ಸುಸ್ಥಿರ ಪ್ರಯತ್ನಗಳಿಗಳಿಗೆ ವೇಗ ಮತ್ತು ವಿಸ್ತಾರದ ಅಗತ್ಯವಿದೆ

ದೇಶದ ಇತರೆಡೆಗಳಂತೆ ಕರ್ನಾಟಕದಲ್ಲಿಯೂ ಪರಿಸರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನೇಕ ಯೋಜನೆಗಳು ರೂಪುಗೊಂಡಿವೆ, ಅನುಷ್ಠಾನಗೊಂಡಿವೆ, ಹಾಗು ವಿವಿಧ ಪ್ರಮಾಣಗಳಲ್ಲಿ ಯಶಸ್ಸನ್ನೂ ಗಳಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಇಷ್ಟರಿಂದಲೇ ತೃಪ್ತರಾಗದೆ ಇನ್ನೂ ಹೆಚ್ಚಿನ ಕಾಳಜಿ, ಉತ್ಸಾಹಗಳಿಂದ ಮುನ್ನಡೆಯಬೇಕಾದ ಅನಿವಾರ್ಯತೆಯನ್ನೂ ನಾವು ಅರ್ಥಮಾಡಿಕೊಳ್ಳಬೇಕಾಗಿದೆ.

ನಮ್ಮ ಜೀವನದ ಅತ್ಯಾವಶ್ಯಕ ಧಾತುವಾದ ನೀರಿನ ಉದಾಹರಣೆಯೊಂದಿಗೆ ನನ್ನ ಅನಿಸಿಕೆಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ. ಇವು ಬೃಹತ್ ಬೆಂಗಳೂರಿನ ಮಿತಿಯಲ್ಲಿ ನೀರಿನ ವಿಷಯಕ್ಕೆ ಸಂಬಂಧಿಸಿದ್ದಾಗಿವೆ. 

1 ಜುಲೈ 2019ರ ನ್ಯೂಸ್-18 ವರದಿಯಂತೆ, ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ ನಗರದ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಹೊರೆಯನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ಕೆರೆ, ಬಾವಿಗಳು ಬರಿದಾಗುತ್ತಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ಪರಿಷ್ಕೃತ ನೀಲನಕ್ಷೆಯಂತೆ 2019ರಿಂದ 2031ರ ಅವಧಿಯಲ್ಲಿ ಬೆಂಗಳೂರಿನ ಜನಸಂಖ್ಯೆ 8 ಮಿಲಿಯನ್ ವೃದ್ಧಿಸಿ 20.3 ಮಿಲಿಯನ್ ಮುಟ್ಟಲಿದೆ.  ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನದ ಪ್ರಕಾರ ಮುಂದಿನ ಕೆಲವು ವರ್ಷಗಳಲ್ಲಿ ಬೆಂಗಳೂರು ವಾಸಯೋಗ್ಯವಲ್ಲದ ಹಂತ ತಲುಪುತ್ತದೆ. 

ಸುಪ್ರೀಂ ಕೋರ್ಟಿನ ಆದೇಶದನ್ವಯ ಕಾವೇರಿಯಿಂದ ನಗರಕ್ಕೆ ಸರಬರಾಜು ಮಾಡಲು ನಿಗದಿಯಾಗಿರುವ ನೀರಿನ ಪ್ರಮಾಣ ಬೆಂಗಳೂರಿಗರ ಅಗತ್ಯವನ್ನು ಸಂಪೂರ್ಣವಾಗಿ ಪೂರೈಸಲು ಸಾಕಾಗುವುದಿಲ್ಲ. ಅನೇಕ ಹೊಸ ಬಡಾವಣೆಗಳು ನೀರಿನ ಪೂರೈಕೆಗಾಗಿ ಕೊಳವೆ ಬಾವಿ ಮತ್ತು ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾಗಿದೆ. 

1960ರಲ್ಲಿ ಸುಮಾರು 280 ಕೆರೆಗಳಿದ್ದವು. ಪ್ರಸ್ತುತ ಈ ಸಂಖ್ಯೆ 81ಕ್ಕೆ ಇಳಿದಿದೆ. ಇವುಗಳಲ್ಲಿ ಕೇವಲ 34 ಕೆರೆಗಳು ಮಾತ್ರ ಜೀವಂತವಾಗಿವೆ ಎಂಬ ವಾಸ್ತವ ಎಚ್ಚರಿಕೆಯ ಘಂಟೆಯಾಗಿದೆ. ಕೆರೆಗಳ ಅಧ್ಯಯನ ಹಾಗು ಅವುಗಳ ನವೀಕರಣಕ್ಕೆ ಕ್ರಮಗಳನ್ನು ಸೂಚಿಸಲು ನ್ಯಾಷನಲ್ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಸ್ಥೆಯನ್ನು ನಿಯೋಜಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು 2019ರ ಜೂನ್ ತಿಂಗಳಿನಲ್ಲಿ ಸರ್ಕಾರಕ್ಕೆ ಆದೇಶ ನೀಡಿತ್ತು. ಬೆಂಗಳೂರಿನ 19 ಅನುಪಯುಕ್ತ ಕೆರೆಗಳ ಕುರಿತು ಈ ಸಂಸ್ಥೆ ನೀಡಿರುವ ಪ್ರಾಥಮಿಕ ವರದಿಯಲ್ಲಿ ಕೆರೆಗಳ ಒತ್ತುವರಿಯಾಗಿರುವುದನ್ನು ಹಾಗು ಈ ಜಾಗಗಳಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿರುವುದನ್ನು ಉಲ್ಲೇಖಿಸಲಾಗಿದೆ. ಕೆರೆಗಳ ಅಭಿವೃದ್ಧಿ ಮತ್ತು ಅವುಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಈ ವರದಿ ಶಿಫಾರಸು ಮಾಡಿದೆ.  ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರು ನಗರದ 68 ಕೆರೆಗಳ ಅಭಿವೃದ್ಧಿಗಾಗಿ 317 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿರುವುದಾಗಿ 7 ಅಕ್ಟೋಬರ್ 2019ರಂದು ವರದಿಯಾಗಿದೆ. 

ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಕೆಲವು ಕೆರೆಗಳನ್ನು ಸುಸ್ಥಿತಿಗೆ ಮರಳಿಸಲು ಮುಂದಾಗಿದೆ.  ಸಮಗ್ರ ಚಿತ್ರವನ್ನು ಪರಿಗಣಿಸದ ತಾತ್ಕಾಲಿಕ ಪರಿಹಾರದ ಪ್ರಯತ್ನ ಇದಾಗಿರುವುದರಿಂದ ನಿರೀಕ್ಷಿತ ಫಲ ದೊರಕುವುದೆಂಬ ಭರವಸೆಯಿಲ್ಲ. ಕೆರೆಗಳ ಅಭಿವೃದ್ಧಿ ಹಾಗು ನಿರ್ವಹಣೆಯ ವಿಷಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಭಿನ್ನಾಭಿಪ್ರಾಯಗಳು, ಒತ್ತುವರಿ ತೆರವು ಕಾರ್ಯಾಚರಣೆಯನ್ನು ವಿಳಂಬಗೊಳಿಸುತ್ತಿರುವ ಕಾನೂನಿನ ತೊಡಕುಗಳು, ಮಲಿನ ನೀರಿನ ಒಳಹರಿವನ್ನು ನಿಯಂತ್ರಿಸುವಲ್ಲಿನ ವಿಫಲತೆ, ಇತ್ಯಾದಿಗಳು ಅಭಿವೃದ್ಧಿಯ ಮಾರ್ಗದಲ್ಲಿನ ಪ್ರಮುಖ ತೊಡಕುಗಳಾಗಿವೆ.

ಅಲ್ಪವೇ ಹಣ ವ್ಯಯಿಸಿ ಅಲ್ಪಾವಧಿಯಲ್ಲಿ ಕ್ಯಾಲಸನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಿದ ಯಶೋಗಾಥೆಯಿಂದ ಪ್ರೇರಿತರಾದ ಆನಂದ್ ಮಲ್ಲಿಗವಾಡರು 2025ರ ವೇಳೆಗೆ 45 ಕೆರೆಗಳನ್ನು ನವೀಕರಣಗೊಳಿಸುವ ಗುರಿ ಹೊಂದಿದ್ದಾರೆ. ಅನೇಕ ಸಂಘಸಂಸ್ಥೆಗಳು ಹಾಗು ನಾಗರಿಕ ಸಂಘಗಳು ಸಹ ನೀರಿನ ಆಕರಗಳ ರಕ್ಷಣೆಗೆ ಮುಂದಾಗಿರುವುದು ಸಮಾಧಾನಕರ ಸಂಗತಿಯಾಗಿದೆ.  ಹಲವಾರು ಉದ್ದಿಮೆದಾರರು ಕೂಡ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಯೋಜನೆಗಳಲ್ಲಿ ಕೆರೆ ಅಭಿವೃದ್ಧಿಯನ್ನೂ ಸೇರಿಸಿಕೊಂಡಿದ್ದಾರೆ.

ಕೇಂದ್ರ ಅಂತರ್ಜಲ ಮಂಡಳಿಯ ನೈಋತ್ಯ ವಿಭಾಗದ 31 ಡಿಸೆಂಬರ್ 2019ರ ವರದಿ ಕೆಲಮಟ್ಟಿಗೆ ಆಶಾದಾಯಕವಾಗಿದೆ.  2018ಕ್ಕೆ ಹೋಲಿಸಿದರೆ 2019ರಲ್ಲಿ ಬೆಂಗಳೂರು ನಗರ ಜಿಲ್ಲೆಯ ಶೇಕಡಾ 60ರಷ್ಟು ಬಾವಿಗಳ ಅಂತರ್ಜಲ ಮಟ್ಟದಲ್ಲಿ ಗಣನೀಯ ಏರಿಕೆ ದಾಖಲಾಗಿದೆ. ದಕ್ಷಿಣ ಬೆಂಗಳೂರಿನಲ್ಲಿ ಏರಿಕೆಯ ಪ್ರಮಾಣ ಅಧಿಕವಾಗಿದೆ. ನಿಮ್ಹಾನ್ಸ್ ಮುಂತಾದ ದೊಡ್ಡ ಸಂಸ್ಥೆಗಳ ಆವರಣದಲ್ಲಿಯೂ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಈ ಹೆಚ್ಚಳಕ್ಕೆ ಮಳೆನೀರು ಕೊಯ್ಲು ಕಾರಣವೆನ್ನಲಾಗಿದೆ. ಇದಕ್ಕೆ ಅಪವಾದವೆಂಬಂತೆ ಉತ್ತರ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಗಮನಾರ್ಹವಾಗಿ ಕುಸಿದಿದೆ.  ಮಳೆನೀರು ಕೊಯ್ಲಿನ ವಿಸ್ತರಣೆಯಿಂದ ನಗರದ ಇತರ ಕಡೆಗಳಲ್ಲಿಯೂ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದಾಗಿದೆ.

ಈ ಹಿನ್ನೆಲೆಯಲ್ಲಿ, ಪರಿಸರ ಸಮತೋಲನವನ್ನು ಕಾಪಿಟ್ಟುಕೊಳ್ಳಲು ರೂಪಿಸುವ ಕಾರ್ಯಕ್ರಮ, ಯೋಜನೆಗಳ ಯಶಸ್ಸಿಗೆ ಮುಂಗಾಣಿಸಿರುವ ಕೆಲವು ಸೂತ್ರಗಳು ನೆರವಾಗಬಲ್ಲವು.

  • ಪ್ರಕೃತಿಯು ಮಾನವನ ಅಗತ್ಯಗಳನ್ನು ಪೂರೈಸಬಲ್ಲದೇ ವಿನಃ ಅಪೇಕ್ಷೆಗಳನ್ನಲ್ಲ ಎಂಬ ಅರಿವಿರಬೇಕು.
  • ನೈಸರ್ಗಿಕ ಸಂಪನ್ಮೂಲಗಳ ಮಿತವ್ಯಯ / ಮರುಬಳಕೆಗೆ ಉತ್ತೇಜನ ನೀಡಬೇಕು.
  • ಬಹು ಆಯಾಮಗಳಿಂದ ಕೂಲಂಕಷವಾಗಿ ಪರಿಶೀಲಿಸಿ ಯೋಜನೆಗಳನ್ನು ರೂಪಿಸಬೇಕು.
  • ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ವಿವರವಾದ ನೀಲನಕ್ಷೆ ತಯಾರಿಸಬೇಕು.
  • ಯೋಜನೆಗಳ ಅನುಷ್ಠಾನದಲ್ಲಿ ಎದುರಾಗಬಹುದಾದ ಅಡಚಣೆಗಳನ್ನು ಆರಂಭದಲ್ಲಿಯೇ ನಿರೀಕ್ಷಿಸಿ ಅವುಗಳ ನಿವಾರಣೆಗೆ ಮಾರ್ಗೋಪಾಯಗಳನ್ನು ಕಂಡುಕೊಂಡಿರಬೇಕು.
  • ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ವೇಗ ಮತ್ತು ವಿಸ್ತಾರಕ್ಕೆ ಒತ್ತು ನೀಡಬೇಕು.
  • ರಾಜಕೀಯ ಇಚ್ಛಾಶಕ್ತಿಯೊಡನೆ ಯೋಜನೆಗಳನ್ನು ಕ್ಷಿಪ್ರವಾಗಿ ಕಾರ್ಯರೂಪಕ್ಕೆ ತರುವ ದೃಢಸಂಕಲ್ಪವೂ ಇರಬೇಕು.
  • ಸುಸ್ಥಿರತೆ ಸಾಧಿಸುವಲ್ಲಿ ಪ್ರತಿಯೊಬ್ಬ ಪ್ರಜೆಯೂ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು.
  • ಪರಿಸರ ಸಮತೋಲನದ ತುರ್ತನ್ನು ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು.
  • ಇದಕ್ಕಾಗಿ ಶಾಲೆ, ಕಾಲೇಜು, ಕಛೇರಿ, ಸಮುದಾಯ, ಸಂಘಗಳು ಸೇರಿದಂತೆ ಲಭ್ಯವಿರುವ ಎಲ್ಲ ವೇದಿಕೆಗಳನ್ನೂ ಬಳಸಿಕೊಳ್ಳಬೇಕು.

Leave a Reply

Your email address will not be published.