ಸ್ಟಾರ್ ನಟರ ನಿಲ್ಲದ ‘ಪೊಗರು’ ಅಪ್‍ಡೇಟ್ ಆಗದ ‘ರಾಬರ್ಟ್’

ಕೋವಿಡ್ ನಂತರ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಆಕ್ಟ್ 1978′ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಉತ್ತಮ ಆರಂಭವನ್ನೇ ನೀಡಿತು. ಆದರೆ ಈಗ ಬಿಡುಗಡೆಯಾಗಿರುವ ‘ಪೊಗರುಮತ್ತುರಾಬರ್ಟ್ಸಿನಿಮಾಗಳು ಹುಟ್ಟಿಸಿದ ಬೇಸರ ಅಷ್ಟಿಷ್ಟಲ್ಲ.

ಮುದ್ದುಪ್ರಿಯ

ಕನ್ನಡ ಚಿತ್ರರಂಗದ ಸ್ಟಾರ್ ನಟರಿಗೆ ಇರುವ ಅಭಿಮಾನಿ ವರ್ಗ ಯಾವುದೇ ಜನಪ್ರಿಯ ರಾಜಕಾರಣಿಯ ಅಭಿಮಾನಿ ವರ್ಗಕ್ಕೆ ಸಮವೆಂದರೂ ಅತಿಶಯವಾಗದು. ಆದರೆ ಇದನ್ನೇ ಸ್ಟಾರ್ ನಟರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಎಂಬ ಗುಮಾನಿ ಹುಟ್ಟುತ್ತಿದೆ.

ಒಳ್ಳೆಯ ಸಿನಿಮಾ ಕೊಟ್ಟರೂ, ಕೆಟ್ಟ ಸಿನಿಮಾ ಕೊಟ್ಟರೂ ನೋಡುವ ಕನ್ನಡ ಪ್ರೇಕ್ಷಕ ವರ್ಗ ಇತ್ತೀಚಿನ ದಿನಗಳಲ್ಲಿ ಕೊಂಚ ಬದಲಾಗುತ್ತಿದ್ದಾರೆ. ಓಟಿಟಿ ವೇದಿಕೆಗಳು ಬಂದ ಮೇಲೆ ಸುಲಭವಾಗಿ ಇತರ ಭಾಷೆಗಳ ಸಿನಿಮಾಗಳು ಕೈಗೆಟಕುತ್ತಿರುವುದರಿಂದ ಒಳ್ಳೆಯ ಕತೆ ಹಾಗೂ ಕೆಟ್ಟ ಕತೆಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸುತ್ತಿದ್ದಾರೆ. ಯಾವುದೇ ಸಿನಿಮಾವನ್ನು ನಕಲು ಮಾಡಿದ್ದರೂ ಪ್ರೇಕ್ಷಕ ತಕ್ಷಣ ಗುರುತಿಸುವಷ್ಟು ಶಕ್ತನಾಗಿದ್ದಾನೆ. “ನಾನು ಏನು ಕೊಟ್ಟರೂ ಪ್ರೇಕ್ಷಕ ನೋಡುತ್ತಾನೆ” ಎಂಬ ದೌಲತ್ತು ಮಾತ್ರ ಸ್ಟಾರ್ ನಟರಿಗಿದ್ದರೆ ಅದನ್ನು ಬಿಡಬೇಕಾದದ್ದು ಇಂದಿನ ತುರ್ತು. ಆದರೆ ಈ ನಿಟ್ಟಿನಲ್ಲಿ ಅವರು ಯೋಚಿಸಿದ್ದಾರಾ ಎಂಬುದೇ ಪ್ರಶ್ನೆಯಾಗಿ ಉಳಿದಿದೆ.

ಕೋವಿಡ್ ನಂತರ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ‘ಆಕ್ಟ್ 1978′ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಉತ್ತಮ ಆರಂಭವನ್ನೇ ನೀಡಿತು. ಹಲವು ಸೂಕ್ಷ್ಮ ಸಂಗತಿಗಳನ್ನು ಒಳಗೊಂಡು, ಸಂವೇದನಾಶೀಲ ನಿರ್ದೇಶಕ ಮಂಸೋರೆ ನಿರ್ದೇಶಿದ್ದ ಈ ಸಿನಿಮಾ, ಈಗ ಅಮೆಜಾನ್ ಪ್ರೈಮ್ ನಲ್ಲೂ ಸ್ಟ್ರೀಮಿಂಗ್ ಆಗಿ ರಾಜ್ಯದ ಗಡಿದಾಟಿ ಪ್ರೇಕ್ಷಕರ ಮನಸೆಳೆದಿದೆ. ಇಂತಹ ಸಂದರ್ಭದಲ್ಲಿ ಬಿಡುಗಡೆಯಾದ ‘ಪೊಗರು‘ ಮತ್ತು ‘ರಾಬರ್ಟ್’ ಸಿನಿಮಾಗಳು ಹುಟ್ಟಿಸಿದ ಬೇಸರ ಅಷ್ಟಿಷ್ಟಲ್ಲ.

‘ರಾಬರ್ಟ್’ ಕತೆ ಸವಕಲು ಎಂಬ ಕಾರಣಕ್ಕೆ ಬೇಸರ ತರಿಸಿದರೆ, ‘ಪೊಗರು‘, ಸಿನಿಮಾ ವ್ಯಾಕರಣಕ್ಕಿರುವ ಘನತೆಯನ್ನೇ ಮಣ್ಣುಪಾಲು ಮಾಡಿದ್ದರಿಂದ ಅದು ತೃತೀಯದರ್ಜೆಯಲ್ಲೂ ನಿಲ್ಲುವುದಿಲ್ಲ ಎನಿಸುತ್ತದೆ. “ಸುಮಾರು ಎರಡೂವರೆ ಗಂಟೆಗಳ ಹುಚ್ಚಾಟವನ್ನು ನೋಡಿಕೊಂಡು ಬಂದೆ” ಎಂದು ಆತ್ಮೀಯರೊಬ್ಬರು ‘ಪೊಗರು‘ ವೀಕ್ಷಿಸಿದ ಬಳಿಕ ವಿಷಾದದಿಂದ ಹೇಳಿದರು.

ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದಾಗ, ಧ್ರುವ ಸರ್ಜಾ ಸಾಮಾಜಿಕ ಜೀವನದಲ್ಲಿ ತೋರಿದ ಕೆಲವು ಅಧಿಕ ಪ್ರಸಂಗಗಳನ್ನು ನೋಡಿ ಆತನ ಮೇಲಿದ್ದ ಅಭಿಮಾನವೂ ಕರಗಿ ಹೋಗಿತ್ತು. ಆದರೂ ಗಟ್ಟಿ ಮನಸ್ಸು ಮಾಡಿ ‘ಪೊಗರು’ ನೋಡಿದಾಗ, “ಇದೊಂದು ಸಿನಿಮಾನಾ? ಸಿನಿಮಾವೆಂದರೆ ಏನಂದುಕೊಂಡಿದ್ದಾರೆ? ಇಡೀ ಸಿನಿಮಾ ಪೂರ್ತಿ ಧ್ರುವ ಹೀರೋಯಿಸಂ ತೋರಿಸುವುದು ಬಿಟ್ಟರೆ ಮತ್ತೇನು ನೋಡುಗನ ಮನಸ್ಸಿನಲ್ಲಿ ಉಳಿದೀತು? ವಾಕರಿಕೆ ಬರಿಸುವ ಕಥಾನಾಯಕನ ಹುಚ್ಚಾಟಗಳಿಗೆ ಮಿತಿಯೇ ಇಲ್ಲವಲ್ಲ, ಈ ಥರದ ಸಿನಿಮಾಗಳನ್ನು ಪ್ರೇಕ್ಷಕರು ಯಾಕಾದರೂ ನೋಡುತ್ತಾರೋ?” ಎಂದು ಬೈಯದೆ ವಿಧಿ ಇರಲಿಲ್ಲ.

ಸಿನಿಮಾದಲ್ಲಿ ಸಂಭಾಷಣೆ ಹೇಗಿರಬೇಕು ಎಂಬುದಕ್ಕೆ ಗಿರೀಶ್ ಕಾಸರವಳ್ಳಿಯವರು ಈಚೆಗೆ ಮಾತನಾಡಿದ್ದು ಗಮನಿಸಿದೆ. “ಚಲನಚಿತ್ರವೆಂಬ ಸಶಕ್ತ ಮಾಧ್ಯಮದಲ್ಲಿ ನನ್ನ ಪ್ರಕಾರ ದೃಶ್ಯಗಳು ಮಾತನಾಡಬೇಕು. ಇಲ್ಲಿ ಸಂಭಾಷಣೆಗೆ ಮಾನ್ಯತೆ ಇಲ್ಲ. ದೃಶ್ಯದಲ್ಲಿ ಹೇಳಲು ಸಾಧ್ಯವಾಗುತ್ತಲೇ ಇಲ್ಲ ಎನಿದಾಗ ಮಾತ್ರ ಸಂಭಾಷಣೆ ಅನಿವಾರ್ಯವಾಗಬೇಕು” ಎನ್ನುತ್ತಾರೆ ಕಾಸರವಳ್ಳಿ. ಕಲಾತ್ಮಕ ಸಿನಿಮಾಗಳಿಗಷ್ಟೇ ಈ ಮಾತು ಸೀಮಿತವಾಗಬೇಕಿಲ್ಲ. ಈ ನಿಟ್ಟಿನಲ್ಲಿ ಮಲಯಾಳಂ ಸಿನಿಮಾ ಮೇಕರ್ಸ್‍ಗಳು ಸಂಭಾಷಣೆಗೆ ನೀಡುವ ಸ್ಪರ್ಶವನ್ನು ಗಮನಿಸಬೇಕು.

ಇತ್ತೀಚೆಗೆ ಬಿಡುಗಡೆಯಾದ ‘ಜನಗಣಮನ’ ಸಿನಿಮಾ ಟ್ರೈಲರ್ (ಮಲಯಾಳಂ) ಒಳಗೊಂಡಿರುವ ಸಂಭಾಷಣೆ ಮತ್ತೆ ಮತ್ತೆ ಕಾಡುತ್ತಿದೆ. ಸೂರಜ್ ವೆಂಜರಮೂಡು, ಪೃಥ್ವಿರಾಜ್ ಸುಕುಮಾರ್ ನಟಿಸಿರುವ ಆ ಸಿನಿಮಾದಲ್ಲಿ ಸೂರಜ್ ಪೊಲೀಸ್ ಆಗಿದ್ದು, ಪೃಥ್ವಿ ಆರೋಪಿಯಾಗಿ ಪೊಲೀಸರ ಮುಂದೆ ಕುಳಿತಿದ್ದಾನೆ. ಸೂರಜ್ (ಪೊಲೀಸ್) ಹೇಳುತ್ತಾನೆ: “ನಿನ್ನ ವಿರುದ್ಧ ಎಲ್ಲ ಸಾಕ್ಷಿಗಳಿವೆ. ನೀನು ತಪ್ಪಿಸಿಕೊಳ್ಳಲು ಆಗಲ್ಲ.” ಆರೋಪಿ: “ನಾನು ಬಿಡುಗಡೆಯಾಗಬೇಕು”. ಪೊಲೀಸ್: “ನಿನ್ನ ವಿರುದ್ಧ ಎಲ್ಲ ಸಾಕ್ಷ್ಯಗಳಿವೆ. ಸತ್ಯ ಅನ್ನೋದೊಂದಿರುತ್ತೆ, ಒಂದೇ ಇರುತ್ತೆ ಮತ್ತು ಅದೇ ಯಾವಾಗಲೂ ಗೆಲ್ಲುತ್ತೆ.” ಆರೋಪಿ ವ್ಯಂಗ್ಯವಾಗಿ ನಕ್ಕು ಹೇಳುತ್ತಾನೆ: “ಗಾಂಧಿಯನ್ನು ಕೊಂದ ಬಗ್ಗೆ ಪರ-ವಿರೋಧ ಎರಡೂ ಅಭಿಪ್ರಾಯ ಇರುವ ದೇಶ ಸರ್ ಇದು”.

ಈ ಸಂಭಾಷಣೆ ಕೇಳಿದಾಗ ಹುಟ್ಟಿದ ತಳಮಳ ಅಷ್ಟಿಷ್ಟಲ್ಲ. ಅಬ್ಬಾ ಎಂತಹ ಸಂಭಾಷಣೆ, ಎಂತಹ ಪ್ರಬುದ್ಧತೆ. ಕತೆ ಉತ್ತಮವಾಗಿದ್ದರೆ ಅದರಲ್ಲಿ ಕಟ್ಟಿದ ಸಂಭಾಷಣೆಯೂ ಉತ್ಕøಷ್ಟವಾಗಿರುತ್ತದೆ ಎಂಬುದನ್ನು ಮಲಯಾಳಿಗರು ಅನೇಕ ಸಲ ಸಾಬೀತು ಮಾಡಿದ್ದಾರೆ. ಕತೆಯೇ ಇಲ್ಲದ ಸಿನಿಮಾಗಳಲ್ಲಿ ಬರೀ ಮಾತುಗಳಿರುತ್ತವೆಯಷ್ಟೇ. ಸಂಭಾಷಣೆ ಎಂದರೆ ಪಂಚಿಂಗ್ ಎಂದೇ ತಿಳಿದಿರುವ ನಮ್ಮ ಸ್ಟಾರ್‍ಗಳ ಸಿನಿಮಾದಲ್ಲಿ ಬಹುತೇಕ ಸಂಭಾಷಣೆಗಳು ಕತೆಯೊಂದಿಗೆ ಹುಟ್ಟಿ ಬರುವುದಿಲ್ಲ. ನಾಯಕನಟನ ಹೀರೋಯಿಸಂ ತೋರಿಸಲೆಂದೇ ತುರುಕಲ್ಪಟ್ಟಿರುತ್ತವೆ. ಪೊಗರುಸಿನಿಮಾ ಪೂರ್ತಿ ಧ್ರುವ ಸರ್ಜಾ ಒಬ್ಬನೇ ಮಾತನಾಡಿದ್ದಾನೆ ಅನಿಸುತ್ತದೆ. ಅಷ್ಟರ ಮಟ್ಟಿಗೆ ಪೊಗರುಮಾತಿನ ಭರಾಟೆಯಲ್ಲೇ ಮುಗಿದು ಹೋಗುತ್ತದೆ.

ಕೀಳು ಮಟ್ಟದಲ್ಲಿ ಪ್ರೇಮ ನಿವೇದನೆ ಮಾಡುವುದು, ಹುಡುಗಿಯ ಜುಟ್ಟು ಹಿಡಿದು ಎಳೆದಾಡುವುದು, ಹುಡುಗನ ಪ್ರೀತಿ ಹಾಗೆಹೀಗೆ ಎಂದು ಮಲತಂದೆಯ ಪ್ರೀತಿಯನ್ನು ಅರ್ಥಮಾಡಿಕೊಳ್ಳದ ಅವಿವೇಕಿ ಕಥಾನಾಯಕ ಉದ್ದುದ್ದ ಬೋಧನೆ ಮಾಡುವುದು, ಹಾದಿ ಬೀದಿಯಲ್ಲಿ ಹೋಗುವವರನ್ನೆಲ್ಲ ಕಿಚಾಯಿಸುವುದು, ಯಾರ ಅಪ್ಪಣೆ ಇಲ್ಲದೆ ಹುಡುಗಿಯ ಮನೆಗೆ ಗೂಳಿಯಂತೆ ನುಗ್ಗುವುದು… ಹುಡುಗಿಯನ್ನು ಮದುವೆ ಮಾಡಿಕೊಡುವಂತೆ ಕೇಳುವುದು, ಅದಕ್ಕೆ ನಾಯಕ ನಟಿಯೂ ಮಾನಸಿಕವಾಗಿ ಸಿದ್ಧವಿರುವುದು… ಇದೇ ಒಂದು ಸಿನಿಮಾವಾಗಿದೆ- ಅದೇ ‘ಪೊಗರು‘.

ಈ ದೇಶದಲ್ಲೊಂದು ಸಂವಿಧಾನವಿದೆ, ಕಾನೂನುಗಳಿವೆ ಎಂಬ ಕನಿಷ್ಠ ಪ್ರಜ್ಞೆಯೂ ಸಿನಿಮಾ ಮಾಡಿದ ನಿರ್ದೇಶಕ ನಂದಕಿಶೋರ್‍ಗೆ ಇಲ್ಲವಲ್ಲ! ಒಂದು ಸಿನಿಮಾ ಸಮಾಜದ ಮೇಲೂ ಪರಿಣಾಮ ಬೀರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆಕ್ಟ್-1978 ಸಿನಿಮಾ ನೋಡಿದ ಅಧಿಕಾರಿ ವರ್ಗ ಮುಜುಗರಪಟ್ಟಿರುವುದು ಸುಳ್ಳಲ್ಲ. ಇದು ಮಂಸೋರೆಯ ಯಶಸ್ಸು. ಅದೇ ರೀತಿ ‘ಪೊಗರು‘ ಕೂಡ ಬೀರುವ ದುಷ್ಪರಿಣಾಮಕ್ಕೆ ಯಾರು ಹೊಣೆ? ಈ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗಿದೆ ಎಂದು ಬ್ರಾಹ್ಮಣ ಧುರೀಣರು ಬೀದಿಗಿಳಿದದ್ದುಂಟು. ಹೀಗೆ ಹೋರಾಟಕ್ಕಿಳಿದವರಿಗೆ ಈ ಸಿನಿಮಾದಲ್ಲಿ ಇಡೀ ಸಂವಿಧಾನದ ಆಶಯಗಳಿಗೆ ಆಗಿರುವ ಅವಮಾನ ಕಾಣಲಿಲ್ಲ!

ಕ್ಲೈಮ್ಯಾಕ್ಸ್ ವೇಳೆಗೆ ಒಂದು ಡೈಲಾಗ್ ಬರುತ್ತೆ. “ಮಕ್ಳಾ ಸಿಂಪಲ್ಲಾಗಿ ಮೂರು ಹೊಡೆದಿದ್ದಕ್ಕೆ ಸೀರಿಯಸ್ಸಾಗಿದ್ದೀರಾ, ಇನ್ನು ಸೀರಿಯಸ್ಸಾಗಿ ಹೊಡೆದ್ರೆ ಸೀದಾ ಸ್ಮಶಾನನೇ” ಎನ್ನುತ್ತಾನೆ ಧ್ರುವ. ಇದು ಯಾವ ನೆಲೆಯಲ್ಲಿ ಹೇಳಿದ್ದಾನೆ ಎಂಬುದು ಕನ್ನಡ ಪ್ರೇಕ್ಷಕನಿಗೆ ಅರ್ಥವಾಗದ ಸಂಗತಿಯೇನಲ್ಲ. ಸಿಂಪಲ್ಲಾಗಿ ಮೂರು ಎಂದರೆ ಧ್ರುವ ಸರ್ಜಾನ ಹಿಂದಿನ ಮೂರು ಸಿನಿಮಾಗಳಷ್ಟೇ (ಅದ್ಧೂರಿ, ಬಹದ್ದೂರ್, ಭರ್ಜರಿ). ಒಂದು ಕುಟುಂಬದ ಹಿನ್ನೆಲೆಯಿಂದ ಬಂದು, ಚಿತ್ರರಂಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ಧ್ರುವನಿಗೂ ಒಂದಿಷ್ಟು ಅಭಿಮಾನಿಗಳಿದ್ದಾರೆ. ಧ್ರುವನ ಡೈಲಾಗ್ ಕೇಳಿದವರಿಗೆ ಕನ್ನಡದಲ್ಲಿ ಸ್ಟಾರ್‍ವಾರ್‍ಗಳು ಯಾಕೆ ಹುಟ್ಟಿಕೊಳ್ಳುತ್ತವೆ ಎಂಬುದು ಅರ್ಥವಾಗುತ್ತದೆ.

‘ಪೊಗರು’ ಕ್ಲೈಮ್ಯಾಕ್ಸ್ ವೇಳೆಗೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಕೂಡ ಅನಾವಶ್ಯಕವಾಗಿ ಕಂಡುಬರುತ್ತದೆ. ರಾಯಣ್ಣನನ್ನು ಕುರುಬನೆಂದು ಬ್ರಾಂಡ್ ಮಾಡಿರುವುದಕ್ಕೂ, ಈ ಸಿನಿಮಾದ ಆಡಿಯೋ ಬಿಡುಗಡೆಗೆ ಸಿದ್ಧರಾಮಯ್ಯನವರಂಥ ರಾಜಕೀಯ ನಾಯಕರನ್ನು ಆಹ್ವಾನಿಸಿದ್ದಕ್ಕೂ ಕನೆಕ್ಷನ್ ಇದೆ. ಕನ್ನಡ ಚಿತ್ರರಂಗ ಸೂಪ್ತವಾಗಿ ಬಿತ್ತುವ ಜಾತೀಯತೆಯ ಕುರಿತು ಬರೆಯುತ್ತಾ ಹೋದರೆ ಅದು ಮತ್ತೊಂದು ಲೇಖನವಾದೀತು. ಇಂತಹ ಕೀಳು ಅಭಿರುಚಿಯ ಸಿನಿಮಾಗಳ ಪ್ರಚಾರಕ್ಕೆ ಸಿದ್ದರಾಮಯ್ಯನವರಂಥ ಜೀವಪರ ರಾಜಕಾರಣಿಗಳು ಹೋಗುವುದಕ್ಕೆ ಮುಂಚೆ ಪೂರ್ವಾಪರಗಳನ್ನು ಯೋಚಿಸಬೇಕು.

ಪೊಗರು ಕತೆಯೇನೆಂದು ಹೇಳಲು ಹೋಗಲ್ಲ. ಜನರಿಗೆ ಹೇಳಬೇಕಾದ ಕತೆಯೇನೂ ಅಲ್ಲಿಲ್ಲ. ಇಡೀ ಸಿನಿಮಾದಲ್ಲಿ ನಾಯಕ ನಟನ ತೋಳನ್ನು ಎಷ್ಟು ಸಲ ತೋರಿಸಿದ್ದಾರೋ, ಲೆಕ್ಕ ಹಾಕಲಿಲ್ಲ ಕ್ಷಮಿಸಿ! ಗಂಡಸ್ತನದ ಪ್ರದರ್ಶನಕ್ಕಾಗಿ ಇಂತಹ ಸಿನಿಮಾಗಳು ಹುಟ್ಟಿಕೊಳ್ಳುತ್ತವೆ ಅಷ್ಟೇ!

ಕಲಾತ್ಮಕ ಸಿನಿಮಾಗಳನ್ನೇ ಮಾಡಿ ಎಂದು ಯಾರೂ ಹೇಳುತ್ತಿಲ್ಲ. ಬ್ರಿಡ್ಜ್ ಸಿನಿಮಾಗಳನ್ನು ಮಾಡಬಹುದಲ್ಲವೇ? ದಿಯಾ, ಲವ್ ಮಾಕ್ ಟೈಲ್, ಜಂಟಲ್ ಮ್ಯಾನ್, ಒಂದು ಮೊಟ್ಟೆಯ ಕತೆ ಥರದ ಸಿನಿಮಾಗಳನ್ನು ಕನ್ನಡಿಗರು ನೋಡಿದ್ದಾರೆ, ಮೆಚ್ಚಿದ್ದಾರೆ. ಇದನ್ನು ಯಾರೂ ಮರೆಯಬಾರದು. ಪೊಗರು ಸಿನಿಮಾದಲ್ಲಿ ರಾಘವೇಂದ್ರ ರಾಜ್‍ಕುಮಾರ್, ರವಿಶಂಕರ್, ಪವಿತ್ರ ಲೋಕೇಶ್, ಧನಂಜಯ, ಮಯೂರಿ ಅವರಂಥ ಅತ್ಯುತ್ತಮ ನಟರಿದ್ದರೂ ನಾಯಕ ನಟನ ಹುಚ್ಚಾಟಕ್ಕೆ ಹೆಚ್ಚು ಸ್ಪೇಸ್ ನೀಡಲಾಗಿದೆ. ನಿರ್ದೇಶಕ ನಂದಕಿಶೋರ್, ಈ ಹಿಂದೆ ‘ವಿಕ್ಟರಿ’, ‘ಅಧ್ಯಕ್ಷ’ ಸಿನಿಮಾಗಳನ್ನು ನಿರ್ದೇಶಿಸಿ ಕನಿಷ್ಠಪಕ್ಷ ಪ್ರೇಕ್ಷಕರನ್ನು ನಗಿಸಿದ್ದರು. ಈ ಸಿನಿಮಾದಲ್ಲಿ ಅದನ್ನೂ ಮಾಡಿಲ್ಲ.

ಸವಕಲು ಕತೆಯ ‘ರಾಬರ್ಟ್’

ದರ್ಶನ್ ಅವರಿಗಿರುವ ಅಭಿಮಾನಿ ವರ್ಗ ಕನ್ನಡದ ಯಾವ ನಟನಿಗೂ ಇಲ್ಲ. ಚಿಕ್ಕಮಕ್ಕಳಿಂದ ಹಿಡಿದು ಮುದುಕರವರೆಗೂ ದರ್ಶನ್‍ಗೆ ಅಭಿಮಾನಿಗಳಿದ್ದಾರೆ. ಅಭಿಮಾನಿಗಳು ದರ್ಶನ್ ಎಂತಹ ಸಿನಿಮಾ ಕೊಟ್ಟರೂ ನೋಡುತ್ತಾರೆ. ‘ರಾಬರ್ಟ್’ ಸಿನಿಮಾ ‘ಪೊಗರು‘ ಥರದ ತೃತೀಯದರ್ಜೆಯದಾಗದಿದ್ದರೂ ಇವತ್ತಿನ ವಿದ್ಯಮಾನಗಳಿಗೆ ಸ್ಟಾರ್ ನಟರ ಸಿನಿಮಾ ಕತೆಗಳು ಅಪ್ ಡೇಟ್ ಆಗುತ್ತಿಲ್ಲ ಎಂಬುದಕ್ಕೆ ನಿದರ್ಶನವಾಗಿ ನಿಲ್ಲುತ್ತದೆ.

ತಮಿಳಿನ ತೇರಿ, ಬಾಷಾ ಸಿನಿಮಾವನ್ನು ರಾಬರ್ಟ್ ಹೋಲುತ್ತದೆ. ಮೇಕಿಂಗ್‍ಗೆ ಹಣ ಖರ್ಚು ಮಾಡಿದ್ದಾರೆ, ಹಿನ್ನೆಲೆ ಸಂಗೀತ ಚೆನ್ನಾಗಿದೆ. ಆದರೆ ಎಣ್ಣೆ ಚೆಲ್ಲಿ ಹುಡುಗಿಯನ್ನು ನಾಯಕ ನಟನ ಮೇಲೆ ಬೀಳಿಸುವ ದೃಶ್ಯವನ್ನು ಇನ್ನೆಷ್ಟು ಸಿನಿಮಾಗಳಲ್ಲಿ ನೋಡಬೇಕೋ!?

ನಾಯಕನ ಅತೀವ ಒಳ್ಳೆಯತನಕ್ಕೆ ಮನಸೋಲುವ ನಾಯಕನಟಿಯ ಚಿತ್ರಣವೂ ಹೊಸತಲ್ಲ. ಸ್ನೇಹಿತನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರೌಡಿಸಂನಿಂದ ಹೊರಬಂದು, ಸ್ನೇಹಿತನ ಮಗನನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಕೂಡ ಹಳೆಯ ಕತೆ. ಹೀಗೆ ಓಬಿರಾಯನ ಕಾಲದ ಸಂಗತಿಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ತರುಣ್ ಕಿಶೋರ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ದರ್ಶನ ಥರದ ಸ್ಟಾರ್ ನಟರ ಮ್ಯಾನರಿಸಂಗಾಗಿ ನಿರ್ದೇಶಕನ ಶ್ರಮ ವ್ಯರ್ಥವಾದಂತಿದೆ.

‘ಚೌಕ’ದಂತಹ ಉತ್ತಮ ಸಿನಿಮಾ ನೀಡಿದ್ದ ನಿರ್ದೇಶಕ ತರುಣ್, ಕತೆಯ ನೆಲೆಯಲ್ಲಿ ಮುಂದೆ ಸಾಗಬೇಕಿತ್ತು. ಮುಂದಿನ ಸಿನಿಮಾಗಳಲ್ಲಿ ಮತ್ತಷ್ಟು ಗಟ್ಟಿಕತೆಗಳನ್ನು ಅವರು ನೀಡುತ್ತಾರೆಂದು ನಂಬೋಣ

Leave a Reply

Your email address will not be published.