ಸ್ಕೂಲ್ ಬ್ಯಾಗುಗಳ ಹೊರೆ

ಶಾಲಾಮಕ್ಕಳ ಹೆಗಲಿಗೇರುವ ಈ ಭಾರದ ಬ್ಯಾಗುಗಳ ಬಗ್ಗೆ ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಅಧ್ಯಯನಗಳು ನಡೆದಿವೆ. 1997ರ ಸಂದರ್ಭದಲ್ಲಿ ಐರ್ಲೆಂಡ್ ದೇಶದ ಶಿಕ್ಷಣ ಮಂತ್ರಿ ಮೈಕಲ್ ಮಾರ್ಟಿನ್ ಟಿ.ಡಿ. ಎನ್ನುವವರು ಈ ಮಕ್ಕಳ ಶಾಲಾ ಬ್ಯಾಗ್‍ಗಳ ಹೊರೆಯ ಬಗ್ಗೆ ಅಧ್ಯಯನ ಮಾಡಲು ಒಂದು ವರ್ಕಿಂಗ್ ಗ್ರುಪ್ ಅನ್ನು ನೇಮಿಸಿದರು.

ಆ ಬಾಲಕಿ ತೀರಾ ನಾಜೂಕು. ಆಕೆ ಓದುತ್ತಿರುವುದು ಒಂದನೆಯ ತರಗತಿ. ಆಕೆಯ ತೂಕ ಸುಮಾರು ಹದಿನೈದು ಕಿಲೊ. ಆಕೆಯ ಸ್ಕೂಲುಬ್ಯಾಗ್ ಆಕೆಗಿಂತಲೂ ಭಾರ. ಶಾಲೆಗೆ ಹೋಗುವಾಗ ಮತ್ತು ಬರುವಾಗ ಎರಡುಮೂರು ಬಾರಿ ಆಕೆ ಬ್ಯಾಗ್ ಸಮೇತ ಮುಗ್ಗರಿಸಿ ಬಿದ್ದ ನಂತರ ಅವಳ ಸ್ಕೂಲುಬ್ಯಾಗನ್ನು ಹೊತ್ತು ಆಕೆಯನ್ನು ಶಾಲೆಯವರೆಗೆ ಸುರಕ್ಷಿತವಾಗಿ ತಲುಪಿಸುವುದು, ಕರೆತರುವುದು ಆಕೆಯ ತಾಯಿಯ ಜವಾಬ್ದಾರಿಯಾಯಿತು.

ಆ ಹುಡುಗನ ಒಟ್ಟು ತೂಕ 20 ಕಿಲೊ. ಆತನ ಹೆಗಲಿಗೇರಿದ ಬ್ಯಾಗಿನ ತೂಕವೂ ಹೆಚ್ಚೂ ಕಡಿಮೆ ಅಷ್ಟೇ. ಆ ಬ್ಯಾಗಿನಲ್ಲಿ ಸಿಕ್ಕಾಪಟ್ಟೆ ಪುಸ್ತಕಗಳು, ಊಟದ ಡಬ್ಬಿ, ನೀರಿನ ಬಾಟಲ್, ಕಂಪಾಸ್ ಪೆಟ್ಟಿಗೆ ಹೀಗೆ ಎಲ್ಲವೂ ಸೇರಿ ಅವನು ತಿಣಕುತ್ತಾ ಹಮಾಲಿ ಮಾಡುವವನಂತೆ ಬ್ಯಾಗನ್ನು ಹೆಗಲಿಗೇರಿಸಿ ಶಾಲೆಗೆ ಹೊರಟಾಗ ಪಾಲಕರು ಅವನು ಹೊತ್ತ ಭಾರ ಕಂಡು ಮರಮರ ಮರಗುತ್ತಾರೆ.

ಅನೇಕ ಮಕ್ಕಳು ಶಾಲೆಯಿಂದ ಮನೆಗೆ ಬಂದದ್ದೇ ತಡ, ಅವ್ವಾ, ಮೈಕೈ ನೋವು ಎಂದು ಹಾಸಿಗೆಗೆ ಉರುಳುವುದರ ಹಿಂದೆ ಈ ಮಣಭಾರದ ಸ್ಕೂಲ್ ಬ್ಯಾಗಿನ ಕರಾಮತ್ತು ಅಡಗಿದೆ. ಮಕ್ಕಳು ಶಾಲೆ ಬಿಟ್ಟು ಮನೆಗೆ ಬರುತ್ತಿರುವಂತೆ ಹೆಗಲಿಗೇರಿರುವ ಬ್ಯಾಗನ್ನು ಕೆಳಗಿಳಿಸುವ ಹೊತ್ತಿಗೆ ಉಸ್ಸಪ್ಪಾ ಎಂದು ಸುಸ್ತು ಹೊಡೆಯುತ್ತಲೇ ಕುಸಿಯುವದನ್ನು ನೋಡಿದರೆ ಅವರ ಭವಿಷ್ಯ ಮತ್ತು ಆರೋಗ್ಯದ ಬಗ್ಗೆ ಸಂಬಂಧಿಸಿದವರು ಈವರೆಗೂ ತಲೆ ಕೆಡಿಸಿಕೊಂಡಂತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಶಿಕ್ಷಣದ ಗುಣಮಟ್ಟ ಸ್ಕೂಲ್ ಬ್ಯಾಗಿನ ಭಾರದ ಜೊತೆಗೆ ಖಂಡಿತ ಥಳಕು ಹಾಕಿಕೊಂಡಿಲ್ಲ. ಕಳೆದ ಅನೇಕ ವರ್ಷಗಳಿಂದಲೂ ಮಕ್ಕಳ ಸ್ಕೂಲ್‍ಬ್ಯಾಗಿನ ಭಾರವನ್ನು ಕಡಿಮೆ ಮಾಡಲು ಯೋಚಿಸುವ, ಮಾತನಾಡುವ ಕ್ರಿಯೆಗಳು ಜೋರಾಗಿವೆಯೇ ಹೊರತು ಕಾರ್ಯಾಚರಣೆ ಸಾಧ್ಯವಾಗಿಲ್ಲ. ಈತ್ತೀಚೆಗೆ ಚೆನ್ನೈ ಹೈಕೋರ್ಟ್ ಆ ಬಗ್ಗೆ ಚರ್ಚಿಸಿತು. ಮಕ್ಕಳ ಸ್ಕೂಲ್ ಬ್ಯಾಗಿನ ಭಾರದ ಮಿತಿಗೆ ಸಂಬಂಧಿಸಿದ ಚಿಲ್ಡ್ರನ್ ಸ್ಕೂಲ್ ಬ್ಯಾಗ್ ಲಿಮಿಟೇಶನ್ ಆನ್ ವೇಟ್ ಬಿಲ್ ಎನ್ನುವುದು 2006ರಲ್ಲಿಯೇ ಜಾರಿಗೆ ಬಂದರೂ ಅದು ಕಾರ್ಯನಿರ್ವಹಿಸುವಲ್ಲಿ ಸೋತಂತಿದೆ. ಈಚೆಗೆ ಅಂದರೆ ಅಕ್ಟೋಬರ್ 5 ರಂದು ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಆ ಸಂಬಂಧ ಒಂದು ಸಮಿತಿಯನ್ನು ರಚಿಸಿದೆ. ಎನ್.ಸಿ.ಇ.ಆರ್.ಟಿ. ಯ ಪ್ರೂರಂಜನ ಅರೋರಾ ಅವರನ್ನು ಅದರ ಮುಖ್ಯಸ್ಥರನ್ನಾಗಿ ನೇಮಿಸಿ, ತಿಂಗಳೊಳಗಾಗಿ ಆ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ಸಮಿತಿಯಲ್ಲಿ ಮಹಾರಾಷ್ಟ್ರದ ಒಬ್ಬರು ಮತ್ತು ತೆಲಂಗಾಣದಿಂದ ಒಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಮಹಾರಾಷ್ಟ್ರ ಮತ್ತು ತೆಲಂಗಾಣಗಳಲ್ಲಿ ಮಕ್ಕಳ ಸ್ಕೂಲ್ ಬ್ಯಾಗಿನ ಹೊರೆ ಇಳಿಸುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಯೊಬ್ಬನ ಶರೀರದ ಒಟ್ಟು ತೂಕದ 10 ಪ್ರತಿಶತದಷ್ಟು ಮಾತ್ರ ಸ್ಕೂಲ್ ಬ್ಯಾಗಿನ ಭಾರವಿರಬೇಕೆಂದು ಈ ರಾಜ್ಯಗಳೆರಡು ತೀರ್ಮಾನಿಸಿವೆ. ಇಡೀ ದೇಶವ್ಯಾಪಿಯಾಗಿ ಅನ್ವಯವಾಗುವಂಥ ಒಂದು ನೀತಿಯನ್ನು ಈ ಸ್ಕೂಲ್ ಬ್ಯಾಗಿನ ಭಾರಕ್ಕೆ ಸಂಬಂಧಿಸಿ ನಿರ್ಧರಿಸುವ ಅಗತ್ಯವನ್ನು ಚೆನ್ನೈ ಹೈಕೋರ್ಟ್‍ನ ನ್ಯಾಯಾಧೀಶರು ಪ್ರತಿಪಾದಿಸಿದ್ದಾರೆ.

ಶಾಲಾಮಕ್ಕಳ ಹೆಗಲಿಗೇರುವ ಈ ಭಾರದ ಬ್ಯಾಗುಗಳ ಬಗ್ಗೆ ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಅಧ್ಯಯನಗಳು ನಡೆದಿವೆ. 1997ರ ಸಂದರ್ಭದಲ್ಲಿ ಐರ್ಲೆಂಡ್ ದೇಶದ ಶಿಕ್ಷಣ ಮಂತ್ರಿ ಮೈಕಲ್ ಮಾರ್ಟಿನ್ ಟಿ.ಡಿ. ಎನ್ನುವವರು ಈ ಮಕ್ಕಳ ಶಾಲಾ ಬ್ಯಾಗ್‍ಗಳ ಹೊರೆಯ ಬಗ್ಗೆ ಅಧ್ಯಯನ ಮಾಡಲು ಒಂದು ವರ್ಕಿಂಗ್ ಗ್ರುಪ್ ಅನ್ನು ನೇಮಿಸಿದರು. ಆಗ ಸಾಕಷ್ಟು ಅಧ್ಯಯನಗಳು ಬೇರೆಬೇರೆ ಭಾಗಗಳಲ್ಲಿ ನಡೆದು ಶಾಲೆಗಳ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳು ಮತ್ತು ಪಾಲಕರ ಅಭಿಪ್ರಾಯವನ್ನು ಆಧರಿಸಿ ಸ್ಕೂಲ್ ಬ್ಯಾಗು ಮತ್ತು ಅದರ ಭಾರ ಕುರಿತು ವರದಿ ಸಿದ್ಧಪಡಿಸಲಾಯಿತು.

ಮಕ್ಕಳ ದೇಹದ ಮೇಲೆಯೂ ಈ ಭಾರವಾಗಿರುವ ಸ್ಕೂಲ್ ಬ್ಯಾಗುಗಳು ಅಡ್ಡ ಪರಿಣಾಮಗಳನ್ನು ಬೀರುವ ಬಗ್ಗೆ ಅಧ್ಯಯನದ ತಂಡ ಐಲ್ರ್ಯಾಂಡಿನ ವೈದ್ಯಕೀಯ ಸಮೀಕ್ಷೆಯ ಮೂಲಕ ಕಂಡುಕೊಂಡಿದೆ. ಅನೇಕ ಸಂಶೋಧನೆಗಳು ಮತ್ತು ಸಮೀಕ್ಷೆಯ ಒಟ್ಟಾರೆ  ಫಲಿತಾಂಶ ಒಂದು ಮಗುವಿನ ಶರೀರದ ತೂಕದ 10 ಪ್ರತಿಶತ ಭಾರವನ್ನು ಸ್ಕೂಲ್ ಬ್ಯಾಗು ಮೀರಬಾರದು ಎನ್ನಲಾಗಿತ್ತು. ಅಂದರೆ 10 ಕಿಲೋ ತೂಕದ ಮಗುವಿನ ಬ್ಯಾಗು 1 ಕಿಲೊ ಭಾರ, 20 ಕಿಲೊ ಶರೀರದ ತೂಕವಿರುವ ಮಗುವಿನ ಬ್ಯಾಗು 2 ಕಿಲೊ, 30 ಕಿಲೊ ತೂಕವಿರುವ ಮಗುವಿನ ಬ್ಯಾಗಿನ ಭಾರ 3 ಕಿಲೊ ಇರಬೇಕೆಂದು ತೀರ್ಮಾನಿಸಲಾಗಿತ್ತು.

1998ರಲ್ಲಿ ಮ್ಯಾಕ್ಡೊನಾಗ್ ಮತ್ತು ಮ್ಯಾಕ್ಲೊಗಿನ್ ಎನ್ನುವ ಶಿಕ್ಷಣ ತಜ್ಞರು ಮಾಡಲಾದ 1400 ಮಕ್ಕಳ ಸಮೀಕ್ಷೆಯಿಂದ ತಿಳಿದುಬಂದ ಸತ್ಯವೆಂದರೆ ಸುಮಾರು 49 ಪ್ರತಿಶತ ಬಾಲಕಿಯರು ತಮ್ಮ ಶರೀರದ ತೂಕಕ್ಕಿಂತಲೂ 20 ಪ್ರತಿಶತ ಹೆಚ್ಚಿನ ಭಾರದ ಸ್ಕೂಲ್ ಬ್ಯಾಗ್ ಮತ್ತು 30 ಪ್ರತಿಶತ ಬಾಲಕರು ತಮ್ಮ ಶರೀರದ ತೂಕಕ್ಕಿಂತಲೂ 20 ಪ್ರತಿಶತ ಹೆಚ್ಚು ಭಾರವಿರುವ ಬ್ಯಾಗುಗಳನ್ನು ಹೊರುವ ಬಗ್ಗೆ ತಿಳಿದುಬಂದಿತ್ತು. 1986ರಲ್ಲಿ ಐಲ್ರ್ಯಾಂಡಿನ ಹೊಯ್, ಟ್ಯಾನರ್ ಮತ್ತು ಕಾಕ್ಸ್ ಎನ್ನುವವರು ಮಾಡಿದ ಒಂದು ವೈದ್ಯಕೀಯ ಅಧ್ಯಯನದ ವರದಿಯ ಪ್ರಕಾರ 4-18 ವರ್ಷದೊಳಗಿನ ಮಕ್ಕಳು ಆರೋಗ್ಯಕರ ಎನ್ನಬಹುದಾದ ರೀತಿಯಲ್ಲಿ ಎಷ್ಟು ಭಾರದ ಸ್ಕೂಲ್ ಬ್ಯಾಗ್ ಗಳನ್ನು ಹೊರಬಹುದು ಎನ್ನುವ ಬಗ್ಗೆ ಹೀಗೆ ಸೂಚಿಸಲಾಗಿದೆ:

   ವಯಸ್ಸು ಶರೀರದ ತೂಕ ಬ್ಯಾಗಿನ ತೂಕ
   4 ವರ್ಷ    16 ಕಿಲೊ    1.6 ಕಿಲೊ
   5 ವರ್ಷ    18 ಕಿಲೊ    1.8 ಕಿಲೊ
   6 ವರ್ಷ    20 ಕಿಲೊ    2.0 ಕಿಲೊ
   7 ವರ್ಷ    22 ಕಿಲೊ    2.2 ಕಿಲೊ
   8 ವರ್ಷ    25 ಕಿಲೊ    2.5 ಕಿಲೊ
   9 ವರ್ಷ    27 ಕಿಲೊ    2.7 ಕಿಲೊ
   10 ವರ್ಷ    30 ಕಿಲೊ    3.0 ಕಿಲೊ
   11 ವರ್ಷ    33 ಕಿಲೊ    3.3 ಕಿಲೊ
   12 ವರ್ಷ    37 ಕಿಲೊ    3.7 ಕಿಲೊ

13 ವರ್ಷದ ಮೇಲ್ಪಟ್ಟ ಬಾಲಕ ಮತ್ತು ಬಾಲಕಿಯರು ಹೊರಬೇಕಾದ ಸ್ಕೂಲ್ ಬ್ಯಾಗಿನ ಭಾರದ ಬಗ್ಗೆಯೂ ಈ ಅಧ್ಯಯನ ತನ್ನ ವರದಿಯಲ್ಲಿ ಹೀಗೆ ಸ್ಪಷ್ಟಪಡಿಸಿದೆ:

   ವಯಸ್ಸು  ಬಾಲಕಿಯರ           ತೂಕ ಬ್ಯಾಗಿನ  ತೂಕ ಬಾಲಕರ ತೂಕ  ಬ್ಯಾಗಿನ ತೂಕ
      13     44 ಕಿಲೊ    4.4 ಕಿಲೊ     40 ಕಿಲೊ     4.0 ಕಿಲೊ
      14     48 ಕಿಲೊ    4.8 ಕಿಲೊ     46 ಕಿಲೊ     4.6 ಕಿಲೊ
      15     52 ಕಿಲೊ    5.2 ಕಿಲೊ     53 ಕಿಲೊ     5.3 ಕಿಲೊ
      16     54 ಕಿಲೊ    5.4 ಕಿಲೊ     59 ಕಿಲೊ     5.9 ಕಿಲೊ
      17     55 ಕಿಲೊ    5.5 ಕಿಲೊ     62 ಕಿಲೊ     6.2 ಕಿಲೊ
      18     56 ಕಿಲೊ    5.6 ಕಿಲೊ     69 ಕಿಲೊ     6.3 ಕಿಲೊ

 

[ಆಧಾರ: ಐಲ್ರ್ಯಾಂಡಿನ ರಿಪೋರ್ಟ್ ಆಪ್ಪದಿ ವರ್ಕಿಂಗ್ ಗ್ರುಪ್ 1997]

ಈ ಮೇಲಿನ ಸಮೀಕ್ಷೆ ಮತ್ತು ವರ್ಕಿಂಗ್ ಗ್ರುಪ್ ಅಧ್ಯಯನದಂತೆ ಬಹುತೇಕವಾಗಿ ವಿಶ್ವದ ಇತರೆಡೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶರೀರದ ಒಟ್ಟು ತೂಕದ ಹತ್ತು ಪ್ರತಿಶತಕ್ಕಿಂತಲೂ ಹೆಚ್ಚಿನ ಭಾರದ ಶಾಲಾ ಬ್ಯಾಗುಗಳನ್ನು ಹೊರುವುದಿದೆ. ಇದು ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜೊತೆಗೆ, ಚಿಕ್ಕ ವಯಸ್ಸಿನಲ್ಲಿಯೇ ಬೆನ್ನು ಮೂಳೆ ರೋಗಕ್ಕೆ ತುತ್ತಾಗುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ಮಕ್ಕಳು ಹೆಗಲಿಗೇರಿಸುವ ರಂಗು ರಂಗಾದ ಶಾಲಾ ಬ್ಯಾಗುಗಳಲ್ಲಿ ಅರ್ಧದಷ್ಟು ಅವೈಜ್ಞಾನಿಕವಾಗಿದ್ದು ಮಕ್ಕಳ ಬೆನ್ನು ನೋವಿಗೆ ಕಾರಣವಾಗುವಂತಿವೆ ಎನ್ನಲಾಗಿದೆ.

ಸ್ಕೂಲ್ ಬ್ಯಾಗುಗಳ ಭಾರದ ವಿಷಯವಾಗಿ ಸುಮಾರು 35 ಪ್ರತಿಶತದಷ್ಟು ಪ್ರಾಥಮಿಕ ಶಾಲೆಯ ಹಂತಗಳಲ್ಲಿ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಮಾಧ್ಯಮಿಕ ಶಾಲೆಗಳ ಹಂತದಲ್ಲಿ ಆ ಪ್ರಮಾಣ ಕಡಿಮೆ ಎಂದು ಹೇಳಲಾಗುತ್ತದೆ. ನಮ್ಮಲ್ಲಂತೂ ಅತ್ಯಂತ ಅವೈಜ್ಞಾನಿಕವಾಗಿ ಮಕ್ಕಳು ಹೊರಲಾಗದ ಭಾರವನ್ನು ಹೊತ್ತು ಶಾಲೆಗೆ ತೆವಳುತ್ತಾ ತೆರಳುವ ದೃಶ್ಯ ನಮ್ಮ ಕಣ್ಣಿಗೆ ನಿತ್ಯವೂ ಬೀಳುತ್ತದೆ. ಶೈಕ್ಷಣಿಕ ಪರಿಸರದಲ್ಲಿರುವ ತಜ್ಞರು ಮತ್ತು ಸರಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು. ಮಕ್ಕಳ ದೇಹ ಮತ್ತು ಮನಸಿನ ಮೇಲೆ ಅಡ್ಡ ಪರಿಣಾಮ ಬೀರದ ಹಾಗೆ ಮತ್ತು ಮಕ್ಕಳ ಮನಸು ಉಲ್ಲಾಸಿತವಾಗಿರುವಂತೆ ಸ್ಕೂಲ್ ಬ್ಯಾಗಿನ ತೂಕವನ್ನು ನಿರ್ಧರಿಸಬೇಕಿದೆ.

ಶಿಕ್ಷಣದ ಗುಣಮಟ್ಟ ಎನ್ನುವುದು ಕಟ್ಟಡ, ಯುನಿಫಾರ್ಮ್, ಸ್ಕೂಲ್ ಬ್ಯಾಗ್, ಹೋಮ್ ವರ್ಕ್, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಂಖ್ಯೆಯನ್ನು ಮೀರಿರುವಂಥದ್ದು. ಪಠ್ಯಕ್ರಮವನ್ನು ಕೂಡಾ ಅದಷ್ಟು ವಸ್ತುನಿಷ್ಠವಾಗಿ ರೂಪಿಸಬೇಕು. ಒಟ್ಟಾರೆ ಮಕ್ಕಳು ಖುಷಿಯಿಂದ ಓದಬಹುದಾದ ಪರಿಸರವನ್ನು ನಿರ್ಮಿಸಿಕೊಡಬೇಕು. ಪಠ್ಯಕ್ರಮ ಮತ್ತು ಪುಸ್ತಕಗಳೇ ಬ್ಯಾಗಿಗೆ ಮೂಲ ಭಾರವಾಗುವಂತಾಗಬಾರದು. ಅತ್ಯಂತ ಅರ್ಥವತ್ತಾಗಿ ಪಠ್ಯಕ್ರಮ ರೂಪಿಸುವ ಜೊತೆಗೆ, ನಿಗದಿತ ತೂಕವನ್ನು ಮೀರಿ ಬ್ಯಾಗ್ ಹೊರುವುದನ್ನು ನಿರ್ಬಂಧಿಸಬೇಕು.

ಕೆಲವು ಶಾಲೆಗಳಲ್ಲಿ ಮಕ್ಕಳು ತೆಗೆದುಕೊಂಡು ಹೋದ ಪುಸ್ತಕಗಳನ್ನು ಶಾಲೆಯಲ್ಲಿಯೇ ಇಡುವಂತೆ ಅವಕಾಶ ಮಾಡಿಕೊಡಲಾಗುತ್ತದೆ. ವಿದ್ಯಾರ್ಥಿ ಕುಳಿತುಕೊಳ್ಳುವ ಡೆಸ್ಕ್ ಕೆಳಗಡೆಯೇ ಇಡುವ ವ್ಯವಸ್ಥೆಯನ್ನೂ ಮಾಡಬಹುದು, ಇಲ್ಲವೇ ಸಾಲಾಗಿ ಆಯಾ ತರಗತಿಗಳಲ್ಲಿ ಲಾಕರುಗಳನ್ನು ಮಾಡಿ ಅಲ್ಲಿಯೇ ಇಡುವಂತೆ ವ್ಯವಸ್ಥೆ ಮಾಡಬಹುದು. ಪಾಲಕರು ಮತ್ತು ಶಿಕ್ಷಕರು ಈ ಬಗ್ಗೆ ಪರಸ್ಪರ ಸಹಕರಿಸುವುದು ಅನಿವಾರ್ಯ. ಅತ್ಯಂತ ಕಡಿಮೆ ತೂಕದ ಪುಸ್ತಕಗಳನ್ನು ಮುದ್ರಿಸುವಂತೆ ಪ್ರಕಾಶಕರಿಗೆ ಮಾರ್ಗದರ್ಶನ ಮಾಡಬೇಕು. ಹೋಂವರ್ಕನ್ನು ಒಂದೆರಡು ಹಾಳೆಗಳಲ್ಲಿ ಬರೆದು ತರುವಂತೆ ಸೂಚಿಸಬೇಕು. ಪ್ರತಿ ವಿಷಯಕ್ಕೂ ಒಂದೊಂದು ನೋಟಬುಕ್ ಎಂತಾದಾಗ ಅದೇ ಸಾಕಷ್ಟು ಭಾರವಾಗುತ್ತದೆ. ಶಿಕ್ಷಕರಪಾಲಕರ ಸಭೆಯಲ್ಲಿ ಈ ಬಗ್ಗೆ ಮುಕ್ತವಾಗಿ ಚರ್ಚಿಸಿ, ಆರೋಗ್ಯಕರ ತೀರ್ಮಾನಕ್ಕೆ ಬರಬೇಕು. ಹಾಗೆ ನೋಡಿದರೆ ತೆಲಂಗಾಣದ ಮಾದರಿಯಲ್ಲಿ ದೇಶದ ಎಲ್ಲ ರಾಜ್ಯಗಳು ಸ್ಕೂಲ್ ಬ್ಯಾಗ್ ನ ಭಾರದ ವಿಷಯವಾಗಿ ಒಂದು ಏಕರೂಪದ ಅತ್ಯುತ್ತಮ ಮಾದರಿಯನ್ನು ಅನುಸರಿಸುವ ಮೂಲಕ ನಮ್ಮ ಮಕ್ಕಳ ಭವಿಷ್ಯ ಮತ್ತು ಆರೋಗ್ಯದ ಬಗ್ಗೆ ರಚನಾತ್ಮಕವಾಗಿ ಯೋಚಿಸುವ, ತೀರ್ಮಾನಿಸುವ ಅಗತ್ಯವಿದೆ

ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವ ಮಾತಿನಂತೆ ನಮ್ಮಲ್ಲಿ ಯಾವುದೋ ಒಂದು ತೊಡಕಿನ ಸುಧಾರಣೆಗೆ ಇಲಿಯ ಹುಡುಕಾಟದಲ್ಲಿ ಬೆಟ್ಟವನ್ನು ಅಗೆಯುವ ಗುದುಮುರಿಗೆಗೆ ಬೀಳಲಾಗುತ್ತದೆ. ಪರಿಣಾಮವಾಗಿ ಸಮಯ ಮತ್ತು ಶ್ರಮ ಎರಡೂ ವ್ಯರ್ಥವಾಗುತ್ತವೆ. ಆ ಸಮಸ್ಯೆ ಯಾವ ವಲಯಕ್ಕೆ ಸಂಬಂಧಿಸಿದೆಯೋ ಅವರಂತೂ ಅದು ತಮಗೆ ಸಂಬಂಧವೇ ಇಲ್ಲ, ಬೆಕ್ಕಿಗೆ ಗಂಟೆ ಕಟ್ಟುವವರಾರು ನೋಡೊಣ ಎನ್ನುವಂತೆ ಕಾಯುತ್ತಿರುತ್ತಾರೆ. ಇನ್ನು ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಭವ್ಯವಾದ ಕಟ್ಟಡಕ್ಕೆ ಸೀಮಿತಗೊಳಿಸಿರುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಆಡಳಿತಗಾರರಿಗೆ ಇದು ಸಮಸ್ಯೆಯೇ ಅಲ್ಲ. ಅಷ್ಟಕ್ಕೂ ಆ ಸ್ಕೂಲ ಬ್ಯಾಗಿನ ಭಾರ ಅವರನ್ನು ಬಾಧಿಸಿರುವುದೇ ಕಡಿಮೆ. ಅದೇನಿದ್ದರೂ ಆ ಮಕ್ಕಳ ಮತ್ತು ಅವರ ಪ್ರೇಕ್ಷಕರ ತಲೆನೋವು, ತಮ್ಮದಲ್ಲ ಎನ್ನುವಂತೆ ಮೌನವಹಿಸುವದಿದೆ.

ಕೆಲವು ಶಿಕ್ಷಕರಲ್ಲಾದರೂ ಮಕ್ಕಳ ಸ್ಕೂಲ್ ಬ್ಯಾಗ್ ನ ಭಾರ ಇಳಿಸುವ ವಿಷಯವಾಗಿ ಸೃಜನಶೀಲ ಐಡಿಯಾಗಳಿದ್ದರೂ ಅವುಗಳಿಗೆ ಮನ್ನಣೆ ಸಿಗುತ್ತಿಲ್ಲ. ಇನ್ನು ಅಳಿದುಳಿದ ಕೆಲವೇ ಕೆಲವು ಶಿಕ್ಷಣ ತಜ್ಞರು ಉನ್ನತ ಶಿಕ್ಷಣದ ವಲಯದಲ್ಲಿ ಗುಣಮಟ್ಟದ ಸುಧಾರಣೆ ವಿಷಯವಾಗಿ ಅಂತರರಾಷ್ಟ್ರೀಯ ಮಟ್ಟದ ವಿಚಾರಸಂಕಿರಣಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರಲ್ಲಿ ಶಾಲಾ ಮಕ್ಕಳ ಬ್ಯಾಗಿನ ಭಾರದ ವಿಷಯವಾಗಿ ಯೋಚಿಸುವ ಪುರಸೊತ್ತೂ ಇಲ್ಲ. ಅದು ಅವರ ಆಸಕ್ತಿಯ ಕೇಂದ್ರವೂ ಅಲ್ಲ.

ಪ್ರತಿಯೊಂದು ಶಾಲೆಯಲ್ಲೂ ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸಿಕೊಟ್ಟರೆ ಮಕ್ಕಳು ಮನೆಯಿಂದ ಹೊತ್ತೊಯ್ಯುವ ವಾಟರ್ ಬಾಟಲ್ ಭಾರ ಆ ಬ್ಯಾಗಿನಿಂದ ಮೈನಸ್ ಆಗುತ್ತದೆ. ಹಾಗೆಯೇ ಸ್ವಚ್ಚ ಮತ್ತು ಪೌಷ್ಟಿಕ ಆಹಾರವನ್ನು ಶಾಲೆಯಲ್ಲಿಯೇ ಎಲ್ಲ ಮಕ್ಕಳಿಗೆ ಕೊಡುವಂತಾದರೆ ಕನಿಷ್ಟ ಊಟದ ಡಬ್ಬಿ ಮತ್ತು ನೀರಿನ ಬಾಟಲ್ ಗಳ ಭಾರವಾದರೂ ಕಡಿಮೆಯಾಗುತ್ತದೆ.

ಅದೇ ರೀತಿ ದಿನಾಲು ಎಲ್ಲ ಪುಸ್ತಕಗಳನ್ನು ಹೊತ್ತು ತರುವ ಬದಲಾಗಿ ಅಗತ್ಯ ಪುಸ್ತಕಗಳು ಯಾವುವು ಎನ್ನುವುದನ್ನು ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಕೂಡಿ ನಿರ್ಧರಿಸಬೇಕು. ಕಲಿಕೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಪಾಲಿಗೆ ಎಲ್ಲ ರೀತಿಯಿಂದಲೂ ಭಾರವಾಗುತ್ತಿದೆ. ಅವರು ಶಾಲೆಗೆ ಹೋಗುವ ಉಮೇದಿಗೆ ಅನೇಕ ಬಗೆಯ ತೊಡಕುಗಳಿವೆ. ಅದರಲ್ಲಿ ಈ ಮಣಭಾರದ ಬ್ಯಾಗೂ ಸೇರಿದೆ. ಜೊತೆಗೆ ಅದಕ್ಕಿಂತಲೂ ಭಾರವೆನಿಸುವ ಪಠ್ಯಕ್ರಮ. ನೀರಿಳಿಯದ ಗಂಟಲೊಳಗೆ ಕಡಬು ತುರುಕುವ ಯತ್ನದಂತೆ ಇಂದಿನ ಪಠ್ಯಕ್ರಮವಿದೆ. ಈ ಅಸಂಬದ್ಧ ಪಠ್ಯಕ್ರಮ ಆಡ್ತಾ ಆಡ್ತಾ ಕಲಿಯುವ ಕ್ರಮದಿಂದ ನಮ್ಮ ಮಕ್ಕಳನ್ನು ವಂಚಿಸಿದೆ. ಆಟವಾಡಿ ಬೆಳೆಯಬೇಕಾದ ಮಕ್ಕಳ ಮನಸಿನಲ್ಲಿ ಈಗ ಶಾಲೆಯಲ್ಲಿ ಮುಗಿಸಲು ಹೇಳಿದ ಹೋಂ ವರ್ಕ್ ಉದ್ವೇಗವಿದೆ.

 

ಹೊರೆ ಇಳಿಸಲು ಕೇಂದ್ರದ ಆದೇಶ ಈ ಲೇಖನವನ್ನು ಬರೆದುಮುಗಿಸುವ ಹೊತ್ತಿಗಾಗಲೇ ಕೇಂದ್ರ ಸರಕಾರ ಸ್ಕೂಲ್ ಬ್ಯಾಗುಗಳ ಭಾರವನ್ನು ಕಡಿಮೆ ಮಾಡುವ ಸಂಬಂಧ ಆದೇಶವೊಂದನ್ನು ಹೊರಡಿಸಿದೆ. ಆ ಮೂಲಕ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇನ್ನು ಮುಂದೆ ಈ ಆದೇಶವನ್ನು ಪಾಲಿಸಲೇಬೇಕಾಗುತ್ತದೆ. ರಾಜ್ಯ ಸರಕಾರವೂ ಈ ದಿಶೆಯಲ್ಲಿ ಕ್ರಮ ತೆಗೆದುಕೊಳ್ಳಲೇಬೇಕಾಗುತ್ತದೆ. ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸೂಚನೆಯ ಪ್ರಕಾರ ಯಾವ ತರಗತಿಯ ಮಕ್ಕಳಿಗೆ ಎಷ್ಟು ತೂಕದ ಬ್ಯಾಗು ಎನ್ನುವುದನ್ನು ಹೀಗೆ ನಿರ್ಧರಿಸಿದೆ. ಆ ಪ್ರಮಾಣ ಕೆಳಗಿನಂತಿದೆ.

             ತರಗತಿ   ಸ್ಕೂಲ್ ಬ್ಯಾಗಿನ ತೂಕ
       1-2 ನೇ ತರಗತಿ         1.5 ಕಿಲೊ
  3 ರಿಂದ 5 ನೇ ತರಗತಿ         1.5 ಕಿಲೊ
  6 ರಿಂದ 7 ನೇ ತರಗತಿ         1.5 ಕಿಲೊ
  8 ರಿಂದ 9 ನೇ ತರಗತಿ         1.5 ಕಿಲೊ
       10 ನೇ ತರಗತಿ         1.5 ಕಿಲೊ

 

 

ಶಾಲೆಗೆ ಹೋಗುವುದನ್ನೇ ಶಿಕ್ಷೆ ಎಂದು ಪರಿಭಾವಿಸುವಂತೆ ಮಾಡಿದ್ದಾರು? ಎಲ್ಲ ನಗರ ಪ್ರದೇಶಗಳಲ್ಲಿ ರಿಕ್ಷಾಗಳ ಎಡಬದಿಯಲ್ಲಿ ಈ ಸ್ಕೂಲ್ ಬ್ಯಾಗುಗಳು ಜೋತು ಬಿದ್ದಿರುವದನ್ನು ನೋಡಿದರೆ ಭಯವಾಗುತ್ತದೆ. ಒಳಗಡೆ ಸಣ್ಣಸಣ್ಣ ಮಕ್ಕಳು ಹೊರಬದಿ ಅವರಷ್ಟೇ ತೂಕದ ಬ್ಯಾಗುಗಳು ಮಕ್ಕಳು ಲೋಡ್ ತುಂಬಿದ ಲಾರಿಯಂತೆ ತೂರಾಡುತ್ತಾ ಸಾಗುವ ಆ ರಿಕ್ಷಾ ನೋಡಿದರೆ, ಮಕ್ಕಳು ಸುರಕ್ಷಿತವಾಗಿ ಮನೆಗೆ ಬಂದು ತಲುಪುವವರೆಗೆ ಪಾಲಕರ ಎದೆ ಢವಢವ. ಶೈಕ್ಷಣಿಕ ಪರಿಸರದಲ್ಲಿಯ ಯಾವುದೇ ಸಮಸ್ಯೆ ಬಗೆಹರಿಯದ ರೀತಿಯಲ್ಲಿರುವದಿಲ್ಲ. ಸುಧಾರಣೆಗಾಗಿ ಮಾತನಾಡುವ, ಸಲಹೆ ನೀಡುವ ವೇಗದಲ್ಲಿ ಕಾರ್ಯಾಚರಣೆಗಿಳಿಯುವ ಮನಸು ಮಾಡುವದಿಲ್ಲ. ಹಾಗಾಗಿಯೇ ಸಮಸ್ಯೆಯ ಬಗ್ಗೆ ನಡೆಯುವ ಚರ್ಚೆಗಳು ಬರೀ ಧೂಳು ಎಬ್ಬಿಸುತ್ತವೆಯೇ ಹೊರತು ಸ್ವಚ್ಚಗೊಳಿಸುವುದಿಲ್ಲ.

 

 

 

 

Leave a Reply

Your email address will not be published.