ಸುಳ್ಳು ಸುದ್ದಿಗಳ ಬಗ್ಗೆ ಬೆಳಕು ಚೆಲ್ಲುವ ಇಂಡಿಯಾ ಮಿಸ್‍ಇನ್‍ಫಾರ್ಮಡ

ಕಳೆದ ಮೂರು ವರ್ಷಗಳಿಂದ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ಗಣನೀಯವಾಗಿ ಏರಿರುವ ಹಿನ್ನೆಲೆಯಲ್ಲಿ ಈ ಕೃತಿಯು ಇಂಟರ್ನೆಟ್ ಆಗಮನದ ನಂತರದ ಭಾರತದ ರಾಜಕೀಯ ಮತ್ತು ಸಾಮಾಜಿಕ ಗತ್ಯಂತರಗಳನ್ನು ದಾಖಲಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ.

ನನ್ನ ವಾಟ್ಸಾಪ್ ಠಣ್ಣೆಂದಿತ್ತು. ಯಾರೆಂದು ನೋಡಿದರೆ ಪರಿಚಿತರೊಬ್ಬರ ಸಂದೇಶ.

ಸಂದೇಶವು ಸುಮಾರಾಗಿ ಹೀಗಿತ್ತು: “ಎಚ್ಚರೆಚ್ಚರ! ಚುಚ್ಚುಮದ್ದು ಕೊಡುತ್ತೇವೆಂದು ಸರಕಾರಿ ಆರೋಗ್ಯ ಕೇಂದ್ರಗಳ ಹೆಸರಿನಲ್ಲಿ ಕೆಲ ನಕಲಿ ಕಾರ್ಯಕರ್ತರು ಜಿಲ್ಲೆಯಾದ್ಯಂತ ಸುಳಿದಾಡುತ್ತಿದ್ದಾರೆ. ಇವರು ‘ಇಂತಿಪ್ಪ’ ಧರ್ಮದವರಾಗಿದ್ದು ‘ಇಂತಿಪ್ಪ’ ಧರ್ಮದವರಿಗೆ ಮಾತ್ರ ಚುಚ್ಚುಮದ್ದನ್ನು ಚುಚ್ಚಿ ಏಡ್ಸ್ ಖಾಯಿಲೆಯನ್ನು ಹರಡುತ್ತಿದ್ದಾರೆ. ಎಲ್ಲರಿಗೂ ಇದನ್ನು ಕಳಿಸಿ ಅಮಾಯಕರ ಪ್ರಾಣ ಉಳಿಸಿ!’’

ಮೊದಲೇ ಫಾರ್ವರ್ಡ್ ಸಂದೇಶಗಳ ಅಭಿಮಾನಿಯಲ್ಲದ ನನಗೆ ಈ ಬಗೆಯ ಸಂದೇಶಗಳು ಬಲು ರೇಜಿಗೆಯನ್ನು ತರುವಂಥವು. ಆದರೆ ಈ ಬಾರಿ ಮಾತ್ರ ಇದನ್ನೋದಿ ನಕ್ಕುಬಿಟ್ಟಿದ್ದೆ. ಮನುಷ್ಯ ಸುಳ್ಳನ್ನಾಡುವ ಎಲ್ಲಾ ಮಿತಿಗಳನ್ನು ಮೀರಿಬಿಟ್ಟಿದ್ದಾನೆ ಎಂಬುದು ಇದಕ್ಕೆ ಒಂದು ಕಾರಣವಾದರೆ ಇವುಗಳನ್ನೆಲ್ಲಾ ನಂಬುವ ಒಂದು ವರ್ಗವೂ ಇದೆ ಎಂಬುದು ಮತ್ತೊಂದು ಕಾರಣ. “ಇಂಥಾ ಸಂದೇಶಗಳನ್ನು ಸುಖಾಸುಮ್ಮನೆ ಎಲ್ಲರಿಗೂ ಕಳಿಸಬೇಡಿ. ನನಗಂತೂ ಕಳಿಸಲೇಬೇಡಿ. ಸುಳ್ಳುಸುದ್ದಿಗಳನ್ನು ಹರಿಯಬಿಡುವುದು ತಪ್ಪಲ್ವಾ ಸಾರ್? ಅಷ್ಟೂ ಸಾಮಾಜಿಕ ಕಾಳಜಿ-ಜವಾಬ್ದಾರಿ ಗಳಿಲ್ಲದಿದ್ದರೆ ಹೇಗೆ?’’ ಎಂದೆ. “ನನಗೂ ಒಮ್ಮೆ ಹಾಗೇ ಅನ್ನಿಸಿತು. ಆದರೂ ತುಂಬಾ ಕಡೆ ಇದು ಸಾಗುತ್ತಿರುವುದರಿಂದ ನಿಜವಾಗಿರಲೂಬಹುದು ಅಂದುಕೊಂಡೆ’’ ಎಂದು ಪೆಚ್ಚಾಗಿ ಹೇಳಿದರು ಅವರು. ಹೀಗೆ ನಾನು ಅವರಿಗೆ ತಿಳಿಹೇಳುವುದೂ, ಇವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದೂ ಹೊಸತೇನಲ್ಲ. ಮಾಹಿತಿಗಳ ಮಹಾಪ್ರವಾಹದಲ್ಲಿ ಜನಸಾಮಾನ್ಯರಿಗೆ ಕಾಳು ಯಾವುದು, ಜೊಳ್ಳು ಯಾವುದು ಎಂಬುದನ್ನೂ ಪ್ರತ್ಯೇಕಿಸಲಾಗುತ್ತಿಲ್ಲವಲ್ಲಾ ಎಂದು ನನಗೆ ತಲೆ ಚಚ್ಚಿಕೊಳ್ಳುವಂತಾಯಿತು.

ಅಂದು ನಾನು ಆ ಫಾರ್ವರ್ಡ್ ಸಂದೇಶ ವನ್ನೋದಿ ನಕ್ಕಿದ್ದೇನೋ ಹೌದು. ಆದರೆ ಇದು ನಕ್ಕು ಮರೆತುಬಿಡುವಂಥಾ ಚಿಲ್ಲರೆ ವಿಷಯ ವೇನೂ ಆಗಿರಲಿಲ್ಲ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಪ್ರತೀಕ್ ಸಿನ್ಹಾರಿಗೆ ಇದು ಬಹುಶಃ ಅಂದೇ ಮನದಟ್ಟಾಗಿತ್ತೇನೋ! ಇಲ್ಲವಾದರೆ 2017ರಲ್ಲಿ  ‘ಆಲ್ಟ್ ನ್ಯೂಸ್’ ತಾಣವು ಜನ್ಮತಾಳುತ್ತಲೇ ಇರಲಿಲ್ಲ. ಹೀಗೆ ಮನೆಮನ, ಸಮುದಾಯ, ದೇಶಗಳನ್ನು ಒಡೆಯುವ ಸುಳ್ಳುಸುದ್ದಿಗಳಿಗೆ ಸಡ್ಡುಹೊಡೆಯಲೆಂದೇ ಆರಂಭವಾದ ಆಲ್ಟ್ ನ್ಯೂಸ್ ಮುಂದೆ ಸಾವಿರಾರು ಕಪೋಲಕಲ್ಪಿತ ಸುದ್ದಿಗಳನ್ನು ಬೆತ್ತಲಾಗಿಸುತ್ತಾ ಮಾಧ್ಯಮಗಳ fact-checker ಆಗಿ ರೂಪುಗೊಂಡಿದ್ದ ಕಥೆಯನ್ನು ಓದಲು India Misinformed ಕೃತಿಯನ್ನು ಕುತೂಹಲದೊಂದಿಗೆ ಎತ್ತಿಕೊಂಡಿದ್ದೆ. ರವೀಶ್ ಕುಮಾರ್ ರವರ ಮುನ್ನುಡಿ ಮತ್ತು ಅರುಣ್ ಶೌರಿಯವರ ಬೆನ್ನುಡಿಗಳು ಪುಸ್ತಕದ ತೂಕವನ್ನು ಹೆಚ್ಚಿಸಿರುವುದಲ್ಲದೆ ಹೆಚ್ಚಿನ ಪುಟಗಳನ್ನು ಆವರಿಸಿಕೊಂಡಿದ್ದ ಸಚಿತ್ರ ವರದಿಗಳು ಕೃತಿಯನ್ನು ಮೇಲ್ನೋಟಕ್ಕೆ ಇಷ್ಟವಾಗಿಸಿತ್ತು.

ಬರಹ, ಚಿತ್ರ ಮತ್ತು ವೀಡಿಯೋ ರೂಪಗಳಲ್ಲಿರುವ ಸುಳ್ಳು ಸುದ್ದಿಗಳು ನಮ್ಮನ್ನು ಅದ್ಯಾವ ಮಟ್ಟಿಗೆ ದಾರಿತಪ್ಪಿಸುತ್ತಿವೆ ಎಂಬುದರ ಬಗ್ಗೆ ಮುನ್ನುಡಿಯಲ್ಲಿ ವಿಷಾದದಿಂದ ಹೇಳುವ ರವೀಶ್ ಕುಮಾರ್ ಅಲ್ವರ್ ಪ್ರದೇಶದಲ್ಲಾದ ಪೆಹ್ಲೂ ಖಾನ್ (2017) ಮತ್ತು ಬುಲಂದಶಹರ್ ನಲ್ಲಾದ ಸುಬೋಧ್ ಕುಮಾರ್ (2018) ಕೊಲೆಗಳನ್ನೂ ಕೂಡ ಜನರು ಸಂಶಯದ ದೃಷ್ಟಿಯಿಂದ ನೋಡುವಂತಾಯಿತು ಎನ್ನುತ್ತಾರೆ. ಒಂದು ರೀತಿಯಲ್ಲಿ ಇದು ಸತ್ಯವೂ ಹೌದು.

ಅಷ್ಟಕ್ಕೂ ಸುಳ್ಳುಸುದ್ದಿಗಳ ಪ್ರವಾಹದಿಂದ ಆಗಿರುವ ಅವಾಂತರಗಳು ಒಂದೇ ಎರಡೇ? ಚಿಕ್ಕಪುಟ್ಟ ಘರ್ಷಣೆಗಳಿಂದ ಹಿಡಿದು ಅಮಾನುಷ ದೌರ್ಜನ್ಯ-ಕೊಲೆಗಳವರೆಗೆ ಇವು ಮುಂದುವ ರಿದಿವೆ ಮತ್ತು ಮುಂದುವರಿಯುತ್ತಿವೆ. ಉದಾಹರಣೆಗೆ ಕತುವಾದಲ್ಲಿ ನಡೆದ ಆಸಿಫಾ ಅತ್ಯಾಚಾರ ಪ್ರಕರಣಕ್ಕೆ ಬಳಿಯಬಾರದ ಬಣ್ಣಗಳನ್ನು ಹಚ್ಚಿ, ಅಲ್ಲಿ ಅತ್ಯಾಚಾರವೇ ಆಗಿಲ್ಲ ಎಂಬಂತೆ ಬಿಂಬಿಸಲು ವ್ಯವಸ್ಥಿತ ಪ್ರಯತ್ನಗಳು ನಡೆದವು. ಕೆಲ ಶಕ್ತಿಗಳು ನಮ್ಮಂತಹ ಜನಸಾಮಾನ್ಯರನ್ನೇ ದಾಳಗಳನ್ನಾಗಿಸಿಕೊಂಡು ನಮ್ಮ ನಡುವಿನಲ್ಲೇ ಕಂದಕಗಳನ್ನು ಹುಟ್ಟುಹಾಕುತ್ತಿರುವುದು ನಿಜಕ್ಕೂ ಗಂಭೀರವಾಗಿ ಯೋಚಿಸಬೇಕಾದ ಸಂಗತಿ.

ನಮ್ಮ ದೇಶದೊಳಗೆ ನುಗ್ಗಿರುವ ರೋಹಿಂಗ್ಯಾಗಳ ಉತ್ಪ್ರೇಕ್ಷಿತ ಜನಸಂಖ್ಯೆ, ಭಾರತದಲ್ಲಾಗುವ 95% ಅತ್ಯಾಚಾರಗಳಿಗೆ ನಿರ್ದಿಷ್ಟ ಸಮುದಾಯವೊಂದೇ ಕಾರಣವೆಂಬ ಸುಳ್ಳು, ಎಲ್ಲೋ ನಡೆದ ಯಾವುದೋ ಘಟನೆಯೊಂದರ ಚಿತ್ರವನ್ನು ನಮ್ಮ ದೇಶದಲ್ಲಿ ನಡೆಯುತ್ತಿರುವ ಜಾತಿಸಂಘರ್ಷವೆಂದು ತೋರಿಸುತ್ತಿರುವುದು… ಹೀಗೆ ಹಲವಾರು ಸುಳ್ಳುಸುದ್ದಿಗಳು ಇಲ್ಲಿ ಬೆತ್ತಲಾಗಿವೆ.

ಈ ಕೃತಿಯು ಬೆಳಕು ಚೆಲ್ಲುವುದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆದಾಡಿದ ಇಂಥಾ ಸುಳ್ಳುಸುದ್ದಿಗಳ ಬಗ್ಗೆಯೇ. 2014 ರಲ್ಲಿ  ‘ಗುಜರಾತ್ ಮಾದರಿ ಆಡಳಿತ’ವೆಂಬ ಪ್ರಚಾರಕ್ಕಾಗಿ ಚೀನಾದ ಒಂದು ಸ್ಥಳವನ್ನು ಅಹ್ಮದಾಬಾದ್ ನಲ್ಲಿರುವ ಬಸ್ ನಿಲ್ದಾಣ ಎಂದು ಹರಿಯಬಿಡುವ ನಕಲಿ ಸುದ್ದಿಯನ್ನು ಹೆಸರಿಸುವ ಲೇಖಕರು ಇಂಥಾ ಹಲವಾರು ಪ್ರಕರಣಗಳ ಬಗ್ಗೆ ಇಲ್ಲಿ ಚಿಕ್ಕದಾಗಿ, ಚೊಕ್ಕದಾಗಿ ಚಿತ್ರಗಳ ಸಮೇತ ಓದುಗರ ಮುಂದಿರಿಸಿದ್ದಾರೆ. ನಮ್ಮ ದೇಶದೊಳಗೆ ನುಗ್ಗಿರುವ ರೋಹಿಂಗ್ಯಾಗಳ ಉತ್ಪ್ರೇಕ್ಷಿತ ಜನಸಂಖ್ಯೆ, ಭಾರತದಲ್ಲಾಗುವ 95% ಅತ್ಯಾಚಾರಗಳಿಗೆ ನಿರ್ದಿಷ್ಟ ಸಮುದಾಯವೊಂದೇ ಕಾರಣವೆಂಬ ಸುಳ್ಳು, ಎಲ್ಲೋ ನಡೆದ ಯಾವುದೋ ಘಟನೆಯೊಂದರ ಚಿತ್ರವನ್ನು ನಮ್ಮ ದೇಶದಲ್ಲಿ ನಡೆಯುತ್ತಿರುವ ಜಾತಿಸಂಘರ್ಷವೆಂದು ತೋರಿಸುತ್ತಿರುವುದು… ಹೀಗೆ ಹಲವಾರು ಸುಳ್ಳುಸುದ್ದಿಗಳು ಇಲ್ಲಿ ಬೆತ್ತಲಾಗಿವೆ. ಬಹಳಷ್ಟು ಬಾರಿ ನಮ್ಮ ಜನಪ್ರತಿನಿಧಿಗಳೂ ಕೂಡ ಈ ಸುಳ್ಳುಸುದ್ದಿಗಳನ್ನು ತಮ್ಮ ಜಾಲತಾಣಗಳ ಖಾತೆಗಳಲ್ಲಿ ಉತ್ಸಾಹದಿಂದಲೇ ಹಂಚಿಕೊಂಡಿದ್ದಾರೆ ಎಂಬುದು ವಿಪರ್ಯಾಸ ಮತ್ತು ನಾಚಿಕೆಗೇಡು.

ಈ ಹಿಂದೆ ಖ್ಯಾತ ಪತ್ರಕರ್ತೆಯಾಗಿರುವ ಸ್ವಾತಿ ಚತುರ್ವೇದಿಯವರ ‘I am a Troll’ ಕೃತಿಯು ನಿರ್ದಿಷ್ಟವಾಗಿ ಆಡಳಿತ ಪಕ್ಷದ ಸುಳ್ಳುಸುದ್ದಿಗಳು ಮತ್ತು ಅವುಗಳ ಹಿಂದಿರುವ ಕರಾಳ ಮುಖವನ್ನು ಓದುಗರೆದುರು ತೆರೆದಿಟ್ಟಿತ್ತು. ಇಂಥದ್ದೊಂದು ಜಾಲವನ್ನು ನಮ್ಮ ರಾಜಕೀಯ ಶಕ್ತಿಕೇಂದ್ರಗಳು ಅದೆಷ್ಟು ವ್ಯವಸ್ಥಿತವಾಗಿ ನಡೆಸುತ್ತವೆ ಎಂಬುದನ್ನು ಬಹಳಷ್ಟು ಆಸಕ್ತರಿಗೆ ಪರಿಚಯಿಸಿದ್ದೇ ಈ ಕೃತಿ. ಇತ್ತ ಇಲ್ಲೂ ಕೂಡ ‘ಮೋದಿ’ ಎಂಬ ‘ಬ್ರಾಂಡ್’ ಅನ್ನು ಹುಟ್ಟಿಸಲು ಹೆಣೆದ ಸುಳ್ಳುಗಳು, ಪ್ರಶ್ನೆಗಳನ್ನೆತ್ತಿದವರಿಗೆಲ್ಲಾ ‘ಧರ್ಮವಿರೋಧಿಗಳು’/’ದೇಶದ್ರೋಹಿಗ ಳು’ ಎಂಬ ಬಿರುದುಗಳನ್ನು ದಯಪಾಲಿಸಿದ್ದು, ದೇಶದ ಪ್ರಥಮ ಪ್ರಧಾನಮಂತ್ರಿಯಾಗಿದ್ದ ನೆಹರೂರವರನ್ನು ಸ್ತ್ರೀಲೋಲನೆಂಬಂತೆ, ಅಸಮರ್ಥ ನಾಯಕನೆಂಬಂತೆ ಬಿಂಬಿಸಲು ಮಾಡಿದ ಪ್ರಯತ್ನಗಳು, ಸತ್ಯದ ತಲೆಯ ಮೇಲೆ ಹೊಡೆದಂತೆ ಇತಿಹಾಸವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿದ ಪ್ರಯತ್ನಗಳು… ಹೀಗೆ ದಿನನಿತ್ಯವೂ ಜನಸಾಮಾನ್ಯರ ಬುದ್ಧಿಯನ್ನು ಭ್ರಷ್ಟಗೊಳಿಸುತ್ತಾ ನಮ್ಮನ್ನು ಮೂರ್ಖರನ್ನಾಗಿಸಿರುವ ಹತ್ತಾರು ಸಂಗತಿಗಳ ಸತ್ಯಾಂಶಗಳು ಇಲ್ಲಿವೆ. ಸುಳ್ಳೊಂದನ್ನು ಸತತವಾಗಿ ಹೇಳುತ್ತಿದ್ದರೆ ಕ್ರಮೇಣ ಅದು ಸತ್ಯವಾಗಿ ಬದಲಾಗುತ್ತದೆ ಎಂಬುದನ್ನು ಇವುಗಳ ಹಿಂದಿರುವ ಶಕ್ತಿಗಳು ಬಲವಾಗಿ ನಂಬಿಕೊಂಡಿರುವುದು ಸತ್ಯ.

ಇನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಆರ್.ಎಸ್.ಎಸ್ ಸಭೆಯೊಂದರಲ್ಲಿ ಭಾಗವಹಿಸಿದ್ದ ಚಿತ್ರವೊಂದರಲ್ಲಂತೂ ಡಿಜಿಟಲ್ ಕಸರತ್ತುಗಳನ್ನು ಮಾಡಿ ಇಲ್ಲದ ಆರೆಸ್ಸೆಸ್ ಟೋಪಿಯನ್ನು ಅವರಿಗೆ ತೊಡಿಸಿ, ಸಂಘದ ಭಂಗಿಯಲ್ಲಿ ಧ್ವಜವಂದನೆ ಮಾಡುತ್ತಿರುವವರಂತೆ ಅವರನ್ನು ತೋರಿಸಲಾಯಿತು.

ಒಟ್ಟಿನಲ್ಲಿ ಬರಹಗಾರರು, ಸೆಲೆಬ್ರಿಟಿಗಳಿಂದ ಹಿಡಿದು ರಾಜಕಾರಣಿ ಗಳವರೆಗೂ ಎಲ್ಲರೂ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಈ ಸುಳ್ಳಿಗೆ ಬಲಿಯಾದವರೇ. ಹಿಂದಿನ ಉಪರಾಷ್ಟ್ರಪತಿಯವರಾಗಿದ್ದ ಹಮೀದ್ ಅನ್ಸಾರಿಯವರು ರಾಷ್ಟ್ರಧ್ವಜಕ್ಕೆ ವಂದಿಸಲಿಲ್ಲವೆಂಬ ಒಂದು ಚಿತ್ರ. ಭಾರತದ ಧ್ವಜಸಂಹಿತೆಯ ಪ್ರಕಾರ ರಾಷ್ಟ್ರಪತಿಗಳ ಘನಉಪಸ್ಥಿತಿಯಲ್ಲಿ ಉಪರಾಷ್ಟ್ರಪತಿಗಳು ಧ್ವಜಕ್ಕೆ ವಂದಿಸುವಂತಿಲ್ಲ. ಆದರೆ ಈ ಸತ್ಯ ಅದೆಷ್ಟು ಜನರಿಗೆ ಗೊತ್ತಿದೆ ಹೇಳಿ! ಇದನ್ನು ರಾಷ್ಟ್ರೀಯ ಪಕ್ಷವೊಂದರ ನಾಯಕರೆಲ್ಲಾ ಶೇರ್ ಮಾಡಿದ್ದೇ ಮಾಡಿದ್ದು. ಇನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಆರ್.ಎಸ್.ಎಸ್ ಸಭೆಯೊಂದರಲ್ಲಿ ಭಾಗವಹಿಸಿದ್ದ ಚಿತ್ರವೊಂದರಲ್ಲಂತೂ ಡಿಜಿಟಲ್ ಕಸರತ್ತುಗಳನ್ನು ಮಾಡಿ ಇಲ್ಲದ ಆರೆಸ್ಸೆಸ್ ಟೋಪಿಯನ್ನು ಅವರಿಗೆ ತೊಡಿಸಿ, ಸಂಘದ ಭಂಗಿಯಲ್ಲಿ ಧ್ವಜವಂದನೆ ಮಾಡುತ್ತಿರುವವರಂತೆ ಅವರನ್ನು ತೋರಿಸಲಾಯಿತು. ರಾಹುಲ್ ಗಾಂಧಿಯವರ ಭಾಷಣವೊಂದನ್ನು ಬಲುಬುದ್ಧಿವಂತಿಕೆಯಿಂದ ಕತ್ತರಿಸಿ ‘ಆಲೂಗಡ್ಡೆ ಹಾಕಿ ಚಿನ್ನ ತೆಗೆಯುವ ಯಂತ್ರದ’ ಸಂಗತಿಯನ್ನು ಅವರದ್ದೇ ಕಲ್ಪನೆಯೆಂಬಂತೆ ಬಿಂಬಿಸಿದ್ದೂ ಕೂಡ ಇಂಥಾ ತಂತ್ರಜ್ಞಾನದ ಕಣ್ಕಟ್ಟುಗಳಲ್ಲೊಂದು.

ಹಾಗೆಂದು ಇದು ಆಡಳಿತ ಪಕ್ಷಕ್ಕಷ್ಟೇ ಬೊಟ್ಟುಮಾಡಿ ತೋರಿಸುತ್ತಿರುವ ಕೃತಿಯೇನಲ್ಲ. ಇಂದು ಸುಳ್ಳುಸುದ್ದಿಗಳನ್ನು ಹರಿಯಬಿಡುತ್ತಿರುವವರಲ್ಲಿ  ಸಿಂಹಪಾಲು ಯಾರದ್ದು ಮತ್ತು ಯಾರಿಗೆ ಇವುಗಳಿಂದ ಹೆಚ್ಚಿನ ಲಾಭವಾಗುತ್ತಿದೆ ಎಂಬ ಸತ್ಯವು ಅಂಗೈಹುಣ್ಣಿನಷ್ಟೇ ಸ್ಪಷ್ಟವಿದೆ. ಹಾಗೆಂದು ಉಳಿದ ಪಕ್ಷಗಳು ಸಾಚಾಗಳೇನೂ ಅಲ್ಲ. ತಮ್ಮಿಂದಾಗುವಷ್ಟು ಸುಳ್ಳುಸುದ್ದಿಗಳನ್ನು ಉಳಿದ ಪಕ್ಷಗಳೂ ಕೂಡ ಜನಮಾನಸದಲ್ಲಿ ಹರಿ ಯಬಿಟ್ಟಿವೆ. ಹೀಗಾಗಿ ಆಡಳಿತ ಪಕ್ಷದ ಹಿರಿಯ ನಾಯಕರಾದ ಯೋಗೀಜಿ, ಶಿವರಾಜ್ ಸಿಂಗ್ ಚೌಹಾಣರಂಥವರನ್ನೂ ಕೂಡ ಇವು ಬಿಟ್ಟಿಲ್ಲ. ಸೋನಿಯಾಗಾಂಧಿ ಜಗತ್ತಿನ ನಾಲ್ಕನೇ ಶ್ರೀಮಂತ ಮಹಿಳೆಯೆಂಬ ಸುದ್ದಿ, ನೆಹರೂ ಕಾಲದಲ್ಲಿ ಭಾರತದ ಫುಟ್ಬಾಲ್ ಆಟಗಾರರಿಗೆ ಶೂಗಳಿರಲಿಲ್ಲ ಎಂಬ ಬಾಲಿಶ ಸುದ್ದಿ, ಚೀನಾದ ಚಿತ್ರವೊಂದನ್ನು ಬಳಸಿ ಏಮ್ಸ್ ವೈದ್ಯರು ವಾಜಪೇಯಿಯವರಿಗೆ ಅಂತಿಮ ವಂದನೆಯನ್ನು ಸಲ್ಲಿಸುತ್ತಿದ್ದಾರೆಂಬ ಸುದ್ದಿ, ಅಧಿಕಾರ ಪಡೆದುಕೊಂಡ ಒಂದೇ ತಾಸಿನಲ್ಲಿ ರಾಷ್ಟ್ರಪತಿಯಾದ ಕೋವಿಂದ್ ಅವರು ಏಕಾಏಕಿ ಮೂರು ಮಿಲಿಯನ್ ಫಾಲೋವರ್ ಗಳನ್ನು ಪಡೆದರೆಂಬ ಅರೆಬೆಂದ ಸುದ್ದಿ… ಹೀಗೆ ಹಲವಾರು ಸುಳ್ಳುಸುದ್ದಿಗಳು ಸಿನ್ಹಾರ ತಂಡದ ಶ್ರಮದೆದುರು ಮಕಾಡೆ ಮಲಗಿವೆ.

ಇಂಥಾ ತಪ್ಪುಗಳ ನಂತರವೂ ಸುಳ್ಳುಸುದ್ದಿಗಳನ್ನು ತಮ್ಮ ಜಾಲತಾಣಗಳಿಂದ ತೆಗೆದ ಅಥವಾ ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿರುವ ವಾಹಿನಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

ಅನಾಮಿಕತೆಯ ಹೆಸರಿನಲ್ಲಿ ವೆಬ್ ದುನಿಯಾದಲ್ಲಿ ಹೀಗೆಲ್ಲಾ ಸುಳ್ಳುಸುದ್ದಿಗಳು ಮೆರೆಯುತ್ತಿದ್ದರೆ ಮಾಧ್ಯಮಗಳು ಕನಿಷ್ಠಪಕ್ಷ ತಾವಾದರೂ ಇವುಗಳಿಂದ ದೂರವಿದ್ದು ತಮ್ಮ ಘನತೆಯನ್ನು ಕಾಯ್ದುಕೊಳ್ಳಬಹುದಿತ್ತು. ಆದರೆ ನಮ್ಮ ರಾಜ್ಯ ಮತ್ತು ರಾಷ್ಟ್ರಮಟ್ಟದ ಮಾಧ್ಯಮಗಳೋ ತಾವೇ ಸ್ಪರ್ಧೆಗೆ ಬಿದ್ದವರಂತೆ ಇವುಗಳೊಂದಿಗೆ ಕೈಜೋಡಿಸಿವೆ. ಹಲವು ಬಾರಿ ಈ ಸುದ್ದಿಗಳ ಸತ್ಯಾಸತ್ಯತೆಗಳನ್ನು ಪರೀಕ್ಷಿಸದೆ ಇವುಗಳನ್ನೇ ನಿಜವೆಂದು ನಂಬಿ ತಮ್ಮ ಪತ್ರಿಕೆಗಳಲ್ಲಿ/ಸುದ್ದಿವಾಹಿನಿಗಳಲ್ಲಿ ಪ್ರಕಟಿಸಿ ಮುಖಭಂಗಕ್ಕೀಡಾಗಿದ್ದೂ ಇದೆ. ಇನ್ನು ಇಂಥಾ ತಪ್ಪುಗಳ ನಂತರವೂ ಸುಳ್ಳುಸುದ್ದಿಗಳನ್ನು ತಮ್ಮ ಜಾಲತಾಣಗಳಿಂದ ತೆಗೆದ ಅಥವಾ ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿರುವ ವಾಹಿನಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇದು ನಮ್ಮ ಜನಪ್ರತಿನಿಧಿಗಳೆಂಬ ಹೆಸರಿನಲ್ಲಿ ಮೆರೆಯುತ್ತಿರುವ ರಾಜಕಾರಣಿಗಳ ವಿಚಾರದಲ್ಲೂ ಸತ್ಯ. ಇತ್ತೀಚೆಗಿನ ದಿನಗಳಲ್ಲಿ ಸರಕಾರಿ ಮಂತ್ರಾಲಯಗಳ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಕಲಿ ಸುದ್ದಿಗಳು ಇದಕ್ಕೊಂದು ಒಳ್ಳೆಯ ನಿದರ್ಶನ.

ಕೆಲ ಚಿಕ್ಕಪುಟ್ಟ ಕೊರತೆಗಳ ಹೊರತಾಗಿಯೂ India Misinformed ಒಮ್ಮೆ ಓದಬಹುದಾದ ಕೃತಿ. ಸುಳ್ಳೇ ಮೇಳೈಸುತ್ತಿರುವ ಈ ಡಿಜಿಟಲ್ ಯುಗದಲ್ಲೂ ಇಂದು ಆಲ್ಟ್ ನ್ಯೂಸ್ ತಂಡವು ಪ್ರವಾಹಕ್ಕೆದುರಾಗಿ ಈಜುತ್ತಾ ಜನಸಾಮಾನ್ಯರನ್ನು ಬಲಿಪಶುಗಳಾಗದಂತೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ದಾಳಗಳಾಗದಂತೆ ಎಚ್ಚರಿಸುತ್ತಿದೆ. ರಾಜಕೀಯ ಮತ್ತು ಮಾಧ್ಯಮರಂಗಗಳ ನೈತಿಕತೆಗೆ ಕನ್ನಡಿ ಹಿಡಿಯುತ್ತಿದೆ. ಕಳೆದ ಮೂರು ವರ್ಷಗಳಿಂದ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ಗಣನೀಯವಾಗಿ ಏರಿರುವ ಹಿನ್ನೆಲೆಯಲ್ಲಿ ಈ ಕೃತಿಯು ಇಂಟರ್ನೆಟ್ ಆಗಮನದ ನಂತರದ ಭಾರತದ ರಾಜಕೀಯ ಮತ್ತು ಸಾಮಾಜಿಕ ಗತ್ಯಂತರಗಳನ್ನು ದಾಖಲಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಸುಳ್ಳಿನ ಶರವೇಗವು ಸತ್ಯಕ್ಕಿಲ್ಲದಿರಬಹುದು. ಆದರೆ ಸತ್ಯವು ಚಿರಾಯುವೆಂಬ ನಂಬಿಕೆ ಮತ್ತು ನಿಸ್ವಾರ್ಥ ಸಾಮಾಜಿಕ ಕಾಳಜಿಯು ಸಿನ್ಹಾರಂಥಾ ಉತ್ಸಾಹಿ ಯುವಶಕ್ತಿಗಳ ತಂಡವನ್ನು ಮುನ್ನಡೆಸುತ್ತಿರುವುದು ನಿರಾಶೆಯ ಕತ್ತಲಿನಲ್ಲೂ ಆಶಾಕಿರಣವನ್ನು ಮೂಡಿಸುವಂತಿದೆ.

*ಲೇಖಕರು ದಕ್ಷಿಣಕನ್ನಡದ ಕಿನ್ನಿಗೋಳಿಯ ಮೂಲನಿವಾಸಿ; ಸಾಹಿತಿ, ಅಂಕಣಕಾರರು. ಆಫ್ರಿಕಾ ಪ್ರವಾಸ ಕಥನ ‘ಹಾಯ್ ಅಂಗೋಲಾ!’ ಇವರ ಚೊಚ್ಚಲ ಕೃತಿ. ಪ್ರಸ್ತುತ ಹರಿಯಾಣಾದ ಗುರುಗ್ರಾಮದ ನಿವಾಸಿ.

Leave a Reply

Your email address will not be published.