ಸೇವೆಯ ಸೋಗು ಸುಲಿಗೆಯ ಕಳಂಕ

ವೈದ್ಯಕೀಯ ಕ್ಷೇತ್ರವನ್ನು ಸೇವೆಯ ವ್ಯಾಪ್ತಿಗೆ ಅಥವಾ ಸುಲಿಗೆಯ ಸುಪರ್ದಿಗೆ ಏಕಾಏಕಿ ಬಿಟ್ಟುಕೊಡಲು ಬರುವುದಿಲ್ಲ. ಇದು ನೂರಾರು ಹೆಣಿಗೆಗಳು ಇರುವ ಬಲೆಯೊಳಗೆ ಸಿಲುಕಿದ ಹುಳುವಿನ ಸ್ಥಿತಿಯಂತಿದೆ.

ಯಾವುದೇ ಒಂದು ದೇಶದ ಪ್ರಗತಿಗೆ ಬಹು ಮುಖ್ಯ ಎನಿಸಿದ ಮಾನವ ಸಂಪನ್ಮೂಲವನ್ನು ಆರೋಗ್ಯವಂತ ಸ್ಥಿತಿಯಲ್ಲಿ ಇಡಲು ವೈದ್ಯಕೀಯ ಕ್ಷೇತ್ರದ ಕಾಣಿಕೆ ಬಹುದೊಡ್ಡದು. ಆದರೀಗ ಅದನ್ನು ಸೇವೆಯೋ ಸುಲಿಗೆಯೋ ಎನ್ನುವ ಶೀರ್ಷಿಕೆಯಡಿ ಚರ್ಚಿಸಬೇಕಾದ ಸ್ಥಿತಿಯೇ ವಿಷಾದಕರ ಸಂಗತಿ. ಮೂರು ದಶಕಗಳ ಹಿಂದೆ ವೈದ್ಯಕೀಯ ಕ್ಷೇತ್ರ ಅಕ್ಷರಶಃ ಸೇವೆ ಎಂಬುದನ್ನೇ ಧರ್ಮವನ್ನಾಗಿ ಪರಿಪಾಲಿಸಿದ ಅಂಗಳವಾಗಿತ್ತು. ಹಾಗೆ ಈ ಕ್ಷೇತ್ರ ವರ್ತಿಸಲು ಪ್ರೇರೇಪಿಸಿದ ಅಂಶಗಳು:

  • ಸರಕಾರಿ ಕಾಲೇಜುಗಳಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿದ್ದ ವೈದ್ಯರು.
  • ಕಾಯಿಲೆಯ ಗಂಭೀರತೆಯನ್ನು ಅರಿತು ಕಾಯಿಲೆಗೆ ಚಿಕಿತ್ಸೆ ನೀಡಲು ಕ್ಲಿನಿಕಲ್ ತಪಾಸಣೆಯ ಮೇಲೆಯೇ ಹೆಚ್ಚು ಅವಲಂಬಿತವಾಗಿ ತ್ತು. ಬಳಸುವ ಔಷಧಿಗಳ ಸಂಖ್ಯೆಯೂ ಕಡಿಮೆಯಿತ್ತು.
  • ಕ್ಲಿನಿಕ್ ಆಗಲಿ ದೊಡ್ಡ ಆಸ್ಪತ್ರೆಯೇ ಆಗಿರಲಿ ಅದರ ಮೇಲಿನ ಹೂಡಿಕೆಯ ಪ್ರಮಾಣ ಕಡಿಮೆಯಿತ್ತು. ಕೋರ್ಟ್, ಕಚೇರಿ, ಲೈಸೆನ್ಸ್,  ಇನ್ಸುರೆನ್ಸ್‍ಗಳ ವೆಚ್ಚವೂ ಅತ್ಯಲ್ಪವಾಗಿತ್ತು. ಕುಟುಂಬ ವೈದ್ಯನೆಂಬುವವನು ಇಡೀ ಕುಟುಂಬದ ಆರೋಗ್ಯವನ್ನು ಪ್ರಾಥಮಿಕ ಹಂತದಲ್ಲಿ ನೋಡಿಕೊಳ್ಳುತ್ತಿದ್ದನು.

ಖಾಸಗಿಯವರ ಸೇವೆ!

ಜಾಗತೀಕರಣದ ಕೂಸುಗಳಲ್ಲಿ ಎಫ್.ಡಿ.ಐ ಕೂಡ ಒಂದು. 2001ರಲ್ಲಿ ಖಾಸಗಿ ಆಸ್ಪತ್ರೆಗಳ ಮೇಲೆ 31 ಕೋಟಿ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿತ್ತು. ಅದು 2013-14ರ ಹೊತ್ತಿಗೆ 3995 ಕೋಟಿ ಆಯಿತು. 2018-19ನೇ ಸಾಲಿಗೆ ಅದರ ಪ್ರಮಾಣ ಹತ್ತು ಸಾವಿರ ಕೋಟಿ ದಾಟಿದೆ. ಖಾಸಗಿ ಆಸ್ಪತ್ರೆಗಳ ಮೇಲಿನ ಹೂಡಿಕೆಯ ಪ್ರಮಾಣ 2017ರಲ್ಲಿ ನಾಲ್ಕು ಟ್ರಿಲಿಯನ್ ಇದ್ದದ್ದು 2022ಕ್ಕೆ ಎಂಟು 8.6 ಟ್ರಿಲಿಯನ್ ಆಗುವ ಸಂಭವವಿದೆ. 2020ಕ್ಕೆ ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿನ ಹೂಡಿಕೆ 280ಮಿಲಿಯನ್ ಯುಎಸ್ ಡಾಲರ್ ಆಗುವ ನಿರೀಕ್ಷೆಯಿದೆ. ಇದರಿಂದಾಗಿ ಸೆಕೆಂಡರಿ ಮತ್ತು ಟರ್ಷಿಯರಿಕೇರ್‍ಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ಸಿಗುತ್ತಿರುವ ನೈಜ ಸಂಗತಿಯನ್ನು ಒಪ್ಪಿಕೊಳ್ಳಲೇಬೇಕು. ಆದರೆ ಈ ಕ್ಷೇತ್ರಕ್ಕೆ ಇಷ್ಟೊಂದು ವಿದೇಶಿ ಬಂಡವಾಳ ಹರಿದು ಬರುತ್ತಿರುವಾಗ ನಾವು ಸೇವೆಯನ್ನು ನಿರೀಕ್ಷಿಸುವುದು ಸಾಧ್ಯವೇ?

ಜಾಗತೀಕರಣದ ನಂತರ ವಿಶ್ವವ್ಯಾಪಿಯಾಗಿ ಬಹುತೇಕ ಕ್ಷೇತ್ರಗಳಲ್ಲಿ ಸಂಚಲನಾತ್ಮಕ ಬದಲಾವಣೆಗಳು ಆದವು. ಕೇವಲ ರೋಗಿ, ವೈದ್ಯರು, ಸರಕಾರ ಈ ಮೂವರು ಸಹಸಂಬಂಧದೊಂದಿಗೆ ಸಾಗುತ್ತಿದ್ದ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಾರೋ ಬಂಡವಾಳಿಗರು ಪ್ರವೇಶಿಸಿದರು. ಇವರ ಲಾಭದಾಸೆಗೆ ಎಲ್ಲರೂ ಬಲಿಯಾಗುವಂತಾಯಿತು. ಸುಲಿಗೆ ಹಣೆಪಟ್ಟಿಗೆ ಕಾರಣವಾದ ಕೆಲ ಅಂಶಗಳು:

  • ಆಸ್ಪತ್ರೆಯ ಆರಂಭ, ನಿರ್ವಹಣೆ ಮತ್ತು ಮಾನವ ಸಂಪನ್ಮೂಲದ ಮೇಲಿನ ಮಿತಿಮೀರಿದ ಹೂಡಿಕೆ; ಅಸಂಖ್ಯ ಔಷಧಿಗಳು ಮತ್ತು ಕಂಪನಿಗಳು, ಬದಲಾಗುತ್ತಿರುವ ಕಾಯಿಲೆಗಳ ಸ್ವರೂಪಗಳು, ಲ್ಯಾಬ್ ಮತ್ತು ವೈದ್ಯಕೀಯ ಉಪಕರಣಗಳ ಮೇಲೆಯೇ ಅತಿ ಹೆಚ್ಚು ಅವಲಂಬನೆ.
  • ಇನ್ಸೂರೆನ್ಸ್ ಕಂಪನಿಗಳ ಮತ್ತು ಟಿಪಿಎ ಲಾಭಗಳು, ಅದಲ್ಲದೆ ಕಂಪಾಟ್ರ್ಮೆಂಟಲೈಸೇಷನ್.
  • ಸೂಪರ್ ಸ್ಪೆಷಲಿಸ್ಟಗಳು, ಸೌಕರ್ಯಗಳ ಕುರಿತಾಗಿ ಜನರಿಗೆ ಇರುವ ಅತಿಯಾದ ಅರಿವು, ರೋಗಿಗಳನ್ನು ದೊಡ್ಡ ದೊಡ್ಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಕಡೆ ಮುಖ ಮಾಡುವಂತೆ ಮಾಡಿದೆ. ವೈದ್ಯಕೀಯ ಕ್ಷೇತ್ರವನ್ನು ಗ್ರಾಹಕ ರಕ್ಷಣೆ ಕಾಯ್ದೆಯಡಿ ತಂದ ನಂತರ ಈ ಕ್ಷೇತ್ರ ಸೇವಾ ಕ್ಷೇತ್ರವಾಗಿ ಉಳಿದಿಲ್ಲ. ಟ್ರೇಡ್ ಲೈಸೆನ್ಸ್, ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಕಾಯ್ದೆ, ಕೆಪಿಎಂಇ ಕಾಯ್ದೆ ಇವೆಲ್ಲವೂ ಸಣ್ಣ ಆಸ್ಪತ್ರೆಗಳಿಗೆ ತೂಗುಗತ್ತಿಗಳಾಗಿ ಪರಿಣಮಿಸಿವೆ. ಪರಿಸ್ಥಿತಿ ಹೀಗಿರುವಾಗ ವೈದ್ಯಕೀಯ ಕ್ಷೇತ್ರವನ್ನು ಪೂರ್ಣ ಪ್ರಮಾಣದ ಸೇವಾ ಕ್ಷೇತ್ರವೆಂದು ಪರಿಗಣಿಸುವುದು ಅಥವಾ ಅಳೆಯುವುದು ಪ್ರಶ್ನಾರ್ಹ.
  • ಆದರೂ ಬಹುತೇಕ ವೈದ್ಯರು ಇಂದಿಗೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವವನ್ನು ಉಳಿಸಿಕೊಂಡಿರುವುದು ಹರ್ಷದ ಸಂಗತಿ. ಕಾಯ್ದೆ ಕಾನೂನುಗಳ ಮೀರಿ ವೈದ್ಯರು ಮಾನವೀಯ ನೆಲೆಗಟ್ಟಿನಲ್ಲಿ ಜನಸ್ನೇಹಿ ಚಿಕಿತ್ಸಕರಾಗಿ ವರ್ತಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಅಲ್ಲೊಂದು ಇಲ್ಲೊಂದು ಆದ ತಪ್ಪುಗಳನ್ನು ಇಡೀ ಕ್ಷೇತ್ರಕ್ಕೆ ಅನ್ವಯಿಸಲಾಗದು.

ಕಳೆದ ಎರಡು ದಶಕಗಳಿಂದ ಈ ಕ್ಷೇತ್ರಕ್ಕೆ ಮಸಿ ಬಳೆದ ಕಾಯ್ದೆಗಳು, ಹೊಸ ಹೊಸ ಒಡಂಬಡಿಕೆಗಳು ಮತ್ತು ಆಳುವ ವರ್ಗದ ನಿರ್ಲಕ್ಷ್ಯದಿಂದ  ಇಡೀ ವೈದ್ಯಕೀಯ ಕ್ಷೇತ್ರ ಆರೋಪಿ ಸ್ಥಾನದಲ್ಲಿ ನಿಲ್ಲುವಂತಾದುದು ದುರದೃಷ್ಟಕರ.

ಪರೀಕ್ಷಾರ್ಥ ಬಳಕೆಗೆ ಭಾರತ ಬಲಿ!

ಜಗತ್ತಿನಲ್ಲಿ ನಿತ್ಯವೂ ಹೊಸಹೊಸ ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಅವುಗಳ ಪರೀಕ್ಷಾರ್ಥ ಬಳಕೆಗೆ ಮಾತ್ರ, ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹಾಗೆ ಮಾಡಿದ ಕ್ಲಿನಿಕಲ್ ಟ್ರಯಲ್ಸ್ ಗಳ ಅರವತ್ತು ಪ್ರತಿಶತ ಪ್ರಯೋಗಗಳು ನಡೆಯುವುದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಯೇ!

ಹೆಚ್ಚಿನ ಸಂಖ್ಯೆಯ ರೋಗಿಗಳ ಲಭ್ಯತೆ ಮತ್ತು ಆಳುವ ಸರ್ಕಾರಗಳ ಅನುಕೂಲಕರ ನಿಯಮಗಳು ಕ್ಲಿನಿಕಲ್ ಟ್ರಯಲ್ಸ್ ಮಾಡುವ ಕಂಪನಿಗಳಿಗೆ ತುಂಬಾ ಸಹಕಾರಿ. ಅದರಲ್ಲಿ ಭಾರತವೂ ಒಂದು. ಭಾರತದಲ್ಲಿ ಅನೇಕ ಬಗೆಯ ಟ್ರಯಲ್ಸ್ ಗಳಿಗೆ ರೋಗಿಗಳು ಯಥೇಚ್ಛವಾಗಿ ಸಿಗುತ್ತಾರೆ. ಉದಾಹರಣೆಗೆ ಕಾರ್ಡಿಯಾಕ್ ಸ್ಟೆಂಟ್ಸ್ ಟ್ರಯಲ್. ಕಂಪೆನಿಗಳಿಗೆ ತಮ್ಮ ಉತ್ಪನ್ನದ ಸಾಧಕ-ಬಾಧಕಗಳ ತುಲನೆಯಾದರೂ, ಅದು ರೋಗಿಯ ಜೇಬಿಗೆ ಕುತ್ತನ್ನು ತರುತ್ತದೆ.

ವೈದ್ಯಕೀಯ ಕ್ಷೇತ್ರದ ರೆಗ್ಯುಲೇಟರಿ ಸಂಸ್ಥೆ ಎಂಸಿಐಯಲ್ಲಿ ಚುನಾಯಿತರಾದ ವೈದ್ಯರು ಇರುವುದನ್ನು ರದ್ದುಗೊಳಿಸಿ, ಎನ್ ಎಂಸಿ ಎಂದು ಹೆಸರು ಬದಲಾಯಿಸಿ ಶೇ. 90ರಷ್ಟು ರಾಜಕೀಯ ವ್ಯಕ್ತಿಗಳಿಗೆ ನಾಮನಿರ್ದೇಶನವಾಗಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಕಾಲೇಜು ಸೀಟುಗಳು ಹೆಚ್ಚು ಹೆಚ್ಚು ವ್ಯಾಪಾರೀಕರಣಗೊಳ್ಳಲು ಅನುವು ಮಾಡಿಕೊಟ್ಟಂತಾಗುವುದು.

‘ಆಯುಷ್ಮಾನ್ ಭಾರತ’ ಯೋಜನೆಗೆ ಸರಕಾರದ ಬೊಕ್ಕಸದಿಂದಲೇ ಹಣ ಮೀಸಲಿರಿಸಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ, ಇನ್ಶೂರೆನ್ಸ್ ಕಂಪನಿಗಳಿಗೆ ಮತ್ತು ಫಾರ್ಮ್ ಸೆಕ್ಟರ್‍ಗೆ ಅನುಕೂಲ ಮಾಡಿಕೊಡಲಾಗಿದೆ. ಜಿಡಿಪಿ ಬೆಳವಣಿಗೆ ಹೆಸರಿನಲ್ಲಿ ಈ ಹಣ ದುರ್ಬಳಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ಹಣವನ್ನು ಸಾರ್ವಜನಿಕ ಆಸ್ಪತ್ರೆಗಳನ್ನು ಬಲಪಡಿಸಲು ಬಳಸಿದ್ದೇ ಆದಲ್ಲಿ ಬಹುಸಂಖ್ಯಾತರಿಗೆ ಅನುಕೂಲವಾಗುತ್ತದೆ. ಉದಾಹರಣೆಗೆ ಸರಕಾರಿ ಸ್ವಾಮ್ಯದ ಜಯದೇವ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳೇ ಸಾಕ್ಷಿ.

ವೈದ್ಯಕೀಯ ಉಪಕರಣಗಳ ಕ್ಷೇತ್ರದ ವಹಿವಾಟು 2015ಕ್ಕೆ 228 ಬಿಲಿಯನ್ ಯುಎಸ್ ಡಾಲರ್ ಇದ್ದದ್ದು 2020ರ ವೇಳೆಗೆ 332 ಬಿಲಿಯನ್ ಡಾಲರ್ ಆಗುವ ನಿರೀಕ್ಷೆ ಇದೆ. ಈ ಉಪಕರಣಗಳ ವಾರ್ಷಿಕ ವಹಿವಾಟು 450-500 ಮಿಲಿಯನ್ ನಷ್ಟಿದೆ. ಇಂದಿನವರೆಗೆ ಈ ಕ್ಷೇತ್ರಕ್ಕೆ ಹರಿದು ಬಂದಿರುವ ವಿದೇಶಿ ಬಂಡವಾಳ 1.7 ಬಿಲಿಯನ್‍ಗಿಂತಲೂ ಹೆಚ್ಚು. ಸಿಎಜಿಆರ್ ಅಭಿವೃದ್ಧಿ ಮಾಪನ 22.89 ಆಗಿದೆ. ಇಲ್ಲಿನ ಕೋಟ್ಯಂತರ ರೂಪಾಯಿಗಳ ವಹಿವಾಟಿನ ವೆಚ್ಚದ ಬರೆ ಅಂತಿಮವಾಗಿ ರೋಗಿಯ ಮೇಲೆಯೇ ಬೀಳುತ್ತದೆ.

1980ಕ್ಕೂ ಮುಂಚೆ ಅತಿಯಾಗಿ ಹರಡುತ್ತಿದ್ದ ರೋಗಗಳನ್ನು ನಿಯಂತ್ರಿಸಲು ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಲಾಯಿತು. ಪ್ರಾಥಮಿಕ ಚಿಕಿತ್ಸೆ, ಎಂಎನ್‍ಸಿಪಿ, ಸಿಸಿಪಿ ಹಾಗೂ ವೆಕ್ಟರ್ ಕಂಟ್ರೋಲ್ ಇತ್ಯಾದಿ ಕಾರ್ಯಕ್ರಮಗಳು ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದವು ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಪ್ಪಿಸಲು ಗ್ರಾಮೀಣ ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಘಟಕ ಸಮುದಾಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳು, ಪುರಸಭೆ
ನಿಯಂತ್ರಿತ ಆಸ್ಪತ್ರೆಗಳು ಶ್ರಮಿಸಿದವು. ವೈದ್ಯಕೀಯ ಕ್ಷೇತ್ರ ಸೇವಾ ಕ್ಷೇತ್ರವಾಗಿದ್ದು ಈ ಕ್ಷೇತ್ರದ ಮೇಲೆ ಸರಕಾರಗಳು ಮಾಡುವ ಖರ್ಚು ಲಾಭರಹಿತವಾದದ್ದು. ಹಾಗಾಗಿಯೂ ಮಾನವ ಅಭಿವೃದ್ಧಿಯ ದೃಷ್ಟಿಯಿಂದ ಸಾವಿರಾರು ಕೋಟಿಯಷ್ಟು ಹಣವನ್ನು ದೇಶದ ಸರ್ಕಾರಗಳು ಮೀಸಲಿಡುತ್ತಿದ್ದವು.

ಇತ್ತೀಚಿನ ದಿನಗಳಲ್ಲಿ ಜನರಿಗೆ ಬರುವ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಯನ್ನೇ ಅತಿಯಾಗಿ ಅವಲಂಬಿಸುವವರ ಸಂಖ್ಯೆ ಶೇಕಡ ಎಂಬತ್ತು ದಾಟುತ್ತಿದೆ. ಆಳುವ ಸರಕಾರಗಳು ವೈಯಕ್ತಿಕ ಮತ್ತು ರಾಜಕೀಯ ಲಾಭದೆಸೆಯಿಂದ ಖಾಸಗೀಕರಣಕ್ಕೆ ನೀಡಿದ ಆದ್ಯತೆಯನ್ನು ಸಾರ್ವಜನಿಕ ಆಸ್ಪತ್ರೆಗಳಿಗೆ ನೀಡಲಿಲ್ಲ. ಪರಿಣಾಮವಾಗಿ ಸಣ್ಣಸಣ್ಣ ನಗರಗಳಲ್ಲೂ ಕೋಟಿಗಟ್ಟಲೆ ಹೂಡಿಕೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ತಲೆ ಎತ್ತಿದವು. ಜನರು ಸಣ್ಣ ಸಣ್ಣ ಕಾಯಿಲೆಗಳಿಗೂ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸುವಷ್ಟು ಮಟ್ಟಿಗೆ ಸಾರ್ವಜನಿಕ ಆಸ್ಪತ್ರೆಗಳು ನಿರ್ಲಕ್ಷ್ಯಕ್ಕೆ ಒಳಪಟ್ಟವು. ಖಾಸಗಿ ಆಸ್ಪತ್ರೆಗಳನ್ನೇ ನೆಚ್ಚಿ ಹೊರಟ ಜನರು ಎಪಿಎಲ್ ನಿಂದ ಬಿಪಿಎಲ್ ಪರಿಧಿಗೆ ಬರುವಂಥಾದದ್ದು ದುರದೃಷ್ಟಕರ.

ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟಲು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಾರ್ವಜನಿಕ ಆಸ್ಪತ್ರೆಗಳ ಬಲವರ್ಧನೆ ಬಹುಮುಖ್ಯ. ಆದರೆ ಲಾಭರಹಿತ ಹೂಡಿಕೆಗೆ ಸರ್ಕಾರಗಳು ಹಿಂದೇಟು ಹಾಕುತ್ತವೆ. ಜಿಡಿಪಿ ಎಂದು ಬೊಬ್ಬೆ ಹೊಡೆದುಕೊಳ್ಳುವ ಈ ಜನರು ಜನಸಾಮಾನ್ಯರ ಆರೋಗ್ಯದತ್ತ ಚಿತ್ತ ಹರಿಸಬೇಕಿದೆ. ಆದರೆ ಇವರು ಮಾನವ ಸಂಪನ್ಮೂಲದ ಅಭಿವೃದ್ಧಿ ದೇಶದ ಸಮಗ್ರ ಅಭಿವೃದ್ಧಿ ಎನ್ನುವುದನ್ನು ಗುರುತಿಸಲಾಗದಷ್ಟು ಅರೆಪ್ರಜ್ಞಾ ಸ್ಥಿತಿಗೆ ತಲುಪಿಬಿಟ್ಟಿದ್ದಾರೆ.

ಈ ಮೇಲಿನ ಎಲ್ಲ ಅಂಶಗಳನ್ನು ಕೂಲಂಕಷವಾಗಿ ನೋಡಿದ ನಂತರ ವೈದ್ಯಕೀಯ ಕ್ಷೇತ್ರವನ್ನು ಸೇವೆಯ ವ್ಯಾಪ್ತಿಗೆ ಅಥವಾ ಸುಲಿಗೆಯ ಸುಪರ್ದಿಗೆ ಏಕಾಏಕಿ ಬಿಟ್ಟುಕೊಡಲು ಬರುವುದಿಲ್ಲ. ಇದು ನೂರಾರು ಹೆಣಿಗೆಗಳು ಇರುವ ಬಲೆಯೊಳಗೆ ಸಿಲುಕಿದ ಹುಳುವಿನ ಸ್ಥಿತಿಯಂತಿದೆ.

ವೈದ್ಯಕೀಯ ಕ್ಷೇತ್ರವಷ್ಟೇ ಅಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಒಂದಷ್ಟು ಅತಿ ಎನ್ನಿಸುವ ದುರ್ವರ್ತನೆಗಳು ಜರುಗುತ್ತಲೇ ಇರುತ್ತವೆ. ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡುವ ಇಂಥವುಗಳನ್ನು ತಡೆಗಟ್ಟಿ ‘ವೈದ್ಯಕೀಯ ಕ್ಷೇತ್ರ ಸೇವಾ ಕ್ಷೇತ್ರವಾಗಿ ಉಳಿಯಲಿ’ ಎನ್ನುವ ಪ್ರಜ್ಞಾವಂತರ ಸಂಖ್ಯೆ ಹೆಚ್ಚಾಗಬೇಕಾದ ಅವಶ್ಯಕತೆಯಿದೆ.

ಪೂರಕವಾಗಿ ಸರಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.ಅದಕ್ಕೂ ಮುಖ್ಯವಾಗಿ ಸರಕಾರಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಾಗುವ ಅವಶ್ಯಕತೆಯೂ ಇದೆ.

*ಲೇಖಕರು ಬಳ್ಳಾರಿಯಲ್ಲಿ ಜನರಲ್ ಸರ್ಜನ್; ಸಾಹಿತಿ.

Leave a Reply

Your email address will not be published.