ಸೋಂಕುರೋಗ ಪ್ರೇರೇಪಿಸಿದ ಆನ್‌ಲೈನ್ ಕ್ರಾಂತಿ ಶಾಶ್ವತವೇ..?

ನಮ್ಮ ದೈನಂದಿನ ಆಗುಹೋಗುಗಳ ಭರಾಟೆಯನ್ನು ಸಂಪೂರ್ಣವಾಗಿ ಕದಡಿ ವ್ಯಾವಹಾರಿಕ ಸಮಾಜದ ಮೂಲಸ್ತಂಭಗಳನ್ನೇ ಅಲುಗಾಡಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗ ಕಳೆದ ಮೂರು ತಿಂಗಳುಗಳಲ್ಲಿ ನಮ್ಮ ಸಂವಹನದ ಗುಣಲಕ್ಷಣಗಳನ್ನೇ ಬದಲಾಯಿಸಿದೆ. ಆತ್ಮೀಯವಾಗಿ ಕೈಕುಲುಕಿ, ಪ್ರೀತಿ ಹೆಚ್ಚಾದರೆ ತಬ್ಬಿಕೊಂಡು, ಶಾಲೆ ಕಾಲೇಜು ಕಛೇರಿ ಸಭೆ ಸಮಾರಂಭಗಳಲ್ಲಿ ನಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮುಕ್ತ ಪರಿಸರದ ಬದಲಿಗೆ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ಆನ್‌ಲೈನ್ ಸಂವಹನ ಮಾಡುವ ಅನಿವಾರ್ಯತೆ ಎದುರಾಗಿದೆ.

ಹಲವಾರು ರೀತಿಯಲ್ಲಿ ನಮ್ಮ ಚಟುವಟಿಕೆಗಳ ಸಾಧನವಾದ ಈ ಆನ್‌ಲೈನ್ ಕ್ರಾಂತಿ ವರ್ಕ್ ಫ್ರಮ್ ಹೋಮ್, ಆನ್‌ಲೈನ್ ಶಿಕ್ಷಣ, ಜೂಮ್ ಮೀಟಿಂಗ್‌ಗಳು, ವೆಬ್‌ಕಾಸ್ಟ್ಗಳು, ಪಾಡ್‌ಕಾಸ್ಟ್ಗಳು, ಡಿಜಿಟಲ್ ಆವೃತ್ತಿಗಳು ಇತ್ಯಾದಿಯಾಗಿ ಪರ್ಯಾಯ ಸಂವಹನ ಮಾಧ್ಯಮಗಳನ್ನೇ ಸೃಷ್ಟಿಸಿವೆ. ಹಿಂದಿನ ದಿನಗಳಲ್ಲಿ ನಾವು ವ್ಯವಹರಿಸುತ್ತಿದ್ದ ರೀತಿಯನ್ನೇ ಬದಲಾಯಿಸಿವೆ. ಹಳೆಯ ಸಂವಹನ ಮಾಧ್ಯಮಗಳು ಅಗತ್ಯವಿತ್ತೇ ಎಂದೂ ಅನ್ನಿಸುವಂತೆ ಮಾಡಿವೆ.

ಈ ಆನ್‌ಲೈನ್ ಕ್ರಾಂತಿ ಅನಗತ್ಯ ಸಂಚಾರ ಹಾಗೂ ದಟ್ಟಣೆ ತಪ್ಪಿಸಿ ಹೆಚ್ಚು ಪರಿಣಾಮಕಾರಿಯಾಗಿ ಸಂವಹನ ಸಾಧ್ಯವಾಗಿಸಿದೆ. ಮುದ್ರಣ ಮತ್ತು ಅಂಚೆ ವೆಚ್ಚಗಳು ತಪ್ಪಿ ಹೆಚ್ಚು ಜನರಿಗೆ ಸುಲಭವಾಗಿ ತಲುಪಲೂ ಸಹಕಾರಿಯಾಗಿದೆ. ಹತ್ತು ಬಾರಿ ಹೇಳಿದ್ದನ್ನೇ ಹೇಳುವ ಬದಲು ಒಮ್ಮೆ ದಾಖಲಿಸಿದ ಮಾತುಗಳು ಸಹಸ್ರಾರು-ಲಕ್ಷಾಂತರ ಜನರಿಗೆ ತುರ್ತಾಗಿ ಮತ್ತು ಏಕಕಾಲಕ್ಕೆ ತಲುಪಲೂ ಸಾಧ್ಯವಾಗಿದೆ. ಗೂಗಲ್, ಅಮೆಜಾನ್ ಸೇರಿದಂತೆ ಈ ಮಾಧ್ಯಮಗಳನ್ನು ಕೊಡಮಾಡುತ್ತಿರುವ ತಾಣಸಂಸ್ಥೆಗಳನ್ನು ಇನ್ನೂ ಹೆಚ್ಚು ಶ್ರೀಮಂತವಾಗಿಸಿ, ಈ ಆನ್‌ಲೈನ್ ಕ್ರಾಂತಿಯ ಸಾಧನ-ವಿಧಾನಗಳು ಶಾಶ್ವತ ಎಂಬ ಗಟ್ಟಿ ಅನಿಸಿಕೆಯನ್ನು ನಮ್ಮ ಮುಂದಿಟ್ಟಿವೆ.

ಈಮಧ್ಯೆ ಎಲ್ಲವನ್ನೂ ಆನ್‌ಲೈನ್‌ನಲ್ಲಿಯೇ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. ಇದೊಂದು ತಾತ್ಕಾಲಿಕ ವರಸೆ ಹಾಗೂ ಈ ಅನಿವಾರ್ಯತೆ ಕಳೆದ ಮೇಲೆ ಇದು ಇರಲಾಗದು ಎಂದೂ ಹೇಳಲಾಗಿದೆ. ಮುಖತಃ ಭೇಟಿಯಗದೆ ಮನೆಯಿಂದಲೇ ವ್ಯವಹರಿಸುವ ಈ ಮಾಧ್ಯಮ ಖಿನ್ನತೆ, ಒಂಟಿತನ ಮತ್ತಿತರ ಮಾನಸಿಕ ಖಾಯಿಲೆಗಳಿಗೆ ನಮ್ಮನ್ನು ಈಡು ಮಾಡುತ್ತದೆ ಎಂದೂ ಆಪಾದಿಸಲಾಗಿದೆ.

  • ಕೊರೊನಾ ಪ್ರೇರೇಪಿಸಿದ ಈ ಆನ್‌ಲೈನ್ ಸಂವಹನ ಕ್ರಾಂತಿ ಶಾಶ್ವತವೇ..? ಅಥವಾ ಕೊರೊನಾ ನಂತರ ಹಿಂದಿನ ಭರವಸೆಯ ಆಫ್‌ಲೈನ್ ವ್ಯವಹಾರ ಮರಳುವುದೇ..?
  • ಇಲ್ಲವೆ, ಕೊರೊನಾ ನಂತರದ ಯುಗದಲ್ಲಿ ಆನ್‌ಲೈನ್ ಅಂಶ ಹೆಚ್ಚಾಗಿ ಅತ್ಯಗತ್ಯ ಸಂದರ್ಭಗಳಲ್ಲಿ ಮಾತ್ರ ನಾವು ಶಾಲೆ, ಕಾಲೇಜು, ಕಛೇರಿ, ಸಭೆ, ಸಮಾರಂಭಗಳಲ್ಲಿ ಪರಸ್ಪರ ಸೇರಿ ಮುಖತಃ ವ್ಯವಹರಿಸುವ ಸನ್ನಿವೇಶ ಒದಗಿ ಬರಲಿದೆಯೇ..?

ಮುಂದಿನ ತಿಂಗಳುಗಳಲ್ಲಿ ನಮ್ಮಯ ಶಿಕ್ಷಣ, ವ್ಯವಹಾರ, ಸಾಂಸ್ಕೃತಿಕ ಪರಿಸರ ಹಾಗೂ ಕೌಟುಂಬಿಕ ಸಂಬಂಧಗಳನ್ನು ವ್ಯಾಖ್ಯಾನಿಸುವ ಈ ಪ್ರಶ್ನೆಗಳು ಅತ್ಯಗತ್ಯ ಹಾಗೂ ಅನಿವಾರ್ಯ ಉತ್ತರಗಳನ್ನು ಬಯಸಿವೆ. ಕೊರೊನಾ ನಂತರ ಯುಗದ ಸಂವಹನ ಸಾಧ್ಯತೆಗಳನ್ನು ವಿಶ್ಲೇಷಿಸುವ ಅಗತ್ಯವೂ ಇದೆ. ಎಂದಿನತೆ ನಿಮ್ಮ ಸಮಾಜಮುಖಿ ಪತ್ರಿಕೆ ಪರಿಣತರ ಅಭಿಪ್ರಾಯಗಳನ್ನು ನಿಮ್ಮ ಮುಂದಿಡಲಿದೆ. ಈ ವಿಷಯದಲ್ಲಿ ನಿಮ್ಮ ಅನಿಸಿಕೆ ಅನುಭವಗಳನ್ನು ಹಂಚಿಕೊಳ್ಳಲು ನಿಮಗೆ ಸದವಕಾಶವೂ ಇದೆ. ನಿಮ್ಮ ಬರಹಗಳು ಜೂನ್ 20 ರೊಳಗೆ ನಮ್ಮಕೈ ಸೇರಲಿ.

ಸಮಾಜಮುಖಿ ನಂ.8, ಡಾ.ಎಚ್.ಎಲ್.ನಾಗೇಗೌಡ ರಸ್ತೆ (ಸರ್ಪೆಂಟೈನ್ ರಸ್ತೆ),

ಕುಮಾರ ಪಾರ್ಕ್ ಪಶ್ಚಿಮ, ಶೇಷಾದ್ರಿಪುರಂ, ಬೆಂಗಳೂರು-560020, ಮೊ:9606934018  samajamukhi2017@gmail.com

Leave a Reply

Your email address will not be published.