ಸೂರ್ಯ ಚಂದ್ರ ಇರೋತನಕ ಜಾತಿ!

-ರಮಾನಂದ ಶರ್ಮಾ

ಜಾತಿ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವು ಒಟ್ಟಿಗೇ ಇರುತ್ತವೆ.

 

ಯಾರು ಏನೇ ಹೇಳಿದರೂ ನಮ್ಮ ಸಮಾಜದ ಅಸ್ತಿತ್ವ ಇರುವುದೇ `ನಾವು ಮತ್ತು ನಮ್ಮವರು’ ಎನ್ನುವ ಲಾಗಾಯ್ತನಿಂದ ಅಳವಡಿಸಿ ಪೋಷಿಸಿಕೊಂಡು ಬಂದಿರುವ ಸಿದ್ಧಾಂತದ ಮೇಲೆ. ಈ ಸಿದ್ಧಾಂತದಲ್ಲಿ ಕುಟುಂಬ ರಾಜಕಾರಣದ ನಂತರ ಅನಾವರಣಗೊಳ್ಳುವುದೇ ‘ಜಾತಿ ರಾಜಕಾರಣ’. ಜಾತ್ಯತೀತತೆ ಎನ್ನುವುದು ವೇದಿಕೆಗೆ, ಚರ್ಚಾ ಗೋಷ್ಟಿಗೆ ಮತ್ತು ಸೆಮಿನಾರಿಗೆ ಸೀಮಿತವಾದ ನಿಲುವು ಎನ್ನುವುದನ್ನು ಪ್ರಜ್ಞಾವಂತರೇಕೆ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಎಬಿಸಿಡಿ ತಿಳಿಯದವರೂ ತಿಳಿದಿದ್ದಾರೆ. ಇದು ಕಾಯಾ ವಾಚಾ ಮನಸಾ ಅನುಷ್ಟಾನ ಎಂದೂ ಆಗಿಲ್ಲ; ಸದ್ಭವಿಷ್ಯದಲ್ಲಿ ಆಗುವ ಸಾಧ್ಯತೆಯೂ ಇಲ್ಲ.

ಜಾತಿಯನ್ನು ಯಾರೂ ಅರ್ಜಿ ಹಾಕಿ ಪಡೆಯುವುದಿಲ್ಲ. ಇದು ಆನುವಂಶಿಕವಾಗಿ ಅಥವಾ ಪೀಳಿಗೆಯಿಂದ ಪೀಳಿಗೆಗೆ ಬಳುವಳಿಯಾಗಿ ಬರುವುದು. ಜಾತಿಯನ್ನು ಬಿಡುತ್ತೇನೆ ಎಂದರೂ ಅದು ಅಷ್ಟು ಸುಲಭವಲ್ಲ. ಜಾತಿ ಪದ್ಧತಿಯನ್ನು ತೊಲಗಿಸಲು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲಾಗುತ್ತಿದ್ದರೂ, ಕಾಲಘಟ್ಟದಲ್ಲಿ ಅದು ತನ್ನ ಉದ್ದೇಶವನ್ನು ಮರೆತು ಎರಡರಲ್ಲಿ ಒಂದು ಜಾತಿಗೆ ಸೇರ್ಪಡೆಯಾಗಿ ಅಂತಿಮವಾಗಿ ಜಾತಿ ನಿರ್ಮೂಲನವಾಗುವ ಬದಲು ಬಹುತೇಕ ಹುಡುಗನ ಜಾತಿ ದೊಡ್ಡದಾಗುವ ಪ್ರಮೇಯಗಳೇ ಜಾಸ್ತಿ.

‘ತಮ್ಮ ಜಾತಿ’ ಎನ್ನುವುದು ಒಂದು ದೌರ್ಬಲ್ಯ. ಅದು ಕಣಕಣದಲ್ಲೂ ಇರುತ್ತಿದ್ದು, ರಾಜಕಾರಣಿಗಳ ವೋಟ್‍ಬ್ಯಾಂಕ್ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ‘ಎಲ್ಲವೂ ಸರಿ, ಅದರೂ ನಮ್ಮವರನ್ನು ಬಿಡಲಿಕ್ಕಾಗುತ್ತಾ’ ಎನ್ನುವ ಮತದಾರರ ಮನೋಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುವ ರಾಜಕಾರಣಿಗಳು ವೇದಿಕೆಯ ಮೇಲೆ, ಚರ್ಚೆಯಲ್ಲಿ ಜಾತ್ಯತೀತತೆಯನ್ನು ಕೊಂಡಾಡಿದರೂ, ಅದನ್ನು ಖಾಯಂ ಆಗಿ ಉಳಿಸಿಕೊಳ್ಳಲು ತೆರೆಮರೆಯಲ್ಲಿ ತಂತ್ರ ಹೆಣೆಯುತ್ತಾರೆ. ಅಂತೆಯೇ ತಮ್ಮ ಜಾತಿಯನ್ನು ಸದಾ ಸಂತುಷ್ಟರಾಗಿಡಲು, ಮೀಸಲಾತಿ, ಹೆಚ್ಚಿನ ಮೀಸಲಾತಿ, ವರ್ಗ-ಪ್ರವರ್ಗ, ನಿಗಮ-ಮಂಡಳಿಗಳಿಗೆ ಹಕ್ಕೊತ್ತಾಯ ಮಾಡುತ್ತಾರೆ. ಇತ್ತೀಚೆಗೆ ದೇಶಾದ್ಯಂತ ನಡೆಯುತ್ತಿರುವ “ಹಿಂದುಳಿಯಲು ಮುನ್ನುಗ್ಗುವ” ಹೋರಾಟದ ಹಿಂದಿನ ಪ್ರೇರಕತೆಯ ಕಥೆ ಇದು. ಈ ನಿಟ್ಟಿನಲ್ಲಿ ಸಾಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಳ್ಳಬೇಕಾದ ಕೆಲವು ಮಠಾಧೀಶರು ಜಾತೀಯತೆಗೆ ನೀರು-ಗೊಬ್ಬರ ಹಾಕಿ ಪೋಷಿಸುತ್ತಿದ್ದಾರೆ. ಮೀಸಲಾತಿ, ಹೆಚ್ಚಿನ ಮೀಸಲಾತಿಗಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಮಠಾಧೀಶ್ವರರ ಅಸ್ತಿತ್ವಕ್ಕೂ ಜಾತಿಯೇ ಮುಖ್ಯ ಎನ್ನುವುದು ತಿಳಿದ ವಿಷಯವೇ.

ರಾಜಕಾರಣಿಗಳು ತಮ್ಮ ಜಾತಿಯವರನ್ನು ಮೇಲ್ಮೆಗೆ ತರುವುದರೊಂದಿಗೆ ಆಡಳಿತದಲ್ಲಿ ತಮ್ಮ ಜಾತಿಯ ಪ್ರಭಾವ ಉಳಿಸಿಕೊಳ್ಳಲು, ಬೆಳೆಸಲು ಆಯಕಟ್ಟಿನ ಸ್ಥಳದಲ್ಲಿ ತಮ್ಮ ಜಾತಿಯವರನ್ನು ಕೂರಿಸಲು ತಂತ್ರಗಾರಿಕೆ ನಡೆಸುತ್ತಾರೆ. ಮಠಾಧೀಶರು ಮತ್ತು ಆಧ್ಯಾತ್ಮಿಕ ವ್ಯಕ್ತಿಗಳು ಪರೋಕ್ಷವಾಗಿ   ಆಡಳಿತವನ್ನು ನಿಯಂತ್ರಿಸುತ್ತಾರೆ. ಜಾತಿಬಾಂಧವರ ನಿಷ್ಠೆ, ನಂಬಿಕೆ ಮತ್ತು ಭಕ್ತಿ ಉಪಯೋಗಿಸಿಕೊಂಡು ರಾಜಕಾರಣಿಗಳು ತಮ್ಮ ವೈಯಕ್ತಿಕ ಲಾಭ ಗಳಿಸುವುದು ಈ ದೇಶದಲ್ಲಿ   ಲಾಗಾಯ್ತನಿಂದ ನಡೆದುಕೊಂಡುಬಂದ ವ್ಯವಸ್ಥೆ.

ವಿಚಿತ್ರವೆಂದರೆ ಈ ವ್ಯವಸ್ಥೆಯನ್ನು ಪ್ರತಿಯೊಬ್ಬರೂ ಟೀಕಿಸುತ್ತಾರೆ ಮತ್ತು ವಿರೋಧಿಸುತ್ತಾರೆ. ಹಾಗೆಯೇ ಕೊನೆಯ ಗಳಿಗೆಯಲ್ಲಿ, `ಏನೇ ಆಗಲಿ…ಅವರು ನಮ್ಮವರಲ್ಲವೇ?’ ಎಂದು ಈವರೆಗೆ ವಿರೋಧಿಸುತ್ತಿರುವ ವ್ಯವಸ್ಥೆಗೆ ಕಣ್ಣು-ಕಿವಿ-ಮೂಗುಗಳನ್ನು ಮುಚ್ಚಿಕೊಂಡು ಚಂದಾದಾರರಾಗುತ್ತಾರೆ.

ಜಾತಿ ಪ್ರಭಾವ ನಮ್ಮ ರಾಜಕೀಯ ವ್ಯವಸ್ಥೆಯನ್ನು ಕೆಡಿಸುತ್ತಿರುವುದು ಹೊಸ ಬೆಳವಣಿಗೆಯಲ್ಲ. ಇದು ಅವ್ಯಾಹತವಾಗಿ ನಡೆಯುತ್ತಿರುವ ಪ್ರಕ್ರಿಯೆ. ಇದರ ಪರಿಣಾಮವಾಗಿ ಮೆರಿಟ್ ನೇಪಥ್ಯಕ್ಕೆ ಸರಿದು mediocre ಗಳು ಮೆರೆಯುತ್ತಿರುವುದನ್ನು ಜನತೆ ಮೌನವಾಗಿ ದಿನವೂ ನೋಡುತ್ತಿದೆ. ಒಂದು ಹುದ್ದೆಗೆ, ಅದು ರಾಜಕೀಯದಲ್ಲಿ ಇರಬಹುದು ಅಥವಾ ಆಡಳಿತದಲ್ಲಿ ಇರಬಹುದು ಇಬ್ಬರು ಪೈಪೋಟಿ ನಡೆಸಿದರೆ, ಅಂತಿಮವಾಗಿ ‘ಜಾತಿ’ಯೇ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಇದು ರಾಜಕಾರಣ ಮತ್ತು ಅಡಳಿತವನ್ನು ಕುಲಗೆಡಿಸುತ್ತಿರುವುದು ಸತ್ಯವಾದರೂ, ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ    ಪ್ರಾಮಾಣಿಕತೆ ನಮ್ಮಲ್ಲಿ ಕಾಣುವುದಿಲ್ಲ.  ಇದನ್ನು ಎತ್ತಿ ಹೇಳಿದವನನ್ನು ಮನುವಾದಿಯೆಂದೋ ಅಥವಾ ಸಾಮಾಜಿಕ ನ್ಯಾಯದ ವಿರೋಧಿಯೆಂದೋ ಜರಿಯುವುದು ತೀರಾ ಸಾಮಾನ್ಯ.

ರಾಜಕಾರಿಣಿಗಳು ತಮ್ಮ ಜಾತಿಯ ಪ್ರಭಾವವನ್ನು ಹೆಚ್ಚಿಸುವ ಧಾವಂತದಲ್ಲಿ, ಜಾತಿ ವ್ಯವಸ್ಥೆಗೆ ಪೂರ್ಣವಿರಾಮ ಹಾಕುವ ಬದಲಿಗೆ, ಸಮಾಜದಲ್ಲಿ ಜಾತಿ ವಿಂಗಡನೆಗೆ ಪರೋಕ್ಷವಾಗಿ ನೀರೆರೆಯುತ್ತಿದ್ದಾರೆ. ಒಬ್ಬ ರಾಜಕಾರಣಿ ತನ್ನ ಜಾತಿಯನ್ನು ಓಲೈಸಿದರೆ, ಇನ್ನೊಬ್ಬ ಕೂಡಾ ಮನಸ್ಸಿಲ್ಲದಿದ್ದರೂ ಈ ಪ್ರಕ್ರಿಯೆಗೆ ಕೈ ಹಾಕುತ್ತಾನೆ. ಇದು ಸಹಜ ಪ್ರತಿಕ್ರಿಯೆಯಾಗಿ ವ್ಯಾಪಕವಾಗಿ ಪಸರಿಸುತ್ತದೆ. ಇದು ಅಂತ್ಯವಿಲ್ಲದೇ ಮುಂದುವರೆಯುತ್ತದೆ ಕೂಡಾ.

ವಿಚಿತ್ರವೆಂದರೆ ಜಾತಿ ನಿರ್ಮೂಲನೆ ಮಾಡಬೇಕು ಎನ್ನುವ ಸರ್ಕಾರದ ಪ್ರತಿಯೊಂದು ವ್ಯವಹಾರವೂ ‘ಜಾತಿ’ ಇಲ್ಲದೆ ನಡೆಯುವದಿಲ್ಲ. ನಮೂನೆಗಳಲ್ಲಿ `ಜಾತಿ’ ಗುರುತಿಸುವ ಕಾಲಮ್ ಇರುವತನಕ ಇದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಹಾಗೆಯೇ ಜಾತಿ ಹೆಸರಿನಲ್ಲಿ ಮೀಸಲಾತಿ ಇರುವವರೆಗೆ `ಜಾತಿ’ ಹೋಗದು. ಮೀಸಲಾತಿ ಸೌಲಭ್ಯ ಪಡೆಯಲು ಎಲ್ಲರೂ ಜಾತಿಯನ್ನು ಉಳಿಸಿಕೊಳ್ಳುತ್ತಾರೆ. ಜಾತಿ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವು ಒಟ್ಟಿಗೇ ಇರುತ್ತವೆ.

 

ಬೆಂಗಳೂರಿನಲ್ಲಿ

ಜನಪದ ಕಲೆಗಳನ್ನು ಕುರಿತ

ಸಮಾಜಮುಖಿಕಾರ್ಯಕ್ರಮ

ಫೆಬ್ರವರಿ 20ರ ಸಂಜೆ 6 ರಿಂದ 7 ಘಂಟೆಯವರೆಗೆ ದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್ ನ್ಯಾಶನಲ್ ಸೆಂಟರಿನಲ್ಲಿ ‘ಕರ್ನಾಟಕದಲ್ಲಿ ಜನಪದ ಕಲೆಗಳ ವರ್ತಮಾನ ಮತ್ತು ಭವಿಷ್ಯ’ ಎಂಬ ವಿಚಾರ ಗೋಷ್ಠಿಯನ್ನು ‘ಸಮಾಜಮುಖಿ ಪ್ರಕಾಶನ’ ಏರ್ಪಡಿಸಿತ್ತು. ಶ್ರೀನಿವಾಸ ಕಪ್ಪಣ್ಣ, ಶಶಿಧರ ಭಾರಿಘಾಟ್ ಮತ್ತು ಜಯಲಕ್ಷ್ಮಿ ಸೀತಾಪುರ ಪಾಲ್ಗೊಂಡಿದ್ದರು. ಜಯರಾಮ್ ರಾಯಪುರ ಗೋಷ್ಠಿಯ ನಿರೂಪಣೆ ಮಾಡಿದರು. ಕಾರ್ಯಕ್ರಮ ವೀಕ್ಷಿಸಲು ಪಕ್ಕದಲ್ಲಿನÀ ಕೋಡ್ ಸ್ಕ್ಯಾನ್ ಮಾಡಿ:

 ಜಾತ್ಯತೀತ

ಡಾ.ಬಿ.ವಿ.ವಸಂತಕುಮಾರ್ ಅವರ `ನಕಲಿ ಜಾತ್ಯಾತೀತರು, ಜಾತೀಯತೆಯ ಉತ್ಪಾದಕರು’ ಲೇಖನ ಅರ್ಥಪೂರ್ಣವಾಗಿದೆ. `ಜಾತ್ಯಾತೀತ’ ಅಲ್ಲ; ಅದು `ಜಾತ್ಯತೀತ’ ಎಂದಾಗಬೇಕು. ಇದು ವಿನಯಪೂರ್ವಕ ಸೂಚನೆ.

-ಟಿ.ಆರ್.ಅನಂತರಾಮು, ಬೆಂಗಳೂರು.

 

`ಬಲಿ’ಯಾಗಿರುವುದು ನಿಜವೆ?

ಯಥಾಸ್ಥಿತಿಗೆ ಬುದ್ಧನ `ಚರಣ’ ಸೇರಿಸಿದ್ದರೆ, ಹಿನ್ನಡೆಯಾಗಿದ್ದರೆ, ನಿಮ್ಮ ಆಕ್ರೋಶ ಸಕಾರಣವಾಗಿದೆ. ಕಾವ್ಯವನ್ನು ತಾತ್ವಿಕವಾಗಿ ಪರಿಶೀಲಿಸಿರುವುದು ಕಂಡುಬರುತ್ತದೆ; ತಾಂತ್ರಿಕವಾಗಿ ನೋಡುವುದನ್ನು ನಿರಾಕರಿಸಲಾಗಿದೆ. ಕೃತಿಯನ್ನು ನಾನು ಓದಿಲ್ಲ. ಆದರೆ, ರಾಮಕೃಷ್ಣ ಇತ್ಯಾದಿ ಪದ್ಯಗಳು ಪುರಾಣದ ವಸ್ತುವನ್ನು ಕೌಟುಂಬಿಕ ನೆಲೆಯಲ್ಲಿ ಸಮಕಾಲೀನಗೊಳಿಸಿರುವುದು ಸಾಧ್ಯವಾಗಿದ್ದಾಗ, “ಬುದ್ಧಚರಣ” ವನ್ನು ಯಾಕಾಗಿ ಸಮಕಾಲೀನತೆಗೆ ಕವಿ ಬೆಸೆಯಲು ಹಿಂದೇಟು ಹಾಕಿದ್ದಾನೆ. ಕೇವಲ ಒಂದು ವರ್ಗದ ಹಿತಾಸಕ್ತಿಗೆ `ಬಲಿ’ ಯಾಗಿರುವುದು ನಿಜವೆ? ಹಾಗಿದ್ದರೆ ಎಚ್‍ಎಸ್ವಿ ಬುದ್ಧನ ಕಥಾವಸ್ತು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಮೂಲಭೂತ ಪ್ರಶ್ನೆಯಾಗಿರುವುದು ನಿಮ್ಮ ಕೇಳಿಕೆಯಲ್ಲಿದೆ ಎನಿಸುತ್ತದೆ. 

-ದೊಡ್ಡಿ ಶೇಖರ್, ಮದ್ದೂರು.

 

ಧರ್ಮಮುಕ್ತ ರಾಜಕೀಯ

ಫೆಬ್ರವರಿ 2021ರ ‘ಸಮಾಜಮುಖಿ’ ಸಂಚಿಕೆಯಲ್ಲಿಯ ಮುಖಪುಟ ‘ಧರ್ಮ’ ಮತ್ತು ‘ರಾಜಕಿಯ’ದ ಕುರಿತು ಯೋಚಿಸುವಂತೆ ಮಾಡುತ್ತದೆ. ಆ ಮುಖಪುಟದಲ್ಲಿ ಒಂದು ಜಾತಿಗೆ ಸೀಮಿತವಾದ ಮಠದ ಸ್ವಾಮೀಜಿ ಕುಳಿತಿರುವುದು ಮತ್ತು ಒಂದು ರಾಜ್ಯದ ಮುಖ್ಯಮಂತ್ರಿ ನಿಂತಿರುವುದು, ಧರ್ಮ ಮತ್ತು ರಾಜಕೀಯದ ಸ್ಥಾನವನ್ನು ನಿರ್ದೇಶಿಸುವಂತಿದೆ. ಒಂದು ಮಠದ ಸ್ವಾಮೀಜಿ, ಸಂಬಂಧಿಸಿದ ಜಾತಿಯ ಭಕ್ತರಿಗೆ ಪೂಜ್ಯ. ಆದರೆ ಒಬ್ಬ ಮುಖ್ಯಮಂತ್ರಿ ಇಡೀ ಕರ್ನಾಟಕದ ಜನರ ಗೌರವಾನ್ವಿತ ವ್ಯಕ್ತಿ.

‘ರಾಜಕೀಯದಲ್ಲಿ ಧರ್ಮದ ಪ್ರಭಾವ ಇರಬಾರದೆಂದು ಬಹುತೇಕರು ಬಯಸುತ್ತಾರೆ. ಆದರೆ ಜಗತ್ತಿನ ಬಹುತೇಕ ದೇಶಗಳಲ್ಲಿ ಅನಾದಿಕಾಲದಿಂದಲೂ, ಯಾವುದೇ ರಾಜಪದ್ಧತಿ ಇದ್ದರೂ, ಧರ್ಮವನ್ನು ರಾಜಕೀಯದಿಂದ ದೂರವಿಟ್ಟಿದ್ದು ಅತಿ ವಿರಳ. ಆಯಾ ಕಾಲದ ರಾಜರು ‘ರಾಜಧರ್ಮ’ವೆಂದು ಸ್ವೀಕರಿಸಿದ ನಂತರವೇ ಕ್ರಿಶ್ಚಿಯನ್, ಇಸ್ಲಾಂ, ಬೌದ್ಧ, ಫಾರಸಿ, ಸಿಖ್ ಹಾಗೂ ಲಿಂಗಾಯತ ಧರ್ಮಗಳು ಬೆಳೆದವು. ಹಿಂದೂ ಸಾಮಾಜಿಕ ವ್ಯವಸ್ಥೆಯ ವರ್ಣಾಶ್ರಮ ಪದ್ಧತಿಯಲ್ಲಿ ಧರ್ಮವನ್ನು ಕಾಪಾಡಿ ಬೆಳೆಸುವುದು ರಾಜನ ಆದ್ಯ ಕರ್ತವ್ಯವಾಗಿತ್ತು.’ ಹೀಗೆ ರಾಜಪ್ರಭುತ್ವ ಆಡಳಿತವಿದ್ದ ಕಾಲದಲ್ಲಿ ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸುವುದು ಕಷ್ಟಸಾಧ್ಯವಾಗಿತ್ತು.

ಆದರೆ ಜಾತ್ಯತೀತ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನಾತ್ಮಕವಾಗಿ ರಚನೆಯಾದ ಸರ್ಕಾರದ ಪರಮೋಚ್ಚ ನಾಯಕ ಹಿಂದಿನ ರಾಜರ ಆಡಳಿತದಲ್ಲಿ ನಡೆದುಕೊಂಡು ಬಂದಿದ್ದ ಪದ್ಧತಿಯಂತೆ ನಡೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡುತ್ತದೆ.

‘ಧರ್ಮ ವ್ಯಕ್ತಿಯ ವೈಯಕ್ತಿಕ ಸಂಗತಿಯಾಗಿದ್ದು ಅದಕ್ಕೆ ರಾಜಕೀಯದಲ್ಲಿ ಸ್ಥಾನವಿಲ್ಲ’ ಎಂದು ಗಾಂಧಿ ಹೇಳಿದ್ದಲ್ಲದೆ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಬಳಸಲಿಲ್ಲ.

ಸಿರಿಯಾ ದೇಶದ ಶ್ರೇಷ್ಠ ಕವಿ ಅಡೋನಿಸ್ ಅವರು ಸಂದರ್ಶನವೊಂದರಲ್ಲಿ, ಅವರದೇ ದೇಶದಲ್ಲಿನ ಹಿಂಸಾತ್ಮಕ ಸಂಘರ್ಷದ ಬಗ್ಗೆ ಕೇಳಿದ ಪ್ರಶ್ನೆಗೆ, ಧರ್ಮ ಮತ್ತು ಸರ್ಕಾರ ಪ್ರತ್ಯೇಕಗೊಳ್ಳದೇ ಹೋದರೆ ಯಾವ ಬದಲಾವಣೆಯೂ ಸಾಧ್ಯವಿಲ್ಲ’ ಎಂದು ಉತ್ತರಿಸುತ್ತಾರೆ.

‘ಇಂದಿನ ಕೆಲವು ಮಠಗಳು ವಿರಕ್ತಿ ಮತ್ತು ಸಂನ್ಯಾಸದ ಸಂಕೇತವಾದರೂ ಹೆಚ್ಚಿನವು ಅಧ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತಿಲ್ಲ. ಸಂನ್ಯಾಸಿಗಳು ಶಕ್ತಿ ರಾಜಕಾರಣದ ಭಾಗವಾಗಿ, ಪ್ರಭುತ್ವವನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ಜನಪರ ಸೇವೆಯಲ್ಲಿ, ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಬೇಕಾದ ಸ್ವಾಮಿಗಳು ಮತೀಯತೆಯನ್ನು ಪೋಷಿಸುವ ಕೆಲಸ ಮಡುತ್ತಿದ್ದಾರೆ.’ ಈಗ ನಡೆಯುತ್ತಿರುವ ಮೀಸಲಾತಿಪರ ಹೋರಾಟಗಳೇ ಇದಕ್ಕೆ ಸ್ಪಷ್ಟ ನಿದರ್ಶನ.

-ಸಿ.ಚಿಕ್ಕತಿಮ್ಮಯ್ಯ. ಹಂದನಕೆರೆ.

Leave a Reply

Your email address will not be published.