ಸೋಂಕು ಹರಡಿಸದ ಸಮಾಧಾನ!

ಸ್ವತಃ ಕೋವಿಡ್ ಸೊಂಕಿಗೆ ತುತ್ತಾದಾಗ ಆಗದ ಭಯ, ಆಪ್ತರ ಅಗಲಿಕೆಯ ಸುದ್ದಿ ಕೇಳಿದಾಗ ಎದೆ ನಡುಗಿಸಿತು.

-ವಿದ್ಯಾಶ್ರೀ ಭಗವಂತಗೌಡ್ರ

ಅಂದು ಏಪ್ರಿಲ್ 17, ಪತ್ರಿಕೋದ್ಯಮ ವಿಷಯದ ಪರೀಕ್ಷೆ ಮುಗಿಸಿಕೊಂಡು ಬಂದಿದ್ದೆ. ಇನ್ನು ಒಂದು ಪೇಪರ್ ಆದರೆ ಎಕ್ಸಾಮ್ ಮುಗಿಯಿತು ಎನ್ನುವ ಖುಷಿಯಲ್ಲಿ ಬೇಗನೆ ನಿದ್ರೆಗೆ ಜಾರಿದ್ದೆ. ಅಂದು ರಾತ್ರಿ ಪಿಜಿ ಯ ಡ್ರೈವರ್ ಅಣ್ಣನ ಕರೆ ಬಂದಾಗ ರಾತ್ರಿ 11 ಗಂಟೆ. ಕರೆ ಸ್ವೀಕರಿಸಿದಾಗ “ಕೋವಿಡ್ ಪಾಸಿಟಿವ್ ಬಂದಿದೆ ಪುಟ್ಟ, ಬೆಳಗ್ಗೆ ನಾ ಬರುವವರೆಗೂ ರೂಮಿನಿಂದ ಹೊರಬರಬೇಡ, ಹೆದರಬೇಡ” ಎಂದು ಹೇಳಿ ಕರೆ ಮುಗಿಸಿದ.

ಸೋಂಕು ಎಲ್ಲಿ ತಗುಲಿತ್ತೋ ನಾನರಿಯೆ. ವಿಷಯ ಕೇಳಿ ನಿದ್ದೆ ಬರಲಿಲ್ಲ. ನನ್ನಿಂದ ಬೇರೆಯವರಿಗೆ ಅಂಟದಿದ್ದರೆ ಸಾಕು ಎಂದುಕೊಳ್ಳುತ್ತಾ ಕೆಲವು ಆಪ್ತ ಸ್ನೇಹಿತರಿಗೆ ವಿಷಯ ತಿಳಿಸಿದೆ. ಅವರೆಲ್ಲರ ಧೈರ್ಯದ ಮಾತು ಕೋವಿಡ್ ಎಕ್ಸ್ಪೀರಿಯೆನ್ಸ್ ಕೇಳುತ್ತ, ಅಮ್ಮ ಮಲಗಿರುತ್ತಾಳೆ ಬೆಳಗ್ಗೆ ವಿಷಯ ಹೇಳುವ ಎಂದುಕೊಂಡು ನಿದ್ದೆಗೆ ಜಾರಿದೆ. ಬೆಳಗ್ಗೆ 7:30ಕ್ಕೆ ಅಮ್ಮನ ಕರೆ ಬಂದಾಗಲೇ ಎಚ್ಚರವಾಗಿದ್ದು. ಅಮ್ಮಮ್ಮ (ಪಿಜಿ ಮೇಡಂ) ಅಮ್ಮನಿಗೆ ವಿಚಾರ ತಿಳಿಸಿದ್ದರಿಂದ ಅಮ್ಮನಿಗೆ ಭಯವಾಗಿತ್ತು.

“ಜ್ವರ ಸುಸ್ತು ಏನಿಲ್ಲಮ್ಮ, ನಾನು ಆರಾಮಾಗಿದ್ದೇನೆ ಹೆದರಬೇಡ, ಸ್ವಲ್ಪ ತಲೆ ನೋವಿದೆ, ಮೊಬೈಲ್ ಯೂಸ್ ಮಾಡಿದ್ದು ಜಾಸ್ತಿ ಆಯ್ತು ಅನಿಸುತ್ತೆ ನೀನೇನು ಗಾಬರಿಯಾಗಬೇಡ” ಎಂದೆ. “ಸರಿ ಚಿಕ್ಕಪ್ಪ ಬರುತ್ತಾರೆ ಬ್ಯಾಗ್ ಪ್ಯಾಕ್ ಮಾಡು ಅಲ್ಲಿದ್ದು ಬೇರೆಯವರಿಗೆ ತೊಂದರೆ ಆಗೋದು ಬೇಡ’’ ಎಂದಳು. “ಬ್ಯಾಗ್ ಪ್ಯಾಕ್ ಮಾಡಿ ಡ್ರೈವರ್ ಅಣ್ಣ ತಂದುಕೊಟ್ಟ ತಿಂಡಿ ತಿಂದು ಚಿಕ್ಕಪ್ಪನ ದಾರಿ ಕಾಯುತ್ತ ಕುಳಿತೆ. “ಸೈಕಾಲಜಿ ಪೇಪರ್ ನೆಕ್ಸ್ಟ್ ಸೆಮಿಸ್ಟರ್ ಬರದ್ರೆ ಆಗತ್ತೆ ತಲೆ ಕೆಡಿಸ್ಕೊಬೇಡ, ಹೆದರಬೇಡ ಬೇಗ ಹುಷಾರಾಗ್ತೀಯ” ಎಂದು ಅಮ್ಮಮ್ಮ ಬೀಳ್ಕೊಟ್ಟರು.

ಚಿಕ್ಕಪ್ಪನ ಮನೆಯಲ್ಲಿ ಸಪರೇಟ್ ರೂಮ್ ಇಲ್ಲದ್ದರಿಂದ ಅವರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಹಾವೇರಿ ಗೆ ಹೋಗೋಣ ಎಂದೆ. ಚಿಕ್ಕಪ್ಪನ ಜೊತೆಗೆ ಮೈಸೂರಿನಿಂದ ಮನೆಯ ದಾರಿ ಹಿಡಿದೆ. ದಾರಿಯುದ್ದಕ್ಕೂ ಮಾಸ್ಕ್ ಧರಿಸಿಯೇ ಇದ್ದೆವು. ಹೊರಗಿನ ಜಗತ್ತನ್ನು ನೋಡುವಾಗ ಹಲವಾರು ವಿಷಯಗಳು ತಲೆಯಲ್ಲಿ ಓಡುತ್ತಿದ್ದವು. ಅಮ್ಮ, ಚಿಕ್ಕಮ್ಮ, ಅಮ್ಮಮ್ಮನ ಕರೆಗಳು ಬರುತ್ತಿದ್ದವು. ಇವರ ನಡುವೆ ಜಿಲ್ಲಾ ಆಸ್ಪತ್ರೆಯಿಂದಲೂ ಕರೆಗಳು. ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತ ನಡೆದೆ. ಅಪ್ಪ ಅಮ್ಮ ನನ್ನ ದಾರಿಯನ್ನೇ ಕಾಯುತ್ತಿದ್ದರು. ಅಮ್ಮ ನಿಜವಾಗಿಯೂ ಹೆದರಿದ್ದಳು, ಅಪ್ಪ ಬೇರೆ ಶುಗರ್ ಪೇಶಂಟ್ ಎಂಬುದು ಅವಳ ಭಯಕ್ಕೆ ಮೂಲ ಕಾರಣವಾಗಿತ್ತು. ನಾನು ಸುಸ್ತಿಲ್ಲದೇ, ಧೈರ್ಯದಿಂದ ಇದ್ದಿದ್ದು ನೋಡಿ ಅವಳಿಗೆ ಕೊಂಚ ನಿರಾಳವಾಯಿತು. ಅಂದು ರಾತ್ರಿಯಿಂದ ಶುರುವಾಯಿತು ನನ್ನ ಕ್ವಾರೆಂಟೈನ್ ಪಯಣ.

14 ದಿನಗಳು ನನ್ನ ರೂಮಿನಲ್ಲೇ ಇರುವುದು ಕಷ್ಟವೆನಿಸಿತ್ತು. ಅಂತದ್ದರಲ್ಲಿ ಆ ಶ್ರೀರಾಮ ಹೇಗೆ 14 ವರ್ಷದ ವನವಾಸ ಅನುಭವಿಸಿದನೋ ನಾ ಕಾಣೆ. ಊಟ-ತಿಂಡಿ, ಕಷಾಯ, ಹಣ್ಣಿನ ರಸ, ಎಲ್ಲವೂ ರೂಮಿಗೆ ಸಪ್ಲೈ ಆಗುತ್ತಿತ್ತು, ಏನೂ ಕೆಲಸವಿಲ್ಲದೆ ಆರಾಮ ಎನ್ನಿಸಿದರೂ ಶಾಲೆಗೆ ಹೋಗುವ ಅಮ್ಮ ಎಲ್ಲವನ್ನು ಮುಗಿಸಲು ಪರದಾಡುವಾಗ ಬೇಜಾರಾಗಿತ್ತು. ಪರಿಚಯದ ವೈದ್ಯರೊಬ್ಬರ ಸಲಹೆಯಂತೆ ಮನೆಯಲ್ಲೇ ಟ್ರೀಟ್ಮೆಂಟ್ ತೆಗೆದುಕೊಂಡೆ. ಪುಸ್ತಕ ಓದುತ್ತಾ, ಸ್ಟೀಮ್ ತೆಗೆದುಕೊಳ್ಳುತ್ತಾ, ಪಾಲಕರ, ಆಪ್ತರ ಹಾರೈಕೆಯಂತೆ ಯಾವುದೇ ತೊಂದರೆ ಇಲ್ಲದೆ ಹುಷಾರದೆ. ಒಂದು ವಾರದ ಬಳಿಕ ರುಚಿ ಮತ್ತು ವಾಸನೆಯ ಗ್ರಹಿಕೆ ಮರಳಿ ಬಂದಾಗ ರುಚಿಯನ್ನೇ ಮರೆತಿದ್ದ ನಾಲಿಗೆಗೆ ಸಂಭ್ರಮ. ಯಾರಿಗೂ ಸೊಂಕನ್ನು ತಗುಲಿಸದೇ ಕೋರೋನಾದಿಂದ ಪಾರಾದ ಸಮಾಧಾನವಿತ್ತು.

ನನಗೆ ಕೊರೊನಾ ಪಾಸಿಟಿವ್ ಎಂದು ಗೊತ್ತಾದಾಗ ಕಾಲ್ ಮಾಡಿದ್ದ ಅಣ್ಣ (ಅಮ್ಮಮ್ಮನ ಹಿರಿಮಗ), “ಯಾಕಮ್ಮ ವಿದ್ಯಾ, ಎಲ್ಲಿಗೆ ಹೋಗಿದ್ದೆ? ಮನೆಯಲ್ಲಿಯೇ ಇರಬೇಕು ಎಂದು ಹೇಳಿದ್ದೆನಲ್ಲವ, ದೊಡ್ಡ ಅಧಿಕಾರಿಯಾಗಬೇಕೆಂದು ಆಶಿಸುತ್ತೀ, ಈ ಸಮಯದ ಸೂಕ್ಷ್ಮಗಳು ಅರ್ಥವಾಗುದಿಲ್ಲವೇ? ಸರಿ ಹೆದರಬೇಡ ಹುಷಾರಾಗುತ್ತೀ, ಅಪ್ಪ ಅಮ್ಮನಿಂದ ದೂರ ಇರು” ಎಂದು ಹೇಳುತ್ತಾ ಮಾತು ಮುಗಿಸಿದ್ದರು. ಅಣ್ಣನ ಮಾತು ಕೇಳಿ ಸಮಾಧಾನ, ನಾಚಿಕೆ ಒಟ್ಟಿಗೆ ಆಗಿತ್ತು. ಆದರೆ, ಹದಿನೈದು ದಿನಗಳ ಹಿಂದೆ ಅಮ್ಮಮ್ಮನಿಂದ ಬಂದ ಸಂದೇಶ ನನ್ನ ಧೈರ್ಯವನ್ನು ಛಿದ್ರಗೋಳಿಸಿತ್ತು. ದೊಡ್ಡಣ್ಣ ಕೋವಿಡ್ ನಿಂದ ನಮ್ಮನ್ನು ಅಗಲಿದ್ದರು. ಅಣ್ಣನ ಜೊತೆ ಕಳೆದ ಸಮಯ ತುಂಬಾ ಕಡಿಮೆಯಾದರೂ, ಅವರ ಅಕ್ಕರೆಯ, ಕಾಳಜಿಯ ಮಾತಿನಿಂದ ಸ್ವಂತ ಅಣ್ಣನೆಂಬ ಭಾವ ಮೂಡಿತ್ತು. ಇಂದಿನ ಸ್ಪರ್ಧಾಜಗತ್ತಿನಲ್ಲಿ ಕಷ್ಟಪಟ್ಟು ಓದಬೇಕು, ಯಾವುದೇ ಸಮಯದಲ್ಲೂ ಧೈರ್ಯಗುಂದಬಾರದು ಎಂದು ಹೇಳಿಕೊಟ್ಟ ಅಣ್ಣ ಕೋವಿಡ್ ಗೆ ಸಿಲುಕಿ ಯಾವುದೇ ಸುಳಿವನ್ನು ಕೊಡದೇ ಕಣ್ಮರೆಯಾಗಿದ್ದ. ಅಣ್ಣ ಇನ್ನಿಲ್ಲವೆಂಬ ಕಟು ವಾಸ್ತವವನ್ನು ಅರಗಿಸಿಕೊಳ್ಳಲು ವಾರಗಳೇ ಹಿಡಿದವು.

ನಾನೇ ಸ್ವತಃ ಕೋವಿಡ್ ಸೊಂಕಿಗೆ ತುತ್ತಾದಾಗ ಆಗದ ಭಯ, ಆಪ್ತರ ಅಗಲಿಕೆಯ ವಿಚಾರ ಕೇಳಿದಾಗ ಎದೆ ನಡುಗಿತ್ತು. ದಿನಪತ್ರಿಕೆಯಲ್ಲಿ, ದೂರದರ್ಶನದಲ್ಲಿ ಮನೆಯವರನ್ನು ಕಳೆದುಕೊಂಡವರ ಆಕ್ರಂದನವನ್ನು ನೋಡಿದಾಗ, ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಬಗೆಗೆ ಕೇಳಿದಾಗ ಮನ ಕಲುಕಿತ್ತು. ಕಾಣದ ಜೀವಿಯೊಂದರ ಮಾಯಾಜಾಲಕ್ಕೆ ಸಿಲುಕದೇ ಎಲ್ಲರೂ ಸುರಕ್ಷಿತವಾಗಿರಬೇಕೆಂಬುದೇ ಸದ್ಯದ ಪ್ರಾರ್ಥನೆ ಮತ್ತು ಆಶಯ.

*ಲೇಖಕಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ, ಸೈಕಾಲಜಿ ಹಾಗೂ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿನಿ. ಸೈಕಲಿಂಗ್, ಭಾಷಣ, ಫೋಟೋಗ್ರಫಿ, ಭರತನಾಟ್ಯ ಹವ್ಯಾಸಗಳು. ಎನ್.ಸಿ.ಸಿ, ಕ್ಯಾಡೆಟ್. ಐಎಎಸ್ ಸಿದ್ಧತೆಯಲ್ಲಿದ್ದಾರೆ.

Leave a Reply

Your email address will not be published.