ಸಿನಿಮಾರಂಗದ ಮೇಲೆ ಕೋವಿಡ್-19 ಪರಿಣಾಮ

ಸಿನೆಮಾ ಅಭಿವ್ಯಕ್ತಿ ಕ್ರಮ ಅಥವಾ ಶೈಲಿಯ ಪಲ್ಲಟಕ್ಕೆ ಕೊರೋನಾ ಕಾರಣವಾಗಿದೆ. ಆದರೆ ಪ್ರೇಕ್ಷಕರು ಬದಲಾದ ಕಾಲಮಾನಕ್ಕೆ ತಕ್ಕಂತೆ ತಮ್ಮ ಅಭಿರುಚಿಗಳನ್ನು, ಸಿನಿಮಾ ನೋಡುವ ವಿಧಾನಗಳನ್ನೂ ಮಾರ್ಪಡಿಸಿಕೊಳ್ಳುತ್ತಿದ್ದಾರೆ. ಕೋವಿಡ್ ಹಾವಳಿಯು ಈ ಬದಲಾವಣೆಯನ್ನು ಹೆಚ್ಚು ಸ್ಥಿರಗೊಳಿಸಲು ತನ್ನ ಕಾಣಿಕೆಯನ್ನು ನೀಡುತ್ತಿದೆ.

ಮಿಷು ಕಾಕು ಎಂಬ ಅಮೆರಿಕದ ಪ್ರಸಿದ್ಧ ಭೌತವಿಜ್ಞಾನಿಯು ಇಪ್ಪತ್ತೊಂದನೆಯ ಶತಮಾನದ ಜಗತ್ತಿನ ಮೇಲೆ ತಂತ್ರಜ್ಞಾನಗಳು ಬೀರಬಹುದಾದ ಪರಿಣಾಮಗಳನ್ನು ಕುರಿತ ‘ವಿಷನ್ಸ್’ ಎಂಬ ವಿಜ್ಞಾನ ಭವಿಷ್ಯದ್ದರ್ಶನದ ಪುಸ್ತಕವೊಂದನ್ನು ಬರೆದ. 1988 ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ ವಿಜ್ಞಾನಿ ಕಾಕು, ಜಗತ್ತಿನಲ್ಲಿ ನಡೆಯುತ್ತಿರುವ ತಂತ್ರಜ್ಞಾನ ಕ್ರಾಂತಿಯು ಮನುಕುಲದ ಬದುಕಿನಲ್ಲಿ ಉಂಟಾಗಬಹುದಾದ ಪಲ್ಲಟಗಳನ್ನು ಅಂದಾಜು ಮಾಡಿದ. ಆತ ಜಗತ್ತಿನಲ್ಲಿ ಜರುಗುತ್ತಿರುವ ಪ್ರಯೋಗಗಳು ಮುಂದೆ ತಲುಪಬಹುದಾದ ಸಾಧ್ಯತೆಗಳನ್ನು ತರ್ಕಿಸಿ ತನ್ನ ತೀರ್ಮಾನಗಳಿಗೆ ಬಂದ.

ಇಪ್ಪತ್ತೊಂದನೆಯ ಶತಮಾನದಲ್ಲಿ ಮನುಷ್ಯರು ‘ದೈವ’ಸೃಷ್ಟಿಸಿದ ಜಗತ್ತಿನ ವಿರಾಟ್‌ಲೀಲೆಯನ್ನು ಮೂಕವಾಗಿ ನೋಡುವ ಪ್ರೇಕ್ಷಕರಾಗದೆ ವಿಶ್ವದ ದ್ರವ್ಯರಾಶಿ, ಜೀವಿಗಳು ಮತ್ತು ಬೌದ್ಧಿಕತೆಯನ್ನು ತನಗಿಷ್ಟ ಬಂದಂತೆ ಕುಣಿಸುವ ನೃತ್ಯ ನಿರ್ದೇಶಕರಾಗುವ ಭವಿಷ್ಯವನ್ನು ಬಿಡಿಸಿದ. ಮುಖ್ಯವಾಗಿ ಅನಂತ ಸಾಧ್ಯತೆಯ ತಾಂತ್ರಿಕ ಸಾಧನಗಳು, ಕೃತಕ ಬುದ್ಧಿಮತ್ತೆ ಮತ್ತು ಬದುಕುವ ಹೊಸ ಶೈಲಿಗಳು ತರುವ ಬದಲಾವಣೆಯಲ್ಲಿ ಸಾಂಪ್ರದಾಯಿಕ ಜಗತ್ತು ಕೊಚ್ಚಿಹೋಗುವ ಚಿತ್ರವನ್ನು ನೀಡಿದ. ಆದರೆ ಅಂಥ ಪರಿವರ್ತಿತ ಜಗತ್ತಿನಲ್ಲಿಯೂ ಹೊಸ ಮಾರ್ಗವನ್ನು ಕಂಡುಕೊಂಡು ಉಳಿಯುವ ಕಸುಬು, ಸಾಧನಗಳೆಂದರೆ ಡ್ರೈವರ್, ಪ್ಲಂಬಿಂಗ್‌ನಂಥ ಸಾಮಾನ್ಯ ವೃತ್ತಿಗಳು ಮತ್ತು ಮನರಂಜನೆಯ ಉದ್ಯಮ ಮಾತ್ರ ಎಂದು ಕೆಲವು ಭರವಸೆಯ ತುಣುಕುಗಳನ್ನು ಎಸೆದ. ಆದರೆ ‘ಕೋವಿಡ್’ ನಂಥ ಜಗತ್ತನ್ನು ಬದಲಿಸುವ ರೋಗಗಳ ಆಗಮನವನ್ನು ತರ್ಕಿಸದ ಕಾಕು ನುಡಿದ ಭವಿಷ್ಯದಲ್ಲಿ ಈಗ ಮನರಂಜನಾ ಉದ್ಯಮಕ್ಕೂ ಕುತ್ತು ಬಂದಿದೆ. ಜಗತ್ತು ಮತ್ತೊಮ್ಮೆ ತರ್ಕಗಳ ಹಂಗನ್ನು ತೊರೆದು ಮುಂದುವರಿಯುವುದಕ್ಕೆ ಸಾಕ್ಷಿಯಾಗಿ ನಿಂತಿದೆ.

ಹೌದು! ಕೋವಿಡ್-19 ರೋಗದ ಹಾವಳಿಯು ಮನರಂಜನೆಯ ಉದ್ಯಮದ ಪ್ರಧಾನ ಭಾಗವಾದ ವಿಶ್ವ ಚಲನಚಿತ್ರೋದ್ಯಮದ ಮೇಲೆ ಅಗಾಧ ದುಷ್ಪರಿಣಾಮ ಬೀರಿದೆ. ಚಿತ್ರೋದ್ಯಮದ ಮೇಲಾದ ಪರಿಣಾಮ ಕಲೆಯ ಇತರ ಎಲ್ಲಾ ಕ್ಷೇತ್ರಗಳ ಮೇಲಾಗಿರುವ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಜಗತ್ತಿನ ಎಲ್ಲಾ ಕಡೆ ಚಿತ್ರಮಂದಿರಗಳು ಮುಚ್ಚಿವೆ. ಚಿತ್ರೋತ್ಸವಗಳು ರದ್ದಾಗಿವೆ, ಇಲ್ಲವೇ ಮುಂದೂಡಲ್ಪಟ್ಟಿವೆ. ಆದರೆ ಅವು ನಿಕಟ ಭವಿಷ್ಯದಲ್ಲಿ ಸಾಕಾರಗೊಳ್ಳುವ ಯಾವ ಭರವಸೆಯೂ ಇಲ್ಲ. ನಿರ್ಮಾಣದ ವಿವಿಧ ಹಂತದಲ್ಲಿದ್ದ ಅಂದಾಜಿಗೆ ಸಿಗದ ಮೊತ್ತದ ಬಂಡವಾಳ ಹೂಡಿಕೆಯ ಚಿತ್ರಗಳ ಕಾರ್ಯ ಸ್ಥಗಿತಗೊಂಡಿದೆ. ಸಂಪೂರ್ಣ ಸಿದ್ಧಗೊಂಡ ಸಾವಿರಾರು ಚಿತ್ರಗಳು ಬಿಡುಗಡೆಯ ಭಾಗ್ಯ ಕಾಣದೆ ಪರಿತಪಿಸುತ್ತಿವೆ.

ಅಪಾರ ಬಂಡವಾಳ ಹೂಡಿಕೆಯ ಅನೇಕ ಹಾಲಿವುಡ್ ಚಿತ್ರಗಳನ್ನು 2020 ರ ಮಾರ್ಚ್-ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ಮಾಡಿಕೊಂಡಿದ್ದ ಎಲ್ಲ ಸಿದ್ಧತೆಗಳು ತಲೆಕೆಳಗಾಗಿವೆ. ಹಾಲಿವುಡ್ ಚಿತ್ರೋದ್ಯಮವು ಪ್ರದರ್ಶನದ ರದ್ದಿನಿಂದಾಗಿ 2020ರ ಮಾರ್ಚ್ ವೇಳೆಗೆ ಐದು ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದರೆ, ಚೀನಾ ಚಿತ್ರೋದ್ಯಮದ ನಷ್ಟವನ್ನು ಎರಡು ಮಿಲಿಯಮ್ ಡಾಲರ್‌ನಷ್ಟೆಂದು ಅಂದಾಜು ಮಾಡಲಾಗಿದೆ. ರೋಗ ಮೊದಲು ಉಲ್ಬಣಿಸಿದ ಚೀನಾದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದ ‘ಲಾಸ್ಟ್ ಇನ್ ರಶ್ಯಾ’ ಚಿತ್ರವನ್ನು 2020ರ ಜನವರಿ ಯಂದು ಥಿಯೇಟರ್‌ಗಳಿಂದ ಹಿಂಪಡೆಯಲಾಯಿತು. ಅದನ್ನು ಆನ್ ಲೈನ್‌ನಲ್ಲಿ ಉಚಿತವಾಗಿ ನೋಡಲು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ಮೂರು ದಿನಗಳಲ್ಲಿಯೇ ಜಗತ್ತಿನ 18 ಕೋಟಿ ಜನರು ಅದನ್ನು ಆನ್ ಲಯನ್‌ನಲ್ಲಿ ವೀಕ್ಷಿಸಿದರು. ಪ್ರದರ್ಶನ ರದ್ದಿನಿಂದ ಅದರ ನಿರ್ಮಾಪಕರಿಗಾದ ನಷ್ಟವನ್ನು ಊಹಿಸಿಕೊಳ್ಳಬಹುದು..

ಹಾಗೆಯೇ ಹಾಲಿವುಡ್‌ನ ಜೇಮ್ಸ್ ಕ್ಯಾಮೆರೂನ್‌ನ ಅವಟಾರ್ 2 ಚಿತ್ರಕ್ಕೆ ಯಾವ ಗತಿಯಾಗಿದೆಯೋ ತಿಳಿಯದು. ಕೋಟ್ಯಂತರ ಡಾಲರ್ ಹೂಡಿಕೆಯ ಅವಟಾರ್, ಅವೆಂಜರ್ಸ್, ಬ್ಯಾಟ್‌ಮನ್, ಜೇಮ್ಸ್ ಬಾಂಡ್, ಜುರಾಸಿಕ್ ವರ್ಲ್ಡ್, ದಿ ಮ್ಯಾಟ್ರಿಕ್ಸ್, ಮಿಸನ್ ಇಂಪಾಸಿಬಲ್, ಅಮೆರಿಕಾ ಅಕಾಡೆಮಿ ಮೊದಲಾದ ಸರಣಿ ಚಿತ್ರಗಳು ಈಗ ಭವಿಷ್ಯದಲ್ಲಿ ಯಾವ ಭರವಸೆಯೂ ಇಲ್ಲದೆ ಕೂತಿವೆ. ನಿರ್ಮಾಣ ಸಂಸ್ಥೆಗಳು ನಷ್ಟವನ್ನು ಅಂದಾಜಿಸುವುದರಲ್ಲಿ ನಿರತವಾಗಿವೆ.

ಇದರ ಜೊತೆಗೆ ಚಿತ್ರಗಳ ನಿರ್ಮಾಣಕ್ಕೆ ಸರ್ವಸಿದ್ಧತೆ ಮಾಡಿಕೊಂಡಿದ್ದ ಹಲವು ಯೋಜನೆಗಳು ಜಾರಿಯಾಗದೆ ನಿರ್ಮಾಪಕರು/ನಿರ್ದೇಶಕರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಪೂರ್ವಸಿದ್ಧತೆಗಾಗಿ ವ್ಯಯಿಸಿದ ಬಂಡವಾಳ ಅಂದಾಜಿಗೆ ಸಿಗುತ್ತಿಲ್ಲ. ಚಿತ್ರ ನಿರ್ಮಾಣದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕೋಟ್ಯಂತರ ತಂತ್ರಜ್ಞರು, ಕಾರ್ಮಿಕರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರೋದ್ಯಮಕ್ಕೆ ಮತ್ತೆ ಚೇತರಿಕೆ ನೀಡಲು ಚಿತ್ರಮಂದಿರಗಳನ್ನು ತೆರೆಯಲು ಫ್ರಾನ್ಸ್, ಅಮೆರಿಕಾ, ಚೀನಾ ಮೊದಲಾದ ದೇಶಗಳಲ್ಲಿ ಪ್ರಯತ್ನಗಳು ನಡೆದರೂ ಪ್ರೇಕ್ಷಕರಿಂದಲೇ ಪೂರಕ ಪ್ರತಿಕ್ರಿಯೆ ಬರಲಿಲ್ಲ. ಅವು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗುವ ದಿನಗಳು ಸದ್ಯಕ್ಕಂತೂ ಇಲ್ಲ.

ಕೊರೋನ ಪರಿಣಾಮಗಳಲ್ಲಿ ಪ್ರಶಸ್ತಿ ಆಯ್ಕೆ ಮತ್ತು ಪ್ರದಾನದ ಮೇಲೆ ಉಂಟಾಗಿರುವ ಪರಿಣಾಮಗಳೂ ವಿಚಿತ್ರವಾದವು. ಕೋವಿಡ್-19 ಬಿರುಸುಗೊಳ್ಳುವ ಮೊದಲೇ 2020ರ ಫೆಬ್ರವರಿಯಲ್ಲಿ ಜನಪ್ರಿಯ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ಎಂದಿನ ವೈಭವದಲ್ಲಿಯೇ ನಡೆದು ಹೋಯಿತು. ಆ ನಂತರ ಮಾರ್ಚ್ ಆರರಂದು ನಡೆದ ಜಪಾನ್ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭ ಅತಿಥಿ ಮತ್ತು ಪತ್ರಕರ್ತರ ಗೈರು ಹಾಜರಿಯಲ್ಲಿ ಸರಳವಾಗಿ ನೆರವೇರಿತು. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಚಿತ್ರಪ್ರಶಸ್ತಿಯ ಆಯ್ಕೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಮುಂದೂಡಲಾಗಿದೆ.

ಹಾಗೆಯೇ ಪ್ರತಿಷ್ಠಿತ ಚಿತ್ರೋತ್ಸವಗಳು ಸಹ ನಿಗದಿಯಾದ ದಿನಗಳಲ್ಲಿ ನಡೆಯದೆ ಮುಂದೂಡಲ್ಪಟ್ಟಿವೆ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಕಾನ್ ಚಿತ್ರೋತ್ಸವ ಸಹ ಈಗ ಘೋಷಿಸಿರುವಂತೆ ಜುಲೈ ಮೊದಲ ವಾರದಲ್ಲಿ ನಡೆಯುವ ಸಂಭವವೂ ಕಡಿಮೆಯೆ! ಕಾನ್ ಚಿತ್ರೋತ್ಸವದ ಆಯೋಜಕರು ಚಿತ್ರೋತ್ಸವದ ಮುಖ್ಯ ಪ್ರದರ್ಶನ ಸ್ಥಳವನ್ನು ತಾತ್ಕಾಲಿಕವಾಗಿ ಸಂತ್ರಸ್ತರ ಆಶ್ರಯತಾಣವಾಗಿ ಪರಿವರ್ತಿಸಿದ್ದಾರೆ.

ಭಾರತದ ಸಾಂಸ್ಕೃತಿಕ ಕ್ಷೇತ್ರದ ಮೇಲೆ ಪ್ರಾಬಲ್ಯ ಸಾಧಿಸಿರುವ, ಬಿಲಿಯನ್ ಡಾಲರ್ ಉದ್ಯಮವೆನಿಸಿದ ಭಾರತೀಯ    ಚಿತ್ರೋದ್ಯಮವನ್ನು ಸಹ ಕೊರೋನಾ ಮಗ್ಗಲು ಮಲಗಿಸಿದೆ. ಸಾಮಾನ್ಯ ಭಾರತೀಯರ ಅಗ್ಗದ ಮನರಂಜನೆ ಮತ್ತು ಕನಸುಗಳ ಮಾರಾಟದ ಕೇಂದ್ರವೆನಿಸಿದ ಸಿನಿಮಾ ಮಂದಿರಗಳು ಮುಚ್ಚಿದ್ದರಿಂದ ಬಾಲಿವುಡ್ ಚಿತ್ರೋದ್ಯಮ ದಿಕ್ಕುಗಾಣದೆ ಕೂತಿದೆ. ಈ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲೊಂದೆನಿಸಿದ, 135 ಕೋಟಿ ರೂ. ಬಜೆಟ್ ವೆಚ್ಚದ, ಅಕ್ಷಯಕುಮಾರ್ ನಾಯಕನಾಗಿ ನಟಿಸಿದ ‘ಸೂರ್ಯವಂಶಿ’ ಚಿತ್ರವು ಕಳೆದ ಮಾರ್ಚ್ 24 ರಂದು ಬಿಡುಗಡೆಗೆ ಸಿದ್ಧವಾಗಿತ್ತು. ಅಂದೇ ಭಾರತ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಆರಂಭವಾಯಿತು. ಅದು ಚಿತ್ರೋದ್ಯಮದ ಅವನತಿಗೆ ನಾಂದಿ ಹಾಡುವ ಸಂಕೇತದಂತೆ ಕಾಣಿಸಿತ್ತು.

‘ಸೂರ್ಯವಂಶಿ’ ಸಿನಿಮಾ ಬಿಡುಗಡೆಯ ಜೊತೆಗೆ ಭಾರತ 1983ರಲ್ಲಿ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದ ಐತಿಹಾಸಿಕ ವಸ್ತುವನ್ನು ಆಧರಿಸಿದ, ಬಹು ನಿರೀಕ್ಷಿತ ಹಾಗು ಕಬೀರ್ ಖಾನ್ ನಿರ್ದೇಶನದ ‘83’ ಚಿತ್ರ ಬಿಡುಗಡೆಯೂ ಮುಂದಕ್ಕೆ ಹೋಯಿತು. ವರ್ಷಕ್ಕೆ ಅನೇಕ ಚಿತ್ರಗಳಲ್ಲಿ ನಟಿಸುವ ಅಕ್ಷಯಕುಮಾರನ ನಾಲ್ಕು ಚಿತ್ರಗಳು ತೆರೆಗೆ ಸಿದ್ಧವಾದರೂ ಬಿಡುಗಡೆಯ ಭಾಗ್ಯದಿಂದ ವಂಚಿತವಾಗಿವೆ.

ಬಿಡುಗಡೆಗೆ ಸಿದ್ಧವಾದ ಚಿತ್ರಗಳ ಗತಿ ಹೀಗಾದರೆ, ಜೋರಾಗಿ ಸದ್ದು ಮಾಡಿ ಚಿತ್ರೀಕರಣಗೊಳ್ಳುತ್ತಿದ್ದ ಜಯಲಲಿತಾ ಜೀವನಗಾಥೆ ಆಧರಿಸಿದ, ಕಂಗನಾ ರಾಣಾವತ್ ನಟಿಸುತ್ತಿದ್ದ ‘ತಲೈವಿ’ ಚಿತ್ರೀಕರಣ ಸ್ಥಗಿತಗೊಂಡಿತು. ಅತ್ಯಂತ ಜನಪ್ರಿಯ ನಟರೆನಿಸಿಕೊಂಡ ದೀಪಿಕಾ ಪಡುಕೋಣೆ, ಹೃತಿಕ್ ರೋಷನ್, ರಣವೀರ್ ಸಿಂಗ್ ಮೊದಲಾದವರು ಕೆಲಸವಿಲ್ಲದೆ ಕೂತಿದ್ದಾರೆ. ಆದರೆ ಅವರು ತಮ್ಮ ಇತರೆ ಕೌಶಲ್ಯಗಳನ್ನು (ಚಿತ್ರ ಬಿಡಿಸುವುದು, ಅಡುಗೆ ಮಡುವುದು ಇತ್ಯಾದಿ) ಒರೆಗೆ ಹಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ “ಮನಸ್ಸನ್ನು ಸಂತೋಷ, ಮುದ ಅಥವಾ ಭರವಸೆ ತರುವಂಥ ಇತರೆ ವಿಷಯಗಳಲ್ಲಿ ಕೇಂದ್ರೀಕರಿಸುವುದಕ್ಕೆ ಸಮಯ’’ ಎಂದು ಘೋಷಿಸಿದ್ದಾರೆ. ಆದರೆ ಇತರೆ ಸಹಕಲಾವಿದರು, ತಂತ್ರಜ್ಞರು, ಕಾರ್ಮಿಕರು ಇವರಷ್ಟು ಅದೃಷ್ಟವಂತರಲ್ಲ. ನಿರುದ್ಯೋಗಿಗಳಾಗಿ ಇಲ್ಲವೇ ಅನೇಕ ದೊಡ್ಡ ನಟ, ನಿರ್ಮಾಪಕ, ನಿರ್ದೇಶಕರ ಕೊಡುಗೆಯಿಂದ ಬದುಕು ಸಾಗಿಸಬೇಕಾದ ಅಸಹಾಯಕತೆಗೆ ಬಿದ್ದಿದ್ದಾರೆ.

ಈ ಸ್ಥಿತಿ ಹೆಚ್ಚು ಕಡಿಮೆ ಎಲ್ಲ ಭಾರತೀಯ ಭಾಷೆಗಳ ಚಲನಚಿತ್ರರಂಗದಲ್ಲಿ ಪುನರಾವರ್ತನೆಗೊಂಡಿದೆ. ಕನ್ನಡ ಚಿತ್ರೋದ್ಯಮವೂ ಇದಕ್ಕೆ ಹೊರತಲ್ಲ.

ಎಲ್ಲವೂ ಸರಿಯಿದ್ದರೆ ಏಪ್ರಿಲ್ ಮತ್ತು ಸೆಪ್ಟೆಂಬರ್ ಮಧ್ಯದಲ್ಲಿ ಅನೇಕ ಬಿಗ್ ಬಜೆಟ್‌ನ ಕನ್ನಡ ಸಿನಿಮಾಗಳು ತೆರೆಕಾಣಬೇಕಿತ್ತು. ದರ್ಶನ್ ನಟಿಸಿರುವ ರಾಬರ್ಟ್, ಸುದೀಪ್ ಅವರ ಕೋಟಿಗೊಬ್ಬ, ರಕ್ಷಿತ್ ಶೆಟ್ಟಿಯವರ ಚಿಲ್ಲರೆ, ಶರಣ್ ನಟನೆಯ ಅವತಾರ ಪುರುಷ, ರಮೇಶ್ ಅರವಿಂದರ ಶಿವಾಜಿ ಸುರತ್ಕಲ್ ಮುಂತಾದ ಚಿತ್ರಗಳು ಕನ್ನಡ ಪ್ರೇಕ್ಷಕನ ಜೊತೆ ಅದೃಷ್ಟ ಪರೀಕ್ಷೆ ಮಾಡಬೇಕಿತ್ತು. ಅವೆಲ್ಲವೂ ಸ್ಥಗಿತವಾಗಿವೆ.

ಪ್ರಸಿದ್ಧ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಹಲವಾರು ಯೋಜನೆಗಳೂ ನೆನೆಗುದಿಗೆ ಬಿದ್ದಿವೆ. ಮುಖ್ಯವಾಗಿ ದರ್ಶನ್ ನಾಯಕ ನಟನಾಗಿ, ರಾಜೇಂದ್ರ ಸಿಂಗ್ ನಿರ್ದೆಶಿಸುತ್ತಿರುವ ವೀರ ಮದಕರಿನಾಯಕ ಒಂದು ಶೆಡ್ಯೂಲ್ ಚಿತ್ರೀಕರಣ ನಡೆದಿದ್ದು ಐದು ಕೋಟಿ ಈಗಾಗಲೇ ವೆಚ್ಚವಾಗಿದೆಯೆಂದು ಹೇಳಲಾಗಿದೆ. ಸರ್ಕಾರ ನಿರ್ಮಾಪಕರ ನೆರವಿಗೆ ಬರದಿದ್ದರೆ ಎಲ್ಲರ ಹಣವೂ ಕೊಚ್ಚಿಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತನ್ನದೇ ನೂರೆಂಟು ಸಮಸ್ಯೆಗಳಲ್ಲಿ ಮುಳುಗಿರುವ ಸರ್ಕಾರ ಸಿನಿಮಾರಂಗಕ್ಕೆ ಯಾವರೀತಿ ನೆರವಾಗಿ ಧಾವಿಸುವುದೋ ಸದ್ಯಕ್ಕಂತು ಬಗೆಹರಿಯದ ವಿಚಾರ. ಆದರೆ ನಿರುದ್ಯೋಗದಿಂದ ತತ್ತರಿಸಿರುವ ಸಹಕಲಾವಿದರು, ತಂತ್ರಜ್ಞರು ಮತ್ತು ಸಿನಿಮಾ ಕಾರ್ಮಿಕರ ನೆರವಿಗೆ ದೊಡ್ಡ ಕಲಾವಿದರು, ಪವನ್ ಒಡೆಯರ್ ಅಂಥ ನಿರ್ದೇಶಕರು, ಶ್ರದ್ಧಾ ಶ್ರೀನಾಥ್‌ರವರಂಥ ನಟಿಯರು ಮುಂದಾಗಿರುವುದು ಶ್ಲಾಘನೀಯ.

ಕೊರೋನಾ ವೈರಸ್ ಹಾವಳಿಯಿಂದ ಚಲನಚಿತ್ರೋದ್ಯಮ ನೆಲಕಚ್ಚಿದರೂ ಕೆಲವು ಪರ್ಯಾಯ ಮಾರ್ಗಗಳು ಉದ್ಯಮ ಉಸಿರಾಡಲು ನೆರವಾಗುತ್ತಿವೆ. ಅದರಲ್ಲೂ ಮುಖ್ಯವಾಗಿ ಓಟಿಟಿ (ಓವರ್ ದಿ ಟಾಪ್), ವಿಓಡಿ ಅಂದರೆ ಕೇಬಲ್ ನೆಟ್‌ವರ್ಕ್ಗಳ ಸಹಾಯವಿಲ್ಲದೆ ಆನ್‌ಲೈನ್ ಮೂಲಕ ಚಲನಚಿತ್ರಗಳನ್ನು ನೋಡುವ ಅವಕಾಶವನ್ನು ಕಲ್ಪಿಸುವ ವೇದಿಕೆಗಳು, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ವಿಡಿಯೋ, ಹಾಟ್ ಸ್ಪಾರ್ ಮೊದಲಾದ ಆನ್‌ಲೈನ್ ವೇದಿಕೆ ಸಂಸ್ಥೆಗಳು ಗ್ರಾಹಕರಿಗೆ ನೇರವಾಗಿ ಅವರ ಟಿ.ವಿ, ಮೊಬೈಲ್ ಇತ್ಯಾದಿ ರಿಸೀವರ್‌ಗಳಿಗೆ ಚಿತ್ರ, ಚಿತ್ರಸರಣಿ ಇತ್ಯಾದಿ ಪೂರೈಸುತ್ತವೆ. ಕೆಲವು ನಿರ್ಮಾಪಕರು ಥಿಯೇಟರ್ ಪ್ರದರ್ಶನ ಇಲ್ಲದ ಕಾರಣ ನೇರವಾಗಿಯೇ ಈ ವೇದಿಕೆಗಳ ಮೂಲಕ ಚಿತ್ರ ಬಿಡುಗಡೆ ಮಾಡಿ ಯಶಸ್ಸು ಕಾಣುತ್ತಿದ್ದಾರೆ.

ಲಾಕ್‌ಡೌನ್ ಪರಿಣಾಮದಿಂದ, ಚಿತ್ರಮಂದಿರಗಳಿಂದ ದೂರ ಉಳಿದಿರುವ ಪ್ರೇಕ್ಷಕನಿಗೆ ಓಟಿಟಿ ವರವಾಗಿ ಪರಿಣಮಿಸಿದೆ. ಈಗಾಗಲೇ ಅದು ಸಿನಿಮಾ ವೀಕ್ಷಿಸುವ ಜನಪ್ರಿಯ ಮಾರ್ಗವಾಗಿ ಮನ್ನಣೆ ಗಳಿಸಿಕೊಳ್ಳುತ್ತಿದೆ. ಓಟಿಟಿ ಪ್ಲಾಟ್‌ಫಾರಂಗಳು ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಜನರಿಗೆ ಮನರಂಜನೆ ಒದಗಿಸುವ ಮುಖ್ಯವೇದಿಕೆಗಳಾಗಿ ಮನರಂಜನೆಯ ಮಹಾಪೂರಕ್ಕೆ ಬಾಗಿಲನ್ನು ತೆರೆದಿವೆ. ಈ ವೇದಿಕೆಗಳಲ್ಲಿ ಪ್ರಸಾರವಾಗುವ ಮನರಂಜನೆಯ ಚಿತ್ರಗಳು, ಸರಣಿಗಳಿಗೆ ಸೆನ್ಸಾರ್ ಪ್ರಮಾಣಪತ್ರ ಅಗತ್ಯವಿಲ್ಲದ ಕಾರಣ ಅತಿಯಾದ ಲೈಂಗಿಕತೆ, ಹಿಂಸೆ, ರಾಜಕೀಯ ವಸ್ತುಗಳ ಚಿತ್ರ/ಸರಣಿಗಳೇ ಹೆಚ್ಚು ಜನಪ್ರಿಯವಾಗುತ್ತಿರುವ ವಿದ್ಯಮಾನ ಜರುಗುತ್ತಿದೆ. ಇವುಗಳ ಮೇಲೆ ನಿಯಂತ್ರಣ ತರಬೇಕೆಂಬ ಕೂಗು ಆಗಾಗ್ಗೆ ಏಳುತ್ತಲೇ ಇದೆ. ಆದರೆ ಈ ಬಗ್ಗೆ ಗಂಭೀರ ಚರ್ಚೆಯಂತೂ ಆಗುತ್ತಿಲ್ಲ.

ಚಿತ್ರ ವೀಕ್ಷಣೆ ಎನ್ನುವುದು ಒಂದು ಸಮುದಾಯ ಅನುಭವ (Community experience). ಭಿನ್ನ ಅಭಿರುಚಿ, ಹಿನ್ನೆಲೆಯ ಪ್ರೇಕ್ಷಕರು ಒಂದು ನಿರ್ದಿಷ್ಟ ಸ್ಥಳದಲ್ಲಿ ಒಗ್ಗೂಡಿ ಪ್ರದರ್ಶನವನ್ನು ಆನಂದಿಸುವ ವಿಶಿಷ್ಟತೆಯನ್ನು ಸಿನಿಮಾ ಮಂದಿರಗಳು ಒದಗಿಸುತ್ತವೆ. ಸಿನೆಮಾ ವೀಕ್ಷಣೆಗೆ ಅದರದೇ ಆದ ಪದ್ಧತಿ, ಪರಂಪರೆಯೊಂದಿದೆ. ಓಟಿಟಿ ಅಥವಾ ವಿ.ಓ.ಡಿ (ವಿಡಿಯೋ ಆನ್ ಡಿಮಾಂಡ್) ವೇದಿಕೆಗಳು ಕೇವಲ ವ್ಯಕ್ತಿಗೆ, ಹೆಚ್ಚೆಂದರೆ ಒಂದು ಪರಿವಾರವನ್ನು ತಲುಪುವ ವಿಧಾನಗಳಾಗಿವೆ. ಇಲ್ಲಿ ಹಿಂದಿನ ಸಮುದಾಯ ಅನುಭವ ಗೈರುಹಾಜರಾಗಿರುತ್ತದೆ. ಮುಂದೆ ಇದೇ ನಿಜವಾದರೆ ಸಿನೆಮಾ ನಿರ್ಮಾಣ ಶೈಲಿಯೂ ಸಂಪೂರ್ಣ ಬದಲಾಗಬೇಕಾಗುತ್ತದೆ.

*ರಾಮನಗರ ಜಿಲ್ಲೆಯ ವರಗೆರಹಳ್ಳಿಯ ಲೇಖಕರು ಕೃಷಿ ವಿಜ್ಞಾನದಲ್ಲಿ ಪದವಿ, ಪತ್ರಿಕೋದ್ಯಮ ಡಿಪ್ಲೊಮಾ, ಹಂಪಿ ವಿವಿಯಿಂದ ಡಿ.ಲಿಟ್. ಪಡೆದಿದ್ದಾರೆ. ಸಿನಿಮಾ, ಸಾಹಿತ್ಯ, ಕ್ರೀಡೆ, ಪರಿಸರ, ಅನುವಾದದಲ್ಲಿ ಆಸಕ್ತಿ. ಅವರ ‘ಸಿನಿಮಾ ಯಾನ’ ಕೃತಿಗೆ ‘ಸ್ವರ್ಣ ಕಮಲ’, ‘ಜೀವ ಜಾಲ’ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ.

 

Leave a Reply

Your email address will not be published.