ಸಿನಿಮಾ ಟಾಕೀಸು

ಬಾಲ್ಯವನ್ನು ವರ್ಣರಂಜಿತಗೊಳಿಸಿದ ಟಾಕೀಸುಗಳನ್ನು ಈಚೆಗೆ ಊರಿಗೆ ಹೋದಾಗ ನೋಡಿದೆ. ಮತಾಪು ಉರಿದ ದೀಪಾವಳಿ ಹೂಕುಂಡಗಳಂತೆ, ಮಂತ್ರಶಕ್ತಿ ಕಳೆದುಕೊಂಡ ದಂಡಗಳಂತೆ ಕಂಡವು.

ನಮ್ಮೂರಿನಲ್ಲಿ ಅದರ ಕಣ್ಣುಗಳಂತೆ ಎರಡು ಸಿನಿಮಾ ಟಾಕೀಸುಗಳಿವೆ ‘ಭಾರತ’-‘ವಿನಾಯಕ’. ಹಳಬರು ಇವನ್ನು ಸ್ಥಾಪನ ಚರಿತ್ರೆಯ ಆಧಾರದಲ್ಲಿ ಹಳೇಟಾಕೀಸ್ ಹೊಸಟಾಕೀಸ್ ಎನ್ನುವರು. ಇವೆರಡೂ ಊರೆದೆಯ ಮೇಲೆ ಹಾದುಹೋಗಿರುವ ಬೆಂಗಳೂರು-ಹೊನ್ನಾವರ ರಸ್ತೆಯ ಎರಡು ದಿಕ್ಕಿನಲ್ಲಿವೆ. `ಭಾರತ’ದಲ್ಲಿ ಸಮಸ್ತ ಭಾರತೀಯ ಭಾಷಾ ಚಿತ್ರಗಳು; `ವಿನಾಯಕ’ದಲ್ಲಿ ಹೆಚ್ಚಾಗಿ ಕನ್ನಡ ಸಿನಿಮಾ. ಇವು ಜನರ ಅಭಿರುಚಿಗೆ ಅನುಸಾರ ಸಿನಿಮಾ ಹಾಕುತ್ತಿದ್ದವೊ, ಜನರ ಅಭಿರುಚಿಯನ್ನೂ ತಿದ್ದುತ್ತಿದ್ದವೊ ಹೇಳುವುದು ಕಷ್ಟ. ಊರಿನ ಸಾರ್ವಜನಿಕ ಮಿಲನದ ಜಾಗಗಳಂತೂ ಆಗಿದ್ದವು. ಜನ ಯಾರನ್ನಾದರೂ ಭೇಟಿಮಾಡುವ ಸಂದರ್ಭವಿದ್ದರೆ, `ಟಾಕೀಸ್ ಹತ್ತಿರ ಬಾ’ ಎಂದು ಹೇಳುವುದು ವಾಡಿಕೆಯಾಗಿತ್ತು.

ಈಗ ಮನೆಮನೆಗೂ ಟಿವಿ ಬಂದಿರುವುದರಿಂದ, ಟಾಕೀಸುಗಳು ಕೆಲಸ ಕಳೆದುಕೊಂಡ ಕಾರ್ಮಿಕರಂತೆ ನಿಸ್ತೇಜವಾಗಿ ತೋರುತ್ತಿವೆ. ಆದರೆ ನಮ್ಮ ತಲೆಮಾರಿಗೆ, ಅವು ಯಕ್ಷಲೋಕದ ವಿಹಾರ ಮಾಡಿಸಿದ ಪುಷ್ಪಕ ವಿಮಾನಗಳಾಗಿದ್ದವು. ಎಂತಲೇ ಪ್ರೀತಿಸಿದರೂ ಮದುವೆಯಾಗದೆ ಉಳಿದ ಪ್ರೇಮಿಗಳಂತೆ ಇವು ನೆನಪಿನ ಭಿತ್ತಿಯಲ್ಲಿ ಕುಳಿತಿವೆ. ನಿತ್ಯದ ವಾಸ್ತವದಲ್ಲಿ ಸಾಮಾನ್ಯವಾಗಿದ್ದ ಸಂಗತಿಯೊಂದು, ಕಾಲಕಳೆದಂತೆ ಅಂಕುಡೊಂಕನ್ನು ಕಳೆದುಕೊಂಡು ಸುರಸುಂದರ ಸ್ವಪ್ನವಾಗಿ ಬದಲಾಗುತ್ತದೆ. ನಮ್ಮೂರಿನ ರಸಿಕರಿಗೆ ಅಪಾಪೋಲಿಗಳು ಬಿರುದು ಬರುವ ಹಿಂದೆಯೂ ಇವುಗಳ ಕೈವಾಡವಿದೆ. ಆದರೆ ಇವು ಗುಡಿಚರ್ಚು ಮಸೀದಿಗಳು ತಮ್ಮ ಬಾಹುಗಳಿಂದ ನಮ್ಮ ಚೈತನ್ಯ ಬಂಧಿಸಿ ಹಿಂಡಿಹಿಪ್ಪೆ ಮಾಡದಂತೆ ಕಾಪಾಡಿದವು; ಸಮಸ್ತ ಧರ್ಮ-ಜಾತಿ-ವರ್ಗದ ಜನರು ಬಂದು ಸೇರುತ್ತಿದ್ದ ತಾಣಗಳಾಗಿದ್ದ ಇವು, ಸರ್ವಜನಾಂಗದ ತೋಟಗಳಾಗಿದ್ದವು. ಪ್ರೇಮಿಗಳ ತಾಣವಾಗಿದ್ದವು. ನವವಿವಾಹಿತರು ತರಬೇತಿ ಪಡೆಯುತ್ತಿದ್ದ ಕಮ್ಮಟಗಳಾಗಿದ್ದವು. ದುಡಿವ ಜನ ದೈನಿಕ ಜಂಜಡಗಳಿಂದ ಬಿಡುಗಡೆ ಪಡೆಯುವ ಚೈತನ್ಯ ಕೇಂದ್ರವಾಗಿದ್ದವು. ಹೆಚ್ಚುಮಾತೇಕೆ, ನಮ್ಮೂರಿನ ಶ್ವಾಸಕೋಶಗಳಾಗಿದ್ದವು. ಇವುಗಳಿಂದ ಜಗಳಗಳಿಂದ ಬಸವಳಿದಿದ್ದ ದಾಂಪತ್ಯಗಳು ಭಗ್ನಗೊಳ್ಳದೆ ಉಳಿದವು.

ಹೀಗೆ ಊರಲ್ಲಿ ಶಾಂತಿ ನೆಮ್ಮದಿ ನೆಲೆಸಲು ಕಾರಣವಾಗಿದ್ದ ಟಾಕೀಸುಗಳು, ಅಶಾಂತಿಯನ್ನೂ ಹಬ್ಬಿಸಿದ್ದದವು. ಚಿಗುರುಮೀಸೆಯ ಕೆಲವು ಹುಡುಗರು, ಶಾಲೆಗಳನ್ನು ದಿಟ್ಟತನದಿಂದ ತ್ಯಾಗಮಾಡಿ, ಪೋಲಿಗಳೂ ಅಪ್ರಾಪ್ತ ಪ್ರೇಮಿಗಳೂ ದುಸ್ಸಾಹಸಿಗಳೂ ಆಗಿ ರೂಪಾಂತರಗೊಂಡರು. ನಾನೂ ಈ ಪಟ್ಟಿಯಲ್ಲಿದ್ದವನೇ. ಆದರೆ ನಡುವೆ ಇದೇಕೊ ಬೇರೆಡೆ ಒಯ್ಯುತ್ತಿದೆ ಎಂದು ಜ್ಞಾನೋದಯವಾಗಿ ಮರಳಿ ಶಾಲೆಗೆ ಸೇರಿದೆ. ನನ್ನ ತಮ್ಮ ಮಾತ್ರ ಶಾಲೆಗೆ ಬರಲು ನಿರಾಕರಿಸಿದನ. ಟಾಕೀಸಿನ ಸಂಬಂಧ ರಕ್ತಕ್ಕಿಂತ ಗಟ್ಟಿ ಇರಬೇಕು. ತಮ್ಮನು ನಿಧನನಾದಾಗ, ಎಲ್ಲ ಸಮುದಾಯಗಳಲ್ಲೂ ಇದ್ದ ಅವನ ಟಾಕೀಸ್‍ಮೇಟುಗಳು ಮಣ್ಣಿಗೆ ಬಂದಿದ್ದರು. ಜಾತ್ಯತೀತತೆಗೆ ಬಸ್ಸು ಹೋಟೆಲು ಕಾರ್ಖಾನೆಗಳ ನಿದರ್ಶನ ಕೊಡುವರು. ನಿಜವಾದ ನಿದರ್ಶನವೆಂದರೆ ಸಿನಿಮಾ ಟಾಕೀಸುಗಳು.

ತಮ್ಮನು ರಸಿಕನಾಗಿ ರೂಪುಗೊಂಡ ಕಥೆ ಸ್ವಾರಸ್ಯಕರ. ಸ್ಕೂಲಿಗೆ ಹೋಗುವ ಪ್ರಾಮಾಣಿಕವಾದ ಸಂಕಲ್ಪದಿಂದಲೇ ಅವನು ಮನೆಯಿಂದ ಹೊರಡುತ್ತಿದ್ದನು. ಟಾಕೀಸು ಬಂದೊಡನೆ ಕಾಲುಗಳಿಗೆ ಯಾರೊ ಮಾಟ ಮಾಡಿಸಿದಂತಾಗಿ ಅವು ದಿಕ್ಕು ಬದಲಿಸುತ್ತಿದ್ದವು. ಮಾರ್ನಿಂಗ್‍ ಶೋಗೆ ಬೇಕಾದ ನಾಲ್ಕಾಣೆಯನ್ನು ಹೇಗೊ ಸಂಪಾದಿಸುತ್ತಿದ್ದ ಆತ, ಒಂದೇ ಸಿನಿಮಾದ ಎರಡು-ಮೂರು ಶೋಗಳನ್ನು ಏಕಕಾಲಕ್ಕೆ ನೋಡುವ ದಕ್ಷತೆ ಬೆಳೆಸಿಕೊಂಡಿದ್ದನು. ಇದಕ್ಕೆ ತಕ್ಕಂತೆ ಮಾರ್ನಿಂಗ್‍ಶೊ ಹಾಗೂ ಶಾಲೆಯ ಬೆಲ್ಲು ಒಟ್ಟಿಗೇ ಬಾರಿಸುತ್ತಿದ್ದವು. ಶಾಲೆಗಳನ್ನು ಟಾಕೀಸಿನ ಎದುರು ಕಟ್ಟಿಸಿದರೆ ವಿದ್ಯಾರ್ಥಿಗಳಾದರೂ ಏನು ಮಾಡಬೇಕು? ಅವರನ್ನು ಸೆಳೆದು ಸೃಜನಶೀಲವಾಗಿ ಇಡುವಲ್ಲಿ, ಶಾಲೆಯ ಜತೆ ಸಿನಿಮಾ ಟಾಕೀಸುಗಳು ಸ್ಪರ್ಧಿಸುತ್ತಿದ್ದವು. ಅಂತಿಮ ಗೆಲುವು ಟಾಕೀಸುಗಳದ್ದೇ ಆಗಿರುತ್ತಿತ್ತು.

ಮಾರ್ನಿಂಗ್‍ ಶೋ ಹೋಗಲಾಗದ ಕಾರಣದಿಂದ ಸಭ್ಯರಾಗಿದ್ದ ನಾವು, ಶಾಲೆಗೆ ಹೋಗುವ ಮುನ್ನ, ಟಾಕೀಸನ್ನು ತಪ್ಪದೆ ಪ್ರವೇಶಿಸುದ್ದೆವು. `ಗೋವಾದಲ್ಲಿ ಸಿಐಡಿ’ `ನನ್ನತಮ್ಮ’ `ಒಂದೇ ಬಳ್ಳಿಯ ಹೂಗಳು’ ಪೋಸ್ಟರುಗಳ ಮುಂದೆ ನಿಂತು ಕಣ್ತುಂಬಿಕೊಳ್ಳುತ್ತಿದ್ದೆವು. ಹತ್ತು ಪೈಸೆಯ ಸಿನಿಮಾಗೀತೆಗಳ ಪುಸ್ತಿಕೆಯನ್ನು ಖರೀದಿಸಿ, ಪ್ರಿಯವಾದ ಹಾಡುಗಳನ್ನು ಶಾಲಾಪಾಠದಂತೆ ಕಂಠಪಾಠ ಮಾಡುತ್ತಿದ್ದೆವು. ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಿದ್ದರೂ ಹಾಡಿನ ಸ್ಪರ್ಧೆಯಲ್ಲಿ ಮೊದಲಿಗರಾಗಲು ಇವು ನೆರವಾಗುತ್ತಿದ್ದವು. ನಾವು ಪೋಸ್ಟರುಗಳ ಮುಂದೆ ನಿಂತಿರುವಾಗ, ಬೀಡಿಸೇದುತ್ತ ಇದೇ ಕಾರ್ಯದಲ್ಲಿ ನಿರತರಾಗಿದ್ದ ನಮ್ಮೂರ ಹಿರಿಯರು, ನಮ್ಮ ಕುಂಡೆಗೆ ಎರಡು ಬಾರಿಸಿ, ‘ಬಡ್ಡಿಮಕ್ಕಳಾ! ಬೆಳಕು ಹರಿಯದು ತಡಿಲ್ಲ. ಸಿನಮಾ ಹುಚ್ಚು ಇವಕ್ಕೆ. ಈ ವಯಸ್ಸಿಗೇ ಪೋಲಿಬಿದ್ದಿವೆ. ನಡ್ರಲೇ ಸ್ಕೂಲಿಗೆ’ ಎಂದು ಗದರಿಸುತ್ತಿದ್ದರು. ನಿರ್ವಾಹವಿಲ್ಲದೆ ಹೋಗಿ ಜನಗಣಮನ ಹಾಡುತ್ತಿದ್ದ ಸಹಪಾಠಿಗಳ ಹಿಂದಿನ ಸಾಲಿಗರಾಗಿ ಸೇರಿ ಕೊಳ್ಳುತ್ತಿದ್ದೆವು.

ಟಾಕೀಸುಗಳು ಅಮ್ಮನ ಎಲಡಿಕೆ ಚೀಲದಿಂದ, ಅಕ್ಕನ ಗೋಲಕದಿಂದ, ಅಪ್ಪನ ಅಂಗಿಜೇಬಿನಿಂದ ಚಿಲ್ಲರೆ ಎಗರಿಸುವ ಕಲೆಯನ್ನು ಕಲಿಸಿದವು. ನಮ್ಮ ಬೀದಿಯ ಕೆಲವು ಮಹಿಳೆಯರು ಈ ವಿಷಯದಲ್ಲಿ ನಮಗಿಂತ ನಾಲ್ಕು ಹೆಜ್ಜೆ ಮುಂದಿದ್ದರು. ಅವರು ಗಂಡಸರಿಗೆ ಗೊತ್ತಾಗದಂತೆ, ಮನೆಯಲ್ಲಿದ್ದ ದವಸವನ್ನು ಅಂಗಡಿಗೆ ಹಾಕಿ ಅತ್ತಲಿಂದತ್ತಲೇ ಮ್ಯಾಟಿನಿಗೆ ಹೋಗುತ್ತಿದ್ದರು. ರಸಿಕರನ್ನು ಪ್ರೋತ್ಸಾಹಿಸಲೆಂದೇ ಟಾಕೀಸಿನ ಆಸುಪಾಸು ಸ್ಥಾಪನೆಯಾಗಿದ್ದ ಅಂಗಡಿಗಳು, ದವಸದಿಂದಲೂ ತೆಂಗು ಅಡಕೆಗಳಿಂದಲೂ ತುಳುಕುತ್ತಿದ್ದವು. ರಾಜಕುಮಾರ್ ಸಿನಿಮಾ ಬಂದರೆ ಮನೆಯಲ್ಲಿದ್ದ ಕೊಡವನ್ನು ಅಡವಿಟ್ಟು ಸಿನಿಮಾಕ್ಕೆ ಹೋಗುವ ಕುಟುಂಬವೂ ನಮ್ಮಲ್ಲಿತ್ತು. ನಾವು ಪೋಸ್ಟರುಗಳನ್ನು ಬಿಡಿಸಿಕೊಂಡು ಬಂದು, ಮನೆಯ ಅಟ್ಟಕ್ಕೆ ಕೆಳಭಾಗದಿಂದ ಅಂಟಿಸುತಿದ್ದೆವು. `ಮಾಯಾಬಜಾರ್’ `ಆರಾಧನ’ `ಜೇಡರಬಲೆ’ ಪೋಸ್ಟರುಗಳನ್ನು ಅಂಗಾತ ಮಲಗಿ ನೋಡುತ್ತ ನಿದ್ದೆಹೋಗುತ್ತಿದ್ದೆವು.

ಊರಜೀವನವು ಹೀಗೆ ನಿರಾಳವಾಗಿ ನಡೆಯುತ್ತಿರಲು, ಒಂದು ದಿನ ಅಪ್ಪನಿಗೆ ಹೆಡ್‍ಮಾಸ್ಟರು ‘ನಿಮ್ಮ ಮಗ ಸ್ಕೂಲಿಗೆ ಬರದೆ ತಿಂಗಳಾಯಿತು’ ಸಂದೇಶ ಕಳಿಸಿದರು. ಕುಲುಮೆಯಲ್ಲಿದ್ದ ಅಪ್ಪನಿಗೆ ಆಘಾತವೂ ಆಶ್ಚರ್ಯವೂ ಏಕಕಾಲಕ್ಕೆ ಹುಟ್ಟಿತು. ಆತ ತಿದಿಯಂತೆ ಭುಸಗುಡುತ್ತ ಕಾದಕಬ್ಬಿಣದಂತೆ ಜ್ವಾಲೆಹೊಮ್ಮಿಸುತ್ತ ಶಾಲೆಗೆ ಬಂದನು. “ಸಾಹೇಬರೆ, ಇವನಿಗೆ ಯಾಕ್ರೀ ಸ್ಕೂಲು? ಕೋತಿ ತಾನು ಕೆಟ್ಟಿದ್ದಲ್ಲದೆ ವನವೆಲ್ಲ ಕೆಡಿಸಿತಂತೆ. ಟಿಸಿ ಕೊಡ್ತೀನಿ. ಸುಮ್ಮನೆ ಕಬ್ಬಿಣ ಚಚ್ಚಕೆ ಹಾಕ್ಕೊಳಿ’’ ಎಂದು ಎಚ್‍ಎಂ ಹಿತವಾದ ಹೇಳಿದರು. `‘ಸ್ವಾಮಿ, ಇದೊಂದ್ಸಲ ಅವಕಾಶ ಕೊಡ್ರಿ. ಆ ಲೋಫರ್‍ಗೆ ಹಿಡ್ಕಂಡ್ ಬಂದು ಚರ್ಮ ಸುಲೀತೀನಿ’’ ಎಂದು ಅಪ್ಪ ವಾಯಿದೆ ತೆಗೆದುಕೊಂಡು ಬಂದನು. ಟಾಕೀಸಿನ ಒಂದು ಗೇಟಿನಲ್ಲಿ ನನ್ನನ್ನು ಕಾವಲಿಟ್ಟು ಇನ್ನೊಂದರಲ್ಲಿ ತಾನು ಪಹರೆ ನಿಂತನು. ನನಗಾದರೂ ಕಳ್ಳರನ್ನು ಹಿಡಿಯುವ ಹೊಸ ಹೊಣೆಗಾರಿಕೆ-ಗೋವಾಕ್ಕೆ ಕೇಡಿಗಳನ್ನು ಹಿಡಿಯಲು ರಾಜಕುಮಾರ್ ಸಿಐಡಿಯಾಗಿ ಹೋಗು ವಂತೆ-ರೋಮಾಂಚಕವಾಗಿತ್ತು. ಅಣ್ಣನೆಂಬ ಮಮಕಾರವಿಲ್ಲದೆ ಸಿನಿಮಾಕ್ಕೆ  ತಾನೊಬ್ಬನೇ ಹೋಗುತ್ತಿದ್ದರಿಂದ, ಸೇಡು ತೀರಿಸಿಕೊಳ್ಳಲು ಸರಿಯಾದ ಅವಕಾಶ ಸಿಕ್ಕಿತ್ತು. ಮಾರ್ನಿಂಗ್‍ಶೋ ಬಿಟ್ಟಿತು. ಗೂಡಿನಿಂದ ಹೊರಬರುವ ಇರುವೆಗಳಂತೆ ಜನ ಟಾಕೀಸಿನಿಂದ ಬರಲಾರಂಭಿಸಿದರು. ಫೈಟಿಂಗ್ ದೃಶ್ಯಗಳನ್ನು ಮೆಲುಕು ಹಾಕುತ್ತ, ಹೊರಗಿನ ಬೆಳಕಿನ ಪ್ರಖರತೆಗೆ ಕಣ್ಣನ್ನು ಹೊಂದಿಸಿಕೊಳ್ಳುತ್ತ, ವಾಸ್ತವಲೋಕಕ್ಕೆ- ಕೈಲಾಸಚ್ಯುತರಾದ ಶಿವಗಣಗಳು ಶಾಪ ಕಳೆಯಲೆಂದು ಧರೆಗಿಳಿವಂತೆ- ತಮ್ಮನು ಹೊರಬಂದನು. ಅಪ್ಪನ ಸುಳಿವು ಕಂಡವನೆ ಜಿಂಕೆಯಂತೆ ಚಂಗನೆ ನೆಗೆದು ಕಾಂಪೌಂಡು ಹಾರಲೆತ್ನಿಸಿದನು. ಅಪ್ಪ ಓಡಿಹೋಗಿ ಅವನನ್ನು ಹಿಡಿದು ಕೈನುಲಿದು ನಾಲ್ಕು ಬಾರಿಸಿದನು. `ಕರುಳಿನಕರೆ’ ಚಿತ್ರ ವೀಕ್ಷಿಸಿ ಹೊರಬರುತ್ತಿದ್ದ ಜನರು `‘ಬಿಡ್ರೀ ಸಾಹೇಬರೆ ಯಾಕ್ಹಂಗ್ ಹೊಡೀತೀರಿ? ಸಣ್ಣಹುಡುಗ ಸತ್ತಗಿತ್ತು ಹೋದಾತು’’ ಎಂದರು. ಅಪ್ಪನು “ಸ್ಕೂಲಿಗೆ ಹೋಗದೆ ಒಂದು ತಿಂಗಳಾಯಿತಂತೆ ಸ್ವಾಮಿ” ಎಂದು ಮತ್ತೆರಡು ಬಿಗಿದನು. ತಮ್ಮನು ದೇಹದಂಡನೆ ಸಹಿಸುವ ಕಲೆಯಲ್ಲಿ ಪರಿಣತಿ ಪಡೆದಿದ್ದನು. ಶಾಲೆಯ ಯಾಂತ್ರಿಕ ಶಿಕ್ಷಣ ವಿರೋಧಿಸುತ್ತಿದ್ದ ಅವನು, ಶಾಲೆಯೆಂಬ ಸೆರೆಮನೆಯಿಂದ ತಪ್ಪಿಸಿಕೊಂಡು ಪ್ರತಿಭೆಯನ್ನು ಮುಕ್ತವಾಗಿ ಪ್ರಕಟಿಸುವ ಅನೇಕ ಪರ್ಯಾಯ ಹಾದಿಗಳನ್ನು ಕಂಡುಹಿಡಿದಿದ್ದನು. ಕೆಮ್ಮಣ್ಣುಗುಂಡಿಗೆ ಶೂಟಿಂಗಿಗಾಗಿ ಬೆಂಗಳೂರಿನಿಂದ ಬರುತ್ತಿದ್ದ ದೇವತೆಗಳಿಗೆ ಉಚಿತಸೇವೆ ನೀಡಲು ವಾರಗಟ್ಟಲೆ ಕಣ್ಮರೆಯಾಗುತ್ತಿದ್ದನು. ತತ್ಫಲವಾಗಿ ಕಟ್ಟಡ ನಿರ್ಮಾಣದ ಕಾರ್ಮಿಕನಾಗಿ, ಕೆರೆಯಲ್ಲಿ ಗಾಳ ಹಾಕಿ ಮೀನು ಹಿಡಿವ ಕಾಯಕಜೀವಿಯಾಗಿ ರೂಪುಗೊಂಡನು.

ಟಾಕೀಸುಗಳ ಮಾಯಾಜಾಲಕ್ಕೆ ವಶವಾದವರಲ್ಲಿ ನಮ್ಮೂರ ಸಿನಿಮಾ ಅಜೀಜಣ್ಣನೂ ಒಬ್ಬನು. ಮೊಹರಂನಲ್ಲಿ ಗೇರುಕಳ್ಳನ ವೇಷ ಹಾಕುತ್ತಿದ್ದ ಕಲಾವಿದನೀತ. ಮನೆಗೆ ಸುಣ್ಣ ಬಳಿವ, ಹಾವು ಹಿಡಿವ, ಜೇನುಕೀಳುವ, ತೆಂಗಿನಕಾಯಿ ಇಳಿಸುವ, ಸೌದೆಸೀಳುವ ಮೊದಲಾಗಿ ತರಹೆವಾರಿ ಕಾಯಕ ಮಾಡುತ್ತಿದ್ದವನು. ಮಹಿಳೆಯರಿಗೆ ಬಹಳ ಬೇಕಾಗಿದ್ದವನು. ಅವನ ಕೆಲಸಗಳು ಪ್ರತಿಭೆಯ ಅಭಿವ್ಯಕ್ತಿ ಎಂದು ಗುರುತಿಸುವ ಕಣ್ಣು ಸಮಾಜಕ್ಕೆ ಇರಲಿಲ್ಲ. ಹೀಗಾಗಿ `ಮನೆಗೆ ಮಾರಿ ಊರಿಗುಪಕಾರಿ’ ಇತ್ಯಾದಿ ಕುಖ್ಯಾತಿ ಪಡೆದಿದ್ದನು. ಅವನಿಗೆ ಸಿನಿಮಾ ನೋಡುವುದರ ಜತೆಯಲ್ಲಿ, ಹಾಡುವ, ಮಲೆಯಾಳಿ ಲಕ್ಕಿ ರೆಸ್ಟೊರೆಂಟಿನಲ್ಲಿ ಸುಕ್ಕ-ಪರೋಟ ತಿನ್ನುವ ಹವ್ಯಾಸವಿತ್ತು. ಅವನ ಹೆಂಡತಿ ಕಂಡವರ ಮನೆಯಲ್ಲಿ ಪಾತ್ರೆ ತೊಳೆಯುತ್ತ ಬಟ್ಟೆ ಒಗೆಯುತ್ತ ಸಂಸಾರ ಸಂಭಾಳಿಸುತ್ತಿದ್ದಳು. ಅವನಿಂದ ಕೆಲಸ ಮಾಡಿಸುವವರು ಟಾಕೀಸು ಮತ್ತು ಕಾಕಾ ಹೋಟೆಲಿನ ಬಳಿ ಭೇಟಿಯಾಗಿ ಮಾತುಕತೆ ಮಾಡುತ್ತಿದ್ದರು. ಮಾತು ಕೇಳದ ಮಕ್ಕಳನ್ನು ತಾಯಂದಿರು ‘ಯಾಕ್ಹಂಗೆ ಉರಿದು ಉಪ್ಪು ಕಟ್ತೀರೊ? ನೀವು ಸಿನಿಮಾ ಅಜೀಜನ ತರಹ ಹಾಳಾಗಿ ಹೋಗ್ತೀರಿ’ ಎಂದು ಬೈಯುತ್ತಿದ್ದರು.  

ನಮ್ಮೂರ ಟಾಕೀಸುಗಳಿಗೆ ಕೆಲವು ವಿಶೇಷತೆಗಳಿದ್ದವು. ಅವುಗಳಲ್ಲಿ ಒಂದು ಟಿಕೆಟಿಗಾಗಿ ಹೋರಾಟ. ಒಬ್ಬರು ಮಾತ್ರ ಹೋಗುವಂತೆ ಇಕ್ಕಟ್ಟಾಗಿರುವ ಟಿಕೆಟ್ ಕಿಂಡಿಯ ಗಲ್ಲಿಯಲ್ಲಿ, ಗಟ್ಟಿಮುಟ್ಟಾಗಿರುವವರು ಅಂಗಿ ಕಳಚಿಟ್ಟು, ಕೌಂಟರಿನ ಕಮಾನಿನ ಮೇಲೆ ಹತ್ತಿ, ಕೋತಿಗಳಂತೆ ಇಳಿಬಿದ್ದು, ಕೈಯನ್ನು ಟಿಕೇಟು ಗೂಡಿನೊಳಗೆ ತೂರಿಸುತ್ತಿದ್ದರು. ಬಲಿಷ್ಠರೇ ಬದುಕುವರು ಎಂಬ ಡಾರ್ವಿನ್ ಸಿದ್ಧಾಂತಕ್ಕೆ ಅದೊಂದು ಪುರಾವೆಯಾಗಿತ್ತು. ರಾಜಕುಮಾರ್ ಸಿನಿಮಾ ಹಾಕಿದಾಗ ಸುತ್ತಲಿನ ಹಳ್ಳಿಜನ ಗಾಡಿಕಟ್ಟಿಕೊಂಡು ಬರುತ್ತಿದ್ದರು. ಗಾಡಿ ನಿಲ್ಲಿಸಲು, ಎತ್ತುಗಳನ್ನು ಕಾಯಲು ಟಾಕೀಸಿನವರು ವ್ಯವಸ್ಥೆ ಮಾಡಿದ್ದರು. ಸೆಕೆಂಡ್ ಶೋ ಪ್ರಿಯರಾಗಿದ್ದ ನಾವು, ಊಟ ಮಾಡಿ ಹೊದಿಕೆ ಸುತ್ತಿಕೊಂಡು ಅರ್ಧಗಂಟೆ ಮುಂಚಿತವಾಗಿ ಹೋಗಿ ಟಾಕೀಸಿನ ಅಂಗಳದಲ್ಲಿ ಕಾಲಕಳೆಯುತ್ತಿದ್ದೆವು. ‘ಶುಕ್ಲಾಂಬರಧರಂ ಶಶಿವರ್ಣಂ’, ‘ನಮೋ ವೆಂಕಟೇಶಾ ನಮೋ ತಿರುಮಲೇಶಾ’ ಹಾಡು ಮುಗಿಯಿತೆಂದರೆ ಸಿನಿಮಾ ಶುರು. ತಡವಾಗಿ ಬಂದವರು ‘ಶುರುವಾಗಿ ಎಷ್ಟೊತ್ಹಾತಣ್ಣ’ ಎಂದು ಕಾತರದಿಂದ ಕೇಳಿ, ‘ಈಗಿನ್ನೂ ನಂಬರ್ ತೋರಿಸ್ತಿದಾನೆ’ ಉತ್ತರ ಪಡೆದು, ಕತ್ತಲಿನಲ್ಲಿ ಕಣ್ಣು ಅಗಲಿಸಿಕೊಂಡು ತಡವರಿಸುತ್ತ ಮೆಟ್ಟಲಿಳಿದು ಒಳಗೆ ಹೋಗುತ್ತಿದ್ದರು. ‘ಲೈಫ್‍ಬಾಯ್ ಎಲ್ಲಿದೆಯೊ ಅಲ್ಲಿದೇ ಆರೋಗ್ಯ’ ಎಂಬ ಹಾಡಿನ ಜಾಹಿರಾತು, ಮನಸಿನ ಕಶ್ಮಲವನ್ನೆಲ್ಲ ತೊಳೆದು ಸಚ್ಛಮಾಡುತ್ತಿತ್ತು. ನಮಗೆ ವರ್ಷಕ್ಕೆರಡು ಸಲ, ಬಕ್ರೀದ್ ಮತ್ತು ರಂಜಾನ್‍ಗಳಲ್ಲಿ, ಸಿನಿಮಾ ನೋಡಲು ಸ್ವಾತಂತ್ರ್ಯ ಇರುತ್ತಿತ್ತು. ಆಗ ಟಾಕೀಸುಗಳಲ್ಲಿ ‘ಮೊಗಲೆ ಆಜಂ’, ‘ದಯಾರೆ ಮದೀನ’ ‘ಹಾತಿಂ ತಾಯ್’ ‘ಮೇರೆ ಮೆಹಬೂಬ್’ ಮುಂತಾದ ‘ಸಾಬರ ಸಿನಿಮಾ’ ಹಾಕುತ್ತಿದ್ದರು. ಟಾಕೀಸು ಹೊಸಬಟ್ಟೆಯ ಹಾಗೂ ಅತ್ತರಿನ ಸುವಾಸನೆಯಿಂದ ತುಂಬಿಹೋಗುತ್ತಿತ್ತು. ನಾವು ನಮ್ಮ ಕಲೆಕ್ಷನನ್ನು ಸುರಿದು, ಎರಡೂ ಶೋಗಳನ್ನು ವೀಕ್ಷಿಸಿದ ಬಳಿಕ ಮನೆಗೆ ಹೋಗುತ್ತಿದ್ದೆವು.

ಟಾಕೀಜುಗಳಿಂದ ನಮ್ಮ ಬೀದಿಯಲ್ಲಿ ಹಲವು ಕಲಾವಿದರು ರೂಪುಗೊಂಡರು. ಉದಾಹರಣೆಗೆ ನನ್ನಮ್ಮ. ಅವಳು ತನ್ನ ತಮಿಳು ಗೆಳತಿಯರನ್ನು ಕೂಡಿಕೊಂಡು ಕನ್ನಡ-ತಮಿಳು ಚಿತ್ರಗಳಿಗೆ ಹೋಗುತ್ತಿದ್ದಳು. ತಾನು ನೋಡಿದ ಸಿನಿಮಾಗಳ ಕಥೆಯನ್ನು ಮಧ್ಯಾಹ್ನ ಕೂರಿಸಿಕೊಂಡು ಸಿನಿಮಾಕ್ಕೆ ಹೋಗಲಾಗದ ಹೆಂಗಸರಿಗೆ ನಿರೂಪಿಸುತ್ತಿದ್ದಳು. ಇದು, ಹಾರುವ ಆನೆಯ ಬಾಲವನ್ನು ಹಿಡಿದು ಆಗಸಕ್ಕೆ ಹೋಗಿಬಂದ ರೈತನು, ತಾನು ಕಂಡುಬಂದ ಸ್ವರ್ಗವನ್ನು ಹಳ್ಳಿಯ ಜನರಿಗೆಲ್ಲ ವರ್ಣಿಸುವಂತೆ ತೋರುತ್ತಿತ್ತು. ಕತೆ ಮುಗಿದ ಬಳಿಕ, ಟಾಕೀಸಿನ ಅನುಭವಗಳು ಚರ್ಚೆಗೆ ಬರುತ್ತಿದ್ದವು. ಉದಾಹರಣೆಗೆ- ಹೆಂಗಸರ ಗೇಟಿನಲ್ಲಿ ಟಿಕೇಟು ಹರಿದುಕೊಡಲು ನಿಂತಿರುತ್ತಿದ್ದ ಟಾಕೀಸಿನ ಓನರನು, ಬಾಗಿಲಿಗೆ ಅಡ್ಡವಾಗಿ ಕೈಹಿಡಿದು ನುಗ್ಗುವ ಹೆಂಗಸರನ್ನು ಸ್ಪರ್ಶಿಸುತ್ತಿದ್ದುದು; ‘ನಿಲ್ಲಮ್ಮ ನುಗ್ಗಬ್ಯಾಡ’ ಎಂದು ಹಿಂತಳ್ಳುತ್ತಿದ್ದುದು. ಕೆಲವರು ಕೈಕೆಳಗೆ ನುಸುಳಿ ಹೋದೆನೆಂತಲೂ ಜೋರು ಮಾಡಿ ಕೈತೆಗೆಸಿದೆನೆಂತಲೂ ಕೊಚ್ಚಿಕೊಳ್ಳುತ್ತಿದ್ದರು. ಮುನಿಯಮ್ಮ ಮಾತ್ರ ‘ಅವನ ಕೈಗೆ ಗೆದ್ದಲು ಹತ್ತಾ. ಹಾಟ್ಗಳ್ಳ ಮುಟ್ಟಿಬಿಟ್ಟ’ ಎಂದು ಹಲ್ಲುಬಿಡುತ್ತಿದ್ದಳು. ಅಪ್ಪ, ಪೋಲಿಸರು ಕಳ್ಳಭಟ್ಟಿ ಮಾಲನ್ನು ರೈಡುಮಾಡುವಂತೆ, ಸೂಚನೆ ಕೊಡದೆ ಮನೆಗೆ ಬರುತ್ತಿದ್ದನು. ಸಿನಿಮಾ ಪ್ರವಚನಕ್ಕೆ ಸೇರಿದ್ದ ಹೆಂಗಸರೆಲ್ಲ ದುಡದುಡನೆ ಖಾಲಿ ಮಾಡುತಿದ್ದರು. ಅಪ್ಪ `‘ಲೇ, ಮನೇನ ಟಾಕೀಸು ಮಾಡಿದ್ದೀಯಲ್ಲೇ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ. ನಿನ್ನಿಂದಲೇ ಮಕ್ಕಳು ಹಾಳಾಗಿದ್ದು’ ಎಂದು ಬೈಯುತ್ತಿದ್ದನು.

ಸಿನಿಮಾ ಶುರುವಾಗುತ್ತಿದ್ದುದು ಸಿಗರೇಟಿಗೆ ಕೆಂಪುಮಾರ್ಕಿನಲ್ಲಿ ಕತ್ತರಿಚಿಹ್ನೆಹಾಕಿದ `ಧೂಮಪಾನ ನಿಷೇಧಿಸಲಾಗಿದೆ’ ಎಂಬ ಸ್ಲೈಡ್ ಪ್ರದರ್ಶನ ಮೂಲಕ. ಅಷ್ಟುಹೊತ್ತಿಗೆ ಟಾಕೀಸು ಸಾಂಬ್ರಾಣಿ ಹೊಗೆ ಹಾಕಿದಂತೆ ಧೂಮ್ರವಲಯದಿಂದ ತುಂಬಿ ಹೋಗಿರುತ್ತಿತ್ತು. ಟಾಕೀಸಿನ ಅರೆಗತ್ತಲೆ ವಿಭಿನ್ನ ಕುಶಲತೆಗಳನ್ನು ಕಲಿಸಿತ್ತು. ಶೇಂಗಾ ಮಾರುವವನು ನಾಣ್ಯವನ್ನು ಅದರ ಗಾತ್ರ ತೂಕ ಮತ್ತು ಅಂಚಿನ ಕಚ್ಚುಗಳ ಆಧಾರದಲ್ಲೇ ಮೌಲ್ಯವನ್ನು ಗುರುತಿಸುತ್ತಿದ್ದನು. ಆದರೂ ಜನ ಖೊಟ್ಟಿ ನಾಣ್ಯಗಳನ್ನು ಅವನಿಗೆ ದಾಟಿಸುತ್ತಿದ್ದರು. ಹುಳಿತ ಬೀಜ ತಿಂದು ಬಾಯಿ ಕಹಿಯಾದರೆ, ಬಾಯಿಗೆ ಬಂದಂತೆ ಬೈಯುತ್ತಿದ್ದರು. ಶೇಂಗಾದವನಿಗಿಂತ ಹೆಚ್ಚು ಬೈಸಿಕೊಳ್ಳುತ್ತಿದ್ದವನು ಸಿನಿಮಾ ಆಪರೇಟರು. ಕರೆಂಟು ಹೋದಾಗಲೊ ತಾಂತ್ರಿಕ ಕಾರಣದಿಂದಲೊ ಸಿನಿಮಾ ನಿಂತಾಗ ಜನ, ಶಿಳ್ಳೆ ಹಾಕುತ್ತಿದ್ದರು. ಲಬೊಲಬೊ ಮಾಡುತ್ತಿದ್ದರು. ‘ಬಿಡಲೊ, ನಿನ್ನಮ್ಮನ..’ ಎಂದು ಆರಂಭವಾಗುವ ಬಾಣಗಳನ್ನು ಎಸೆಯುತ್ತಿದ್ದರು. ಹಗಲೆಲ್ಲ ನಿದ್ದೆ ತೆಗೆದು ರಾತ್ರಿಯೆಲ್ಲ ನಿದ್ದೆಗೆಡುತ್ತಿದ್ದ ಆಪರೇಟರ್ ಬಸಪ್ಪನವರು, ಅಪ್ಪನ ಜತೆ ಟೀಕುಡಿಯುವಾಗ ‘ಯಾರಿಗೆ ಬೇಕ್ರೀ ಸಾಹೇಬರೆ ಈ ದರಿದ್ರ ಕೆಲಸ? ಹೆಂಡತಿ ಮಕ್ಕಳನ್ನ ಬೈಸೋದು? ನಿರ್ವಾ ಇಲ್ಲ ಅಂತ ಮಾಡ್ತಿದೀನಿ’ ಎನ್ನುತ್ತಿದ್ದರು.

ಪತ್ತೇದಾರಿ ಸಿನಿಮಾದಲ್ಲಿ ಕೆಂಪನೆಯ ಗುಂಡಿ ಸೈರನ್ನಿನಂತೆ ಬರಿಸುವುದು, ಕೇಡಿ ಬಟನ್ ಒತ್ತಿದೊಡನೆ, ಹೀರೊ ಬಾಯಿಬಿಡುವ ಗುಂಡಿಯಲ್ಲಿ ಬೀಳುವುದು, ನಾಯಕ `ಡಿಶುಂ’ ಹೊಡೆದಾಗ ಕೇಡಿಗಳು ಹಿಟ್ಟಿನ ಚೀಲದೊಳಗೆ ಹೋಗಿ ಬಿದ್ದು ಬೂದಿಬಸಪ್ಪನಾಗಿ ಎದ್ದುಬರುವುದು, ಅಪಹೃತ ನಾಯಕಿ ಮೂಲೆಯಲ್ಲಿ ಅಡಗಿ ನಿಂತು ದೊಣ್ಣೆಯಿಂದ ಕೇಡಿಯ ತಲೆಗೆ ಬಡಿಯುವುದು-ಇವಕ್ಕೆಲ್ಲ ಬಿದ್ದುಬಿದ್ದು ನಗುತ್ತಿದ್ದೆವು.

ನಮಗೆ ಸಿನಿಮಾದಲ್ಲಿ ಭೋಜನದ ಸೀನುಗಳು ಇಷ್ಟವಾಗುತ್ತಿದ್ದವು. `ಮಾಯಾ ಬಜಾರ್‍ನ’ `ಇದಾವ ಭೋಜನವಿದು ವಿಚಿತ್ರ ಭಕ್ಷಗಳಿವು’ ಹಾಡಿನಲ್ಲಿ ರಾಕ್ಷಸನು ಬಾಯಿ ತೆಗೆದೊಡನೆ ದೊಡ್ಡ ಹರಿವಾಣದಲ್ಲಿರುವ ಲಾಡುಗಳ ಗುಳುಗುಳು ಹಾರಿ ಹೋಗುತ್ತಿದ್ದುದು ಖುಶಿ ಕೊಡುತ್ತಿತ್ತು. ಪತ್ತೇದಾರಿ ಸಿನಿಮಾದಲ್ಲಿ ಕೆಂಪನೆಯ ಗುಂಡಿ ಸೈರನ್ನಿನಂತೆ ಬರಿಸುವುದು, ಕೇಡಿ ಬಟನ್ ಒತ್ತಿದೊಡನೆ, ಹೀರೊ ಬಾಯಿಬಿಡುವ ಗುಂಡಿಯಲ್ಲಿ ಬೀಳುವುದು, ನಾಯಕ `ಡಿಶುಂ’ ಹೊಡೆದಾಗ ಕೇಡಿಗಳು ಹಿಟ್ಟಿನ ಚೀಲದೊಳಗೆ ಹೋಗಿ ಬಿದ್ದು ಬೂದಿಬಸಪ್ಪನಾಗಿ ಎದ್ದುಬರುವುದು, ಅಪಹೃತ ನಾಯಕಿ ಮೂಲೆಯಲ್ಲಿ ಅಡಗಿ ನಿಂತು ದೊಣ್ಣೆಯಿಂದ ಕೇಡಿಯ ತಲೆಗೆ ಬಡಿಯುವುದು-ಇವಕ್ಕೆಲ್ಲ ಬಿದ್ದುಬಿದ್ದು ನಗುತ್ತಿದ್ದೆವು.

ಬಾಲ್ಯವನ್ನು ಹೀಗೆ ವರ್ಣರಂಜಿತಗೊಳಿಸಿದ ಟಾಕೀಸುಗಳನ್ನು ಈಚೆಗೆ ಊರಿಗೆ ಹೋದಾಗ ನೋಡಿದೆ. ಮತಾಪು ಉರಿದ ದೀಪಾವಳಿ ಹೂಕುಂಡಗಳಂತೆ, ಮಂತ್ರಶಕ್ತಿ ಕಳೆದುಕೊಂಡ ದಂಡಗಳಂತೆ ಕಂಡವು. ರಸ್ತೆ ವಿಸ್ತರಣೆ ಮಾಡಲು ಕಾಂಪೌಂಡು ಗೋಡೆ ಒಡೆದು, ಅವುಗಳ ವಿಶಾಲ ಅಂಗಳ ಕಿರಿದಾಗಿದ್ದವು. ಹೊಸ ಸಿನಿಮಾ ಪೋಸ್ಟರು ಅಂಟಿಸಿದಾಗ ಜಾತ್ರೆಯಂತೆ ನೆರೆಯುತ್ತಿದ್ದ ಹುಡುಗರೂ ಇರಲಿಲ್ಲ. ಪೋಸ್ಟರು ನೋಡುತ್ತ ನಿಂತವರನ್ನು ಬೈದು ಶಾಲೆಗೆ ದಬ್ಬುವ ಪಹರೆಗಣ್ಣಿನ ಹಿರಿಯರೂ ಇರಲಿಲ್ಲ. ಯುದ್ಧಕಣ ಎದುರಾಳಿಗಳಿಲ್ಲದೆ ಶಾಂತವಾಗಿತ್ತು. ಟಾಕೀಸಿನ ಎದುರಿದ್ದ ಕನ್ನಡ ಶಾಲೆ-ಆಂಗ್ಲಮಾಧ್ಯಮದ ಕಾನ್ವೆಂಟುಗಳ ಭರಾಟೆಯಿಂದಲೊ ಏನೆ, ತಾನೂ ಕಂಗೆಟ್ಟಿತ್ತು.

ನಮ್ಮೂರು ಬೆಳೆದಿದೆ. ಆದರೆ ಟಾಕೀಸುಗಳ ಸಂಖ್ಯೆ ಬದಲಾಗಿಲ್ಲ; ಇವು ಇನ್ನೆಷ್ಟು ಕಾಲ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವವೊ, ಭವಿಷ್ಯದಲ್ಲಿ ಯಾವ್ಯಾವ ಅವತಾರ ಎತ್ತುವವೊ ತಿಳಿಯದು. ನಾವು ಮುಪ್ಪಿಗೆ ಹೊರಳುತ್ತಿರುವಾಗಲೂ ಅವು ಮಾತ್ರ ಹಿಂದಿದ್ದಂತೆಯೇ ಇರಬೇಕೆಂದು ಅಪೇಕ್ಷಿಸುವುದು ಉಚಿತವಲ್ಲ. ಟಾಕೀಸಿನ ಹೊರಚಹರೆ ಬದಲಾಗಿರಬಹುದು. ಆದರೆ ಸಿನಿಮಾಗಳು ಟಿವಿ ಮೊಬೈಲಿನಲ್ಲಿ ಅವತರಿಸುತ್ತಿವೆ. ಅವನ್ನು ನೋಡುವ ನಾವು ಹಿಂದಿನಂತೆಯೇ ಅಳುತ್ತೇವೆ, ನಗುತ್ತೇವೆ, ಭಾವಕಂಪಿತರಾಗುತ್ತೇವೆ. ಆದರೂ ಟಾಕೀಸುಗಳಲ್ಲಿ ಅಪರಿಚಿತರ ಪಕ್ಕ ಕುಳಿತು ನಾವೆಲ್ಲ ಒಂದೇ ಭಾವದಲ್ಲಿ ಮಾಯಾಲೋಕಕ್ಕೆ ಪ್ರೇಕ್ಷಕರಾಗುವ, ಮಬ್ಬುಕತ್ತಲಲ್ಲಿ ಯಾರಿಗೂ ಅರಿಯದೆ ಕಣ್ಣೀರು ಸುರಿಸುವ ಅನುಭವ, ಎಲ್ಲೊ ಕಳೆದುಹೋಗಿದೆ. ಟಾಕೀಸುಗಳು ಒಂದು ದಿನ ಇಲ್ಲವಾಗಬಹುದು. ಅವು ಸೃಷ್ಟಿಸಿದ ಅನುಭವ ನೆನಪು ಸಜೀವವಾಗಿರುತ್ತವೆ. ಕಾಲಪ್ರವಾಹದಲ್ಲಿ ಮರುಹುಟ್ಟು ಪಡೆಯುವ ತಾಕತ್ತುಳ್ಳ ಯಾವ ಸತ್ಪರಂಪರೆಗಳೂ ಹಾಗೆ ನಾಶವಾಗುವುದಿಲ್ಲ.

Leave a Reply

Your email address will not be published.