ಸ್ನೇಹ ಹೀಗೆ ಜ್ಞಾನವನ್ನು ಸೃಷ್ಟಿಸುತ್ತದೆ

‘ಸ್ನೇಹ ಅನ್ನೋದು ನಮ್ಮ ಬೌದ್ಧಿಕ ಅನ್ವೇಷಣೆಯಲ್ಲಿ ತುಂಬಾ ಮುಖ್ಯ. ಸ್ನೇಹದಿಂದ ಬೇರೆಯ ಅನುಕೂಲಗಳೂ ಇವೆ. ಆದರೆ ವಿಜ್ಞಾನ ಮತ್ತು ಗಣಿತಶಾಸ್ತ್ರದ ಬೆಳವಣಿಗೆಯಲ್ಲಿ ಮತ್ತು ಸಾಮಾನ್ಯವಾಗಿ ಜ್ಞಾನದ ಬೆಳವಣಿಗೆಯಲ್ಲಿ ಸ್ನೇಹ ಉಂಟುಮಾಡುವ ಸುಂದರವಾದ ಪರಿಣಾಮ ಅವೆಲ್ಲಕ್ಕಿಂತ ತುಂಬಾ ಮಹತ್ವದ್ದು’ ಎನ್ನುತ್ತಾರೆ ಅಮತ್ರ್ಯ ಸೇನ್. ಅವರು ಇತ್ತೀಚೆಗೆ ಇನ್ಫೋಸಿಸ್ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾಡಿದ ದಿಕ್ಸೂಚಿ ಭಾಷಣದ ಸಂಗ್ರಹಾನುವಾದ ನಿಮ್ಮ ಗ್ರಹಿಕೆಗಾಗಿ.

ಅಮತ್ರ್ಯ ಸೇನ್

ಜ್ಞಾನ ಅನ್ನುವುದು ತನ್ನಷ್ಟಕ್ಕೇ ತುಂಬಾ ಸುಂದರವಾದ ಸಂಗತಿ. ಜೊತೆಗೆ ಅದರಿಂದ ಬೇರೆ ಬೇರೆ ಲಾಭಗಳೂ ಇವೆ. ಹೊಸ ಹೊಸ ಅನ್ವೇಷಣೆಗಳಿಂದ ಆಗುವ ಉತ್ಪಾದನೆಯಿಂದ ಸಿಗುವ ಅನುಕೂಲ ಒಂದು ಕಡೆ. ಇನ್ನೊಂದು ಕಡೆ ಜನರ ನಡುವೆ ಬೆಳೆಯುವ ಹೊಸ ಸಂಬಂಧಗಳು. ಹೀಗೆ ಹಲವಾರು ಲಾಭಗಳು ಜ್ಞಾನದಿಂದ ಆಗುತ್ತವೆ.

17ನೇ ಶತಮಾನದ ಫ್ರೆಂಚ್ ಲೇಖಕ ಕಾಮ್ಟೆ ಡಿ ಬಸ್ಸಿಯ ಒಂದು ಪ್ರಖ್ಯಾತ ಉಲ್ಲೇಖವಿದೆ, ‘ಅಂಧತ್ವದಿಂದ ಪ್ರೀತಿ ಹುಟ್ಟಿಕೊಳ್ಳುತ್ತದೆ. ಜ್ಞಾನದಿಂದ ಸ್ನೇಹ ಹುಟ್ಟಿಕೊಳ್ಳುತ್ತದೆ’. ಪ್ರೇಮ ಅನ್ನುವುದು ನಾವು ಯಾವುದಕ್ಕೆ ಸಿಕ್ಕಿಬೀಳುತ್ತಿದ್ದೇವೆ ಎನ್ನುವುದರ ತಿಳಿವಳಿಕೆ ಇಲ್ಲದಿರುವುದರ ಪರಿಣಾಮವಿರಬಹುದು. ಆದರೆ ಪ್ರೇಮದಿಂದ ಜಗತ್ತು ಹಲವು ರೀತಿಯಲ್ಲಿ ಶ್ರೀಮಂತವಾಗಿರುವುದಂತೂ ನಿಜ. ವಿಶೇಷವಾಗಿ ರೋಮಿಯೋ ಮತ್ತು ಜ್ಯೂಲಿಯೆಟ್, ಅಭಿಜ್ಞಾನ ಶಾಕುಂತಲ, ಲೈಲಾ ಮಜ್ನು ಇತ್ಯಾದಿ ಅತ್ಯುತ್ತಮ ಸಾಹಿತ್ಯ ಕೃತಿಗಳಿಂದ ಲೋಕ ಶ್ರೀಮಂತವಾಗಿದೆ. ಆದರೆ ಸ್ನೇಹ (ಬಸ್ಸಿ ರಬುಟಿನ್ ಹೇಳುವಂತೆ ಜ್ಞಾನದಿಂದ ಸ್ನೇಹ ಸೃಷ್ಟಿಯಾಗುತ್ತದೋ ಇಲ್ಲವೋ) ಏನನ್ನು ಸೃಷ್ಟಿಸುತ್ತದೆ?

ಕಾಮ್ಟೆ ಡಿ ಬಸ್ಸಿ ಹೇಳಿದ್ದಕ್ಕಿಂತ ವಿರುದ್ಧ ದಿಕ್ಕಿನಲ್ಲಿ ನಾನು ಯೋಚಿಸುತ್ತಿದ್ದೇನೆ. ಜ್ಞಾನ ಹೇಗೆ ಸ್ನೇಹವನ್ನು ಸೃಷ್ಟಿಸುತ್ತದೆ ಅನ್ನುವುದಕ್ಕಿಂತ ಸ್ನೇಹ ಹೇಗೆ ಜ್ಞಾನವನ್ನು ಸೃಷ್ಟಿಸುತ್ತದೆ ಅನ್ನುವುದಕ್ಕೆ ಹೆಚ್ಚು ಮಹತ್ವಕೊಡುತ್ತಿದ್ದೇನೆ. ಸ್ನೇಹ ಜ್ಞಾನವನ್ನು ಸೃಷ್ಟಿಸುವುದರಲ್ಲಿ ಹೇಗೆ ನೆರವಾಗುತ್ತದೆ ಎಂಬ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು. ಇದು ವಿಜ್ಞಾನದ ಚರಿತ್ರೆ ಹಾಗೂ ತತ್ತ್ವಶಾಸ್ತ್ರದ ಪ್ರಾಮುಖ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೆ ತುಂಬಾ ಮುಖ್ಯ. ಆದರೆ ರಾಷ್ಟ್ರೀಯತೆಯ ಭಾವನೆಯ ಜನ ಇದನ್ನು ಒಪ್ಪದೇ ಇರಬಹುದು. ಜಗತ್ತಿನ ಇತರ ಪ್ರದೇಶಗಳಿಂದ ಪ್ರತ್ಯೇಕವಾಗಿಯೇ ಉಳಿದುಕೊಂಡು (ಅಂದರೆ ಉಳಿದವರಿಂದ ಮತ್ತು ಗೆಳೆಯರಿಂದ ಕಲಿಯದೆ) ನಮ್ಮ ದೇಶದಲ್ಲಿ ವಿಜ್ಞಾನ ಮತ್ತು ಗಣಿತ ವಿಕಾಸಗೊಳ್ಳಬಹುದು ಎಂದು ಅವರು ಹೇಳಬಹುದು. ಆದರೆ ವಿಜ್ಞಾನ ಮತ್ತು ಗಣಿತ ಅಷ್ಠೆ ಅಲ್ಲ ಕೊನೆಗೆ ಸಂಸ್ಕೃತಿ ಕೂಡ ಹಾಗೆ ಬೆಳೆದಿಲ್ಲ.

ಲಭಿಸಿದ ಜ್ಞಾನಕ್ಕೆ ತನ್ನದೇ ಆದ ಒಂದು ಚಾಲಕ ಶಕ್ತಿಯಿರುತ್ತದೆ. ಹಾಗಾಗಿ ಅದು ಬೆಳೆಯುತ್ತದೆ, ವೃದ್ಧಿಗೊಳ್ಳುತ್ತದೆ. ನಾವು ಪಡೆದುಕೊಂಡಿದ್ದಕ್ಕೆ ಮತ್ತಷ್ಟನ್ನು ಸೇರಿಸಿ ಜಗತ್ತಿಗೆ ಮರಳಿಕೊಡುತ್ತೇವೆ.

ಉದಾಹರಣೆಗೆ ಪುರಾತನ ಭಾರತ ಒಂದು ದ್ವೀಪವಾಗಿ, ಜಗತ್ತಿನಿಂದ ಪ್ರತ್ಯೇಕವಾಗಿ ಉಳಿದುಕೊಂಡು ತನ್ನಷ್ಟಕ್ಕೆ ಅನ್ವೇಷಣೆಗಳನ್ನು ಮತ್ತು ಆವಿಷ್ಕಾರಗಳನ್ನು ಮಾಡಿದೆ ಅಂದುಕೊಳ್ಳುವುದು ಭಾರತೀಯ ರಾಷ್ಟ್ರೀಯವಾದಿ ಬುದ್ಧಿಜೀವಿಗಳಿಗೆ ಸಂತೋಷವಾಗಬಹುದು. ಆದರೆ ಹಾಗೆ ಭಾವಿಸುವುದು ಮೂಲಭೂತವಾಗಿ ತಪ್ಪು. ನಾವು ಪರಸ್ಪರ ಒಬ್ಬರಿಂದ ಒಬ್ಬರು ಕಲಿಯುತ್ತೇವೆ. ನಮ್ಮ ಬೌದ್ಧಿಕ ಪರಿಧಿ ಇನ್ನೊಬ್ಬರ ಜ್ಞಾನದಿಂದ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ನಾವು ಜ್ಞಾನವನ್ನು ಹೊರಗಿನಿಂದ ಪಡೆದುಕೊಳ್ಳುತ್ತೇವೆ. ಹಾಗೆ ಲಭಿಸಿದ ಜ್ಞಾನಕ್ಕೆ ತನ್ನದೇ ಆದ ಒಂದು ಚಾಲಕ ಶಕ್ತಿಯಿರುತ್ತದೆ. ಹಾಗಾಗಿ ಅದು ಬೆಳೆಯುತ್ತದೆ, ವೃದ್ಧಿಗೊಳ್ಳುತ್ತದೆ. ನಾವು ಪಡೆದುಕೊಂಡಿದ್ದಕ್ಕೆ ಮತ್ತಷ್ಟನ್ನು ಸೇರಿಸಿ ಜಗತ್ತಿಗೆ ಮರಳಿಕೊಡುತ್ತೇವೆ.

ಉದಾಹರಣೆಗೆ ಗಣಿತಶಾಸ್ತ್ರದ ಸುವರ್ಣ ಯುಗವನ್ನೇ ಗಮನಿಸೋಣ. ಸುವರ್ಣಯುಗ ಅಂದರೆ ನಾವು ಸಾಮಾನ್ಯವಾಗಿ ಭಾವಿಸುವಂತೆ ವೇದದ ಕಾಲವಲ್ಲ. ಭಾರತದಲ್ಲಿ ನಿಜವಾಗಿ ಗಣಿತಶಾಸ್ತ್ರದ ಸುವರ್ಣಯುಗ ಅನ್ನೋದು ಮೊದಲ ಮಿಲಿನಿಯಂನ ಅಭಿಜಾತ ಕಾಲಕ್ಕೆ ಸಂಬಂಧಿಸಿದ್ದು. ಸರಿಸುಮಾರು ಕಾಳಿದಾಸ, ಶೂದ್ರಕ ಮತ್ತು ಇತರ ಸಾಹಿತಿಗಳಿಂದ ಮೇರು ಸಾಹಿತ್ಯ ಕೃತಿಗಳು ರಚನೆಯಾದ ಕಾಲ. ಕ್ರಿಶ 476ರಲ್ಲಿ ಜನಿಸಿದ ಆರ್ಯಭಟ ಅವರಿಂದ ವಿಶೇಷವಾಗಿ ಭಾರತದಲ್ಲಿ ಗಣಿತೀಯ ಕ್ರಾಂತಿ ಪ್ರಾರಂಭವಾಯಿತು. ಅದನ್ನು ವರಾಹಮಿಹಿರ, ಬ್ರಹ್ಮಗುಪ್ತ, ಭಾಸ್ಕರ ಮತ್ತು ಇತರರು ಬೆಳೆಸಿದರು.

ಆರ್ಯಭಟನ ಹಾದಿ ತುಂಬಾ ಸಂಕೀರ್ಣವಾದದ್ದು ಮತ್ತು ಅದರ ವಿಸ್ತಾರ ತೀರಾ ಅಸಾಧಾರಣ. ಅದು ಸ್ವತಂತ್ರವಾಗಿ ಬೆಳೆಯಿತು ಅನ್ನುವುದು ನಿಜ. ಆದರೆ ಅಷ್ಠೆ ನಿಜವಾದ ಸಂಗತಿ ಅಂದರೆ ಅದರ ಮೇಲೆ ಗ್ರೀಸ್, ಬ್ಯಾಬಿಲೋನ್ ಮತ್ತು ರೋಮಿನಲ್ಲಿ ಆದ ಗಣಿತೀಯ ಬೆಳವಣೆಗೆಯ ಪ್ರಭಾವ ಆಗಿದೆ ಅನ್ನುವುದು. ಎರಡಕ್ಕೂ ಸಾಕಷ್ಟು ಆಧಾರಗಳಿವೆ.

ಅದು ಖಗೋಳಶಾಸ್ತ್ರದ ಅಪ್ರತಿಮ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು (ಖಗೋಳಶಾಸ್ತ್ರ ತೀರಾ ಉಚ್ಚ್ರಾಯದಲ್ಲಿದ್ದ 8ನೇ ಶತಮಾನದಲ್ಲಿ ಭಾರತೀಯ ಗಣಿತಜ್ಞ ಗೌತಮ ಚೀನಾದ ಖಗೋಳಶಾಸ್ತ್ರದ ಸಮಿತಿಯ ಮುಖ್ಯಸ್ಥ ಆಗಿದ್ದ.)

ಹೊರಗಿನ ಪ್ರಭಾವ ಇತ್ತು. ಆದರೂ ಭಾರತದಲ್ಲಿ ಗಣಿತ ಮತ್ತು ಖಗೋಳಶಾಸ್ತ್ರ ಆರ್ಯಭಟನ ಕೈಯಲ್ಲಿ ತುಂಬಾ ಬೆಳೆಯಿತು. ಇಡೀ ಭಾರತದಲ್ಲೇ ಅದರ ಸಾಧನೆ ಅದ್ವಿತೀಯವಾದದ್ದು. ಭಾರತ ಹೊರಗಿನಿಂದ ಒಂದಿಷ್ಟನ್ನು ಪಡೆದುಕೊಂಡಿತು. ಆದರೆ ಹಾಗೆ ಪಡೆದುಕೊಂಡಿದ್ದಕ್ಕಿಂತ ತುಂಬಾ ಹೆಚ್ಚನ್ನು ಜಗತ್ತಿಗೆ ಅದು ನೀಡಿದೆ. ಭಾರತದಲ್ಲಿ ಹುಟ್ಟಿಕೊಂಡ ಹೊಸ ವಿಚಾರ ಹೊರ ಜಗತ್ತಿಗೆ ಹರಡಿಕೊಂಡಿತು. ಅದು ಕೇವಲ ಗ್ರೀಸ್ ಮತ್ತು ರೋಂಗೆ ಮಾತ್ರವಲ್ಲ, ವಿಶೇಷವಾಗಿ ಚೀನಾಗೂ ಹೋಯಿತು. ಅಲ್ಲಿ ಅದು ಖಗೋಳಶಾಸ್ತ್ರದ ಅಪ್ರತಿಮ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು (ಖಗೋಳಶಾಸ್ತ್ರ ತೀರಾ ಉಚ್ಚ್ರಾಯದಲ್ಲಿದ್ದ 8ನೇ ಶತಮಾನದಲ್ಲಿ ಭಾರತೀಯ ಗಣಿತಜ್ಞ ಗೌತಮ ಚೀನಾದ ಖಗೋಳಶಾಸ್ತ್ರದ ಸಮಿತಿಯ ಮುಖ್ಯಸ್ಥ ಆಗಿದ್ದ.) ಅದು ಹಾಗೆಯೇ ಅರಬ್ ಮಾತನಾಡುವ ಭಾಷಿಕರ ದೇಶಗಳಲ್ಲೂ ಹರಡಿಕೊಂಡಿತು.

ಅರಬ್ ಭಾಷೆ 8ರಿಂದ 11ನೇ ಶತಮಾನದವರೆಗಿನ ಗಣಿತಶಾಸ್ತ್ರದ ಬೆಳವಣಿಗೆಯ ಬಹುಮುಖ್ಯ ಸಾಧನವಾಗಿತ್ತು. ಭಾರತ ಮೊದಲಿಗೆ ಬೇರೆಯವರಿಂದ ಕಲಿತು, ಅದನ್ನು ಬೆಳೆಸಿ ಅನಂತರದಲ್ಲಿ ಬೇರೆಯವರಿಗೆ ಕಲಿಸಿ ಗಣಿತದ ಜಗತ್ತಿಗೆ ದೊಡ್ಡ ಕೊಡುಗೆಯನ್ನು ನೀಡಿತು. ಸ್ನೇಹ ಹೀಗೆ ಪರಸ್ಪರ ಪ್ರಭಾವ ಬೀರುವ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಈ ಪ್ರಕ್ರಿಯೆಯಲ್ಲಿ ಇಡುವ ಪ್ರತಿಹೆಜ್ಜೆಯೂ ಮುಂದಿನದನ್ನು ಗಟ್ಟಿಗೊಳಿಸುತ್ತಾ ವಿಭಿನ್ನ ದೇಶಗಳಲ್ಲಿ ಜ್ಞಾನವನ್ನು ಹೆಚ್ಚಿಸುತ್ತಾ ಸಾಗಿದೆ.

ಸುಮೇರಿಯ ಮತ್ತು ಬ್ಯಾಬಿಲೋನಿನಲ್ಲಿ ಶೈಶವಾವಸ್ಥೆಯಲ್ಲಿದ್ದ ತ್ರಿಕೋನಮಿತಿಯ ವಿಚಾರಗಳು ಕ್ರಿ.ಪೂ.3ನೇ ಶತಮಾನದಲ್ಲಿ ಗ್ರೀಕ್ ಗಣಿತದಲ್ಲಿ ಯುಕ್ಲಿಡ್ ಮತ್ತು ಅರ್ಕಿಮಿಡಿಸ್ ಅವರ ಗಮನಕ್ಕೆ ಬಂದವು. ಏಷ್ಯಾ ಮೈನರ್‍ನಲ್ಲಿ ಒಂದು ಶತಮಾನದ ನಂತರ ಹಿಪಾರ್ಕಸ್ ಗಮನಕ್ಕೆ ಬಂದಿತು. ಕ್ರಿ.ಪೂ. ಮೊದಲ ಶತಮಾನದಲ್ಲಿ ಸೂರ್ಯ ಸಿದ್ಧಾಂತವು ಭಾರತದಲ್ಲಿ ತ್ರಿಕೋನಮಿತಿಯ ರಚನೆಗಳನ್ನು ಮತ್ತಷ್ಟು ಸಂಕೀರ್ಣವಾಗಿ ಬೆಳೆಸಿತು.

ಭಾರತದ ಗಣಿತಶಾಸ್ತ್ರದ ಮೇಲೆ ಗ್ರೀಕ್ ಪ್ರಭಾವ ಆಗಿದ್ದು ಸ್ಪಷ್ಟ. ಆದರೆ ಅಲೆಕ್ಸಾಂಡರ್ ಮತ್ತು ಗ್ರೀಕ್ ನೆಲಸಿಗರು ಭಾರತಕ್ಕೆ ಪರಿಚಯಿಸಿದಕ್ಕಿಂತ ತ್ರಿಕೋನಮಿತಿಯನ್ನು ಅದರಲ್ಲೂ ವಿಶೇಷವಾಗಿ ಅನ್ವಯಿಕ ಖಗೋಳಶಾಸ್ತ್ರವನ್ನು ಸೂರ್ಯ ಸಿದ್ಧಾಂತ ಹೆಚ್ಚು ಅಭಿವೃದ್ಧಿಗೊಳಿಸಿತು. ಉದಾಹರಣೆಗೆ ಕ್ರಿ.ಶ. 5ನೇ ಶತಮಾನದ ಕೊನೆಯ ವೇಳೆಗೆ ಗಣಿತಶಾಸ್ತ್ರದಲ್ಲಿ ಆಗಿರುವ ಬೆಳವಣಿಗೆಯನ್ನು ಸಮಗ್ರವಾಗಿ ಆರ್ಯಭಟ ಕ್ರೋಡಿಕರಿಸುವ ಸಂದರ್ಭದಲ್ಲಿ ಸೈನ್ ಎಂಬ ಪರಿಕಲ್ಪನೆ ತ್ರಿಕೋನಮಿತಿಯ ಪರಿಕಲ್ಪನೆಯಾಗಿ ನಿಖರವಾದ ಪರಿಶೋಧನೆಯಾಗಿ ರೂಪಪಡೆದುಕೊಂಡಿತು. ಇಂದಿಗೂ ಅದು ಬಹುಶಃ ಬಹಳವಾಗಿ ಬಳಕೆಯಾಗುತ್ತಿರುವ ಪರಿಕಲ್ಪನೆ.

ಆರ್ಯಭಟ ಸೈನ್ ಅನ್ನು ಸಂಸ್ಕೃತದಲ್ಲಿ ‘ಜ್ಯಾ- ಅರ್ಧ’ ಅಂತ ಕರೆದ. ಅಂದರೆ ಅರ್ಧ ಜ್ಯಾ. ಅದಕ್ಕೆ ತ್ರಿಕೋನಮಿತಿಯ ಜ್ಯಾಮಿತಿಯನ್ನು ಆಧಾರವಾಗಿ ಬಳಸಿಕೊಂಡಿದ್ದ. ಸಂಕ್ಷೇಪವಾಗಿ ಅದನ್ನು “ಜ್ಯಾ” ಅಂತ ಉಲ್ಲೇಖಿಸಲಾಗುತ್ತಿತ್ತು.

ಆದರೆ ಆರ್ಯಭಟನ ಪರಿಕಲ್ಪನೆಗೆ ‘ಸೈನ್’ ಎಂಬ ಹೆಸರು ಬಂದದ್ದಾದರು ಹೇಗೆ? ಅದು ಸಂಸ್ಕೃತದ ಪದವಲ್ಲ ಅಥವಾ ಯಾವುದೇ ಭಾರತೀಯ ಭಾ ಷೆಯ ಪದವೂ ಆಲ್ಲ. ಇದು ಸ್ವಲ್ಪಮಟ್ಟಿಗೆ ಭಾ ಷಶಾಸ್ತ್ರದ ಚರಿತ್ರೆಗೆ ಸಂಬಂಧಿಸಿದ ವಿಷಯ. ಇದನ್ನು ನನ್ನ ಆಗ್ರ್ಯುಮೆಂಟೇಟಿವ್ ಇಂಡಿಯನ್ ಪುಸ್ತಕದಲ್ಲಿ ಚರ್ಚಿಸಿದ್ದೇನೆ. ಅದನ್ನು ಮತ್ತೆ ಇಲ್ಲೂ ನೆನಪಿಸಿಕೊಳ್ಳುತ್ತಿದ್ದೇನೆ. ಆರ್ಯಭಟ ಸೈನ್ ಅನ್ನು ಸಂಸ್ಕೃತದಲ್ಲಿ ‘ಜ್ಯಾ- ಅರ್ಧ’ ಅಂತ ಕರೆದ. ಅಂದರೆ ಅರ್ಧ ಜ್ಯಾ. ಅದಕ್ಕೆ ತ್ರಿಕೋನಮಿತಿಯ ಜ್ಯಾಮಿತಿಯನ್ನು ಆಧಾರವಾಗಿ ಬಳಸಿಕೊಂಡಿದ್ದ. ಸಂಕ್ಷೇಪವಾಗಿ ಅದನ್ನು “ಜ್ಯಾ” ಅಂತ ಉಲ್ಲೇಖಿಸಲಾಗುತ್ತಿತ್ತು.

ಅರಬ್ ಗಣಿತಶಾಸ್ತ್ರಜ್ಞರು ಈ ಪರಿಕಲ್ಪನೆಯನ್ನು ಅರೆಬಿಕ್ ಭಾ ಷೆಗೆ ಅನುವಾದಿಸಿದಾಗ ಅದನ್ನು ‘ಜಿಬಾ’ ಎಂದು ಕರೆದರು. ಅದು ಜ್ಯಾ ಎಂಬುದರ ಅಪಭ್ರಂಶ. ಅರೇಬಿಕ್‍ನಲ್ಲಿ ಬರೆಯುವಾಗ ಕೇವಲ ವ್ಯಂಜನಗಳನ್ನು ಬಳಸುತ್ತಾರೆ. ಸ್ವರಾಕ್ಷರಗಳನ್ನು ಬಿಟ್ಟುಬಿಡುತ್ತಾರೆ. ಹಾಗಾಗಿ  ಆರ್ಯಭಟನ ಜ್ಯಾ ಅನ್ನು ‘ಜೆಬಿ’ ಎಂದು ಎರಡು ವ್ಯಂಜನಗಳನ್ನು ಬಳಸಿ ಬರೆಯಲಾಯಿತು. ಅದನ್ನು ಉಚ್ಛರಿಸುವಾಗ ಜಯಾಬ್ ಎಂದು ಹೇಳಲಾಗುತ್ತಿತ್ತು. ಜಯಾಬ್ ಅಂದರೆ ಅರೆಬಿಕ್‍ನಲ್ಲಿ ಗೂಡು (ಕೋವ್ ಅಥವಾ ಬೆ) ಅನ್ನುವ ಅರ್ಥ ಇದೆ.

ತ್ರಿಕೋನಮಿತಿಗೆ ಸಂಬಂಧಿಸಿದ ತೀರಾ ಸಂಕೀರ್ಣವಾದ ಅರಬ್ ಗ್ರಂಥಗಳಲ್ಲಿನ ಆರ್ಯಭಟನಿಂದ ಪಡೆದುಕೊಂಡ ಈ ಸಾಲುಗಳನ್ನು ಅಂತಿಮವಾಗಿ ಲ್ಯಾಟಿನ್‍ಗೆ ಅನುವಾದ ಮಾಡುವಾಗ ಜಯಾಬ್ ಎಂಬ ಪದವನ್ನು ಸಿನಸ್ ಎಂದು ಅನುವಾದಿಸಲಾಯಿತು. ಅಲ್ಲಿ ಅದಕ್ಕೆ ಕೋವ್ ಅಥವಾ ಬೆ ಅನ್ನುವ ಅರ್ಥ ಇದೆ. ಅಲ್ಲಿಂದ ಮುಂದಕ್ಕೆ ಈ ಸೈನಸ್ ಎಂಬ ಪದ ಸಂಕ್ಷಿಪ್ತಗೊಂಡು ‘ಸೈನ್’ ಎಂಬ ಪದ ಆಧುನಿಕ ಜ್ಯಾಮಿತಿಯ ಪದವಾಗಿ ಬಳಕೆಗೆ ಬಂತು. ಇಂದು ಬಹುವಾಗಿ ಬಳಸುವ ಗಣಿತಶಾಸ್ತ್ರೀಯ ಪದವಾದ ಸೈನ್ ಪದದಲ್ಲಿ ಆರ್ಯಭಟನ ಸಂಸ್ಕೃತ ಪದ ಜ್ಯಾದ ನೆನಪು ಮತ್ತು ನಂತರದ ಅರೆಬಿಕ್ ಮತ್ತು ಲ್ಯಾಟಿನ್ ಭಾಷೆಯ ಅನುವಾದಗಳ ನೆನಪನ್ನು ಕಾಣಬಹುದು. ಯುರೋಪಿನಿಂದ ಸರಳ ಸ್ವರೂಪದಲ್ಲಿ ಭಾರತಕ್ಕೆ ಬಂದು, ಇಲ್ಲಿ ಅಭಿವೃದ್ಧಿಗೊಂಡು ಮತ್ತೆ ಜಗತ್ತಿಗೆ ಹೋಗಿದೆ. ಅಲ್ಲಿ ಅದು ಹೆಚ್ಚು ಅಭಿವೃದ್ಧಿಗೊಂಡ ಗಣಿತಶಾಸ್ತ್ರದ ಮತ್ತು ಖಗೋಳಶಾಸ್ತ್ರದ ಸಾಧನವಾಗಿದೆ. ವಿಜ್ಞಾನ, ಗಣಿತಶಾಸ್ತ್ರ ಮತ್ತು ಸಂಸ್ಕೃತಿ ಬೆಳೆದಿರುವುದು ಹೀಗೆ. ಅದರ ಬೆಳವಣಿಗೆಯನ್ನು ಕುರಿತಂತಹ ಪ್ರತ್ಯೇಕವಾದೀ ನಿಲುವು ದಿಕ್ಕುತಪ್ಪಿಸುತ್ತದೆ. ಅದು ಅತ್ಯಂತ ತಪ್ಪು ನಿಲುವು.

ಸ್ನೇಹ ಅನ್ನೋದು ಕೇವಲ ರಾಷ್ಟ್ರಗಳ ನಡುವೆ ಮಾತ್ರವಲ್ಲ. ರಾಷ್ಟ್ರದ ಒಳಗೂ ಅನ್ವಯಿಸುತ್ತದೆ. ರಾಜಕೀಯ ಗುಂಪುಗಳ, ಪಂಗಡಗಳ ನಡುವೆ ಪ್ರತ್ಯೇಕತಾವಾದಿಗಳು ಉಂಟುಮಾಡಲು ಪ್ರಯತ್ನಿಸುತ್ತಿರುವ ವಿಭಜನೆ, ಘರ್ಷಣೆ ಮತ್ತು ಹಿಂಸೆ ನಮ್ಮ ಸಾಮಾಜಿಕ ಬದುಕುಗಳನ್ನು ಮಾತ್ರವಲ್ಲ ದೇಶಗಳ ನಡುವೆ ಮತ್ತು ಒಳಗೆ ಬೌದ್ಧಿಕ ಬೆಳವಣಿಗೆಗೂ ಹಾನಿಕಾರಕವಾಗಿದೆ. ಜ್ಞಾನದ ಬೆಳವಣಿಗೆಯನ್ನು ಕುರಿತ ಪ್ರತ್ಯೇಕತಾವಾದಿ ನಿಲುವು ಮೂಲಭೂತವಾಗಿ ತಪ್ಪು. ಅದು ರಾಷ್ಟ್ರೀಯವಾದಿಗಳಿಗೆ ಮತ್ತು ಮೂಲಭೂತವಾದಿಗಳಿಗೆ ಆಪ್ಯಾಯಮಾನವಾಗಿದ್ದಿರಬಹುದು.

ಸ್ನೇಹ ಅನ್ನೋದು ನಮ್ಮ ಬೌದ್ಧಿಕ ಅನ್ವೇಷಣೆಯಲ್ಲಿ ತುಂಬಾ ಮುಖ್ಯ. ಸ್ನೇಹದಿಂದ ಬೇರೆಯ ಅನುಕೂಲಗಳೂ ಇವೆ ಅನ್ನುವುದು ನಿಜ. ಆದರೆ ವಿಜ್ಞಾನ ಮತ್ತು ಗಣಿತಶಾಸ್ತ್ರದ ಬೆಳವಣಿಗೆಯಲ್ಲಿ ಮತ್ತು ಸಾಮಾನ್ಯವಾಗಿ ಜ್ಞಾನದ ಬೆಳವಣಿಗೆಯಲ್ಲಿ ಸ್ನೇಹ ಉಂಟುಮಾಡುವ ಸುಂದರವಾದ ಪರಿಣಾಮ ಅವೆಲ್ಲಕ್ಕಿಂತ ತುಂಬಾ ಮಹತ್ವದ್ದು.

* ಲೇಖಕರು ಅರ್ಥಶಾಸ್ತ್ರದಲ್ಲಿ ನೊಬೆಲ್ ಬಹುಮಾನ ಪುರಸ್ಕೃತರು; ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು.
ಕೃಪೆ: ದಿ ಇಂಡಿಯನ್ ಎಕ್ಸ್‍ಪ್ರೆಸ್. ಅನುವಾದ: ಟಿ.ಎಸ್.ವೇಣುಗೋಪಾಲ್.

Leave a Reply

Your email address will not be published.