ಸೇವೆ ಸುಲಿಗೆಯಾದ ಬಗೆ

ಪ್ರಸಕ್ತ ಸುಲಿಗೆ ವ್ಯವಸ್ಥೆಯನ್ನು ಸರಿಪಡಿಸಲು ‘ವೈದ್ಯಕೀಯ ರಂಗದ ಕ್ರಾಂತಿ’ ಆಗದೇ ಗತ್ಯಂತರ ಇಲ್ಲ ಎನಿಸುತ್ತದೆ. ಅದಕ್ಕಾಗಿ ಶ್ರಮಿಸಲು ನಾನಂತೂ ಸಿದ್ಧ.

ಜನಸಾಮಾನ್ಯರಲ್ಲಿ ಒಂದಾನೊಂದು ಕಾಲದಲ್ಲಿ ಪೂಜ್ಯ ಭಾವನೆಯನ್ನು ಹೊಂದಿದ್ದ ವೈದ್ಯಕೀಯರಂಗ ಈಗ ದ್ವೇಷ, ಅನುಮಾನಗಳಿಂದ ಕೂಡಿದೆ. ಸೇವೆಯಾಗಿದ್ದ ವೈದ್ಯಕೀಯ ರಂಗ ಯಾವುದೇ ಸಂಶಯವಿಲ್ಲದೆ ಸುಲಿಗೆಯಾಗಿದೆ. ಇದು ಮನುಕುಲದ ಒಂದು ಬಹಳ ದೊಡ್ಡ ದುರಂತ. ಮಾನವನ ಸಾಮಾಜಿಕ ಬೆಳವಣಿಗೆಯ ಹಾಗೂ ಇತಿಹಾಸದ ಒಂದು ಕಪ್ಪು ಚುಕ್ಕೆ ಇಂದಿನ ವೈದ್ಯಕೀಯ ರಂಗ. ಈ ಲೇಖನವನ್ನು ಬರೆಯುವಾಗ ನನಗೆ ಒಬ್ಬ ವೈದ್ಯನಾಗಿ ನಾವು, ಅಂದರೆ ನಮ್ಮಲ್ಲಿ ಕೆಲವರು ಇಷ್ಟು ಹದಗೆಟ್ಟಿದ್ದೇವೆಯೆ ಎನ್ನುವ ದುಃಖ ಕಾಡುತ್ತಿದೆ.

ಮೊದಲಿಗೆ, ಪ್ರಸ್ತುತ ದೇಶದ ಜನರ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೆಲವು ಅಂಶಗಳಲ್ಲಿ ಸುಧಾರಣೆ ಕಂಡುಬಂದರೂ ಜನಸಾಮಾನ್ಯರ ಆರೋಗ್ಯ ಪರಿಸ್ಥಿತಿಯು ಭಯಾನಕವಾಗಿದೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ರಕ್ತಹೀನತೆಯಿಂದ ನರಳುತ್ತಿರುವ ಜನರಿರುವುದು ಭಾರತದಲ್ಲೇ! ಶೇ.40 ರಷ್ಟು ಭಾರತೀಯರಲ್ಲಿ ರಕ್ತಹೀನತೆ ಇದೆ, 15-49ವರ್ಷದ ಶೇ.51 ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಇದೆ. ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಅಪೌಷ್ಟಿಕತೆಯಿಂದ ನರಳುವ ಮಕ್ಕಳಿರುವುದು ನಮ್ಮ ದೇಶದಲ್ಲಿಯೆ. 3 ವರ್ಷದೊಳಗಿನ ಶೇ.75 ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಭಾರತವು ವಿಶ್ವದ ಶೇ.50% ರಷ್ಟು Wasted ಮಕ್ಕಳಿಗೆ, ಶೇ.31% ರಷ್ಟು stunted ಮಕ್ಕಳಿಗೆ ಮನೆಯಾಗಿದೆ. ಭಾರತವು ವಿಶ್ವದ ಶೇ.49 ರಷ್ಟು ಮಧುಮೇಹ ರೋಗಿಗಳನ್ನು ಹೊಂದಿದೆ, ಹೀಗೆ ಬರೆಯುತ್ತಾ ಹೋದರೆ ಕೊನೆಯೇ ಇಲ್ಲದಂತಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಭಾರತದಲ್ಲಿ ಇಷ್ಟೊಂದು ಅನಾರೋಗ್ಯದಿಂದ ಬಳಲುತ್ತಿರುವ ಜನರಿದ್ದಾರೆಂದರೆ ಇದಕ್ಕೆ ಮುಖ್ಯ ಕಾರಣ ನಮ್ಮ ಸರ್ಕಾರಗಳು ತಂದಂತಹ ನೀತಿಗಳು. ಭಾರತದಲ್ಲಿ ಆರ್ಥಿಕ ನೀತಿಗಳು ಬದಲಾದಂತೆಲ್ಲಾ ಅದರ ಪರಿಣಾಮ ಜನಸಾಮಾನ್ಯರ ಆರೋಗ್ಯದ ಮೇಲೆ ಹಾಗೂ ವೈದ್ಯಕೀಯ ರಂಗದ ಮೇಲೆ ಬಿದ್ದಿದೆ.

ಸೇವೆಯನ್ನು ಸುಲಿಗೆಯಾಗಿಸಿದ ಐದು ಮುಖ್ಯ ಕಾರಣಗಳು:

1. ಇಂದಿನ ವೈದ್ಯಕೀಯ ರಂಗದಲ್ಲಿರುವ ಭ್ರಷ್ಟಾಚಾರದ ಮೂಲವು ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತ ಕಾಲದಲ್ಲಿ ಸ್ಥಾಪಿಸಲ್ಪಟ್ಟಿರುವ ವೈದ್ಯಕೀಯ ಸೇವೆಯ ಸಂಸ್ಥೆಗಳು ಹಾಗೂ ವೈದ್ಯಕೀಯ ವೃತ್ತಿಗಳಲ್ಲಿದೆ.

2. ಭ್ರಷ್ಟಾಚಾರ ಹಾಗೂ ಸುಲಿಗೆಯು ಆಧುನಿಕ ಅಲೋಪತಿಕ್ ವೈದ್ಯಕೀಯ ವಿಧಾನ ಅನುಸರಿಸುವ ವೈದ್ಯರ ಹಾಗೂ ಅಸ್ಪತ್ರೆಯ ಕೇಂದ್ರೀಕೃತ ವೈದ್ಯಕೀಯ ಸೇವೆಗಳ ಸ್ಥಾಪನೆಯ ಪರಿಣಾಮವಾಗಿ ಹೊರಹೊಮ್ಮಿದೆ. ಬ್ರಿಟಿಷ್ ಆಡಳಿತದಲ್ಲಿ ಇಡೀ ವೈದ್ಯಕೀಯ ಸೇವಾ ಸಂಸ್ಥೆಗಳು ಸಾರ್ವಜನಿಕವಾಗಿ ಸ್ಥಾಪನೆಗೊಂಡಿರಲಿಲ್ಲ. ಹಾಗೆಯೆ ಬ್ರಿಟಿಷ್ ವಸಾಹತುಶಾಹಿಯು ಭಾರತವನ್ನು ಕೊಳ್ಳೆಹೊಡೆದಿದ್ದರಿಂದ ಸ್ವಾತಂತ್ರ್ಯದ ನಂತರ ಭಾರತದಲ್ಲಿ ಅತಿ ಹೆಚ್ಚು ಬಡತನ, ಹಸಿವು, ನಿರುದ್ಯೋಗ ಹಾಗೂ ಅಸಮಾನತೆ ತಾಂಡವವಾಡುತ್ತಿದ್ದರಿಂದ ವೈದ್ಯಕೀಯ ಸೇವೆಗಳನ್ನು ಸಂಪೂರ್ಣವಾಗಿ ಸಾರ್ವಜನಿಕವಾಗಿ ಸ್ಥಾಪಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಖಾಸಗಿ ವೈದ್ಯಕೀಯ ರಂಗದ ಮುಂದುವರಿಕೆಗೆ ಅನುವು ಮಾಡಲಾಗಿತ್ತು. ಈ ಕಾರಣಗಳಿಗಾಗಿ ಆರೋಗ್ಯವು ಒಂದು ವಸ್ತುವಾಗಿ ಅದನ್ನು ಯಾರಿಗೆ ಕೊಂಡುಕೊಳ್ಳುವ ಶಕ್ತಿ ಇರುವುದೋ ಅವರಿಗೆ ಲಭ್ಯವಾಯಿತು.

3. ವೈದ್ಯಕೀಯ ರಂಗದ ಮೇಲೆ ಯಾವುದೇ ನಿಯಂತ್ರಣ ಇಲ್ಲದೆ ಇರುವುದು ಹಾಗೂ ಸಾಮಾನ್ಯ ಜನರಿಗೆ ಈ ಅಧುನಿಕ ವೈದ್ಯಕೀಯ ವಿಜ್ಞಾನದ ಬಗ್ಗೆ ಅರಿವು ಇಲ್ಲದೆ ಇರುವುದರಿಂದ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ತಮ್ಮ ಹೊಣೆಗಾರಿಕೆಯಿಂದ ನುಣಿಚಿಕೊಳ್ಳುತ್ತಿದ್ದಾರೆ.

4. ವೈದ್ಯಕೀಯ ರಂಗ ಹಾಗೂ ದೊಡ್ಡ ಕಾರ್ಖಾನೆಗಳ ಒಳಒಪ್ಪಂದ, ಔಷಧಿ ತಯಾರು ಮಾಡುವ ಕಂಪನಿಗಳು, ವಿವಿದ ಪರೀಕ್ಷಾ ಕೇಂದ್ರಗಳು ಸಾರ್ವಜನಿಕ, ಖಾಸಗಿ ಹಾಗೂ ಕಾರ್ಪೊರೇಟಗಳ ಆಸ್ಪತ್ರೆಗಳು, ಆರೋಗ್ಯ ವಿಮಾ ರಂಗ ಹಾಗೂ ತಂತ್ರಜ್ಞಾನ -ಇವೆಲ್ಲವು ವೈದ್ಯಕೀಯ ಸೇವೆಗಳ ವಾಣಿಜ್ಯೀಕರಣಕ್ಕೆ ಕಾರಣವಾಗಿದೆ.

5. ಇಂದಿನ ವೈದ್ಯ ಕೇಂದ್ರಿತ ಆಸ್ಪತ್ರೆಗಳು, ಆಧುನಿಕ ವೈದ್ಯಕೀಯ ವಿಧಾನಗಳು, ತಂತ್ರಜ್ಞಾನ ಇವೆಲ್ಲವು ವೈದ್ಯರ ಕೈಗೆ ಜನಸಾಮಾನ್ಯರ ಆರೋಗ್ಯದ ಚುಕ್ಕಾಣಿಯನ್ನು ಕೊಟ್ಟಿದೆ. ಅದನ್ನು ಇಂದಿನ ವೈದ್ಯರು ತಮ್ಮ ಸ್ವಾರ್ಥಕ್ಕಾಗಿ ಹಾಗೂ ಸ್ವಂತ ಲಾಭಕ್ಕಾಗಿ, ಮಾನವೀಯ ಮೌಲ್ಯಗಳನ್ನು ಮರೆತು ಬಳಸುತ್ತಿದ್ದಾರೆ.

ಹೊರರೋಗಿಗಳ ವಿಭಾಗದ ಶೇ.71 ರಷ್ಟು ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಹಾಗೂ ಶೇ.25 ರಷ್ಟು ರೋಗಿಗಳು ಸರ್ಕಾರಿ ಆಸ್ಪತ್ರೆಗಳನ್ನು ಬಳಸುತ್ತಿದ್ದಾರೆ. ಹಾಗೆಯೆ ಒಳರೋಗಿಗಳ ವಿಭಾಗದಲ್ಲಿ ಶೇ.73 ರಷ್ಟು ರೋಗಿಗಳು ಖಾಸಗಿ ಅಸ್ಪತ್ರೆಗಳನ್ನು ಬಳಸುತ್ತಿದ್ದಾರೆ. ಭಾರತದಲ್ಲಿ ಒಟ್ಟು ಆರೋಗ್ಯ ವೆಚ್ಚದಲ್ಲಿ ಶೇ.70 ರಷ್ಟು ತಮ್ಮ ಸ್ವಂತ ಜೇಬಿನಿಂದ ಖರ್ಚು ಮಾಡಬೇಕಾಗುತ್ತದೆ (ವಿಶ್ವದ ಸರಾಸರಿ ಕೇವಲ ಶೇ.18). ಇದರಿಂದ ಪ್ರತಿ ವರ್ಷ 9 ಕೋಟಿ ಭಾರತೀಯರು ಕೇವಲ ತಮ್ಮ ಆರೋಗ್ಯ ವೆಚ್ಚದಿಂದಲೇ ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಡುತ್ತಿದ್ದಾರೆ. ಇದು  ನಮ್ಮ ದೇಶದ ರೈತರ ಆತ್ಮಹತ್ಯೆಗೆ ಎರಡನೇ ಮುಖ್ಯ ಕಾರಣ ಎಂದೂ ಗುರುತಿಸಲಾಗಿದೆ.

ಭಾರತದಲ್ಲಿ ಬ್ರಿಟಿಷ್ ಆಡಳಿತದ ಪೂರ್ವದಲ್ಲಿ ವೈದ್ಯಕೀಯ ರಂಗ ಸೇವೆಯನ್ನು ಪ್ರತಿಪಾದಿಸುತ್ತಿತ್ತು. ಅಂದು ವೈದ್ಯಕೀಯ ರಂಗ 3 ಗುಣಗಳನ್ನು ಹೊಂದಿತ್ತು:

1. ವೈದ್ಯಕೀಯ ಸೇವೆಯು ಒಂದು ಸಾಮಾಜಿಕ ಜವಾಬ್ದಾರಿಯಾಗಿತ್ತು.

2. ಅದು ಎಲ್ಲರಿಗೂ ಉಚಿತವಾಗಿತ್ತು. (ಆದರೆ ಭಾರತ ದೇಶದಲ್ಲಿರುವ ಶ್ರೇಣೀಕೃತ ಜಾತಿ ವ್ಯವಸ್ಥೆ ವರ್ಗ ಹಾಗೂ ವೃತ್ತಿ ಈ ಸೇವೆಯನ್ನು ಎಲ್ಲರೂ ಸಮವಾಗಿ ಪಡೆಯುವುದನ್ನು ತಡೆದಿತ್ತು).

3. ಈ ಎಲ್ಲಾ ಸೇವೆಗಳು ಪಟ್ಟಣಗಳಲ್ಲಿ ಕೇಂದ್ರಿತವಾಗಿದ್ದವು. ಅಂದು ಒಂದು ಸಾಂಸ್ಥಿಕವಾಗಿ ತರಬೇತಿಯನ್ನು ಪಡೆದ ವೈದ್ಯರಾಗಲಿ, ವೈದ್ಯಕೀಯ ಸಿಬ್ಬಂದಿಯಾಗಲಿ ಇರಲಿಲ್ಲ. ಅಂದು ಇದ್ದದ್ದು ವಂಶ ಪಾರಂಪರಿಕವಾದ ವೈದ್ಯಕೀಯ ಸೇವೆ. ಮಠಗಳು, ಆಶ್ರಮಗಳು, ಪುಣ್ಯಸ್ಥಳಗಳು, ದೇವಾಲಯಗಳು, ಛತ್ರಗಳು, ಆಸ್ಪತ್ರೆಗಳಾಗಿ ಮಾರ್ಪಾಡಾಗಿ ರೋಗಿಗಳಿಗೆ ಚಿಕಿತ್ಸೆಯನ್ನು ಕೊಡುವ ಸ್ಥಳಗಳಾಗಿದ್ದವು. ಆದರೆ ಬ್ರಿಟಿಷರು ಬಂದ ನಂತರ ಸಾಂಸ್ಥಿಕವಾಗಿ ತರಬೇತಿ ಪಡೆದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಈ ಹಳೆಯ ವೈದ್ಯರ ನಡುವೆ ರೋಗಿಗಳಿಗೆ ಚಿಕಿತ್ಸೆಯನ್ನು ಕೊಡಲಾರಂಭಿಸಿದರು.

ಇವರು ಆಧುನಿಕ ಅಲೋಪತಿಕ್ ವೈದ್ಯಕೀಯ ವಿಧಾನಗಳನ್ನು ಬಳಸಿ ಚಿಕಿತ್ಸೆಯನ್ನು ಕೊಡುತ್ತಿದ್ದರು. ಬ್ರಿಟೀಷರು ಮೊದಲಿಗೆ ಕಂಟೋನ್‍ಮೆಂಟ್‍ಗಳಲ್ಲಿ ಈ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದರು. ನಂತರ ಹಲವು ದೊಡ್ಡ ಅಸ್ಪತ್ರೆಗಳು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ ಈ ಆಧುನಿಕ ಅಲೋಪತಿಕ್ ಚಿಕಿತ್ಸಾ ವಿಧಾನ ಬೇರೆ ಎಲ್ಲ ಚಿಕಿತ್ಸಾ ವಿಧಾನಗಳಿಗಿಂತ ಶ್ರೇಷ್ಠ ಎಂಬುದನ್ನು ಬಲವಾಗಿ ಪ್ರತಿಪಾದಿಸಿ ಬಹುತೇಕ ಜನರ ಮನಸ್ಸಿನಲ್ಲಿ ಇದೇ ಅಭಿಪ್ರಾಯವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಬ್ರಿಟಿಷ್ ಆಡಳಿತದ ಕಾಲದಲ್ಲಿಯೇ ವೈದ್ಯರು ತಮ್ಮ ಖಾಸಗಿ ಕ್ಲಿನಿಕ್‍ಗಳಲ್ಲಿ ಹಣವನ್ನು ಪಡೆದು ಚಿಕಿತ್ಸೆಯನ್ನು ಕೊಡುವುದಕ್ಕೆ ಪ್ರಾರಂಭಿಸಿದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇದೇ ವಿಧಾನಗಳನ್ನು ನಮ್ಮ ಸರ್ಕಾರಗಳು ಮುಂದುವರೆಸಿದವು. ಇದರಿಂದ ಜನಸಾಮಾನ್ಯರಲ್ಲಿ ಚಿಕಿತ್ಸೆಯನ್ನು ಆಸ್ಪತ್ರೆಗಳಲ್ಲಿ ವೈದ್ಯರಿಂದ ಪಡೆಯಬೇಕೆಂಬ ಅಭಿಪ್ರಾಯ ಮೂಡಿತು. ಹಾಗೆಯೇ ಖಾಸಗಿ ವಲಯದಲ್ಲಿ ಚಿಕಿತ್ಸೆ ಕೊಡುತ್ತಿದ್ದ ವೈದ್ಯರನ್ನು ಮುಂದುವರೆಯಲು ಬಿಟ್ಟರು.

ಇತ್ತೀಚೆಗಿನ ಬೆಳವಣಿಗೆಯಲ್ಲಿ ನವ ಉದಾರವಾದಿ ಆರ್ಥಿಕ ನೀತಿಗಳು, ಜಾಗತೀಕರಣ, ಖಾಸಗೀಕರಣ ಹಾಗೂ ಅಂತರರಾಷ್ಟ್ರೀಯ ನಿಯಂತ್ರಣ ಮಂಡಲಿಗಳು ಮತ್ತು ಒಪ್ಪಂದಗಳು ಒಬ್ಬ ವೈದ್ಯ ಹಾಗೂ ರೋಗಿಯ ಸಂಬಂಧವನ್ನು ಒಬ್ಬ ಸಲಹೆಗಾರ (ವ್ಯಾಪಾರಿ) ಹಾಗೂ ಗಿರಾಕಿಯ ಸಂಬಂಧವನ್ನಾಗಿ ಪರಿವರ್ತಿಸಿವೆ. ಹಾಗಾಗಿ, ಆರೋಗ್ಯವು ಒಂದು ‘ಸರಕು’ ಆಗಿಬಿಟ್ಟಿದೆ. ಅದನ್ನು ವೈದ್ಯಕೀಯ ರಂಗ ಮಾರಾಟಕ್ಕಿಟ್ಟಿದೆ ಹಾಗೂ ಹಣ ಇದ್ದವರು ಅದನ್ನು ಕೊಂಡುಕೊಳ್ಳುತ್ತಿದ್ದಾರೆ. ಬಡವರು, ಬಡರೈತರು ಕಾಯಿಲೆಗಳಿಂದ ಸಾಯುತ್ತಿದ್ದಾರೆ ಅಥವಾ ಕಾಯಿಲೆಯ ನಿವಾರಣೆಗೆ ಖರ್ಚು ಮಾಡಿದ ಹಣದ ಸಾಲವನ್ನು ತೀರಿಸಲಾಗದೆ ನೇಣು ಹಾಕಿಕೊಳ್ಳುತ್ತಿದ್ದಾರೆ. ಇಂದು ವೈದ್ಯಕೀಯ ರಂಗದ ವ್ಯಾಪಾರದಲ್ಲಿ ದೊಡ್ಡ ಕಾರ್ಪೊರೇಟಗಳು, ವಿದೇಶಿ ನೇರ ಬಂಡವಾಳ, ವಿದೇಶಿ ಹಣಕಾಸು ಬಂಡವಾಳ, ಹೀಗೆ ದೊಡ್ಡ ರೀತಿಯಲ್ಲಿ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಇವರಿಗೆ ಜೀತದ ಆಳುಗಳಾಗಿದ್ದಾರೆ! 

ಈ ರೀತಿಯ ‘ಯಜಮಾನ ಹಾಗೂ ಆಳು’ ಸಂಬಂಧದಲ್ಲಿ ಹೆಚ್ಚು ಲಾಭ ತಂದುಕೊಡುವಂತೆ ‘ಆಳುಗಳ’ ಮೇಲೆ ‘ಯಜಮಾನರು’ ಒತ್ತಡಗಳು ಹೇರುತ್ತಾರೆ! ಅದೇ ಸಂದರ್ಭದಲ್ಲಿ ಈ ಕಾರ್ಪೊರೇಟಗಳ ನಡುವೆ ಇರುವ ಪೈಪೆಪೂಟಿಯಲ್ಲಿ ನುರಿತ ವೈದ್ಯರಿಗೆ ಹೆಚ್ಚು ಆಮಿಷಗಳನ್ನು ಒಡ್ಡುತ್ತಾರೆ. ಅಂತಹ ವೈದ್ಯರು ಕಮೀಷನ್ ‘ಏಜೆಂಟು’ಗಳಾಗಿ ವರ್ತಿಸುತ್ತಿದ್ದಾರೆ. ಈ ವ್ಯಾಪಾರ ಯಾವ ಮಟ್ಟಕ್ಕೆ ಬೆಳೆದಿದೆಯೆಂದರೆ, ಅದನ್ನು ನಿಯಂತ್ರಿಸಲು ಯಾವುದೇ ಸರ್ಕಾರವಾದರೂ ಹೆಣಗಬೇಕಿದೆ!

ಇನ್ನು ಇದರ ಸುಧಾರಣೆಯ ದಾರಿ ಯಾವುದು?

ನನ್ನ ವೈಯಕ್ತಿಕ ಅಭಿಪ್ರಾಯ ಹೀಗಿದೆ: ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಹಾಗೂ ವೈದ್ಯಕೀಯ ವಿಜ್ಞಾನದ ಬಗ್ಗೆ ‘ಸಾಕ್ಷರತೆ’ಯನ್ನು ಮೂಡಿಸಬೇಕು. ಜನಸಾಮಾನ್ಯರಲ್ಲಿ ಚೈತನ್ಯವನ್ನು ತುಂಬಿ, ‘ಆರೋಗ್ಯವು ತಮ್ಮ ಹಕ್ಕು’ ಮತ್ತು ಅದನ್ನು ಪಡೆಯಲು ಹೋರಾಟಕ್ಕೆ ಮುಂದಾಗಬೇಕೆಂಬ ಜಾಗೃತಿ ಉಂಟಾಗಬೇಕು. ಪರ್ಯಾಯ ವೈದ್ಯಕೀಯ ಸಂಸ್ಥೆಗಳನ್ನು ಜನರೇ ನಿರ್ಮಾಣ ಮಾಡಲು ಅರಿವು-ಮುತುವರ್ಜಿ ತರಬೇಕು.

ಈ ನಿಟ್ಟಿನಲ್ಲಿ ಒಂದು ‘ವೈದ್ಯಕೀಯ ರಂಗದ ಕ್ರಾಂತಿ’ ಆಗದೇ ಗತ್ಯಂತರವೇ ಇಲ್ಲ ಎನಿಸುತ್ತದೆ. ಆಗ ಆಮೂಲಾಗ್ರ ಬದಲಾವಣೆ ತರಲು ಸಾಧ್ಯ. ಅದಕ್ಕಾಗಿ ಶ್ರಮಿಸಲು ನಾನಂತೂ ಸಿದ್ಧ.

*ಲೇಖಕರು ಜನರಲ್ ಸರ್ಜನ್ ಮತ್ತು ಲೆಪ್ರೋಸ್ಕೋಪಿಕ್ ಪರಿಣತರು; ಬಾಗೇಪಲ್ಲಿಯಲ್ಲಿ ಪೀಪಲ್ಸ್ ಸರ್ಜಿಕಲ್ ಅಂಡ್ ಮೆಟರ್ನಿಟಿ ಹೋಮ್ ನಡೆಸುತ್ತಿದ್ದಾರೆ. 

Leave a Reply

Your email address will not be published.