊಡಿಸಿದ್ದು ಇತ್ತೀಚಿನ ಘಟನೆ. ಈ ಬಗ್ಗೆ ಸಿನ್ಹಾA Broken Dream: Rule of Law, Human Rights and Democracyಎಂಬ ತಮ್ಮ ಆತ್ಮಕತೆಯಲ್ಲಿ ಜಾತ್ಯತೀತ ಆಶಯಗಳಿಗೆ ಬದ್ಧವಾಗಿದ್ದೇವೆ ಎನ್ನುವ ಬಾಂಗ್ಲಾದೇಶದ ಅಸಲಿಯತ್ತೇನು ಎಂಬುದನ್ನು ವಿವರಿಸಿದ್ದಾರೆ.

ಒಂದು ಕ್ಷಣ ಸಿಎಎ ಕುರಿತ ಚರ್ಚೆಯನ್ನು ಪಕ್ಕಕ್ಕಿಟ್ಟು ಅಕ್ರಮ ವಲಸೆ ಸಮಸ್ಯೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಉಂಟು ಮಾಡಿರುವ ಘಾಸಿಯನ್ನು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ. ಈ ಬಗ್ಗೆ ಅಸ್ಸಾಂ ರಾಜ್ಯಪಾಲರಾಗಿದ್ದ ಜನರಲ್ ಎಸ್.ಕೆ.ಸಿನ್ಹಾ ಆಳವಾಗಿ ಅಭ್ಯಾಸ ಮಾಡಿ 1998ರಲ್ಲಿ ಅಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರಿಗೆ ವರದಿ ನೀಡಿದ್ದರು. ಭಾಜಪಾ, ಆರ್.ಎಸ್.ಎಸ್. ಮೂಲದವರಲ್ಲದ ಅವರನ್ನೂ ಕೋಮುವಾದಿ ಎಂದು ಕರೆಯಲಾಗಿತ್ತು.

‘ಅಸ್ಸಾಂ ಆಕ್ರಮಿಸಿಕೊಳ್ಳುವ ಕೆಲಸ ಸದ್ದಿಲ್ಲದೇ ದಶಕಗಳಿಂದ ನಡೆಯುತ್ತಿದೆ. ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲವೂ ತಮ್ಮದೇ ಹಿತಾಸಕ್ತಿ ಇಟ್ಟುಕೊಂಡು ಈ ಅಕ್ರಮ ವಲಸೆಯ ಬಗ್ಗೆ ಕಣ್ಮುಚ್ಚಿ ಕುಳಿತಿವೆ’ ಎಂದು ಸಿನ್ಹಾ ಎಚ್ಚರಿಸಿದ್ದರು. ಓಖಅ ಯನ್ನು ನವೀಕರಿಸುವ ಕೆಲಸ ಆಗಬೇಕು. ಪೌರತ್ವ ಇಲ್ಲದವರ ಪ್ರತ್ಯೇಕ ಪಟ್ಟಿ ಸಿದ್ಧಗೊಳ್ಳಬೇಕು ಎಂಬ ಆಗ್ರಹ ಸಿನ್ಹಾ ವರದಿಯಲ್ಲಿತ್ತು. ಆ ನಂತರ ಕಾರ್ಗಿಲ್ ಯುದ್ಧದ ಬಳಿಕ ಕೇಂದ್ರ ಸರ್ಕಾರ ನಾಲ್ಕು ಟಾಸ್ಕ್ ಫೋರ್ಸ್ ರಚಿಸಿ ರಾಷ್ಟ್ರೀಯ ಭದ್ರತೆಯ ಸಮಸ್ಯೆ ಕುರಿತು ವರದಿ ಸಲ್ಲಿಸುವಂತೆ ಕೇಳಿತು. 2000ನೇ ಇಸವಿಯಲ್ಲಿ ಈ ತಂಡ ಮತ್ತೊಂದು ವರದಿ ಸಲ್ಲಿಸಿತು. ಆದರೆ ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸುವ ಕೆಲಸ ಆಗಲಿಲ್ಲ. ಪರಿಣಾಮ, ಪಶ್ಚಿಮ ಬಂಗಾಳ, ಅಸ್ಸಾಂಗಳಲ್ಲಿ ಗಡಿಗೆ ತಾಕಿಕೊಂಡಿರುವ ಜಿಲ್ಲೆಗಳಲ್ಲಿ ನುಸುಳುಕೋರರ ಸಂಖ್ಯೆಯೇ ಅಧಿಕವಾಗಿ, ಅಲ್ಲಿ ನೆಲೆಸಿದ್ದವರು ಭೀತಿಯಿಂದ ಇತರೆಡೆ ವಲಸೆ ಹೋಗುವ ಪರಿಸ್ಥಿತಿ ಉದ್ಭವಿಸಿತು.

ರಾಷ್ಟ್ರವ್ಯಾಪಿ NRC ನಡೆಸುವ ಕುರಿತು ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿಲ್ಲವಾದರೂ ಆತಂಕವಂತೂ ಹಬ್ಬುತ್ತಿದೆ. ಹಾಗಾದರೆ ಕಾಲಕಾಲಕ್ಕೆ ದೇಶನಿವಾಸಿಗಳ ಗುರುತಿನ ಪಟ್ಟಿ ಸಿದ್ಧಪಡಿಸುವುದು ಒಂದು ದೇಶಕ್ಕೆ ಅಗತ್ಯವಲ್ಲವೇ? ಎಂದು ಯಾರೂ ಪ್ರಶ್ನಿಸಿಕೊಳ್ಳುವ ಗೋಜಿಗೆ ಹೋಗಿಲ್ಲ.

ಹೀಗೆ ನಾಲ್ಕಾರು ಜಿಲ್ಲೆಗಳು ಸಂಪೂರ್ಣ ವಲಸಿಗರ ಬಾಹುಳ್ಯದ ಜಿಲ್ಲೆಗಳಾಗಿ ಪರಿವರ್ತನೆಗೊಂಡವು. ಹೀಗಾಗಿ `ಪೌರತ್ವ ನೋಂದಣಿ ಪರಿಷ್ಕರಣೆ’ಯ ಕೂಗು ಎದ್ದಿತು. ಅಸ್ಸಾಂಗೆ ಸೀಮಿತವಾಗಿ ಸುಪ್ರಿಂ ಕೋರ್ಟ್ ಆದೇಶದಂತೆ ಪೌರತ್ವ ನೋಂದಣಿ ಪರಿಷ್ಕರಿಸುವ ಕಾರ್ಯ ನಡೆಯಿತು. ಆ ಪ್ರಕ್ರಿಯೆಯ ಲೋಪದೋಷಗಳು ಇನ್ನಷ್ಟು ಪ್ರಶ್ನೆ ಉದ್ಭವವಾಗುವಂತೆ ಮಾಡಿದವು.

ಇದೀಗ ಸಿಎಎ ವಿರುದ್ಧದ ಪ್ರತಿಭಟನೆಗಳು ತೀವ್ರಗೊಳ್ಳುವುದಕ್ಕೆ ಮುಖ್ಯ ಕಾರಣವೇ ಸಿಎಎಯನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗೆ (NRC) ಜೋಡಿಸಲಾಗುತ್ತದೆ ಎನ್ನುವ ಅಂಶ. ಸಿಎಎ ಸಾಧಕ ಬಾಧಕಗಳ ಚರ್ಚೆಗಿಂತ ಓಖಅ ಕುರಿತ ಭ್ರಮಾತ್ಮಕ ಭೀತಿಯೇ ಇದೀಗ ವ್ಯಾಪಕವಾಗುತ್ತಿದೆ. ರಾಷ್ಟ್ರವ್ಯಾಪಿ NRC ನಡೆಸುವ ಕುರಿತು ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿಲ್ಲವಾದರೂ ಆತಂಕವಂತೂ ಹಬ್ಬುತ್ತಿದೆ. ಹಾಗಾದರೆ ಕಾಲಕಾಲಕ್ಕೆ ದೇಶನಿವಾಸಿಗಳ ಗುರುತಿನ ಪಟ್ಟಿ ಸಿದ್ಧಪಡಿಸುವುದು ಒಂದು ದೇಶಕ್ಕೆ ಅಗತ್ಯವಲ್ಲವೇ? ಎಂದು ಯಾರೂ ಪ್ರಶ್ನಿಸಿಕೊಳ್ಳುವ ಗೋಜಿಗೆ ಹೋಗಿಲ್ಲ.

ಒಂದೊಮ್ಮೆ ದೇಶಾದ್ಯಂತ ಪೌರತ್ವ ನೋದಣಿ ಆರಂಭವಾದರೆ ಅದರಲ್ಲಿ ಆತಂಕಕ್ಕೊಳಗಾಗುವುದು ಏನಿದೆ? ಇದು ಗುರುತಿನ ದಾಖಲೆಗಳನ್ನು, ವಿವರಗಳನ್ನು ನೀಡುವ ಸಾಮಾನ್ಯ ಪ್ರಕ್ರಿಯೆ, ನಿಮ್ಮ ಬಳಿ ಇರುವ ಮಾಹಿತಿಯೇ ಸಾಕು, ಯಾವುದೇ ದಾಖಲೆ ನೀಡುವುದು ಕಡ್ಡಾಯವಲ್ಲ ಎಂಬ ಸ್ಪಷ್ಟನೆಗಳು ಸರ್ಕಾರದಿಂದ ಬಂದ ಮೇಲೂ, ಭ್ರಮೆಯ ಪರದೆಯಲ್ಲಿ ನೋಡಿ ‘ನೀವು ಪೌರತ್ವ ಕಳೆದುಕೊಳ್ಳುವ ಅಪಾಯವಿದೆ, ದಾಖಲೆ ಇಲ್ಲದವರು ಎರಡನೇ ದರ್ಜೆಯ ನಾಗರಿಕರಾಗಬೇಕಾಗುತ್ತದೆ, ನಿಮ್ಮನ್ನು ದೇಶದಿಂದ ಹೊರದಬ್ಬಲಾಗುತ್ತದೆ’ ಎಂದು ಮುಸ್ಲಿಂ ಸಮುದಾಯವನ್ನು ಆತಂಕಕ್ಕೆ ದೂಡುವ ಪ್ರಯತ್ನಗಳು ನಡೆಯುತ್ತಿವೆ.

ಬುದ್ಧಿಜೀವಿಗಳು ಎನಿಸಿಕೊಂಡವರ ‘ಒಂದು ವರ್ಗ’ ಈ ಕಾಯ್ದೆಯನ್ನು ಸ್ವಾತಂತ್ರ್ಯ ಚಳವಳಿಗೆ ಹೋಲಿಸಿ ಉತ್ಪ್ರೇಕ್ಷಿತ ವ್ಯಾಖ್ಯಾನ ನೀಡಿ ಜನರ ಗೊಂದಲವನ್ನು ಮತ್ತಷ್ಟು ಹೆಚ್ಚಿಸುವ ಕಸರತ್ತು ನಡೆಸಿದೆ.

`ಪೌರತ್ವ ತಿದ್ದುಪಡಿ ಕಾಯ್ದೆ’ಯನ್ನು ಎರಡೂ ಬದಿಯ ಪಕ್ಷಗಳು ತಮ್ಮ ಸ್ವಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುತ್ತಿವೆ. ಬಿಜೆಪಿ `ಈ ಕಾಯಿದೆಯಿಂದ ನಾವು ಮುಸಲ್ಮಾನರನ್ನು ಹೊರಗಿಟ್ಟಿದ್ದೇವೆ’ ಎಂಬುದಕ್ಕೇ ಪ್ರಾಶಸ್ತ್ಯ ಕೊಟ್ಟು ಹೇಳಿ ಹಿಂದೂ ಮತಬ್ಯಾಂಕ್ ಖುಷಿಗೊಳಿಸುವ ಪ್ರಯತ್ನಕ್ಕೆ ಮೊದಲು ಕೈ ಹಾಕಿತು. ಬಿಜೆಪಿಯೇತರ ಪಕ್ಷಗಳು ‘ಮುಸಲ್ಮಾನರನ್ನಷ್ಠೆ ಹೊರಗಿಟ್ಟಿದ್ದಾರೆ’ ಎನ್ನುತ್ತಾ ಮುಸಲ್ಮಾನರ ಮತಬ್ಯಾಂಕ್ ಸಂರಕ್ಷಿಸಿಕೊಳ್ಳಲು ಹೊರಟಿವೆ. ಬುದ್ಧಿಜೀವಿಗಳು ಎನಿಸಿಕೊಂಡವರ ‘ಒಂದು ವರ್ಗ’ ಈ ಕಾಯ್ದೆಯನ್ನು ಸ್ವಾತಂತ್ರ್ಯ ಚಳವಳಿಗೆ ಹೋಲಿಸಿ ಉತ್ಪ್ರೇಕ್ಷಿತ ವ್ಯಾಖ್ಯಾನ ನೀಡಿ ಜನರ ಗೊಂದಲವನ್ನು ಮತ್ತಷ್ಟು ಹೆಚ್ಚಿಸುವ ಕಸರತ್ತು ನಡೆಸಿದೆ.

ಈ ಎಲ್ಲದರ ನಡುವೆ ಪೌರತ್ವಕ್ಕೆ ಸಂಬಂಧಿಸಿದ ಯಾವುದೇ ಕಾಯಿದೆ, ನೋಂದಣಿ ಕಾರ್ಯಗಳು ಸೂಕ್ತ ಕಾನೂನು ಪ್ರಕ್ರಿಯೆ ನಡೆಸದೆ ಯಾರನ್ನೂ ದೇಶದಿಂದ ಹೊರ ಕಳುಹಿಸುವ ಗುರಿ ಇರಿಸಿಕೊಂಡಿಲ್ಲ ಎಂಬ ಸಮಾಧಾನದ ಮಾತು ಮಾತ್ರ ಹೆಚ್ಚು ಜನರನ್ನು ತಲುಪಿಲ್ಲ. ಈ ಬೆಳವಣಿಗೆಗಳನ್ನು ನೋಡಿದರೆ, ನೋಟ್ ಬ್ಯಾನ್ ನಂತಹ ಕ್ರಮವೂ ಜನರನ್ನು ವಿಚಲಿತರನ್ನಾಗಿಸದೇ ಎರಡನೇ ಬಾರಿಗೆ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಮಜನ್ಮಭೂಮಿ ವಿಷಯವಾಗಿ ಬಂದ ನ್ಯಾಯಾಲಯದ ತೀರ್ಪು, ತಲಾಖ್ ಕುರಿತಂತೆ, ಕಾಶ್ಮೀರಕ್ಕೆ ಅನ್ವಯವಾಗುತ್ತಿದ್ದ 370 ನೇ ವಿಧಿಗೆ ಸಂಬಂಧಿಸಿದಂತೆ ಸರ್ಕಾರ ಇಟ್ಟ ಹೆಜ್ಜೆ ಹಾಗೂ ಈ ಎಲ್ಲದರ ಕುರಿತ ಅಸಮಾಧಾನವೇ ಸಿಎಎ ನೆಪದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಪುಷ್ಠಿ ಕೊಟ್ಟಿರಬಹುದೇ? ಎಂಬ ಸಂಶಯ ಕಾಡದಿರುವುದಿಲ್ಲ.

ಒಟ್ಟಿನಲ್ಲಿ, ಯಾವುದೇ ದೇಶ ತನ್ನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಮಾನವೀಯ ಮೌಲ್ಯಗಳನ್ನು ಬಿಟ್ಟುಕೊಡದೇ ಸಮಗ್ರ ವಲಸೆ ನೀತಿ ರೂಪಿಸಿಕೊಳ್ಳಬೇಕಾಗುತ್ತದೆ. ಪರ-ವಿರೋಧದ ಬಣಗಳು ಭಾವಾವೇಶದ, ಅತಿರಂಜಕ ಮಾತುಗಳನ್ನಾಡಿದರೆ ಸಮಸ್ಯೆ ಬಗೆ ಹರಿಯುವುದಿಲ್ಲ. ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಕೆಲವೆಡೆ ಹಿಂಸಾತ್ಮಕ ಗಲಭೆ ರೂಪ ಪಡೆಯುತ್ತಿರುವುದು ಆತಂಕದ ವಿಷಯ. ಅದಕ್ಕೆ ಅಸಮರ್ಪಕ ಮಾಹಿತಿ, ಅನಗತ್ಯ ಭೀತಿಯೇ ಕಾರಣ ಎಂಬುದಂತೂ ಸತ್ಯ.

* ಲೇಖಕರು ಮೂಲತಃ ಮಂಡ್ಯ ಜಿಲ್ಲೆ ಮದ್ದೂರಿನವರು; ಅಮೆರಿಕ ಮೂಲದ ಕಂಪನಿಯೊಂದರಲ್ಲಿ ಸಾಫ್ಟ್‍ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಅಂಕಣಕಾರ, ಸಮಕಾಲೀನ ವಿದ್ಯಮಾನಗಳ ವಿಶ್ಲೇಷಕ. ಪ್ರಸ್ತುತ ಅಮೆರಿಕೆಯಲ್ಲಿ ವಾಸ. 

Leave a Reply

Your email address will not be published.