ಸೂಫಿಸಮ್: ಇಸ್ಲಾಮಿನ ಎದೆಬಡಿತ

ಮೋಹನದಾಸ್

ಇಸ್ಲಾಮಿನ ಹಾಗೂ ಸೂಫಿ ತತ್ವಗಳ ಬಗ್ಗೆ ಅತ್ಯಂತ ಆದ್ರ್ರವಾಗಿ ಬರೆಯಲಾಗಿರುವ ಪುಸ್ತಕ ಇಸ್ಲಾಮ್ ಹಾಗೂ ಸೂಫಿಗಳ ಬಗ್ಗೆ ಇದುವರೆಗೆ ಬಂದಿರುವ ಅತ್ಯಂತ ಸಮಗ್ರ ವಿಶ್ಲೇಷಾತ್ಮಕ ಕೃತಿ.

ಸೂಫಿಸಮ್:

ದಿ ಹಾರ್ಟ್ ಆಫ್ ಇಸ್ಲಾಮ್

ಸಾದಿಯಾ ದೆಹಲ್ವಿ

ಪುಟಗಳು: 382 ದರ: ರೂ.650

ಮೊದಲ ಮುದ್ರಣ: 2009

ಪ್ರಕಾಶಕರು: ಹಾರ್ಪರ್ ಕಾಲಿನ್ಸ್

ನಮಗೆ ಪ್ರಿಯವಾದ ಯಾವುದಾದರೂ ವಿಷಯವೊಂದರ ಬಗ್ಗೆ ಬರೆಯುವಾಗ ಯಾವುದೇ ಭಾವಾತಿರೇಕಕ್ಕೆ ಹೋಗದೆ ಸಮಚಿತ್ತದಿಂದ ಸ್ಥಿತಪ್ರಜ್ಞರಾಗಿ ಬರೆಯಬೇಕೆಂದು ಹೇಳಲಾಗುತ್ತದೆ. ಇದರಿಂದ ವಿಷಯ ವಸ್ತುವಿನ ಬಗ್ಗೆ ನಮ್ಮ ಪೂರ್ವಗ್ರಹ ಅಥವಾ ವೈಯಕ್ತಿಕ ರಾಗದ್ವೇಷಗಳು ದೂರವುಳಿದು ನಮ್ಮ ಬರವಣಿಗೆ ವಸ್ತುನಿಷ್ಠವಾಗುವುದು ಎಂದೂ ಹೇಳಲಾಗುತ್ತದೆ. ಇದು ಸರಿ ಇರಬಹುದು. ಆದರೆ ಎಲ್ಲ ನೀತಿ ನಿಯಮಗಳಿಗೆ ಅಪವಾದ ಇರುವಂತೆ ನಿಯಮಕ್ಕೂ ಅಪವಾದ ಇದೆಯೆಂಬುದನ್ನು ಸಾದಿಯಾ ದೆಹಲ್ವಿಯವರ ಪುಸ್ತಕಸೂಫಿಸಮ್: ದಿ ಹಾರ್ಟ್ ಆಫ್ ಇಸ್ಲಾಮ್ತೋರಿದಂತೆ ಕಾಣುತ್ತದೆ. ಇಸ್ಲಾಮಿನ ಹಾಗೂ ಸೂಫಿ ತತ್ವಗಳ ಬಗ್ಗೆ ಅತ್ಯಂತ ಆದ್ರ್ರವಾಗಿ ಬರೆಯಲಾಗಿರುವ ಪುಸ್ತಕ ಇಸ್ಲಾಮ್ ಹಾಗೂ ಸೂಫಿಗಳ ಬಗ್ಗೆ ಇದುವರೆಗೆ ಬಂದಿರುವ ಅತ್ಯಂತ ಸಮಗ್ರ ವಿಶ್ಲೇಷಾತ್ಮಕ ಪುಸ್ತಕವೂ ಆಗಿದೆ.

ಸಾದಿಯಾ ಎಂದರೆ ಉರ್ದುವಿನಲ್ಲಿ ಖುಷಿ ಅಥವಾ ಅದೃಷ್ಟವಂತೆ ಎಂದಂತೆ. ಆದರೆ ಸಾದಿಯಾ ತಮ್ಮ ಜೀವನದಲ್ಲಿ ಹೆಚ್ಚೇನೂ ಸಂತೋಷ ಕಂಡಿರಲಿಲ್ಲ. ಸಾದಿಯಾರವರ ಅಜ್ಜ ದೆಹಲಿಯಲ್ಲಿಶಮಾಎಂಬ ಉರ್ದು ಪತ್ರಿಕೆಯನ್ನು ನಡೆಸಿ ಸಿರಿವಂತರಾಗಿದ್ದರಂತೆ. ನಂತರದ ದಿನಗಳಲ್ಲಿ ಸಾದಿಯಾಳ ಕುಟುಂಬ ದುಃಸ್ಥಿತಿಗೆ ಬಂದಿತ್ತು. ಅಜ್ಜ ತನಗೆ ಇಟ್ಟುಕೊಂಡಿದ್ದ ದೆಹಲ್ವಿ (ದೆಹಲಿಯವ) ಎಂಬ ಹೆಸರನ್ನು ಮನೆಮಕ್ಕಳೆಲ್ಲಾ ಉಪಯೋಗಿಸಿದ್ದರು.

ಸಾದಿಯಾಳ ಬಾಲ್ಯ ದೆಹಲಿಯ ಉತ್ತಮ ಕಾನ್ವೆಂಟ್ ಶಾಲೆಗಳಲ್ಲಿ ಆಗಿದ್ದರೂ ನಂತರದ ದಿನಗಳಲ್ಲಿ ಪಟ್ಟ ಕಷ್ಟ ಸಾದಿಯಾರವರ ಕರುಳು ಹಿಂಡಿತ್ತು. 30 ಹರೆಯದಲ್ಲಿ ಪಾಕಿಸ್ತಾನದ ರೆಜಾ ಪರ್ವೆಜ್ ಎಂಬುವವರನ್ನು ಮದುವೆಯಾಗಿ ಗಂಡುಮಗುವಿಗೂ ತಾಯಿಯಾಗಿದ್ದರು. ಮದುವೆ ಮೂರು ಬಾರಿ ಮೇಲ್ನಲ್ಲಿ ತಲಾಖ್ ಎಂಬ ಒಕ್ಕಣೆಯೊಂದಿಗೆ ಮುರಿದುಬಿದ್ದಿತ್ತು. ಒಬ್ಬಂಟಿ ಹೆಣ್ಣು ತನ್ನ ಚಿಕ್ಕಮಗನೊಂದಿಗೆ ಭಾರತಕ್ಕೆ ಮರಳಿ ಮತ್ತೆ ಜೀವನ ಕಟ್ಟಬೇಕಾಗಿತ್ತು. ಆದರೆ ಎದೆಗುಂದದ ಸಾದಿಯಾ ತನ್ನ ಜೀವನದ ಓದುಬರಹಗಳಲ್ಲಿ ತಲ್ಲೀನಳಾಗಿ ಸಾರಸ್ವತ ಲೋಕಕ್ಕೆ ತನ್ನ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ.

ದೆಹಲಿಯ ದರ್ಗಾಗಳ ಬಗ್ಗೆದಿ ಸೂಫಿ ಕೋರ್ಟ್ಯಾರ್ಡ್ಎಂಬ ಪುಸ್ತಕ ಹಾಗೂ ದೆಹಲಿಯ ನೆನಪುಗಳ ಬಗ್ಗೆಜಾಸ್ಮಿನ್ ಅಂಡ್ ಜಿನ್ಸ್ಎಂಬ ಪುಸ್ತಕವನ್ನು ಸಾದಿಯಾ ಬರೆದಿದ್ದಾರೆ. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಇಸ್ಲಾಮ್ ಹಾಗೂ ಸೂಫಿಸಂತರ ಬಗ್ಗೆ ಸಾದಿಯಾರ ಪುಸ್ತಕ ಅತ್ಯಂತ ಉಪಯುಕ್ತವೂ ಹಾಗೂ ಜನಪ್ರಿಯವೂ ಆಗಿದೆ. ಇಸ್ಲಾಮ್ ಧರ್ಮದ ಬಗ್ಗೆ ಬೇರೆ ಧರ್ಮದ ಜನರಲ್ಲಿ ಇರುವ ಅಪನಂಬಿಕೆ, ಅಪಪ್ರಚಾರ ಹಾಗೂ ಅಪವಾದಗಳನ್ನು ಮನಸ್ಸಿನಲ್ಲಿ ಗುರುತು ಮಾಡಿಕೊಂಡು ಅದಕ್ಕೆ ಉತ್ತರ ಕೊಡಲೆಂಬಂತೆ ಸಾದಿಯಾ ಪುಸ್ತಕದಲ್ಲಿ ಬರೆದಿದ್ದಾರೆ. ಸಹಜವಾಗಿ ಪುಸ್ತಕದಲ್ಲಿ ಇಸ್ಲಾಮಿನ ವಹಾಬಿ ಹಾಗೂ ಸೂಫಿ ಪರಂಪರೆಗಳ ದ್ವಂದ್ವದ ಚರ್ಚೆಯಿದೆ. ಪ್ರವಾದಿ ಮೊಹಮ್ಮದರ ಕಾಲದಿಂದ ಹಿಡಿದು 19 ನೆಯ ಶತಮಾನದ ಸೂಫಿ ಸಂತರ ಕಾಲದವರೆಗೆ ಇಸ್ಲಾಮಿನ ಭಕ್ತಿ ಪರಂಪರೆಯನ್ನು ಇಲ್ಲಿ ವಿಶದವಾಗಿ ಗುರುತಿಸಲಾಗಿದೆ.

ಇಸ್ಲಾಮಿನಲ್ಲಿ ವಹಾಬಿ ಅಥವಾ ದೇವಬಂದಿ ಎಂಬ ವೈಚಾರಿಕವಾದವಿದೆ. ಇದರಂತೆ ಸರ್ವಶಕ್ತ ಅಲ್ಲಾಹುವಿನ ಹೊರತು ಬೇರಾರೂ ಆರಾಧನೆಗೆ ಅರ್ಹರಲ್ಲ. ಎಲ್ಲ ಆರಾಧನೆ ಹಾಗೂ ಪ್ರಾರ್ಥನೆಗಳು ಅಲ್ಲಾಹುವಿಗೆ ಮಾತ್ರ ಸೀಮಿತ. ಬೇರಾವುದೇ ಸಾಧುಸಂತರ ಅಥವಾ ಮನುಷ್ಯರ ಆರಾಧನೆ ಮಾಡುವಂತಿಲ್ಲ. ಪ್ರವಾದಿ ಮೊಹಮ್ಮದರನ್ನೂ ಆರಾಧಿಸುವಂತಿಲ್ಲ. ಸಂಗೀತ ನೃತ್ಯಗಳ ಅಗತ್ಯವಿಲ್ಲ. ಏನಿದ್ದರೂ ಅಲ್ಲಾಹುವಿನ ಮುಂದೆ ಶರಣಾಗತಿ ಮಾತ್ರ. ಇದಕ್ಕೆ ವ್ಯತಿರಿಕ್ತವಾಗಿ ಸೂಫಿ ಕಂಡ ಇಸ್ಲಾಮಿನಲ್ಲಿ ಪ್ರವಾದಿ ಮೊಹಮ್ಮದರನ್ನೂ ಸಂತನೆಂದು ಕಂಡು ಆರಾಧನೆÀಗೆ ಅವಕಾಶವಿದೆ. ಸೂಫಿಸಂತರ ದರ್ಗಾಗಳಲ್ಲಿ ಸಂಗೀತದೊಂದಿಗೆ ಆರಾಧನೆಗೆ ಅವಕಾಶವಿದೆ. ಕುರುಡು ಹಿಂಬಾಲಿಕೆಯ ಬದಲು ಪ್ರಶ್ನೆ ಕೇಳಿ ಅರ್ಥ ಮಾಡಿಕೊಳ್ಳುವ ಮನಸ್ಥಿತಿಯಿದೆ. ಬೇರೆ ಧರ್ಮಗಳ ಹಾಗೂ ವಿಚಾರಧಾರೆಗಳ ಅಂಶಗಳನ್ನು ಒಳಗೊಳ್ಳುವ ಮತ್ತು ಸಮಾನವಾಗಿ ಕಾಣುವ ಔದಾರ್ಯವಿದೆ. ಇಸ್ಲಾಮ್ ಧರ್ಮವು ಮೂಲತಃ ಶಾಂತಿಯನ್ನು ಬಯಸುವ ಮತ್ತು ಶಾಂತಿ ಸಮೃದ್ಧಿ ಸಾಧಿಸಬಯಸುವ ಹಾದಿಯೆಂಬ ತಿಳಿವಳಿಕೆಯಿದೆ.

ಪುಸ್ತಕದಲ್ಲಿ ಸಾದಿಯಾ ಸೂಫಿಸಂತರ ಹಾದಿಯಲ್ಲಿ ಇಸ್ಲಾಮಿನ ಮೂಲರೂಪ ಹುಡುಕುವ ದಾರಿತೋರಿದ್ದಾರೆ. ಪ್ರವಾದಿ ಮೊಹಮ್ಮದರ ಶತಮಾನದಿಂದಲೇ ಬಂದುಹೋದ ಎಲ್ಲ ಪ್ರಮುಖ ಸೂಫಿಸಂತರ ಜೀವನ ಹಾಗೂ ಕಾಣ್ಕೆಗಳನ್ನು ಸಾದಿಯಾ ಗುರುತಿಸುತ್ತಾರೆ. ಗುರುತಿಸುವಿಕೆಯಲ್ಲಿ ಕಳೆದ ಹದಿನಾಲ್ಕು ಶತಮಾನಗಳಲ್ಲಿ ಇಸ್ಲಾಮ್ ತುಳಿದ ಹಾದಿ ಹಾಗೂ ಸಾಗಿ ಬಂದ ದಾರಿಯನ್ನೂ ಗುರುತಿಸುತ್ತಾರೆ. ಅರೇಬಿಯಾದ, ಮಧ್ಯಪ್ರಾಚ್ಯದ ಹಾಗೂ ಹಿಂದೂಸ್ತಾನದ ಎಲ್ಲ ಸೂಫಿಸಂತರನ್ನು ಸಾದಿಯಾ ನಮಗೆ ಪರಿಚಯಿಸುತ್ತಾರೆ. ಬಹಳ ಮುಖ್ಯವಾಗಿ ಅಜ್ಮೇರದ ಖ್ವಾಜಾ ಮೊಯಿನುದ್ದೀನ್ ಚಿಷ್ತಿ, ದೆಹಲಿಯ ಭಕ್ತಿಯಾರ್ ಕಾಕಿ ಹಾಗೂ ನಿಜಾಮುದ್ದೀನ್ ಔಲಿಯಾರವರ ಬಗ್ಗೆ ದೀರ್ಘ ಪರಿಚಯಾತ್ಮಕ ಲೇಖನಗಳಿವೆ.

ಸ್ವತಃ ಗರೀಬ್ ನವಾಜ್ ಖ್ವಾಜಾರಿಂದ ಆಶೀರ್ವದಿಸಲಾದೆಯೆಂದು ನಂಬಿದ ಸಾದಿಯಾ ತಮ್ಮ ಪುಸ್ತಕದುದ್ದಕ್ಕೂ ಖ್ವಾಜಾಜಿಯವರ ಬಗ್ಗೆ ಅತ್ಯಂತ ಗೌರವಪೂರ್ಣವಾಗಿ ಬರೆಯುತ್ತಾರೆ. ಭಾರತದಲ್ಲಿ ಸೂಫಿ ಪರಂಪರೆಯ ಚಿಷ್ತಿಗಳು, ಸುರ್ಹಾವರ್ದಿಗಳು, ಖಾದ್ರಿಗಳು, ನಕ್ಷ್ಬಂದಿಗಳು ಮತ್ತಿತತರ ಪಂಥಗಳ ಬಗ್ಗೆಯೂ ಸಾದಿಯಾ ಪುಸ್ತಕದಲ್ಲಿ ಬರೆಯುತ್ತಾರೆ. ಕುರಾನ್ ಹಾಗೂ ಹಡಿತ್ನಿಂದ ಆಚರಣೆಗೆ ಬಂದಿರುವ ಹಲವಾರು ಪೂಜಾ ಪರಂಪರೆಗಳ ಬಗ್ಗೆಯೂ ಬರೆಯುತ್ತಾರೆ.

ಪುಸ್ತಕ ಸಂಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಬೇಕಾದ ಮಹತ್ವ ಹೊಂದಿದೆ. ಅಧ್ಯಾಯವೊಂದರಲ್ಲಿ ಪ್ರವಾದಿ ಮೊಹಮ್ಮದರ ಜೀವನಚರಿತ್ರೆಯೊಂದನ್ನು ಸೇರಿಸಿದ್ದರೆ ಪುಸ್ತಕ ಸಮಗ್ರವಾಗಿ ಇಸ್ಲಾಮಿನ ಭಕ್ತಿ ಪರಂಪರೆಯ ಇತಿಹಾಸವನ್ನು ಕಟ್ಟಿಕೊಡಬಹುದಿತ್ತು. ಆದಾಗ್ಯೂ ಪ್ರವಾದಿಯ ನಂತರದ ದಿನಗಳ ಸೂಫಿಯಾನಕ್ಕೆ ಹೊತ್ತಿಗೆ ದಕ್ಷ ಸಾಕ್ಷಿಯಾಗಿದೆ. ಸೂಫಿ ಸಂತರ ಹಾದಿಯಲ್ಲಿ ಇಸ್ಲಾಮಿನ ಮುಕ್ತ ಹಾಗೂ ಸ್ವತಂತ್ರ ಚಿಂತನೆಯನ್ನು ಸಾದಿಯಾ ದಾಖಲಿಸುತ್ತಾರೆ.

ಸೂಫಿ ಪರಂಪರೆ ಇಸ್ಲಾಮಿನ ಜೀವಾಳ ಹಾಗೂ ಎದೆಬಡಿತ. ಇದು ನಿಂತರೆ ಇಸ್ಲಾಮ್ ಬರಡು ಹಾಗೂ ಕುರುಡು ಪದ್ಧತಿಯಾಗುವ ಸಾಧ್ಯತೆಯಿದೆ. ಹಿನ್ನೆಲೆಯಲ್ಲಿ ಸೂಫಿಯಾನದ ಮುಂದಿನ ಹೆಜ್ಜೆಗಳು ಹೇಗೆ ಇಸ್ಲಾಮ್ ಆಧುನಿಕ ಜಗತ್ತಿನೊಂದಿಗೆ ಸಂವಾದ ಮತ್ತು ಸಂಬಂಧ ಬೆಳೆಸಿಕೊಳ್ಳುತ್ತದೆ ಎಂದು ನಿರ್ಧರಿಸುತ್ತವೆ. ಆದರೆ ಪಯಣದಲ್ಲಿ ಸಾದಿಯಾ ನಮ್ಮೊಂದಿಗೆ ಇರಲಾರರು. ತಮ್ಮ 63 ನೆಯ ವಯಸ್ಸಿನಲ್ಲಿ 2020 ಆಗಸ್ಟ್ನಲ್ಲ್ಲಿ ಕ್ಯಾನ್ಸರಿನಿಂದ ಮೃತಪಟ್ಟ ಸಾದಿಯಾರವರ ಪರವಾಗಿ ಪುಸ್ತಕ ನಮ್ಮೊಂದಿಗೆ ಇರಲಿದೆ.

Leave a Reply

Your email address will not be published.