ಸೋಂಕು ಸಮಯದಲ್ಲಿ ಬೇಕು ಸನ್ನದ್ಧ ಪಡೆ!

-ಡಾ.ಕೆ.ಎಸ್.ಪವಿತ್ರ

`ಕೊರೋನಾ’ ದಂತಹ ಸೋಂಕಿನ ಸಂದರ್ಭದಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಧರಿಸುವ, ಕೈ ತೊಳೆದುಕೊಳ್ಳುವ ಕಾರ್ಯಗಳಿಗೆ ನಾವು ಸಲಹೆ ನೀಡುತ್ತೇವಷ್ಟೆ. ಆದರೆ ಮನಸ್ಸಿನ `ಭಯ’ವನ್ನು ನಿಭಾಯಿಸುವ ಬಗ್ಗೆ?

ನಿಧಾನವಾಗಿ ಕೊರೋನಾ ಆತಂಕಕ್ಕೆ ಜಗತ್ತು ಹೊಂದಿಕೊಳ್ಳುತ್ತಿದೆ. ಕೊರೋನಾ ನಮಗೆ ಬರಬಹುದೇನೋ ಎಂಬ ಆತಂಕದ ಜೊತೆಗೇ, ಕೊರೋನಾ ಸೋಂಕು ಬಂದವರಲ್ಲಿಯೂ ಪ್ರತಿರೋಧಕ ಕಾಯಗಳು (ಆ್ಯಂಟಿಬಾಡಿಗಳು) ಉತ್ಪತ್ತಿಯಾಗದಿರುವುದು ಆತಂಕ ಮತ್ತಷ್ಟು ಹೆಚ್ಚಿಸಿದೆ. ಅಂದರೆ ಲಸಿಕೆ ಬಂತು ಎಂದರೂ ಕೊರೋನಾದಂತಹ ಸೋಂಕಿನಿಂದ ತಪ್ಪಿಸಿಕೊಳ್ಳುವುದು ಖಂಡಿತವಲ್ಲ ಎಂಬುದು ಗೊತ್ತಾಗುತ್ತಿದೆ. ಈ ಅನುಭವ ವೈದ್ಯಕೀಯ ಜಗತ್ತಿಗೆ ಹೊಸತೇನೂ ಅಲ್ಲ.

ಸುಮಾರು 65 ವರ್ಷಗಳ ಹಿಂದೆ ಮಕ್ಕಳ ಬಾಲ್ಯದಲ್ಲಿ ಬಹು ಮುಖ್ಯ ಭಯ ಯುದ್ಧದ ಬಗೆಗೆ ಆಗಿತ್ತಂತೆ.  ಅಮೆರಿಕಾ-ಜಪಾನ್‍ಗಳಲ್ಲಿ ಪರಮಾಣು ಯುದ್ಧವಾದರೆ ಎಂಬ ಭಯದಿಂದ ನೆಲಮಾಳಿಗೆಯಲ್ಲಿ ನೀರು-ಆಹಾರದ ಕ್ಯಾನ್‍ಗಳನ್ನು ಅಡಗಿಸಿ, ಸಿದ್ಧವಾಗಿರುತ್ತಿದ್ದರು. ಪರಮಾಣು ಯುದ್ಧದ ದಾಳಿ ಮನೆಯ ಮೇಲೆ ನಡೆದರೆ, ಮನೆಯವರೆಲ್ಲರೂ ಕೆಳಗೆ ಹೋಗಿ ಅವಿತು, ಆಹಾರ-ನೀರಿನಿಂದ ಹೇಗೋ ಬದುಕಿಕೊಳ್ಳುವ ಉಪಾಯ ಇದಾಗಿತ್ತು.

ಇಂದಿನ ಭಯ ಯುದ್ಧದ ಬಗೆಗಲ್ಲ. ಮುಂದಿನ ಕೆಲವು ದಶಕಗಳಲ್ಲಿ ಮಿಲಿಯನ್‍ಗಟ್ಟಲೆ ಜನ ಸಾಯಬಹುದಾದರೆ ಅದು ಸೋಂಕು ಹರಡುವ ವೈರಸ್‍ಗಳಿಂದ. ಕ್ಷಿಪಣಿಗಳ ಬದಲು ಮೈಕ್ರೋಬ್-ಸೂಕ್ಷ್ಮಜೀವಿಗಳಿಂದ! ಆರೋಗ್ಯ ಕ್ಷೇತ್ರದಲ್ಲಿ ನಾವು ಹೂಡಿರುವ ಬಂಡವಾಳ, ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಬಲು ಕಡಿಮೆ. ಅದರಲ್ಲಿಯೂ ಆರೋಗ್ಯ ಕ್ಷೇತ್ರದ ಮೂಲಭೂತ ತತ್ವಗಳಿಗೆ ನಾವು ನೀಡಿರುವ ಗಮನವಂತೂ ತೀರ ಗೌಣ. ಆದ್ದರಿಂದ ಈಗೊಮ್ಮೆ ಕೊರೋನಾ ನಿಯಂತ್ರಣಕ್ಕೆ ಬಂದರೂ, ಮತ್ತೊಂದು ಅದೇ ರೀತಿಯ ಪರಿಸ್ಥಿತಿಗೆ ನಾವು ಸಿದ್ಧರಾಗದೆ ಉಳಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಈ ಹಿಂದೆ ಎಬೋಲಾ ಎಂಬ ವೈರಸ್ ಜಗತ್ತಿನ ಹಲವು ದೇಶಗಳನ್ನು ಕಾಡಿತ್ತು. ಆಗಲೂ ಮುಂದುವರಿದ ದೇಶಗಳಲ್ಲೂ ಸಾಂಕ್ರಾಮಿಕ ರೋಗಗಳನ್ನು ವಿಶ್ಲೇಷಿಸುವ ತಜ್ಞರು (epidemiologists) ಇರಲಿಲ್ಲ, ಪರೀಕ್ಷೆ-ಚಿಕಿತ್ಸೆ ಹೇಗೆ ನಡೆಸಬೇಕು ಎಂಬ ಬಗ್ಗೆ ಯಾವ ಕಲ್ಪನೆಯೂ ಇರಲಿಲ್ಲ, ಮೂಲಭೂತ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಕಾರ್ಯಕರ್ತರೂ ಇರಲಿಲ್ಲ.

ಸ್ನಾತಕೋತ್ತರ ವೈದ್ಯಕೀಯ ಪದವಿಯಲ್ಲಿ ಸಮುದಾಯ ಆರೋಗ್ಯ ಅಥವಾ ಸಾರ್ವಜನಿಕ ಆರೋಗ್ಯ – Public health ಅಥವಾ `ತಡೆಯುವಿಕೆ ಮತ್ತು ಸಾಮಾಜಿಕ ಆರೋಗ್ಯ’ Preventive and social medicine ಎಂಬ ವಿಶೇಷ ಪರಿಣತಿಯ ಕ್ಷೇತ್ರವೊಂದಿದೆ. ಎರಡನೇ ವರ್ಷದ ಕೊನೆಯಾರ್ಧದಲ್ಲಿ ಅಥವಾ ಮೂರನೇ ವರ್ಷದಲ್ಲಿ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ಇದೊಂದು ಬಹು ಮುಖ್ಯ ವಿಷಯ. ಆದರೆ ಸ್ನಾತಕೋತ್ತರ ಪದವಿಗೆ ಈ ವಿಷಯವನ್ನು ವೈದ್ಯರು ಆರಿಸಿಕೊಳ್ಳುವುದು, ಬೇರೆ ಯಾವುದೂ ಸಿಗದಿದ್ದಾಗ ಮಾತ್ರ!

ಎಬೋಲಾ, ಕೊರೋನಾದಂತಹ ಸೋಂಕುಗಳ ಸಮಯದಲ್ಲಿ ಮುಖ್ಯವಾಗಿ ಬೇಕಾಗುವುದು ಈ ಪರಿಣತ ತಜ್ಞರೇ. ಆದರೆ ಅವರ ಕೆಲಸ ಸೋಂಕಿನ ಸಮಯಕ್ಕೆ ಮಾತ್ರ ಸೀಮಿತವಲ್ಲ. ಸೋಂಕು-ಸಾಮಾಜಿಕ ಆರೋಗ್ಯ ಯಾವುದೇ ವೈದ್ಯಕೀಯ ವಿಶೇಷ ಕ್ಷೇತ್ರದಲ್ಲಿ ಇರುವ ಸಾಮಾಜಿಕ ಮತ್ತು ರೋಗ ತಡೆಯುವಿಕೆಯ ಅಂಶಗಳು. ಈ ಎಲ್ಲಕ್ಕೂ ಸಮುದಾಯ ಆರೋಗ್ಯ ತಜ್ಞರು ಬೇಕೇಬೇಕು. ಆದರೆ ಅವರು ರೋಗಿಗಳನ್ನು ನೇರವಾಗಿ ನೋಡುವುದಿಲ್ಲ ಎಂಬ ಕಾರಣಕ್ಕೆ ಸಮಾಜ ಅವರನ್ನು `ವೈದ್ಯರು’ ಎಂದು ಒಪ್ಪಿಕೊಳ್ಳಲು ಹಿಂದೆ-ಮುಂದೆ ನೋಡುತ್ತದೆ.

ಭಯವನ್ನು ಕೊರೋನಾ ಸೋಂಕಿನಂತಹ ಸಂದರ್ಭದಲ್ಲಿ ನೋಡುವಾಗ ಕೆಲವು ಅಂಶಗಳನ್ನು ಮನೋವೈಜ್ಞಾನಿಕವಾಗಿ ನಾವು ಗಮನಿಸಬೇಕಾಗುತ್ತದೆ. `ಭಯ’ ಎಂಬ ಮನಸ್ಸಿನ ಭಾವನೆಯನ್ನು ನಾವು ಮೂರು ವಿಧವಾಗಿ ವಿಂಗಡಿಸಲು ಸಾಧ್ಯವಿದೆ. ಮೊದಲನೆಯದು ದೈಹಿಕವಾದ ಹಾನಿಯ ಭಯ. ಎರಡನೆಯದು ಭಾವನಾತ್ಮಕವಾದ (ಮನಸ್ಸಿಗೆ ಸಮಾಧಾನವಿರದ) ಭಯ. ಮೂರನೆಯದು ಅಸಹಜವಾದ, ಕಾರಣವಿರದ ಅಥವಾ ಇರುವ ಕಾರಣಕ್ಕೆ ತಾಳೆಯಾಗದ ಭಯ. ಕೊರೋನಾದಂತಹ ಕಾಯಿಲೆಗಳಲ್ಲಿ ಭಯ ಮೊದಲು `ದೈಹಿಕ’ ವಾದದ್ದಾದರೂ ಕ್ರಮೇಣ ಮಾನಸಿಕವಾದ ಭಯವಾಗಿ ಮಾರ್ಪಡುತ್ತದೆ. ಕೆಲವರಲ್ಲಿ, ಅವರವರ ವ್ಯಕ್ತಿತ್ವ-ಹಿಂದಿನ ಮಾನಸಿಕ ಸಮಸ್ಯೆಗಳ ಹಿನ್ನೆಲೆಯನ್ನು ಅವಲಂಬಿಸಿ ಅದು ಅಸಹಜವೂ ಆಗಬಹುದು. ಯಾವುದೇ ರೀತಿಯ ಸೋಂಕು ಹರಡದಂತೆ ಸ್ವಚ್ಛತಾ ಕ್ರಮಗಳನ್ನು ಅನುಸರಿಸಲು ಸ್ವಲ್ಪ ಭಯ ಅವಶ್ಯಕವೂ ಹೌದು. `ಲಾಕ್‍ಡೌನ್’ ಸಂದರ್ಭದಲ್ಲಿ ಸಹಕಾರಿಯಾಗುವುದು `ಭಯ’ವೆಂಬ ಅಸ್ತ್ರವೇ ಎಂದು ನಾವು ನೆನಪಿಡಬೇಕು.

`ಕೊರೋನಾ’ ದಂತಹ ಸೋಂಕಿನ ಸಂದರ್ಭದಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಧರಿಸುವ, ಕೈ ತೊಳೆದುಕೊಳ್ಳುವ ಕಾರ್ಯಗಳಿಗೆ ನಾವು ಸಲಹೆ ನೀಡುತ್ತೇವಷ್ಟೆ. ಆದರೆ ಮನಸ್ಸಿನ `ಭಯ’ವನ್ನು ನಿಭಾಯಿಸುವ ಬಗ್ಗೆ? ಇದು ವರ್ತಮಾನ-ಭವಿಷ್ಯಗಳ ಬಗೆಗೆ `ಭಯ’ ಮೂಡಿಸುವಂಥ ಸಂದರ್ಭವೇ ಎಂದು `ಭಯ’ ವನ್ನು ಒಪ್ಪಿಕೊಂಡು ಬಿಡುತ್ತೇವೆ. ಆದರೆ ಸೋಂಕಿನ ಸಮಯದಲ್ಲಿ `ಭಯ’ವೂ ದೇಹಕ್ಕೆ `ವೈರಿ’ಯಾಗಿ, ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಅಸ್ತ್ರವಾಗಿ, `ವೈರಸ್’ಗೆ ಮಿತ್ರನಾಗಿ ಕೆಲಸ ಮಾಡಿಬಿಡಬಹುದು ಎಂಬುದನ್ನು ನಾವು ಗಮನಿಸಲೇಬೇಕು.

ಕೈ ತೊಳೆಯುವುದು, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮನಸ್ಸನ್ನು ಸ್ವಚ್ಛವಾಗಿರಿಸಿಕೊಳ್ಳುವುದೂ ಈ ಸಮಯದಲ್ಲಿ ಹಿಂದೆಂದಿಗಿಂತ ಹೆಚ್ಚು ಅವಶ್ಯಕ. ನಮ್ಮ ಭಾವನಾತ್ಮಕ ಆರೋಗ್ಯಕ್ಕೂ, ನಮ್ಮ ದೇಹದ ರಕ್ಷಣಾ ವ್ಯವಸ್ಥೆಗೂ ಹತ್ತಿರದ ಸಂಬಂಧವಿದೆ. ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿ ಬಿಲಿಯನ್‍ಗಟ್ಟಲೆ ಜೀವಕೋಶಗಳಿವೆ. ನಮ್ಮ ದೇಹದ ಕೆಲವು ಅಂಗಗಳು ರಕ್ಷಣಾ ವ್ಯವಸ್ಥೆಗೆ ಕಟಿಬದ್ಧವಾಗಿ ಸದಾ ನಿಂತಿರುತ್ತವೆ.

ಈ ಜೀವಕೋಶಗಳು ಇಡೀ ದೇಹದ ತುಂಬ ಹರಡಿ, ಹೊರಗಿನಿಂದ ಜೀವಿಗಳು ಬಂದಾಗ ಅವುಗಳೊಂದಿಗೆ ಹೋರಾಡುತ್ತವೆ. `ಕಾರ್ಟಿಸಾಲ್’ ಎಂಬ ಹಾರ್ಮೋನು ನಮ್ಮ ದೇಹದ ಪ್ರಾಥಮಿಕವಾದ ಒತ್ತಡದ ಹಾರ್ಮೋನು. ಇದು ಒತ್ತಡವಾದಾಗಲೆಲ್ಲ ಸ್ರವಿಸಲ್ಪಡುತ್ತದೆ. ಇದರ ಕೆಲಸ ಹೋರಾಡುವ ಜೀವಕೋಶಗಳನ್ನು ಹತ್ತಿಕ್ಕುವುದು. ಸಮಸ್ಯೆಯೆಂದರೆ ಇದು ಒಳ್ಳೆಯದೇ ಆದರೂ, ಕಲ್ಪಿತ ಭಯದಿಂದಲೂ ಕಾರ್ಟಿಸಾಲ್ ತನ್ನ ಎಂದಿನ ಕೆಲಸವನ್ನೇ ಮಾಡುತ್ತದೆ. ಮಿದುಳಿಗೂ ಇದು ಗೊಂದಲಮಯವಾಗುತ್ತದೆ. ಹಾಗಾಗಿ ಮತ್ತೆ ಮತ್ತೆ ಆತಂಕ-ಭಯಪಡುವುದು ನಮ್ಮ ಹೋರಾಡುವ ಸಿಪಾಯಿಗೆ ಕೈ ಕಟ್ಟಿ ಹಾಕಿಬಿಡುತ್ತದೆ. ಸಹಜವಾಗಿ ವೈರಸ್‍ಗಳು ಯಶಸ್ವಿಯಾಗುತ್ತವೆ. ರೋಗ ದೇಹವನ್ನು ದುರ್ಬಲಗೊಳಿಸಲು ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿ ಹೀಗೆ ರೋಗಕ್ಕೆ ತುತ್ತಾಗುವುದು, ಸೋಂಕು ಕಾಯಿಲೆಯ ವಿಷಯದಲ್ಲಿ ಸಮುದಾಯಕ್ಕೇ ಅಪಾಯವನ್ನು ತಂದೊಡ್ಡುತ್ತದೆ. ಅಂದರೆ ಆತಂಕ-ಭಯಗಳು ಕ್ರಮೇಣ ಸಮುದಾಯದಲ್ಲಿ ಸೋಂಕಿನ ಪ್ರಮಾಣವನ್ನು ಹೆಚ್ಚಿಸುತ್ತವೆ.

ಪಶ್ಚಿಮ ಆಫ್ರಿಕನ್ ರಾಷ್ಟ್ರಗಳಲ್ಲಿ ಕಾಣಿಸಿದ ಎಬೋಲಾ ವೈರಸ್‍ನಿಂದ ಜಗತ್ತು ಪಾಠ ಕಲಿತಿಲ್ಲ ಎಂಬುದಕ್ಕೆ ಕೊರೋನಾ ಸೋಂಕಿನ ಈ ಪರಿಸ್ಥಿತಿ ಸಾಕ್ಷಿಯಾಗಿದೆ. ಪಶ್ಚಿಮ ಆಫ್ರಿಕದ ಮೂರು ರಾಷ್ಟ್ರಗಳಲ್ಲಿ ಸುಮಾರು 10,000 ಜನರು ಸೋಂಕಿನಿಂದ ಸಾವಿಗೀಡಾದರು. ಆದರೆ ಅದು ಮತ್ತಷ್ಟು ಹರಡದಿರಲು ಮೂರು ಮುಖ್ಯ ಕಾರಣಗಳು. ಒಂದು ಆರೋಗ್ಯ ಕಾರ್ಯಕರ್ತರು ಎಡೆಬಿಡದೆ ಮಾಡಿದ ಕೆಲಸ, ಎರಡನೆಯದು, ಎಬೋಲಾ ವೈರಸ್‍ನ ಸಹಜ ಗುಣ -ಗಾಳಿಯಲ್ಲಿ ಹರಡದಿರುವ ರೀತಿ. ಮೂರನೆಯದು ಪಟ್ಟಣ ಪ್ರದೇಶಗಳಿಗೆ ಅದು ಕಾಲಿಡದಿದ್ದದ್ದು. ಆದರೆ ಇದು ಜಗತ್ತಿನ `ಅದೃಷ್ಟ’ವಷ್ಟೇ ಎಂದು ನಾವು ಭಾವಿಸಬೇಕು.

ಕೊರೋನಾ ಸೋಂಕಿನ ವಿಷಯದಲ್ಲಿ ನಾವಷ್ಟು ಅದೃಷ್ಟ ಮಾಡಿಲ್ಲ ಎಂಬುದು ನಮ್ಮ ಅನುಭವಕ್ಕೆ ಬರುತ್ತಿದೆ.  ಸೋಂಕು ತಗುಲಿದ್ದು, ಲಕ್ಷಣಗಳಿರದೆ ಇನ್ನೊಬ್ಬರಿಗೆ ಹರಡಬಲ್ಲ ಜನರು ಮಾರುಕಟ್ಟೆಗೆ ಬರುವುದನ್ನು, ಏರೋಫ್ಲೇನ್, ಬಸ್ಸು, ರೈಲು ಹತ್ತುವುದನ್ನು ತಡೆಯುವ ಉಪಾಯ ನಮ್ಮಲಿಲ್ಲ. ಅಥವಾ 1918ರಲ್ಲಿ ಸ್ಪಾನಿಷ್ ಫ್ಲೂ 30 ಮಿಲಿಯನ್ ಜನರನ್ನು ಕಬಳಿಸಿದಂತೆ, ಪ್ಲೇಗ್ ವರ್ಷಗಟ್ಟಲೆ ಇದ್ದು, ಮತ್ತೆ ಮತ್ತೆ ಅಲೆಗಳಲ್ಲಿ ಬಂದಂತೆ ಕೊರೋನಾ ಸೋಂಕು ಮಾಡಬಹುದೆ ಎಂಬ ಅಂದಾಜು ಮಾಡುವುದರಲ್ಲಿಯೇ ನಾವಿದ್ದಂತೆ, ಸ್ವಚ್ಛತೆ, ಮಾಸ್ಕ್ ಧರಿಸುವ, ದೈಹಿಕ ಅಂತರ ಕಾಯುವ ಮನಸ್ಸು ನಮ್ಮಲ್ಲಿಲ್ಲ.

ಹಾಗಿದ್ದರೆ, ಒಮ್ಮೆ ಕೊರೋನಾ ಸೋಂಕು ಪ್ರಕೃತಿ ಸಹಜವಾಗಿ ನಿಯಂತ್ರಣಕ್ಕೆ ಬಂದರೂ, ನಾವು ಭವಿಷ್ಯದಲ್ಲಿ ಇಂಥ ಸೋಂಕುಗಳು ಕಾಣಿಸಿಕೊಂಡಾಗ ತತ್‍ಕ್ಷಣ ಅದನ್ನು ನಿಯಂತ್ರಣಕ್ಕೆ ತರುವುದು, ಜೀವಹಾನಿಯನ್ನು ಆದಷ್ಟು ಕಡಿಮೆ ಮಾಡುವುದು ಹೇಗೆ ಸಾಧ್ಯ? ವಿe್ಞÁನ ಮತ್ತು ತಂತ್ರe್ಞÁನಗಳ ಉಪಯುಕ್ತತೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಸರಿಯಾದ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ, ಸ್ವಚ್ಛತಾ ನಡವಳಿಕೆಗಳನ್ನು ಪ್ರಚೋದಿಸುವ ಸೃಜನಶೀಲ ರೀತಿಯ ಆರೋಗ್ಯ ಕಾರ್ಯಕ್ರಮಗಳು ನಡೆಯಬೇಕು.

ಸ್ಪ್ಯಾನಿಷ್ ಫ್ಲೂ, ಎಬೋಲಾಗಳಿಂದ ಕಲಿಯದಿದ್ದ ಪಾಠವನ್ನು ಜಗತ್ತು ಇಂದು ಕೊರೋನಾದಿಂದ ಕಲಿಯಲೇಬೇಕಾಗಿದೆ. ಸಿದ್ಧತೆ ಮಾಡಬೇಕಾದರೆ ಅತ್ಯುತ್ತಮ ಮಾದರಿ ನಾವು ಯುದ್ಧಕ್ಕೆ ಮಾಡುವಂತದ್ದೇ!  ಜಗತ್ತಿನ ಎಲ್ಲಾ ದೇಶಗಳ ರಕ್ಷಣಾ ವ್ಯವಸ್ಥೆಗಳೂ ಸದೃಢವಾಗಿರುವಂತೆ ಆಯಾ ರಾಷ್ಟ್ರಗಳು ನೋಡಿಕೊಳ್ಳುತ್ತವೆಯಷ್ಟೆ. ಸೈನ್ಯಗಳ ತುಕಡಿಗಳು ಯುದ್ಧ ಸಮಯಕ್ಕೆ ಸದಾ ಸನ್ನದ್ಧವಾಗಿರುತ್ತವೆ. ಹೆಚ್ಚು ಸೈನಿಕರು ತತ್‍ಕ್ಷಣ ಯುದ್ಧಕ್ಕಾಗಿ ಸಿದ್ಧರಿರುತ್ತಾರೆ. `ರಿಸರ್ವ್ ಯೂನಿಟ್’ -ಕಾಯ್ದಿರಿಸಿದ ತುಕಡಿಗಳು ಇರುತ್ತವೆ.  ಆಗಾಗ್ಗೆ `ಯುದ್ಧದ ಆಟಗಳನ್ನು (Wಚಿಡಿ gಚಿmes) ನಡೆಸಿ ಸೈನಿಕರ ತರಬೇತಿಯನ್ನು ಪರೀಕ್ಷಿಸಲಾಗುತ್ತದೆ.  ಅವರಿಗೆ ಸಂಕೇತಗಳು ಅರ್ಥವಾಗುತ್ತವೆಯೇ, ಇಂಧನ ಮುಂತಾದ ಅವಶ್ಯಕತೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ಅವರು ಹೇಗೆ ನೋಡಿಕೊಳ್ಳುತ್ತಾರೆ ಈ ಎಲ್ಲವನ್ನು ಪರೀಕ್ಷಿಸಲಾಗುತ್ತದೆ. ಅಂದರೆ ಅವರು ಯಾವ ಸಮಯದಲ್ಲಿಯೂ ಯುದ್ಧಕ್ಕೆ ಸಿದ್ಧರಿರಬೇಕು. ಇದೇ ರೀತಿಯ ತರಬೇತಿ ಆರೋಗ್ಯ ಕ್ಷೇತ್ರಕ್ಕೆ ಬೇಕೆಂದರೆ ನಮ್ಮ ವ್ಯವಸ್ಥೆಗೆ ಧನ-ಜನ-ಮನ ಸಹಾಯಗಳು ಬೇಕು, ಇದು `ಮುಖ್ಯ’ ಎಂದು ಭಾವಿಸಿ ಆಡಳಿತ ವ್ಯವಸ್ಥೆ ಅತ್ತ ತಿರುಗಬೇಕು.

ಬಡದೇಶಗಳಲ್ಲಿಯೂ ಮೊದಲು ಬಲಗೊಳ್ಳಬೇಕಾದದ್ದು ಆರ್ಥಿಕ ವ್ಯವಸ್ಥೆಯಲ್ಲ, ಆರೋಗ್ಯ ವ್ಯವಸ್ಥೆ! ಆರೋಗ್ಯ ವ್ಯವಸ್ಥೆಯನ್ನು, ಮಿಲಿಟರಿ ವ್ಯವಸ್ಥೆಯೊಂದಿಗೆ ಜೋಡಿಸಬೇಕು. ಎಲ್ಲಿ ಹೋಗಬೇಕೆಂದರೂ ಕ್ಷಿಪ್ರವಾಗಿ ಕಾರ್ಯಾಚರಣೆ ಮಾಡುವ ಸಾಮಥ್ರ್ಯವಿರುವ ಸೈನ್ಯದೊಂದಿಗೆ ಆರೋಗ್ಯ ವ್ಯವಸ್ಥೆಯನ್ನು ಜೋಡಿಸಿ ಬಲಪಡಿಸಬೇಕು. ಇದು ಆಗಬೇಕಾದ್ದು ಮತ್ತೊಂದು ಸೋಂಕಿನ ಸಮಯವಲ್ಲ. `ವಾರ್‍ಗೇಮ್’ಗಳಂತೆ, `ಜೆರ್ಮ್‍ಗೇಮ್’ -ರೋಗಾಣು ಆಟಗಳಂತಹ ರಿಹರ್ಸಲ್ (ಅಣಕು) ಆಟಗಳ ಮೂಲಕ ಅವುಗಳ ತರಬೇತಿ ನಡೆಯಬೇಕಾದ ಅವಶ್ಯಕತೆಯಿದೆ.

`ಇದಕ್ಕೆಲ್ಲಾ ಎಷ್ಟೆಲ್ಲಾ `ಬಜೆಟ್’ ಬೇಕು!’ ಎಂದು ನೀವೆನ್ನಬಹುದು. ಆದರೆ ಸೋಂಕಿನಿಂದ ಉಂಟಾಗುವ ಜೀವ ಹಾನಿಯನ್ನು, ಅದರಿಂದುಂಟಾಗಬಹುದಾದ ಆರ್ಥಿಕ ಸಂಕಷ್ಟವನ್ನು ಲೆಕ್ಕ ಹಾಕಿ ನೋಡಿದರೆ ಈ ಸಿದ್ಧತೆಯ ಖರ್ಚು ಕಡಿಮೆಯೇ.

ಕೊರೋನಾದ ಆತಂಕಕ್ಕೆ ಹೊಂದಿಕೊಳ್ಳುತ್ತಾ ಸಮಾಜ ಸಾಗಿದೆ. ನಿಧಾನವಾಗಿ ಸಾವು-ಸೋಂಕಿನ ಸುದ್ದಿಗಳು ಮಾಮೂಲು ಸುದ್ದಿಗಳಾಗಿ ಪತ್ರಿಕೆಗಳ ತಲೆಬರಹಗಳಿಂದ ಚಿಕ್ಕ ಚೌಕದಲ್ಲಿ ಮುದ್ರಿಸಲ್ಪಡುವ ಸುದ್ದಿಗಳಾಗಿವೆ.  ಆದರೆ ಎಬೋಲಾ, ಸ್ಪ್ಯಾನಿಷ್ ಫ್ಲೂಗಳು ಕಳೆದರೂ, ಕೊರೋನಾ ಬಂದಂತೆ, ಮತ್ತೆ ಹೊಸ ವೈರಸ್ ಸೋಂಕುಗಳು ಜಗತ್ತನ್ನು ಕಾಡುವ ಸಾಧ್ಯತೆಗಳು ಇದ್ದೇ ಇವೆ. ಅದಕ್ಕಾಗಿ ನಾವು ಪಡಬೇಕಾದ್ದು ಆತಂಕವಲ್ಲ, ಬದಲಾಗಿ ಮಾಡಬೇಕಾದ್ದು ಸದಾ ಸನ್ನದ್ಧವಾಗಿರುವ ಆರೋಗ್ಯ-ಸ್ವಚ್ಛತಾ ಕಾರ್ಯ ಸಿದ್ಧತೆ!

*ಲೇಖಕರು ಶಿವಮೊಗ್ಗದಲ್ಲಿ ಮನೋರೋಗ ಚಿಕಿತ್ಸಕರು; ಮನೋವೈದ್ಯಶಾಸ್ತ್ರ, ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಜೊತೆಗೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಯೋಗ, ವೀಣೆ… ಹೀಗೆ ಬಹುಕ್ಷೇತ್ರಗಳಲ್ಲಿ ಆಸಕ್ತಿ ಮತ್ತು ಪರಿಣತಿ ಹೊಂದಿದ್ದಾರೆ.

Leave a Reply

Your email address will not be published.