ಸಿಡಿಯೂರಪ್ಪ ಸಾಧನೆ ಮೇಯಾವ್ರ್ ಖಾತೆಗೆ!

ಸಿಡಿಯೂರಪ್ಪನವರ ಸರಕಾರ ಸಿ.ಡಿ.ಗಳಲ್ಲಿ ಮುಳುಗಿ ಏಳಾಕಹತ್ತೈತಿ. ಇನ್ನೂ ಎಷ್ಟು ಸಿ.ಡಿ.ಗಳು ಸಿಡಿತಾವೋ ಏನೋ ಅಂತ ಮಿಡಿ ಮಂತ್ರಿಗೋಳ ಜೀವ ಬಿಟ್ಟುಬಿಟ್ಟು ಹಿಡಿಯಾಕ್ಹತ್ತೈತಿ…’’ ಶಿಷ್ಯನ ಮಾತಿನಲ್ಲಿ ಮೇಯವ್ರ್ ಸಿದ್ಧಲಿಂಗಪ್ಪ ಹೊಸ ಬೆಳಕು ಕಂಡರು!

ಎಸ್. ಮೆಣಸಿನಕಾಯಿ

“ಸಿದ್ಧಲಿಂಗಪ್ಪನವರಿಗೆ ನಮಸ್ಕಾರ…” ಎಣ್ಣಾಳಿ ಎಲ್ಲಾಚಾರ್ಯನ ಬೆಳಗಿನ ವಿಶ್ ಕೇಳಿ ಸಾರಾಯಿ ವಾಸನೆ ಬಡಿದಂತಾಯ್ತು ಮೇಯರ್ ಸಿದ್ಧಲಿಂಗಪ್ಪನವರಿಗೆ. “ಬಾರಲೇ ಎಲ್ಲಾಚಾರ್ಯ… ಮತ್ತ ಯಾವ ಗಟಾರದಾಗ ದೋಣಿ ಓಡಿಸಾಕ ಹೋಗಿದ್ದಿ?” ಸಿದ್ಧಲಿಂಗಪ್ಪನವರ ಪ್ರಶ್ನೆಗೆ ತಲೆ ಕೆರೆದುಕೊಳ್ಳುತ್ತ, “ಸಾಹೇಬರ… ಈ ಸಲ ಚೊಲೊ ದೋಣಿನ ಸಿಗಲಿಲ್ಲ ಬಿಡ್ರಿ… ಇನ್ನೊಂದೇನಂದರ ನೀವು ಮೇಯವ್ರ್ ಆದಾಗಿನಿಂದ ಗಟಾರದಾಗ ನೀರ ಹರಿವಲ್ಲದರಿ…” ಎಂದ.

“ಲೇ ಎಲ್ಲಾಚಾರಿ… ನಾನು ಮೇಯವ್ರ ಅಲ್ಲ, ಮೇಯರ್ ಅಂತ ಚೆಂದಗ ಅನ್ನಾಕ ಕಲಿ… ನಾನು ಮೇಯರ್ ಆದ ಮ್ಯಾಲೆ ಗಟಾರದಾಗ ನೀರು ಹರಿವಲ್ಲವು ಅಂದರ ನಾನು ಗಟಾರ ಸ್ವಚ್ಛ ಇಟ್ಟೀನಿ ಅಂತ ಅರ್ಥ ಹೌದಲ್ಲೋ…?” ಮೀಸೆ ತಿರುವಿದರು ಸಿದ್ಧಲಿಂಗಪ್ಪನವರು. ಗೊಳ್ಳನೆ ನಕ್ಕ ಎಲ್ಲಾಚಾರ್ಯ, “ಸಾಹೇಬರ ಗಟಾರ ಸ್ವಚ್ಛ ಇಟ್ಟೀರೋ ಇಲ್ಲವೋ ಆ ಇಂದ್ರನ ಗೆದ್ದ ನರೇಂದ್ರನಿಗೇ ಗೊತ್ತು. ಆದರ ಊರಿನ ನಳದಾಗ ನೀರ ಬರಲಾರದ 15 ದಿನ ಆತು, ಅದಕ್ಕ ಗಟಾರ ಒಣಗಿ ಹೋಗ್ಯಾವು ಅಂತ ಊರಾಗ ಮಂದಿ ಮಾತಾಡ್ತಾರ್ರಿ…” ಅಂತ ಹೇಳಿ ಸಿದ್ಧಲಿಂಗಪ್ಪನವರ ಜಂಭಕ್ಕೆ ಮುಳ್ಳು ಚುಚ್ಚಿದ.

ಎಲ್ಲಾಚಾರ್ಯನ ಕಡೆ ದಿಟ್ಟಿಸುತ್ತ ಸಿದ್ಧಲಿಂಗಪ್ಪನವರು ಈಗ ಗಂಭೀರ ವಿಷಯ ಎತ್ತಿದರು. “ಎಲ್ಲಾಚಾರ್ಯ, ನಾನು ಮೇಯರ್ ಆಗಿ ಒಂದು ತಿಂಗಳಾಗುತ್ತ ಬಂತು. ಈ ಒಂದು ತಿಂಗಳಲ್ಲಿ ನಾನು ಕಾರ್ಪೋರೇಷನ್‍ನಿಂದ ಏನೇನು ಸಾಧನೆ ಮಾಡೀನಿ ಅದನ್ನ ಒಮ್ಮೆ ಜನರ ಮುಂದಿಡುವ ಕೆಲಸ ಆಗಬೇಕಲ್ಲ, ಯಾವ್ಯಾವ ಕ್ಷೇತ್ರದಾಗ ಎಷ್ಟೆಷ್ಟು ಸಾಧನೆ ಆಗೈತಿ ಒಂದು ಲಿಸ್ಟ್ ಮಾಡಿಬಿಡು…” ಸಿದ್ಧಲಿಂಗಪ್ಪನವರ ಮಾತನ್ನು ಕತ್ತರಿಸುತ್ತಲೇ ಎಲ್ಲಾಚಾರ್ಯ ಹೇಳಿಯೇ ಬಿಟ್ಟ-

“ಸರ್ ಮೊನ್ನೆ ಪೇಪರ್ನ್ಯಾಗ ಬಂದಿತ್ತು. ಇಡೀ ರಾಜ್ಯ ಕೋವಿಡ್ ಸಾಂಕ್ರಾಮಿಕ ಲಾಕ್‍ಡೌನ್ ಅನುಭವಿಸಿ, ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದ್ದರೂ ಅಬಕಾರಿ ಆದಾಯ ಮಾತ್ರ ತಪ್ಪಿಲ್ಲ ಅಂತ. ಶಿಕ್ಷಣ, ಸಾರಿಗೆ, ಮುದ್ರಾಂಕ, ಪೊಲೀಸ್, ಇತರೆಲ್ಲ ಇಲಾಖೆಗಳ ಆದಾಯ ನೆಲಕಚ್ಚಿದ್ದರೂ ನಮ್ಮ ಎಣ್ಣೆ ಇಲಾಖೆ ಮಾತ್ರ ಫೆಬ್ರವರಿಗೇ ತನ್ನ ಟಾರ್ಗೆಟ್ ರೀಚ್ ಆಗೈತೆಂತ. ಇದನ್ನ ಮೊದಲು ಸೇರಿಸಿಕೊಂಡುಬಿಡ್ರಿ ನಿಮ್ಮ ಸಾಧನೆಗಳ ಲಿಸ್ಟ್‍ಗೆ”.

ಸಿದ್ಧಲಿಂಗಪ್ಪನವರ ಕಣ್ಣು ಕೆಂಪಗಾದವು. ಏನೋ ಎಡವಟ್ಟಾಯಿತು ಅಂತ ಹೆದರಿದ ಎಲ್ಲಾಚಾರ್ಯ. “ಲೇ ಎಲ್ಲಾಚಾರಿ, ಅದು ರಾಜ್ಯದ ಮುಖ್ಯಮಂತ್ರಿ ಸಿಡಿಯೂರಪ್ಪನವರ ಸಾಧನೆಯ ಲಿಸ್ಟ್‍ಗೆ ಸೇರಬೇಕು. ನಾನು ಮೇಯರ್ ಆಗಿ ಅದನ್ನ ಸೇರಿಸಿಕೊಳ್ಳಾಕ ಬರಲ್ಲ…” ಸಿದ್ಧಲಿಂಗಪ್ಪನವರು ಕಿರುಚುತ್ತಿರುವಾಗಲೇ ಎಲ್ಲಾಚಾರ್ಯ ಬ್ರೇಕ್ ಹಾಕಿ ಮಾತನ್ನು ಬೇರೆಡೆ ತಿರುಗಿಸಿದ.

“ಸಾಹೇಬರ ಸಿಡಿಯೂರಪ್ಪನವರ ಸರಕಾರ ಸಿ.ಡಿ.ಗಳಲ್ಲಿ ಮುಳುಗಿ ಏಳಾಕಹತ್ತೈತಿ. ಇನ್ನೂ ಎಷ್ಟು ಸಿ.ಡಿ.ಗಳು ಸಿಡಿತಾವೋ ಏನೋ ಅಂತ ಮಿಡಿ ಮಂತ್ರಿಗೋಳ ಜೀವ ಬಿಟ್ಟುಬಿಟ್ಟು ಹಿಡಿಯಾಕ್ಹತ್ತೈತಿ. ಇಂಥಾದರಾಗ ಅವರ ಸಾಧನೆಯನ್ನು ನೀವು ಸೇರಿಸಿಕೊಂಡು, “ಇದು ನಮ್ಮದೇ ಸಾಧನೆ” ಅಂತ ತೇಪೆ ಹಚ್ಚಿದರಾಯಿತು…” ಸಿದ್ಧಲಿಂಗಪ್ಪನವರ ಕೋಪ ಈಗ ಒಂದು ಹಂತಕ್ಕೆ ಬಂತು. ಎಲ್ಲಾಚಾರ್ಯ ಹೇಳೂದರಲ್ಲಿ ತಪ್ಪೇನಿಲ್ಲ ಅನ್ನಿಸ್ತು. ಸಾಧನೆಗಳ ಪಟ್ಟಿಗೆ ಬರಕೊಂಡರು-

“ಸರಕಾರ ಅಬಕಾರಿ ಇಲಾಖೆಯಲ್ಲಿ ಹೇರಳ ಹಣ ಗಳಿಸಿ ನಮ್ಮ ನಗರಪಾಲಿಕೆಗೆ ನೀಡಿದ್ದರಿಂದಲೇ ಹೆಚ್ಚಿನ ಬಾರ್‍ಗಳ ಮುಂದೆ ಒಳ್ಳೆಯ ರಸ್ತೆ ನಿರ್ಮಿಸಲು ಸಾಧ್ಯವಾಯಿತು. ಈಗ ಕುಡುಕರು ಈ ಸುಗಮವಾದ ರಸ್ತೆಗಳ ಮೂಲಕ ಸುರಕ್ಷಿತವಾಗಿ ಮನೆ ಸೇರುತ್ತಿರುವುದುರಿಂದ ಹಲವಾರು ಮಹಿಳೆಯರು ನಗರಪಾಲಿಕೆಗೆ ಧನ್ಯವಾದ ಹೇಳುತ್ತಿದ್ದಾರೆ…!’’

“ಸಾಹೇಬರ ನಾನು ಹೇಳಿರುವ ಪಾಯಿಂಟ್‍ಗಳನ್ನೆಲ್ಲ ತೊಗೊಂಡು ನೀವು ಮೇಯವ್ರ್ ಅಲ್ಲಲ್ಲ ಮೇಯರ್ ಆಗೀರಿ. ಆದರ ನನ್ನನ್ನ ಯಾವ ಕಮೀಟಿಗೂ ಮೇಂಬರ್ ಮಾಡಿಲ್ಲ. ನನ್ನನ್ನ ಸ್ಟ್ಯಾಂಡಿಂಗ್ ಕಮೀಟಿಗೆ ನೇಮಕ ಮಾಡ್ರಿ… ಯಾವಾಗಲೂ ನಿಮ್ಮ ಬಾಜೂಕ ಸ್ಟ್ಯಾಂಡ್ ಆಗತೀನಿ” ಎಲ್ಲಾಚಾರ್ಯ ಮನವಿ ಮಾಡಿದ. “ಅದು ಹಾಗಲ್ಲ ಎಲ್ಲಾಚಾರ್ಯ, ಬೇರೆ ಪಕ್ಷದಿಂದ ಆಯ್ಕೆಯಾದರೂ ತಮ್ಮ ಮೇಂಬರ್‍ಶಿಪ್‍ಗೆ ರಾಜೀನಾಮೆ ನೀಡಿ, ನಮ್ಮ ಪಕ್ಷಕ ಬಂದು ನನ್ನನ್ನ ಮೇಯರ್ ಮಾಡಿದ ಇನ್ನೂ ಮೂರ್ನಾಲ್ಕು ಮಂದಿಗೆ ನಾನು ಬೇರೆಬೇರೆ ಸ್ಟ್ಯಾಂಡಿಂಗ್ ಕಮೀಟಿಗಳಿಗೆ ನೇಮಕ ಮಾಡಬೇಕು. ಅವರು ಉಪಚುನಾವಣೆಗೆ ಮಾಡಿದ ಖರ್ಚಾದರೂ ತೊಕ್ಕೊಬೇಕಲ್ಲ…”

ಸಿದ್ಧಲಿಂಗಪ್ಪನವರ ಸಮಸ್ಯೆ ಎಲ್ಲಾಚಾರ್ಯನ ಕಿವಿಗೆ ಹಿಡಿಸಲಿಲ್ಲ. “ಸಾಹೇಬರ, ನೀವು ಹಂಗೆಲ್ಲ ವಿಚಾರ ಮಾಡಬೇಕಾಗಿಲ್ಲ. ಅವರ ರಾಜೀನಾಮೆ ಅವರ ಹಣೆಬರಹ. ಈಗ ಅವರನ್ನೆಲ್ಲ ಸಿ.ಡಿ.ಗಳಲ್ಲಿ ಹಿಡಿದುಹಾಕಿ ಮೂಲೆಗುಂಪು ಮಾಡಿದರಾಯಿತು” ಎಲ್ಲಾಚಾರ್ಯ ಮಾಸ್ಟರ್ ಪ್ಲ್ಯಾನ್ ಹೇಳಿಬಿಟ್ಟ. ಅವನ ಐಡಿಯಾವನ್ನು ಸಿದ್ಧಲಿಂಗಪ್ಪನವರು ಸೀರಿಯಸ್ಸಾಗಿ ತೆಗೆದುಕೊಂಡರೂ, ತೆಗೆದುಕೊಳ್ಳದಂತೆ ನಟಿಸುತ್ತ, “ಅದೆಲ್ಲ ಆಮೇಲೆ ನೋಡೋಣ. ಈಗ ನನ್ನ ಒಂದು ತಿಂಗಳ ಸಾಧನೆಯ ಸಮಾವೇಶಕ್ಕೆ ಬೇರೆ ಪಾಯಿಂಟ್ಸ್ ಹೇಳು” ಸಿದ್ಧಲಿಂಗಪ್ಪನವರು ಡೈರಿಯಲ್ಲಿ ನೋಟ್ ಮಾಡಿಕೊಳ್ಳುವಾಗ, “ನಿನ್ನಂಥ ಅಪ್ಪ ಇಲ್ಲ…” ಎಂಬ ಹಾಡಿನ ರಿಂಗ್‍ಟೋನ್ ಬಾರಿಸಿತು ಅವರ ಮೊಬೈಲ್.

“ಅಪ್ಪ ನಾನು ಜಯೇಂದ್ರ…” ಆ ಕಡೆಯ ದನಿಯನ್ನು ಕೇಳುತ್ತಲೇ ಸಿದ್ಧಲಿಂಗಪ್ಪನವರ ಹುಬ್ಬುಗಳು ಗಂಟಿಕ್ಕಿದವು. “ಹೇಳು ಮಗನೇ…” ಗಂಟಲು ಬಿಗಿಯಾಗಿ ಹಿಡಿದೇ ಕೇಳಿದರು ಮೇಯರ್ ಸಾಹೇಬರು. “ಅಪ್ಪಾ ಆ ಕೇಶವ ರಸ್ತೆಯ ಕಾಮಗಾರಿ ನಮ್ಮ ನಿರ್ವಾಣಿಯವರಿಗೇ ಕೊಡಬೇಕು; ವಾರ್ಡ್-20ರ ಓವರ್‍ಹೆಡ್ ಟ್ಯಾಂಕ್ ನಿರ್ಮಾಣದ ಕೆಲಸವನ್ನು ಡಿ.ಸಿ. ಪಾಟೀಲರಿಗೇ ಕೊಡಬೇಕು; ವಾರ್ಡ್- 13ರ ಗಾರ್ಡನ್ ಕಾಮಗಾರಿಯನ್ನು ಫಿಲಂ ಆ್ಯಕ್ಟರ್ ಶಿವಪ್ರಿಯಾ ಅವರ ತಮ್ಮನಿಗೇ ಕೊಡಬೇಕು; ಇನ್ನೊಂದಿಷ್ಟು ಡಿಮ್ಯಾಂಡ್ಸ್ ಅದಾವು ಅವನ್ನೆಲ್ಲ ಯಾರ್ಯಾರಿಗೆ ಕೊಡಬೇಕು ಅಂತ ಒಂದು ಲಿಸ್ಟ್ ಮಾಡಿಕೊಡ್ತೀನಿ, ಅದರ ಪ್ರಕಾರನ ಆಗಬೇಕು ನೋಡು”

ನಿತ್ರಾಣಗೊಂಡ ಸಿದ್ಧಲಿಂಗಪ್ಪನವರು, “ಅಲ್ಲ ಮಗನೇ, ಗುತ್ತಿಗೆ ಕೊಡಬೇಕಾದರ ಪಾರದರ್ಶಕ ಕಾಯಿದೆ, ಗುತ್ತಿಗೆದಾರರ ಟೆಕ್ನಿಕಲ್ ಅರ್ಹತೆ ಇನ್ನೂ ಹಲವಾರು ಅಂಶಗಳನ್ನು ನೋಡಬೇಕಾಗುತ್ತ…” ಅಪ್ಪನ ಪುರಾಣವನ್ನೆಲ್ಲ ಕೇಳುವ ವ್ಯವಧಾನ ಜಯೇಂದ್ರನಲ್ಲಿ ಇರಲಿಲ್ಲ. “ಅಪ್ಪಾ, ನಾ ಹೇಳಿದಷ್ಟು ಮಾಡು… ಇಲ್ಲಂದರ ನಿನ್ನ ಸಿ.ಡಿ. ನನ್ನ ಹತ್ತಿರ ಐತಿ ಅನ್ನೋದು ನೆನಪಿರಲಿ” ಕರೆ ಕಡಿತಗೊಳಿಸಿದ ಮಗರಾಯ.

“ಇಂಥ ಮಗನ್ನ ನಾನು ಹಡಿಯಲೇಬಾರದಿತ್ತು” ಅಂತ ಸಿದ್ಧಲಿಂಗಪ್ಪನವರು ಮೆಲ್ಲನೇ ಗೊಣಗಿಕೊಂಡರೂ, ಅದು ಎಲ್ಲಾಚಾರ್ಯನಿಗೆ ಕೇಳಿಸಿಬಿಟ್ಟಿತು! “ಸಾಹೇಬರ ನನಗ ಸ್ಟ್ಯಾಂಡಿಂಗ್ ಕಮೀಟಿ ಮೆಂಬರ್‍ಶಿಪ್ ಎಲ್ಲಿಂದ ಹೆಂಗ ತೊಗೊಬೇಕು ಅನ್ನೂದು ಈಗ ಗೊತ್ತಾತು ಬಿಡ್ರಿ” ಎನ್ನುತ್ತ ಅಲ್ಲಿಂದ ಜಾಗ ಖಾಲಿ ಮಾಡಿದ.

*

ನಗರಪಾಲಿಕೆ ಕಟ್ಟಡ ಫ್ಲೆಕ್ಸ್, ಕಲರ್ ಲೈಟ್, ತಳಿರುತೋರಣಗಳಿಂದ ಅಲಂಕೃತಗೊಂಡಿರುವುದನ್ನು ನೋಡಿ ನಾಗರಿಕರಿಗೆ ಅಚ್ಚರಿ. “ಒಂದು ತಿಂಗಳಲ್ಲಿ ಕೊರೋನಾ ರೋಗಿಗಳ ಸಂಖ್ಯೆ ಮತ್ತೆ ಹೆಚ್ಚಾಗೈತಿ, ಪಾಲಿಕೆ ಆಸ್ಪತ್ರೆಯ ಬೆಡ್‍ಗಳೆಲ್ಲ ಫುಲ್ ಅದಾವು. ಇಂಥ ಹೊತ್ತಿನ್ಯಾಗ ಈ ಸಿದ್ಧಲಿಂಗಪ್ಪ ಸಾಧನಾ ಸಮಾವೇಶ ಮಾಡ್ಕೊಳ್ಳಾಕಹತ್ಯಾನಲ್ಲ, ಏನರ ಬುದ್ದಿ ಐತೆನು ಇವಗ…” ನಗರಾಯುಕ್ತರ ಚೇಂಬರ್ ಮುಂದೆ ಸಾಲಿನಲ್ಲಿ ಕಾಯುತ್ತಿದ್ದ ನಿವೃತ್ತ ಶಿಕ್ಷಕ ರಂಗಣ್ಣನವರು ಮೆಲ್ಲನೇ ಗೊಣಗುತ್ತಿದ್ದರು. ಪಕ್ಕದಲ್ಲಿ ಕುಳಿತಿದ್ದ ಕಿರಾಣಿ ವ್ಯಾಪಾರಿ, “ನನ್ನ ಆಸ್ತಿಯ ತೆರಿಗೆ ಚಲನ್‍ನಲ್ಲಿ ಹತ್ತು ಪಟ್ಟು ಹೆಚ್ಚಾಗೈತಿ.. ಯಾಕೆ ಅಂತ ಕೇಳಾಕ ನಾಲ್ಕು ತಿಂಗಳಿಂದ ಇಲ್ಲಿಗೆ ಬರಾಕಹತ್ತೀನಿ. ಯಾರೂ ಕೇರ್ ಮಾಡಿಲ್ಲ” ಅಂತ ದನಿ ಸೇರಿಸಿದ.

ಡಿ.ಜೆ.ಸೆಟ್‍ನ ಅಬ್ಬರ ಕಿವಿಗಡಚಿಕ್ಕುವಂತಿತ್ತು. ಮೆರವಣಿಗೆಯ ಹೊಡೆತಕ್ಕೆ ರಸ್ತೆಯ ಇಕ್ಕೆಲದ ಅಂಗಡಿಗಳ ಶಟರ್‍ಗಳು ಕುಣಿದಾಡುತ್ತಿದ್ದವು. ಭಾಸ್ಕರ್ ಆಸ್ಪತ್ರೆಯಲ್ಲಿನ ರೋಗಿಗಳಿಗೆ ತಾಳದ ಹಿಂಸೆ. ಕೋವಿಡ್ ವಾರ್ಡ್ ಅಂತೂ ಸಿಹಿ ಹಂಚಲು ಬಂದ ಮೇಯರ್ ಬೆಂಬಲಿಗರಿಂದ ತುಂಬಿಹೋಗಿತ್ತು. ದೈಹಿಕ ಅಂತರ, ಮಾಸ್ಕ್ ಧರಿಸಲೇಬೇಕೆಂಬ ನಿಯಮಗಳ ಫಲಕ ಏಕಾಂಗಿಯಾಗಿತ್ತು. ಮೆರವಣಿಗೆಯಲ್ಲಿ ಆಗಮಿಸಿದ ಸಿದ್ಧಲಿಂಗಪ್ಪ, ಉಪ ಮೇಯರ್ ಶುಭಾಂಗಿ ಟ್ರಾಕ್ಟರ್ ಟ್ರೇಲರ್ ಮೇಲೆ ಮಣಗಟ್ಟಲೇ ಭಾರದ ಹೂವಿನ ಹಾರ ಧರಿಸಿ ನಿಂತಿದ್ದರು. “ಮೇಯರ್ ಸಿದ್ಧಲಿಂಗಪ್ಪನವರಿಗೆ” ಎಲ್ಲಾಚಾರ್ಯನ ಆವಾಜ್‍ಗೆ “ಜೈ” ಅಂತಿದ್ದರು ಬೆಂಬಲಿಗರು. ಹಿಂಬಾಲಿಸುತ್ತಿದ್ದ ಕಾರಿನಲ್ಲಿ ಕುಳಿತಿದ್ದ ಜಯೇಂದ್ರ “ಅಸಲಿಗೆ ಮೇಯರ್ ನಾನೇ…” ಎಂಬಂತೆ ಮುಗುಳ್ನಗುತ್ತಿದ್ದ.

ಕಾರ್ಯಕ್ರಮ ಶುರುವಾಯಿತು. ತನ್ನ ಸೇಡನ್ನು ತೀರಿಸಿಕೊಳ್ಳಲೆಂಬಂತೆ ಸ್ವಾಗತ ಶುರು ಮಾಡಿದ ಎಲ್ಲಾಚಾರ್ಯ. “ನಮ್ಮ ಸಿದ್ಧಲಿಂಗಪ್ಪನವರು ಯಾವುದೇ ಸಿಡಿಯೂರಪ್ಪನಿಗೂ ಕಮ್ಮಿ ಇಲ್ಲ. ಒಂದೇ ತಿಂಗಳಲ್ಲಿ ಕೊರೋನಾ-ಗಿರೋನಾ ಏನನ್ನೂ ಲೆಕ್ಕಿಸದೇ ಅಭಿವೃದ್ಧಿ ಹೊಂದುತ್ತಿದ್ದಾರೆ. ಅವರ ಎಲ್ಲ ಕೆಲಸಗಳಿಗೆ ಅವರ ಏಕೈಕ ಪುತ್ರ ಜಯಣ್ಣನೂ ಹಗಲಿರುಳು ಸಾಥ್ ನೀಡುತ್ತಿದ್ದಾರೆ. ಈ ತಂದೆ-ಮಗನ ಸೇವೆಯಿಂದಲೇ ಇವತ್ತು ನಗರದ ಒಂದು ಗಟಾರದಲ್ಲೂ ನೀರು ಉಳಿದಿಲ್ಲ. ಅಷ್ಟರ ಮಟ್ಟಿಗೆ ಇವರು ಸ್ವಚ್ಛತೆಯನ್ನು ನಗರದಲ್ಲಿ ಕಾಪಾಡಿದ್ದಾರೆ. ನಾಗರಿಕರೇ, ನಲ್ಲಿಯಲ್ಲಿ 15 ದಿನಗಳಿಂದ ನೀರು ಬಂದಿಲ್ಲ ಎನ್ನುವುದು ಬೇರೆ ವಿಷಯ. ಆದರೆ ಎಣ್ಣೆ ಅಂಗಡಿಯ ಮುಂದಿನ ರಸ್ತೆಗಳು ಸುಧಾರಿಸಿವೆಯಲ್ಲ ಅನ್ನೋದೇ ನಮಗೆ-ನಿಮಗೆ ಸಂತಸದ ಸಂಗತಿ. ಇಂಥ ಮೇಯರ್ ಅವರು ತಮ್ಮ ಅಧಿಕಾರಾವಧಿಯನ್ನು ಆದಷ್ಟು ಬೇಗ ಯಶಸ್ವಿಯಾಗಿ ಪೂರೈಸಲಿ ಅಂತ ನಾನಿವತ್ತು ಮನಸಾರೆ ಹಾರೈಸುತ್ತೇನೆ…” ಅಂತ ಭಾಷಣ ಮುಗಿದಾಗ ಸಿದ್ಧಲಿಂಗಪ್ಪನವರ ಮುಖ ಬೆವರೊಡೆದಿತ್ತು.

ಈಗ ಸಿದ್ಧಲಿಂಗಪ್ಪನವರ ಭಾಷಣದ ಸರದಿ. “ಈ ನಮ್ಮ ಎಲ್ಲಾಚಾರ್ಯ ಏನಿದ್ದಾನಲ್ಲ, ಇವನು ನಮ್ಮ ಮನೆ ಮಗ ಇದ್ದಂತೆ. ಆವೇಶದಲ್ಲಿ ಏನನ್ನೋ ಮಾತನಾಡಲು ಹೋಗಿ ಏನನ್ನೋ ಮಾತಾಡುತ್ತಾನೆ. ಹಾಗಾಗಿಯೇ ಇವನಿಗೆ ನಾನು ಯಾವುದೇ ಕಮೀಟಿಯ ಮೇಂಬರ್‍ಶಿಪ್ ನೀಡಿಲ್ಲ. ನಾಗರಿಕರೇ, ನಾನು ಅಧಿಕಾರಕ್ಕೆ ಬಂದಾಗ ನಗರದ ಸ್ಥಿತಿ ಹೇಗಿತ್ತು ಅಂತ ನಿಮಗೆ ಗೊತ್ತೇ ಇದೆ. ಈಗ ಹೇಗಿದೆ ಅನ್ನೋದನ್ನ ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ…”

ಸಿಳ್ಳೆ ಹೊಡೆಯಲೆಂದೇ ಬಂದಿದ್ದ ಕಡೆ ವಾರ್ಡ್‍ನ ಯುವಕರ ಕೇಕೆ ಜೋರಾಗಿತ್ತು. “ಬೇಗ ಬೇಗ ಮುಗಿಸಿ ನಮ್ಮ ಬಾಡಿಗೆ ಕೊಡ್ರೆಪಾ ಸಾಕು…” ಅಂತ ಯುವಕರ ಮುಖಂಡ ಕೂಗಿದಾಗ, “ಇನ್ನೊಂದು ಸ್ವಲ್ಪ ಹೊತ್ತು ತಡ್ಕೋಳ್ಳಪ್ಪಾ” ಅಂತ ಧ್ವನಿವರ್ಧಕದಲ್ಲೇ ಹೇಳಿಬಿಟ್ರು ಮೇಯರ್ ಸಿದ್ಧಲಿಂಗಪ್ಪನವರು. ವೇದಿಕೆಯಲ್ಲಿ ಕುಳಿತಿದ್ದ ಡೆಪ್ಯುಟಿ ಮೇಯರ್ ಶುಭಾಂಗಿಯವರು ಮುಖದಲ್ಲಿ ಮುಗಳ್ನಗು ಮೂಡಿದಾಗಲೂ ಜೋರಾದ ಕೇಕೆ-ಸಿಳ್ಳೆ-ಚಪ್ಪಾಳೆಗಳು ಕೇಳಿಬಂದವು. ಅದು ತಮಗೆ ಬಂದ ಪ್ರಶಂಸೆ ಎಂದುಕೊಂಡು ಭಾಷಣ ಮುಂದುವರಿಸಿದರು ಮೇಯವ್ರ

ಅಲ್ಲಲ್ಲ ಮೇಯರ್ ಸಾಹೇಬರು!

Leave a Reply

Your email address will not be published.