ಸೇವೆ ಸುಲಿಗೆ ಆಗಬಾರದು

ಒಂದು ಕಾಲಘಟ್ಟದಲ್ಲಿ “ವೈದ್ಯೋ ನಾರಾಯಣ ಹರಿ’’ ಎಂಬ ನಾಣ್ಣುಡಿಯನ್ನು ಮಂತ್ರದಂತೆ ಜಪಿಸಲಾಗುತ್ತಿತ್ತು. ರೋಗಿಗಳ ಸೇವೆ ಮಾಡುವುದೇ ಪರಮಾರ್ಥ ಕಾಯಕವೆಂದು ಮನಗಂಡು ಯಾವುದೇ ರೀತಿಯ ಆಸೆ ಆಮಿಷಗಳಿಗೆ ದಾಸರಾಗದೆ ತಮ್ಮ ಉಸಿರಿರುವ ತನಕ ಬದುಕನ್ನು ಮುಡುಪಾಗಿಟ್ಟಿದ್ದ ವೈದ್ಯರಿದ್ದರು ಎಂದರೆ ಇಂದಿನವರು ಪರಮಾಶ್ಚರ್ಯ ಪಡುವುದರಲ್ಲಿ ಸಂದೇಹವಿಲ್ಲ. ಮಾನವನ ಬದುಕಿನ ಸಂತೋಷ ಹಾಗೂ ಸಾರ್ಥಕತೆಗೆ ಆರೋಗ್ಯ ಮತ್ತು ಶಿಕ್ಷಣಗಳ ಅವಲಂಬನೆ ಅಪಾರ ಎಂಬುದನ್ನು ಯಾರೂ ಅಲ್ಲಗಳೆಯಲಾರರು.

ಹಿಂದೆ ಕೇವಲ ರೋಗಿಗಳ ನಾಡಿ ಮಿಡಿತದಿಂದಲೇ ರೋಗದ ಮೂಲ ಅರಿತು ಸೂಕ್ತ ಚಿಕಿತ್ಸೆ ನೀಡಿ ರೋಗವನ್ನು ಗುಣ ಪಡಿಸುತ್ತಿದ್ದ ವೈದ್ಯರಿದ್ದರು ಎಂಬುದು ಸುಳ್ಳೇನಲ್ಲ. ಶಿಕ್ಷಣವೇ ಮಾನವನ ಎಲ್ಲ ಸಮಸ್ಯೆಗಳಿಗೆ ರಾಮಬಾಣ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಇಂದು ವೈದ್ಯಕೀಯ ಕ್ಷೇತ್ರ ಮಹತ್ತರ ಸಾಧನೆಗಳೊಂದಿಗೆ ಬೃಹದಾಕಾರವಾಗಿ ಹೆಮ್ಮರದಂತೆ ಎತ್ತರಕ್ಕೆ ಬೆಳೆದು ನಿಂತಿದೆ. ವಿದೇಶಗಳಲ್ಲಿ ಸೂಕ್ತ ಚಿಕಿತ್ಸೆಯ ಅಭಾವದಿಂದ ನಮ್ಮ ದೇಶಕ್ಕೆ ಬಂದು ನುರಿತ ವೈದ್ಯರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿರುವ ರೋಗಿಗಳ ಸಂಖ್ಯೆಗೆ ಲೆಕ್ಕ ಇಟ್ಟವರುಂಟೆ? ತಮ್ಮ ಅಪ್ರತಿಮ ಮೇಧಾವಿತನದಿಂದ ಎಂತೆಂಥ ಮಾರಕ ಕಾಯಿಲೆಗಳನ್ನು ಗುಣಪಡಿಸಿ ಪ್ರಪಂಚದಾದ್ಯಂತ ಹೆಸರು ಮಾಡಿದ ವೈದ್ಯರು ನಮ್ಮ ದೇಶದವರು ಎಂಬ ಹೆಗ್ಗಳಿಕೆ ಹೆಮ್ಮೆ ತರುವ ವಿಷಯವಲ್ಲದೇ ಮತ್ತೇನು?

ಇಷ್ಟಾದ್ರೂ ಒಂದು ದುರಂತದ ವಿಚಾರವೆಂದರೆ ಇಂದಿನ ಬಹುತೇಕ ವಿಶ್ವವಿದ್ಯಾಲಯಗಳು ಯೋಗ್ಯತಾ ಪತ್ರಗಳನ್ನು ನೀಡುತ್ತಿವೆಯಾದರೂ ಅದಕ್ಕೆ ತಕ್ಕ ಹಾಗೆ ಯೋಗ್ಯತೆಯನ್ನು ನೀಡುತ್ತಿಲ್ಲ ಎಂಬುದು ವಿಷಾದಕರ ಸಂಗತಿಯಾಗಿದೆ. ಮಾನವೀಯತೆಯ ದೃಷ್ಟಿಯಿಂದ ಚಿಕಿತ್ಸೆ ನೀಡುವ ವೈದ್ಯರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ವೈದ್ಯಕೀಯ ಕ್ಷೇತ್ರ ಇರುವುದೇ ಹಣ ಸಂಪಾದಿಸುವುದಕ್ಕಾಗಿ ಎಂಬ ಧೋರಣೆಯನ್ನು ಅನುಸರಿಸುತ್ತಿರುವ ವೈದ್ಯರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಇಂದು ಗುಡ್ಡಗಾಡು ಹಾಗೂ ಗ್ರಾಮೀಣ ಪ್ರದೇಶಗಳಿಗೆ ವೈದ್ಯರುಗಳನ್ನು ನೇಮಕ ಮಾಡಿದರೆ ಅಂಥ ಸ್ಥಳಗಳಿಗೆ ಹೋಗಲು ನಿರಾಕರಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂತಹ ವೈದ್ಯರ ಮನಸ್ಥಿತಿ ಏನೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಂತಹ ಪ್ರದೇಶದಲ್ಲಿನ ರೋಗಿಗಳನ್ನು ಗುಣಪಡಿಸುವವರಾರು?

ಸಹಮಾನವರನ್ನು ಸಮಾನತೆ ಹಾಗೂ ಸಹಾನುಭೂತಿಯಿಂದ ಕಾಣುತ್ತಾ ಅಂತವರನ್ನು ಅಪಾಯದಿಂದ ಪಾರು ಮಾಡುವ ವೈದ್ಯರು ನಿಜಕ್ಕೂ ಪ್ರಾಥಃಸ್ಮರಣೀಯರೇ ಸರಿ. ಆದುದರಿಂದ ನಾವೆಲ್ಲರೂ ವೈದ್ಯರನ್ನು ವೈದ್ಯೋ ನಾರಾಯಣ ಹರಿ ಎಂದು ಗೌರವಿಸುತ್ತಿರುವುದು ಇದೇ ಕಾರಣದಿಂದಲೇ ಎಂಬುದನ್ನು ಮರೆಯಬಾರದು. ಅಂತೆಯೇ ಚರಕ ಮಹರ್ಷಿಯವರು ಅಗಾಧ ಜ್ಞಾನ ಸಂಪಾದನೆ, ಪ್ರಾಯೋಗಿಕ ಅನುಭವಗಳು, ದಕ್ಷತೆ ಮತ್ತು ಪವಿತ್ರತೆ ಎಂಬ ವೈಶಿಷ್ಟ್ಯಪೂರ್ಣ ಗುಣಗಳು ಯಾವುದೇ ವೈದ್ಯನ ಅರ್ಹತೆಗಳಾಗಿರಬೇಕೆಂದು ಸಾರಿದ್ದಾರೆ.

ಇಂದು ರೋಗಿಯನ್ನು ಗುಣಪಡಿಸುವ ಮತ್ತು ರೋಗಿಯನ್ನು ರೋಗದ ಅಪಾಯದಿಂದ ಪಾರು ಮಾಡುವ ಕ್ರಿಯೆಗಳೆರಡರ ನಡುವಿನ ಅಂತರ ಕ್ಷೀಣಿಸುತ್ತಿದೆ ಎನ್ನಬಹುದು. ಇದರ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿನ ಗುಣಮಟ್ಟ, ಪಾರದರ್ಶಕತೆ ನಿರೀಕ್ಷಿತ ಮಟ್ಟವನ್ನು ಮುಟ್ಟದಿರುವುದು ವಿಷಾದನೀಯವಾಗಿದೆ. ಪವಿತ್ರವಾದ ಚಿಕಿತ್ಸೆಯ ಕರ್ತವ್ಯ ಸೇವೆ ಆಗಿರಬೇಕೇ ಹೊರತು ಸುಲಿಗೆ ಆಗಬಾರದು.

ವೈದ್ಯಕೀಯ ಶಿಕ್ಷಣದ ಅಡಿಪಾಯವೇ ದುರ್ಬಲ ಹಾಗೂ ಅಸ್ಥಿರ ಇಟ್ಟಿಗೆಗಳಿಂದ ನಿರ್ಮಾಣವಾದರೆ ಭವಿಷ್ಯದಲ್ಲಿ ಮೇಲೇಳುವ ಕಟ್ಟಡ ತನ್ನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗುತ್ತದೆ. ಇಂದು ಗುಡ್ಡಗಾಡು ಹಾಗೂ ಗ್ರಾಮೀಣ ಪ್ರದೇಶಗಳಿಗೆ ವೈದ್ಯರುಗಳನ್ನು ನೇಮಕ ಮಾಡಿದರೆ ಅಂಥ ಸ್ಥಳಗಳಿಗೆ ಹೋಗಲು ನಿರಾಕರಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂತಹ ವೈದ್ಯರ ಮನಸ್ಥಿತಿ ಏನೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಂತಹ ಪ್ರದೇಶದಲ್ಲಿನ ರೋಗಿಗಳನ್ನು ಗುಣಪಡಿಸುವವರಾರು? ಇದು ಇಂದಿಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ ಎನ್ನಬಹುದು. ಆದುದರಿಂದ ರೋಗಿಗಳ ಸೇವೆ ದೇವರ ಪವಿತ್ರವಾದ ಕಾರ್ಯವೆಂದು ಭಾವಿಸಿ, ಬಡವ ಬಲ್ಲಿದನೆಂಬ ತಾರತಮ್ಯ ತೋರದೆ ನಿಸ್ಪೃಹತೆಯಿಂದ ಚಿಕಿತ್ಸೆ ನೀಡುವುದರ ಮೂಲಕ ಈ ವೈದ್ಯ ವೃತ್ತಿಯನ್ನು ಸಾಮಾನ್ಯ ವೃತ್ತಿ ಎಂಬಂತೆ ಪರಿಗಣಿಸಬಾರದು ಎಂಬುದು ಪ್ರತಿಯೊಬ್ಬ ಜನಸಾಮಾನ್ಯರ ವಿನಮ್ರ ಕೋರಿಕೆಯಾಗಿದೆ.

Leave a Reply

Your email address will not be published.