ಸೈರೋಬನ ಕತ್ತರಿ ಮತ್ತು ಪುಟ್ಟನ ಕಿವಿ

ತಮ್ಮಣ್ಣ ಬೀಗಾರ

ಸೈರೋಬ ಒಂದು ಬೀಡಿ ಹಚ್ಚಿ ಬಾಯಿಯ ಒಂದು ಬದಿಯಲ್ಲಿ ಇಟ್ಟುಕೊಂಡು ಅದನ್ನು ಕೈಯಿಂದ ಮುಟ್ಟದೆ ಹಾಗೆಯೇ ಉಸಿರನ್ನು ಜಗ್ಗಿ ಜಗ್ಗಿ ಹೊಗೆ ಕುಡಿದು ಬಾಯಿಯ ಇನ್ನೊಂದು ಬದಿಯಿಂದ ಹೊಗೆಯನ್ನು ಬುಸ್ ಎಂದು ಬಿಡುತ್ತ ಕಣ್ಣಿನಲ್ಲಿಯೇ ನನ್ನನ್ನು ಹತ್ತಿರ ಕರೆದು ಕೂಡ್ರಿಸಿಕೊಂಡ.

ಸೈರೋಬ ಬಂದ ಎಂದು ಅಪ್ಪಯ್ಯ ಹೇಳಿದ್ದು ಕೇಳಿತು. ನನ್ನ ತಲೆಯ ಕೂದಲ ನಡುವೆ ಬೆರಳು ತೂರಿ ಎತ್ತಿ ಎಷ್ಟು ಉದ್ದವಾಗಿದೆ ಎಂದು ಅಂದಾಜಿಸಿದೆ. ಕನ್ನಡಿಯಲ್ಲಿ ನೋಡೋಣವೆಂದರೆ ನಮ್ಮ ಮನೆಯಲ್ಲಿರುವ ಪುಟ್ಟ ಕನ್ನಡಿಯನ್ನು ನಾವು ಒಡೆದುಹಾಕಬಹುದೆಂದು ನಮಗೆ ಸಿಗದಂತೆ ಅಪ್ಪಯ್ಯ ಎತ್ತಿ ಎಲ್ಲೋ ಮೇಲಿನ ಹಲಿಗೆಯ ಮೇಲೆ ಇಟ್ಟಿರಬೇಕು. ಅಪ್ಪಯ್ಯನಿಗೆ ದಾಡಿ ಮಾಡಿಕೊಳ್ಳುವಾಗ ಅದು ಬೇಕೇ ಬೇಕು. ಒಂದೊಂದು ಸಾರಿ ಕನ್ನಡಿಯಲ್ಲಿ ಸರಿಯಾಗಿ ಕಾಣದೆನನ್ನ ಮೀಸೆಯ ಎರಡೂ ತುದಿ ಸರಿಯಾಗಿದೆಯಾ, ಎಲ್ಲಾದರೂ ದಾಡಿಯ ಕೂದಲು ಉಳಿದಿದೆಯಾಎಂದೆಲ್ಲ ನಮ್ಮ ಹತ್ತಿರ ಕೇಳತೊಡಗುತ್ತಾನೆ. ಅವನ ಮೀಸೆಯ ಕುರಿತಾಗಿ ಅಷ್ಟೊಂದು ತಿಳಿವಳಿಕೆ ಇಲ್ಲದ ನಾವು ಸಾಮಾನ್ಯ ಸರಿಯಾಗಿ ಕಂಡರೆ ಸಾಕು ಸರಿಯಾಗಿದೆ ಅಂತಲೇ ಹೇಳುತ್ತೇವೆ.

ಹಾಂ, ಸೈರೋಬ ಬಂದಿದ್ದು ಯಾಕೆ ನಿಮಗೆ ಗೊತ್ತಾಗಲಿಲ್ಲ. ಸೈರೋಬ ಮುದುಕ. ಅವನಿಗೆ ಕನ್ನಡಕವಿಲ್ಲ. ಕೈ ಆಗಲೇ ನಡುಗಲು ಶುರುವಾಗಿತ್ತು. ಅವನೇ ನಮಗೆಲ್ಲ ಕ್ಷೌರ ಮಾಡುವ ಪ್ರೀತಿಯ ಅಜ್ಜ. ಆಗ ನಮ್ಮ ಹಳ್ಳಿಯಲ್ಲಿ ಕ್ಷೌರದ ಅಂಗಡಿಗಳು ಇರಲಿಲ್ಲ. ಸೈರೋಬಜ್ಜನೇ ಆಗಾಗ ನಮ್ಮ ಮನೆಗೆ ಬಂದು ಕ್ಷೌರ ಮಾಡಿ ಹೋಗುತ್ತಿದ್ದ. ಕೆಲವು ಯುವಕರು ಮಾತ್ರ ಪೇಟೆಗೆ ಹೋಗಿ ಕ್ಷೌರ ಮಾಡಿಸಿಕೊಂಡು ಬರುತ್ತಿದ್ದರು. ಅವರ ತಲೆಯನ್ನು ನೋಡಿದ ನಮಗೆ ಅವರ ಹಾಗೇ ನಮ್ಮ ಕೂದಲು ಇರಬೇಕಿತ್ತೆಂದೆಲ್ಲಾ ಆಸೆಯಾಗುತ್ತಿತ್ತು.

ಸೈರೋಬನಿಗೆ ತಲೆ ಕೊಡುವುದಕ್ಕೆ ನನಗೆ ಹೆದರಿಕೆ. ಹೌದು, ಹೆದರಿಕೆ ಯಾಕೆಂದರೆ ನನ್ನ ಉದ್ದನೆಯ ಕೂದಲನ್ನು ತುಂಬಾ ಚಿಕ್ಕದಾಗಿ ಬೋಳಾಗಿಸುತ್ತಾನೆ ಎಂಬುದು ನನ್ನ ಭಯ. ಸೈರೋಬ ತಿಂಗಳಿಗೊಂದು ಸಾರಿ ಬರುತ್ತಾನೆ ಎಂದು ಹೇಳಲಾಗದು. ಅವನು ಎರಡು ಮೂರು ತಿಂಗಳು ಬರದೇ ಇದ್ದರೆ ನಮ್ಮ ಕೂದಲು ತುಂಬಾ ಉದ್ದವಾಗಿ ಸ್ನಾನ ಮಾಡಿದಾಗ, ಹಳ್ಳ ಈಜಿದಾಗ ಕೂದಲಲ್ಲಿ ನೀರು ಸಂಗ್ರಹವಾಗಿ ಬಹಳ ಹೊತ್ತು ಇರುತ್ತದೆ. ಇದರಿಂದಾಗಿ ನಮಗೆ ಮೇಲಿಂದ ಮೇಲೆ ತಂಡಿಜ್ವರ ಬರುತ್ತದೆ ಎಂಬುದು ಅಪ್ಪಯ್ಯನ ಕಾಳಜಿ. ಇದಕ್ಕೆ ಅಬ್ಬೆಯದೂ ಸಹಮತವೇ. ಜೊತೆಗೆ ತಲೆಯಲ್ಲಿ ಹೇನು ಮೊಟ್ಟೆಗಳೊಂದಿಗೆ ತುಂಬಿಕೊಳ್ಳುತ್ತದೆ. ತಲೆಯೊಳಗೆಲ್ಲಾ ಕಜ್ಜಿ ಆಗಬಹುದು ಎಂಬುದಕ್ಕೆಲ್ಲಾ ಮುಂಜಾಗ್ರತೆ.

ನಿಜ, ನಮ್ಮ ಶಾಲೆಯಲ್ಲಿ ಎಷ್ಟೋ ಹೆಣ್ಣುಮಕ್ಕಳಿಗೆ ತಲೆಯಲ್ಲಿ ಹೇನು ತುಂಬಿಹೋಗಿನಂತರ ಕಜ್ಜಿ ಆಗಲು ಪ್ರಾರಂಭ ಆದಾಗ ಅವರ ಪಾಲಕರು ಹೇನನ್ನು ನಿಯಂತ್ರಿಸಲಾಗದೆ ಅವರ ಕೂದಲನ್ನು ಚಿಕ್ಕದಾಗಿ ಕತ್ತರಿಸಿ ಬೋಳಾಗಿಸುತ್ತಿದ್ದರು. ಆಗ ಅವರನ್ನು ನೋಡಿದಾಗ ಒಂದು ರೀತಿಯ ನೋವಾಗುತ್ತಿತ್ತು. ನಮಗಂತೂ ಹೀಗಾಗುವುದು ಬೇಡಪ್ಪಾ ಎಂದು ಅನಿಸುತ್ತಿತ್ತಾದರೂ ತಲೆಯ ಮುಂಭಾಗದ ಕೂದಲನ್ನು ಎಳೆದರೆ ಅದು ಹಣೆಯನ್ನು ದಾಟಿ ಕಣ್ಣು ಹುಬ್ಬಿನ ಕೆಳಗೆ ಬರುವಷ್ಟು ಇರಲೇ ಬೇಕು ಎಂದು ಮನಸ್ಸೇ ನಿರ್ಧರಿಸಿಬಿಟ್ಟಿತ್ತು. ಹಾಗಾಗಿ ಸೈರೋಬನಿಗೆ ತಲೆ ನೀಡುವ ಮೊದಲು ನಾನು ಅಣ್ಣ ತಲೆಯ ಮುಂಭಾಗದ ಕೂದಲನ್ನು ಜಗ್ಗಿ ಜಗ್ಗಿ ತೋರಿಸುತ್ತ ಅದು ಕಣ್ಣು ಹುಬ್ಬಿನ ವರೆಗೆ ಇರಬೇಕು ಎಂದು ಅವನಲ್ಲಿ ಪದೇ ಪದೇ ಹೇಳುತ್ತಿದ್ದೆವು. ಆದರೆ ಅಪ್ಪಯ್ಯ ಅವನ ಹತ್ತಿರ ಸಣ್ಣದಾಗಿ ಕೂದಲು ಕತ್ತರಿಸು, ನಾಲ್ಕೇ ದಿನಕ್ಕೆ ಕರಡಿಯ ಹಾಗೆ ಆಗಿಬಿಡುತ್ತಾರೆ, ಹೇನಾಗಿ ತುಂಬಿ ಹೋಗುತ್ತದೆ ಎಂದೆಲ್ಲ ಹೇಳಲು ತೊಡಗಿದರೆನಮ್ಮ ಕಣ್ಣಲ್ಲಿ ನೀರು ಇಳಿಯತೊಡಗುತ್ತಿತ್ತು. ಆಗ ಏನೂ ಆಗದು ಹೋಗಿ. ಸಾರಿ ಉದ್ದ ಕೂದಲು ಇಡಲು ಹೇಳುತ್ತೇನೆ ಎಂದು ಅಪ್ಪಯ್ಯ ಹೇಳಿ ನಮ್ಮನ್ನು ಸೈರೋಬನ ಮುಂದೆ ಕೂಡ್ರಿಸುತ್ತಿದ್ದ.

ಸೈರೋಬನ ಹತ್ತಿರ ಒಂದು ಪುಟ್ಟ ಮರದ ಪೆಟ್ಟಿಗೆ ಇದೆ. ಅದನ್ನು ತೆರೆದರೆ ಅದರೊಳಗೆ ಒಂದೆರಡು ಕತ್ತರಿ, ಚೂರಿ, ನುಣುಪು ಕಲ್ಲು, ಕೊಬ್ಬರಿ ಎಣ್ಣೆ ಹಾಕಲು ಬಾಟಲಿ, ಬಾಚಣಿಕೆ ಎಲ್ಲ ಇಟ್ಟುಕೊಂಡಿರುತ್ತಾನೆ. ಆಗ ದಾಡಿ ಮೊದಲಾದ ಕೂದಲನ್ನು ಕೆತ್ತಲು ಈಗಿನ ಹಾಗೆ ಬ್ಲೇಡ್ ಬಳಕೆ ಕಡಿಮೆಯಾಗಿತ್ತು. ಆಗಲೇ ಹೇಳಿದ ಹಾಗೆ ಅವನ ಹತ್ತಿರ ಚೂರಿ ಎನ್ನುವ ಕಬ್ಬಿಣದ ಗೇಣುದ್ದದ ಹರಿತವಾದ ಆಯುಧ ಇತ್ತು. ಅವನು ಪೆಟ್ಟಿಗೆ ತೆರೆದೊಡನೆ ಕೊಬ್ಬರಿಎಣ್ಣೆ ತರಲು ಹೇಳುತ್ತಿದ್ದ. ನಾವು ಒಂದು ಲೋಟದಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆ ತಂದುಕೊಟ್ಟಾಗ ಅವನ ಹತ್ತಿರ ಇರುವ ನುಣುಪಾದ ಕಲ್ಲಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿಕೊಳ್ಳುತ್ತಿದ್ದ. ನಂತರ ಪೆಟ್ಟಿಗೆಯಲ್ಲಿ ಬಟ್ಟೆಯಿಂದ ಸುತ್ತಿಟ್ಟಿದ್ದ ಚೂರಿಯನ್ನು ಹೊರಕ್ಕೆ ತೆಗೆದು ಬಟ್ಟೆ ತೆಗೆದುಹಾಕಿ ಚೂರಿಯನ್ನು ಎಣ್ಣೆ ಹಾಕಿದ ಕಲ್ಲಿನ ಮೇಲೆ ಮಸೆಯುತ್ತಿದ್ದ.

ಆಗೆಲ್ಲ ಸೈರೋಬ ನಮ್ಮನ್ನು ನೋಡುತ್ತ ಹಲ್ಲಿಲ್ಲದ ಬಾಯಿಯನ್ನು ಅಗಲಿಸಿ ನಗೆಯಾಡುತ್ತಿದ್ದರೆ ನಮಗೆ ಖುಷಿ ಆಗುತ್ತಿತ್ತು. ಜೊತೆಯಲ್ಲಿ ಬಾಯಿಯಿಂದ ಬೀಡಿಯ ವಾಸನೆ ಘಮ್ ಎಂದು ಬರುತ್ತಿತ್ತು. ಚೂರಿ ಸವೆಸಿ ಆದ ಮೇಲೆ ಉಳಿದ ಕೊಬ್ಬರಿ ಎಣ್ಣೆ ತನ್ನ ತಲೆಗೆ ಹಾಕಿಕೊಂಡು ತನ್ನ ಕೈಕಾಲುಗಳಿಗೆಲ್ಲಾ ಸವರಿಕೊಂಡು ಖಾಲಿ ಮಾಡಿ ಲೋಟ ಹಿಂದಿರುಗಿಸುತ್ತಿದ್ದ. ಬಟ್ಟೆ ತೊಳೆಯುವ ಸೋಪಿನ ಒಂದು ಚೂರು, ಒಂದು ತಂಬಿಗೆ ಬಿಸಿ ನೀರು, ಕೂಡ್ರಲು ಅಡಿಕೆ ಸೋಗೆಯ ಹಾಳೆ ಇವು ಆಗ ಬೇಕಾಗುವ ಸಾಮಗ್ರಿಗಳೆ.

ಎಂದಿನಂತೆ ಅಪ್ಪಯ್ಯ ಕೂದಲು ಬಹಳ ಚಿಕ್ಕದು ಮಾಡಬೇಡ ಎಂದು ಹೇಳುತ್ತೇನೆ ಹೋಗು ಹೋಗು ಎಂದು ಒತ್ತಾಯಿಸಿದಾಗ ನಾನೇ ಮೊದಲು ಅಂಗಿ ತೆಗೆದಿಟ್ಟು ತಲೆಯ ಮುಂದಿನ ಕೂದಲನ್ನು ಜಗ್ಗುತ್ತ ಇಷ್ಟು ಉದ್ದವಿದೆ, ಅದನ್ನು ಬಹಳ ಸಣ್ಣದಾಗಿಸಬಾರದು ಎಂಬ ಸೂಚನೆ ನೀಡುತ್ತ ಹೋಗಿ ಕುಳಿತೆ. ಆಗಲೇ ಸೈರೋಬ ಒಂದು ಬೀಡಿ ಹಚ್ಚಿ ಬಾಯಿಯ ಒಂದು ಬದಿಯಲ್ಲಿ ಇಟ್ಟುಕೊಂಡು ಅದನ್ನು ಕೈಯಿಂದ ಮುಟ್ಟದೆ ಹಾಗೆಯೇ ಉಸಿರನ್ನು ಜಗ್ಗಿ ಜಗ್ಗಿ ಹೊಗೆ ಕುಡಿದು ಬಾಯಿಯ ಇನ್ನೊಂದು ಬದಿಯಿಂದ ಹೊಗೆಯನ್ನು ಬುಸ್ ಎಂದು ಬಿಡುತ್ತ ಕಣ್ಣಿನಲ್ಲಿಯೇ ನನ್ನನ್ನು ಹತ್ತಿರ ಕರೆದು ಕೂಡ್ರಿಸಿಕೊಂಡ. ತಲೆಯನ್ನು ಎರಡೂ ಕೈಗಳಿಂದ ಒತ್ತಿ ಕೂದಲೊಳಗೆ ಬೆರಳನ್ನು ತೂರಿ ಮೇಲೆತ್ತಿ ಕೂದಲು ಬಹಳ ದೊಡ್ಡದಾಗಿದೆಎನ್ನುವಂತೆ ಅಪ್ಪಯ್ಯನಿಗೆ ಸನ್ನೆ ಮಾಡಿದ. ಈಗ ಬಾಯಿಂದ ಬೀಡಿ ತೆಗೆದು ಅದರ ತುದಿಯನ್ನು ನಿಧಾನವಾಗಿ ನೆಲಕ್ಕೆ ಒತ್ತಿ ಬೆಂಕಿ ಆರಿಸಿದ. ಬೆಂಕಿ ಆರಿದ ಬೀಡಿ ಮೋಟನ್ನ (ತುಣುಕನ್ನು) ಆಮೇಲೆ ಮತ್ತೆ ಸೇದುವುದಕ್ಕಾಗಿ ತನ್ನ ಕಿವಿಯ ಸಂದಿನಲ್ಲಿ ತೂರಿಕೊಂಡ.

ಈಗ ನನ್ನ ತಲೆಯ ಕೂದಲನ್ನು ಕತ್ತರಿಸಲು ಪ್ರಾರಂಭಿಸಿದ. ಅವನ ಕತ್ತರಿ ಸಾಣೆ ಹಿಡಿಯದೇ ಹರಿತ ಕಡಿಮೆ ಆಗಿದ್ದರಿಂದ ಕೂದಲು ಕತ್ತರಿಸುವಾಗ ಕೂದಲು ಜಾರಿದಂತಾಗಿ ಜಗ್ಗಲ್ಪಡುತ್ತಿತ್ತು. ಇದರಿಂದ ಕೂದಲನ್ನು ಕತ್ತರಿಸುವಾಗ ನೋವಾಗುತ್ತಿತ್ತು. ಆಗ ಒಂದಿಷ್ಟು ಅಲ್ಲಾಡಿದರೆಸಿಟ್ಟು ಮಾಡುತ್ತ ಸುಮ್ಮನೇ ಕೂತಿರಬೇಕು ಎಂದು ಹೇಳುತ್ತಿದ್ದ. ಸೈರೋಬ ಎಲ್ಲೆಲ್ಲಿ ಕೂದಲನ್ನು ಕತ್ತರಿಸುತ್ತಾನೋ ಅದು ಅವನಿಗೆ ಸರಾಗವಾಗಿ ಕತ್ತರಿಸಲು ಸಾಧ್ಯ ಆಗುವಂತೆ ನಾವೇ ಅವನು ಹೇಳಿದಂತೆ ತಿರುಗುವುದಾಗಿತ್ತು.

ಒಂದು ಸಾರಿ ತಲೆ ಎತ್ತುತ್ತಿದ್ದ. ಇನ್ನೊಂದು ಸಾರಿ ತಲೆ ಕೆಳಕ್ಕೆ ಒತ್ತಿ ಹಾಗೇ ಕೂಡ್ರಿಸುತ್ತಿದ್ದ. ಆಗೆಲ್ಲ ಶಾಲೆಯಲ್ಲಿ ಪಾಠ ಓದದ ನಮ್ಮ ಗೆಳೆಯರನ್ನು ಬಗ್ಗಿನಿಲ್ಲಿಸಿ ಗುರುಗಳು ನೀಡುತ್ತದ್ದ ಶಿಕ್ಷೆಯ ನೆನಪಾಗುತ್ತಿತ್ತು. ಆದರೆ ಶಾಲೆಯಲ್ಲಿ ಹಾಗೆ ನಿಂತಿರುವವರು ಒಬ್ಬರಿಗಿಂತ ಹೆಚ್ಚು ಜನರಿರುತ್ತಾರೆ ಹಾಗೂ ಅಲ್ಲೇ ಅವರು ಒಬ್ಬರೊಂದಿಗೊಬ್ಬರು ಮಾತಾಡಿ ಮಜಾ ಮಾಡಿ ಖುಷಿಪಡಬಹುದಾಗಿತ್ತು. ಆದರೆ ಇಲ್ಲಿ ಹಾಗಲ್ಲ. ಒಂದಿಷ್ಟು ಅಲುಗಾಡಲೂ ಆಗದು. ಸೈರೋಬನಿಗೆ ಅಪ್ಪಯ್ಯ ತನ್ನ ಕಣ್ಣು ಹುಬ್ಬಿನಲ್ಲಿಯೇ ಕೂದಲು ಸಣ್ಣ ಮಾಡುವುದನ್ನು ಮುಂದುವರಿಸು ಎಂದು ಸನ್ನೆ ಮಾಡಿದುದನ್ನು ನಾನು ಓರೆಗಣ್ಣಿನಲ್ಲಿಯೇ ನೋಡಿದೆ. ಇದರಿಂದ ನನ್ನ ತಲೆ ಈಸಾರಿ ಬೋಳಾಗುವುದು ಗ್ಯಾರಂಟಿ ಎಂದು ನನಗೆ ಅನಿಸಿತು. ಕುತ್ತಿಗೆಯೂ ನೋಯಲು ಪ್ರಾರಂಭವಾಗಿತ್ತು.

ಪಾಪ ಸೈರೋಬನ ಕೈ ನಡುಗುತ್ತಿತ್ತು. ನಾನು ಒಂದಿಷ್ಟು ತಲೆ ಅಲ್ಲಾಡಿಸಿದೆ. ಸರಿಯಾಗಿ ನಿಲ್ಲು ಎನ್ನುತ್ತ ಸೈರೋಬ ತಲೆಯನ್ನು ಗಟ್ಟಿಯಾಗಿ ಒತ್ತಿ ಕತ್ತರಿ ತೂರಿ ಕಿವಿಹತ್ತಿರದ ಕೂದಲನ್ನು ಕತ್ತರಿಸತೊಡಗಿದ. ಒಮ್ಮೆಗೇ ಚುರಕ್ ಅಂದಂತಾಗಿ ತಲೆಯನ್ನು ಜಗ್ಗಿಕೊಂಡೆ. ಕಿವಿ ಉರಿಯುತ್ತಿತ್ತು. ಕಿವಿಯನ್ನು ಮುಟ್ಟಿದೆ. ಕೈಗೆ ನೀರು ತಾಗಿದಂತಾಗಿ ಕೈ ಕೆಳಗಿಳಿಸಿ ಬೆರಳ ತುದಿಯನ್ನು ನೋಡಿದರೆ ರಕ್ತ ಅಂಟಿ ಬೆರಳು ಒದ್ದೆಯಾಗಿತ್ತು. ಹೌದು, ಸೈರೋಬನ ಕತ್ತರಿ ನನ್ನ ಕಿವಿಯ ಮೇಲ್ಭಾಗದ ಅಂಚನ್ನು ಕತ್ತರಿಸಿ ಹಾಕಿತ್ತು! ನಾನು ದೊಡ್ಡದಾಗಿ ಅಳಲು ಶುರು ಮಾಡಿದಾಗ ಅಲ್ಲಲ್ಲೇ ಕತ್ತರಿ ಆಡಿಸಿ ನನ್ನ ಕೂದಲು ಕತ್ತರಿಸುವ ಕೆಲಸ ಮುಗಿಸಿದ. ನನ್ನ ಕಿವಿಯ ಒಂದು ಚೂರು ಹೋಗಿ ಕಿವಿಯ ಅಂಚು ಸದಾ ಮುಕ್ಕಾಗಿ ಉಳಿಯುವಂತಾದರೂ ಸಾರಿ ನನಗೆ ಉದ್ದ ಕೂದಲು ಉಳಿದು ಖುಷಿ ಆಯಿತು. ಇಂತಹ ಅನುಭವಗಳೆಲ್ಲ ಈಗ ಇಲ್ಲ. ಈಗ ಮೆತ್ತನೆಯ ಕುರ್ಚಿಯಲ್ಲಿ ಕುಳಿತು ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಕೂದಲುಕತ್ತರಿಸಿಕೊಳ್ಳುವಾಗ ಕನ್ನಡಿಯ ಆಳದಲ್ಲಿ ಹಿಂದಿನದೆಲ್ಲ ಕಾಣತೊಡಗಿ ದಿಗಿಲಾಗುತ್ತದೆ ಅಷ್ಟೇ.

*ಲೇಖಕರು ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದವರು; ಸ್ನಾತಕೋತ್ತರ ಪದವೀಧರರು, ನಿವೃತ್ತ ಶಿಕ್ಷಕರು, ಪ್ರಸ್ತುತ ಸಿದ್ದಾಪುರದಲ್ಲಿ ವಾಸ. ಸಾಹಿತ್ಯ, ಚಿತ್ರ ಹಾಗೂ ವ್ಯಂಗ್ಯಚಿತ್ರ ರಚನೆಯಲ್ಲಿ ನಿರತರು.

Leave a Reply

Your email address will not be published.