ಸಿದ್ಧ ಮಾದರಿ ಮತ್ತು ಹೊಸ ತಲೆಮಾರು

ರಟ್ಟೀಹಳ್ಳಿ ರಾಘವಾಂಕುರ

ಚರ್ಚೆ ಸಂವಾದಗಳು ಪ್ರತ್ಯೇಕ ವಲಯದಲ್ಲಿ ನಡೆಯುತ್ತಿರುವುದು ಹೇಗೆ ಕಾಣುತ್ತಿದೆಯೆಂದರೆ ಪೀಪಿ ಊದುವವ ತನ್ನಷ್ಟಕ್ಕೇ ತಾನು ಊದುತ್ತಲಿದ್ದಾನೆ, ಡೋಲು ಬಡೆಯುವವ ತನ್ನಷ್ಟಕ್ಕೆ ತಾನು ಬಡಿಯುತ್ತಲೆ ಇದ್ದಾನೆ; ಸ್ವರ ತಾಳಗಳು ಭಿನ್ನವಾಗಿ ಕರ್ಕಶವಾದ ನಾದ ಹೊರಡಿಸುತ್ತಾ ಶೃತಿ ತಪ್ಪಿದ ತಾಳವಾಗಿದೆ.

ಭಾರತದಂತಹ ವೈವಿಧ್ಯಮಯ ದೇಶದ ಬೌದ್ಧಿಕ ಹಾಗೂ ಭಕ್ತಿ ಪರಂಪರೆಯ ಬೆಳವಣಿಗೆ ಹಾಗೂ ಫಲಿತಗಳು ಅಚ್ಚರಿಯನ್ನು ಮೂಡಿಸುತ್ತವೆ. ಇವು ನಮ್ಮೆದುರು ಇಟ್ಟಿರುವ ದೃಷ್ಟಿಕೋನಗಳು ಬದುಕಿನ ಒಂದೊಂದು ಬಗೆಯ ಪಾಶ್ರ್ವಿಕ ಸತ್ಯಗಳನ್ನು ಅನಾವರಣ ಮಾಡುತ್ತವೆ. ಬಗೆಯ ಸತ್ಯಗಳಿಗೆ ನೇತುಬಿದ್ದ ಮನಸ್ಸುಗಳು ಮೂರನೇ ಆಯಾಮದ ಸತ್ಯವನ್ನು ಹೊಸ ತಲೆಮಾರು ಯೋಚಿಸದಂತೆ ನಿಷ್ಕ್ರಿಯರನ್ನಾಗಿಸಿದೆ. ಅಲ್ಲದೆ ಇವುಗಳನ್ನು ರಾಜಕೀಯ ಹಿತಾಸಕ್ತಿಯ ನೆಲೆಯಿಂದ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ.

ಸಿನೆಮಾ ನಟ ಅಥವಾ ಕ್ರಿಕೆಟ್ ಆಟಗಾರರನ್ನೊ ಫ್ಯಾನ್ಬೇಸ್ ನೆಲೆಯಿಂದ ನೋಡಿ ಆಸಕ್ತಿಯಿಂದ ಅನುಕರಿಸುತ್ತಿದ್ದ ಯುವ ಜನಾಂಗ ಈಗ ವಿರಳ. ಬದಲಾಗಿ ರಾಜಕೀಯ ಪಕ್ಷಗಳ ಹಾಗೂ ನಾಯಕರುಗಳ ಹಿಂದುಮುಂದು ಓಡಾಡುತ್ತ ಗುರುತಿಸಿಕೊಳ್ಳುವ ಐಡೆಂಟಿಟಿ ಕ್ರೈಸಿಸ್ ಹೆಚ್ಚಾಗಿದೆ. ಜಾಲತಾಣಗಳಲ್ಲಿ ಬಗೆಯ ಫೆÇೀಟೋ ಹಂಚಿಕೊಳ್ಳುವ ಮೂಲಕ ತಾನೂ ಜನಪ್ರಿಯತೆ ಹೊಂದುವ ಅಗ್ಗದ ತಂತ್ರಗಾರಿಕೆ. ತಮ್ಮ ಪಕ್ಷ ಅಥವಾ ನಾಯಕರ ಸೈದ್ಧಾಂತಿಕ ನಿಲುವನ್ನೆ ತಮ್ಮ ನಿಲುವನ್ನಾಗಿಸುವ ಮೂಲಕ ಸ್ವತಂತ್ರ ವಿಚಾರಶೀಲ ಮನಸ್ಥಿತಿಯ ಕುರಿತು ಯೋಚಿಸುವ ವ್ಯವಧಾನವನ್ನೂ ಕಳೆದುಕೊಂಡಿದ್ದಾರೆ. ಸಾಧ್ಯವಿದ್ದ ಕಡೆಗೆಲ್ಲ ಅವರುಗಳ ಹೆಸರು ಬಳಸಿ ಉದ್ಯೋಗ ಕೊಡಿಸುವುದಾಗಿಯೋ ಅಥವಾ ಕೆಲಸ ಮಾಡಿಸಿಕೊಡುವುದಾಗಿಯೋ ನಂಬಿಸುತ್ತಾ ಸುಲಿಗೆಗೆ ಇಳಿದಿರುವುದು ಹೊಸ ಕಸುಬಿನಂತಾಗಿದೆ.

ಇನ್ನು ಅಕ್ಷರಸ್ಥ ವಲಯದಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್ಡಿ ವಿದ್ಯಾರ್ಜನೆಯ ನಂತರ ಕೆಲವರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಾಗಿಯಾಗುತ್ತಿರುವುದು ಹೊಸ ಬದಲಾವಣೆ. ಇದು ನಿರುದ್ಯೋಗದ ಫಲವೊ ಅಥವಾ ಪರ್ಯಾಯ ಉದ್ಯೋಗವೊ? ಎಂಬ ಪ್ರಶ್ನೆ ಮುಂದಿಡುತ್ತಿದೆ. ಹೊಸ ಬೆಳವಣಿಗೆ ಆಶಾವಾದದಂತೆ ಕಂಡರೂ ಫಲಕಾರಿಯಾಗದಂತೆ ನೋಡಿಕೊಳ್ಳುವ ನೇತ್ಯಾತ್ಮಕ ಶಕ್ತಿಯ ಬಣಗಳು ಸ್ಥಳೀಯ ನೆಲೆಯಲ್ಲಿಯೆ ಇರುತ್ತವೆಂಬುದನ್ನು ಕಡೆಗಣಿಸುವಂತಿಲ್ಲ.

ಶೈಕ್ಷಣಿಕ ಅರ್ಹತೆಯನ್ನು ಹೊಂದಿಯೂ ಸಕಾಲದ ನೇಮಕಾತಿ ನಡೆಯದ ಕಾರಣ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಧಾರವಾಡ, ಬಿಜಾಪುರ ಸೇರಿರುವ ದೊಡ್ಡ ಯುವಪಡೆಯೆ ಕರ್ನಾಟಕದಲ್ಲಿದೆ. ವಿಜ್ಞಾನ ಮಾಧ್ಯಮದ ಎಂಜಿನಿಯರ್ ಪದವೀಧರರೂ ಕೂಡ ನಿರುದ್ಯೋಗದಿಂದ ಬೇಸತ್ತು, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಮುಖ ಮಾಡಿದ್ದಾರೆ. ಇನ್ನೊಂದೆಡೆಗೆ ಇವರನ್ನೆ ಬಂಡವಾಳವಾಗಿಸಿಕೊಂಡು ಉದ್ಯಮ ಮಾಡುತ್ತಿರುವ ಕೋಚಿಂಗ್ ಸೆಂಟರ್ಗಳು ಪೈಪೆÇೀಟಿಯಲ್ಲಿವೆ. ಹೀಗೆ ಪಟ್ಟುಬಿಡದ ಓದುವ ವರ್ಗದ ಕುದುರೆಗಳಿಗೆ ಕಟ್ಟಿರುವ ಸ್ಥಿರ ಮಾದರಿಯ ಕಣ್ಪಟ್ಟಿ ಬಿಚ್ಚುವವರು ಯಾರು?

ಇಪ್ಪತ್ತೆಂಟರಿಂದ ಮೂವತ್ತು ವರ್ಷಗಳ ಕಾಲ ಹೊರಜಗತ್ತಿನ ಅನುಭವವೆ ಇಲ್ಲದಂತೆ ಅಥವಾ ಬದುಕಿನ ಕೌಶಲ್ಯಗಳನ್ನು ಕಲಿಸದೆ ಹೋದ ಶೈಕ್ಷಣಿಕ ಸಂಸ್ಥೆಗಳ ಜವಾಬ್ದಾರಿ ಎಡವಿದ್ದೆಲ್ಲಿ? ಸಹೋದ್ಯೋಗಿ, ವಿದ್ಯಾರ್ಥಿಗಳಲ್ಲಿ ಜಾತಿಯಿಂದ ಎದುರು ಎತ್ತಿಕಟ್ಟುವ ಅಧ್ಯಾಪಕರು, ನ್ಯಾಕ್ ಗ್ರೇಡುಗಳಿಗೆ ಬಡಿದಾಡುವ ಸಂಸ್ಥೆಗಳು ಸೆಮಿಸ್ಟರ್ ಪದ್ಧತಿಯ ಬಗ್ಗೆ ತೊಡಕಿನ ಬಗ್ಗೆ ಆಲೋಚಿಸಿವೆಯೆ? ಅಥವಾ ಸೆಮಿಸ್ಟರ್ ರೇಸ್ನಲ್ಲಿ ನೆನಪು, ಅನುಭವದ ಭಾಗವಾಗಿ ಕಲಿತದ್ದು ಎಷ್ಟು? ಜಾತಿಯ ಹುಡುಗನಿಗೆ ಮಾತ್ರ ದೀಕ್ಷೆ ಕೊಡುವ ಗುರುವಿಗೂ, ಜಾತಿಯ ವಿದ್ಯಾರ್ಥಿಗಳಿಗೆ ಮಾತ್ರ ಪಿಎಚ್.ಡಿ ಮೀಸಲಿಟ್ಟುಕೊಂಡ ಅಧ್ಯಾಪಕರಿಗೂ ವ್ಯತ್ಯಾಸವಿಲ್ಲದಂತಾಗಿದೆ. ಇನ್ನು ಅಲ್ಲಿ ಕಲಿಯುವುದು ಹೊಸತೇನುಳಿಯಿತು? ವಸ್ತುನಿಷ್ಠ ಮಾದರಿಯ ಪರೀಕ್ಷೆಯಿಂದಾಗಿ ಬರೆವಣಿಗೆ ಕೌಶಲ್ಯ ಹಾಗೂ ತಾರ್ಕಿಕವಾಗಿ ಯೋಚಿಸುವ ಗುಣವನ್ನೆ ಹತ್ತಿಕ್ಕಲಾಗಿದೆ. ಬಸವಣ್ಣನ ವಚನ ಮೂರು ಅಂಕದ ಪ್ರಶ್ನೆಗೆ ಓದಿಕೊಳ್ಳಿ ಎನ್ನುವ ಅಧ್ಯಾಪಕರ ಮನಸ್ಥಿತಿ ಬದುಕಿನಿಂದ ಬಸವಣ್ಣನನ್ನು ಕಿತ್ತುಕೊಳ್ಳದೆ ಇನ್ನೇನು ಮಾಡೀತು? ನಡುವೆ ಹೊಸತಲೆಮಾರು ಯೋಚಿಸುವ ಗೋಜಲಿಗೆ ಹೋಗದೆ ಮಾಹಿತಿಯನ್ನು ಕಂಠಪಾಠ ಮಾಡಿಯೊಪ್ಪಿಸುವ ಮಾದರಿಯಲ್ಲಿ ಸಿದ್ಧರಾಗುವುದಲ್ಲದೆ, ವ್ಯವಸ್ಥೆಯ ಶೋಷಕತೆಯನ್ನು ಪ್ರಶ್ನಿಸಬೇಕೆಂಬ ಮನೋಭಾವ ಕೂಡ ಇಲ್ಲವಾಗುತ್ತದೆ.

ಸ್ಥಳೀಯ ಮಟ್ಟದಲ್ಲಿ ಜಾತಿ ಹಾಗೂ ರಾಷ್ಟ್ರಮಟ್ಟದಲ್ಲಿ ಧರ್ಮ ಹೊಸ ಹೊಸ ಚಹರೆಗಳನ್ನು ಹೊತ್ತು ಹಲವು ಕ್ಷೇತ್ರದಲ್ಲಿ ಕತ್ತಿ ಮಸೆಯುತ್ತಲೇ ಇದೆ. ವಿಪರ್ಯಾಸವೆಂದರೆ ನಾಡಿನಲ್ಲಿ ವಚನ, ತತ್ವಪದ, ಕೀರ್ತನ, ಸೂಫಿ, ಪಂಥ, ಸಿದ್ಧಾಂತ, ದರ್ಶನಗಳೆಲ್ಲವೂ ಶ್ರೇಷ್ಠತೆಯ ವ್ಯಸನಕ್ಕೆ ಮದ್ದನ್ನು ಅರೆದು ಉಣಬಡಿಸಿದ್ದವು. ಕಾಲಾಂತರದಲ್ಲಿ ಬದಲಾದ ಸ್ವಾರ್ಥ ಜಂತುಗಳು ಮತ್ತೆ ವಿಷವನ್ನೇ ಕಾರುತ್ತಿವೆ. ಲೌಕಿಕದ ಜವಾಬ್ದಾರಿ ಹೊತ್ತು ಶಾಲೆ ಆಸ್ಪತ್ರೆ, ಗ್ರಂಥಾಲಯ, ನೀರು, ಸೂರು, ಆಹಾರದಂತಹ ಮೂಲಭೂತ ಸೌಕರ್ಯ ನೀಡುವ ಬದಲಾಗಿ ಅಲೌಕಿಕದ ಮಂದಿರ ಮಸೀದಿ ಚರ್ಚ್ಗಳನ್ನು ಕಟ್ಟಿಸುವುದೇ ದೇಶದ ತುರ್ತೆಂಬಂತೆ ಭ್ರಮೆಗಳನ್ನು ಬಿತ್ತಲಾಗುತ್ತಿದೆ. ದೇಶವೆಂದರೆ ಬರೀಯ ಭೌಗೋಳಿಕತೆಯಲ್ಲ ಎಂಬುದನ್ನು ಅರಿಯುವುದಾದರೂ ಯಾವಾಗ?

ಸಾಂವಿಧಾನಿಕ ಮೌಲ್ಯಗಳನ್ನು ಧರ್ಮಗಳ ನೆಪದಲ್ಲಿ ತಿರುಚುವ ಮೂಲಕ ವ್ಯವಸ್ಥೆಯಲ್ಲಿ ಮೌಲ್ಯಗಳನ್ನು ಅಪಾಯದ ಅಂಚಿನಲ್ಲಿಡುವ ಹುನ್ನಾರವನ್ನು ಎಲ್ಲ ಧರ್ಮದ ಗದ್ದುಗೆಗಳೂ ಮಾಡುತ್ತಲಿವೆ. ವೈಯಕ್ತಿಕ ಚಿಹ್ನೆ, ಗುರುತು, ನಂಬುಗೆಗಳನ್ನು ಮನೆಯ ಹೊಸ್ತಿಲೊಳಗಿಟ್ಟು, ಮುಕ್ತ ಮನಸ್ಸಿನಿಂದ ಪ್ರೀತಿ ಸಹಬಾಳ್ವೆಗೆ ಸಮಾಜದಲ್ಲಿ ತೆರೆದುಕೊಳ್ಳಬೇಕಿದೆ.

ಸಾಮಾಜಿಕ ಜಾಲತಾಣಗಳು ಶತಮಾನದ ಶಕ್ತಿಶಾಲಿ ಪ್ರಭಾವಿ ಮಾಧ್ಯಮ. ಆದರೆ ದೀರ್ಘ ಓದು ಹಾಗೂ ವಿಚಾರಶೀಲ ಗುಣವನ್ನು ಕಡಿಮೆ ಮಾಡಿವೆ. ಇಂಟರ್ನೆಟ್ ಬಳಕೆಯನ್ನು ದಿನದ ತುರ್ತಿನಂತೆ ಖಾಸಗೀಕರಣ ಅಭ್ಯಾಸ ಮಾಡಿಸಿಬಿಟ್ಟಿದೆ. ಆಯಾ ಪಕ್ಷದ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಪೇಜ್, ಖಾತೆಗಳು ತೆರೆದುಕೊಂಡಿವೆ. ಇವನ್ನು ನಿರ್ವಹಿಸಲು ಹಣ ಕೊಟ್ಟು ಪೆÇ್ರೀತ್ಸಾಹ ಕೂಡ ಮಾಡಲಾಗುತ್ತದೆ. ವಿಚಾರದ ಫಲಿತವೆಂಬಂತೆ ಒಂದೇ ಪೆೀಸ್ಟರ್/ಚಿತ್ರದಲ್ಲಿ ಚಿಕ್ಕದಾಗಿ ಒಕ್ಕಣೆ ಬರೆದು ಮತ್ತೆ ಪ್ರಶ್ನಿಸದಂತೆ ಒಪ್ಪಿಸುವ ಪರಿಪಾಠ ನಡೆದಿದೆ. ಸುಲಭವಾಗಿ ಹಂಚಿಕೊಳ್ಳಬಲ್ಲ ಹಾಗೂ ಕಡಿಮೆ ಓದಿನ ಸಮಯ ನಿರೀಕ್ಷಿಸಬಲ್ಲ ಪೆೀಸ್ಟರ್/ಇಮೇಜ್ಗಳು ತಾರ್ಕಿಕ ಚಿಂತನೆಗೆ ಒಳಪಡಿಸುವುದೆಯಿಲ್ಲ. ತೀರ್ಮಾನಗಳಂತೆ ತಕ್ಷಣದ ವ್ಯಂಗ್ಯ, ಗೇಲಿ, ಹಾಸ್ಯ, ಚಮತ್ಕಾರಿ ಅಂಶಗಳಿಂದ ವಾಸ್ತವದ ಸಮಸ್ಯೆಯನ್ನು ಮರೆಮಾಚುವುದು ಹಾಗೂ ಇನ್ನೊಬ್ಬರ ವಿರುದ್ಧ ಎತ್ತಿ ಕಟ್ಟುವುದೆ ಇವುಗಳ ಕೆಲಸ. ತಮ್ಮ ಶ್ರೇಷ್ಠತೆಯನ್ನು ನಡೆಯುತ್ತಿರುವ ಅಥವಾ ಹಿಂದಿನ ಕೇಡುಗಳ ಮೂಲಕ ಸ್ವಸಮರ್ಥಿಸಿಕೊಳ್ಳುವುದನ್ನು ಮಾಡುತ್ತಿರುತ್ತವೆ. ಕುರಿತು ಯುವಜನರು ಬಹಳ ಎಚ್ಚರಿಕೆಯಿಂದ ಗಮನಿಸಬೇಕು.

ಗಾಸಿಪ್, ಜ್ಯೋತಿಷ್ಯ, ಕಳಪೆ ಜೋಕ್ಗಳಿಂದ ತುಂಬಿದ ಟಿ.ವಿ ಮಾಧ್ಯಗಳು ಶಿಕ್ಷಣ, ವಿಜ್ಞಾನ, ಕಾನೂನಿನ ಬಗ್ಗೆ ವಹಿಸುವ ಕಾಳಜಿಗಳೆಲ್ಲಿವೆ? ಲಾಕ್ಡೌನ್ ಸಮಯದಲಿಚಂದನ ಹೊರತಾಗಿ ಯಾವ ನ್ಯೂಸ್ ಚಾನಲ್ಗಳು ಕನಿಷ್ಟ ಒಂದೊಂದು ಗಂಟೆಯಂತೆ ಸರದಿಯಾಗಿ ಶೈಕ್ಷಣಿಕ ಕಾರ್ಯಕ್ರಮವನ್ನು ಬಿತ್ತರಿಸಲೆ ಇಲ್ಲ. ಅಸಲಿಗೆ ಎಲೆಕ್ಟ್ರಾನಿಕ ಮೀಡಿಯಾ ಶೈಕ್ಷಣಿಕ ವಲಯದ ಮಕ್ಕಳನ್ನು ಅಲಕ್ಷ್ಯವಹಿಸಿದಂತಿವೆ. 2ಜಿಬಿ ಡೇಟಾ ಒಂದು ಗಂಟೆಯ ಪಾಠಕ್ಕೆ ಖಾಲಿಯಾಗುವಾಗ ಪಾಲಕರು ಮಕ್ಕಳ ಶಿಕ್ಷಣಕ್ಕೆ ಭರಿಸುವ ಖರ್ಚೆಷ್ಟು, ಅಸಲಿಗೆ ಎಲ್ಲರಿಗೂ ಇದು ಕೈಗೆಟಕುತ್ತಿದೆಯೇ?

ಸಾಹಿತ್ಯಿಕ, ಸಾಂಸ್ಕøತಿಕ ವಲಯದಲ್ಲಿ ಪಂಥಗಳನ್ನು ಗುರುತಿಸಿಕೊಳ್ಳುವ ಅಥವಾ ನಿಲುವನ್ನು ತೆಗೆದುಕೊಳ್ಳುವ ಅಭ್ಯಾಸ ನಡೆಯುತ್ತಿದೆ. ಎಲ್ಲ ಕಲಾ ಮಾಧ್ಯಮಗಳ ಅಂತಿಮ ಉದ್ದೇಶ ಸಮಾಜದ ಅಭಿರುಚಿಯನ್ನು ಉನ್ನತೀಕರಿಸುವುದಾಗಬೇಕೇ ಹೊರತು ಆಸ್ತಿಕ ನಾಸ್ತಿಕದ ಚರ್ಚೆಯಿಂದಲ್ಲ. ಪ್ರಗತಿದಾಯಕವಾದ ಸಮತೆಯ ದ್ಯೋತಕವಾಗಿ ಚಿಂತನ ಮಂಥನ ಅವಶ್ಯಕತೆ ಸಮಾಜಕ್ಕಿದೆ. ಚರ್ಚೆ ಸಂವಾದಗಳು ಪ್ರತ್ಯೇಕ ವಲಯದಲ್ಲಿ ನಡೆಯುತ್ತಿರುವುದು ಹೇಗೆ ಕಾಣುತ್ತಿದೆಯೆಂದರೆ ಪೀಪಿ ಊದುವವ ತನ್ನಷ್ಟಕ್ಕೇ ತಾನು ಊದುತ್ತಲಿದ್ದಾನೆ, ಡೋಲು ಬಡೆಯುವವ ತನ್ನಷ್ಟಕ್ಕೆ ತಾನು ಬಡಿಯುತ್ತಲೆ ಇದ್ದಾನೆ. ಸ್ವರ ತಾಳಗಳು ಭಿನ್ನವಾಗಿ ಕರ್ಕಶವಾದ ನಾದ ಹೊರಡಿಸುತ್ತಾ ಶೃತಿ ತಪ್ಪಿದ ತಾಳವಾಗಿದೆ. ವಿಚಾರಗಳನ್ನು ಎತ್ತರಕ್ಕೇರಿಸು ಧ್ವನಿಯನ್ನಲ್ಲ ಎಂದ ಕವಿ ಮಾತು ನೆನಪಾಗುತ್ತಿದೆ.

ಒಂದೇ ಮನಸ್ಥಿತಿಯ ಶ್ರೋತೃವರ್ಗದಿಂದ ಕೂಡಿದ ಈಗಿನ ವೇದಿಕೆಗಳು ಶತಮಾನಗಳಿಂದ ಸ್ಥಿರ ಮಾದರಿಯ ತಿರಸ್ಕಾರ ಸ್ವಸಮರ್ಥನೆ ಮಾಡುತ್ತಿವೆಯೆ ಹೊರತು, ಅರ್ಥಪೂರ್ಣ ಸಂವಾದಗಳ ರೂಪದಲ್ಲಿ ಸಾರವನ್ನು ಮುಂದಿಡುತ್ತಿಲ್ಲ. ಅಥವಾ ಸ್ವತಃ ಕಟ್ಟಿಕೊಂಡ ಸಂವಿಧಾನದ ನೆಲೆಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳಲು ಹಿಂದೇಟು ಹಾಕುತ್ತವೆ. ಬದಲಾಗಿ ಪಕ್ಷದ ಪ್ರಾಯೋಜಿತ ಕಾರ್ಯಕ್ರಮವೆಂಬಂತೆ ಆಯೋಜಿಸಲಾಗಿರುತ್ತದೆ. ತನ್ನ ಶತಮಾನದ ಸಮಸ್ಯೆಗಳನ್ನು ಹೊಸ ತಲೆಮಾರಿನ ಹೆಗಲಿಗೆ ಹೊರಿಸುತ್ತಿವೆಯೆ ಹೊರತು ಕೂಡಿಬಾಳುವ ಸಮಸಮಾಜದ ಆಶಯಗಳನ್ನು ಇಟ್ಟುಕೊಂಡಂತಿಲ್ಲ. ಎಲ್ಲಿಯವರೆಗೆ ಹೊಸ ತಲೆಮಾರು ಹಳೆಯ ಭಾರ ಹೋರುತ್ತಾ ಹೊಸ ಚಿಂತನೆಗೆ ಎಡೆಮಾಡಿಕೊಳ್ಳದೆ ಹಿಂಬಾಲಕರಂತೆ ಸಾಗುವುದೊ, ಅಲ್ಲಿಯವರೆಗೆ ಅಸಮರ್ಥರಾಗುವುದು ನಿಶ್ಚಿತ.

ಹೊಸ ತಲೆಮಾರು ಇನ್ನೂ ಲಿಂಗ, ವರ್ಣ, ವರ್ಗ, ಜಾತಿ ಧರ್ಮ, ಪಕ್ಷಗಳ ಸಂಕೋಲೆಯಲ್ಲಿ ಬಂಧಿಯಾಗುವುದು ಎಷ್ಟರ ಮಟ್ಟಿಗೆ ಔಚಿತ್ಯಪೂರ್ಣ? ಹೊಸ ತಲೆಮಾರು ವರ್ತಮಾನದ ಜಗತ್ತಿನಲ್ಲಿ ಅನುಭವಿಸಬಹುದಾದ ಸುಂದರ ಕ್ಷಣಗಳನ್ನು ಅನುಭವಿಸಲು ಬಿಡದ ನಾವು ಎಂತಹ ಹೃದಯಹೀನರು, ನಿಕೃಷ್ಟರು. ಸ್ವತಂತ್ರ ಆಲೋಚನೆ, ವಿಚಾರಪರ ವ್ಯಕ್ತಿತ್ವ, ಬದ್ಧತೆ ಪ್ರೀತಿ ವಿಶ್ವಾಸವನ್ನು ಇಟ್ಟುಕೊಳ್ಳದಿದ್ದರೆ ಯುವಜನಾಂಗ ಮತ್ತದೇ ಹಳೆಯ ಭಾರಗಳನ್ನು ಹೊತ್ತು ಸಾಗಬೇಕಾಗುತ್ತದೆ. ಇಲ್ಲಿನ ನೆಮ್ಮದಿಯನ್ನು ಪ್ರಜ್ಞಾವಂತರ ಮೌನ ಕಸಿದಷ್ಟು ಹುಂಬರ ಮಾತುಗಳು ಕಸಿದಿಲ್ಲ ಎಂಬುದೆ ವಿಪರ್ಯಾಸ.

ಚರ್ಚೆಯನ್ನು ಎಲ್ಲಿಂದ ಆರಂಭಿಸಿದರೂ ಅದರ ಮೂಲ ಪ್ರಭುತ್ವದ ಹತ್ತಿರಕ್ಕೆ ತಂದು ನಿಲ್ಲಿಸುತ್ತದೆ. ಮೂಲದಿಂದ ಮಾತ್ರವೆ ಇನ್ನೆಲ್ಲವನ್ನು ಸರಿ ದಾರಿಗೆ ತರಲು ಸಾಧ್ಯ. ಆದರೆ ಅಲ್ಲಿ ಪ್ರಜ್ಞಾವಂತರು ಇರಬೇಕೆಂಬುದು μÉ್ಟೀ ಮುಖ್ಯ. ನಾಡಿನ ಸಮಸಮಾಜದ ಕನಸನ್ನು ನನಸಾಗಿಸಲು ಇರುವ ಏಕೈಕ ದಾರಿ ಅದು ಸಂವಿಧಾನ ಮತ್ತು ರಾಜಕೀಯ ಪ್ರಜ್ಞೆ. ಇಂದಿಗೂ ನಮ್ಮ ನಮ್ಮ ಹಳ್ಳಿಗಳತ್ತ ಕಣ್ಣಾಡಿಸಿದರೆ ಬದಲಾವಣೆ ಇರಲಿ ನೀರು, ರಸ್ತೆ, ಬೆಳಕು, ಚರಂಡಿಗಳೆ ಸರಿಯಾಗಿ ನಿರ್ಮಾಣವಾಗದಿದ್ದರೂ ಸಕಾಲದಲ್ಲಿ ಚುನಾವಣೆ ಆಗುತ್ತಲೂ ಇವೆ. ಹೊಸ ಗದ್ದುಗೆಗಳು ಹೊಸ ಅವತಾರ ಪಡೆಯುತ್ತಲೂ ಇವೆ. ಶಿಕ್ಷಣ, ಉದ್ಯೋಗ, ಆರೋಗ್ಯ, ಆರ್ಥಿಕತೆಗಳೆಲ್ಲವೂ ಪ್ರಭುತ್ವದ ಕಕ್ಷೆಯಲ್ಲಿ ತಿರುಗುತ್ತವೆ. ಅದು ಬದಲಾದಂತೆ ಇವುಗಳ ಬದಲಾವಣೆಯೂ ಸಾಧ್ಯ. ಎರಡೆ ಪಾಷಾಣಗಳಿರುವ ವರ್ತಮಾನದಲ್ಲಿ ಮೂರನೆ ಸಾಂವಿಧಾನಿಕ ವ್ಯವಸ್ಥೆಯನ್ನು ಕಟ್ಟಿಕೊಳ್ಳುವ ಧೈರ್ಯವನ್ನು ಯುವ ಜನಾಂಗ ಕೈಗೆತ್ತಿಕೊಳ್ಳಲೇಬೇಕಾಗಿದೆ.

ಎಲ್ಲ ಬದಲಾವಣೆಗಳ ಹಿನ್ನೆಲೆಯಲ್ಲಿ ರಾಜಕೀಯ ಆಯಾಮದ ನಿರ್ಧಾರ ಪ್ರಬಲವಾಗಿರುತ್ತದೆಂಬುದನ್ನು ಯುವಜನಾಂಗ ಮರೆಯಬಾರದು. ಎಲ್ಲವನ್ನು ತಿರುಗಿಸುವ ಬುಗರಿಯ ದಾರ ಪ್ರಭುತ್ವದಲ್ಲಿದೆ. ವರ್ತಮಾನದಲ್ಲಿ ಇಂತಹ ರಾಜಕೀಯ ನಡೆ, ಗತಿ ಮತ್ತು ತೀರ್ಮಾನಗಳನ್ನು ಪ್ರಶ್ನಿಸಿಕೊಂಡು, ವ್ಯವಸ್ಥೆಯ ಬದಲಾವಣೆ ಕುರಿತು ನೋಡದಿದ್ದರೆ ಗಾಂಧೀ, ಅಂಬೇಡ್ಕರ್ ಅವರಂತಹ ಮಹಾನ್ ಚಿಂತನೆಗಳು ನಾಡಿನಲ್ಲಿದ್ದವು ಎಂಬುದನ್ನು ಮತ್ತೆ ಕೇವಲ ಪುಸ್ತಕದಲ್ಲಿ ಮಾತ್ರ ಇಡಬೇಕಾಗುತ್ತದμÉ್ಟ. ಕಾಣುವ ಸತ್ಯಕ್ಕಷ್ಟೆ ಜೋತುಬೀಳುವ ಹೊಸ ತಲೆಮಾರು ಬಸವಣ್ಣನ ವಚನಮನೆಯೊಳಗೆ ಮನೆಯೊಡಯನಿದ್ದಾನೊ ಇಲ್ಲವೊಎಂಬ ಬಗ್ಗೆ ಪರೀಕ್ಷಿಸಿಕೊಳ್ಳುವ ಸಕಾಲವಿದು.

Leave a Reply

Your email address will not be published.